samachara
www.samachara.com
‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 5: ಬಿಜೆಪಿಯಾಚೆಗಿನ ಹಿತೈಷಿಗಳು & ಮಾನನಷ್ಟ ಮೊಕದ್ದಮೆ ಎಂಬ ಅಸ್ತ್ರ
COVER STORY

‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 5: ಬಿಜೆಪಿಯಾಚೆಗಿನ ಹಿತೈಷಿಗಳು & ಮಾನನಷ್ಟ ಮೊಕದ್ದಮೆ ಎಂಬ ಅಸ್ತ್ರ

ಕೇಂದ್ರ, ರಾಜ್ಯ ಎರಡೂ ಕಡೆಗಳಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯಿಂದ ‘ಸನಾತನ ಸಂಸ್ಥೆ’ಯನ್ನು ನಿಷೇಧಿಸಬೇಕು ಎಂದು ಬಯಸಲು ಸಾಧ್ಯವಿಲ್ಲ. ಹಾಗಂಥ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರದ ಅವಧಿಯಲ್ಲೂ ವ್ಯತ್ಯಾಸ ಏನಿರಲಿಲ್ಲ. 

Team Samachara

ಮೂಲ: ಧೀರೇಂದ್ರ ಕೆ. ಝಾ / ಕನ್ನಡಕ್ಕೆ: ಎನ್. ಸಚ್ಚಿದಾನಂದ.

ಸನಾತನ ಸಂಸ್ಥೆ ಮತ್ತು ಕೊಲೆಗಡುಕರಿಗಿದ್ದ ಸಂಬಂಧ ಜಗತ್ತನ್ನೇ ಬೆಚ್ಚಿ ಬೀಳಿಸಿತಾದರೂ ಸಂಸ್ಥೆ ಕ್ಷಮಾಪಣೆ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ‘ಧಾಭೋಲ್ಕರ್‌ ಮತ್ತು ಪನ್ಸಾರೆ ಜತೆ ನಮ್ಮ ವಿರೋಧವಿದ್ದುದು ಸೈದ್ಧಾಂತಿಕ ಮಟ್ಟದಲ್ಲಿ ಮಾತ್ರ,’ ಎನ್ನುತ್ತಾರೆ ಸಂಸ್ಥೆಯ ವಕ್ತಾರ ಅಭಯ್‌ ವರ್ತಕ್‌. 2015ರ ಅಕ್ಟೋಬರ್‌ನಲ್ಲಿ ಸಂದರ್ಶನವೊಂದರಲ್ಲಿ ಅವರು ಈ ಮಾತನ್ನು ಹೇಳಿದ್ದರು. “ನಮ್ಮ ಸಿದ್ದಾಂತದಲ್ಲಿ ಯಾವುದೇ ಹಿಂಸೆ ಮತ್ತು ತೀವ್ರವಾದಿ ಮನಸ್ಥಿತಿಗೆ ಜಾಗವಿರಲೇ ಇಲ್ಲ. ಯಾವುದೇ ರೋಗ ಲಕ್ಷಣಗಳಿಗೆ ಔಷಧ ನೀಡುವ ಬದಲು ಅದನ್ನು ನಾವು ಬೇರಿನ ಮಟ್ಟದಲ್ಲೇ ನಿರ್ಮೂಲನ ಮಾಡುವುದರಲ್ಲಿ ನಂಬಿಕೆ ಹೊಂದಿದ್ದೆವು,’ ಎನ್ನುವುದು ಅವರ ಸಮಜಾಯಿಷಿಯಾಗಿತ್ತು.

ತನ್ನ ವಿರೋಧಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದರಲ್ಲಿ ಸಂಸ್ಥೆ ಉನ್ಮಾದದ ನಿರಂತರತೆಯನ್ನು ಕಾಯ್ದುಕೊಂಡು ಬಂದಿತ್ತು. ಹಿಂದೂ ವಿಧಿಜ್ಞಾ ಪರಿಷತ್‌ (ಎಚ್‌ವಿಪಿ) ಹೆಸರಿನಲ್ಲಿ ಒಟ್ಟಾದ ಹಿರಿ ಕಿರಿ ವಕೀಲರೆಲ್ಲಾ ಅಠಾವಳೆಯ ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಕೈಜೋಡಿಸಿದಂತೆ ಕಾಣುತ್ತದೆ, ‘ಬೇರೆ ಬೇರೆ ಬಾಂಬ್‌ ಸ್ಫೋಟ ಮತ್ತು ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡ ಸಾಧಕರನ್ನು ರಕ್ಷಿಸಲು ಈ ವಕೀಲರು ಕಠಿಣ ಶ್ರಮ ವಹಿಸುತ್ತಾರೆ. ಅಲ್ಲದೆ ದೊಡ್ಡ ಸಂಖ್ಯೆಯ ಮಾನನಷ್ಟ ಮೊಕದ್ದಮೆಗಳ ಮೂಲಕ ಪತ್ರಕರ್ತರು ಮತ್ತು ಟೀಕಾಕಾರರಿಗೆ ಇವರು ಭಯ ಹುಟ್ಟಿಸುತ್ತಾರೆ,” ಎನ್ನುವ ವಿವರಣೆಯನ್ನು ಮುಂದಿಡುತ್ತಾರೆ ವಿಜಯ್‌ ನಾಮ್‌ದೇವ್‌ ರೋಕಡೆ. ಸಂಸ್ಥೆಯ ಮೇಲೆ ನಿಷೇಧ ಹೇರಬೇಕು ಎಂದು ಇವರು 2011ರಲ್ಲಿ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆ ಇನ್ನೂ ನಡೆಯುತ್ತಿದೆ.

ಇವರು ಹೇಳಿದಂತೆ ಕೊಲೆಯಾಗುವುದಕ್ಕೂ ಮೊದಲು ಧಾಬೋಲ್ಕರ್‌ ಮತ್ತು ಪನ್ಸಾರೆ ತಮ್ಮ ವಿರುದ್ಧ ಸಂಸ್ಥೆ ಹೂಡಿದ ಹಲವಾರು ಮಾನನಷ್ಟ ಮೊಕದ್ದಮೆ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗಬೇಕಾಗಿ ಬಂದಿತ್ತು. ಧಾಬೋಲ್ಕರ್‌ ವಿರುದ್ಧ ಒಟ್ಟು 18 ಮಾನನಷ್ಟ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದರಲ್ಲಿ ಸಿವಿಲ್‌ ಮತ್ತು ಕ್ರಿಮಿನಲ್‌ ಎರಡೂ ರೀತಿಯ ಪ್ರಕರಣಗಳಿದ್ದವು.

‘ಅವರ ವಿರುದ್ದ ದಾಖಲಿಸಿದ ಯಾವುದೇ ಕ್ರಿಮಿನಲ್‌ ಕೇಸ್‌ಗಳಲ್ಲಿ ಅವರಿಗೆ ಶಿಕ್ಷೆಯಾಗಲಿಲ್ಲವಾದರೂ ಅವರು 2013ರ ಆಗಸ್ಟ್‌ನಲ್ಲಿ ಸಾಯುವಾಗ ಅವರ ವಿರುದ್ಧ ಇನ್ನೂ 6 ಸಿವಿಲ್‌ ಪ್ರಕರಣಗಳು ಬಾಕಿ ಉಳಿದಿದ್ದವು,’ ಎನ್ನುತ್ತಾರೆ ರಾಹುಲ್‌ ಥೋರಟ್‌. ಅವರು ಕೂಡ ಇಂಥಹದ್ದೇ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರ ಪ್ರಕಾರ ಸಂಸ್ಥೆಗೆ ಈ ಪ್ರಕರಣಗಳನ್ನು ಮುಂದುವರಿಸುವ ಬಗ್ಗೆ ಯಾವುದೇ ಆಸಕ್ತಿಯಿಲ್ಲ. ತಮ್ಮ ವಿರುದ್ಧ ಧೈರ್ಯವಾಗಿ ಮಾತನಾಡುವ ಮತ್ತು ಬರೆಯುವವರನ್ನು ಹೆದರಿಸಲಷ್ಟೇ ಈ ಕೇಸುಗಳನ್ನು ದಾಖಲಿಸಲಾಗುತ್ತಿತ್ತು. ‘ನನ್ನ ಬರವಣಿಗೆಗಳನ್ನು ಆಧರಿಸಿ ನನ್ನ ಮೇಲೆ ಅವರು 11 ಪ್ರಕರಣಗಳನ್ನು ದಾಖಲಿಸಿದ್ದು. ಕೆಲವು ಕೇಸುಗಳನ್ನು ನಾನು ಗೆದ್ದುಕೊಂಡಿದ್ದೇನೆ. ಇನ್ನೂ ಕೆಲವು ನಡೆಯುತ್ತಿವೆ. ಒಂದೇ ವಿಚಾರದ ಬಗ್ಗೆ ಕೆಲವೊಮ್ಮೆ ಅವರು ಕ್ರಿಮಿನಲ್‌ ಮತ್ತು ಸಿವಿಲ್‌ ಎರಡೂ ರೀತಿಯ ಪ್ರಕರಣಗಳನ್ನು ದಾಖಲಿಸುತ್ತಾರೆ.’ ಎನ್ನುತ್ತಾರೆ ಅವರು.

ಹಿಂದೂ ವಿಧಿಜ್ಞಾ ಪರಿಷತ್. 
ಹಿಂದೂ ವಿಧಿಜ್ಞಾ ಪರಿಷತ್. 

ಆರಂಭದಲ್ಲಿ ಅಠಾವಳೆ ಸುತ್ತ ವಕೀಲರ ದಂಡೇ ನೆರೆದಿರುತ್ತಿತ್ತು. ಇದರ ಮಧ್ಯೆ 2012ರಲ್ಲಿ ಇವರನ್ನೆಲ್ಲಾ ‘ಎಚ್‌ವಿಪಿ’ ಅಡಿಯಲ್ಲಿ ಸಂಘಟಿಸುವ ಕೆಲಸಕ್ಕೆ ಕೈ ಹಾಕಿದರು ಅವರು. ಸನಾತನ ಸಂಸ್ಥೆಯ ಅಂಗ ಸಂಸ್ಥೆ ‘ಹಿಂದೂ ಜನಜಾಗೃತಿ ಸಮಿತಿ’ ಸಹ ಸಂಸ್ಥೆಯ ರೂಪದಲ್ಲಿ ಬೆಳವಣಿಗೆ ಕಾಣಲು ಆರಂಭಿಸಿದ ಹೊತ್ತಲ್ಲೇ ಈ ಎಚ್‌ವಿಪಿ ರಚನೆ ಮಾಡಲಾಗಿತ್ತು. ಮತ್ತು ಇದರ ಮೊದಲ ವಾರ್ಷಿಕ ಸಭೆ ರಾಮನಾಥಿಯ ರಾಮನಾಥ ದೇವಸ್ಥಾನದ ಆವರಣದಲ್ಲಿ ನಡೆದಿತ್ತು. ‘ಗುರು (ಅಠಾವಳೆ) ವಿಗೆ ಕಾನೂನು ಸೇವೆ ನೀಡುವುದೇ ಅವರ ಸಾಧನೆಯ ಭಾಗವಾಗಿತ್ತು,’ ಎನ್ನುತ್ತಾರೆ ಒಂದು ಕಾಲದಲ್ಲಿ ಎಚ್‌ವಿಪಿ ಜತೆ ಗುರುತಿಸಿಕೊಂಡಿದ್ದ ವಕೀಲರೊಬ್ಬರು. “ಸಂಸ್ಥೆಯ ವಕೀಲರ ಸಾಧನೆಯನ್ನು ಗುರು ಲೆಕ್ಕ ಹಾಕುವ ಸಂದರ್ಭದಲ್ಲಿ ಅವರು ಕೋರ್ಟ್‌ ರೂಂನಲ್ಲಿ ನಡೆಸಿದ ಪ್ರಯತ್ನಗಳನ್ನು ಪರಿಗಣಿಸುತ್ತಿದ್ದರು. ಸಂಸ್ಥೆಯಲ್ಲಿ ಸಾಕಷ್ಟು ಜನರಿದ್ದಾರೆ. ಹೀಗಾಗಿ ಸಂಸ್ಥೆಗೆ ತನ್ನ ಕಾನೂನು ಅಗತ್ಯಗಳಿಗಾಗಿ ಹೊರಗೆ ನೋಡಬೇಕಾದ ಪರಿಸ್ಥಿತಿಯೇ ಇಲ್ಲ,” ಎನ್ನುತ್ತಾರೆ ಭಯದಲ್ಲಿ ತಮ್ಮ ಗುರುತನ್ನು ಮುಚ್ಚಿಡುವಂತೆ ಕೋರಿಕೊಂಡ ಮುಂಬೈ ಮೂಲದ ವಕೀಲರು.

27 ಸೆಪ್ಟೆಂಬರ್‌ 2017ರಲ್ಲಿ ‘ದಿ ಹಿಂದೂ’ವಿನಲ್ಲಿ ಬರಹವೊಂದು ಪ್ರಕಟವಾಗಿತ್ತು. ಇದರಲ್ಲಿ ತಮ್ಮ ವಿರೋಧಿಗಳು ಮತ್ತು ಟೀಕಾಕಾರ ಮೇಲೆ ದೌರ್ಜನ್ಯ ನಡೆಸಲು ಸಂಸ್ಥೆ ಹೇಗೆ ಮಾನನಷ್ಟ ಮೊಕದ್ದಮೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತದೆ ಎಂಬುದನ್ನು ವಿವರಿಸಲಾಗಿತ್ತು. ಈ ವರದಿ ಪ್ರಕಾರ ಮುಂಬೈ ಮತ್ತು ಪಂಜಿಮ್‌ ನ್ಯಾಯಾಲಯದಲ್ಲಿ ಸಂಸ್ಥೆಯ ರಾಶಿಗಟ್ಟಲೆ ಪ್ರಕರಣಗಳಿವೆ. ಇದಲ್ಲದೆ ಮಹಾರಾಷ್ಟ್ರ ಮತ್ತು ಗೋವಾದ ಇತರ ಪ್ರದೇಶಗಳಲ್ಲೂ ಸಂಸ್ಥೆಯ ಕಡೆಯಿಂದ ಹಲವಾರು ಕೇಸುಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಕರಣಗಳು ಪ್ರಕಾಶಕರು, ಪತ್ರಕರ್ತರು, ಸಂಪಾದಕರು ಮತ್ತು ಸಾಮಾಜಿಕ ಹೋರಾಟಗಾರರ ವಿರುದ್ಧ ದಾಖಲಿಸಿದ ಮಾನನಷ್ಟ ಮೊಕದ್ದಮೆಗಳಾಗಿವೆ.

ಈ ರೀತಿಯ ಪ್ರಕರಣಗಳನ್ನು ದಾಖಲಿಸುವಾಗ ಸಂಸ್ಥೆ ಸರಳ ತಂತ್ರವೊಂದನ್ನು ಅನುಸರಿಸುತ್ತದೆ. ಪ್ರಕಾಶನ ಸಂಸ್ಥೆ ಅಥವಾ ವರದಿಗಾರನ ಮೂಲ ನೆಲೆಯಿಂದ ಹೊರಗೆ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ವರದಿಯನ್ನು ಆ ಪ್ರದೇಶದಲ್ಲಿ ಓದಲಾಯಿತು ಎಂಬ ಕಾರಣ ನೀಡಿ ಈ ರೀತಿ ಪ್ರಕರಣ ದಾಖಲಿಸಲಾಗುತ್ತದೆ. ಇದರ ಜತೆಗೆ ‘ಪ್ರತಿವಾದಿಗಳನ್ನು, ಅವರ ವಕೀಲರನ್ನು ಬೆದರಿಸುವ ಕೆಲಸಗಳನ್ನು ಸಂಸ್ಥೆಯ ಸದಸ್ಯರು ಮಾಡುತ್ತಾರೆ’ ಎನ್ನುತ್ತಾರೆ ಪುಣೆ ವಕೀಲ ಅಸೀಮ್‌ ಸರೋಡೆ. ಮರಾಠಿ ನಿಯತಕಾಲಿಕ ‘ಚಿತ್ರಲೇಖ’ದ ಪತ್ರಕರ್ತರೊಬ್ಬರ ಪರವಾಗಿ ವಾದ ಮಂಡಿಸಿದ ಹಿನ್ನೆಲೆ ಇವರಿಗಿದೆ. ‘ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ ಹೊರಗಡೆ ನೆರೆಯುತ್ತಿದ್ದ ಸಾಧಕರು ನಿಮ್ಮನ್ನು ನೋಡಿ ನಗುತ್ತಾರೆ, ಅಪಹಾಸ್ಯ ಮಾಡುತ್ತಾರೆ, ಅಷ್ಟೇ ಅಲ್ಲ ನಿಮ್ಮ ಬಗ್ಗೆ ಚುಚ್ಚಿ ಮಾತನಾಡುತ್ತಾರೆ, ಜತೆಗೆ ಬೆದರಿಕೆಯನ್ನೂ ಹಾಕುತ್ತಾರೆ… ಗೋವಾ ಕೋರ್ಟ್‌ಗೆ ನಾನು ಹಾಜರಾದಾಗ ಇದನ್ನು ಅನುಭವಿಸಿದ್ದೇನೆ. ನಾನು ಗೋವಾಕ್ಕೆ ಹೋಗುವಾಗ ದಾರಿ ಬದಲಿಸಿ ಹೋಗುತ್ತಿದ್ದೆ. ಪೊಂಡಾ ಬೆಟ್ಟದ ದಾರಿಯನ್ನು ಬಿಟ್ಟು ತೆರಳುತ್ತಿದ್ದೆ,’ ಎಂದು ವಿವರಿಸುತ್ತಾರೆ ಅವರು. ಬೆದರಿಕೆ ಘಟನೆಗಳ ನಂತರ ಅವರು ಮಹಾರಾಷ್ಟ್ರ ಗೃಹ ಇಲಾಖೆಗೆ ರಕ್ಷಣೆ ಕೋರಿ ಪತ್ರವನ್ನೂ ಬರೆದರು.

‘2009ರ ಮಡ್ಗಾವ್‌ ಬಾಂಬ್‌ ಸ್ಪೋಟದ ನಂತರ ಆಶ್ರಮವನ್ನು ಗ್ರಾಮದಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದ ರಾಮನಾಥಿಯ ಗ್ರಾಮಸ್ಥರ ವಿರುದ್ಧವೂ ಇದೇ ಮಾನನಷ್ಟ ಮೊಕದ್ದಮೆ ತಂತ್ರವನ್ನು ಅನುಸರಿಸಲಾಯಿತು. ಈ ಮೂಲಕ ಜನರ ಬಾಯಿ ಮುಚ್ಚಿಸಲಾಯಿತು,’ ಎನ್ನುತ್ತಾರೆ ಬಸಂತ್‌ ಭಟ್‌. ಆಶ್ರಮದ ವಿರುದ್ಧ ಹೋರಾಟವನ್ನು ಮುನ್ನಡೆಸಿದವರು ಇವರು. ‘ ಸಂಸ್ಥೆಯವರು ನನ್ನ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದರು. ಅವೆಲ್ಲವೂ ಅರ್ಥವಿಲ್ಲದಾಗಿದ್ದವು. ಇದರಲ್ಲಿ ಒಂದು ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿದೆ.’

ಭಟ್‌ ವಿರುದ್ಧದ ಪ್ರಕರಣ ಗ್ರಾಮಸ್ಥರನ್ನು ಹೆದರಿಸುವಲ್ಲಿ ಸಫಲವಾಯಿತು. ಹೀಗಾಗಿ ಸಂಸ್ಥೆ ವಿರುದ್ಧದ ಹೋರಾಟ ಹಳ್ಳ ಹಿಡಿಯಿತು. ಬಂಡೋರಾ ಗ್ರಾಮ ಪಂಚಾಯತ್‌ನ ಮಾಜಿ ಸರಪಂಚ್‌ ಆಗಿದ್ದ ಶೇಖರ್‌ ನಾಯಕ್‌ರ ಗೋಣನ್ನೂ ಕಾನೂನು ಪ್ರಕರಣಗಳ ಮೂಲಕ ಮುರಿಯಲಾಯಿತು. “ಆಶ್ರಮದ ವಿರುದ್ಧ ಸಿಟ್ಟಿತ್ತು. ಆದರೆ ಕಾನೂನು ದೌರ್ಜನ್ಯದ ಭಯದಿಂದ ಗ್ರಾಮಸ್ಥರು ನಿಷ್ಕ್ರಿಯವಾಗುವಂತಾಯಿತು,” ಎನ್ನುತ್ತಾರೆ ಅವರು.

ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಕೇಂದ್ರ ಕಚೇರಿ. 
ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಕೇಂದ್ರ ಕಚೇರಿ. 
/ರೆಡಿಫ್

ಪ್ರಗತಿಪರರಾದ ದಾಭೋಲ್ಕರ್‌, ಪನ್ಸಾರೆ ಮತ್ತು ಕಲಬುರ್ಗಿ ಹತ್ಯೆಯ ನಂತರ ಸಂಸ್ಥೆ ಮತ್ತೆ ಸುದ್ದಿಕೇಂದ್ರಕ್ಕೆ ಬಂದ ಹಿನ್ನೆಲೆಯಲ್ಲಿ ಆಶ್ರಮವನ್ನು ತಮ್ಮ ಗ್ರಾಮದಿಂದ ಹೊರಹಾಕುವ ಪ್ರಯತ್ನಕ್ಕೆ ಇಲ್ಲಿನ ಜನರು ಮರು ಚಾಲನೆ ನೀಡಿದ್ದರು. ಈ ಬಾರಿ ಸ್ಥಳೀಯ ಯುವಕರ ಸಂಘಟನೆ ‘ರಾಮ್‌ನಾಥ್‌ ಯುವಕ್‌ ಸಂಘ’ ಇದರ ನೇತೃತ್ವ ವಹಸಿಕೊಂಡಿತು. ಪನ್ಸಾರೆ ಕೊಲೆ ಪ್ರಕರಣದಲ್ಲಿ ಸಮೀರ್ ಗಾಯಕ್‌ವಾಡನ ಬಂಧನ ನಡೆದ ಕೆಲವು ದಿನದ ನಂತರ ಸೆಪ್ಟೆಂಬರ್‌ 30, 2015ರಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಯ ಅಧ್ಯಕ್ಷ ಸೌರಭ್‌ ಲೊಟ್‌ಲಿಕಾರ್‌, ಸಂಸ್ಥೆಯವರು ಗ್ರಾಮದಲ್ಲಿರುವ ಆಶ್ರಮದಿಂದ ಜಾಗ ಖಾಲಿ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟರು. ‘ಜನರಿಗೆ ಆಶ್ರಮ ಈ ಗ್ರಾಮದಲ್ಲಿರುವುದು ಬೇಕಾಗಿಲ್ಲ. ಕಾರಣ ಅವರು ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ,” ಎಂದು ಅವರು ಮಾಧ್ಯಮಗಳಿಗೆ ಹೇಳಿದ್ದರು. ಸಂಸ್ಥೆ ವಿರೋಧಿಗಳನ್ನು ಗುರಿಯಾಗಿಸಿ ದಾಳಿ ಮಾಡಲು ಜನರಿಗೆ ತರಬೇತಿ ನೀಡುತ್ತಿತ್ತು ಎಂದು ದೂರುತ್ತಾರೆ ಅವರು. ‘ಸಂಸ್ಥೆಯ ಬಗೆಗಿನ ಸುದ್ದಿಗಳೆಲ್ಲಾ ಒಂದೊಂದಾಗಿ ಹೊರ ಬರುತ್ತಿದ್ದಂತೆ ಜನರಿಗೆ ಸಂಸ್ಥೆ ಬಗ್ಗೆ ಅನುಮಾನಗಳು ಹುಟ್ಟಿಕೊಂಡವು ಮತ್ತು ಅವರಿಗೆ ಸಂಸ್ಥೆಯವರು ಇಲ್ಲಿರುವುದು ಇಷ್ಟವಿರಲಿಲ್ಲ,’ ಎಂಬ ಮಾಹಿತಿಯನ್ನೂ ತೆರೆದಿಟ್ಟಿದ್ದರು ಸೌರಭ್‌.

ಒಂದೊಮ್ಮೆ ಸರಕಾರ ಆಶ್ರಮವನ್ನು ಮುಚ್ಚಲು ವಿಫಲವಾದಲ್ಲಿ ರಾಮ್‌ನಾಥ್‌ ಯುವಕ ಸಂಘ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಿದೆ ಎಂಬ ಎಚ್ಚರಿಕೆಯನ್ನೂ ಅವರು ಇದೇ ಸಂದರ್ಭದಲ್ಲಿ ನೀಡಿದ್ದರು. ಹೀಗಿದ್ದೂ ಆಶ್ರಮವನ್ನು ಸರಕಾರ ಮುಚ್ಚದೇ ಹೋದುದರಿಂದ ಗ್ರಾಮದಲ್ಲಿ ಬೃಹತ್‌ ಸಹಿ ಸಂಗ್ರಹ ಅಭಿಯಾನವನ್ನು ಅವರು ನಡೆಸಿದ್ದರು. ಈ ವೇಳೆ ಗ್ರಾಮಸ್ಥರ ಪರವಾಗಿ ಗೋವಾ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ರಾಜ್ಯದ ಕ್ಯಾಬಿನೆಟ್‌ ಸಚಿವರಿಗೆ ಮತ್ತು ಶಾಸಕರಿಗೆ ಪತ್ರವನ್ನೂ ಬರೆಯಲಾಯಿತು.

ವ್ಯವಸ್ಥೆಯನ್ನು ಹೇಗೆ ತನಗೆ ಬೇಕಾದಂತೆ ಕುಣಿಸಬಹುದು ಎಂಬುದನ್ನು ಸಂಸ್ಥೆಯ ಯಶಸ್ಸೇ ನಮಗೆ ಹೇಳುತ್ತಿತ್ತು. ವ್ಯವಸ್ಥೆಯಲ್ಲಿ ಫ್ಯಾಸಿಸಂ ಯಾವ ಪರಿ ಆವರಿಸಿಕೊಂಡಿದೆ ಎಂಬುದರ ಸೂಚನೆಯೂ ಇದಾಗಿತ್ತು ಎನ್ನುತ್ತಾರೆ ಸೌರಭ್‌ ಲೊಟ್‌ಲಿಕಾರ್‌. 2009ರಲ್ಲಿ ಆಶ್ರಮವನ್ನು ಅಲುಗಾಡಿಸಿಬಿಟ್ಟಿದ್ದ ಜನಾಂದೋಲನ ಮತ್ತೆ ಎದ್ದೇಳಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.

“ಕೇಂದ್ರ ಮತ್ತು ರಾಜ್ಯ ಎರಡೂ ಕಡೆಗಳಲ್ಲಿ ಬಿಜೆಪಿ ಅಧಿಕಾರ ನಡೆಸುತ್ತಿದೆ. ಮತ್ತು ಇವರು ಸಂಸ್ಥೆಯನ್ನು ನಿಷೇಧಿಸಬೇಕು ಎಂದು ನೀವು ಬಯಸಲು ಸಾಧ್ಯವಿಲ್ಲ,” ಎಂದರು ಸೌರಭ್. ಆದರೆ ಇದೇ ಪೂರ್ತಿ ಸತ್ಯವಲ್ಲ. ಈ ಹಿಂದೆ ಕೇಂದ್ರದಲ್ಲಿದ್ದ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರವೂ ಇದೇ ರೀತಿ ನಡೆದುಕೊಂಡಿತ್ತು. 2008-09ರಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟಗಳ ನಂತರ 2011ರಲ್ಲಿ ಮಹಾರಾಷ್ಟ್ರ ಎಟಿಎಸ್‌ ಸಾವಿರ ಪುಟಗಳ ನಿಷೇಧದ ಪ್ರಸ್ತಾಪವನ್ನು ಕಂಡೂ ಕಾಣದಂತೆ ಕುಳಿತಿತ್ತು ಕಾಂಗ್ರೆಸ್‌. ಸಂಸ್ಥೆಗೆ ಹಿತೈಷಿಗಳು ಬಿಜೆಪಿಯಲ್ಲಿ ಮಾತ್ರವೇ ಇರಲಿಲ್ಲ, ಬದಲಿಗೆ ಉಳಿದ ಪಕ್ಷಗಳಲ್ಲೂ ಇದ್ದರು.

*

ಇದಿಷ್ಟು ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮತ್ತೆ ಸುದ್ದಿಕೇಂದ್ರಕ್ಕೆ ಬಂದ ‘ಸನಾತನ ಸಂಸ್ಥೆ’ಯ ಪರಿಚಯ. ‘ಶಾಡೋ ಆರ್ಮಿಸ್’ ಪುಸ್ತಕದ ಮೊದಲ ಅಧ್ಯಾಯದ ಕನ್ನಡಾನುವಾದವನ್ನು ಐದು ಕಂತುಗಳಲ್ಲಿ ಇಲ್ಲಿ ನೀಡಲಾಗಿದೆ.

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’-1: ಗದ್ದೆಯಲ್ಲಿ ಸಿಕ್ಕ ಕಾಂಡೋಮ್‌ಗಳು & ಜನರ ಪ್ರತಿರೋಧ

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 2: ಮಡ್ಗಾಂವ್‌ & ಸರಣಿ ಬಾಂಬ್‌ ಸ್ಫೋಟಗಳ ಕರಾಳ ಇತಿಹಾಸ

Also read: ಸ್ಟೋರಿ ಆಫ್‌ ಸನಾತನ ಸಂಸ್ಥಾ- 3: ವಿಷ್ಣುವಿನ ಅವತಾರ ಪುರುಷ ಅಠಾವಳೆ & ಪ್ರಗತಿಪರರ ಬಗ್ಗೆ ಹುಟ್ಟಿಕೊಂಡ ಹಗೆತನ

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 4: ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಗಳು; ಆರೋಪಿ ಸ್ಥಾನದಲ್ಲಿ ಅಠಾವಳೆ ‘ಸಾಧಕರು’!