samachara
www.samachara.com
ಮಗನ ಸಾವು, ಸೋಲಿನ ನೋವು;  ‘ರಿಫ್ರೆಶ್‌ಮೆಂಟ್‌’ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ
COVER STORY

ಮಗನ ಸಾವು, ಸೋಲಿನ ನೋವು; ‘ರಿಫ್ರೆಶ್‌ಮೆಂಟ್‌’ ಪ್ರವಾಸಕ್ಕೆ ಹೊರಟ ಸಿದ್ದರಾಮಯ್ಯ

ವಿದೇಶ ಪ್ರವಾಸದಿಂದ ಮರಳುವ ಸಿದ್ದರಾಮಯ್ಯ ಅವರೊಳಗಿನ ರಾಜಕಾರಣಿ ಎಷ್ಟರ ಮಟ್ಟಿಗೆ ಹೊಸ ರೂಪ ಪಡೆದಿರುತ್ತಾನೆ ಎಂಬುದಕ್ಕೆ 10 ದಿನಗಳ ನಂತರ ಉತ್ತರ ಸಿಗಲಿದೆ.

ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ಮಗ ಯತೀಂದ್ರ ಹಾಗೂ ಕುಟುಂಬ ಸದಸ್ಯರೊಂದಿಗೆ ಸೋಮವಾರ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಹಿರಿಯ ಮಗನ ಸಾವು, ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಹಾಗೂ ಮತ್ತೆ ಮುಖ್ಯಮಂತ್ರಿಯಾಗುವ ನಿರೀಕ್ಷೆ ಹುಸಿಯಾದ ಬಳಿಕ ರಾಜಕೀಯದಿಂದ ತಾತ್ಕಾಲಿಕ ಬಿಡುವಿಗಾಗಿ ಸಿದ್ದರಾಮಯ್ಯ ವಿದೇಶ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

10 ದಿನಗಳ ಕಾಲ ರಾಜಕೀಯದಿಂದ ಬಿಡುವು ಪಡೆದು ಖಾಸಗಿ ಪ್ರವಾಸಕ್ಕೆ ಹೊರಟಿರುವ ಸಿದ್ದರಾಮಯ್ಯ ಕಾಂಗ್ರೆಸ್‌ ಶಾಸಕರನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಇದು ಸಂಪೂರ್ಣ ಖಾಸಗಿ ಪ್ರವಾಸವಾಗಿದ್ದು, ವಿಧಾನಪರಿಷತ್‌ ಸದಸ್ಯ ಗೋವಿಂದರಾಜ್ ಬಿಟ್ಟರೆ ಬೇರೆ ಯಾವ ಶಾಸಕರೂ ಜತೆಗೆ ಬರುತ್ತಿಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣೆಯ ಸಿದ್ಧತೆಯ ಬಗ್ಗೆ ಸಭೆ ನಡೆಸಿದ ಮರುದಿನವೇ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ಎರಡು ವರ್ಷಗಳ ಹಿಂದೆ ಹಿರಿಯ ಮಗ ರಾಕೇಶ್‌ ಸಾವಿನ ಸಂದರ್ಭದಲ್ಲಿ ಮಗನ ಮೃತದೇಹ ಪಡೆಯಲು ಸಿದ್ದರಾಮಯ್ಯ ದಂಪತಿ ಬೆಲ್ಜಿಯಂಗೆ ಹೋಗಿದ್ದರು. ಆ ಬಳಿಕ ಸಿದ್ದರಾಮಯ್ಯ ಖಾಸಗಿಯಾಗಿ ಯಾವುದೇ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ. ಹಾಗೆ ನೋಡಿದರೆ ರಾಜಕೀಯದಿಂದ ಬಿಡುವು ಪಡೆದು ಕುಟುಂಬ ಸದಸ್ಯರೊಂದಿಗೆ ಸಿದ್ದರಾಮಯ್ಯ ಹೀಗೆ ವಿದೇಶ ಪ್ರವಾಸಕ್ಕೆ ಹೊರಟಿರುವುದು ಇದೇ ಮೊದಲು.

ಮುಖ್ಯಮಂತ್ರಿಯಾಗಿ ಹಲವು ದೇಶಗಳ ಪ್ರವಾಸ ಮಾಡಿರುವ ಸಿದ್ದರಾಮಯ್ಯ ಖಾಸಗಿಯಾಗಿ ವಿದೇಶ ಪ್ರವಾಸ ಮಾಡಿದ್ದು ಕಡಿಮೆಯೇ. ಮೈಸೂರಿನ ಮನೆಯಲ್ಲಿ ಹಳೆಯ ಗೆಳೆಯರೊಂದಿಗೆ ಹಾಗೂ ಸಿದ್ದರಾಮನ ಹುಂಡಿಯ ಬಾಲ್ಯದ ಗೆಳೆಯರೊಂದಿಗೆ ಕಾಲ ಕಳೆಯುವುದೇ ಅವರಿಗೆ ಹೆಚ್ಚು ಇಷ್ಟ. ಅದೇ ಅವರಿಗೆ ರಿಫ್ರೆಶ್‌ಮೆಂಟ್‌. ಆದರೆ, ಮಗನ ಸಾವು ಹಾಗೂ ರಾಜಕೀಯ ಹಿನ್ನಡೆ ಅವರನ್ನು ಸ್ವಲ್ಪ ಡಿಸ್ಟರ್ಬ್‌ ಮಾಡಿದೆ. ಹೀಗಾಗಿ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ ಎನ್ನುತ್ತಾರೆ ಸಿದ್ದರಾಮಯ್ಯ ಆಪ್ತರೊಬ್ಬರು.

ಪ್ರವಾಸದ ರಾಜಕೀಯ ಲೆಕ್ಕಾಚಾರ?:

ಸಿದ್ದರಾಮಯ್ಯ ವಿದೇಶ ಪ್ರವಾಸದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಲವು ದಿನಗಳಿಂದಲೇ ಹುಟ್ಟಿಕೊಂಡಿವೆ. ಹೊಸ ರಾಜಕೀಯ ಲೆಕ್ಕಚಾರಗಳನ್ನು ಹಾಕಲೆಂದೇ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ವಿದೇಶಕ್ಕೆ ತೆರಳುತ್ತಿದ್ದಾರೆ ಎಂಬ ಸುದ್ದಿಗಳೂ ಸಾಕಷ್ಟು ಹರಿದಾಡಿದ್ದವು. ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಸಮ್ಮಿಶ್ರ ಸರಕಾರಕ್ಕೆ ಶಾಕ್‌ ನೀಡಲಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ದಟ್ಟವಾಗಿದ್ದವು.

ಆದರೆ, ಇದೆಲ್ಲಕ್ಕೂ ತೆರೆ ಎಳೆಯುವಂತೆ ಸಿದ್ದರಾಮಯ್ಯ, ಇದು ಖಾಸಗಿ ಪ್ರವಾಸ ಮಾತ್ರ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದಿದ್ದಾರೆ. ಅಲ್ಲದೆ ತಮ್ಮೊಂದಿಗೆ ಯಾವ ಶಾಸಕರೂ ಬರುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ಹಿಂದುರಿಗಿದ ಬಳಿಕ ಸಮ್ಮಿಶ್ರ ಸರಕಾರದಲ್ಲಿ ಭಾರೀ ಬದಲಾವಣೆಗಳು ನಡೆಯಲಿವೆ ಎಂಬ ಮಾತುಗಳು ಇನ್ನೂ ಹರಿದಾಡುತ್ತಲೇ ಇವೆ.

ಸದಾ ಪಂಚೆ ಹಾಗೂ ಖಾದಿ ದಿರಸಿನಲ್ಲಿ ‘ದೇಸಿ’ಯಾಗಿ ಕಾಣುವ ಸಿದ್ದರಾಮಯ್ಯ ವಿದೇಶ ಪ್ರವಾಸದ ಸಂದರ್ಭಗಳಲ್ಲಿ ಮಾತ್ರ ಪ್ಯಾಂಟ್‌, ಸೂಟ್‌ ಧರಿಸಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿಯೂ ಸಿದ್ದರಾಮಯ್ಯ ಸೂಟ್‌ ತೊಟ್ಟು ವಿಮಾನ ಏರಿದ್ದಾರೆ.

ಮಗನ ಸಾವಿನ ಬಳಿಕ ಹೆಚ್ಚು ರಾಜಕೀಯದಲ್ಲಿ ತೊಡಗಿಸಿಕೊಂಡು ಆ ನೋವನ್ನು ಮರೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದರು. ಇದೇ ವೇಳೆ ಚುನಾವಣೆ ಸಮೀಪಿಸಿದ್ದರಿಂದ ಸಿದ್ದರಾಮಯ್ಯ ಹೆಚ್ಚು ರಾಜಕೀಯ ಚಟುವಟಿಕೆಯಿಂದಿದ್ದರು. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್‌ ನಿರೀಕ್ಷಿತ ಸ್ಥಾನ ಪಡೆಯದೆ, ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ಬಳಿಕ ಸಿದ್ದರಾಮಯ್ಯ ರಾಜಕೀಯಕ್ಕಿಂತ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಗಮನ ಹರಿಸಲು ಶುರುಮಾಡಿದ್ದಾರೆ. ಚುನಾವಣಾ ಫಲಿತಾಂಶದ ಬೆನ್ನಲ್ಲೇ ಸಿದ್ದರಾಮಯ್ಯ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆಗೆ ಒಳಗಾಗಿದ್ದರು. ಈಗ ಕುಟುಂಬದೊಂದಿಗೆ ವಿದೇಶ ಪ್ರವಾಸ.

ರಾಕೇಶ್‌ ಸಾವಿನ ಬಳಿಕ ಹೆಚ್ಚು ಚಟುವಟಿಕೆಯಿಂದಿರುವುದನ್ನು ರೂಢಿಸಿಕೊಂಡಿದ್ದ ಸಿದ್ದರಾಮಯ್ಯ ಯೋಗ, ವ್ಯಾಯಾಮಗಳ ಮೂಲಕ ನಿದ್ರೆಯ ಸಮಸ್ಯೆಯನ್ನು ನಿಯಂತ್ರಿಸಿಕೊಂಡಿದ್ದರು. ಮೊದಲು ಕೂತಲ್ಲೇ ನಿದ್ರೆಗೆ ಜಾರಿ ನಿದ್ದೆರಾಮಯ್ಯ ಎಂಬ ಅಪಹಾಸ್ಯಕ್ಕೆ ತುತ್ತಾಗಿದ್ದ ಸಿದ್ದರಾಮಯ್ಯ ಅಧಿಕಾರದ ಕೊನೆಯ ಎರಡು ವರ್ಷಗಳಲ್ಲಿ ಆ ಸಮಸ್ಯೆಯನ್ನು ನಿವಾರಿಸಿಕೊಂಡಿದ್ದರು. ಆದರೆ, ರಿಫ್ರೆಶ್‌ಮೆಂಟ್‌ ಕಾರಣಕ್ಕೆ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ಹೋಗುತ್ತಿರುವುದು ಇದೇ ಮೊದಲು.

ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ಹಿಂದಿರುಗಿ ಬರುವಷ್ಟರಲ್ಲಿ ಸಮ್ಮಿಶ್ರ ಸರಕಾರದಲ್ಲಿ ಯಾರ್ಯಾರಿಗೆ ಯಾವ ಸ್ಥಾನ, ಯಾವ್ಯಾವ ನಿಗಮ, ಮಂಡಳಿಗಳಿಗೆ ಯಾರ್ಯಾರು ನೇಮಕವಾಗುತ್ತಾರೆ ಎಂಬುದನ್ನೂ ಸಿದ್ಧಮಾಡಿಕೊಂಡು ಬರುತ್ತಾರೆ ಎಂಬ ಊಹಾಪೋಹಗಳಿವೆ. ಅಲ್ಲದೆ ಸಿದ್ದರಾಮಯ್ಯ ವಿದೇಶ ಪ್ರವಾಸದಿಂದ ಹಿಂದಿರುಗಿದ ಬಳಿಕ ಸಂಪುಟ ವಿಸ್ತರಣೆಯ ಕಸರತ್ತು ಶುರುವಾಗಲಿದೆ.

ಸದ್ಯಕ್ಕೆ ಕುಟುಂಬದೊಂದಿಗೆ ಖಾಸಗಿಯಾಗಿಯೇ ಸಿದ್ದರಾಮಯ್ಯ ಯುರೋಪ್‌ ಪ್ರವಾಸಕ್ಕೆ ಹೋಗಿದ್ದರೂ ಅವರೊಳಗಿನ ರಾಜಕಾರಣಿಯೇನೂ ಸುಮ್ಮನಿರುವುದಿಲ್ಲ. 24 ಗಂಟೆ ರಾಜಕಾರಣಿ ಎನಿಸಿಕೊಂಡಿರುವ ಎಚ್‌.ಡಿ. ದೇವೇಗೌಡರ ಗರಡಿಯಲ್ಲಿ ಬೆಳೆದ ಸಿದ್ದರಾಮಯ್ಯ ಎಲ್ಲಿಗೇ ಹೋದರೂ 24 ಗಂಟೆಯಲ್ಲಿ ಅರ್ಧದಷ್ಟಾದರೂ ರಾಜಕೀಯ ಮಾಡದೆ ಇರುವವರಲ್ಲ. ಹೀಗಾಗಿ ವಿದೇಶ ಪ್ರವಾಸದಿಂದ ಮರಳುವ ಸಿದ್ದರಾಮಯ್ಯ ಅವರೊಳಗಿನ ರಾಜಕಾರಣಿ ಎಷ್ಟರ ಮಟ್ಟಿಗೆ ಹೊಸ ರೂಪ ಪಡೆದಿರುತ್ತಾನೆ ಎಂಬುದಕ್ಕೆ 10 ದಿನಗಳ ನಂತರ ಉತ್ತರ ಸಿಗಲಿದೆ.