ವಿಧಾನಸಭೆ ವಿಸರ್ಜನೆ ಬೆನ್ನಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ತೆಲಂಗಾಣದಲ್ಲಿ ಕೆಸಿಆರ್ ಮಿಂಚಿನ ನಡೆ
COVER STORY

ವಿಧಾನಸಭೆ ವಿಸರ್ಜನೆ ಬೆನ್ನಲ್ಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ತೆಲಂಗಾಣದಲ್ಲಿ ಕೆಸಿಆರ್ ಮಿಂಚಿನ ನಡೆ

ತಮ್ಮ ಚುನಾವಣೆಯ ಧಾವಂತವನ್ನು ತೆರೆದಿಟ್ಟಿರುವ ಚಂದ್ರಶೇಖರ್‌ ರಾವ್ ಇಂದೇ 119 ರಲ್ಲಿ 105 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್ ತಮ್ಮ ಅದೃಷ್ಟದ ಸಂಖ್ಯೆ ‘6’ನ್ನು ನೆಚ್ಚಿಕೊಂಡು ಸೆಪ್ಟೆಂಬರ್ 6 ರಂದು ಅವಸರದ ನಡೆಗಳನ್ನು ಇಟ್ಟಿದ್ದಾರೆ. ಪರಿಣಾಮ ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಹೈದರಾಬಾದ್‌ ಮಿಂಚಿನ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ.

ನಿರೀಕ್ಷೆಯಂತೆ ಗುರುವಾರ ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿ ಕೆ. ಚಂದ್ರಶೇಖರ್‌ ರಾವ್‌ ಅವಧಿಪೂರ್ವ ಚುನಾವಣೆಗೆ ಹೊರಟಿದ್ದಾರೆ. ಆದರೆ ಅನಿರೀಕ್ಷಿತ ತುರ್ತು ಪತ್ರಿಕಾಗೋಷ್ಠಿ ಕರೆದ ಕೆ. ಚಂದ್ರಶೇಖರ್‌ ರಾವ್‌ ವಿಧಾನಸಭೆ ಚುನಾವಣೆ ಎದುರಿಸುವ ತಮ್ಮ ಅವಸರವನ್ನು ತೆರೆದಿಟ್ಟಿದ್ದು, 105 ಕ್ಚೇತ್ರಗಳಿಗೆ ಅಭ್ಯರ್ಥಿಗಳನ್ನೂ ಘೋಷಣೆ ಮಾಡಿದ್ದಾರೆ.

ದಿನದ ಬೆಳವಣಿಗೆಗಳು

ಅಂದುಕೊಂಡಂತೆ ನಡೆದಿದ್ದರೆ ಇಂದು ಬೆಳಿಗ್ಗೆ 6.45ಕ್ಕೆ ಚಂದ್ರಶೇಖರ್‌ ರಾವ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರನ್ನು ಭೇಟಿಯಾಗಬೇಕಾಗಿತ್ತು. ಆದರೆ ಮತ್ತೆ ಮುಹೂರ್ತ ನೆಚ್ಚಿಕೊಂಡ ರಾವ್‌ ಮಧ್ಯಾಹ್ನ 1 ಗಂಟೆಗೆ ಕ್ಯಾಬಿನೆಟ್‌ ಸಭೆಯನ್ನು ಮುಂದೂಡಿದ್ದರು. ಗೃಹ ಕಚೇರಿ ‘ಪ್ರಗತಿ ಭವನ’ದಲ್ಲಿ ನಡೆದ ಸಭೆಯಲ್ಲಿ ವಿಧಾನಸಭೆ ವಿಸರ್ಜನೆ ಮಾಡುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಇದಾದ ಬಳಿಕ ರಾಜಭವನಕ್ಕೆ ತೆರಳಿದ ಕೆ. ಚಂದ್ರಶೇಖರ್‌ ರಾವ್‌ ಮತ್ತು ಅವರ ಸಂಪುಟ ಸಹೊದ್ಯೋಗಿಗಳು ಸಭೆಯ ನಿರ್ಣಯವನ್ನು ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರಿಗೆ ಸಲ್ಲಿಸಿದರು. ಸಂಪುಟ ಸಭೆಯ ನಿರ್ಣಯವನ್ನು ಆ ಕ್ಷಣವೇ ಅನುಮೋದಿಸಿದ ರಾಜ್ಯಪಾಲರು, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಕೆಸಿಆರ್ ಅವರಲ್ಲಿ ಮನವಿ ಮಾಡಿಕೊಂಡರು.

ಮಧ್ಯಾಹ್ನ 1 ರಿಂದ 2 ಗಂಟೆ ನಡುವೆ ಈ ಬೆಳವಣಿಗೆಗಳು ನಡೆದವು. ಈ ಮೂಲಕ ಒಂದು ವಾರದಿಂದ ಹುಟ್ಟಿಕೊಂಡಿದ್ದ ಅವಧಿ ಪೂರ್ವ ಚುನಾವಣೆಯ ದಟ್ಟ ಅನುಮಾನಗಳಿಗೆ ಕೆಸಿಆರ್‌ ಪೂರ್ಣ ವಿರಾಮ ಹಾಕಿದರು.

ರೇವಂತ್‌ ರೆಡ್ಡಿ ಹೈಡ್ರಾಮ

ನಿರೀಕ್ಷೆಯಂತೆ ಸಂಪುಟ ಸಭೆ, ವಿಧಾನಸಭೆ ವಿಸರ್ಜನೆ, ರಾಜ್ಯಪಾಲರ ಭೇಟಿಯೇನೋ ನಡೆಯಿತು. ಆದರೆ ಅಚ್ಚರಿಯ ರೀತಿಯಲ್ಲಿ ಸಂಪುಟ ಸಭೆಗೂ ಒಂದು ಗಂಟೆ ಮೊದಲು ಕಾಂಗ್ರೆಸ್‌ ನಾಯಕ ರೇವಂತ್‌ ರೆಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬರಲಿರುವ ಬೃಹನ್ನಾಟಕದ ಸೂಚನೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯೊಂದರಲ್ಲಿ ರೇವಂತ್‌ ರೆಡ್ಡಿ
ಪತ್ರಿಕಾಗೋಷ್ಠಿಯೊಂದರಲ್ಲಿ ರೇವಂತ್‌ ರೆಡ್ಡಿ

ವಿಧಾನಸಭೆ ವಿಸರ್ಜನೆಯಾಗಲಿದೆ ಎಂಬ ಮಾಹಿತಿ ಇದ್ದೂ ಸಂಪುಟ ಸಭೆಗೂ ಮುನ್ನ ಕೊಡಂಗಲ್‌ ಶಾಸಕ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು. ರಾಜೀನಾಮೆ ನಂತರ ಮಾಧ್ಯಮಗಳ ಜತೆ ಮಾತನಾಡಿದ ರೆಡ್ಡಿ, ‘ಕೆಸಿಆರ್ ಶೈಲಿಯ ಆಡಳಿತವನ್ನು ಧಿಕ್ಕರಿಸಿ ರಾಜೀನಾಮೆ ನೀಡಿದ್ದೇನೆ’ ಎಂದು ಹೇಳಿದರು. ಕೆಸಿಆರ್ ಸರಕಾರ ‘ಗಿಳಿ ಶಾಸ್ತ್ರ’ದ ಮೇಲೆ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿರುವ ಅವರು, ‘ಕೆಸಿಆರ್‌ ರಾಶಿಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ತೆಲಂಗಾಣದ ಜನರು ಯಾಕೆ ಅನಗತ್ಯ ತೊಂದರೆ ಅನುಭವಿಸಬೇಕು’ ಎಂದು ಪ್ರಶ್ನಿಸಿದರು.

ಗಮನಾರ್ಹ ವಿಷಯವೆಂದರೆ ಇತ್ತೀಚೆಗೆ ಬೆಂಗಳೂರು ಮೂಲದ ‘ಪೊಲಿಟಿಕಲ್‌ ಕೋಶಿಯಂಟ್‌’ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ರೇವಂತ್‌ ರೆಡ್ಡಿ ಸಿಎಂ ಹುದ್ದೆಗೆ ಜನರ ಎರಡನೇ ಅತ್ಯುತ್ತಮ ಆಯ್ಕೆಯಾಗಿ ಮೂಡಿ ಬಂದಿದ್ದರು, ಏಪ್ರಿಲ್‌ನಲ್ಲಿ ನಡೆಸಿದ್ದ ಈ ಸಮೀಕ್ಷೆಯಲ್ಲಿ ಶೇಕಡಾ 47.45 ಜನರು ಕೆ. ಚಂದ್ರಶೇಖರ್‌ ರಾವ್‌ ಮುಖ್ಯಮಂತ್ರಿಯಾಗಬೇಕು ಎಂದಿದ್ದರೆ, ಶೇಕಡಾ 19.16 ಜನರು ರೇವಂತ್‌ ರೆಡ್ಡಿಯನ್ನು ಬೆಂಬಲಿಸಿದ್ದರು. ಹೀಗೊಂದು ಜನಪ್ರಿಯತೆಯನ್ನು ಬೆನ್ನಿಗಿಟ್ಟುಕೊಂಡಿರುವ ರೆಡ್ಡಿ 2017ರ ನವೆಂಬರ್‌ ಒಂದರಂದು ಟಿಡಿಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದರು. ಅವರಿವತ್ತು, “ಕೆಸಿಆರ್‌ ಪ್ರಜಾಪ್ರಭುತ್ವಕ್ಕೆ ಅಗೌರವ ತೋರುತ್ತಿದ್ದಾರೆ. ಕೆಸಿಆರ್ ಇರುವಲ್ಲಿ ನಾನಿರಲು ಸಾಧ್ಯವಿಲ್ಲ,” ಎಂದರು. ಜತೆಗೆ ಮುಂದಿನ ಚುನಾವಣೆಯಲ್ಲಿ ‘ಕೆಸಿಆರ್‌ಗೆ ಜನರು ಪಾಠ ಕಲಿಸಬೇಕು’ ಎಂದು ಕರೆ ನೀಡಿದರು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮಧ್ಯಾಹ್ನ 2.30ಕ್ಕೆ ತುರ್ತು ಪತ್ರಿಕಾಗೋಷ್ಠಿ ಕರೆದಿದ್ದ ಕೆ. ಚಂದ್ರಶೇಖರ್‌ ರಾವ್‌ ತೆಲಂಗಾಣ ಜನರನ್ನು ಅಚ್ಚರಿಯಲ್ಲಿ ಕೆಡವಿದರು. ಮಾಧ್ಯಮಗಳ ಮುಂದೆ ತಮ್ಮ ಚುನಾವಣೆಯ ಧಾವಂತವನ್ನು ತೆರೆದಿಟ್ಟ ಅವರು 119 ರಲ್ಲಿ 105 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರಗಳನ್ನೂ ಇದೇ ಸಂದರ್ಭದಲ್ಲಿ ಘೋಷಿಸಿದರು. ಉಳಿದ ಸ್ಥಾನಗಳಿಗೆ ಸದ್ಯದಲ್ಲೇ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವುದಾಗಿ ಅವರು ಹೇಳಿದರು.

ಅವರು ಬಿಡುಗಡೆ ಮಾಡಿದ ಪಟ್ಟಿ ಪ್ರಕಾರ ಕೆಸಿಆರ್‌ ಗಜ್ವೆಲ್‌ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದರೆ, ಪುತ್ರ ಕೆ.ಟಿ. ರಾಮರಾವ್ ಸಿರ್ಸಿಲ್ಲದಿಂದ ಚುನಾವಣೆ ಎದುರಿಸಲಿದ್ದಾರೆ. ಟಿಆರ್‌ಎಸ್‌ ಪಕ್ಷದ ‘ಟ್ರಬಲ್‌ ಶೂಟರ್‌’ ಎಂದೇ ಖ್ಯಾತವಾಗಿರುವ ಹರೀಶ್‌ ರಾವ್‌ ಸಿದ್ದಿಪೆಟ್‌ನಿಂದ ಹಾಗೂ ರೇವಂತ್‌ ರೆಡ್ಡಿ ವಿರುದ್ಧ ಪಟ್ನಮ್‌ ನರೇಂದ್ರ ರೆಡ್ಡಿಯನ್ನು ಟಿಆರ್‌ಎಸ್‌ ಕಣಕ್ಕಿಳಿಸಲು ನಿರ್ಧರಿಸಿದೆ.

ಎಐಎಂಐಎಂ ಗೆಳೆಯ, ಬಿಜೆಪಿ ಸಂಬಂಧ ದೂರು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಸಿಆರ್‌ ತಮ್ಮ ನಾಲ್ಕುವರೆ ವರ್ಷಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ನೆನಪಿಸಿದರು. ಜತೆಗೆ ನಾಲ್ಕು ರಾಜ್ಯಗಳ ಜತೆ ತೆಲಂಗಾಣ ಚುನಾವಣೆ ನಡೆಯಲಿದ್ದು ನಾವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಮೀಕ್ಷೆ ಪ್ರಕಾರ 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಮ್ಮ ಪಕ್ಷ ಶೇಕಡಾ 50 ಕ್ಕಿಂತ ಹೆಚ್ಚು ಮತಗಳಿಸಲಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೆ. ಚಂದ್ರಶೇಖರ್‌ ರಾವ್‌
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೆ. ಚಂದ್ರಶೇಖರ್‌ ರಾವ್‌
/ನಮಸ್ತೇ ತೆಲಂಗಾಣ

ತನ್ನ ಲೆಕ್ಕಾಚಾರದ ಪ್ರಕಾರ ಅಕ್ಟೋಬರ್‌ನಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿದೆ ಎಂದ ಕೆಸಿಆರ್‌ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಲಿದ್ದೇವೆ ಎಂದು ಹೇಳಿದರು. ಆದರೆ ಎಐಎಂಐಎಂ ನಮ್ಮ ಗೆಳೆಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಇದೇ ವೇಳೆ ಬಿಜೆಪಿ ಜತೆಗಿನ ಮೈತ್ರಿಯನ್ನು ತಳ್ಳಿ ಹಾಕಿದ ಅವರು, ‘ಟಿಆರ್‌ಎಸ್‌ ಜಾತ್ಯಾತೀತ ಪಕ್ಷವಾಗಿದ್ದು ಬಿಜೆಪಿ ಜತೆಗಿನ ಮೈತ್ರಿ ಪ್ರಶ್ನೆ ಉದ್ಭವಿಸುವುದಿಲ್ಲ. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ನಾಳೆ ಅಧಿಕೃತ ಪ್ರಚಾರಕ್ಕೆ ಚಾಲನೆ

ವಿಧಾನಸಭೆ ವಿಸರ್ಜನೆ ಮಾಡಿರುವ ಅವರು ನಾಳೆ ಅಂದರೆ ಸೆಪ್ಟೆಂಬರ್ 7 ರಂದು ಸಿದ್ದಿಪೇಟ್‌ ಜಿಲ್ಲೆಯ ಹುಸ್ನಾಬಾದ್‌ನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು. ಇಲ್ಲಿ ಬೃಹತ್‌ ಸಮಾವೇಶವನ್ನು ಟಿಆರ್‌ಎಸ್‌ ಆಯೋಜಿಸಿದ್ದು ಇದಕ್ಕೆ ಜನಾಶೀರ್ವಾದ ಸಭೆ (ಪ್ರಜಾ ದೀವೆನಾ ಸಭಾ) ಎಂದು ಹೆಸರಿಡಲಾಗಿದೆ. ಇದರಲ್ಲಿ ಸುಮಾರು 65 ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ.

ಮುಂದಿನ ಮೂರು ತಿಂಗಳಲ್ಲಿ ಇಂತಹ 50 ಪ್ರಚಾರ ಸಮಾವೇಶಗಳನ್ನು ಉದ್ದೇಶಿಸಿ ಚಂದ್ರಶೇಖರ್‌ ರಾವ್‌ ಭಾಷಣ ಮಾಡಲಿದ್ದಾರೆ. 2014 ರಲ್ಲಿ ನಡೆದಿದ್ದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಶೇಖರ್‌ ರಾವ್‌ ನೇತೃತ್ವದ ಪಕ್ಷ 119ರಲ್ಲಿ 90 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಯೋಜನೆಯನ್ನು ಚಂದ್ರಶೇಖರ್‌ ರಾವ್‌ ಹಾಕಿಕೊಂಡಿದ್ದಾರೆ.

ಈ ಮೂಲಕ ವಿಧಾನಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ 2019ರ ಲೋಕಸಭೆ ಚುನಾವಣೆಯನ್ನು ಸುಸೂತ್ರವಾಗಿ ಎದುರಿಸುವ ಲೆಕ್ಕಚಾರದಲ್ಲಿ ಕೆಸಿಆರ್‌ ಇದ್ದಾರೆ. ಅವರ ಲೆಕ್ಕಾಚಾರಗಳು ಕೈಗೂಡಲಿವೆಯಾ ಎಂಬುದಕ್ಕೆ ಮುಂದಿನ, ಮೂರು ನಾಲ್ಕು ತಿಂಗಳಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ಬೆಳವಣಿಗೆಗಳು ಉತ್ತರ ನೀಡಲಿವೆ.