samachara
www.samachara.com
ಕುಮಾರಸ್ವಾಮಿ ಕೃಷ್ಣ ಮಠ ಭೇಟಿ; ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಎಚ್‌ಡಿಕೆ!
COVER STORY

ಕುಮಾರಸ್ವಾಮಿ ಕೃಷ್ಣ ಮಠ ಭೇಟಿ; ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಎಚ್‌ಡಿಕೆ!

ಎಚ್‌ಡಿಕೆ ಕೃಷ್ಣ ಮಠ ಭೇಟಿ ತಾವು ಮಠ ಹಾಗೂ ಹಿಂದೂ ವಿರೋಧಿ ಅಲ್ಲ ಎಂಬುದನ್ನು ಮತ್ತೆ ಹೇಳುವುದರ ಜತೆಗೆ ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ಅನ್ಯಾಯವಾಗಿದೆ ಎಂಬ ವಿರೋಧವನ್ನು ತಣ್ಣಗಾಗಿಸಿದೆ.

Team Samachara

  • ರಾಮಣ್ಣ, ಉಡುಪಿ

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಎಚ್.ಡಿ. ಕುಮಾರಸ್ವಾಮಿ ಕೃಷ್ಣನಗರಿ ಉಡುಪಿಗೆ ಭೇಟಿ ಕೊಟ್ಟಿದ್ದಾರೆ. ಕರಾವಳಿಯನ್ನು, ಅದರಲ್ಲೂ ಮೀನುಗಾರ ಸಮುದಾಯವನ್ನು ಕುಮಾರಸ್ವಾಮಿ ಬಜೆಟ್ ಮಂಡಿಸುವ ವೇಳೆ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಎಚ್‌ಡಿಕೆ ಮೇಲಿತ್ತು. ಈ ಕಾರಣಕ್ಕೆ ಉಡುಪಿಯಲ್ಲಿ ಮೀನುಗಾರರು ಪ್ರತಿಭಟನೆಯನ್ನೂ ನಡೆಸಿದ್ದುಂಟು.

ಆದರೆ ಶುಕ್ರವಾರದ ಭೇಟಿಯಲ್ಲಿ ಮುಖ್ಯಮಂತ್ರಿಗಳು ಉಡುಪಿ ಜನರಿಗೆ ಭರ್ಜರಿ ಕೊಡುಗೆ ನೀಡುವ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ, ಜಿಲ್ಲೆಯ ಐವರು ಶಾಸಕರ ಅಹವಾಲುಗಳನ್ನು ತುಂಬ ತಾಳ್ಮೆಯಿಂದ ಕೇಳಿದ್ದಾರೆ. ಮುಖ್ಯವಾಗಿ ಸಿಆರ್‌ಝಡ್ ಕಾನೂನು ಸಡಿಲಿಕೆ, ಮರಳು ಸಮಸ್ಯೆ, ಮೀನುಗಾರರ ಸಮಸ್ಯೆ, ಮಳೆಯಿಂದಾದ ಹಾನಿಗೆ ಪರಿಹಾರ ವಿತರಣೆ, ಪ್ರವಾಸೋದ್ಯಮ ಅಭಿವೃದ್ಧಿ… ಹೀಗೆ ಉಡುಪಿ ಜಿಲ್ಲೆಯ ಐವರು ಜನಪ್ರತಿನಿಧಿಗಳು ಮುಂದಿಟ್ಟ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಒಂದೂವರೆ ಗಂಟೆ ನಡೆಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆ, ಮೂರು ತಾಸು ವಿಸ್ತರಣೆಗೊಂಡು ಮುಖ್ಯಮಂತ್ರಿಗಳು ಎಲ್ಲಾ ಸಮಸ್ಯೆಗಳಿಗೂ ಸಕಾರಾತ್ಮಕ ರೀತಿಯಲ್ಲಿ ಪರಿಹಾರ ಸೂಚಿಸಿದ್ದು ಬಿಜೆಪಿ ಶಾಸಕರಿಗೆ ಖುಷಿ ನೀಡಿದೆ. ಮಾತ್ರವಲ್ಲ ಬಹಳ ಸಮಯದಿಂದ ಇದ್ದ ಮರಳು ಸಮಸ್ಯೆ ಕುರಿತು ಸಮಾಲೋಚನೆ ನಡೆಸಲು ಬೆಂಗಳೂರಿಗೆ ಬರುವಂತೆ ಬಿಜೆಪಿ ಶಾಸಕರಿಗೆ ಆಹ್ವಾನ ನೀಡಿದ್ದು ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಮಾಧಾನ ತಂದಿದೆ.

ಕುಮಾರಸ್ವಾಮಿ ಉಡುಪಿ ಪ್ರವಾಸ ಗಮನ ಸೆಳೆಯಲು ಪ್ರಮುಖ ಕಾರಣವಾಗಿದ್ದು ಕೃಷ್ಣಮಠ ಭೇಟಿ! ಮುಖ್ಯಮಂತ್ರಿಗಳ ನಿನ್ನೆಯ ಉಡುಪಿ ಪ್ರವಾಸದಲ್ಲಿ ಕೃಷ್ಣಮಠ ಭೇಟಿ ನಿಗದಿಯಾಗಿರಲಿಲ್ಲ. ಅವರ ಅಧಿಕೃತ ಪ್ರವಾಸ ವೇಳಾಪಟ್ಟಿಯಲ್ಲಿ ಇದ್ದದ್ದು ಪ್ರಗತಿ ಪರಿಶೀಲನಾ ಸಭೆ ಮಾತ್ರ. ಆದರೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ವಿಧಾನ ಪರಿಷತ್ತಿನ ಸದಸ್ಯ ಬೋಜೇ ಗೌಡ ಜತೆ ಕುಮಾರಸ್ವಾಮಿ ಕೆಡಿಪಿ ಸಭೆಗೂ ಮುನ್ನ ಕೃಷ್ಣಮಠಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು.

ಕುಮಾರಸ್ವಾಮಿ ಮಧ್ವ ಸರೋವರದಲ್ಲಿ ಕಾಲು ತೊಳೆದು ಕೃಷ್ಣನ ದರ್ಶನ ಮಾಡಿದರು. ಪರ್ಯಾಯ ಪಲಿಮಾರು ವಿದ್ಯಾಧೀಶತೀರ್ಥ ಸ್ವಾಮೀಜಿ ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡು ಕಡೆಗೋಲು, ಪಾಶಧಾರಿ ಬಾಲ ಗೋಪಾಲ, ಮುಖ್ಯಪ್ರಾಣನ ದರ್ಶನ ಮಾಡಿಸಿದರು. ದ್ವಾದಶಿ ಹಿನ್ನೆಲೆಯಲ್ಲಿ ಬೆಳಗ್ಗೆ ಬೇಗನೆ ಕೃಷ್ಣನಿಗೆ ಮಹಾಪೂಜೆ ನೆರವೇರಿತ್ತು. ಹೀಗಾಗಿ ಮುಖ್ಯಮಂತ್ರಿ ಸಹಿತ ಭಕ್ತರಿಗೆ ಅಂಗಿ, ಬನಿಯನ್ ತೆಗೆಯದೆ ಒಳಪ್ರವೇಶಿಸಲು ಅವಕಾಶ ನೀಡಲಾಯಿತು.ಈ ವೇಳೆ ನಾಡಿಗೆ ಮಂಗಲವಾಗಲಿ ಎನ್ನುವ ಆಶಯದೊಂದಿಗೆ ವಿದ್ವಾಂಸರು ಶ್ಲೋಕಗಳನ್ನು ಪಠಿಸಿದರು. ಕೊನೆಗೆ ವಿದ್ಯಾಧೀಶತೀರ್ಥ ಸ್ವಾಮೀಜಿ ಮುಖ್ಯಮಂತ್ರಿಗೆ ರೇಷ್ಮೆ ಶಾಲು, ಮುತ್ತಿನ ಹಾರ, ಸ್ವರ್ಣ ಗೋಪುರದ ಸ್ಮರಣಿಕೆ ಸಹಿತ ಪ್ರಸಾದವನ್ನು ನೀಡಿದರು.

ಕೃಷ್ಣಮಠದಲ್ಲಿ ವಿದ್ಯಾಧೀಶತೀರ್ಥ ಸ್ವಾಮೀಜಿ ಜತೆಗೆ ಕುಮಾರಸ್ವಾಮಿ ಮಾತುಕತೆ.
ಕೃಷ್ಣಮಠದಲ್ಲಿ ವಿದ್ಯಾಧೀಶತೀರ್ಥ ಸ್ವಾಮೀಜಿ ಜತೆಗೆ ಕುಮಾರಸ್ವಾಮಿ ಮಾತುಕತೆ.
/ಸಮಾಚಾರ

ಸಿದ್ದರಾಮಯ್ಯ ಭೇಟಿ ಕೊಟ್ಟಿರಲಿಲ್ಲ!

ಕಳೆದ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಕೃಷ್ಣಮಠಕ್ಕೆ ಭೇಟಿ ಕೊಟ್ಟಿರಲೇ ಇಲ್ಲ. ಕೆಲವೊಮ್ಮೆ ಹಠಕ್ಕೆ ಬಿದ್ದವರಂತೆ ಮಠಾಧೀಶರ ಆಹ್ವಾನವನ್ನೂ ಸಿದ್ದರಾಮಯ್ಯ ತಿರಸ್ಕರಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ತಮ್ಮ ಅಧಿಕಾರಾವಧಿಯಲ್ಲಿ ಆರೇಳು ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ್ದ ಸಿದ್ದರಾಮಯ್ಯ, ಸೈದ್ದಾಂತಿಕ ಕಾರಣಕ್ಕಾಗಿ ಮಠಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದರು.

ಈ ಕಾರಣಕ್ಕೇ ಸಿದ್ದರಾಮಯ್ಯ ‘ಹಿಂದೂ ವಿರೋಧಿ’ ಅನ್ನುವುದು ಒಂದು ವರ್ಗದ ಆರೋಪವಾಗಿತ್ತು. ಖುದ್ದು ಪೇಜಾವರ ಸ್ವಾಮೀಜಿಯೇ ಆಹ್ವಾನ ನೀಡಿದ್ದರೂ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಹೋಗಿರಲಿಲ್ಲ. ಮಾತ್ರವಲ್ಲ, ಅವರ ಅಧಿಕಾರಾವಧಿಯಲ್ಲಿ ಎರಡು ಪರ್ಯಾಯ ಮಹೋತ್ಸವ ನಡೆದರೂ ಅದಕ್ಕೂ ಹೋಗಿರಲಿಲ್ಲ.

ಸಿದ್ದರಾಮಯ್ಯ ಉಡುಪಿಗೆ ಹೋದರೂ ಕೃಷ್ಣಮಠಕ್ಕೆ ಭೇಟಿ ನೀಡದಿರುವ ಬಗ್ಗೆ ವಿಶ್ವೇಶತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದೂ ಉಂಟು. “ಸಿದ್ದರಾಮಯ್ಯ ಅವರ ಮೇಲೆ ಬುದ್ಧಿಜೀವಿಗಳ ಒತ್ತಡವಿರುವ ಕಾರಣ ಅವರು ಕೃಷ್ಣಮಠಕ್ಕೆ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಮತ್ತು ತಾವು ಹಲವಾರು ಸಲ ಭೇಟಿ ಮಾಡಿ ಮಾತನಾಡಿದ್ದೇವೆ. ಅವರ ಮೇಲೆ ಬುದ್ಧಿಜೀವಿಗಳು ಕೃಷ್ಣಮಠಕ್ಕೆ ಹೋಗದಂತೆ ಒತ್ತಡ ಹೇರಿದ್ದಾರೆ. ಕೆಲವರಿಗೆ ಕೃಷ್ಣಮಠ ಮತ್ತು ನಾನೆಂದರೆ ಆಗುವುದಿಲ್ಲ. ಸಿದ್ದರಾಮಯ್ಯನವರಿಗೆ ಹಲವು ಸಲ ಆಹ್ವಾನ ನೀಡಿದ್ದೇವೆ. ಅವರು ಬಾರದ ಕಾರಣ ಇನ್ನು ಆಹ್ವಾನ ನೀಡುವುದಿಲ್ಲ” ಎಂದು ವಿಶ್ವೇಶತೀರ್ಥ ಸ್ವಾಮೀಜಿ ಅಸಮಾಧಾನ ಹೊರ ಹಾಕಿದ್ದರು.

ರಾಹುಲ್ ಕಾರ್ಯಕ್ರಮ ರದ್ದು ಮಾಡಿದ್ದ ಸಿದ್ದರಾಮಯ್ಯ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೈದ್ದಾಂತಿಕ ಬದ್ಧತೆಯನ್ನು ಅವರ ವಿರೋಧಿಗಳೂ ಮೆಚ್ಚಬೇಕು. ತಮ್ಮ ಸೈದ್ದಾಂತಿಕ ನಿಲುವುಗಳಿಗೆ ಯಾವತ್ತೂ ರಾಜಿಯಾಗದ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕೃಷ್ಣಮಠ ಭೇಟಿಯನ್ನೂ ತಪ್ಪಿಸಿದ್ದರು! ಮಾರ್ಚ್ ತಿಂಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಆಗಮಿಸಲಿದ್ದ ರಾಹುಲ್‌ ಗಾಂಧಿ ಎರಡು ದಿನ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಪ್ರವಾಸ ಮಾಡಲಿದ್ದರು. ಹಲವು ಕಾರ್ಯಕ್ರಮ, ಸಂವಾದಗಳಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದರು.

ಮಾರ್ಚ್‌ನಲ್ಲಿ ಚುನಾವಣಾ ಕಾವು ಜೋರಾಗಿತ್ತು. ನಿಗದಿತ ಕಾರ್ಯಕ್ರಮದ ಪ್ರಕಾರ ಕೃಷ್ಣಮಠಕ್ಕೆ ಭೇಟಿ ನೀಡಿ, ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು, ಉಡುಪಿಯ ಐಬಿ ಅಥವಾ ಬೇರೆ ಎಲ್ಲಾದರೂ ರಾಹುಲ್ ಗಾಂಧಿ ವಾಸ್ತವ್ಯ ಮಾಡುವ ಬಗ್ಗೆ ಹಿರಿಯ ಕಾಂಗ್ರೆಸಿಗರು ಯೋಜನೆ ರೂಪಿಸಿದ್ದರು. ಆದರೆ, ಕೃಷ್ಣಮಠದ ಕಾರಣಕ್ಕಾಗಿ ಸಿದ್ದರಾಮಯ್ಯನವರು ಇಡೀ ಪ್ರವಾಸದ ವೇಳಾಪಟ್ಟಿಯನ್ನೇ ಪರಿಸ್ಕರಣೆ ಮಾಡಿದ್ದರು. ಈ ಮೂಲಕ, ಕೃಷ್ಣಮಠಕ್ಕೆ ಹೋಗುವ ಕಾರ್ಯಕ್ರಮವನ್ನೇ ರದ್ದು ಮಾಡಿಸಿದ್ದರು.

ಗಮನಾರ್ಹ ಸಂಗತಿ ಎಂದರೆ, ರಾಹುಲ್ ಶೃಂಗೇರಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ರಾಹುಲ್ ಗಾಂಧಿ ಜೊತೆ ಎಲ್ಲಾ ಕಾರ್ಯಕ್ರಮಗಳಿಗೆ ಸಿಎಂ ಹೋಗಬೇಕಿರುವುದರಿಂದ, ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದರೆ ತಾನೂ ಹೋಗಬೇಕಾಗುತ್ತೆ ಎಂಬ ಕಾರಣಕ್ಕಾಗಿ ಆ ಕಾರ್ಯಕ್ರಮವನ್ನು ಉದ್ದೇಶಪೂರ್ವಕವಾಗಿಯೇ ರದ್ದು ಮಾಡಲಾಗಿತ್ತು.

ಸಿಎಂ ಕುಮಾರಸ್ವಾಮಿ ಲೆಕ್ಕಾಚಾರವೇನು?

ಆದರೆ ಸಿ.ಎಂ. ಕುಮಾರಸ್ವಾಮಿಯವರು ನಿನ್ನೆ ಕೃಷ್ಣಮಠಕ್ಕೆ ಭೇಟಿ ಕೊಡುವ ಮೂಲಕ ರಾಜಕೀಯ ಚುತುರತೆ ಮೆರೆದಿದ್ದಾರೆ. ಮೊದಲನೆಯದಾಗಿ, ತಾನು ಸಿದ್ದರಾಮಯ್ಯರಂತೆ ಮಠ ವಿರೋಧಿಯೂ ಅಲ್ಲ, ಹಿಂದೂ ವಿರೋಧಿಯೂ ಅಲ್ಲ (ಪ್ರತಿಪಕ್ಷಗಳ ಆರೋಪ) ಎಂಬ ಸಂದೇಶವನ್ನು ರಾಜ್ಯದ ಜನತೆಗೆ ರವಾನಿಸಿರುವುದು. ಎರಡನೆಯದಾಗಿ ಸಿದ್ದರಾಮಯ್ಯ ಮತ್ತು ತಮ್ಮ ನಡುವಿನ ಶೀತಲ ಸಮರ ನಡೆಯುತ್ತಿರುವ ಹೊತ್ತಲ್ಲೇ, ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಮಠಕ್ಕೆ ಹೋಗದ ಸಿದ್ದು ಸಂಪ್ರದಾಯವನ್ನು ಮುರಿದಿರುವುದು!

ಕುಮಾರಸ್ವಾಮಿ ಜಾತ್ಯತೀತತೆ ಬಗ್ಗೆ ಎಷ್ಟೇ ಭಾಷಣ ಮಾಡಿದರೂ ಯಾವತ್ತೂ ಅವರು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗದಂತೆ ನೋಡಿಕೊಂಡಿದ್ದಾರೆ. ಜೆಡಿಎಸ್ ಅಹಿಂದ ವರ್ಗದ ಜೊತೆ ಇದೆ ಎಂದು ಹೇಳುತ್ತಲೇ ಮೇಲ್ವರ್ಗದ ಹಿಂದೂಗಳನ್ನೂ ಯಾವತ್ತೂ ದೂರ ಇಟ್ಟಿಲ್ಲ. ಈ ಬಾರಿಯೂ ಅದೇ ರೀತಿಯ ಚತುರ ನಡೆಯ ಮೂಲಕ ಕರಾವಳಿಯ ಹಿಂದೂಗಳನ್ನು ಸಮಾಧಾನಪಡಿಸಲು ಹೊರಟಿದ್ದಾರೆ ಸಿಎಂ. ಈ ಮೂಲಕ ಬಜೆಟ್‌ನಲ್ಲಿ ಕರಾವಳಿಗೆ ಅನ್ಯಾಯವಾಗಿದೆ ಎಂಬ ಕರಾವಳಿಗರ ಅಸಮಾಧಾನವನ್ನೂ ಈ ರೀತಿ ತಣಿಸಲು ಮುಂದಾಗಿದ್ದಾರೆ.

ಅದೇನೇ ಇರಲಿ ಕಳೆದ ಐದು ವರ್ಷದಲ್ಲಿ ಮುಖ್ಯಮಂತ್ರಿಯೊಬ್ಬರು ಮಠಕ್ಕೆ ಬರಲಿಲ್ಲ ಎಂಬ ಕೊರಗನ್ನು ಕುಮಾರಸ್ವಾಮಿ ನೀಗಿಸಿದ್ದಾರೆ. ಜೊತೆಗೆ ತಾವು ಸಿದ್ದರಾಮಯ್ಯ ತರಹದ ಮಠವಿರೋಧಿ ಅಲ್ಲ ಎಂಬ ಮೇಸೇಜನ್ನು ಅತ್ಯಂತ ಯಶಸ್ವಿಯಾಗಿ ರವಾನಿಸಿದ್ದಾರೆ.