samachara
www.samachara.com
‘ಮುಂದೆ ಹಣಕೊಟ್ಟರು ಹಿಂದೆ ಕಿತ್ತುಕೊಂಡರು’: ಕರವೇ ಮುಖಂಡರ ವಿರುದ್ಧ ಕೊಡಗಿನ ದಂಪತಿ ಆರೋಪ
COVER STORY

‘ಮುಂದೆ ಹಣಕೊಟ್ಟರು ಹಿಂದೆ ಕಿತ್ತುಕೊಂಡರು’: ಕರವೇ ಮುಖಂಡರ ವಿರುದ್ಧ ಕೊಡಗಿನ ದಂಪತಿ ಆರೋಪ

ವಿಕೋಪದ ಸಂದರ್ಭದಲ್ಲಿ ಕೊಡಗಿಗೆ ನೀಡಿದ ಪರಿಹಾರ ಸಾಮಾಗ್ರಿಗಳು ದುರುಪಯೋಗವಾಗಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಇದೀಗ ಸಂತ್ರಸ್ತರಿಂದ ದುಡ್ಡನ್ನು ಕಿತ್ತುಕೊಳ್ಳುವ, ತುಚ್ಛವಾಗಿ ಕಾಣುವ ಬೆಳವಣಿಗೆಗಳು ಅಸಹ್ಯ ಹುಟ್ಟಿಸುತ್ತಿವೆ.

ಈ ಶತಮಾನದ ಭೀಕರ ದುರಂತಕ್ಕೆ ಸಿಲುಕಿ ಕೊಡಗು ಸಂಪೂರ್ಣ ನೆಲಕಚ್ಚಿದೆ. ಈ ವಿಕೋಪದಲ್ಲಿ ನೊಂದವರ ಕಣ್ಣೀರು ಒರೆಸಲು ರಾಜ್ಯದ ಉದ್ದಗಲಗಳಿಂದ ಜಾತಿ ಧರ್ಮಗಳ ಭೇದವಿಲ್ಲದೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ನೂರಾರು ದಾನಿಗಳು ಮನೆ ಕಳೆದುಕೊಂಡವರಿಗೆ ಪುನಃ ಮನೆ ನಿರ್ಮಿಸಿಕೊಡಲು ಮುಂದೆ ಬಂದಿದ್ದಾರೆ. ಆನೇಕ ಸಂಘ ಸಂಸ್ಥೆಗಳು ಜನರಿಗೆ ನೆರವಿನ ಹಸ್ತ ಚಾಚಿವೆ.

ಹೀಗೆ ನೆರವು ನೀಡಲು ಮುಂದೆ ಬಂದಿದ್ದ ಸಂಘಟನೆಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯೂ (ಕರವೇ) ಒಂದು. ರಾಜ್ಯದಾದ್ಯಂತ ಶಾಖೆಗಳನ್ನು ಹೊಂದಿರುವ ಇದರ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಸೆಪ್ಟೆಂಬರ್ 3 ರಂದು ತಮ್ಮ ಪದಾಧಿಕಾರಿಗಳೊಂದಿಗೆ ಮಡಿಕೇರಿ, ಕಾಲೂರು, ಮಕ್ಕಂದೂರು, ಇಗ್ಗೋಡ್ಲು ಹಾಗೂ ಮಾದಾಪುರ ಗ್ರಾಮಗಳಿಗೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿದ್ದರು. ಈ ವೇಳೆ ಹಲವರಿಗೆ ನೆರವಿನ ಹಸ್ತವನ್ನೂ ಚಾಚಿದ್ದರು.

ಇಗ್ಗೋಡ್ಲು ಗ್ರಾಮದಲ್ಲಿ ಮನೆ ಕಳೆದುಕೊಂಡಿದ್ದ ಡ್ಯಾಲಿನ್ ಎಂಬವರಿಗೆ 50 ಸಾವಿರ ರೂಪಾಯಿಗಳ ನೆರವು ನೀಡಿದರು. ನಂತರ ಅದೇ ದಿನ ಸಂಜೆ 7 ಗಂಟೆಗೆ ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಭೂ ಕುಸಿತ ಸಂತ್ರಸ್ಥರ ಜತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮನೆ ಕಳೆದುಕೊಂಡ 6 ಜನ ಸಂತ್ರಸ್ಥರಿಗೆ ತಲಾ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ‘ರಾಷ್ಟ್ರಕವಿ ಕುವೆಂಪು’ ಅವರ ಸ್ಮರಣಾರ್ಥ ಈ ಮನೆಗಳಿಗೆ ‘ಕುವೆಂಪು ನಿವಾಸ’ ಎಂದು ಹೆಸರಿಡಲಾಗುವುದು ಎಂದೂ ಅವರು ತಿಳಿಸಿದ್ದರು.

ಈ ಸಭೆಗೆ ಸ್ಥಳೀಯ ಕರವೇ ಸದಸ್ಯರು ಮಸಗೋಡು ಗ್ರಾಮದ ದಂಪತಿ ಸುಧೀರ್ ಮತ್ತು ಶೈಲ ಅವರನ್ನು ಕರೆದುಕೊಂಡು ಬಂದಿದ್ದರು. ಈ ದಂಪತಿಯ ಮನೆಯ ಗೋಡೆ ಬಿರುಕು ಬಿಟ್ಟಿದ್ದು ಇದನ್ನು ದುರಸ್ಥಿ ಮಾಡಿಸಲು ಸಿಮೆಂಟ್ ಕೊಡಿಸುವುದಾಗಿ ಹೇಳಿ ಅವರನ್ನು ಕರೆ ತರಲಾಗಿತ್ತು. ಸಭೆಗೆ ಕರೆತರುವಾಗಲೇ ಅವರ ಸಿಕ್ಕಿದ ಹಣವನ್ನು ಪಡೆಯಲು ಹೊಂಚು ಹಾಕಲಾಗಿತ್ತು.

ಹೀಗೆ ಸಭೆಗೆ ಬಂದ ಸುಧೀರ್‌ ಮತ್ತು ಶೈಲರ ಮೇಲೆ ಅಷ್ಟೇನು ಹಾನಿಯಾಗಿರಲಿಕ್ಕಿಲ್ಲ ಎಂದು ಅನುಮಾನಗೊಂಡ ನಾರಾಯಣ ಗೌಡರು ಕೊನೆಗೆ ತಲಾ ಹತ್ತು ಸಾವಿರ ರೂಪಾಯಿ ಹಣ ನೀಡಿ ಚೆನ್ನಾಗಿ ಬದುಕಿ ಎಂದು ಹರಸಿದ್ದರು. ಹೀಗೆ ನೊಂದವರಿಗೆ ಸಾಂತ್ವನ ಹೇಳಿ 8 ಗಂಟೆ ಹೊತ್ತಿಗೆ ಬೆಂಗಳೂರಿನತ್ತ ಹೊರಟರು ನಾರಾಯಣ ಗೌಡರು.

ಹಾಗೆ ನಾರಾಯಣ ಗೌಡರು ಬೆಂಗಳೂರಿಗೆ ತೆರಳುತ್ತಿದ್ದಂತೆ ಸ್ಥಳೀಯ ಕರವೇ ನಾಯಕರು ಚುರುಕಾಗಿದ್ದರು. ಅವರಲ್ಲೊಬ್ಬಾಕೆ ಸೋಮವಾರಪೇಟೆ ಕರವೇ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್‌ ಮತ್ತು ಆಕೆಯ ಪತಿ ಸುರೇಶ್ ಸಂತ್ರಸ್ತೆಯನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

“ನಾರಾಯಣ ಗೌಡರು ನಿರ್ಗಮಿಸುತ್ತಿದ್ದಂತೆ ರೂಪಾ ‘ಎಷ್ಟು ಹಣ ನೀಡಿದರು?’ ಎಂದು ಕೇಳಿದರು. ನಾನು ‘ಬರೀ ಹತ್ತು ಸಾವಿರ ನೀಡಿದರು ಅಕ್ಕಾ’ ಎಂದೆ. ಆಗ ಸುಳ್ಳು ಹೇಳುತ್ತಿದ್ದೇನೆ ಎಂದ ಕೆ.ಎನ್. ದೀಪಕ್‌ (ಸೋಮವಾರಪೇಟೆ ಕರವೇ ಅಧ್ಯಕ್ಷ ) ‘ನಾವೆಲ್ಲಾ ಹೊರಗಡೆ ಹೋಗುತ್ತೇವೆ. ಆಕೆಯನ್ನು ಪತ್ರಿಕಾ ಭವನದಲ್ಲೇ ತಡಕಾಡಿ’ ಎಂದು ಹೇಳಿ ಹೋರ ಹೋದರು. ಈ ಸಂದರ್ಭ ರೂಪಾ ನನ್ನನ್ನು ಮೂಲೆಗೆ ಕರೆದುಕೊಂಡು ಹೋದರು. ಆಕೆ ನನ್ನ ಮೈಯನ್ನು ತಡಕಾಡಿ ಹುಡುಕಲು ಆರಂಭಿಸಿದರು. ಸಿಗದಿದ್ದಾಗ ಹಾಕಿಕೊಂಡಿದ್ದ ಬಟ್ಟೆಯನ್ನು ಒಳ ಉಡುಪು ಸಮೇತ ಬಿಚ್ಚಿಸಿ ಹುಡುಕಾಡಿದರು,”ಎಂದು ಕಣ್ಣೀರಾಗುತ್ತಾರೆ ಶೈಲಾ.

ಮಾತನಾಡುತ್ತಲೇ ಕಣ್ಣೀರಾದ ಶೈಲ
ಮಾತನಾಡುತ್ತಲೇ ಕಣ್ಣೀರಾದ ಶೈಲ

ಮಾದಾಪುರದಲ್ಲಿ ವ್ಯಕ್ತಿಯೊಬ್ಬರಿಗೆ ಮನೆ ಕಟ್ಟಲು ನಾರಾಯಣ ಗೌಡರು 50 ಸಾವಿರ ರೂಪಾಯಿ ನೀಡಿದ್ದರು. ಹೀಗಾಗಿ ದಂಪತಿಗೂ ಅಷ್ಟೇ ಹಣ ನೀಡಿರಬಹುದು ಎಂಬ ಗುಮಾನಿಯ ಮೇಲೆ ಈ ಹಣದಲ್ಲಿ 10 ಸಾವಿರವನ್ನು ಅವರಿಗೆ ನೀಡಿ ಉಳಿದ 40 ಸಾವಿರವನ್ನು ಕಿತ್ತುಕೊಳ್ಳುವುದು ರೂಪಾ ಮತ್ತು ಸುರೇಶ್ ಉದ್ದೇಶವಾಗಿತ್ತು. ಹಣ ಸಿಗದಿದ್ದಾಗ ಅವರು ಹೀಗೊಂದು ಅಮಾನವೀಯ ಹುಡುಕಾಟ ನಡೆಸಿದ್ದರು.

ಸೋರುವ ಮನೆ, ಕರಗಿದ ಮಾನವೀಯತೆ

ಈ ಅಮಾನವೀಯ ವರ್ತನೆ ದಂಪತಿಗಳನ್ನು ಆಘಾತಕ್ಕೀಡು ಮಾಡಿದೆ. “ಕೊಟ್ಟ 10 ಸಾವಿರ ರೂಪಾಯಿಗಳನ್ನೂ ಕಿತ್ತುಕೊಂಡಿದ್ದಾರೆ. ಅದರ ಜತೆಗೆ ಮಾಡಿರುವ ಅವಮಾನ ಲಕ್ಷ ರೂಪಾಯಿ ಕೊಟ್ಟರೂ ತೀರದು,” ಎನ್ನುತ್ತಲೇ ಕಣ್ಣೀರಾದರು ಶೈಲ. ‘ಸಮಾಚಾರ’ ಅವರ ಮನೆಗೆ ಭೇಟಿ ನೀಡಿದಾಗ ಮನೆಯ ಒಂದು ಪಾರ್ಶ್ವ ಕುಸಿದಿತ್ತು. ಸೂರಿನಿಂದ ನೀರು ಒಳಗಿಳಿಯುತ್ತಿತ್ತು. “ನಾವು ಇಂಥಹ ಸಂಕಷ್ಟದಲ್ಲಿದ್ದೇವೆ. ಇದರ ಮಧ್ಯೆಯೂ ಹಣಕ್ಕಾಗಿ ನಮ್ಮನ್ನು ಕಳ್ಳರ ರೀತಿ ನಡೆಸಿಕೊಂಡಿದ್ದು ನೋವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು ಅವರು. ಇವರೀಗ ಕಿತ್ತುಕೊಂಡ ಹಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ನೀಡಿದ ನಂತರ 10 ಸಾವಿರ ರೂಪಾಯಿ ಮರಳಿಸಿ ಉಳಿದ 10 ಸಾವಿರ ರೂಪಾಯಿಯನ್ನು ಇನ್ನೂ ವಾಪಸ್‌ ನೀಡಿಲ್ಲ.

ಆದರೆ ಈ ಬಗ್ಗೆ ಕರವೇ ಪ್ರತಿನಿಧಿಗಳು ಹೇಳುವುದೇ ಬೇರೆ. “ನಾರಾಯಣ ಗೌಡರು ಇಬ್ಬರಿಗೂ ತಲಾ 10 ಸಾವಿರ ರೂಪಾಯಿ ಹಣವನ್ನು ನೀಡಿದ್ದರು. ಆದರೆ ಸಭೆಯಿಂದ ಹೊರ ಬಂದಾಗ ಒಬ್ಬರ ಬಳಿ ಮಾತ್ರ 10 ಸಾವಿರ ರೂಪಾಯಿ ಹಣವಿತ್ತು. ಇನ್ನುಳಿದ 10 ಸಾವಿರ ಏನಾಯಿತು ಎಂದು ಹುಡುಕಾಡಿದ್ದೇವೆ. ಹಣವನ್ನು ಅವರು ದುರುಪಯೋಗ ಮಾಡಬಾರದು, ಬದಲಿಗೆ ಬ್ಯಾಂಕ್‌ನಲ್ಲಿ ಇರಿಸಬೇಕು ಎಂದು ಪ್ರಯತ್ನಿಸಿದ್ದೇವೆ ಅಷ್ಟೇ,” ಎನ್ನುತ್ತಾರೆ ಸೋಮವಾರಪೇಟೆ ಕರವೇ ಅಧ್ಯಕ್ಷ ಕೆ.ಎನ್. ದೀಪಕ್‌.

ಜತೆಗೆ ಶೈಲ ಆರೋಪವನ್ನು ಸಾರಸಗಟಾಗಿ ತಿರಸ್ಕರಿಸುತ್ತಾರೆ ರೂಪ ಸುರೇಶ್. “ತಾನು ಬರೀ ಮೈ ಮುಟ್ಟಿ ನೋಡಿದ್ದೇನೆಯೇ ಹೊರತು ಬಟ್ಟೆ ಬಿಚ್ಚಿಸಿಲ್ಲ. ಅಲ್ಲದೆ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಹಣವನ್ನು ಇಬ್ಬರ ಜಂಟಿ ಖಾತೆಯಲ್ಲಿಡಲು ತಾನು ಹಣ ಕೇಳಿದ್ದೇನೆ ಅಷ್ಟೆ. ಇದರಲ್ಲಿ ಬೇರೇನೂ ಇಲ್ಲ,” ಎಂದಿದ್ದಾರೆ.

ಪದಾಧಿಕಾರಿಗಳು ಏನೇ ಹೇಳಿದರೂ ಘಟನೆಯಿಂದ ದಲಿತ ದಂಪತಿ ಮಾತ್ರ ನೊಂದಿದ್ದಾರೆ. ಹಾಗೊಂದು ವೇಳೆ ದುರುಪಯೋಗದ ಆತಂಕವಿದ್ದರೆ ಹಣವನ್ನು ಚೆಕ್ ಮೂಲಕ ನೀಡಬಹುದಾಗಿತ್ತು. ಅಥವಾ ಸಾಂಕೇತಿಕವಾಗಿ ಕವರ್‌ ನೀಡಿ ಬ್ಯಾಂಕ್‌ಗೆ ಹಣ ಜಮೆ ಮಾಡಬಹುದಿತ್ತು. ಈ ಎಲ್ಲಾ ಆಯ್ಕೆಗಳಿದ್ದೂ ಹಣ ನೀಡಿ ಅದನ್ನು ಕಿತ್ತುಕೊಂಡಿದ್ದಲ್ಲದೆ ಈ ರೀತಿ ಅವಮಾನಿಸುವ ಅಗತ್ಯ ಏನಿತ್ತು ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಬಾರಿ ವಿಕೋಪದ ಸಂದರ್ಭದಲ್ಲಿ ಕೊಡಗಿಗೆ ನೀಡಿದ ಪರಿಹಾರ ಸಾಮಾಗ್ರಿಗಳು ದುರುಪಯೋಗವಾಗಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಇದೀಗ ಸಂತ್ರಸ್ತರ ದುಡ್ಡನ್ನು ಕಿತ್ತುಕೊಳ್ಳುವ ಜತೆಗೆ ತುಚ್ಛವಾಗಿ ಕಾಣುವ ಬೆಳವಣಿಗೆಗಳು ನಡೆಯುತ್ತಿದ್ದು ಕೊಡಗಿನಿಂದ ಬರುತ್ತಿರುವ ವರದಿಗಳು ಅಸಹ್ಯ ಹುಟ್ಟಿಸುತ್ತಿವೆ.