ಹೊಳೆ ನೀರಿಗಾಗಿ ದೊಣ್ಣೆನಾಯಕರಿಗೆ ಲಂಚ; ಕಲ್ಪತರು ನಾಡಲ್ಲಿ ‘ಜಲ ಭ್ರಷ್ಟಾಚಾರ’
COVER STORY

ಹೊಳೆ ನೀರಿಗಾಗಿ ದೊಣ್ಣೆನಾಯಕರಿಗೆ ಲಂಚ; ಕಲ್ಪತರು ನಾಡಲ್ಲಿ ‘ಜಲ ಭ್ರಷ್ಟಾಚಾರ’

ಹೇಮಾವತಿ ಹೊಳೆ ನೀರು ಕೆರೆಗಳಿಗೆ ತುಂಬಿಸಲು ದೊಣ್ಣೆನಾಯಕರಿಗೆ ಲಂಚ ನೀಡಬೇಕಾದ ಪರಿಸ್ಥಿತಿ ಈಗ ಕಲ್ಪತರು ನಾಡು ಎನಿಸಿರುವ ತುಮಕೂರಿನಲ್ಲಿ ಶುರುವಾಗಿದೆ.

‘ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?’ ಎಂಬ ಗಾದೆಯಲ್ಲಿರುವ ವ್ಯಂಗ್ಯದ ಪ್ರಶ್ನೆಗೆ ಹೌದು ಎನ್ನುವಂತಿದೆ ಈಗ ತುಮಕೂರಿನ ಪರಿಸ್ಥಿತಿ. ತುಮಕೂರು ಜಿಲ್ಲೆಯ ಹಲವು ಕೆರೆಗಳಿಗೆ ಹೇಮಾವತಿ ನೀರು ತುಂಬಿಸಲು ಈಗ ನೀರುಗಂಟಿಗಳಿಗೆ (ವಾಟರ್‌ಮನ್‌) ಸಾವಿರಗಟ್ಟಲೆ ಹಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಈ ಬಾರಿ ಕೊಡಗು, ಕರಾವಳಿ ಭಾಗದಲ್ಲಿ ಅತಿಹೆಚ್ಚು ಮಳೆಯಾಗಿದ್ದರೆ ಬಯಲು ಸೀಮೆ ಹಾಗೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆ ಎದುರಾಗಿದೆ. ಆದರೆ, ರಾಜ್ಯದ ಪಶ್ಚಿಮ ಭಾಗದಲ್ಲಿ ಮಳೆಯಾಗಿರುವುದರಿಂದ ನದಿಗಳು ಉಕ್ಕಿ ಜಲಾಶಯಗಳು ಭರ್ತಿಯಾಗಿವೆ. ಜಲಾಶಯಗಳಿಂದ ನಾಲೆಗಳ ಮೂಲಕ ಹರಿಯುವ ನೀರಿನಿಂದ ಮಳೆ ಕೊರತೆ ಎದುರಾಗಿರುವ ಪ್ರದೇಶಗಳ ಕೆರೆಗಳನ್ನು ತುಂಬಿಸಲಾಗುತ್ತಿದೆ. ಆದರೆ, ಈ ಹೊಳೆ ನೀರಿಗೂ ಈಗ ಲಂಚ ಕೊಡಬೇಕಾಗಿದೆ.

ತುರುವೇಕೆರೆ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಪ್ರತಿ ಕೆರೆಗೆ ಗ್ರಾಮಸ್ಥರಿಂದ ನೀರುಗಂಟಿಗಳು 25 ಸಾವಿರದವರೆಗೂ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮಳೆಯಿಲ್ಲದೆ ಅಡಿಕೆ, ತೆಂಗಿನ ತೋಟಗಳು ಒಣಗುತ್ತಿರುವುದರಿಂದ ಗ್ರಾಮಸ್ಥರು ಒಟ್ಟಾಗಿ ಹಣ ಸಂಗ್ರಹಿಸಿ ನೀರುಗಂಟಿಗಳಿಗೆ ಹಣ ನೀಡಬೇಕಾಗಿದೆ. ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಈ ಬಾರಿ ಹೇಮಾವತಿ ನೀರಿಗೆ ಬೇಡಿಕೆ ಹೆಚ್ಚಾಗಿದೆ. ನಾಲೆ ನೀರಿಗಾಗಿ ಗ್ರಾಮಸ್ಥರು ಹೊಡೆದಾಡುವಂಥ ಪರಿಸ್ಥಿತಿ ತುಮಕೂರಿನಲ್ಲಿದೆ.

ತುಮಕೂರು ಜಿಲ್ಲೆಯೊಂದರಲ್ಲೇ ಒಂದು ಕಾಲಕ್ಕೆ ಸುಮಾರು ಎರಡು ಸಾವಿರ ಕೆರೆಗಳಿದ್ದವು ಎಂಬ ಮಾತಿದೆ. ಮೂಡಲಿನ ಈ ಕೆರೆಯನ್ನು ನೋಡುವುದೇ ಒಂದು ವೈಭೋಗ ಎಂದು ಜನಪದರು ಬಣ್ಣಿಸಿದ ಕುಣಿಗಲ್‌ ಕೆರೆ, ಕೈದಾಳ ಕೆರೆ, ಭೀಮ ಸಮುದ್ರ, ಬುಕ್ಕರಾಯ ಸಮುದ್ರ ಸೇರಿದಂತೆ ಹಲವು ಪುರಾತನ ಕೆರೆಗಳು ತುಮಕೂರು ಜಿಲ್ಲೆಯಲ್ಲಿವೆ. ಆದರೆ, ಜಿಲ್ಲೆಯ ಬಹುತೇಕ ಕೆರೆಗಳು ಭೂಗಳ್ಳರ ಅತಿಯಾಸೆಗೆ ಬಲಿಯಾಗಿವೆ. ಉಳಿದಿರುವ ಕೆರೆಗಳು ತುಂಬುವಷ್ಟು ಮಳೆಯಾಗುತ್ತಿಲ್ಲ. ಜಿಲ್ಲೆಯ ಹಲವು ಭಾಗವನ್ನು ಹಸಿರಾಗಿಸಿರುವ ಹೇಮಾವತಿ ನೀರು ಮಾತ್ರ ಈಗ ಜಿಲ್ಲೆಯ ಜನರಿಗೆ ಜೀವಜಲ. ಆದರೆ, ಈ ಜೀವಜಲದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.

ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಿರುವ ತುಮಕೂರು ಜಿಲ್ಲೆಯ ತುರುವೇಕೆರೆ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಕುಣಿಗಲ್‌, ಶಿರಾ ತಾಲ್ಲೂಕುಗಳ ಕೆರೆಗಳಿಗೆ ಪ್ರತಿ ವರ್ಷ ಹೇಮಾವತಿಯಿಂದ ನೀರು ತುಂಬಿಸಲಾಗುತ್ತಿದೆ. ಹಾಸನ ಜಿಲ್ಲೆಯ ಗೊರೂರು ಅಣೆಕಟ್ಟೆಯಲ್ಲಿ ತುಂಬುವ ಹೇಮಾವತಿ ನೀರು ತುಮಕೂರಿನ ಬಹುತೇಕ ಪ್ರದೇಶಗಳ ಜನರ ಹೊಟ್ಟೆ ತುಂಬಿಸುತ್ತಿವೆ. ಪ್ರತಿ ವರ್ಷ ಹೇಮಾವತಿ ನೀರು ಸರದಿಯಲ್ಲಿ ಈ ಭಾಗದ ಕೆರೆಗಳಿಗೆ ತುಂಬುತ್ತಿತ್ತು. ಈ ಬಾರಿ ಮಳೆ ಕೊರತೆ ತೀವ್ರವಾಗಿ ಬೆಳೆ ಒಣಗುತ್ತಿರುವ ತುರುವೇಕೆರೆ, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಹಾಗೂ ಶಿರಾಗಳಲ್ಲಿ ಹೇಮಾವತಿ ನೀರಿನ ಅನಿವಾರ್ಯ ಹೆಚ್ಚಿದೆ.

ಈ ಪರಿಸ್ಥಿತಿಯನ್ನು ಲಾಭವಾಗಿಸಿಕೊಳ್ಳುತ್ತಿರುವ ನೀರುಗಂಟಿಗಳು ನೀರಿನಲ್ಲಿ ಹಣ ಮಾಡಲು ಮುಂದಾಗಿದ್ದಾರೆ. ತಮಗೂ ಈಗ ನೀರಿನ ಅನಿವಾರ್ಯವಿರುವುದರಿಂದ ಗ್ರಾಮಸ್ಥರು ಮನೆ ಮನೆಗಳಿಂದ ಹಣ ಸಂಗ್ರಹಿಸಿ ಒಟ್ಟು ಮಾಡಿ ನೀರು ಗಂಟಿಗಳಿಗೆ ನೀಡುತ್ತಿದ್ದಾರೆ. ಹಣ ಬಾರದ ಹಳ್ಳಿಗಳಿಗೆ ನೀರು ನಿಲ್ಲಿಸುವ ನೀರುಗಂಟಿಗಳು, ಹಣ ಪಡೆದ ಗ್ರಾಮಗಳ ವ್ಯಾಪ್ತಿಯ ಕೆರೆಗಳಿಗಷ್ಟೇ ನೀರು ತುಂಬಿಸಿ, ತೂಬು ಹಾಕುವ ಚಾಳಿ ಆರಂಭಿಸಿದ್ದಾರೆ ಎಂಬುದು ಹಲವು ರೈತರ ದೂರು.

ಹೇಮಾವತಿ ನೀರಿಗಾಗಿ ನೀರುಗಂಟಿಗಳು ಹಣ ತೆಗೆದುಕೊಳ್ಳುತ್ತಿದ್ದಾರೆ ಎಂಬ ರೈತರ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
- ಡಾ. ಕೆ. ರಾಕೇಶ್‌ ಕುಮಾರ್‌, ಜಿಲ್ಲಾಧಿಕಾರಿ, ತುಮಕೂರು

ಒಂದು ಕೆರೆಗೆ 25 ಸಾವಿರ!

“ನೀರುಗಂಟಿಗಳು ಒಂದು ಕೆರೆ ತುಂಬಿಸಲು 25 ಸಾವಿರದವರೆಗೆ ದುಡ್ಡು ಕೇಳುತ್ತಿದ್ದಾರೆ. ದುಡ್ಡುಕೊಟ್ಟರಷ್ಟೇ ಕೆರೆಗಳು ತುಂಬುತ್ತವೆ. ದುಡ್ಡು ಕೊಡದ ಗ್ರಾಮಗಳ ಕೆರೆಗಳು ನೀರಿಲ್ಲದೆ ಒಣಗಬೇಕಾಗುತ್ತದೆ. ಹೀಗಾಗಿ ಮನೆ ಮನೆಗಳಿಂದ ವಂತಿಗೆ ಎತ್ತಿ ಹಣ ಒಟ್ಟು ಮಾಡಿ ನೀರುಗಂಟಿಗಳಿಗೆ ಕೊಡುತ್ತಿದ್ದೇವೆ. ಮಳೆಗಾಲದಲ್ಲೇ ತೋಟಗಳು ಒಣಗುತ್ತಿವೆ. ಇನ್ನು ಬೇಸಿಗೆ ಬಂದರೆ ಪರಿಸ್ಥಿತಿ ಕಷ್ಟವಾಗುತ್ತದೆ. ಅದಕ್ಕೇ ಈಗಲೇ ಕೆರೆ ತುಂಬಿಸಿಕೊಳ್ಳಲು ಅನಿವಾರ್ಯವಾಗಿ ನೀರುಗಂಟಿಗಳಿಗೆ ದುಡ್ಡು ಕೊಡುತ್ತಿದ್ದೇವೆ” ಎನ್ನುತ್ತಾರೆ ತುರುವೇಕೆರೆ ತಾಲ್ಲೂಕಿನ ರೈತರು.

ಮಳೆಯಿಲ್ಲದ ಕಾರಣ ಹೇಮಾವತಿ ನಾಲೆ ನೀರು ಈಗ ರೈತರಿಗೆ ಅಮೃತದಂತಾಗಿದೆ. ಹೀಗಾಗಿ ಕಷ್ಟವಾದರೂ ಸರಿ ಮನೆ ಮನೆಗಳಿಂದ ಹಣ ಸಂಗ್ರಹಿಸಿ ನೀರುಗಂಟಿಗಳಿಗೆ ನೀಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಹೆಚ್ಚೇನೂ ಪ್ರಯೋಜನವಾಗಿಲ್ಲ ಎಂಬುದು ಈ ಭಾಗದ ರೈತರ ಅಳಲು.

ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ಮಾತನಾಡಿದ ಈ ಭಾಗದ ಮತ್ತೊಬ್ಬ ರೈತರ ಅಳಲೂ ಇದೇ ಬಗೆಯದ್ದು. “ಮಳೆ ಸರಿಯಾಗಿ ಆಗಿದ್ದರೆ ನಾಲೆ ನೀರಿಗೆ ಇಷ್ಟು ಬೇಡಿಕೆ ಇರುತ್ತಿರಲಿಲ್ಲ. ಪ್ರತಿ ವರ್ಷ ಜುಲೈ- ಆಗಸ್ಟ್‌ ತಿಂಗಳಲ್ಲಿ ಉತ್ತಮ ಮಳೆಯೂ ಆಗುತ್ತದೆ, ನಾಲೆ ನೀರೂ ಬರುತ್ತದೆ. ಮಳೆ ನೀರು, ನಾಲೆ ನೀರು ಸೇರಿ ಕೆರೆಗಳು ಬೇಗ ತುಂಬುತ್ತಿದ್ದವು. ಈ ವರ್ಷ ಮಳೆಯೇ ಆಗಿಲ್ಲ, ಕೆರೆಗಳು ಸಂಪೂರ್ಣ ಒಣಗಿನಿಂತಿವೆ. ಕಿರು ನಾಲೆಗಳಿಂದ ಒಂದೊಂದು ಕರೆಗಳನ್ನೂ ತುಂಬಿಸಲು ತಿಂಗಳುಗಟ್ಟಲೆ ಕಾಯಬೇಕು. ಒಂದೇ ನಾಲೆಯ ನೀರಿನಿಂದ ಬೇರೆ ಬೇರೆ ತಾಲ್ಲೂಕುಗಳಿಗೆ ನೀರು ಹಂಚಿಕೆಯಾಗಬೇಕು. ಹೀಗಾಗಿ ಈ ವರ್ಷದ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಈ ಪರಿಸ್ಥಿತಿಯಿಂದ ನೀರುಗಂಟಿಗಳು ದುಡ್ಡು ಮಾಡಿಕೊಳ್ಳುತ್ತಿದ್ದಾರೆ” ಎಂಬ ದೂರು ಅವರದ್ದು.

ನಾಲೆ ನೀರಿಗಾಗಿ ನೀರುಗಂಟಿಗಳು ದೊಡ್ಡ ಮೊತ್ತದ ಲಂಚ ಪಡೆಯುತ್ತಿದ್ದಾರೆ ಎಂದರೆ ಇದು ನೀರಾವರಿ ಇಲಾಖೆಯ ಅಧಿಕಾರಿಗಳ ವೈಫಲ್ಯ. ಯಾರು ದುಡ್ಡು ವಸೂಲಿ ಮಾಡುತ್ತಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಂಭೀರವಾಗಿ ತೆಗೆದುಕೊಂಡು ಕೆರೆಗಳಿಗೆ ಸರಿಯಾಗಿ ನೀರು ತುಂಬಿಸುವ ಕೆಲಸ ಆಗಬೇಕು.
- ಕುರುಬೂರು ಶಾಂತಕುಮಾರ್‌, ಅಧ್ಯಕ್ಷರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ನಾಲೆ ನೀರಿನ ರಾಜಕೀಯ

ತುಮಕೂರು ಜಿಲ್ಲೆಯ ತಾಲ್ಲೂಕುಗಳ ಕೆರೆಗಳಿಗೆ ನೀರು ತುಂಬಿಸುವ ರಾಜಕೀಯವೂ ಈ ಸಮಸ್ಯೆಯ ಹಿಂದಿದೆ. ಆಯಾ ಕ್ಷೇತ್ರಗಳ ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳ ಮೇಲೆ ಒತ್ತಡ ತರುತ್ತಿದ್ದಾರೆ. ಆದರೆ, ಬರುವ ಕಡಿಮೆ ಪ್ರಮಾಣದ ನೀರು ನಾಕ್ಲೈದು ತಾಲ್ಲೂಕುಗಳಿಗೆ ತುಂಬಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲೂ ಮಳೆ ಕೊರತೆಯಾದ ಸಂದರ್ಭದಲ್ಲಿ ಈ ಸಮಯ ಇನ್ನೂ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲಾ ಕೆರೆಗಳು ತುಂಬುವ ವೇಳೆಗೆ ಗೊರೂರು ಜಲಾಶಯದಿಂದ ಮುಖ್ಯ ನಾಲೆಯಲ್ಲೇ ನೀರು ಬಂದ್‌ ಆಗಿರುತ್ತದೆ.

ಪ್ರತಿ ವರ್ಷ ನಾ ಮುಂದು, ತಾ ಮುಂದು ಎಂದು ಆಯಾ ಭಾಗದ ಜನಪ್ರತಿನಿಧಿಗಳು ಕೆರೆ ತುಂಬಿಸಲು ಮುಂದಾಗುತ್ತಿದ್ದರು. ಆದರೆ, ಈ ಬಾರಿ ಯಾವ ಶಾಸಕರೂ ನಾಲೆ ನೀರಿನ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎಂಬ ಮಾತುಗಳಿವೆ. ಶಾಸಕರು ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದ ಮೇಲೆ ಅಧಿಕಾರಿಗಳೂ ಈ ಬಗ್ಗೆ ಅನಾದರ ಶುರುವಾಗಿದೆ. ಇದರ ಪ್ರಯೋಜನವನ್ನು ಕೆರೆ ತುಂಬಿಸುವ ನೀರುಗಂಟಿಗಳು ಪಡೆಯುತ್ತಿದ್ದಾರೆ.

ಒಂದು ಕೆರೆ ತುಂಬಿಸಲೇ ಸುಮಾರು 25 ಸಾವಿರ ರೂಪಾಯಿ ಲಂಚ ಪಡೆದರೆ ಇನ್ನೂ ಪ್ರತಿ ನೀರುಗಂಟಿ ವ್ಯಾಪ್ತಿಯ ಹತ್ತಾರು ಕೆರೆಗಳನ್ನು ತುಂಬಿಸಲು ಎಷ್ಟು ಲಕ್ಷ ಹಣ ನೀರಿಗಾಗಿ ಹರಿದಾಡುತ್ತಿರಬಹುದು. ಅಲ್ಲದೆ ಈ ಜಲ ಭ್ರಷ್ಟಾಚಾರ ಕೇವಲ ನೀರುಗಂಟಿಗಳಿಗೆ ಮಾತ್ರ ಸೀಮಿತವಾಗಿದೆಯೋ, ಇಲ್ಲಾ ನೀರಾವರಿ ಇಲಾಖೆಯ ಅಧಿಕಾರಿಗಳ ಕಡೆಗೂ ಇದರ ಜಾಲ ಚಾಚಿದೆಯೋ ಎಂಬುದನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕಿದೆ.

ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಚೆಲುವರಾಜು ಎಂಬ ರೈತ ಹೇಮಾವತಿ ನಾಲೆಗೆ ಹಾರಿ ಪ್ರಾಣಬಿಟ್ಟಿದ್ದರು. ಈ ವರ್ಷ ತಾರತಮ್ಯದ ಜಾಗವನ್ನು ನಾಲೆ ನೀರಿಗಾಗಿ ಲಂಚದ ಹಣ ಆಕ್ರಮಿಸಿಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ನೀರಿಗಾಗಿ ಮತ್ತೊಂದು ಪ್ರಾಣ ಹಾನಿ ಆಗುವವರೆಗೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ. ಈ ಮಧ್ಯೆ ಬಡವಾಗುತ್ತಿರುವುದು ಮಾತ್ರ ಅಮಾಯಕ ರೈತರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತುರುವೇಕೆರೆ ಶಾಸಕ ಎ.ಎಸ್‌. ಜಯರಾಂ, ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು, ಕಾವೇರಿ ನೀರಾವರಿ ನಿಗಮದ ಹೇಮಾವತಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಆದರೆ, ಅವರ್ಯಾರೂ ಸಂಪರ್ಕಕ್ಕೆ ಸಿಗಲಿಲ್ಲ. ಪ್ರತಿಕ್ರಿಯೆ ಲಭ್ಯವಾದರೆ ಅಪ್‌ಡೇಟ್‌ ಮಾಡಲಾಗುವುದು.