‘ಸತ್ತಂತಿಹ ವಿರೋಧ ಪಕ್ಷಗಳನ್ನು ಬಡಿದೆಚ್ಚರಿಸಿ’: ಇಂಧನ ಬೆಲೆ ಏರುತ್ತಿದ್ದರೂ ಏಳದ ಜನಾಕ್ರೋಶ
COVER STORY

‘ಸತ್ತಂತಿಹ ವಿರೋಧ ಪಕ್ಷಗಳನ್ನು ಬಡಿದೆಚ್ಚರಿಸಿ’: ಇಂಧನ ಬೆಲೆ ಏರುತ್ತಿದ್ದರೂ ಏಳದ ಜನಾಕ್ರೋಶ

ನಾಗಾಲೋಟದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಹೀಗಿದ್ದೂ ಇದನ್ನು ವಿರೋಧಿಸುವ, ಬೀದಿಗಿಳಿದು ಹೋರಾಟ ನಡೆಸುವ ಮನಸ್ಸು ವಿರೋಧ ಪಕ್ಷಗಳು ಸೇರಿದಂತೆ ಜನಪರ ಎಂದು ಕರೆದುಕೊಳ್ಳುವ ಯಾವ ಸಂಘಟನೆಗಳಲ್ಲೂ ಇಲ್ಲ.

ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಬೀದಿಗಿಳಿದ ವಿರೋಧ ಪಕ್ಷಗಳು.. ರಾಷ್ಟ್ರವ್ಯಾಪಿ ಬಂದ್‌ಗೆ ಕರೆ.. ಸಂಸತ್‌ನಲ್ಲಿ ಕೋಲಾಹಲವೆಬ್ಬಿಸಿದ ತೈಲ ಬೆಲೆ ಏರಿಕೆ...

ನಮಗೆ ತಿಳಿಯದೆ ಇದೆಲ್ಲಾ ಯಾವಾಗ ನಡೆದಿದ್ದು ಅಂತ ನೀವೀಗ ಯೋಚನೆ ಮಾಡುತ್ತಿರಬಹುದು. ಇಂತಹ ಹೈಡ್ರಾಮಾಗಳು ನಡೆದಿದ್ದು 2014ಕ್ಕೆ ಮೊದಲು. ಮತ್ತು ಅವುಗಳಲ್ಲೆಲ್ಲಾ ಪ್ರಮುಖ ಪಾತ್ರ ವಹಿಸುತ್ತಿದ್ದ ಪಕ್ಷ ಬಿಜೆಪಿ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅದೇ ಬಿಜೆಪಿ ಸರಕಾರ ಇಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಮುಂಬೈ ಮಹಾನಗರದಲ್ಲಿ ಮಂಗಳವಾರದ ಹೊತ್ತಿಗೆ ಲೀಟರ್ ಪೆಟ್ರೋಲ್‌ 86.72 ರೂಪಾಯಿಗೆ ಮಾರಾಟವಾಗುತ್ತಿದೆ. ಡೀಸೆಲ್‌ ಕೂಡ ತಾನೇನು ಕಡಿಮೆಯಿಲ್ಲ ಎಂದು 75.74 ರೂಪಾಯಿಗೆ ಏರಿಕೆಯಾಗಿದೆ. ಅಡುಗೆ ಅನಿಲ ಬೆಲೆಯ ಪರಿಸ್ಥಿತಿಯಲ್ಲೂ ಅಂಥಹ ವ್ಯತ್ಯಾಸವೇನಿಲ್ಲ.

ಹೀಗೆ, ನಾಗಾಲೋಟದಲ್ಲಿ ದಿನ ಬಳಕೆಯ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಡೀಸೆಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು ಮತ್ತು ಸೇವೆಗಳ ಬೆಲೆಯೂ ಏರಿಕೆಯಾಗುತ್ತಿದೆ. ಹೀಗಿದ್ದೂ ಇದನ್ನು ವಿರೋಧಿಸುವ, ಬೀದಿಗಿಳಿದು ಹೋರಾಟ ನಡೆಸುವ ಮನಸ್ಸು ವಿರೋಧ ಪಕ್ಷಗಳು ಸೇರಿದಂತೆ ಜನಪರ ಎಂದು ಕರೆದುಕೊಳ್ಳುವ ಯಾವ ಸಂಘಟನೆಗಳಲ್ಲೂ ಕಾಣಿಸುತ್ತಿಲ್ಲ.

ಆದರೆ 2014ಕ್ಕೂ ಮೊದಲ ಪರಿಸ್ಥಿತಿ ಹೀಗಿರಲಿಲ್ಲ. ಈ ಹಿಂದೆ ಯುಪಿಎ ಸರಕಾರ ಅಧಿಕಾರದಲ್ಲಿದ್ದ ವೇಳೆ ಒಂದೆರಡು ರೂಪಾಯಿ ಪೆಟ್ರೋಲ್‌ - ಡೀಸೆಲ್‌ ಬೆಲೆ ಏರಿಕೆ ನಡೆದರೂ ಪ್ರಮುಖ ಪ್ರತಿಪಕ್ಷ ಬಿಜೆಪಿ ಬೀದಿಗಿಳಿಯುತ್ತಿತ್ತು. ಅಡುಗೆ ಅನಿಲ ಬೆಲೆ ಏರಿಕೆ ನಡೆದರಂತೂ ಸುಷ್ಮಾ ಸ್ವರಾಜ್‌ ಮುಂತಾದ ಮಹಿಳಾ ಮಣಿಗಳು ರಸ್ತೆಯಲ್ಲೇ ಕಟ್ಟಿಗೆ ಒಲೆ ಹಚ್ಚಿ ಕುಳಿತು ಬಿಡುತ್ತಿದ್ದರು. ಹಲವು ರಾಷ್ಟ್ರವ್ಯಾಪಿ ಬಂದ್‌ಗೂ ಈ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ ಕಾರಣವಾಗಿತ್ತು.

ಕಟ್ಟಿಗೆ ಹಿಡಿದು ಬೆಲೆ ಏರಿಕೆ ವಿರುದ್ಧ ಬೀದಿಗಿಳಿಯುತ್ತಿದ್ದ ಬಿಜೆಪಿ ನಾಯಕರು. 
ಕಟ್ಟಿಗೆ ಹಿಡಿದು ಬೆಲೆ ಏರಿಕೆ ವಿರುದ್ಧ ಬೀದಿಗಿಳಿಯುತ್ತಿದ್ದ ಬಿಜೆಪಿ ನಾಯಕರು. 

ಉದಾಹರಣೆಗೆ ಪೆಟ್ರೋಲ್, ಡೀಸೆಲ್, ಹಾಗೂ ಅಡುಗೆ ಅನಿಲ ಬೆಲೆ ಏರಿಕೆಯನ್ನು ವಿರೋಧಿಸಿ 2012ರ ಒಂದೇ ವರ್ಷದಲ್ಲಿ ಎರಡು ಬಾರಿ ‘ಭಾರತ್ ಬಂದ್’ ನಡೆಸಲಾಗಿತ್ತು. ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ 2012ರ ಮೇ 31ರಂದು ಮೊದಲ ಭಾರತ್ ಬಂದ್ ನಡೆಸಲಾಗಿದ್ದರೆ, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಅದೇ ವರ್ಷ ಸೆಪ್ಟೆಂಬರ್ 20ರಂದು ಮತ್ತೊಮ್ಮೆ ದೇಶವ್ಯಾಪಿ ಬಂದ್‌ ನಡೆಸಲಾಗಿತ್ತು.

ಒಮ್ಮೆ ಆಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಭಾರತ್ ಬಂದ್ ನಡೆಸಿದ್ದರೆ, ಮತ್ತೊಮ್ಮೆ ಕಾರ್ಮಿಕ ಸಂಘಟನೆಗಳು, ಕಾರ್ಮಿಕ ಒಕ್ಕೂಟಗಳು, ಪ್ರಗತಿಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದವು.

ವಿಚಿತ್ರವೆಂದರೆ ಅದೇ ಬೆಲೆ ಏರಿಕೆ, ಪೆಟ್ರೋಲ್-ಡೀಸೆಲ್‌ ದರ ಹೆಚ್ಚಳವನ್ನು ವಿರೋಧಿಸುತ್ತಲೇ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂತು. ಹೀಗೆ ಅಧಿಕಾರಕ್ಕೆ ಬಂದ ಕಮಲ ಪಕ್ಷ ಮತ್ತದೇ ಬೆಲೆ ಏರಿಕೆಗೆ ಕಡಿವಾಣ ಹಾಕುವ ಬದಲು ಇಂಧನ ಬೆಲೆ ಹೆಚ್ಚಿಸುತ್ತಲೇ ಬಂದಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವುದಾಗಿ ಚುನಾವಣೆಗೂ ಮುನ್ನ ನೀಡಿದ ‘ಅಚ್ಛೇ ದಿನ್‌’ನ ಭರವಸೆ ಆ ಪಕ್ಷಕ್ಕೀಗ ಮರೆತು ಹೋಗಿದೆ.

ಇನ್ನೂ ವಿಚಿತ್ರವೆಂದರೆ ಇದನ್ನೆಲ್ಲಾ ಪ್ರಶ್ನಿಸಬೇಕಾದ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಮತ್ತು ಇತರ ಪ್ರತಿಪಕ್ಷಗಳು ನಿದ್ರೆಗೆ ಜಾರಿವೆ. ಬೆಲೆ ಮಿತಿ ಮೀರಿ ಏರಿಕೆಯಾಗಿ ಬೀದಿ ಬೀದಿಗಳಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದರೂ ಅವುಗಳಿಗೆ ಧ್ವನಿಯಾಗಬೇಕಿದ್ದ ಜನಪರ ಸಂಘಟನೆಗಳೂ ಸರಿಯಾದ ಸಮಯಕ್ಕೆ ನಾಪತ್ತೆಯಾಗಿವೆ.

ಪರಿಸ್ಥಿತಿ ಹೇಗಿದೆ ಎಂದರೆ ಈ ದೇಶದಲ್ಲಿರುವ ನೂರಾರು ವಿರೋಧ ಪಕ್ಷಗಳಲ್ಲಿ ಒಂದು ಪಕ್ಷಕ್ಕೂ ತನ್ನ ಹೊಣೆಗಾರಿಕೆ ನೆನಪಾಗುತ್ತಿಲ್ಲ. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ಎಎಪಿ, ಟಿಡಿಪಿ, ಟಿಆರ್‌ಎಸ್‌, ಎನ್‌ಸಿಪಿ, ಬಿಜೆಡಿ, ಟಿಎಂಸಿ, ಆರ್‌ಜೆಡಿ, ಸಮಾಜವಾದಿ ಪಕ್ಷ, ಬಿಎಸ್‌ಪಿ, ಜೆಡಿಎಸ್‌, ಎಐಎಡಿಎಂಕೆ, ಡಿಎಂಕೆ ಸೇರಿದಂತೆ ನೂರಾರು ಪಕ್ಷಗಳ ಧ್ವನಿ ಎಲ್ಲೂ ಮೊಳಗುತ್ತಿಲ್ಲ. ಕೂತಿದ್ದಕ್ಕೆ, ನಿಂತಿದ್ದಕ್ಕೆಲ್ಲಾ ಬೀದಿಗೆ ಬರುತ್ತಿದ್ದ ಕಾರ್ಮಿಕ ಸಂಘಟನೆಗಳು, ಸಾರಿಗೆ ಯೂನಿಯನ್‌ಗಳು, ‘ಪ್ರಗತಿಪರ’, ‘ಜನಪರ’ ಸಂಘಟನೆಗಳು, ಉದಾರವಾದಿಗಳು, ವಿಚಾರವಾದಿಗಳು… ಉಹುಂ ಯಾರೂ ದುರ್ಬೀನು ಹಾಕಿ ಹುಡುಕಿದರೂ ಸಿಗುತ್ತಿಲ್ಲ.

ಇದು ಸದ್ಯದ ವಿರೋಧ ಪಕ್ಷಗಳು ಮತ್ತು ಹೋರಾಟವನ್ನೇ ಪೂರ್ಣ ಕಾಲಿಕ ಉದ್ಯೋಗವಾಗಿಸಿಕೊಂಡ ಹಲವು ಸಂಘಟನೆಗಳ ಸ್ಥಿತಿ. ಇವರ ಮೇಲೆ ಮೊದಲೇ ಜನರು ಭರವಸೆ, ವಿಶ್ವಾಸಗಳನ್ನು ಕಳೆದುಕೊಂಡಿದ್ದರು. ಇದೀಗ ಅಳಿದುಳಿದ ಭರವಸೆಗಳೂ ಕಮರಿ ಹೋಗಿವೆ. ಜನರು ತೊಂದರೆಯಲ್ಲಿದ್ದಾಗ ಸತ್ತಂತಿರುವ ಇವರನ್ನು ಬಡಿದೆಚ್ಚರಿಸಬೇಕಾಗಿದೆ. ಎಚ್ಚರಿಸುವ ಕೆಲಸವನ್ನು ಜನಸಾಮಾನ್ಯರೇ ಕೈಗೆತ್ತಿಕೊಳ್ಳುವುದಷ್ಟೆ ಸದ್ಯಕ್ಕೆ ಇರುವ ದಾರಿ.