samachara
www.samachara.com
‘ಪರ್ಫೆಕ್ಟ್ ಮ್ಯಾನ್’: ಯಾರಿವರು ಸಿಜೆಐ ಹುದ್ದೆಗೇರಿದ ನ್ಯಾ. ಗೊಗೋಯಿ?
COVER STORY

‘ಪರ್ಫೆಕ್ಟ್ ಮ್ಯಾನ್’: ಯಾರಿವರು ಸಿಜೆಐ ಹುದ್ದೆಗೇರಿದ ನ್ಯಾ. ಗೊಗೋಯಿ?

“ನ್ಯಾ. ಗೊಗೋಯಿ ಸರಕಾರದ ಅಭಿಪ್ರಾಯದ ಬಗ್ಗೆ ಎಂದೂ ತಲೆ ಕೆಡಿಸಿಕೊಂಡವರಲ್ಲ. ಅವರು ಸ್ವತಂತ್ರರು ಮತ್ತು ನಮಗೆ ಅವರಂಥ ಸ್ವತಂತ್ರ, ಬುದ್ಧಿವಂತ ಮತ್ತು ಧೈರ್ಯಶಾಲಿಗಳು ಬೇಕಾಗಿದ್ದಾರೆ”- ಸೋಲಿ ಸೊರಾಬ್ಜಿ. 

ದೇಶದ ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಲು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಸಿದ್ಧವಾಗಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ತಮ್ಮ ಜಾಗಕ್ಕೆ ನ್ಯಾ. ಗೊಗೋಯಿ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಈ ಶಿಫಾರಸ್ಸಿಗೆ ಗುರುವಾರ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದು ಅಕ್ಟೋಬರ್‌ 3ರಂದು ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಮೂಲಕ ಈಶಾನ್ಯ ಭಾರತದ ಮೊದಲ ವ್ಯಕ್ತಿಯಾಗಿ ನ್ಯಾ. ರಂಜನ್‌ ಗೊಗೋಯಿ ಸಿಜೆಐ ಹುದ್ದೆಗೆ ಏರಲಿದ್ದಾರೆ. 46ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ಗೊಗೋಯಿ 2019ರ ನವೆಂಬರ್‌ 17ರವರಗೆ ಹುದ್ದೆಯನ್ನು ನಿರ್ವಹಿಸಲಿದ್ದಾರೆ.

18 ನವೆಂಬರ್‌ 1954ರಲ್ಲಿ ಅಸ್ಸಾಂನ ದಿಬ್ರುಗರ್‌ನಲ್ಲಿ ಜನಿಸಿದವರು ನ್ಯಾ. ಗೊಗೋಯಿ. ಗುವಾಹಟಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ ನಂತರ ದೆಹಲಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ಅವರ ತಂದೆ ಕೇಶಬ್‌ ಗೊಗೋಯಿ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ರಾಜಕೀಯ ಕುಟುಂಬದಿಂದ ಬಂದ ನ್ಯಾ. ಗೊಗೋಯಿ ಆರಿಸಿಕೊಂಡಿದ್ದು ಮಾತ್ರ ವಕೀಲಿ ವೃತ್ತಿಯನ್ನು.

1978ರಲ್ಲಿ ಗುವಾಹಟಿ ಹೈಕೋರ್ಟ್‌ನಲ್ಲಿ ವೃತ್ತಿಯ ಅಭ್ಯಾಸ ಆರಂಭಿಸಿದರು ನ್ಯಾ. ಗೊಗೋಯಿ. 2001ರಲ್ಲಿ ಅವರು ಇದೇ ಹೈಕೋರ್ಟ್‌ಗೆ ಖಾಯಂ ನ್ಯಾಯಾಮೂರ್ತಿಗಳಾಗಿ ನೇಮಕವಾದರು. 2010ರಲ್ಲಿ ಪಂಜಾಬ್‌-ಹರ್ಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗವಾದ ಅವರು ಮುಂದೆ ನೇರ ಏರಿದ್ದು ದೆಹಲಿ ವಿಮಾನವನ್ನು. 23 ಏಪ್ರಿಲ್‌ 2012ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪದನ್ನೋತಿ ಹೊಂದಿದ ನ್ಯಾ. ಗೊಗೋಯಿ ಸರ್ವೋಚ್ಛ ನ್ಯಾಯಾಲಯದ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂಥ ಹಲವು ನಡವಳಿಕೆಗಳಿಗೆ ಸಾಕ್ಷಿಯಾದರು.

2016ರಲ್ಲಿ ಇವರು ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿಗೊಳಿಸಿ ಎಲ್ಲರ ಹುಬ್ಬೇರಿಸಿದ್ದರು. ಸೌಮ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಅತ್ಯಾಚಾರ ಮಾತ್ರವೆಸಗಿದ್ದಾನೆ ಕೊಲೆ ಮಾಡಿಲ್ಲ ಎಂದು ತೀರ್ಪು ನೀಡಿತ್ತು ನ್ಯಾ. ಗೊಗೋಯಿ ನೇತೃತ್ವದ ಪೀಠ. ಈ ಹಿನ್ನೆಲೆಯಲ್ಲಿ ಅಪರಾಧಿ ಗೋವಿಂದಸ್ವಾಮಿಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು 7 ವರ್ಷಗಳಿಗೆ ಇಳಿಕೆ ಮಾಡಿದ್ದರು. ಈ ಆದೇಶವನ್ನು ಖಟ್ಜು ಫೇಸ್‌ಬುಕ್‌ನಲ್ಲಿ ಟೀಕಿಸಿದ್ದರು. ಇದರ ವಿರುದ್ಧ ಅವರಿಗೆ ನೋಟಿಸ್‌ ನೀಡಲಾಗಿತ್ತು. ನೋಟಿಸ್ ಪಡೆದುಕೊಂಡ ಖಟ್ಜು ಕೋರ್ಟ್‌ಗೆ ಹಾಜರಾಗಿ ಕ್ಷಮೆ ಕೇಳುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತ್ತು.

ಇವತ್ತು ಅಸ್ಸಾಂನಲ್ಲಿ ಚರ್ಚೆಗೆ ಗ್ರಾಸವಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಿಂದೆ ಇರುವವರೂ ಇದೇ ನ್ಯಾ. ಗೊಗೋಯಿ. ಇದೀಗ ಎನ್‌ಆರ್‌ಸಿ ಪಟ್ಟಿ ಸಿದ್ಧಪಡಿಸಲಾಗಿದ್ದು, ಕರಡು ಪಟ್ಟಿಯಿಂದ 40 ಲಕ್ಷ ಜನರು ಹೊರಗುಳಿದಿದ್ದಾರೆ. ಈ ಸಂಬಂಧ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದಲ್ಲದೆ ಸರಕಾರಿ ಜಾಹಿರಾತುಗಳಲ್ಲಿ ರಾಜಕಾರಣಿಗಳ ಫೋಟೋ ಹಾಕುವಂತಿಲ್ಲ ಎಂಬ ಆದೇಶವನ್ನು ನೀಡಿದ ಪೀಠದಲ್ಲಿಯೂ ನ್ಯಾ. ಗೊಗೋಯಿ ಸದಸ್ಯರಾಗಿದ್ದರು. ಹೀಗೆ ಹತ್ತು ಹಲವಾರು ಐತಿಹಾಸಿಕ ತೀರ್ಪುಗಳನ್ನು ನೀಡಿದ ಅವರು ಕಳೆದ ಜನವರಿಯಲ್ಲಿ ಇತಿಹಾಸನ್ನೇ ಸೃಷ್ಟಿಸಿದ ನಾಲ್ವರು ನ್ಯಾಯಾಧೀಶರ ಪೈಕಿ ಒಬ್ಬರಾಗಿದ್ದರು.

ಸುಪ್ರೀಂ ಕೋರ್ಟ್‌ನ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ನ್ಯಾ. ರಂಜನ್‌ ಗೊಗೋಯಿ. 
ಸುಪ್ರೀಂ ಕೋರ್ಟ್‌ನ ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ನ್ಯಾ. ರಂಜನ್‌ ಗೊಗೋಯಿ. 
/ದಿ ವೈರ್

ಸುಪ್ರೀಂ ಕೋರ್ಟ್‌ನ ನಾಲ್ಕು ಜನ ಹಿರಿಯ ನ್ಯಾಯಮೂರ್ತಿಗಳ ಜತೆ ಜನವರಿ 11ರ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗುವ ಮೂಲಕ ಅವರು ಸುದ್ದಿಗೆ ಗ್ರಾಸವಾಗಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ನ್ಯಾಯಮೂರ್ತಿಗಳು ಸರ್ವೋಚ್ಛ ನ್ಯಾಯಾಲಯದ ಆಡಳಿತಾತ್ಮಕ ವಿಚಾರಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ಜತೆಗೆ ಕಿರಿಯ ನ್ಯಾಯಮೂರ್ತಿಗಳಿಗೆ ಮುಖ್ಯ ನ್ಯಾಯಾಮೂರ್ತಿಗಳು ಹಂಚಿಕೆ ಮಾಡುವ ಪ್ರಕರಣಗಳ ಸಂಬಂಧವೂ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಮುಖ್ಯ ನ್ಯಾ. ದೀಪಕ್‌ ಮಿಶ್ರಾ, ನ್ಯಾ. ರಂಜನ್‌ ಗೊಗೋಯಿ ಹೆಸರನ್ನು ಸಿಜೆಐ ಹುದ್ದೆಗೆ ಶಿಫಾರಸ್ಸು ಮಾಡುವ ಬಗ್ಗೆ ಅನುಮಾನಗಳಿದ್ದವು. ಆದರೆ ವಿವಾದಕ್ಕೆ ಅಂತ್ಯ ಹಾಡಿದ್ದ ನ್ಯಾ. ಮಿಶ್ರಾ ಅತೀ ಹಿರಿಯ ನ್ಯಾಯಮೂರ್ತಿ ಗೋಗೋಯಿ ಹೆಸರನ್ನೇ ಶಿಫಾರಸ್ಸು ಮಾಡಿದ್ದರು. ಸಹಜವಾಗಿಯೇ ನ್ಯಾಯಾಂಗ ವಲಯದಲ್ಲಿ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಶಿಫಾರಸ್ಸನ್ನು ಸರಕಾರ ಒಪ್ಪಿಕೊಂಡಿದ್ದು ರಾಷ್ಟ್ರಪತಿಗಳು ಅಂಕಿತವೂ ಹಾಕಿದ್ದಾರೆ.

“ನ್ಯಾ. ರಂಜನ್‌ ಗೊಗೋಯಿ ದೂರದೃಷ್ಟಿಯುಳ್ಳ ನ್ಯಾಯಮೂರ್ತಿಗಳು. ಅವರು ಯಾವತ್ತೂ ಮುಕ್ತ ಮನಸ್ಸನ್ನು ಹೊಂದಿರುತ್ತಾರೆ. ಅವರೋರ್ವ ಅತ್ಯಂತ ನ್ಯಾಯೋಚಿತ ನ್ಯಾಯಮೂರ್ತಿ. ಸರ್ಕಾರದ ಅಭಿಪ್ರಾಯದ ಬಗ್ಗೆ ಅವರು ಎಂದೂ ತಲೆ ಕೆಡಿಸಿಕೊಂಡವರಲ್ಲ. ನ್ಯಾ. ಗೊಗೋಯಿ ಸ್ವತಂತ್ರರು ಮತ್ತು ನಮಗೆ ಅವರಂಥ ಸ್ವತಂತ್ರ, ಬುದ್ಧಿವಂತ ಮತ್ತು ಧೈರ್ಯಶಾಲಿಗಳು ಬೇಕಾಗಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಯಾದವರು ಇರಬೇಕಾಗಿದ್ದೇ ಹಾಗೆ ಎಂದು ಬಯಸುವವರು ನಾವು ಮತ್ತು ರಂಜನ್ ಗೊಗೋಯಿ ಅದೇ ರೀತಿಯಲ್ಲಿ ಇದ್ದಾರೆ.”
- ಸೋಲಿ ಸೊರಾಬ್ಜಿ, ಮಾಜಿ ಅಡ್ವೊಕೇಟ್‌ ಜನರಲ್‌