samachara
www.samachara.com
ಜಾಗತಿಕ ತಲ್ಲಣ ಮೂಡಿಸಿದ ರಾಯ್ಟರ್ಸ್‌ ಪತ್ರಕರ್ತರ ಜೈಲು ಶಿಕ್ಷೆ & ಸೂಕಿ ನಾಡಿನಲ್ಲಿ ಮಾಧ್ಯಮ ಸ್ವಾತಂತ್ರ್ಯ
COVER STORY

ಜಾಗತಿಕ ತಲ್ಲಣ ಮೂಡಿಸಿದ ರಾಯ್ಟರ್ಸ್‌ ಪತ್ರಕರ್ತರ ಜೈಲು ಶಿಕ್ಷೆ & ಸೂಕಿ ನಾಡಿನಲ್ಲಿ ಮಾಧ್ಯಮ ಸ್ವಾತಂತ್ರ್ಯ

ತನಿಖೆ ವರದಿ ಸಿದ್ಧಪಡಿಸುತ್ತಿದ್ದ ರಾಯ್ಟರ್ಸ್‌  ಪತ್ರಕರ್ತರಿಗೆ ಡಿಸೆಂಬರ್‌ನಲ್ಲಿ ಸ್ಮಶಾನವೊಂದರಲ್ಲಿ ಸಾವನ್ನಪ್ಪಿದ್ದ 10 ರೊಹಿಂಗ್ಯಾಗಳ ಕಳೆಬರೆ ಸಿಕ್ಕಿತ್ತು. ಇದನ್ನು ಜಗಜ್ಜಾಹೀರುಗೊಳಿಸಿದ್ದರು. 

ಜಗತ್ತಿನೆಲ್ಲೆಡೆ ‘ಮಾಧ್ಯಮ ಸ್ವಾತಂತ್ರ್ಯ’ದ ಹರಣ ನಡೆಯುತ್ತಿದೆ ಎಂಬ ಹುಯಿಲೆದ್ದಿರುವ ಹೊತ್ತಲ್ಲೇ ಮಯನ್ಮಾರ್‌ನಲ್ಲಿ ರಾಯ್ಟರ್ಸ್‌ ಸುದ್ದಿ ಸಂಸ್ಥೆಗೆ ಸೇರಿದ ಇಬ್ಬರು ಪತ್ರಕರ್ತರು 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ತನಿಖಾ ವರದಿ ಹೊರತರುವ ವೇಳೆ ಅಲ್ಲಿನ ಗೌಪ್ಯತೆಯ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇಲೆ ಇವರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಸಹಜವಾಗಿಯೇ ಈ ಜೈಲು ಶಿಕ್ಷೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ವಿವಾದವೆಬ್ಬಿಸಿದೆ.

ಪತ್ರಕರ್ತರಾದ ವಾ ಲೋನ್ ಮತ್ತು ಕ್ಯಾವ್‌ ಸೋ ಊ ಜೈಲು ಶಿಕ್ಷೆಗೆ ಗುರಿಯಾದ ಪತ್ರಕರ್ತರಾಗಿದ್ದಾರೆ. ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಮತ್ತು ಬ್ರಿಟನ್‌ನ ರಾಯಭಾರಿಗಳು, ಇದು ‘ಮಯನ್ಮಾರ್‌ನ ಪ್ರಜಾಪ್ರಭುತ್ವದ ಪರಿವರ್ತನೆಯಲ್ಲಾದ ದೊಡ್ಡ ಹಿನ್ನಡೆ’ ಎಂದು ಕರೆದಿದ್ದಾರೆ. ಕೋರ್ಟ್‌ ಹಾಲ್‌ನಲ್ಲಿ ಉಪಸ್ಥಿತರಿದ್ದ ಅಮೆರಿಕಾ ರಾಯಭಾರಿ ಸ್ಕಾಟ್‌ ಮಾರ್ಷಿಯಲ್‌ “ವಾ ಲೋನ್ ಮತ್ತು ಕ್ಯಾವ್‌ ಸೋ ಊ ಮತ್ತವರ ಕುಟುಂದ ಬಗ್ಗೆ ನೋವಾಗುತ್ತದೆ, ಜತೆಗೆ ಮಯನ್ಮಾರ್‌ನ ಬಗ್ಗೆಯೂ ಬೇಸರವಾಗುತ್ತಿದೆ,” ಎಂದು ಹೇಳಿದ್ದಾರೆ. ಈ ಬೆಳವಣಿಗೆಯಿಂದ ಮಯನ್ಮಾರ್‌ನ ನ್ಯಾಯಾಂಗ ವ್ಯವಸ್ಥೆ ಮೇಲೆ ಅಲ್ಲಿನ ಜನರಿಗಿದ್ದ ನಂಬಿಕೆಯ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಬ್ರಿಟನ್‌ ಮತ್ತು ಯುರೋಪಿಯನ್‌ ಯೂನಿಯನ್‌ ಪರವಾಗಿ ಪ್ರತಿಕ್ರಿಯೆ ನೀಡಿರುವ ಬ್ರಿಟನ್‌ ರಾಯಭಾರಿ ಡಾನ್‌ ಚುಗ್, ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಜತೆಗೆ ಅಧ್ಯಕ್ಷ ಯೆ ಲ್ವಿನ್‌ ಆಡಳಿತವನ್ನು ಟೀಕಿಸಿದ್ದಾರೆ. ಇದೇ ರೀತಿ ಹಲವು ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಮತ್ತು ಗಣ್ಯರು ಪ್ರತಿಕ್ರಿಯೆ ನೀಡಿ ಮಯನ್ಮಾರ್ ಸರಕಾರದ ನಡೆಯ ಬಗ್ಗೆ ಕಿಡಿಕಾರಿದ್ದಾರೆ.

ಶಿಕ್ಷೆ ಹಿಂದೆ ಹತ್ಯಾಕಾಂಡದ ತನಿಖಾ ವರದಿ

ಹೀಗೊಂದು ಶಿಕ್ಷೆಗೆ ಪತ್ರಕರ್ತರು ಗುರಿಯಾಗಿದ್ದೇಕೆ ಎಂದು ಹುಡುಕುತ್ತಾ ಹೊರಟರೆ ಮಯನ್ಮಾರ್‌ ಸರಕಾರದ ಮೇಲೆ ಹಿಡಿತವಿಟ್ಟುಕೊಂಡ ಸೇನೆ ಮತ್ತು ನಿರಾಶ್ರಿತ ರೊಹಿಂಗ್ಯಾ ಮುಸ್ಲಿಮರು ಎದುರಾಗುತ್ತಾರೆ. ಇದೇ ರೊಹಿಂಗ್ಯಾಗಳ ಬಗೆಗಿನ ತನಿಖಾ ವರದಿ ರಾಯ್ಟರ್ಸ್‌ ಪತ್ರಕರ್ತರಿಬ್ಬರು ವರದಿ ಮಾಡಿದ್ದರು. ಈ ಕಾರಣಕ್ಕೆ ಅಲ್ಲಿನ ಸೇನೆ ಒತ್ತಡ ಹೇರಿ ಅವರನ್ನಿವತ್ತು ಕಂಬಿ ಹಿಂದೆ ನಿಲ್ಲಿಸಿದೆ.

ಮಯನ್ಮಾರ್‌ನಲ್ಲಿ ನಡೆಯುತ್ತಿರುವ ರೊಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯದ ಬಗ್ಗೆ ರಾಯ್ಟರ್ಸ್‌ ಪತ್ರಕರ್ತರು 2017ರ ಸೆಪ್ಟೆಂಬರ್‌ನಲ್ಲಿ ತನಿಖಾ ವರದಿ ತಯಾರಿಸುತ್ತಿದ್ದರು. ಇಲ್ಲಿನ ರಖಿನೆ ರಾಜ್ಯದ ಇನ್‌ ದಿನ್‌ ಗ್ರಾಮದಲ್ಲಿ ರೊಹಿಂಗ್ಯಾ ನಿರಾಶ್ರಿತರ ಮೇಲೆ ಸೈನಿಕರು ಮತ್ತು ಪೊಲೀಸರಿಂದ ನಡೆದ ದೌರ್ಜನ್ಯ ಮತ್ತು 10 ರೊಹಿಂಗ್ಯಾಗಳ ಸಾವಿನ ಬಗೆಗಿನ ತನಿಖೆ ಇದಾಗಿತ್ತು.

ಸೆಪ್ಟೆಂಬರ್‌ 2ರಂದು ಕೊಲೆ ಮಾಡುವ ಮೊದಲು ತೆಗೆದಿದ್ದ 10 ಜನ ರೊಹಿಂಗ್ಯಾಗಳ ಚಿತ್ರ
ಸೆಪ್ಟೆಂಬರ್‌ 2ರಂದು ಕೊಲೆ ಮಾಡುವ ಮೊದಲು ತೆಗೆದಿದ್ದ 10 ಜನ ರೊಹಿಂಗ್ಯಾಗಳ ಚಿತ್ರ
/ಸ್ಕೈ ನ್ಯೂಸ್‌

ತನಿಖೆ ನಡೆಸುತ್ತಿದ್ದ ಪತ್ರಕರ್ತರಿಗೆ ಡಿಸೆಂಬರ್‌ನಲ್ಲಿ ಇಲ್ಲಿನ ಸ್ಮಶಾನದಲ್ಲಿ ಸಾವನ್ನಪ್ಪಿದ್ದ 10 ರೊಹಿಂಗ್ಯಾಗಳ ಕಳೆಬರೆ ಸಿಕ್ಕಿತ್ತು. ಇದನ್ನು ವಾ ಲೋನ್‌ ಮತ್ತು ಕ್ಯಾವ್‌ ಸೋ ಊ ಜಗಜ್ಜಾಹೀರುಗೊಳಿಸಿದ್ದರು. ಈ ಸಂದರ್ಭ ಪ್ರತಿಕ್ರಿಯೆ ನೀಡಿದ್ದ ಮಯನ್ಮಾರ್‌, ತಾನು ರೊಹಿಂಗ್ಯಾ ಬಂಡುಕೋರರ ವಿರುದ್ಧ ಕಾನೂನುಬದ್ಧ ಹಿಮ್ಮೆಟ್ಟಿಸುವ ಕಾರ್ಯಾಚರಣೆ ನಡೆಸಿದ್ದೇನೆ ಅಷ್ಟೇ. ಸಾವಿರಾರು ನಿರಾಶ್ರಿತರ ಮೇಲೆ ದೌರ್ಜನ್ಯ ನಡೆಸಿಲ್ಲ ಎಂದು ಹೇಳಿಕೊಂಡಿತ್ತು. ಅಷ್ಟೇ ಅಲ್ಲದೆ ಈ ತನಿಖಾ ವರದಿ ತಯಾರಿಸಿದ್ದ ಪತ್ರಕರ್ತರು ಅಧಿಕೃತ ಗೌಪ್ಯತಾ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಡಿಸೆಂಬರ್ 12ರಂದು ಬಂಧಿಸಿತ್ತು. ಪುರಾತನ ಕಾಲದ ಈ ಕಾಯ್ದೆ ಪ್ರಕಾರ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಮುಂದೆ ಬಂಧಿತರಾದ ಪತ್ರಕರ್ತರ ವಿರುದ್ಧ ಈ ಕಾಯ್ದೆಯಡಿಯಲ್ಲಿ ಪೊಲೀಸರು ಆರೋಪ ಪಟ್ಟಿ ದಾಖಲಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳು ಜಾಗತಿಕ ಸುದ್ದಿಯಾದ ನಂತರ 10 ಜನ ರೊಹಿಂಗ್ಯಾ ಮುಸ್ಲಿಮರ ಕೊಲೆಯಲ್ಲಿ ಸೇನೆ ಪಾಲ್ಗೊಂಡಿರುವುದನ್ನು ಅಲ್ಲಿನ ಸೇನಾ ಕಮಾಂಡರ್‌ ಒಪ್ಪಿಕೊಂಡಿದ್ದರು. ‘ರೊಹಿಂಗ್ಯಾ ಬಂಡುಕೋರರು ಎನ್ನುವ ಅನುಮಾನದ ಮೇಲೆ 10 ಜನರನ್ನು ಸೆಪ್ಟೆಂಬರ್ 2, 2017ರಂದು ಕೊಂದಿರುವುದಾಗಿ ಗ್ರಾಮಸ್ಥರು ಮತ್ತು ಸೈನಿಕರು ಒಪ್ಪಿಕೊಂಡಿದ್ದಾರೆ’ ಎಂದು 2018ರ ಜನವರಿ 12ರಂದು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಅವರು ತಪ್ಪೊಪ್ಪಿಕೊಂಡಿದ್ದರು.

ಹೀಗಿದ್ದೂ ಪತ್ರಕರ್ತರ ಜೈಲುವಾಸ ಮುಂದುವರಿದಿತ್ತು. ಇದರ ನಡುವೆಯೇ ಸುದೀರ್ಘ ವಿಚಾರಣೆ ನಡೆದು ಇಬ್ಬರೂ ಪತ್ರಕರ್ತರಿಗೆ ಜೈಲು ಶಿಕ್ಷೆ ಘೋಷಣೆಯಾಗಿದೆ. ತಮಗೆ ಶಿಕ್ಷೆ ಘೋಷಣೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ವಾ ಲೋನ್‌, ಇದು ‘ಅನ್ಯಾಯ’ ಮತ್ತು ‘ಏಕಪಕ್ಷೀಯ ತೀರ್ಪು’ ಎಂದು ಕಿಡಿಕಾರಿದ್ದಾರೆ. ಈ ತೀರ್ಪು ಮಯನ್ಮಾರ್‌ ಪ್ರಜಾಪ್ರಭುತ್ವ ಮತ್ತು ಮಾಧ್ಯಮ ಸ್ವಾತಂತ್ರ್ಯಕ್ಕೆ ನೇರ ಎಚ್ಚರಿಕೆ ನೀಡುವಂತಿದೆ ಎಂದು ಅವರು ಬಣ್ಣಿಸಿದ್ದಾರೆ.

ನ್ಯಾಯಾಲಯದ ಮೆಟ್ಟಿಲುಗಳ ಮೇಲೆ ನಿಂತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಾ ಲೋನ್‌, “ನಾವು ಇದನ್ನು ಸ್ಥಿರತೆಯಿಂದ ಮತ್ತು ಧೈರ್ಯದಿಂದ ಎದುರಿಸುತ್ತೇವೆ,” ಎಂದು ಹೇಳಿದ್ದಾರೆ. ನಾವು ಯಾವುದೇ ತಪ್ಪನ್ನು ಮಾಡಿಲ್ಲ ಮತ್ತು ನಾವು ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆ ಎಂದು ಕ್ಯಾವ್‌ ಸೋ ಊ ಹೇಳಿದ್ದಾರೆ. “ನಾನು ಸರಕಾರಕ್ಕೆ ಹೇಳಬಯಸುವುದೇನೆಂದರೆ ನೀವು ನಮ್ಮನ್ನು ಜೈಲಿಗೆ ತಳ್ಳಬಹುದು. ಆದರೆ ಜನರ ಕಣ್ಣು ಮತ್ತು ಕಿವಿಯನ್ನು ಮುಚ್ಚಲು ಸಾಧ್ಯವಿಲ್ಲ,” ಎಂದವರು ಗುಡುಗಿದ್ದಾರೆ.

ಶಾಂತಿ ದೂತೆ ಸೂಕಿ ನಾಡಲ್ಲಿ ಹೀಗೊಂದು ಪ್ರಹಸನ

ವಿಚಿತ್ರವೆಂದರೆ ಇಂಥಹ ಘಟನೆಗಳು ನಡೆಯುತ್ತಿರುವುದು ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಆಂಗ್‌ ಸಾನ್‌ ಸೂಕಿಯವರ ಮಯನ್ಮಾರ್‌ ದೇಶದಲ್ಲಿ. ಮತ್ತು ಅಲ್ಲಿ ಅವರದೇ ಪಕ್ಷದ ಆಡಳಿತವಿದೆ. ಹಾಗೆ ನೋಡಿದರೆ ಆಕೆಯೇ ಅಧ್ಯಕ್ಷೆಯೂ ಆಗಬೇಕಾಗಿತ್ತು. ಆದರೆ ಕಾನೂನು ತೊಡಕುಗಳಿಂದ ಅಧ್ಯಕ್ಷ ಪದವಿಗೇರಲು ಸಾಧ್ಯವಾಗದೆ ತನಗೆ ನಿಷ್ಠರಾದ ವ್ಯಕ್ತಿಯನ್ನು ಅಧ್ಯಕ್ಷ ಪದವಿಯಲ್ಲಿ ಆಕೆ ಕೂರಿಸಿದ್ದರು.

ಮಯನ್ಮಾರ್‌ನ ಸೋಕಾಲ್ಡ್‌ ಶಾಂತಿ ದೂತೆ ಆಂಗ್‌ ಸಾನ್‌ ಸೂ ಕಿ
ಮಯನ್ಮಾರ್‌ನ ಸೋಕಾಲ್ಡ್‌ ಶಾಂತಿ ದೂತೆ ಆಂಗ್‌ ಸಾನ್‌ ಸೂ ಕಿ
/ಟೈಮ್‌

ಹೀಗಿದ್ದೂ ಇದೇ ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ರೊಹಿಂಗ್ಯಾ ಮುಸ್ಲಿಮರ ಸಮಸ್ಯೆ ತಲೆದೋರಿದೆ. ಸುಮಾರು 6.55 ಲಕ್ಷ ರೊಹಿಂಗ್ಯಾ ಮುಸ್ಲಿಮರು ಉಳಿಯಲೊಂದು ಭೂಮಿ, ತಲೆಮೇಲೆಂದು ಸೂರಿಲ್ಲದೆ ನಿರಾಶ್ರಿತರಾಗಿ ದಿನ ತಳ್ಳುತ್ತಿದ್ದಾರೆ. ಇದೀಗ ಇದೇ ರೊಹಿಂಗ್ಯಾ ಮುಸ್ಲಿಮರ ಮೇಲೆ ಅಲ್ಲಿನ ಸರಕಾರವೇ ನಡೆಸಿದ ದಾಳಿಯನ್ನು ವರದಿ ಮಾಡಿದ ಪತ್ರಕರ್ತರನ್ನೇ ಜೈಲಿಗೆ ತಳ್ಳಲಾಗಿದೆ.

“ಯಾವುದೇ ಪತ್ರಕರ್ತ ಮತ್ತು ವ್ಯಕ್ತಿ ಮಯನ್ಮಾರ್‌ ಸೇನೆ ಮತ್ತು ಸರಕಾರ ಅಲ್ಲಿನ ರೊಹಿಂಗ್ಯಾ ಮುಸ್ಲಿಮರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳನ್ನು ಬಯಲಿಗೆಳೆದರೆ ಅವರು ಮಯನ್ಮಾರ್‌ ಸರಕಾರದಿಂದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನುವುದು ಗೌಪ್ಯವಾಗೇನೂ ಉಳಿದಿಲ್ಲ,” ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಸಲಹೆಗಾರ ಇಕ್ಬಾಲ್‌ ಸೋಬನ್‌ ಚೌಧರಿ ಹೇಳಿದ್ದಾರೆ.

ಅವರ ಮಾತಿನಂತೆ ರೊಹಿಂಗ್ಯಾ ಜನರ ಮೇಲಿನ ದೌರ್ಜನ್ಯ ಮತ್ತು ಪತ್ರಕರ್ತರ ಬಂಧನವನ್ನು ಕಂಡೂ ಕಾಣದಂತೆ ಆಂಗ್‌ ಸಾನ್‌ ಸೂಕಿ ಕಣ್ಣುಮುಚ್ಚಿ ಕುಳಿತಿದ್ದಾರೆ. ಅದರಲ್ಲೂ ಪತ್ರಕರ್ತರ ಪರ ಹ್ಯುಮನ್‌ ರೈಟ್ಸ್‌ ವಾಚ್, ವಿಶ್ವಸಂಸ್ಥೆ, ಅಮ್ನೆಸ್ಟಿ ಇಂಟರ್ನ್ಯಾಷನಲ್‌, ಪತ್ರಕರ್ತರ ರಕ್ಷಣಾ ಸಮಿತಿ ಸೇರಿದಂತೆ ಹಲವು ದೇಶಗಳು ಧ್ವನಿ ಎತ್ತಿಯೂ ಶಿಕ್ಷೆ ನೀಡಿರುವುದು ಅಲ್ಲಿನ ಮಾಧ್ಯಮ ಸ್ವಾತಂತ್ರ್ಯಕ್ಕೆ ಒದಗಿರುವ ಅಪಾಯವನ್ನು ಎತ್ತಿ ತೋರಿಸುತ್ತಿದೆ. ಜತೆಗೆ ಇದು ಸೂಕಿಯ ‘ಶಾಂತಿ ದೂತೆ’ ಬಿರುದಿಗೆ ಅಪವಾದದಂತಿದೆ.