samachara
www.samachara.com
‘ನನ್ನ ಬಂಧನ ಬಿಜೆಪಿ ವಿರುದ್ಧದ ದನಿ ಹತ್ತಿಕ್ಕುವ ಯತ್ನ’: ಅಶ್ರಫ್‌ ಸಾಲೆತ್ತೂರು ಸಂದರ್ಶನ
COVER STORY

‘ನನ್ನ ಬಂಧನ ಬಿಜೆಪಿ ವಿರುದ್ಧದ ದನಿ ಹತ್ತಿಕ್ಕುವ ಯತ್ನ’: ಅಶ್ರಫ್‌ ಸಾಲೆತ್ತೂರು ಸಂದರ್ಶನ

‘ನನ್ನ ವಿರುದ್ಧ ಯಾರ ಸಂಚು ಇದೆಯೋ ಗೊತ್ತಿಲ್ಲ. ಆದರೆ, ಇದು ಬಿಜೆಪಿ ವಿರುದ್ಧದ ದನಿ ಅಡಗಿಸುವ ಯತ್ನದ ಹಾಗಿದೆ. ಅಭಿವ್ಯಕ್ತಿಯನ್ನು ಹತ್ತಿಕ್ಕುವ ಯತ್ನ ಇದು’

ನಗರ ನಕ್ಸಲರ ಹೆಸರಲ್ಲಿ ಐದು ಮಂದಿ ಸಾಮಾಜಿಕ ಕಾರ್ಯಕರ್ತರ ಬಂಧನ, ಬಿಜೆಪಿ ವಿರುದ್ಧ ಘೋಷಣೆ ಕೂಗಿದ ವಿದ್ಯಾರ್ಥಿನಿ ಲೂಯಿಸ್ ಸೂಫಿಯಾ ಬಂಧನದ ಬೆನ್ನಲ್ಲೇ ಬಿಜೆಪಿ ನಾಯಕರ ಮೂಢನಂಬಿಕೆಗಳನ್ನು ಪ್ರಶ್ನಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಮಂಗಳೂರಿನ ಅಶ್ರಫ್‌ ಸಾಲೆತ್ತೂರು ಬಂಧನ ತಡವಾಗಿ ಬೆಳಕಿಗೆ ಬಂದಿದೆ.

‘ಮಂಗಳೂರು ನಗರ ಸೂಕ್ಷ್ಮ ಪ್ರದೇಶವಾಗಿರುತ್ತದೆ. ಅಶ್ರಫ್‌ ಫೇಸ್‌ಬುಕ್‌ ಪೋಸ್ಟ್‌ನಿಂದ ಸಮಾಜದ ಶಾಂತಿ ಮತ್ತು ನೆಮ್ಮದಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ’ ಎಂಬ ಕಾರಣಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಮಂಗಳೂರು ಪೊಲೀಸರು ಆಗಸ್ಟ್‌ 21ರಂದು ಅಶ್ರಫ್‌ ಅವರನ್ನು ಬಂಧಿಸಿದ್ದರು. ಸದ್ಯ ಅಶ್ರಫ್‌ ವಿರುದ್ಧ ಐಪಿಸಿ ಸೆಕ್ಷನ್‌ 153, 505(2) ಮತ್ತು 507 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ನಿಜಕ್ಕೂ ಪೊಲೀಸರು ಆರೋಪಿಸಿರುವಂಥ ‘ಸಮಾಜದ ಶಾಂತಿ, ನೆಮ್ಮದಿಗೆ ಅಪಾಯ ಉಂಟಾಗುವ’ ಯಾವ ಅಂಶಗಳೂ ಅಶ್ರಫ್‌ ಪೋಸ್ಟ್‌ನಲ್ಲಿ ಇರಲಿಲ್ಲ.

ಆಗಸ್ಟ್‌ 19ರಂದು ಅಶ್ರಫ್‌ ಫೇಸ್‌ಬುಕ್‌ನಲ್ಲಿ ಮಾಡಿದ್ದ ಪೋಸ್ಟ್‌:

ಕೇರಳದ ಪ್ರವಾಹದ ವಿಚಾರದಲ್ಲಿ ಬಿಜೆಪಿ ಮುಖಂಡರು ನೀಡಿದ್ದ ಅಸಂಬದ್ಧ ಹೇಳಿಕೆಗಳನ್ನು ಅಶ್ರಫ್‌ ಪ್ರಶ್ನಿಸಿದ್ದರು. ಹೀಗೆ ಬಿಜೆಪಿ ಮುಖಂಡರ ಮೂಢನಂಬಿಕೆಯನ್ನು ಪ್ರಶ್ನಿಸಿದ್ದ ಕಾರಣಕ್ಕೇ ನನ್ನನ್ನು ಬಂಧಿಸಲಾಯಿತು ಮತ್ತು ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು ಎನ್ನುತ್ತಾರೆ ಅಶ್ರಫ್‌. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ದಿನದ ನಂತರದ ಬೆಳವಣಿಗೆಗಳ ಬಗ್ಗೆ ಅಶ್ರಫ್‌ ‘ಸಮಾಚಾರ’ದೊಂದಿಗೆ ಮಾತನಾಡಿದ ಆಯ್ದ ಭಾಗ ಇಲ್ಲಿದೆ:

ಸಮಾಚಾರ: ಆಗಸ್ಟ್‌ 21ರಂದು ನಡೆದಿದ್ದೇನು?

ಅಶ್ರಫ್‌: ಆಗಸ್ಟ್‌ 21ರ ಸಂಜೆ ನನಗೆ ಪರಿಚಯವಿದ್ದ ಸಿಸಿಬಿ ವಿಭಾಗದ ಜಬ್ಬಾರ್‌ ಎಂಬುವರು ಫೋನ್‌ ಮಾಡಿದರು. ಬ್ಯಾರಿ ಭಾಷೆಯಲ್ಲಿ ಮಾತನಾಡಿದ ಅವರು ‘ಠಾಣೆಗೆ ಬನ್ನಿ ಸ್ವಲ್ಪ ಮಾತನಾಡುವುದಿದೆ. ಐದು ನಿಮಿಷದಲ್ಲಿ ವಾಪಸ್‌ ಕಳಿಸುತ್ತೇವೆ’ ಎಂದು ಹೇಳಿದರು. ನಾನು ಠಾಣೆಗೆ ಹೋದ ನಂತರ ಸಿಸಿಬಿ ಪೊಲೀಸರು ನನ್ನ ಮೊಬೈಲ್‌ ಎತ್ತಿಟ್ಟುಕೊಂಡರು. ಬಳಿಕ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ಬಗ್ಗೆ ಪ್ರಶ್ನಿಸಿದರು. ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿ ಸಂವಿಧಾನ ವಿರೋಧಿ, ಧರ್ಮ ನಿಂದನೆ ಮಾಡುತ್ತಿದ್ದೀಯಾ ಎಂದೆಲ್ಲಾ ಜೋರು ಮಾಡಿದರು. ಬಳಿಕ ನನ್ನ ಹಿನ್ನೆಲೆ ಕೇಳುತ್ತಾ ಅವಾಚ್ಯ ಶಬ್ದಗಳಿಂದ ಪೊಲೀಸ್‌ ಸಿಬ್ಬಂದಿ ನನ್ನನ್ನು ನಿಂದಿಸಿದರು. ನನ್ನ ಫೋಟೋ ತೆಗೆದು ರಾತ್ರಿ ಎಂಟು ಗಂಟೆ ಹೊತ್ತಿಗೆ ಬಂದರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.

ಸಮಾಚಾರ: ನಿಮ್ಮ ಫೇಸ್‌ಬುಕ್‌ ಪೋಸ್ಟ್‌ ಬಗ್ಗೆ ಪೊಲೀಸರ ಆಕ್ಷೇಪ ಏನಿತ್ತು?

ಅಶ್ರಫ್‌: ಬಂದರು ಠಾಣೆಯ ಇನ್‌ಸ್ಪೆಕ್ಟರ್‌ ಸುರೇಶ್‌ ಕುಮಾರ್‌ ನನ್ನ ಫೇಸ್‌ಬುಕ್‌ ಪೋಸ್ಟ್‌ ಬಗ್ಗೆ ಪ್ರಶ್ನಿಸಿದರು. ‘ನಾನು ಸಂವಿಧಾನ ವಿರುದ್ಧವಾಗಿ, ಧರ್ಮ ನಿಂದನೆ ಆಗುವಂಥದ್ದು ಏನೂ ಬರೆದಿಲ್ಲ. ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ಸುಪ್ರೀಂಕೋರ್ಟ್‌ನ ಈ ಆದೇಶವನ್ನೇ ಅವಹೇಳನ ಮಾಡುವಂತೆ ಹಲವು ಬಿಜೆಪಿ ಮುಖಂಡರು ಕೇರಳದ ಪ್ರವಾಹಕ್ಕೂ ಆ ಆದೇಶಕ್ಕೂ ತಳಕು ಹಾಕಿದ್ದರು. ಹಲವರು ಫೇಸ್‌ಬುಕ್‌ನಲ್ಲಿ ಇದರ ಬಗ್ಗೆ ಪೋಸ್ಟ್‌ ಮಾಡಿದ್ದರು. ಈ ಮೂಢನಂಬಿಕೆಯನ್ನು ನಾನು ಪ್ರಶ್ನಿಸಿದ್ದೆ ಅಷ್ಟೆ’ ಎಂದು ನಾನು ಇನ್‌ಸ್ಪೆಕ್ಟರ್‌ ಅವರಿಗೆ ಹೇಳಿದೆ.

‘ಹಾಗಾದರೆ ದೆಹಲಿಯಲ್ಲಿ ಸಂವಿಧಾನ ಸುಟ್ಟರಲ್ಲ ಅದನ್ನೂ ಪ್ರಶ್ನಿಸಿ ಬರೆಯುತ್ತೀಯಾ?’ ಎಂದು ಕೇಳಿದರು. ಸಂವಿಧಾನ ವಿರುದ್ಧವಾಗಿ ಯಾರೇ ನಡೆದುಕೊಂಡರೂ ನಾನು ಅದನ್ನು ಪ್ರತಿಭಟಿಸುತ್ತೇನೆ ಎಂದು ಹೇಳಿದೆ. ಆದರೆ, ಬಿಜೆಪಿ ಮುಖಂಡರ ನಡೆಯನ್ನು ನಾನು ಪ್ರಶ್ನಿಸಿದ್ದೇ ತಪ್ಪು ಎಂಬಂತೆ ಪೊಲೀಸರು ನನ್ನ ಜತೆಗೆ ನಡೆದುಕೊಂಡರು. ‘ನೀನೇಕೆ ಫೇಸ್‌ಬುಕ್‌ನಲ್ಲಿ ಹಾಗೆಲ್ಲಾ ಬರೆಯುತ್ತೀಯ, ನಿನಗೇನು ಹುಚ್ಚುಂಟಾ, ನಿನಗೆ ಬೇರೆಯವರ ಉಸಾಬರಿ ಏಕೆ’ ಎಂದು ಪೊಲೀಸರು ನನ್ನ ಮೇಲೆ ಜೋರು ಮಾಡಿದರು. ನನ್ನ ವಿರುದ್ಧ ಐಪಿಸಿ ಸೆಕ್ಷನ್‌ 153, 505(2) ಮತ್ತು 507 ಅಡಿಯಲ್ಲಿ ಪ್ರಕರಣ ದಾಖಲಿಸಿದರು. ಪ್ರಶ್ನಿಸುವ ಮನೋಭಾವವನ್ನು ಹತ್ತಿಕ್ಕುವ, ಅಭಿವ್ಯಕ್ತಿಯ ಹಕ್ಕನ್ನು ಕಸಿದುಕೊಳ್ಳುವ ಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆ.

Also read: ‘ಭಕ್ತ’ರ ಮೂಢನಂಬಿಕೆ ಪ್ರಶ್ನಿಸಿದ್ದಕ್ಕೆ ಜೈಲು ಶಿಕ್ಷೆ; #JusticeForAshraf ಅಶ್ರಫ್‌ ಪರ ಅಭಿಯಾನ

ಸಮಾಚಾರ: ಪೊಲೀಸರು ನಿಮ್ಮನ್ನು ವಶಕ್ಕೆ ತೆಗೆದುಕೊಂಡಿದ್ದು ಯಾವಾಗ?

ಅಶ್ರಫ್‌: ಆಗಸ್ಟ್‌ 21ರ ರಾತ್ರಿ ಬಂದರು ಠಾಣೆಯ ಇನ್‌ಸ್ಪೆಕ್ಟರ್‌ ಸುರೇಶ್‌ ಕುಮಾರ್‌ ನನ್ನನ್ನು ಕೆಲವು ಪಶ್ನೆಗಳನ್ನು ಕೇಳಿದ ಬಳಿಕ ಅವರ ಕೊಠಡಿಯಿಂದ ನನ್ನನ್ನು ಹೊರಗೆ ಕಳಿಸುವಂತೆ ಹೇಳಿದರು. ಬಳಿಕ ಅಲ್ಲಿದ್ದ ಸಿಬ್ಬಂದಿ ನನ್ನನ್ನು ಕಂಪ್ಯೂಟರ್‌ಗಳಿದ್ದ ರೂಮ್‌ನಲ್ಲಿ ಕುಳಿಸಿದ್ದರು. ರಾತ್ರಿ ಸುಮಾರು 12 ಗಂಟೆವರೆಗೂ ಅಲ್ಲಿದ್ದೆ. ಅಲ್ಲಿ ನನ್ನ ಇಮೇಲ್‌ ಐಡಿ, ಪಾಸ್‌ವರ್ಡ್‌ ತೆಗೆದುಕೊಂಡು ಫೇಸ್‌ಬುಕ್‌ನ ಸ್ಕ್ರೀನ್‌ಶಾಟ್‌ ತೆಗೆದರು. ಬಳಿಕ ನನ್ನ ಮೈ ಮೇಲೆ ನಿಕ್ಕರ್‌ ಒಂದನ್ನು ಬಿಟ್ಟು ಎಲ್ಲಾ ಬಟ್ಟೆ ತೆಗೆಸಿ ಲಾಕಪ್‌ಗೆ ಕೂಡಿದರು.

ಅಲ್ಲಿ ಇಲಿ, ಹೆಗ್ಗಣ, ಇರುವೆಗಳು ಹರಿದಾಡುತ್ತಿದ್ದವು. ಬಕ್ರೀದ್‌ ಇದೆ ನನ್ನನ್ನು ಕಳಿಸಿ ಎಂದು ನಾನು ಪೊಲೀಸರಲ್ಲಿ ಬೇಡಿಕೊಂಡೆ. ಆದರೆ, ಯಾರೂ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೆಲವು ಪೊಲೀಸ್‌ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸುತ್ತಲೇ ಇದ್ದರು. ಮರುದಿನ ನ್ಯಾಯಾಧೀಶರ ಮನೆಗೆ ನನ್ನನ್ನು ಹಾಜರು ಪಡಿಸುವ ಸಂದರ್ಭದಲ್ಲಿ ರಾತ್ರಿ ಲಾಕಪ್‌ನಲ್ಲಿ ಇರಿಸಿದ್ದನ್ನು ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಪೊಲೀಸರು ಹೆದರಿಸಿದರು. ನನ್ನನ್ನು ಬೆಳಿಗ್ಗೆ ಬಂಧಿಸಿದರು ಎಂದು ನ್ಯಾಯಾಧೀಶರ ಮುಂದೆ ಹೇಳುವಂತೆ ಪೊಲೀಸರು ಒತ್ತಡ ತಂದರು. ಬಳಿಕ ಒಂದು ವಾರ ನನ್ನನ್ನು ಜೈಲಿಗೆ ಹಾಕಿದರು. ಜಾಮೀನಿನ ಮೇಲೆ ಹೊರಗೆ ಬಂದೆ.

ಸಮಾಚಾರ: ನಿಮ್ಮ ಬಂಧನದ ಹಿಂದೆ ಬೇರೆ ಯಾವುದಾದರೂ ಸಂಚು ಇದೆ ಎಂದು ಅನ್ನಿಸುತ್ತಿದೆಯಾ?

ಅಶ್ರಫ್‌: ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ನನ್ನ ಪೋಸ್ಟ್‌ನಲ್ಲಿ ಆಕ್ಷೇಪಿಸುವಂಥದ್ದು, ನಿಯಮ ಉಲ್ಲಂಘಿಸುವಂಥದ್ದು, ಶಾಂತಿ ಭಂಗವಾಗುವಂಥದ್ದು ಏನೂ ಇಲ್ಲದಿದ್ದರೂ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಧರ್ಮ ವಿರೋಧಿ, ಸಂವಿಧಾನ ವಿರೋಧಿ, ಗುಂಪು ಗುಂಪುಳ ನಡುವೆ ದ್ವೇಷ ಬಿತ್ತುವ ಎಷ್ಟೋ ಪೋಸ್ಟ್‌ಗಳು ಇಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ. ಅಂಥವರನ್ನು ಬಂಧಿಸುವುದು ಬಿಟ್ಟು ಪೊಲೀಸರು ಏನೂ ತಪ್ಪೇ ಮಾಡದ ನನ್ನ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.

ನಾನು ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಪೊಲೀಸರು ನನ್ನೊಂದಿಗೆ ಅಮಾನವೀಯವಾಗಿ ನಡೆದುಕೊಂಡ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿದ್ದೆ. ಆದರೆ, ಹಾಗೆ ಬರೆಯುವುದೂ ನಿಯಮ ಉಲ್ಲಂಘನೆ ಎಂದು ನೋಟಿಸ್‌ ನೀಡಿದ ಪೊಲೀಸರು, ಮತ್ತೆ ಈ ರೀತಿಯ ಪೋಸ್ಟ್ ಹಾಕುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ನನ್ನ ವಿರುದ್ಧ ಯಾರ ಸಂಚು ಇದೆಯೋ ಗೊತ್ತಿಲ್ಲ. ಆದರೆ, ಇದು ಬಿಜೆಪಿ ವಿರುದ್ಧದ ದನಿ ಅಡಗಿಸುವ ಯತ್ನದ ಹಾಗಿದೆ. ಅಭಿವ್ಯಕ್ತಿಯನ್ನು ಹತ್ತಿಕ್ಕುವ ಯತ್ನ ಇದು. ಆದರೆ, ನನಗೆ ನ್ಯಾಯದ ಮೇಲೆ, ನ್ಯಾಯಾಲಯ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ನನ್ನ ವಿರುದ್ಧದ ಆರೋಪ ಸುಳ್ಳು ಎಂದು ಸಾಬೀತಾಗುವ ವಿಶ್ವಾಸವಿದೆ.

ಸಮಾಚಾರ: ಈ ಪ್ರಕರಣದಲ್ಲಿ ನಿಮ್ಮ ಮುಂದಿನ ಹೋರಾಟ ಏನು?

ಅಶ್ರಫ್‌: ನನ್ನ ಬಂಧನ ಹಾಗೂ ನನ್ನನ್ನು ಅಮಾನವೀಯವಾಗಿ ನಡೆಸಿಕೊಂಡ ಬಗ್ಗೆ ಮಾನವ ಹಕ್ಕುಗಳ ಆಯೋಗ, ಹಿರಿಯ ಪೊಲೀಸ್ ಅಧಿಕಾರಿಗಳು, ಗೃಹ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇನೆ. ನನ್ನ ಬಂಧನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಕೆಲವು ವಕೀಲ ಗೆಳೆಯರು ಮುಂದೆ ಬಂದಿದ್ದಾರೆ. ಬಿಜೆಪಿ ಮುಖಂಡರು ಕೇರಳ ಪ್ರವಾಹದ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಆದೇಶವನ್ನೇ ಅವಹೇಳನ ಮಾಡಿರುವ ಬಗ್ಗೆ ಸುಪ್ರೀಂಕೋರ್ಟ್‌ಗೂ ಮನವಿ ಸಲ್ಲಿಸಲು ನನ್ನ ವಕೀಲ ಗೆಳೆಯರು ಮುಂದಾಗಿದ್ದಾರೆ. ಈ ವಿಚಾರ ತಾರ್ಕಿಕ ಅಂತ್ಯ ಕಾಣುವವರೆಗೂ ನಾನು ಸುಮ್ಮನಿರುವುದಿಲ್ಲ. ಕೊನೆಗೂ ಗೆಲ್ಲಬೇಕಾಗಿರುವುದು ನ್ಯಾಯವೇ ಹೊರತು ಅನ್ಯಾಯವಲ್ಲ.