samachara
www.samachara.com
ಪ್ರಶಸ್ತಿ ರಾಜಕೀಯ; ಸಾಧನೆ, ಮಾನದಂಡ, ಪ್ರಕ್ರಿಯೆ, ಲಾಬಿ, ಒತ್ತಡ, ಆಯ್ಕೆ ಪಟ್ಟಿ ಇತ್ಯಾದಿ…
COVER STORY

ಪ್ರಶಸ್ತಿ ರಾಜಕೀಯ; ಸಾಧನೆ, ಮಾನದಂಡ, ಪ್ರಕ್ರಿಯೆ, ಲಾಬಿ, ಒತ್ತಡ, ಆಯ್ಕೆ ಪಟ್ಟಿ ಇತ್ಯಾದಿ…

ಯಾವುದೇ ಪ್ರಶಸ್ತಿಯ ಮೌಲ್ಯ ಹೆಚ್ಚಾಗುವುದು ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದಾಗ ಮಾತ್ರ. ಆದರೆ, ಇತ್ತೀಚೆಗೆ ಪ್ರಶಸ್ತಿ ಆಯ್ಕೆಯ ಲೆಕ್ಕಾಚಾರಗಳೇ ಬೇರೆಯಾಗುತ್ತಿವೆ.

ದಯಾನಂದ

ದಯಾನಂದ

ಈ ಬಾರಿಯ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ಐದು ಶತಕ ಮೀರಿದೆ. 507 ಮಂದಿಗೆ ಕೆಂಪೇಗೌಡ ಪ್ರಶಸ್ತಿ ಕೊಟ್ಟಿರುವ ಬಿಬಿಎಂಪಿ ಕಾರ್ಯಕ್ರಮದಲ್ಲಿ ಸಹಜವಾಗಿಯೇ ನೂಕು ನುಗ್ಗಲು, ಗೊಂದಲ ಗದ್ದಲಗಳು ನಡೆದಿವೆ. ಬಿಬಿಎಂಪಿ ಹೀಗೆ ಕೆಂಪೇಗೌಡ ಪ್ರಶಸ್ತಿಯನ್ನು ಮಣಗಟ್ಟಲೆ ಕೊಡುತ್ತಿರುವುದು ಇದೇ ಮೊದಲೇನಲ್ಲ. ಪ್ರತಿ ವರ್ಷವೂ ಪ್ರಶಸ್ತಿ ಪ್ರಧಾನದ ಅಂತಿಮ ಕ್ಷಣದವರೆಗೂ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬೆಳೆಯುತ್ತಲೇ ಇರುತ್ತದೆ.

ಈ ವರ್ಷ ವೇದಿಕೆ ಮೇಲೇರಿದ ಕೆಲವರು ನಿರೂಪಕರ ಕೈಯಲ್ಲಿದ್ದ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ನೋಡಿದ್ದಾರೆ. ಯಾರದೋ ಹೆಸರಿನ ಪ್ರಮಾಣ ಪತ್ರವನ್ನು ಇನ್ಯಾರೋ ಪಡೆದು ಹೋಗಿದ್ದಾರೆ ಎಂಬುದು ವರದಿಯಾಗಿದೆ. ವರ್ಷದಿಂದ ವರ್ಷಕ್ಕೆ ಕೆಂಪೇಗೌಡ ಪ್ರಶಸ್ತಿ ವಿಚಾರದಲ್ಲಿ ಇಂಥ ಗೊಂದಲ, ಗೋಜಲುಗಳು ಹೆಚ್ಚಾಗುತ್ತಲೇ ಇವೆ. ವರ್ಷದಿಂದ ವರ್ಷಕ್ಕೆ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಪಟ್ಟಿ ದುಪ್ಪಟ್ಟಾಗುತ್ತಲೇ ಇದೆ.

ಬೆಂಗಳೂರಿನಲ್ಲಿರುವ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರನ್ನು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿನ ಪ್ರಶಸ್ತಿ ನೀಡಿ ಸನ್ಮಾನಿಸುವುದು ಈ ಪ್ರಶಸ್ತಿಯ ಮೂಲ ಉದ್ದೇಶ. ಆದರೆ, ಈ ಮೂಲ ಉದ್ದೇಶ ಹಾಗೂ ಪ್ರಶಸ್ತಿಯ ಮಾನದಂಡಗಳೇ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವಂತಿದೆ. ಪ್ರತಿ ವರ್ಷವೂ ಪ್ರಶಸ್ತಿಗಾಗಿ ಲಾಬಿ ಮಾಡುವ, ರಾಜಕೀಯ ಒತ್ತಡ ಹೇರುವ ವರ್ಗವೇ ಸೃಷ್ಟಿಯಾಗುತ್ತದೆ. ಇದನ್ನು ನಿಭಾಯಿಸುವುದರಲ್ಲಿ ಬಿಬಿಎಂಪಿ ಪ್ರತಿ ವರ್ಷವೂ ಎಡವುತ್ತಲೇ ಇದೆ. ಇದರ ಪರಿಣಾಮ ವೇದಿಕೆಯ ಮೇಲೆ ಬಹಿರಂಗವಾಗುತ್ತಲೇ ಬರುತ್ತಿದೆ.

ಸಾಮಾನ್ಯವಾಗಿ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಭಿಕರು ಹೆಚ್ಚಿದ್ದು, ಪ್ರಶಸ್ತಿ ಪಡೆಯುವವರ ಸಂಖ್ಯೆ ಕಡಿಮೆ ಇದ್ದರೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಮಾತ್ರ ತದ್ವಿರುದ್ಧ. ಇಲ್ಲಿ ಸಭಿಕರಿಗಿಂತ ಪ್ರಶಸ್ತಿ ಪಡೆಯುವವರ ಸಂಖ್ಯೆಯೇ ಹೆಚ್ಚಾಗಿರುತ್ತದೆ. ಎಲ್ಲಾ ಪ್ರಶಸ್ತಿ ಪುರಸ್ಕೃತರನ್ನೂ ಒಟ್ಟಿಗೆ ವೇದಿಕೆ ಮೇಲೆ ಕೂರಿಸಿ ಸಮೂಹ ಚಿತ್ರ (ಗ್ರೂಪ್‌ ಫೋಟೊ) ತೆಗೆಯುವುದಂತೂ ಇಲ್ಲಿ ದುಸ್ಸಾಹಸ.

“ಬಿಬಿಎಂಪಿ ದಂಡಿ ದಂಡಿಯಾಗಿ ಪ್ರಶಸ್ತಿ ಕೊಡುವ ಮೂಲಕ ಕೆಂಪೇಗೌಡರ ಹೆಸರಿಗೆ ಇದ್ದ ಮರ್ಯಾದೆಯನ್ನೂ ಕಡಿಮೆ ಮಾಡುತ್ತಿದೆ. ಪ್ರತಿ ವರ್ಷವೂ ಪ್ರಶಸ್ತಿ ಪಟ್ಟಿ ತಯಾರಾಗುವ ಸಂದರ್ಭದಲ್ಲಿ ರಾಜಕೀಯ ಒತ್ತಡ ಸೇರಿದಂತೆ ಎಲ್ಲಾ ರೀತಿಯ ಒತ್ತಡಗಳೂ ಬರುತ್ತವೆ” ಎನ್ನುತ್ತಾರೆ ಈ ಹಿಂದೆ ಬಿಬಿಎಂಪಿ ಆಯುಕ್ತರಾಗಿದ್ದವರೊಬ್ಬರು.

ಹೆಸರು ಬಹಿರಂಗ ಪಡಿಸಬಾರದೆಂಬ ಷರತ್ತಿನೊಂದಿಗೆ ‘ಸಮಾಚಾರ’ದ ಜತೆಗೆ ಮಾತನಾಡಿದ ಅವರು “ಕೆಂಪೇಗೌಡ ಪ್ರಶಸ್ತಿಯ ಬಗ್ಗೆ ಮಾತನಾಡುವುದೇ ವ್ಯರ್ಥ” ಎಂದೇ ಮಾತು ಆರಂಭಿಸಿದರು. “ವರ್ಷದಿಂದ ವರ್ಷಕ್ಕೆ ಪ್ರಶಸ್ತಿಯ ಮೌಲ್ಯ ಕುಸಿಯಲು ಬಿಬಿಎಂಪಿ ಒಳಗಿನ ಹಾಗೂ ಹೊರಗಿನ ರಾಜಕಾರಣಿಗಳ ವಿಷಚಕ್ರವೇ ಕಾರಣ. ಈ ಪ್ರಶಸ್ತಿಯ ಆಯ್ಕೆಯಲ್ಲಿ ರಾಜಕೀಯ ಒತ್ತಡ ಸೇರಿದಂತೆ ಎಲ್ಲಾ ಬಗೆಯ ಒತ್ತಡಗಳೂ ಇರುತ್ತವೆ. ಆಯ್ಕೆ ಪ್ರಕ್ರಿಯೆ ಆರಂಭವಾದರೆ ಅದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲೇ ನಿಲ್ಲುವುದು” ಎನ್ನುತ್ತಾರೆ ಅವರು.

“ಪ್ರತಿ ವರ್ಷ 25 ಮಂದಿ ಸಾಧಕರಿಗೆ ಮಾತ್ರ ಕೆಂಪೇಗೌಡ ಪ್ರಶಸ್ತಿ ಕೊಡುವ ನಿಯಮ ಬರಬೇಕು. ಆಯ್ಕೆ ಮಾನದಂಡವನ್ನು ಕಠಿಣಗೊಳಿಸಿ, ನಿಜಕ್ಕೂ ಉನ್ನತ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರೆ ಪ್ರಶಸ್ತಿಯ ಗೌರವವೂ ಹೆಚ್ಚುತ್ತದೆ. ಅದನ್ನು ಬಿಟ್ಟು ರಾಶಿ ರಾಶಿಯಾಗಿ ಪ್ರಶಸ್ತಿ ನೀಡಿದರೆ ಪ್ರಶಸ್ತಿಗಿರುವ ಮೌಲ್ಯ ಕುಂದುತ್ತದೆ. ಈಗಿನ ವ್ಯವಸ್ಥೆಯಲ್ಲಿ ಇದನ್ನು ಸುಧಾರಿಸುವುದು ಕಷ್ಟ” ಎಂಬುದು ಅವರ ಬೇಸರದ ಮಾತು.

ಸಾಮಾನ್ಯವಾಗಿ ಸರಕಾರಗಳು ನೀಡುವ ದೊಡ್ಡ ಮೊತ್ತ ಹಾಗೂ ದೊಡ್ಡ ಹೆಸರಿನ ಪ್ರಶಸ್ತಿಗಳು ಸರಕಾರದ ವಿರುದ್ಧದ ದನಿಗಳನ್ನು ಹತ್ತಿಕ್ಕುವ ‘ಸಾತ್ವಿಕ ಮಾರ್ಗ’ದಂತಿರುತ್ತವೆ. ಕೆಲವರು ಪ್ರಶಸ್ತಿ ಸ್ವೀಕರಿಸಿಯೂ ಸರಕಾರದ ಬಗ್ಗೆ ಟೀಕೆ ಮುಂದುವರಿಸಿದರೆ, ಕೆಲವರು ಪ್ರಶಸ್ತಿ ತಿರಸ್ಕರಿಸಿ ತಮ್ಮ ಪ್ರತಿರೋಧ ಹೊರಹಾಕುತ್ತಾರೆ. ಆದರೆ, ಕೆಲವರು ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ ಅದನ್ನು ತಿರಸ್ಕರಿಸಿ ದೊಡ್ಡ ಸುದ್ದಿಯಾಗಿ, ಪ್ರಶಸ್ತಿ ಮನೆಗೇ ಬಂದಾಗ ಹಾರಕ್ಕೆ ಕೊರಳೊಡ್ಡಿ ಸಣ್ಣ ಸುದ್ದಿಯಾಗುತ್ತಾರೆ.

ಕೆಂಪೇಗೌಡ ಪ್ರಶಸ್ತಿ ಸಾಲಿಗೆ ಸೇರಬಹುದಾದ ಮತ್ತೊಂದು ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ. ಈ ಪ್ರಶಸ್ತಿಗೂ ಇತಿಮಿತಿ ಇಲ್ಲ. ಕೊನೆ ಕ್ಷಣದವರೆಗೂ ಸಾಧ್ಯವಾದಷ್ಟೂ ಹೆಚ್ಚಿನ ಹೆಸರುಗಳು ಆಯ್ಕೆ ಪಟ್ಟಿ ಸೇರಲು ಹಲವು ಬಗೆಯ ಒತ್ತಡಗಳು, ಲಾಬಿ ತಂತ್ರಗಳು ನಡೆಯುತ್ತಲೇ ಇರುತ್ತವೆ. ಇನ್ನು ಕೆಲವು ‘ಸಾಧಕರು’ ಆಯ್ಕೆ ಸಮಿತಿಯಲ್ಲಿರುವವರಿಗೇ ಆಮಿಷಗಳನ್ನು ಒಡ್ಡುವುದಿದೆ. ಪ್ರಶಸ್ತಿಯ ಹಣದಲ್ಲಿ ಅರ್ಧ ನಮಗೆ, ಅರ್ಧ ನಿಮಗೆ ಎಂಬ ಆಮಿಷ ಒಡ್ಡುವ ಪ್ರಶಸ್ತಿಪ್ರಿಯರಿಗೇನೂ ಕಡಿಮೆ ಇಲ್ಲ.

ಕೇವಲ ಸರಕಾರದ ಪ್ರಶಸ್ತಿಗಳು ಮಾತ್ರವಲ್ಲ ಸಂಘ- ಸಂಸ್ಥೆಗಳು ನೀಡುವ ಖಾಸಗಿ ಪ್ರಶಸ್ತಿಗಳಿಗೂ ಲಾಬಿ ನಡೆಯುವುದಿದೆ. ಪ್ರಶಸ್ತಿ ಪಡೆದು ನೂರರೊಳಗೊಬ್ಬರಾಗುವುದಕ್ಕಿಂತ ಪ್ರಶಸ್ತಿ ತಿರಸ್ಕರಿಸಿ ಸುದ್ದಿಯಾಗುವ ಪ್ರವೃತ್ತಿ ಇತ್ತೀಚೆಗೆ ‘ಸಾಧಕ’ರಲ್ಲಿ ಹೆಚ್ಚುತ್ತಿದೆ. ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯ ಆರಂಭದಿಂದ ಸುಮ್ಮನೇ ಇದ್ದು ಅವರ ಹೆಸರಿಗೆ ಪ್ರಶಸ್ತಿ ಘೋಷಣೆಯಾದ ಬಳಿಕ ಪ್ರಶಸ್ತಿ ತಿರಸ್ಕರಿಸುವ ‘ಜನಪ್ರಿಯ ನಡೆ’ ಹೆಚ್ಚಾಗುತ್ತಿದೆ.

“ನಿಜಕ್ಕೂ ಪ್ರಶಸ್ತಿ ತಿರಸ್ಕರಿಸುವ ಇರಾದೆ ಇದ್ದರೆ ಆಯ್ಕೆ ಪ್ರಕ್ರಿಯೆಯ ಸಂದರ್ಭದಲ್ಲೇ ಅದನ್ನು ಹೇಳಿಕೊಂಡು ಆ ಪ್ರಕ್ರಿಯೆಯಿಂದಲೇ ಹೊರಬರಬಹುದು. ಆದರೆ, ಪ್ರಶಸ್ತಿಯನ್ನು ತಿರಸ್ಕರಿಸಿದರೆ ದೊಡ್ಡ ಸುದ್ದಿಯಾಗುವ ಹಪಹಪಿಕೆ ಹಾಗೂ ಜನಪ್ರಿಯತೆಯ ಗೀಳು ಯುವ ಸಮುದಾಯದಲ್ಲೂ ಹೆಚ್ಚುತ್ತಿದೆ. ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾದ ಬಳಿಕ ನಡೆದ ಪ್ರಶಸ್ತಿ ವಾಪಸಿ ಅಭಿಯಾನದಲ್ಲಿ ಹಲವರು ದೊಡ್ಡ ಮೊತ್ತದ ಪ್ರಶಸ್ತಿಗಳನ್ನು ತಮ್ಮಲ್ಲೇ ಉಳಿಸಿಕೊಂಡು, ಸಣ್ಣ ಮೊತ್ತದ ಪ್ರಶಸ್ತಿಗಳನ್ನು ವಾಪಸ್‌ ಮಾಡಿದರು. ಇದು ಎಷ್ಟು ಸರಿ” ಎಂಬ ಪ್ರಶ್ನೆ ಹಿರಿಯ ಲೇಖಕರೊಬ್ಬರದು.

ಯಾವುದೇ ಕ್ಷೇತ್ರದ ಸಾಧಕರಿಗೂ ಪ್ರಶಸ್ತಿ ಎಂಬುದು ಒಂದು ಹಂತದವರೆಗೆ ಪ್ರೋತ್ಸಾಹವಿದ್ದಂತೆ. ಎಷ್ಟೋ ಬಾರಿ ಅರ್ಹತೆ ಇದ್ದವರಿಗೂ ಪ್ರಶಸ್ತಿಗಳು ಕೈ ತಪ್ಪುತ್ತವೆ. ಪ್ರಶಸ್ತಿಗಳಿಗಾಗಿ ರಾಜಕೀಯ ಮಾಡುವ ದೊಡ್ಡ ವರ್ಗವೇ ಇರುವಾಗ ಪ್ರಶಸ್ತಿ ಪಡೆಯುವುದೂ ಈಗ ಸುಲಭವೇನಲ್ಲ! ಆದರೂ ಅಲ್ಲೊಂದು ಇಲ್ಲೊಂದು ಪ್ರಶಸ್ತಿಗಳು ಅರ್ಹರಿಗೂ ಸಂದಿರುತ್ತವೆ. ಹೀಗಾಗಿ ಸಾಧನೆಯೇ ಗುರಿಯಾಗಿರುವವರು ಪ್ರಶಸ್ತಿಗಳ ಬಗ್ಗೆ, ಪ್ರಶಸ್ತಿಯ ಹಿಂದಿನ ರಾಜಕೀಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ತಮ್ಮ ಗುರಿಯ ಕಡೆಗಷ್ಟೇ ಗಮನ ಕೊಡುವುದು ಒಳಿತು.