ಅರಸು ಮಾದರಿಯಲ್ಲಿ ಎಚ್‌ಡಿಕೆ ನಡೆ; ಉತ್ತರ ಕರ್ನಾಟಕಕ್ಕೆ ಪ್ರಮುಖ ಕಚೇರಿಗಳು ಶಿಫ್ಟ್‌
COVER STORY

ಅರಸು ಮಾದರಿಯಲ್ಲಿ ಎಚ್‌ಡಿಕೆ ನಡೆ; ಉತ್ತರ ಕರ್ನಾಟಕಕ್ಕೆ ಪ್ರಮುಖ ಕಚೇರಿಗಳು ಶಿಫ್ಟ್‌

8ಕ್ಕೂ ಹೆಚ್ಚು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾವಣೆ ಮಾಡಲು ಗುರುವಾರದ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಯಾವ ಕಚೇರಿಯನ್ನು ಎಲ್ಲಿಗೆ ವರ್ಗಾಯಿಸಬೇಕು ಎಂಬುದನ್ನು ನಿರ್ಧರಿಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ.

ಆಡಳಿತದಲ್ಲಿ ದೇವರಾಜ ಅರಸು ಮಾದರಿಯನ್ನು ಅನುಸರಿಸಲು ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ 8ಕ್ಕೂ ಹೆಚ್ಚು ಕಚೇರಿಗಳನ್ನು ವರ್ಗಾಯಿಸುವ ಕ್ರಮಕ್ಕೆ ಮುಂದಾಗಿದ್ದಾರೆ. 1976ರಲ್ಲಿ ಅರಸು ಜಾರಿಗೆ ತಂದಿದ್ದ ‘ಕರ್ನಾಟಕ ಋಣ ಪರಿಹಾರ ಕಾಯ್ದೆ’ಯ ಮಾದರಿಯಲ್ಲಿ ಹೊಸ ಸುಗ್ರೀವಾಜ್ಞೆ ಹೊರಡಿಸಿದ್ದ ಸಮ್ಮಿಶ್ರ ಸರಕಾರ ಈಗ ಉತ್ತರಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಮುಂದಾಗಿದೆ.

ಅರಸು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ ಜಲ ಭಾಗ್ಯ ನಿಗಮದ ಕಚೇರಿಯನ್ನು ಬೆಳಗಾವಿಗೆ ವರ್ಗಾಯಿಸಿದ್ದರು. ಅರಸು ಇದ್ದಷ್ಟು ದಿನ ಬೆಳಗಾವಿಯಿಂದಲೇ ಕಾರ್ಯ ನಿರ್ವಹಿಸಿದ ನಿಗಮ ಅವರು ಸಿಎಂ ಹುದ್ದೆಯಿಂದ ಕೆಳಗಿಳಿಯುತ್ತಿದ್ದಂತೆ ಮತ್ತೆ ಬೆಂಗಳೂರಿಗೆ ಬಂದು ಕುಳಿತಿತ್ತು. ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಇಲಾಖೆ, ನಿಗಮ ಮಂಡಳಿ ಮತ್ತು ಕೆಲವು ಪ್ರಾಧಿಕಾರಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಕೃಷ್ಣ ಬೈರೇಗೌಡ, “8ಕ್ಕೂ ಹೆಚ್ಚು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾವಣೆ ಮಾಡಲು ಗುರುವಾರದ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಯಾವ ಕಚೇರಿಯನ್ನು ಎಲ್ಲಿಗೆ ವರ್ಗಾಯಿಸಬೇಕು ಎಂಬುದನ್ನು ನಿರ್ಧರಿಸಲು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ,” ಎಂಬ ಮಾಹಿತಿ ನೀಡಿದ್ದಾರೆ.

ತಿಂಗಳ ಹಿಂದೆ ‘ಪ್ರತ್ಯೇಕ ಉತ್ತರ ಕರ್ನಾಟಕ’ ಹೋರಾಟ ಕಾವು ಪಡೆದುಕೊಂಡಿದ್ದ ಸಂದರ್ಭದಲ್ಲಿ ಹಲವು ತಜ್ಞರು ‘ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯವಾಗುವುದು ಬೇಡ ಬದಲಿಗೆ ಅಲ್ಲಿಗೆ ಪ್ರಮುಖ ಕಚೇರಿಗಳನ್ನು ಸ್ಥಳಾಂತರಿಸಿ’ ಎಂಬ ಸಂಧಾನ ಸೂತ್ರವನ್ನು ಮುಂದಿಟ್ಟಿದ್ದರು. ಈ ಸಂದರ್ಭ ‘ಸಮಾಚಾರ’ ಕೂಡ ಸುದೀರ್ಘವಾದ ವರದಿಯೊಂದನ್ನು ಪ್ರಕಟಿಸಿತ್ತು.

ಇದಾದ ಬಳಿಕ ಆಗಸ್ಟ್‌ 1ರಂದು ಉತ್ತರ ಕರ್ನಾಟಕದ ಮುಖಂಡರೊಂದಿಗೆ ವಿಧಾನಸಭೆಯಲ್ಲಿ ಮಾತುಕತೆ ನಡೆಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ‘ಕೆಲವು ಕಚೇರಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಮತ್ತು ವಿಜಯಪುರಕ್ಕೆ ಸ್ಥಳಾಂತರಿಸಲಾಗುವುದು’ ಎಂಬ ಭರವಸೆ ನೀಡಿದ್ದರು.

ಆ ಭರವಸೆಯಂತೆ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ನೇತೃತ್ವದ ಸಮಿತಿಗೆ ಸೂಚಿಸಿದ್ದರು. ಇದೀಗ ಸಮಿತಿಯು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದು ಒಟ್ಟು 8 ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿದೆ.

ಸಮಿತಿ ಶಿಫಾರಸ್ಸು

ಕೃಷ್ಣ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿ ಮತ್ತು ಮತ್ತು ನೋಂದಾಯಿತ ಕಚೇರಿಗಳು ಆಲಮಟ್ಟಿಗೆ ಸ್ಥಳಾಂತರ, ಕರ್ನಾಟಕ ನೀರಾವರಿ ನಿಗಮದ ಕೇಂದ್ರ ಕಚೇರಿ ಮತ್ತು ನೋಂದಾಯಿತ ಕಚೇರಿಗಳು, ಸಕ್ಕರೆ ಅಭಿವೃದ್ಧಿ ನಿರ್ದೇಶನಾಲಯ, ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ, ವಿದ್ಯುತ್‌ ಮಗ್ಗಗಳ ನಿಗಮದ ಕಚೇರಿ, ಇಬ್ಬರು ಮಾಹಿತಿ ಹಕ್ಕು ಆಯುಕ್ತರ ಕಚೇರಿ, ಕರ್ನಾಟಕ ಮಾನವ ಹಕ್ಕು ಆಯೋಗದ ಒಬ್ಬರು ಸದಸ್ಯರ ಕಚೇರಿ, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ನಿರ್ದೇಶನಾಲಯ ಸ್ಥಳಾಂತರಕ್ಕೆ ಸಮಿತಿ ಶಿಫಾರಸ್ಸು ಮಾಡಿತ್ತು.

ಇದಲ್ಲದೆ ಬೆಂಗಳೂರಿನಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯನ್ನು ವಿಭಜಿಸಿ ಉತ್ತರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಸ್ಥಾಪನೆ ಮಾಡಲು ಸಮಿತಿಯು ಸೂಚಿಸಿತ್ತು. ಇದಕ್ಕೀಗ ಗುರುವಾರದ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ.

ಇನ್ನು ಕಚೇರಿಗಳ ವರ್ಗಾವಣೆಗೆ ಸ್ಥಳ ಸೂಚಿಸಿ ಸಚಿವ ಸಂಪುಟ ಉಪಸಮಿತಿಯು ಒಂದು ತಿಂಗಳೊಳಗೆ ವರದಿ ನೀಡಲಿದೆ. ಈ ವರದಿ ಕೈ ಸೇರಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಈ ಮೂಲಕ ‘ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಸಿಗುವಂತಾಗಬೇಕು’ ಎಂಬ ಹೋರಾಟಗಾರರ ಬಹುದಿನಗಳ ಬೇಡಿಕೆಯಲ್ಲಿ ಒಂದು ಹೆಜ್ಜೆ ಪ್ರಗತಿ ಸಾಧಿಸಿದಂತಾಗಿದೆ.

ಸಾಮಾನ್ಯವಾಗಿ ಬೆಂಗಳೂರಿನ ಹೊರಗೆ ಕಚೇರಿಗಳನ್ನು ತೆರೆಯಲು ಐಎಎಸ್‌ ಲಾಬಿ ಅಡ್ಡಪಡಿಸುತ್ತವೆ. ಅರಸು ಕಾಲದಲ್ಲಿಯೂ ಕೃಷ್ಣ ಭಾಗ್ಯ ಜಲ ನಿಗಮವನ್ನು ಬೆಳಗಾವಿಯಲ್ಲಿ ತೆರಯಲು ಐಎಎಸ್ ಅಧಿಕಾರಿಗಳು ಅಡ್ಡಿಪಡಿಸಿದ್ದರು. ಆದರೆ ಇದನ್ನು ಮೆಟ್ಟಿ ನಿಂತು ಅರಸು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದರು. ಈ ಬಾರಿ ಕುಮಾರಸ್ವಾಮಿಯೂ ಅರಸು ತೋರಿದ ಛಾತಿಯನ್ನು ತೋರಿಸಬೇಕಿದೆ.