samachara
www.samachara.com
ಇದು ಅದಾನಿ ‘ಪವರ್’: ಪ್ರಕೃತಿಗೆ ವಿಷ ಉಣಿಸಿ ಬೂದಿ ಮಳೆ ಬರಿಸಿದ ಉಡುಪಿ ಯುಪಿಸಿಎಲ್‌
COVER STORY

ಇದು ಅದಾನಿ ‘ಪವರ್’: ಪ್ರಕೃತಿಗೆ ವಿಷ ಉಣಿಸಿ ಬೂದಿ ಮಳೆ ಬರಿಸಿದ ಉಡುಪಿ ಯುಪಿಸಿಎಲ್‌

1200 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿರುವಾಗಲೇ ಇಷ್ಟೆಲ್ಲಾ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಿದೆ. ಹೀಗಿದ್ದೂ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಘಟಕ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದೆ. 

ರಾಮಣ್ಣ, ಉಡುಪಿ

ಹಲವು ವರ್ಷಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಂಪಡಿಸಿದ ಎಂಡೋಸಲ್ಫಾನ್‌ ಗಾಯಗಳಿನ್ನೂ ಹಸಿಯಾಗಿವೆ. ಇದರ ನಡುವೆಯೇ ಉಡುಪಿಯಲ್ಲಿ ಬೂದಿ ಮಳೆಯಾಗಿದ್ದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ.

ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಇಡೀ ದೇಶದಲ್ಲೇ ಅತೀ ಹೆಚ್ಚು ಮಳೆ ಉಡುಪಿಯಲ್ಲಿ ಸುರಿದಿತ್ತು. ಕೊಡಗು, ಕೇರಳದ ಇಡುಕ್ಕಿಗಿಂತಲೂ ಹೆಚ್ಚಿನ ಮಳೆ ಸುರಿದಿದ್ದರೂ ಹೇಳಿಕೊಳ್ಳುವಂತಹ ಪ್ರಾಕೃತಿಕ ವಿಕೋಪಗಳು ಉಡುಪಿಯಲ್ಲಿ ನಡೆದಿರಲಿಲ್ಲ. ಆದರೆ ಇಲ್ಲಿ ನಡೆದ ಕೃತಕ ವಿಕೋಪವಿಂದು ಮಳೆಗಾಲದಲ್ಲೂ ಜನರ ಮೈಯಲ್ಲಿ ಬೆವರಿಳಿಯುವಂತೆ ಮಾಡಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಕಳೆದೊಂದು ತಿಂಗಳಿನಿಂದ ಉಡುಪಿಯಲ್ಲಿ ಸುರಿಯುತ್ತಿರುವ ಬೂದಿ ಮಳೆ.

ಇದೇನು ಬೂದಿ ಮಳೆ

ಆಗಸ್ಟ್ ತಿಂಗಳ 3 ಮತ್ತು 4 ರಂದು ಉಡುಪಿ ಆಸುಪಾಸಿನಲ್ಲಿ ಬಂದ ಮಳೆ ಎಂದಿಗಿಂತ ಭಿನ್ನವಾಗಿತ್ತು. ಆ ದಿನದ ಮಳೆ ಹನಿ ಬಿದ್ದಲ್ಲೆಲ್ಲ ಬಿಳಿ ಬಣ್ಣದ ರಂಗೋಲಿಯ ಚಿತ್ತಾರಗಳು ಮೂಡಿದ್ದವು. ಸಹಜವಾಗಿಯೇ ಇದು ಇಲ್ಲಿನ ಜನರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ನಿಲ್ಲಿಸಿದ್ದ ವಾಹನಗಳ ಮೇಲೆ, ಗಿಡ-ಗಂಟಿಗಳ ಹಸಿರೆಲೆಯ ಮೇಲೆಲ್ಲಾ ಬಿಳಿ ಬಣ್ಣದ ಚುಕ್ಕಿಗಳು ಕಾಣಿಸಿಕೊಂಡಿದ್ದವು. ಮಳೆಯಲ್ಲಿ ನೆನೆದವರ ಬಟ್ಟೆಯೂ ಬಿಳಿಯಾಗಿತ್ತು. ಕೈಕಾಲುಗಳಲ್ಲೆಲ್ಲಾ ಜೇಡಿ ಮಣ್ಣಿನ ರೀತಿ ಕೆಸರು ಮೆತ್ತಿಕೊಂಡಿತ್ತು.

ಎಲೆಗಳ ಮೇಲೆಲ್ಲಾ ಬೂದಿ ಮಳೆ
ಎಲೆಗಳ ಮೇಲೆಲ್ಲಾ ಬೂದಿ ಮಳೆ

ಸಾಮಾನ್ಯ ಜನರಿಗೆ ಮಳೆಗಾಲದ ಮಳೆಯಲ್ಲಿ ನಡೆದ ಈ ಘಟನೆ ಅರ್ಥವಾಗಲಿಲ್ಲ. ವಿಚಿತ್ರವಾಗಿದ್ದ ಈ ಬೆಳವಣಿಗೆ ಮಾಧ್ಯಮಗಳಲ್ಲೂ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಬಳಿಕ ಹಲವು ಅನುಮಾನಗಳ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಾದರಿಗಳನ್ನು ಸಂಗ್ರಹಿಸಿ ಸುರತ್ಕಲ್‌ನ ಎನ್ಐಟಿಕೆ ಕಾಲೇಜಿಗೆ ಕಳಿಸಿಕೊಟ್ಟಿದ್ದರು.

ಈ ಮಾದರಿಗಳನ್ನು ಇಟ್ಟುಕೊಂಡು ಕಾಲೇಜಿನ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದವರು ವಿಶ್ಲೇಷಣಾ ವರದಿಯನ್ನು ನೀಡಿದ್ದು ಇದು ಉಡುಪಿಯ ಜನರ ನಿದ್ದೆಗೆಡಿಸಿದೆ. ವರದಿಯಲ್ಲಿ ಆಗಸ್ಟ್‌ 3 ಮತ್ತು 4ರಂದು ನಡೆದಿದ್ದು ಬೂದಿಮಳೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಎನ್ಐಟಿಕೆ ನೀಡಿದ ವರದಿ ಪ್ರಕಾರ ಅವತ್ತು ಸುರಿದ ಮಳೆಯಲ್ಲಿ ಮಳೆ ನೀರಿಗಿಂತ ಬೂದಿಯ ಅಂಶವೇ ಹೆಚ್ಚಾಗಿತ್ತು. ಮಳೆ ನೀರಿನಲ್ಲಿ ಶೇ. 71.43 ಬೂದಿ, ಶೇ. 12.52 ಫಿಕ್ಸೆಡ್ ಕಾರ್ಬನ್, ಶೇ. 10.92 ವಲಟೈಲ್ ರಾಸಾಯನಿಕಗಳು, ಶೇ. 5.09 ತೇವಾಂಶ ಇತ್ತು.

ಎನ್‌ಐಟಿಕೆಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದವರು ನೀಡಿದ ವರದಿ
ಎನ್‌ಐಟಿಕೆಯ ರಾಸಾಯನಿಕ ಎಂಜಿನಿಯರಿಂಗ್ ವಿಭಾಗದವರು ನೀಡಿದ ವರದಿ
/ರಾಜಾರಾಂ ತಲ್ಲೂರು

ಹೀಗೊಂದು ಬೂದಿ ಮಳೆ ಯಾಕಾಯಿತು? ಈ ಬೂದಿ ಎಲ್ಲಿಂದ ಬಂತು ಎಂದು ಉಡುಪಿಯ ಜನರು ಹುಡುಕುತ್ತಾ ಹೊರಟರೆ ‘ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಯುಪಿಸಿಎಲ್)’ ಘಟಕದ ಬಾಗಿಲಿಗೆ ಹೋಗಿ ನಿಲ್ಲುತ್ತಾರೆ.

ಅದಾನಿಯ ಯುಪಿಸಿಎಲ್ !

ಉಡುಪಿಯ ಎಲ್ಲೂರು ಸಮೀಪ ಈ ಕಲ್ಲಿದ್ದಲು ಆಧಾರಿತ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರವಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅಕ್ಕ ಪಕ್ಕದಲ್ಲಿ ಕಾಣಿಸುಕೊಳ್ಳುವ ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಪವರ್‌ ಲಿ. ಒಡೆತನಕ್ಕೆ ಸೇರಿದೆ. ವಿಶ್ವದ ಸೂಕ್ಷ ಜೀವವೈವಿಧ್ಯ ವಲಯಗಳಲ್ಲೊಂದಾಗಿರುವ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಇಂತಹದ್ದೊಂದು ಉಷ್ಣ ವಿದ್ಯುತ್‌ ಸ್ಥಾವರ 2007ರಲ್ಲಿ ಸ್ಥಾಪನೆಯಾಗಿತ್ತು. ಇದರ ಸ್ಥಾಪನೆ ಹಿಂದೆಯೂ ಒಂದು ನಟೋರಿಯಸ್‌ ಕಥೆಯೇ ಇದೆ.

ಮೊದಲಿಗೆ ಸ್ಥಾವರ ಸ್ಥಾಪಿಸಿದ್ದು ‘ನಾಗಾರ್ಜುನ ಕಂಪನಿ’. ಇದರ ಸ್ಥಾಪನೆಗಾಗಿ ರಾಜ್ಯ ಸರ್ಕಾರದ ಕೆಐಎಡಿಬಿ ಮೂಲಕ ಎಲ್ಲೂರು, ತೆಂಕ ಎರ್ಮಾಳು, ಬಡ ಎರ್ಮಾಳು, ಸಾಂತೂರು ಗ್ರಾಮಗಳ ಫಲವತ್ತಾದ ಕೃಷಿ ಭೂಮಿ, ಹಸಿರು ಕಾಡು ಮತ್ತು 2,000ಕ್ಕೂ ಅಧಿಕ ಜನರು ವಾಸವಾಗಿದ್ದ 1,350 ಎಕರೆ ಭೂಮಿಯನ್ನು ಕಂಪನಿ ಬಲವಂತವಾಗಿ ವಶಪಡಿಸಿಕೊಂಡಿತ್ತು. ಆರಂಭದಲ್ಲಿ ‘ನಂದಿಕೂರು ಜನಜಾಗೃತಿ ಸಮಿತಿ’ ನೇತೃತ್ವದಲ್ಲಿ ಇದರ ವಿರುದ್ಧ ಭಾರೀ ಹೋರಾಟವೇ ನಡೆಯಿತು. ಆದರೆ ಆಗ ಆಡಳಿತದಲ್ಲಿದ್ದ ರಾಜ್ಯ ಬಿಜೆಪಿ ಸರ್ಕಾರ ಹೋರಾಟದ ನೇತೃತ್ವ ವಹಿಸಿದವರ ಮೇಲೆ ಪೊಲೀಸ್‌ ಕೇಸುಗಳನ್ನು ಜಡಿಸಿ ಇಡೀ ಪ್ರತಿರೋಧದ ದಿಕ್ಕನ್ನೇ ತಪ್ಪಿಸಿತು.

ಹೀಗೆ ಖುದ್ದು ಸರ್ಕಾರವೇ ಈ ಸ್ಥಾವರದ ಪರವಾಗಿದ್ದರಿಂದ ಪ್ರತಿಭಟನೆಗಳ ನಡುವೆಯೂ ಸ್ಥಾವರ ಸ್ಥಾಪನೆಯಾಯಿತು. ಮುಂದೆ 2012ರಲ್ಲಿ ಲ್ಯಾಂಕೋ ಕಂಪನಿ ಸಹಭಾಗಿತ್ವದಲ್ಲಿ ‘ಉಡುಪಿ ಪವರ್ ಕಾರ್ಪೇರೇಶನ್ ಲಿಮಿಟೆಡ್ (ಯುಪಿಸಿಎಲ್)’ ಹೆಸರಿನಲ್ಲಿ ಈ ಸ್ಥಾವರ ವಿದ್ಯುತ್‌ ಉತ್ಪಾದನೆ ಆರಂಭಿಸಿತು. 1,200 ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ ಈ ಸ್ಥಾವರದ ಮೇಲೆ ಈಗ್ಗೆ ನಾಲ್ಕು ವರ್ಷದ ಕೆಳಗೆ ಕೈ ಇಟ್ಟವರೇ ಗೌತಮ್‌ ಅದಾನಿ.

2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ 6,300 ಕೋಟಿ ರೂಪಾಯಿಗಳ ಬೃಹತ್‌ ಮೊತ್ತಕ್ಕೆ ಯುಪಿಸಿಎಲ್‌ ಖರೀದಿಸಿತ್ತು ಅದಾನಿ ಪವರ್‌ ಲಿ. ಮೊದಲ ಹಂತದಲ್ಲಿ 1200 ಮೆ.ವ್ಯಾ ವಿದ್ಯುತ್ ಉತ್ಪಾದಿಸಲು ಪ್ರಾರಂಭಿಸಿದಾಗಲೇ ಇಲ್ಲಿ ಸಮಸ್ಯೆಗಳ ಸರಮಾಲೆ ಪ್ರರಾಂಭವಾಗಿತ್ತು. ಯಾವಾಗ ಅದಾನಿ ಪ್ರವೇಶವಾಯಿತೋ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿತು.

ಎಲ್ಲೆಲ್ಲೂ ಮಾಲಿನ್ಯದ ರಾಡಿ:

ಸ್ಥಾವರದಿಂದ ಹೊರಬರುವ ವಿಷಕಾರಿ ಹಾರು ಬೂದಿಯಿಂದಾಗಿ ಸುತ್ತ ಮುತ್ತಲಿನ 4 ಗ್ರಾಮಗಳ ಜನರು ತೀವ್ರ ಆರೋಗ್ಯ ಸಮಸ್ಯೆಗೆ ಗುರಿಯಾಗಲಾರಂಭಿಸಿದರು. ಮುಂದೆ ಉತ್ಪಾದನೆ ಹೆಚ್ಚಾದಂತೆ, ಹಾರು ಬೂದಿಯ ಪ್ರಮಾಣವೂ ಹೆಚ್ಚಾಗಿ ಈ ಸಮಸ್ಯೆ ಹತ್ತಾರು ಗ್ರಾಮಗಳಿಗೆ ವಿಸ್ತರಿಸಿಕೊಂಡಿತು. ಆರೋಗ್ಯ ಸಮಸ್ಯೆಯ ಜತೆಗೆ ಕೃಷಿ ಮೇಲೆಯೂ ಇದು ಪರಿಣಾಮ ಬೀರಿತು.

ಕೆರೆಯ ನೀರಿನಲ್ಲಿ ರಾಡಿಯೆಬ್ಬಿಸಿದ ಹಾರು ಬೂದಿ
ಕೆರೆಯ ನೀರಿನಲ್ಲಿ ರಾಡಿಯೆಬ್ಬಿಸಿದ ಹಾರು ಬೂದಿ

ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಲ್ಲಿಗೆ, ಬಾಳೆ, ತೆಂಗು, ಅಡಿಕೆ ಬೆಳೆಯುತ್ತಿದ್ದ ರೈತರು ಫಲವತ್ತತೆಯ ನಾಶ, ಹಾರುಬೂದಿಯ ಸಮಸ್ಯೆಯಿಂದ ನಷ್ಟಕ್ಕೆ ಗುರಿಯಾಗಬೇಕಾಯಿತು. ಈ ಸಂದರ್ಭದಲ್ಲೇ ಪಶ್ಚಿಮ ಘಟ್ಟದ ಜೀವವೈವಿಧ್ಯವೇ ಅಸಮತೋಲನಕ್ಕೀಡಾಗುವ ಸ್ಪಷ್ಟ ಸೂಚನೆ ಸಿಕ್ಕಿತ್ತು.

ಬರಬರುತ್ತಾ ಈ ಹಾರು ಬೂದಿಯ ಪರಿಣಾಮ ಸ್ಥಳೀಯ ಜನ ಶುದ್ಧ ಕುಡಿಯುವ ನೀರಿನ ಹಕ್ಕನ್ನೂ ಕಳೆದುಕೊಂಡಿದ್ದಾರೆ. ಪಡುಬಿದ್ರಿ ಬಳಿ ಹೆಚ್ಚು ಕಡಿಮೆ ಒಂಭತ್ತು ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ಕಲ್ಲಿದ್ದಲು ವಿದ್ಯುತ್ ಸ್ಥಾವರದ ಸಮಸ್ಯೆಗಳು ಕಣ್ಣಿಗೆ ರಾಚುತ್ತವೆ. ಸುತ್ತಮುತ್ತಲ ಗ್ರಾಮದ ಜನರಲ್ಲಿ ಚರ್ಮರೋಗ, ಅಸ್ತಮಾ ಮುಂತಾದ ಅಲರ್ಜಿ ರೋಗಗಳು ಕಾಣಿಸಿಳ್ಳುತ್ತಿವೆ. ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿ ಹಾಳಾಗಿದೆ.

ಇವೆಲ್ಲದರ ವಿರುದ್ಧ ಆಗಾಗ ಜನರು ಪ್ರತಿಭಟನೆಗೂ ಇಳಿದರು. ಆದರ ಆಸಾಮಿ ಕಂಪನಿ ಬಾಧಿತ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನೆಪದಲ್ಲಿ ಒಂದಷ್ಟು ಹಣ ಮೀಸಲಿಟ್ಟು ಜನರ ಕಣ್ಣಿಗೆ ಮಣ್ಣೆರೆಚಿತು. ಸಿಎಸ್‌ಆರ್‌ ಹಣದಲ್ಲಿ ಸ್ಥಳೀಯ ಮಕ್ಕಳಿಗೆ ಒಂದಷ್ಟು ಪುಸ್ತಕಗಳನ್ನು ಹಂಚಿ, ಸಸಿಗಳನ್ನು ವಿತರಿಸಿ ತಾನು ಒಳ್ಳೆಯವನು ಎಂಬ ಪೋಷಾಕು ತೊಟ್ಟಿತು. ಜತೆಗೆ ಕಂಪನಿ ವಿರುದ್ಧವಾಗಿ ಹೋರಾಟ ಮಾಡುತ್ತಿದ್ದ ಸಂಘಟನೆಗಳನ್ನೂ ‘ಮ್ಯಾನೇಜ್‌’ ಮಾಡಲಾಯಿತು.

ಕೇಂದ್ರ ಪರಿಸರ, ಅರಣ್ಯ ಮಂತ್ರಾಲಯದಿಂದ ಗ್ರೀನ್‌ ಸಿಗ್ನಲ್‌ !

ಇಷ್ಟೆಲ್ಲಾ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದರೂ ಘಟಕಕ್ಕೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಗ್ರೀನ್‌ ಸಿಗ್ನಲ್‌ ಸಿಗುತ್ತಲೇ ಬಂದಿದೆ. ಅದರಲ್ಲೂ ಅದಾನಿ ಪ್ರವೇಶದ ನಂತರ ಉಷ್ಣ ವಿದ್ಯುತ್‌ ಉತ್ಪಾದನಾ ಘಟಕದ ಖದರ್ರೇ ಬದಲಾಗಿ ಹೋಗಿದೆ. 1200 ಮೆ.ವ್ಯಾ ಉತ್ಪಾದನೆಯಾಗುತ್ತಿರುವಾಗಲೇ ಇಷ್ಟೆಲ್ಲಾ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಿದೆ. ಹೀಗಿದ್ದೂ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಘಟಕ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಿದೆ. ಪರಿಣಾಮ ಇವತ್ತಿಲ್ಲಿ 2,800 ಮೆ.ವ್ಯಾಟ್ ವಿದ್ಯುತ್‌ ಉತ್ಪಾದನೆಯ ಗುರಿಯೊಂದಿಗೆ ಬರೋಬ್ಬರಿ ಹನ್ನೆರಡು ಸಾವಿರ ಕೋಟಿ ಬಂಡವಾಳ ಹೂಡಿ ಘಟಕ ವಿಸ್ತರಣೆ ನಡೆಯುತ್ತಿದೆ.

ಹಾರುತ್ತಿರುವ ಹಾರು ಬೂದಿ, ಪರಿಸ್ಥಿತಿಯ ಭೀಕರತೆಗೆ ಹಿಡಿದ ಕೈಗನ್ನಡಿ
ಹಾರುತ್ತಿರುವ ಹಾರು ಬೂದಿ, ಪರಿಸ್ಥಿತಿಯ ಭೀಕರತೆಗೆ ಹಿಡಿದ ಕೈಗನ್ನಡಿ

“ಈಗಷ್ಟೇ ಕೊಡಗು ಹಾಗೂ ಕೇರಳದಲ್ಲಿ ಮಾನವ ನಿರ್ಮಿತ ವಿಕೋಪಗಳನ್ನು ಕಣ್ಣಾರೆ ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಪರಿಸರ ನಾಶ ಚಟುವಟಿಕೆಗಳ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ. ಉಡುಪಿಯಲ್ಲಿ ಬೂದಿಮಳೆ ಪ್ರಕರಣದ ಕುರಿತು ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು,” ಎನ್ನುತ್ತಾರೆ ಉಡುಪಿಯ ಮನೋವೈದ್ಯರಾದ ಡಾ.ಪಿ.ವಿ. ಭಂಡಾರಿ.

ಇನ್ನು ಸದ್ಯದ ವಿಸ್ತರಣಾ ಯೋಜನೆಯಡಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ 1885.55 ಕೋಟಿ ರೂಪಾಯಿ ಮೀಸಲಿಡಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಆದರೆ ಕಂಪನಿ ಆ ರೀತಿ ನಡೆದುಕೊಂಡ ಇತಿಹಾಸ ಕಣ್ಣ ಮುಂದಿಲ್ಲ. ಈ ಹಿನ್ನೆಲೆಯಲ್ಲಿ “ಹಾರು ಬೂದಿ ಬಗ್ಗೆ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಗಳು ತುರ್ತಾಗಿ ಕ್ರಮ ಕೈಗೊಂಡು ನಾಗರಿಕರಿಗೆ ರಕ್ಷಣೆಯ ಅಭಯ ನೀಡಬೇಕು,” ಎಂದು ಸಾಮಾಜಿಕ ಕಾರ್ಯಕರ್ತ ರಾಜಾರಾಂ ತಲ್ಲೂರು ಒತ್ತಾಯಿಸಿದ್ದಾರೆ. ಒಂದು ವೇಳೆ ಇದಕ್ಕೆ ಅಧಿಕಾರ ವರ್ಗ ಸ್ಪಂದಿಸದಿದ್ದಲ್ಲಿ ಈ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದ್ದಾರೆ.

ಸದ್ಯಕ್ಕೆ ಉಡುಪಿಯಲ್ಲಿ ಟ್ರೇಲರ್‌ ಸ್ವರೂಪದಲ್ಲಿ ಬೂದಿ ಮಳೆ ಬಿದ್ದಿದೆ. ದೂರದ ಜಪಾನ್‌, ಚೀನಾದಲ್ಲಿ ಸುರಿದ ಆಮ್ಲ ಮಳೆಗಳ ರೀತಿ ಇದು ಗಂಭೀರ ಸ್ವರೂಪಕ್ಕೆ ತಿರುಗುವ ಮುನ್ನ ಇಲ್ಲಿನ ಅಧಿಕಾರಿ ವರ್ಗ ಮತ್ತು ಜನರು ಈ ಬೂದಿ ಮಳೆಗೆ ಬ್ರೇಕ್‌ ಹಾಕಬೇಕಿದೆ.

Also read: ಉಡುಪಿಯಲ್ಲಿ ಬೂದಿ ಮಳೆ: ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೆ 7 ಪ್ರಶ್ನೆಗಳು