samachara
www.samachara.com
ತಮಿಳುನಾಡು ಬಹುಕೋಟಿ ಬ್ಯಾಂಕ್‌ ಹಗರಣ: 6 ತಿಂಗಳಲ್ಲಿ 15 ಜನರ ಅನುಮಾನಾಸ್ಪದ ಸಾವು, ಮತ್ತೋರ್ವ ನಾಪತ್ತೆ!
COVER STORY

ತಮಿಳುನಾಡು ಬಹುಕೋಟಿ ಬ್ಯಾಂಕ್‌ ಹಗರಣ: 6 ತಿಂಗಳಲ್ಲಿ 15 ಜನರ ಅನುಮಾನಾಸ್ಪದ ಸಾವು, ಮತ್ತೋರ್ವ ನಾಪತ್ತೆ!

ಹಗರಣದ ಸುತ್ತ ಕಳೆದ 6 ತಿಂಗಳಲ್ಲಿ ಸಾವಿಗೀಡಾದವರ ಸಂಖ್ಯೆ 15ಕ್ಕೆ ಬಂದು ನಿಂತಿದೆ. ಈ 15 ಜನರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಸಾವಿಗೀಡಾಗಿದ್ದಾರೆ.

ಇದು ತಮಿಳುನಾಡಿನಲ್ಲಿ ನಡೆದ 60 ಕೋಟಿ ರೂಪಾಯಿ ಮೊತ್ತದ ಬೃಹತ್‌ ಸಾಲದ ಹಗರಣದ ಕಥೆ. ಭಾರತದ ಪಾಲಿಗೆ ಸಾಲದ ಹಗರಣಗಳು ಹೊಸತಲ್ಲವಾದರೂ ಈ ಹಗರಣದಲ್ಲಿ ಪಾತ್ರಧಾರಿಗಳಾಗಿದ್ದ 15 ಜನರ ಕಳೆದ 6 ತಿಂಗಳಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ. ಹೀಗೊಂದು ನಟೋರಿಯಸ್‌ ಸಾಲದ ಹಗರಣ ತಮಿಳುನಾಡನ್ನು ಬೆಚ್ಚಿ ಬೀಳಿಸಿದೆ.

ವಿರುಧುನಗರ್‌ ಮತ್ತು ಥೇಣಿ ಜಿಲ್ಲೆಯಲ್ಲಿ ಸರಕಾರಿ ಸ್ವಾಮ್ಯದ ‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)‘ 169 ಜನರಿಗೆ 25 ರಿಂದ 40 ಲಕ್ಷದವರೆಗೆ ಸಾಲ ನೀಡಿತ್ತು. ಹೀಗೆ ಸಾಲ ಪಡೆದವರ ದಾಖಲೆಗಳಲ್ಲಿ ‘ರೈತ’ರಾಗಿದ್ದರು. ಅಸಲಿಗೆ ಇವರೆಲ್ಲಾ ಒಎಂಎಸ್‌ ವೇಲುಮುರುಗನ್‌ ಮತ್ತು ಆತನ ಸಂಬಂಧಿ ಆರ್‌. ಶೆನ್‌ಬಗರನ್‌ ಒಡೆತನದ ಬೇಳೆ ಮಿಲ್‌ ಮತ್ತು ಜಲ ಕಾಮಗಾರಿ ಹಾಗೂ ಸಂಗ್ರಹಾಗಾರದ ನೌಕರರಾಗಿದ್ದರು. ಇವರಿಗೆಲ್ಲಾ ಪಿಂಚಣಿ ನೀಡುವುದಾಗಿ ದಾಖಲೆ ಪತ್ರಗಳಿಗೆ ಸಹಿ ಹಾಕಿಸಿಕೊಂಡ ಆರೋಪಿಗಳು ದಿನಗೂಲಿ ಕಾರ್ಮಿಕರ ಹೆಸರಿನಲ್ಲಿ ಸಾಲ ತೆಗೆದು ಅವರ ಖಾತೆಗೆ ಹಣ ಜಮೆ ಮಾಡಿದ್ದರು. ಅಲ್ಲಿಂದ ಅದನ್ನು ಡ್ರಾ ಮಾಡಲಾಗುತ್ತಿತ್ತು.

ದಾಖಲೆಗಳಲ್ಲಿ ಸಾಲ ಪಡೆದಿದ್ದ ಕಾರ್ಮಿಕರಿಗೆ ಎಸ್‌ಬಿಐನಿಂದ ಸಾಲ ಮರುಪಾವತಿ ನೋಟಿಸ್‌ ಜಾರಿಯಾದಾಗ ಈ ಹಗರಣ ಬೆಳಕಿಗೆ ಬಂದಿತ್ತು. ಇವರಲ್ಲಿ ನಾಗಮುತ್ತು ಎನ್ನುವಾತನಿಗೆ 96 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡುವಂತೆ ನೋಟಿಸ್‌ ಬಂದಿತ್ತು. ಸಣ್ಣ ನೀರಿನ ವ್ಯವಹಾರ ಮಾಡುವ ಇವರು ನೋಟಿಸ್‌ ಬಂದ ದಿನದಿಂದ ನಾಪತ್ತೆಯಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ಅವರು ನಾಪತ್ತೆಯಾಗಿದ್ದು, ಅವರ ಕುಟುಂಬಸ್ಥರು ಬೀದಿಗೆ ಬಿದ್ದಿದ್ದಾರೆ. ಕಾಲೇಜು ಫೀಜು ಕಟ್ಟಲಾಗದೆ ಪತ್ನಿ ಮಗೇಶ್ವರಿ ಮಕ್ಕಳಿಬ್ಬರನ್ನು ಕಾಲೇಜು ಬಿಡಿಸಿದ್ದಾರೆ.

ಇವರ ಕಥೆ ಹೀಗಾದರೆ ಇನ್ನುಳಿದವರು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಕಳೆದ 6 ತಿಂಗಳಲ್ಲಿ ಈ ಬೆಳವಣಿಗೆಗಳು ನಡೆದಿದ್ದು ಹೀಗೆ ಸಾವಿಗೀಡಾದವರ ಸಂಖ್ಯೆ 15ಕ್ಕೆ ಬಂದು ನಿಂತಿದೆ. ಈ 15 ಜನರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ರಾಜಗೋಪಾಲ್‌ ಎಂಬಾತ ತನ್ನ ಮನೆ ಪಕ್ಕದ ಬೀದಿ ಬದಿಯಲ್ಲಿ ಅನಾಥ ಶವವಾಗಿ ಪತ್ತೆಯಾಗಿದ್ದರೆ, ಪಾಂಡಿ ಮತ್ತು ಮಹಾಲಿಂಗಂ ಎನ್ನುವವರು ತಮ್ಮ ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಈ ರೀತಿ ಒಬ್ಬೊಬ್ಬರ ಸಾವಿನ ಕಾರಣಗಳೂ ಚಿತ್ರ ವಿಚಿತ್ರವಾಗಿವೆ.

ಈ ಎಲ್ಲಾ ಸಾವಿನ ಹಿಂದೆ ದೊಡ್ಡ ಹಗರಣವೇ ಇದ್ದರೂ ಪೊಲೀಸರು ಮಾತ್ರ ‘ಅನುಮಾನಸ್ಪದ ಸಾವು’ ಎಂದು ಎಲ್ಲದಕ್ಕೂ ಷರಾ ಎಳೆದಿದ್ದಾರೆ. ಹೀಗಾಗಿ ಇಡೀ ಹಗರಣಗಳ ರೂವಾರಿಗಳಾದ ವೇಲುಮುರುಗನ್‌ ಮತ್ತು ಶೆನ್‌ಬಗರನ್‌ ಹೊರಗಡೆ ಆರಾಮವಾಗಿ ತಿರುಗಾಡಿಕೊಂಡಿದ್ದರು. ನೂರಾರು ಕೋಟಿ ಸಾಲದ ಹಗರಣದಲ್ಲಿ ಪಾಲ್ಗೊಂಡಿದ್ದ ಇವರುಗಳು ಅದೇ ಹಣವನ್ನು ಬಳಸಿಕೊಂಡು ಕಾನೂನನ್ನು ತಮಗೆ ಇಷ್ಟ ಬಂದಂತೆ ಕುಣಿಸುತ್ತಿದ್ದರು.

ಆದರೆ ಅವರ ವಿರುದ್ಧ ವೆಯಿಲ್‌ ಮುತ್ತು ಅಲಗುರಾಜ ಎನ್ನುವ ಕಾರ್ಮಿಕ ದೂರು ನೀಡಿದ್ದರಿಂದ ಇಬ್ಬರೂ ಈಗ ಜೈಲು ಕಂಬಿ ಎಣಿಸುತ್ತಿದ್ದಾರೆ. ವಿಚಿತ್ರವೆಂದರೆ ಈ ಪ್ರಕರಣ ದಾಖಲಾಗುತ್ತಿದ್ದಂತೆ ಇವರ ವಿರುದ್ಧ ಸುಮಾರು 400 ಜನರು ಪ್ರಕರಣ ದಾಖಲಿಸಿದ್ದಾರೆ. ‘ತಮ್ಮ ಹೆಸರಿನಲ್ಲಿ ಸಾಲ ತೆಗೆದು ವಂಚನೆ ಎಸಗಿದ್ದಾರೆ’ ಎಂದು ಇವರುಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಪಾಲುದಾರನಾಗಿರುವ ಮತ್ತೋರ್ವ ಆರೋಪಿ ಸನ್ನಾಸಿ ಎಂಬಾತನನ್ನು ಸೋಮವಾರ ಬಂಧಿಸಲಾಗಿದೆ.

ಇಡೀ ಹಗರಣದ ಆಳ ಅಗಲಗಳನ್ನು ನೋಡುತ್ತಿದ್ದರೆ ಆರಂಭಿಕ ಲೆಕ್ಕಾಚಾರಗಳನ್ನು ಮೀರಿ ದೊಡ್ಡದೊಂದು ಸ್ಕ್ಯಾಮ್ ನಡೆದಿರುವ ಸಾಧ್ಯತೆಗಳು ಕಾಣಿಸುತ್ತಿವೆ. ಹೀಗಾಗಿ ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕು ಎಂದು ವಿರುಧುನಗರ ಜಿಲ್ಲಾಧಿಕಾರಿಗೆ ಸಂತ್ರಸ್ತರ ಸಂಬಂಧಿ ಗನೇಶನ್‌ ಎಂಬವರು ಕಳೆದ ಮಾರ್ಚ್‌ನಲ್ಲೇ ಪತ್ರ ಬರೆದಿದ್ದರು. ಹೀಗಿದ್ದೂ ಜಿಲ್ಲಾಧಿಕಾರಿ ಕಡೆಯಿಂದ ಯಾವುದೇ ಕ್ರಮಗಳಾಗಿಲ್ಲ.

ಮೇಲ್ನೋಟಕ್ಕೆ ಇದು ಇಬ್ಬರು ಕಿಂಗ್‌ಪಿನ್‌ಗಳ ಚಮತ್ಕಾರದಂತೆ ತೋರುತ್ತಿದ್ದರೂ ಇದರಲ್ಲಿ ಬ್ಯಾಂಕ್‌ನ ಉನ್ನತ ಅಧಿಕಾರಿಗಳು, ಸರಕಾರಿ ಅಧಿಕಾರಿ ವರ್ಗ ಪಾಲುದಾರರಾಗಿರುವ ಅನುಮಾನಗಳಿವೆ. ಹೀಗಿದ್ದೂ ತಮಿಳುನಾಡು ಸರಕಾರ ಕಣ್ಮುಚ್ಚಿ ಕುಳಿತಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದರಾಚೆಗೆ ಮುಗ್ಧ ಜನರನ್ನು ದುಷ್ಟಕೂಟವೊಂದು ಹೇಗೆ ಬಲಿ ಹಾಕಬಹುದು ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿ ಕಣ್ಣ ಮುಂದೆ ನಿಂತಿದೆ.

ಮಾಹಿತಿ ಕೃಪೆ: ಟೈಮ್ಸ್‌ ಆಫ್‌ ಇಂಡಿಯಾ