ಸುರೇಶ್‌ ಕುಮಾರ್ ಬೆನ್ನು ಹತ್ತಿದ ನಂಬರ್‌ ಪ್ಲೇಟ್‌ಗಳು & ಅಸಲಿ ಕಥೆ!
COVER STORY

ಸುರೇಶ್‌ ಕುಮಾರ್ ಬೆನ್ನು ಹತ್ತಿದ ನಂಬರ್‌ ಪ್ಲೇಟ್‌ಗಳು & ಅಸಲಿ ಕಥೆ!

‘ಸಜ್ಜನ ರಾಜಕಾರಣಿ’ ಎನಿಸಿರುವ ಶಾಸಕ ಎಸ್‌. ಸುರೇಶ್‌ ಕುಮಾರ್‌ ತಮ್ಮದೇ ಪಕ್ಷದ ಮುಖಂಡರಿಗೆ ನಂಬರ್‌ ಪ್ಲೇಟ್‌ ಬಗ್ಗೆ ತಿಳಿಹೇಳುವ ಅಭಿಯಾನವನ್ನು ಯಾಕೆ ಆರಂಭಿಸಬಾರದು?

ಕಾರುಗಳ ನಂಬರ್‌ ಪ್ಲೇಟ್‌ ಬೆನ್ನು ಹತ್ತಿರುವ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌, ‘ದಕ್ಷಿಣ ಏಷ್ಯಾ ಮಾನವ ಹಕ್ಕುಗಳ ಅಧ್ಯಕ್ಷ’ರ ಕಾರಿನ ನಂಬರ್‌ ಪ್ಲೇಟ್‌ ಬಗ್ಗೆ ಫೇಸ್‌ಬುಕ್‌ನಲ್ಲಿಂದು ಗಮನ ಸೆಳೆದಿದ್ದಾರೆ.

ಸುರೇಶ್‌ ಕುಮಾರ್‌ ಅವರು ಕಾರಿನ ನಂಬರ್‌ ಪ್ಲೇಟ್‌ಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಜನರ ಗಮನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ. ಜುಲೈ ತಿಂಗಳಲ್ಲಿ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ದ ಹೆಸರಿನಲ್ಲಿ ಹಾಕಿಕೊಂಡಿದ್ದ ನಂಬರ್‌ ಪ್ಲೇಟ್‌ ಅನ್ನೂ ಫೇಸ್‌ಬುಕ್‌ನಲ್ಲಿ ಹಾಕಿ ‘ಸೂಕ್ತ ಕ್ರಮ’ಕ್ಕೆ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದರು.

ಐಷಾರಾಮಿ ಬೆನ್ಸ್‌ ಕಾರಿಗೆ ‘ಕರ್ನಾಟಕ ಸರಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಎಂದು ನಂಬರ್‌ ಪ್ಲೇಟ್ ಅಳವಡಿಸಿಕೊಂಡಿದ್ದನ್ನು ಪತ್ರಕರ್ತ ವಿನಯ್‌ ಮಾಧವ್‌ ಫೇಸ್‌ಬುಕ್‌ ಮೂಲಕವೇ ಬೆಳಕಿಗೆ ತಂದಿದ್ದರು. ಕುಮಾರಕೃಪಾ ಆವರಣದಲ್ಲಿ ನಿಂತಿದ್ದ ಈ ಕಾರಿನ ನಂಬರ್‌ ಪ್ಲೇಟ್‌ ಫೋಟೊ ಅನ್ನು ವಿನಯ್‌ ಮಾಧವ್‌ ಫೇಸ್‌ಬುಕ್‌ನಲ್ಲಿ ಜುಲೈ 2ರಂದು ಪೋಸ್ಟ್‌ ಮಾಡಿದ್ದರು. ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದೇ ಫೋಟೊವನ್ನು ಶಾಸಕ ಸುರೇಶ್‌ ಕುಮಾರ್‌ ಕೂಡಾ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

ಸುರೇಶ್‌ ಕುಮಾರ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಫೋಟೋ ಬಗ್ಗೆ ಪತ್ರಿಕೆಗಳೂ ವರದಿ ಮಾಡಿದವು. ಇದು ಸುದ್ದಿಯಾದ ಬಳಿಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ಗೆ ಈ ಬಗ್ಗೆ ದೂರು ನೀಡಿದ್ದರು. ಜುಲೈ 4ರಂದು ಬೆಂಗಳೂರು ಸಂಚಾರ ಪೊಲೀಸರು ಈ ಕಾರನ್ನು ಪತ್ತೆ ಮಾಡಿ ಕಾರಿನ ನಂಬರ್‌ ಪ್ಲೇಟ್‌ ತೆಗೆಸಿ, ದಂಡ ಹಾಕಿದ್ದರು.

ಮೋಟಾರ್‌ ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಿಕೊಳ್ಳುವವರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿರುವುದು ಇದೇ ಮೊದಲೇನಲ್ಲ. ಸಂಚಾರ ವಿಭಾಗಗಳ ಡಿಸಿಪಿಗಳು ಬದಲಾದಾಗೆಲ್ಲಾ ಇಂಥ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಕಾರ್ಯಾಚರಣೆಗಳು ಸುದ್ದಿಯಾಗುತ್ತಲೂ ಇರುತ್ತವೆ. ಹಾಗೆಂದು, ಇಂಥ ನಂಬರ್‌ ಪ್ಲೇಟ್‌ಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ.

ನಂಬರ್‌ ಪ್ಲೇಟ್‌ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ 100 ರೂಪಾಯಿ ದಂಡ ವಿಧಿಸಬಹುದು. ಸರಕಾರಿ ಕಾರುಗಳ ನಂಬರ್‌ ಪ್ಲೇಟ್‌ ಬಗ್ಗೆ ನಿರ್ದಿಷ್ಟವಾದ ನಿಮಯವಿಲ್ಲ. ಆದರೆ, ನಂಬರ್‌ ಪ್ಲೇಟ್‌ ವಿನ್ಯಾಸದ ವಿಚಾರದಲ್ಲಿ ಯಾವುದೇ ಕಾರುಗಳಲ್ಲಿ ನಿಯಮ ಉಲ್ಲಂಘನೆಯಾದರೂ ದಂಡ ವಿಧಿಸಲಾಗುತ್ತಿದೆ.
-ಟಿ.ಪಿ. ಶಿವಕುಮಾರ್‌, ಡಿಸಿಪಿ, ಬೆಂಗಳೂರು ಪಶ್ಚಿಮ ಸಂಚಾರ ವಿಭಾಗ

ಸರಕಾರಿ ವಾಹನಗಳಿಂದ ಹಿಡಿದು ಖಾಸಗಿ ವಾಹನಗಳಲ್ಲಿ ಇಂಥ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರ ಹೆಸರಿನ ನಂಬರ್‌ ಪ್ಲೇಟ್‌ಗಳಿವೆ. ಸಂಚಾರ ಪೊಲೀಸರ ಗಮನಕ್ಕೆ ಬಂದಾಗ ಇಂಥ ವಾಹನಗಳ ವಿರುದ್ಧ ದಂಡ ಹಾಕುವುದು ಮುಂದುವರಿದೇ ಇರುತ್ತವೆ. ಆದರೆ, ಬೇರೆಯವರ ಕಾರುಗಳ ನಿಯಮ ಉಲ್ಲಂಘಟನೆಯನ್ನು ಗುರುತಿಸುವ, ‘ಸಜ್ಜನ ರಾಜಕಾರಣಿ’ ಎನಿಸಿಕೊಂಡಿರುವ ಸುರೇಶ್‌ ಕುಮಾರ್‌ ತಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವಿವಿಧ ಪದಾಧಿಕಾರಿಗಳ ಕಾರುಗಳ ನಂಬರ್‌ ಪ್ಲೇಟ್‌ಗಳು ಮೋಟಾರ್‌ ವಾಹನ ಕಾಯ್ದೆಯನ್ನು ಉಲ್ಲಂಘಿಸುವ ಬಗ್ಗೆ ಮೌನವಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹೊಸ ಕಾರಿನ ನಂಬರ್‌ ಪ್ಲೇಟ್‌ ಜತೆಗೆ ‘ರಾಜ್ಯಾಧ್ಯಕ್ಷರು, ಭಾರತೀಯ ಜನತಾ ಪಾರ್ಟಿ’ ಎಂಬ ಫಲಕವೂ ಸೇರಿಕೊಂಡಿದೆ. ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರ ಕಾರಿನಲ್ಲೂ ವಿಧಾನ ಸಭಾ ಸದಸ್ಯರು ಶಿಕಾರಿಪುರ ಎಂಬ ಫಲಕವಿತ್ತು. ಹೀಗೆ ಬಿಜೆಪಿಯೊಳಗಿನ ಅನೇಕರ ಕಾರುಗಳಲ್ಲಿ ನಂಬರ್‌ ಪ್ಲೇಟ್‌ ಜತೆಗೆ ಫಲಕಗಳೂ ಸೇರಿಕೊಂಡಿವೆ.

ಯಡಿಯೂರಪ್ಪ ಕಾರಿನ ನಂಬರ್‌ ಪ್ಲೇಟ್‌ ಜತೆಗಿನ ಫಲಕ
ಯಡಿಯೂರಪ್ಪ ಕಾರಿನ ನಂಬರ್‌ ಪ್ಲೇಟ್‌ ಜತೆಗಿನ ಫಲಕ

1989ರ ಕೇಂದ್ರ ಮೋಟಾರ್‌ ವಾಹನ ಕಾಯ್ದೆಯ 50 ಮತ್ತು 51ನೇ ನಿಯಮಗಳ ಪ್ರಕಾರವೇ ವಾಹನಗಳ ನಂಬರ್‌ ಪ್ಲೇಟ್‌ಗಳು ಇರಬೇಕು. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಯೂ ಸೇರಿದಂತೆ ಎಲ್ಲಾ ಗಣ್ಯರ ವಾಹನಗಳಿಗೂ ಈ ಕಾಯ್ದೆ ಅನ್ವಯಿಸುತ್ತದೆ. ಆದರೆ, ಈ ಕಾಯ್ದೆ ಸರಿಯಾಗಿ ಜಾರಿಯಾಗದೆ ನಂಟರ್‌ ಪ್ಲೇಟ್‌ಗಳ ಜತೆಗೆ ವಿಶೇಷಣ ಫಲಕಗಳೂ ಸೇರಿಕೊಂಡಿವೆ, ಗ್ರಾಮ ಪಂಚಾಯ್ತಿ ಸದಸ್ಯರ ಹೆಸರಿಂದ ಹಿಡಿದು ಮಾನವ ಹಕ್ಕುಗಳ ರಕ್ಷಣೆ, ದಲಿತರ ರಕ್ಷಣೆ, ಮಹಿಳಾ ರಕ್ಷಣೆಯ ಹೆಸರಿನ ನೂರಾರು ಸಮಿತಿ, ಸಂಘ, ಒಕ್ಕೂಟಗಳ ಅಧ್ಯಕ್ಷ, ಕಾರ್ಯದರ್ಶಿ, ಸದಸ್ಯರ ಫಲಕಗಳು ಇಂದಿಗೂ ಹಲವು ಕಾರುಗಳ ಮೇಲಿವೆ.

ನಂಬರ್‌ ಪ್ಲೇಟ್‌ ವಿನ್ಯಾಸಕ್ಕೆ ಸಂಬಂಧಿಸಿದಂತೆ ಕಾಯ್ದೆಯೇನೋ ಇದೆ. ಆದರೆ, ಕಾಯ್ದೆಯ ನಿಯಮ ಉಲ್ಲಂಘನೆಗೆ ವಿಧಿಸಬಹುದಾದ ದಂಡ ಕೇವಲ 100 ರೂಪಾಯಿ ಮಾತ್ರ. ಮೊದಲ ಬಾರಿಗೆ 100, ಎರಡನೇ ಬಾರಿ ಉಲ್ಲಂಘನೆಗೆ 300 ಮತ್ತು ಮೂರನೇ ಬಾರಿ ಉಲ್ಲಂನೆಗೆ 500 ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ನಂಬರ್‌ ಪ್ಲೇಟ್‌ ಜತೆಗೆ ತಮ್ಮ ಪಕ್ಷ, ಸಂಘಟನೆ, ಹುದ್ದೆಯನ್ನು ದೊಡ್ಡದಾಗಿ ಹಾಕಿಸಿಕೊಂಡು ಓಡಾಡುತ್ತಿರುವವರಿಗೆ ಇದು ಚಿಕ್ಕ ಮೊತ್ತದ ದಂಡ. ಹೀಗಾಗಿಯೇ ಈ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನವಾಗುತ್ತಿಲ್ಲ.

ಈಗ ಸುರೇಶ್‌ ಕುಮಾರ್‌ ನಂಬರ್‌ ಪ್ಲೇಟ್‌ ನಿಯಮ ಉಲ್ಲಂಘಿಸುವ ಕಾರುಗಳ ಫೋಟೊಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಅದೇ ರೀತಿ ಅವರ ಪಕ್ಷದ ಮುಖಂಡರಿಗೆ ನಂಬರ್‌ ಪ್ಲೇಟ್‌ ನಿಯಮಗಳ ಬಗ್ಗೆ ತಿಳಿಹೇಳಿ, ಸರಿಯಾದ ವಿನ್ಯಾಸದ ನಂಬರ್‌ ಪ್ಲೇಟ್‌ಗಳ ಅಳವಡಿಕೆಯ ಅಭಿಯಾನಕ್ಕೆ ಸುರೇಶ್‌ ಕುಮಾರ್‌ ಅವರೇ ಯಾಕೆ ಮುಂದಾಗಬಾರದು?