samachara
www.samachara.com
‘ಕೃಷ್ಣ ಕೃಷ್ಣಾ...’: ಸಾಂಸ್ಕೃತಿಕ ರಾಯಭಾರಿ ಇಲ್ಲದೆ ಉಡುಪಿಯಲ್ಲೇ ಕಳೆಗುಂದಿದ   ಜನ್ಮಾಷ್ಠಮಿ
COVER STORY

‘ಕೃಷ್ಣ ಕೃಷ್ಣಾ...’: ಸಾಂಸ್ಕೃತಿಕ ರಾಯಭಾರಿ ಇಲ್ಲದೆ ಉಡುಪಿಯಲ್ಲೇ ಕಳೆಗುಂದಿದ ಜನ್ಮಾಷ್ಠಮಿ

ಇವತ್ತು ಇಡೀ ಉಡುಪಿಯಲ್ಲಿ ಅಷ್ಠಮಿಯ ಸಡಗರ ಮನೆ ಮಾಡಿದ್ದರೆ, ಶೀರೂರು ಮಠದಲ್ಲಿ ಸೂತಕದ ಛಾಯೆ ಆವರಿಸಿದೆ. ಇದಕ್ಕೆ ಕಾರಣ ರಥಬೀದಿಯ ಸಾಂಸ್ಕೃತಿಕ ರಾಯಬಾರಿ ಎನಿಸಿದ್ದ ಶೀರೂರು ಸ್ವಾಮೀಜಿಯ ಅಗಲಿಕೆ. 

  • ರಾಮಣ್ಣ ಉಡುಪಿ

ಉಡುಪಿಯಲ್ಲೀಗ ಶ್ರೀಕೃಷ್ಣ ಜನ್ಮಾಷ್ಠಮಿಯ ಸಡಗರ; ಭಕ್ತರ ದಂಡು ಕೃಷ್ಣಮಠದತ್ತ ಹರಿದು ಬಂದಿದೆ. ಎರಡು ದಿನಗಳಿಂದಲೇ ಕೃಷ್ಣಮಠ ಮತ್ತು ರಥಬೀದಿಯಲ್ಲಿ ಹಬ್ಬದ ಕಳೆ ಪಡಿಮೂಡಿದೆ. ಉತ್ಸವ ಪ್ರಯುಕ್ತ ಕೃಷ್ಣ ಮಠವನ್ನು ಬಗೆಬಗೆಯ ಹೂವಿನಿಂದ ಅಲಂಕಾರಗೊಳಿಸಲಾಗಿದೆ. ಒಟ್ಟಾರೆ ಹಬ್ಬದ ವಾತಾವರಣ ನಿರ್ಮಿಸಲಾಗಿದೆ. ಪರ್ಯಾಯ ಪಲಿಮಾರು ಶ್ರೀಗಳು ಕೃಷ್ಣನಿಗೆ ಮಹಾಪೂಜೆ ನೆರವೇರಿಸಿದ್ದಾರೆ.

ಏನೇ ಸಂಭ್ರಮ ಇದ್ದರೂ, ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಠಮಿ ಈ ಹಿಂದಿನಂತಿಲ್ಲ. ಒಂದು ಪ್ರಮುಖ ಕಾರಣಕ್ಕಾಗಿ ಹಬ್ಬ ಕಳೆಗುಂದಿದೆ. ಅದು ಶೀರೂರು ಶ್ರೀಗಳ ಸಾವು. ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಜುಲೈ 19ರಂದು ಅಸಹಜ ಸಾವನ್ನಪ್ಪಿದರು. ಹೀಗಾಗಿ ಶೀರೂರು ಮಠದ ಭಕ್ತರಲ್ಲಿ ಹಬ್ಬದ ಸಂಭ್ರಮ ಅಷ್ಟೊಂದಾಗಿ ಕಾಣಿಸುತ್ತಿಲ್ಲ.

ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ಬಿಟ್ಟರೆ, ಅತಿ ಸಂಭ್ರಮದಿಂದ ಆಚರಿಸಲ್ಪಡುವ ಹಬ್ಬ ಇದ್ದರೆ ಅದು ಕೃಷ್ಣ ಜನ್ಮಾಷ್ಠಮಿ. ಸಾಮಾನ್ಯವಾಗಿ ಅಷ್ಠಮಿಯ ನೇತೃತ್ವ ವಹಿಸುವುದು ಪರ್ಯಾಯ ಶ್ರೀಗಳು. ಅಷ್ಠಮಿ ಹೇಗೆ ನಡೆಯಬೇಕು, ಯಾವೆಲ್ಲ ಕಾರ್ಯಕ್ರಮಗಳಿರಬೇಕು, ಎಷ್ಟು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಬೇಕು, ಯಾವ್ಯಾವ ಕಲಾತಂಡಗಳನ್ನು ಕರೆಸಬೇಕು…ಹೀಗೆ ನಾನಾ ಬಗೆಯ ಪೂರ್ವತಯಾರಿಗಳನ್ನು ಪರ್ಯಾಯ ಸ್ವಾಮಿಗಳೇ ನೋಡಿಕೊಳ್ಳುತ್ತಾರೆ.

ಆದರೆ ಶೀರೂರು ಶ್ರೀಗಳು ಬದುಕಿದ್ದಾಗ ಅಷ್ಠಮಿಯ ಕತೆಯೇ ಬೇರೆ ಇರುತ್ತಿತ್ತು. ಪರ್ಯಾಯ ಶ್ರೀಗಳು ಯಾರೇ ಇರಲಿ; ಅಷ್ಠಮಿಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಸಾಂಸ್ಕೃತಿಕ ವೈಭವವನ್ನು ಅವರು ಅನಾವರಣಗೊಳಿಸುತ್ತಿದ್ದ ರೀತಿಯನ್ನು ಭಕ್ತರು ಮರೆಯುವಂತೆಯೇ ಇಲ್ಲ.

ಅಷ್ಠಮಿ ಬಂತು ಅಂದರೆ ಸಾಕು, ತಾವೇ ಮುಂದೆ ನಿಂತು ಸಿದ್ಧತೆಗಳನ್ನು ಮಾಡುತ್ತಿದ್ದರು. ಅವರ ಜೊತೆ ಯುವಕರದೊಂದು ಪಡೆಯೇ ಇರುತ್ತಿತ್ತು. ರಥಬೀದಿ, ರಾಜಾಂಗಣ, ಕೃಷ್ಣಮಠ ಮತ್ತು ಆಸುಪಾಸಿನಲ್ಲಿ ಅಷ್ಠಮಿ ಸಂಭ್ರಮ ನಡೆಯುತ್ತಿದ್ದರೆ, ಶೀರೂರು ಮಠ ವಿಶೇಷ ಕಾರಣಕ್ಕೆ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಿತ್ತು. ಇದಕ್ಕೆ ಕಾರಣ ,ಶೀರೂರು ಶ್ರೀಗಳ ಕಲಾಪ್ರೇಮ.

ಹುಲಿವೇಷಧಾರಿಗಳ ಕುಣಿತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳು, ಹುಲಿವೇಷದ ತಂಡಗಳಿಗೆ ಸಾವಿರಾರು ರೂಪಾಯಿಯ ನೋಟಿನ ಮಾಲೆಯನ್ನು ಪ್ರತಿ ವರ್ಷ ಕೃಷ್ಣಾಷ್ಟಮಿಯಂದು ತಯಾರಿಸುತ್ತಿದ್ದರು. ಹುಲಿವೇಷಧಾರಿಗಳಿಗಾಗಿಯೇ ಲಕ್ಷಾಂತರ ರೂಗಳ ನೋಟಿನ ಮಾಲೆಗಳನ್ನು ಶೀರೂರು ಮಠದಲ್ಲಿ ಸಿದ್ಧಗೊಳಿಸಲಾಗುತ್ತಿತ್ತು. ಹೀಗಾಗಿ ಹುಲಿವೇಷಧಾರಿಗಳಿಗೂ ಈ ಸಲ ಅಗಲಿದ ಸ್ವಾಮೀಜಿಯನ್ನು ಮಿಸ್ ಮಾಡುತ್ತಿದ್ದಾರೆ.

ಉಡುಪಿಯಲ್ಲಿ ತಲೆ ಎತ್ತಿರುವ ಫ್ಲೆಕ್ಸ್‌ಗಳು ಅಗಲಿದ ಶೀರೂರು ಸ್ವಾಮಿಯನ್ನು ಮರೆಯುವುದು ಹೇಗೆ ಎಂದು ಪ್ರಶ್ನಿಸುತ್ತಿವೆ. 
ಉಡುಪಿಯಲ್ಲಿ ತಲೆ ಎತ್ತಿರುವ ಫ್ಲೆಕ್ಸ್‌ಗಳು ಅಗಲಿದ ಶೀರೂರು ಸ್ವಾಮಿಯನ್ನು ಮರೆಯುವುದು ಹೇಗೆ ಎಂದು ಪ್ರಶ್ನಿಸುತ್ತಿವೆ. 
/ಸಮಾಚಾರ. 
ಶೀರೂರು ಶ್ರೀಗಳ ಅನುಪಸ್ಥಿತಿ ದೊಡ್ಡ ನಷ್ಟ. ಇವತ್ತು ಶೀರೂರು ಮಠದ ಮುಂಭಾಗ ಬಿಕೋ ಅನ್ನುತ್ತಿರುವ ದೃಶ್ಯವೇ ಅದಕ್ಕೆ ಸಾಕ್ಷಿ. ಕಲಾವಿದರು ,ಹುಲಿವೇಷಧಾರಿಗಳಿಗೆ ಅವರು ತುಂಬ ಪ್ರೋತ್ಸಾಹ ನೀಡುತ್ತಿದ್ದರು. ಅವರು ಈ ಬಾರಿ ಇಲ್ಲದೇ ಇರುವುದು ವೈಯಕ್ತಿಕವಾಗಿಯೂ, ಅವರ ಭಕ್ತರಿಗೂ ದೊಡ್ಡ ನಷ್ಟವಾಗಿದೆ.
ನಿತ್ಯಾನಂದ ಒಳಕಾಡು, ಸಾಮಾಜಿಕ ಕಾರ್ಯಕರ್ತ, ಶೀರೂರು ಶ್ರೀ ಭಕ್ತ. 

ಇನ್ನು, ಕಲಾತಂಡಗಳನ್ನು ಕರೆಸಿ ಕಾರ್ಯಕ್ರಮ ಕೊಡಿಸುವುದರಲ್ಲೂ ಶೀರೂರು ನಿಸ್ಸೀಮರಾಗಿದ್ದರು. ಸ್ವತಃ ಕಲಾಪ್ರೇಮಿಯಾಗಿದ್ದ ಅವರು ಕಲಾವಿದರುಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ, ಅವರನ್ನು ಗೌರವಿಸುತ್ತಿದ್ದ ರೀತಿಯನ್ನು ಮರೆಯುವಂತೆಯೇ ಇಲ್ಲ. ಅಂತಾರಾಷ್ಟ್ರೀಯ ಖ್ಯಾತಿಯ ಡ್ರಮ್ಮರ್ ಶಿವಮಣಿ ಇದಕ್ಕೊಂದು ಉತ್ತಮ ಉದಾಹರಣೆ. ಅಷ್ಠಮಿ ಮತ್ತು ತಮ್ಮ ಹುಟ್ಟುಹಬ್ಬದ ದಿವಸ ಶಿವಮಣಿಯನ್ನು ಕರೆಸುತ್ತಿದ್ದ ಶ್ರೀಗಳು ಅವರ ಜೊತೆ ತಾವೂ ಕೂಡ ಡ್ರಮ್ಸ್ ಬಾರಿಸಿ ಸಂಭ್ರಮಿಸುತ್ತಿದ್ದರು.

2012 ರಲ್ಲಿ ಶೀರೂರು ಶ್ರೀ ನೇತೃತ್ವದಲ್ಲಿ ಅಷ್ಠಮಿ ನಡೆದಾಗ ನಡೆದ ಸ್ಪರ್ಧೆಗಳನ್ನ ಪಟ್ಟಿಯನ್ನೊಮ್ಮೆ ಗಮನಿಸಬೇಕು; ಮಾನವ ಗೋಪುರದ ಮೊಸರುಕುಡಿಕೆ, ಉಂಡೆ ತಿನ್ನುವ ಸ್ಪರ್ಧೆ, ಬಾಳೆಹಣ್ಣು ತಿನ್ನುವ ಸ್ಪರ್ಧೆ, ಸೇಬು ತಿನ್ನುವ ಸ್ಪರ್ಧೆ, ಕಣ್ಣಿಗೆ ಬಟ್ಟೆಕಟ್ಟಿ ಮೊಸರುಕುಡಿಕೆ ಒಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ಗೋಣಿ ಚೀಲ ಓಟದ ಸ್ಪರ್ಧೆ, ಹುಲಿವೇಷ ಕುಣಿತ, ಜಾನಪದ ವೇಷ, ಪೌರಾಣಿಕ ವೇಷ, ಹೀಗೆ ಶೀರೂರು ಶ್ರೀಗಳು ಕೃಷ್ಣದ ಜನ್ಮದಿನಕ್ಕೆ ಹೊಸ ಮೆರಗು ನೀಡಿದ್ದರು.

ಪರ್ಯಾಯ ಅಷ್ಠಮಿ:

ಈಗೊಂದು ಐದಾರು ವರ್ಷಗಳ ಕೆಳಗೆ ಶೀರೂರು ಶ್ರೀಗಳು ತಾವೇ ಪರ್ಯಾಯ ಅಷ್ಠಮಿ ಹಬ್ಬ ಮಾಡಿ ವಿವಾದಕ್ಕೆ ಕಾರಣವಾಗಿದ್ದರು. ನನಗೆ ಕೃಷ್ಣ ಕನಸಿನಲ್ಲಿ ಬಂದು ಅಷ್ಠಮಿಯನ್ನು ನೀವೇ ನಡೆಸುವಂತೆ ಹೇಳಿದ್ದಾನೆ. ಹೀಗಾಗಿ ನಿಮ್ಮ ಸಹಕಾರ ಬೇಕು ಎಂದು ಶ್ರೀಗಳು ಮಾಧ್ಯಮದವರ ಜೊತೆ ಬೇಡಿಕೊಂಡಿದ್ದರು. ಮರುದಿನ ಅಷ್ಠಮಿ ಸಡಗರ ಮನೆಮಾಡಿತ್ತು.

ತಮ್ಮದೇ ಪುಟ್ಟ ಬೆಳ್ಳಿ ರಥದ ಮೂಲಕ ಶೀರೂರು ಶ್ರೀಗಳು ರಥಬೀದಿ ಪ್ರದಕ್ಷಿಣೆ ಹಾಕಿದ್ದರು. ಸಾವಿರಾರು ಭಕ್ತರ ಸಮ್ಮುಖ ಇದು ನಡೆದಾಗ ಸಹಜವಾಗಿಯೇ ಎಲ್ಲರಲ್ಲೂ ಆತಂಕ. ಸಾಕಷ್ಟು ಪೊಲೀಸರನ್ನೂ ಭದ್ರತೆಗಾಗಿ ನಿಯೋಜಿಸಲಾಗಿತ್ತು .ಇಡೀ ಅಷ್ಠಮಠದ ಏಳು ಮಂದಿ ಸ್ವಾಮೀಜಿಗಳು ಒಟ್ಟಾಗಿ ಅಷ್ಠಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಶೀರೂರು ಶ್ರೀಗಳು ತಮ್ಮದೇ ಶೈಲಿಯಲ್ಲಿ, ರೆಬೆಲ್ ಆಗಿ ಅಷ್ಠಮಿ ಆಚರಿಸಿದ ಉದಾಹರಣೆಯೂ ಇದೆ.

ಮುಂದಿನ ವರ್ಷಗಳಲ್ಲಿ ಶೀರೂರು ಶ್ರೀ ಹಾಗೆ ಮಾಡಿರಲಿಲ್ಲ; ಆದರೆ ತಮ್ಮ ಇಚ್ಛೆಯಂತೆ ಕಲಾತಂಡಗಳನ್ನು ಕರೆಸಿ, ಹುಲಿವೇಷಧಾರಿಗಳಿಗೆ ಆರ್ಥಿಕ ಸಹಾಯ ಮಾಡಿ, ಕಲಾವಿದರನ್ನು ಖುಷಿಪಡಿಸುತ್ತಿದ್ದರು.

ಆದರೆ ಇವತ್ತು ಇಡೀ ಉಡುಪಿಯಲ್ಲಿ ಅಷ್ಠಮಿಯ ಸಡಗರ ಮನೆ ಮಾಡಿದ್ದರೆ ,ಶೀರೂರು ಮಠದಲ್ಲಿ ಸೂತಕದ ಛಾಯೆ ಆವರಿಸಿದೆ. ಇದಕ್ಕೆ ಕಾರಣ ರಥಬೀದಿಯ ಸಾಂಸ್ಕೃತಿಕ ರಾಯಭಾರಿ ಎನಿಸಿದ್ದ ಶೀರೂರು ಸ್ವಾಮೀಜಿಯ ಅಗಲಿಕೆ. ಅಷ್ಟರಮಟ್ಟಿಗೆ ಭಕ್ತರು ಶಿರೂರು ಶ್ರೀಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಈ ನಡುವೆ, “ಈ ಬಾರಿ ಕೊಡಗಿನಲ್ಲಿ ನೆರೆ ಬಂದು ತುಂಬ ಜನ ಸಂಕಷ್ಟದಲ್ಲಿದ್ದಾರೆ. ಅವರ ಪೈಕಿ ಮಠದ ಭಕ್ತರೂ ಇದ್ದಾರೆ. ಹೀಗಾಗಿ ಈ ಬಾರಿ ಸರಳವಾಗಿ ಅಷ್ಠಮಿ ಆಚರಿಸುತ್ತಿದ್ದೇವೆ. ಮಠದ ವತಿಯಿಂದ ಸಂತ್ರಸ್ತರಿಗೆ ಸಹಾಯ ಮಾಡುತ್ತೇವೆ,” ಎಂದು ಪರ್ಯಾಯ ಪಲಿಮಾರು ಮಠಾಧೀಶರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಳೆಗುಂದಿದ ಉಡುಪಿಯ ಕೃಷ್ಣ ಜನ್ಮಾಷ್ಠಮಿಗೆ ಸಾಮಾಜಿಕ ಆಯಾಮವನ್ನೂ ನೀಡುವ ಪ್ರಯತ್ನ ಮಾಡಿದ್ದಾರೆ.