samachara
www.samachara.com
‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 4: ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಗಳು; ಆರೋಪಿ ಸ್ಥಾನದಲ್ಲಿ ಅಠಾವಳೆ ‘ಸಾಧಕರು’!
COVER STORY

‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 4: ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಗಳು; ಆರೋಪಿ ಸ್ಥಾನದಲ್ಲಿ ಅಠಾವಳೆ ‘ಸಾಧಕರು’!

ಪ್ರಮುಖವಾಗಿ ದಾಭೋಲ್ಕರ್‌ ಮತ್ತು ಪನ್ಸಾರೆ ಕೊಲೆಯ ತನಿಖೆ ಸನಾತನ ಸಂಸ್ಥೆಯ ಬಾಗಿಲನ್ನು ತಟ್ಟಿತು. 2015ರ ಸೆಪ್ಟೆಂಬರ್‌ನಲ್ಲಿ ಪನ್ಸಾರೆ ಕೊಲೆ ಆರೋಪದ ಮೇಲೆ ಬಂಧಿತನಾದ ಸಮೀರ್ ಗಾಯಕ್‌ವಾಡ್‌ ಸಂಸ್ಥೆಯ ಓರ್ವ ಸಾಧಕನಾಗಿದ್ದ...

ಮೂಲ: ಧೀರೇಂದ್ರ ಕೆ. ಝಾ / ಕನ್ನಡಕ್ಕೆ: ಎನ್. ಸಚ್ಚಿದಾನಂದ.

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’-1: ಗದ್ದೆಯಲ್ಲಿ ಸಿಕ್ಕ ಕಾಂಡೋಮ್‌ಗಳು & ಜನರ ಪ್ರತಿರೋಧ

2013; ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹೈಪ್ರೊಫೈಲ್‌ ಕ್ರೂರ ಕೊಲೆ ಪ್ರಕರಣಗಳು ನಡೆದು ಹೋದವು. ಈ ಪ್ರಕರಣಗಳು ಸಂಸ್ಥೆಯ ಸಾಧಕರ ಬಂಧನಕ್ಕೆ ಎಡೆ ಮಾಡಿಕೊಟ್ಟವು. ಹೀಗೆ ಕೊಲೆಯಾದವರಲ್ಲಿ ಮೊದಲಿಗರು ಡಾ. ನರೇಂದ್ರ ದಾಭೋಲ್ಕರ್‌. ಮಹಾರಾಷ್ಟ್ರದ ಪ್ರಗತಿಪರ ಚಳುವಳಿಯ ಪ್ರಮುಖ ನೇತಾರರು. 1991ರಲ್ಲಿ ಅಠಾವಳೆ ತಮ್ಮ ಚೊಚ್ಚಲ ‘ಸನಾತನ್ ಭಾರತೀಯ ಸಂಸ್ಕೃತಿ ಸಂಸ್ಥಾ’ ಟ್ರಸ್ಟ್‌ ನೋಂದಣಿ ಮಾಡುವ ಮೊದಲೇ 1989ರಲ್ಲಿ ಇವರು ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್‌ ಸಮಿತಿ’ (ಎಂಎಎನ್‌ಎಸ್‌) ಸ್ಥಾಪಿಸಿದ್ದರು. ಎರಡೂ ಸಂಸ್ಥೆಗಳು ಬೆಳೆಯುತ್ತಾ ಹೋದಂತೆ ಪರಸ್ಪರ ಮುಖಾಮುಖಿಯಾಗಿ ಬೆಂಕಿ ಹತ್ತಿಕೊಂಡಿತು. ಸ್ವತಃ ವೈದ್ಯರಾದ ಧಾಬೋಲ್ಕರ್‌ ಮತ್ತು ಅವರ ಸಂಸ್ಥೆ ‘ಎಂಎಎನ್‌ಎಸ್‌’ 20ನೇ ಶತಮಾನದ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ಮೂಢ ನಂಬಿಕೆ ವಿರೋಧಿ ಮಸೂದೆಗಾಗಿ ನಿರಂತರ ಹೋರಾಡುತ್ತಾ ಬಂತು. ಆದರೆ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸದೇ ದಶಕಗಳನ್ನೇ ನುಂಗಿ ಹಾಕಿತು ಮಹಾರಾಷ್ಟ ರಾಜ್ಯ ಸರಕಾರ.

‘ಪ್ರಗತಿಪರತೆಯನ್ನು ಬೆಂಬಲಿಸುವುದು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದೇ ಧಾಬೋಲ್ಕರ್‌ ಅವರ ಪ್ರಯತ್ನಗಳ ಕೇಂದ್ರ ಬಿಂದುವಾಗಿತ್ತು’ ಎನ್ನುತ್ತಾರೆ ಎಂಎಎನ್‌ಎಸ್‌ನ ಪತ್ರಿಕೆ ‘ಅಂಧಶ್ರಧ್ಧಾ ನಿರ್ಮೂಲನ್‌ ವಾರ್ತಾಪತ್ರ’ದ ವ್ಯವಸ್ಥಾಪಕ ಸಂಪಾದಕ ರಾಹುಲ್‌ ಥೋರಟ್‌. ‘ಜನರ ನಿರ್ಲಕ್ಷದಿಂದ ಬೆಳೆಯುತ್ತಿರುವ ಮೂಢ ನಂಬಿಕೆಯನ್ನು, ಅದರ ಹಿಂದಿರುವ ಉದ್ದೇಶ ಮತ್ತು ಕಣ್ಕಟ್ಟನ್ನು ವಿವರಿಸುವ ಮೂಲಕ ಸುಲಭವಾಗಿ ನಿರ್ಮೂಲನ ಮಾಡಬಹುದು ಎಂದು ಅವರು ದೃಢವಾಗಿ ನಂಬಿದ್ದರು.’

1999ರಲ್ಲಿ ಮೂಢ ನಂಬಿಕೆ ವಿರೋಧಿ ಕರಡು ಮಸೂದೆ ತಯಾರಿಸಿದ ಧಾಬೋಲ್ಕರ್‌ ಅದರ ಜಾರಿಗಾಗಿ ನಿರಂತರ ಆಂದೋಲನಗಳನ್ನು ನಡೆಸುತ್ತಾ ಬಂದರು. ಸರಕಾರದ ಮೇಲೆ ಒತ್ತಡ ಹೇರಲು ಅಹಿಂಸಾತ್ಮಕ ದಾರಿಯಲ್ಲಿ, ಶಾಂತಿಯುತ ಪ್ರಯತ್ನಗಳನ್ನು ನಡೆಸುತ್ತಾ ಬಂದರು. ಪ್ರತಿಭಟನೆ ಹಮ್ಮಿಕೊಳ್ಳುವುದು, ಬೃಹತ್‌ ಪತ್ರ ಚಳವಳಿ ನಡೆಸುವುದು ಸರಕಾರದ ಮೇಲೆ ಒತ್ತಡ ಹೇರುವ ಅವರ ಮಾದರಿಗಳಾಗಿದ್ದವು.

ಇದೇ ಕಾಲಕ್ಕೆ ಸನಾತನ ಸಂಸ್ಥೆ ಮಸೂದೆ ವಿರುದ್ಧ ಆಂದೋಲಗಳನ್ನು ಶುರುವಿಟ್ಟುಕೊಂಡಿತು. ಒಂದೊಮ್ಮೆ ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರವಾಗಿದ್ದೇ ಆದಲ್ಲಿ ಹಿಂದೂಗಳು ಮನೆಯಲ್ಲಿ ಪೂಜೆ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಅದರ ವಾದವಾಗಿತ್ತು. ಮಹಾರಾಷ್ಟ್ರದ ಪ್ರಮುಖ ಪಕ್ಷಗಳಾದ ಶಿವಸೇನೆ, ಬಿಜೆಪಿ ಮತ್ತು ದೊಡ್ಡ ಮಟ್ಟಕ್ಕೆ ಹಿಂದೂ ಧಾರ್ಮಿಕ ಗುಂಪುಗಳು ಈ ಮಸೂದೆಯನ್ನು ವಿರೋಧಿಸುತ್ತಿದ್ದ ಸನಾತನ ಸಂಸ್ಥೆಯ ಜತೆ ಗುರುತಿಸಿಕೊಂಡವು.

2013ರ ಆಗಸ್ಟ್‌ ಹೊತ್ತಿಗೆ ಮೂಢ ನಂಬಿಕೆ ವಿರೋಧಿ ಕಾನೂನಿಗಾಗಿ ಹೋರಾಡುತ್ತಿದ್ದ ‘ಎಂಎಎನ್‌ಎಸ್‌’ನ ಹೋರಾಟ ಉತ್ತುಂಗದಲ್ಲಿದ್ದಾಗ ನರೇಂದ್ರ ಧಾಬೋಲ್ಕರ್‌ ಕೊಲೆಯಾಗಿ ಹೋಯಿತು. 20 ಆಗಸ್ಟ್‌ 2013ರಂದು ಮುಂಜಾನೆ ಪುಣೆಯ ಓಂಕಾರೇಶ್ವರ ದೇವಸ್ಥಾನದ ಮುಂಭಾಗ ಮುಂಜಾನೆಯ ನಡಿಗೆಗೆ ಹೋಗಿದ್ದ ಧಾಬೋಲ್ಕರ್‌ ಅವರನ್ನು ಇಬ್ಬರು ಬಂದೂಕುಧಾರಿಗಳ ತಂಡ ಗುಂಡಿಕ್ಕಿ ಹತ್ಯೆ ಮಾಡಿತು. ಧಾಬೋಲ್ಕರ್‌ ಮೇಲೆ ಪಾಯಿಂಟ್‌ ಬ್ಲಾಂಕ್‌ ದೂರದಿಂದ ಮೂರು ಸುತ್ತು ಗುಂಡು ಹಾರಿಸಿದ ಕೊಲೆಗಡುಕರು ಹತ್ತಿರದಲ್ಲೇ ಪಾರ್ಕ್‌ ಮಾಡಿದ್ದ ಬೈಕ್‌ ಹತ್ತಿ ಪರಾರಿಯಾಗಿದ್ದರು. ತಲೆಗೊಂದು ಗುಂಡು ತಗುಲಿಸಿಕೊಂಡ ಧಾಬೋಲ್ಕರ್‌ ಸ್ಥಳದಲ್ಲೇ ಸಾವನ್ನಪ್ಪಿದರು. ತಮ್ಮ ಜೀವಮಾನದುದ್ದಕ್ಕೂ ಹಲವು ಜೀವ ಬೆದರಿಕೆಗಳು, ಹಲ್ಲೆಗೆ ಗುರಿಯಾಗಿದ್ದರೂ ಧಾಬೋಲ್ಕರ್‌ ಯಾವತ್ತಿಗೂ ಪೊಲೀಸರ್ ರಕ್ಷಣೆಯನ್ನು ನಿರಾಕರಿಸುತ್ತಿದ್ದರು. “ಒಂದೊಮ್ಮೆ ನನ್ನದೇ ದೇಶದಲ್ಲಿ ನನ್ನದೇ ಜನರಿಂದ ಪೊಲೀಸ್‌ ರಕ್ಷಣೆ ತೆಗೆದುಕೊಳ್ಳುವುದಾದರೆ ನನ್ನಲ್ಲೇ ಏನೋ ಸಮಸ್ಯೆ ಇದೆ. ಭಾರತದ ಸಂವಿಧಾನದ ಚೌಕಟ್ಟಿನಲ್ಲಿ ನಾನು ಹೋರಾಟ ಮಾಡುತ್ತಿದ್ದೇನೆ. ನನ್ನ ಹೋರಾಟ ಯಾರ ವಿರುದ್ಧವೂ ಅಲ್ಲ, ಬದಲಿಗೆ ಎಲ್ಲರ ಒಳಿತಿಗಾಗಿ ಹೋರಾಡುತ್ತಿದ್ದೇನೆ,” ಎನ್ನುತ್ತಿದ್ದರು ದಾಬೋಲ್ಕರ್‌.

ಧಾಬೋಲ್ಕರ್‌ ಕೊಲೆಯ ಬೆನ್ನಿಗೆ ಹುಟ್ಟಿಕೊಂಡ ದೊಡ್ಡ ಮಟ್ಟದ ಪ್ರತಿರೋಧದಿಂದ ಮಹಾರಾಷ್ಟ್ರ ಸರಕಾರ ಮೂಢ ನಂಬಿಕೆ ವಿರೋಧಿ ಕಾನೂನು ಜಾರಿಗೆ ತುರ್ತಾಗಿ ಸ್ಪಂದಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಕೊಲೆಯಾದ ತಕ್ಷಣ ಸುಗ್ರೀವಾಜ್ಞೆ ಜಾರಿಗೆ ತರಲಾಯಿತು. ನಂತರ ಡಿಸೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಮಸೂದೆಯನ್ನು ಅಂಗೀಕರಿಸಿತು. ಹೀಗೆ ‘ಮಹಾರಾಷ್ಟ್ರ ಮಾನವ ತ್ಯಾಗ ಮತ್ತು ಇತರ ಮಾನವ ವಿರೋಧಿ, ದುಷ್ಟ, ಅಘೋರಿ ಆಚರಣೆಗಳು ಮತ್ತು ವಾಮಾಚಾರ ತಡೆಗಟ್ಟುವಿಕೆ ಹಾಗೂ ನಿರ್ಮಲನಾ ಮಸೂದೆ-2013’ ಜಾರಿಗೆ ಬಂತು. ಆದರೆ ಈ ಮಸೂದೆ 1999ರಲ್ಲಿ ಧಾಬೋಲ್ಕರ್‌ ಸಿದ್ಧಪಡಿಸಿದ ಕರಡು ಮಸೂದೆಯ ದುರ್ಬಲ ರೂಪ ಎಂದು ಹಲವು ಪ್ರಗತಿಪರರು ಇದನ್ನು ಟೀಕಿಸಿದರು.

ಧಾಬೋಲ್ಕರ್‌ ಹತ್ಯೆ ಬೆನ್ನಿಗೆ ಹುಟ್ಟಿಕೊಂಡ ಪ್ರತಿಭಟನೆಗಳು
ಧಾಬೋಲ್ಕರ್‌ ಹತ್ಯೆ ಬೆನ್ನಿಗೆ ಹುಟ್ಟಿಕೊಂಡ ಪ್ರತಿಭಟನೆಗಳು
/ತೇಜ್‌ ಸಮಾಚಾರ್‌

ಇದಾಗಿ ಎರಡು ವರ್ಷಗಳ ನಂತರ ಧಾಬೋಲ್ಕರ್‌ ಕೊಲೆಯ ಮರುಸೃಷ್ಟಿ ಎಂಬಂತೆ ಮತ್ತೋರ್ವ ಪ್ರಮುಖ ಪ್ರಗತಿಪರ ವ್ಯಕ್ತಿ ಹಾಗೂ ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಸಿಪಿಐ)ದ ನಾಯಕ ಗೋವಿಂದ ಪನ್ಸಾರೆ ಕೊಲೆಯಾಯಿತು. ಧಾಬೋಲ್ಕರ್‌ ರೀತಿಯಲ್ಲಿ ಪನ್ಸಾರೆಯೂ ಸನಾತನ ಸಂಸ್ಥೆಯ ಜತೆ ಸಂಘರ್ಷಕ್ಕಿಳಿದ ವ್ಯಕ್ತಿಯಾಗಿದ್ದರು. ಸಂಸ್ಥೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಿತ್ತು. ಜೀವ ಬೆದರಿಕೆಗಳಿದ್ದರೂ ತಮ್ಮ ಗೆಳೆಯ ಧಾಬೋಲ್ಕರ್‌ ಹಾದಿಯನ್ನೇ ತುಳಿದ ಪನ್ಸಾರೆ ಪೊಲೀಸ್‌ ರಕ್ಷಣೆ ಪಡೆದುಕೊಳ್ಳಲಿಲ್ಲ. ಧಾಬೋಲ್ಕರ್ ಕೊಲೆಯಾದ ಕೆಲವು ತಿಂಗಳ ನಂತರ ಪನ್ಸಾರೆಗೆ ಕಳುಹಿಸಲಾದ ಪತ್ರದಲ್ಲಿ ಅವರಿಗೆ ಎಚ್ಚರಿಕೆಯನ್ನು ನೀಡಲಾಗಿತ್ತು. ‘ನೀನು ಧಾಬೋಲ್ಕರ್‌ ಹಣೆಬರಹಕ್ಕೆ ಗುರಿಯಾಗಲಿದ್ದಿ’ ಎಂದು ಅದರಲ್ಲಿ ಸ್ಪಷ್ಟವಾಗಿ ಬರೆದಿತ್ತು.

ಆದರೆ ಅವಿಶ್ರಾಂತ ಹೋರಾಟಗಾರರಾದ ಪನ್ಸಾರೆ ಇದನ್ನೆಲ್ಲಾ ಗಮನಕ್ಕೆ ತಂದುಕೊಳ್ಳದೆ ಕೋಮುವಾದಿ, ಮೂಢ ನಂಬಿಕೆ ಬಿತ್ತುವ ಅಸ್ಪಷ್ಟವಾದಿ ಶಕ್ತಿಗಳ ವಿರುದ್ಧದ ತಮ್ಮ ಹೋರಾಟವನ್ನು ಬಿರುಸುಗೊಳಿಸಿದ್ದರು. ಹೀಗಿರುವಾಗಲೇ ಅವರ ಒಂದು ವಿಚಾರ ಮಹಾರಾಷ್ಟ್ರದ ಸಂಪ್ರದಾಯಸ್ಥ ಸಮುದಾಯದ ಜನರನ್ನು ಕೆರಳಿಸಿತು. ಶಿವಾಜಿ ಬಗೆಗಿನ ಅವರ ವಿವರಣೆ ಇಂಥಹದ್ದೊಂದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತ್ತು. ಅಲ್ಲಿಯವರೆಗೂ ಮಹಾರಾಷ್ಟ್ರದ ಬ್ರಾಹ್ಮಣ ಚಳುವಳಿಗಾರರು ಶಿವಾಜಿ ಓರ್ವ ಮುಸ್ಲಿಂ ವಿರೋಧಿ ದೊರೆಯೆಂದೂ, ಆತ ಮುಸ್ಲಿಂ ಆಕ್ರಮಣಕಾರರಿಂದ  ಬಲವಂತವಾಗಿ ಸುನ್ನತಿ ಮಾಡಿಸಿಕೊಳ್ಳಬೇಕಾದ, ಮತಾಂತರಗೊಳ್ಳಬೇಕಾಗಿದ್ದ ಹಿಂದೂಗಳನ್ನು ರಕ್ಷಿಸಿದ’ ಎಂದು ಬಿಂಬಿಸಿದ್ದರು.

ಇದಕ್ಕೆ ವಿರುದ್ಧವಾಗಿ ಆಳವಾದ ಅಧ್ಯಯನದೊಂದಿಗೆ ‘ಶಿವಾಜಿ ಕೌನ್‌ ಹೋತಾ’ (ಯಾರು ಶಿವಾಜಿ?) ಎಂಬ ಪುಸ್ತಕ ಹೊರತಂದ ಪನ್ಸಾರೆ, ಇದರಲ್ಲಿ ಶಿವಾಜಿ ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದ ಎಂದು ಪ್ರತಿಪಾದಿಸಿದ್ದರು. ಹಲವು ಮರು ಮುದ್ರಣಗಳನ್ನು ಕಂಡ ಈ ಪುಸ್ತಕ 8 ಭಾಷೆಗಳಿಗೆ ತರ್ಜುಮೆಯೂ ಆಯಿತು. ಶಿವಾಜಿಯ ಸೇನೆಯ ಮೂರನೇ ಒಂದು ಭಾಗ, ಆತನ ಅಂಗರಕ್ಷಕರು, ಕಮಾಂಡರ್‌ಗಳು ಜತೆಗೆ ಸಹಾಯಕರು ಕೂಡ ಮುಸ್ಲಿಮರಾಗಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿತ್ತು. ಶಿವಾಜಿ ಅಲ್ಲಿನ ನೆಲದ ಜನರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದ ಮತ್ತು ತೆರಿಗೆಗಳನ್ನು ಇಳಿಸಿ ಅವರ ಹೊರೆ ಇಳಿಸಿದ್ದ ಎಂದೂ ಪುಸ್ತಕದಲ್ಲಿ ವಿವರಿಸಲಾಗಿತ್ತು. ಮರಾಠಾ ರಾಜನ ಬಗ್ಗೆ ಪನ್ಸಾರೆ ತಮ್ಮ ಪುಸ್ತಕದಲ್ಲಿ ಆತ ಮಹಿಳೆಯರನ್ನು ಗೌರವದಿಂದ ಕಾಣುತ್ತಿದ್ದ ಎಂದೂ ಸ್ಪಷ್ಟವಾಗಿ ಬರೆದಿದ್ದರು.

ಗೋವಿಂದ ಪನ್ಸಾರೆಯ ವಿವಾದಿತ  ‘ಶಿವಾಜಿ ಕೌನ್‌ ಹೋತಾ’ (ಯಾರು ಶಿವಾಜಿ?) ಪುಸ್ತಕ
ಗೋವಿಂದ ಪನ್ಸಾರೆಯ ವಿವಾದಿತ ‘ಶಿವಾಜಿ ಕೌನ್‌ ಹೋತಾ’ (ಯಾರು ಶಿವಾಜಿ?) ಪುಸ್ತಕ
/ಸ್ಲೈಡ್‌ಶೇರ್‌

ಇದಲ್ಲದೆ ಹಲವು ಲೇಖನಗಳನ್ನೂ ಪನ್ಸಾರೆ ಬರೆಯುತ್ತಿದ್ದರು. ಅವರು ತಮ್ಮ ಜನಪ್ರಿಯ, ‘ಧರ್ಮದ ಬಗ್ಗೆ ಕ್ರಾಂತಿಕಾರಿಗಳ ನಿಲುವು ಏನಾಗಿರಬೇಕು?’ ಎಂಬ ಲೇಖನದಲ್ಲಿ ಹೀಗೆ ವಾದಿಸುತ್ತಾರೆ; ‘ನಾವು ಎಂಥಹ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರೆ ಇಲ್ಲಿ ಧಾರ್ಮಿಕ ಶಕ್ತಿಗಳ ನಿಲುವುಗಳು ಗೌತಮ ಬುದ್ಧ, ಸುಧಾರಣಾವಾದಿ ಸಂತರಾದ ಫುಲೆ, ವಿ.ಆರ್.ಶಿಂಧೆ, ಅಗರ್ಕರ್‌, ಮಹಾತ್ಮಾ ಗಾಂಧಿ, ಸಾಣೆ ಗುರೂಜಿ, ಡಾ. ಅಂಬೇಡ್ಕರ್‌, ರಾಜಶ್ರೀ ಶಾಹು ಅವರ ಚಿಂತನೆ ಮತ್ತು ಮಾರ್ಗಗಳನ್ನು ಮೀರಿ ಬೆಳೆಯುತ್ತಿವೆ. ಇವುಗಳು ಮೂಲಭೂತವಾದದ ಉನ್ಮಾದವನ್ನು ಸೃಷ್ಟಿಸಿ ಅಧಿಕಾರವನ್ನು ಕೈವಶ ಮಾಡಿಕೊಂಡಿವೆ. ನಮ್ಮ ಕೆಲಸ ಇರುವುದು ನಮ್ಮ ಎದುರಲ್ಲೇ ಇವರ ಆಟೋಟೋಪಕ್ಕೆ ಅಂತ್ಯ ಹಾಡಬೇಕಿದೆ. ಈ ಶಕ್ತಿಗಳನ್ನು ಸೋಲಿಸಲು ಇವರಿಂದ ವಂಚನೆಗೆ ಗುರಿಯಾದವರನ್ನು ನಾವು ಮತ್ತೆ ಜಯಿಸಬೇಕಿದೆ,’ ಎಂದು ಬರೆದಿದ್ದರು.

ಸಿಪಿಐ ನಾಯಕ ಅವಿಶ್ರಾಂತ ದುಡಿಯಲು ಆರಂಭಿಸಿದ್ದರು. ಕಾಲೇಜುಗಳಲ್ಲಿ ಶಿವಾಜಿ ಮತ್ತು ಮಹಾರಾಷ್ಟ್ರದ ಸುಧಾರಕರ ಬಗ್ಗೆ ಉನ್ಯಾಸಗಳನ್ನು ನೀಡುವುದು, ಕೈಪಿಡಿ, ಭಿತ್ತಿಪತ್ರಗಳನ್ನು ಪ್ರಕಟಿಸುವುದು, ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಮತ್ತು ಮೂಢ ನಂಬಿಕೆಗಳ ವಿರುದ್ಧ ವಾದಿಸುವ ಕೆಲಸದಲ್ಲಿ ನಿರತರಾಗಿದ್ದರು. ಹೀಗಿರುವಾಗಲೇ ಈ ಪ್ರಚಾರಾಂದೋಲನ 16 ಫೆಬ್ರವರಿ 2015ರಲ್ಲಿ ಅರ್ಧದಲ್ಲೇ ಅಂತ್ಯ ಕಂಡಿತು. ಮುಂಜಾನೆ ಪತ್ನಿ ಉಮಾ ಜತೆ ವಾಕಿಂಗ್‌ ಹೊರಟಿದ್ದ ಪನ್ಸಾರೆಯನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಗಂತುಕರು ಐದು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿ ಓಡಿ ಹೋದರು. ಮೂರು ಬುಲೆಟ್‌ಗಳು ಅವರ ದೇಹವನ್ನು ಹೊಕ್ಕಿದ್ದರೆ, ತಪ್ಪಿಸಿಕೊಳ್ಳುವ ಭರದಲ್ಲಿ ಹೆಂಡತಿಯನ್ನು ತಳ್ಳಿದ್ದರಿಂದ ಅವರ ತಲೆಗೂ ಗಾಯವಾಗಿತ್ತು. ನಾಲ್ಕು ದಿನಗಳ ನಂತರ ಫೆಬ್ರವರಿ 20ರಂದು ಗಾಯಗೊಂಡಿದ್ದ ಪನ್ಸಾರೆ ಆಸ್ಪತ್ರೆಯಲ್ಲಿ ನಿಧನರಾದರು.

ಇದೇ ಮಾದರಿಯ ಮೂರನೇ ಕೊಲೆಗೆ ಕರ್ನಾಟಕದ ಧಾರವಾಡ ಸಾಕ್ಷಿಯಾಯಿತು. 30 ಆಗಸ್ಟ್‌ 2015ರ ಮುಂಜಾನೆ ಬೈಕ್‌ನಲ್ಲಿ ಬಂದ ಇಬ್ಬರು ಆಗಂತುಕರು ಡಾ. ಎಂ. ಎಂ. ಕಲಬುರ್ಗಿಯವರ ಮೇಲೆ ಅವರ ಮನೆ ಮುಂಭಾಗದಲ್ಲೇ ಪಾಯಿಂಟ್‌ ಬ್ಲಾಂಕ್‌ ರೇಂಜಿನಿಂದ ಎರಡು ರೌಂಡ್‌ ಗುಂಡು ಹಾರಿಸಿ ಪರಾರಿಯಾಗಿದ್ದರು. ಹಿರಿಯ ಕನ್ನಡ ಬರಹಗಾರರಾಗಿದ್ದ ಕಲಬುರ್ಗಿ, ಮೂಢ ನಂಬಿಕೆಯ ಅಭ್ಯಾಸಗಳ ವಿರುದ್ಧ ಮತ್ತು ಬಲಪಂಥೀಯ ಹಿಂದುತ್ವ ಗುಂಪುಗಳ ವಿರುದ್ಧ ಗಟ್ಟಿಯಾಗಿ ನಿಂತಿದ್ದರು. ಗುಂಡೇಟು ತಿಂದ ಅವರನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಮನೆಗೆ ಅಂಬ್ಯುಲೆನ್ಸ್‌ ಕರೆಸಲಾಯಿತು. ಮೊದಲಿಗೆ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಧಾರವಾಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಆಸ್ಪತ್ರೆಯಲ್ಲಿ ನಿಧನರಾಗಿದ್ದ ಎಂಎಂ ಕಲಬುರ್ಗಿ
ಆಸ್ಪತ್ರೆಯಲ್ಲಿ ನಿಧನರಾಗಿದ್ದ ಎಂಎಂ ಕಲಬುರ್ಗಿ
/ಹಿಂದೂಸ್ಥಾನ್‌ ಟೈಮ್ಸ್‌

ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾಗಿದ್ದ ಕಲಬುರ್ಗಿ ಲಿಂಗಾಯತ ಧರ್ಮದ ವಿದ್ವಾಂಸರಾಗಿದ್ದರು. ಸ್ವತಃ ಧಾರವಾಡ ಭಾಗದ ಪ್ರಮುಖ ಪ್ರಗತಿಪರರಾಗಿದ್ದ ಕಲಬುರ್ಗಿಯವರು, ವೈದಿಕ ಸಂಪ್ರದಾಯ ಮತ್ತು ಕೋಮುವಾದಿ ರಾಜಕಾರಣವನ್ನು ಟೀಕಿಸುತ್ತಾ ಬಂದಿದ್ದ ಕನ್ನಡದ ಸಾಹಿತಿ ಯು. ಆರ್. ಅನಂತಮೂರ್ತಿಯವರ ಕಟ್ಟಾ ಬೆಂಬಲಿಗರಾಗಿದ್ದರು. 2014ರಲ್ಲಿ ಬೆಂಗಳೂರಿನಲ್ಲಿ ಮೂಢ ನಂಬಿಕೆ ವಿರೋಧಿ ಮಸೂದೆ ಸಂಬಂಧ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಗಟ್ಟಿಯಾಗಿ ವಿಗ್ರಹಾರಾಧನೆಯ ವಿರುದ್ಧ ವಾದಿಸಿದ್ದರು. ಇದಕ್ಕೆ ಹಿಂದುತ್ವ ಶಕ್ತಿಗಳಿಂದ ಹುಟ್ಟಿಕೊಂಡ ವಿರೋಧದ ಹಿನ್ನೆಲೆಯಲ್ಲಿ ಅವರು ಪೊಲೀಸ್‌ ರಕ್ಷಣೆ ಪಡೆಯಬೇಕಾಗಿ ಬಂದಿತ್ತು. ಆದರೆ ಕೊಲೆಗೆ ಕೆಲವೇ ದಿನ ಮೊದಲು ಅವರು ತಮಗೆ ಒದಗಿಸಿದ್ದ ರಕ್ಷಣೆಯನ್ನು ಹಿಂತೆಗೆದುಕೊಳ್ಳಲು ಕೇಳಿಕೊಂಡಿದ್ದರಂತೆ.

ಹೀಗೆ, ಸರಣಿಯಾಗಿ ಕೊಲೆಯಾಗಿ ಹೋದ ಧಾಬೋಲ್ಕರ್‌, ಪನ್ಸಾರೆ ಮತ್ತು ಕಲಬುರ್ಗಿಯವರ ಕೊಲೆಯ ವಿಧಾನದಲ್ಲಿ ಮಾತ್ರವೇ ಸಾಮ್ಯತೆಗಳು ಇರಲಿಲ್ಲ. ಮೂರೂ ಜನ ಪ್ರಗತಿಪರರು ಕೋಮುವಾದಿ ಮತ್ತು ಅಸ್ಪಷ್ಟವಾದಿ ಶಕ್ತಿಗಳ ವಿರುದ್ಧ ತಮ್ಮನ್ನು ತಾವು ಪರಿಣಾಮಕಾರಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಇವರನ್ನೆಲ್ಲಾ ಒಂದೇ ಗುಂಪಿನ ಜನರು ಕೊಂದರೇ ಎಂಬುದು ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಿದೆ. ಈಗಾಗಲೇ ಈ ನಿಟ್ಟಿನಲ್ಲಿ ಬಿರುಸಿನಿಂದ ತನಿಖೆ ನಡೆಯುತ್ತಿದೆ. ಕೊಲೆಗಡುಗರನ್ನು ಪತ್ತೆ ಹಚ್ಚಲು ಸರಕಾರ ಸೂಕ್ತವಾದ ತನಿಖೆ ನಡೆಸಿಲ್ಲ ಎಂಬ ದೂರಿನ ನಡುವೆಯೇ ಮೂರು ಕೊಲೆಗಳಿಗೆ ಒಂದೇ ರೀತಿಯ ಶಸ್ತ್ರವನ್ನು ಬಳಲಾಗಿದೆ ಎಂಬ ವಾದವಿದೆ. ಮುಂಬೈನ ‘ಕಲಿನ ವಿಧಿ ವಿಜ್ಞಾನ ಪ್ರಯೋಗಾಲಯ’ದ ವರದಿ ಪ್ರಕಾರ ಇಂಥಹದ್ದೊಂದು ವಾದ ಹೂಡಲಾಗಿದೆ.

ಆದರೆ, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ಮೂರು ಪ್ರಕರಣಗಳಲ್ಲಿ ಬೇರೆ ಬೇರೆ ಶಸ್ತ್ರಗಳನ್ನು ಉಪಯೋಗಿಸಲಾಗಿದೆ ಎಂಬ ವರದಿ ನೀಡಿರುವುದರಿಂದ ಕೇಂದ್ರ ತನಿಖಾ ದಳ (ಸಿಬಿಐ) ಈ ನಿಟ್ಟಿನಲ್ಲಿ ಮೂರನೆಯವರ ಅಭಿಪ್ರಾಯವನ್ನು ಪಡೆಯಲು ಮುಂದಾಗಿದೆ. ಹೀಗೊಂದು ಹೇಳಿಕೆಯನ್ನು ಸ್ವತಃ ಸಿಬಿಐ 2016ರ ಫೆಬ್ರವರಿಯಲ್ಲಿ ಬಾಂಬೆ ಹೈಕೋರ್ಟ್‌ಗೆ ನೀಡಿದೆ.

ದಾಭೋಲ್ಕರ್‌ ಮತ್ತು ಪನ್ಸಾರೆ ಕೊಲೆಯ ತನಿಖೆ ಸನಾತನ ಸಂಸ್ಥೆಯ ಬಾಗಿಲನ್ನು ತಟ್ಟಿತು. 2015ರ ಸೆಪ್ಟೆಂಬರ್‌ನಲ್ಲಿ ಪನ್ಸಾರೆ ಕೊಲೆಯ ಮೇಲೆ ಬಂಧಿತನಾದ ಸಮೀರ್ ಗಾಯಕ್‌ವಾಡ್‌ ಸಂಸ್ಥೆಯ ಸಾಧಕನಾಗಿದ್ದ. ಜೂನ್‌ 2016ರಲ್ಲಿ ಧಾಬೋಲ್ಕರ್‌ ಕೊಲೆಯ ಸಂಬಂಧ ಬಂಧಿತನಾದ ವೀರೇಂದ್ರ ತಾವ್ಡೆ ಕೂಡ ಓರ್ವ ಸಾಧಕನೇ. ಪ್ರಕರಣದಲ್ಲಿ 2016ರ ನವೆಂಬರ್‌ನಲ್ಲಿ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ತಾವ್ಡೆಯನ್ನು ‘ಪ್ರಮುಖ ಸಂಚುಕೋರ’ ಎಂದು ಹೆಸರಿಸಲಾಗಿದೆ. ಆತನ ಸಂಸ್ಥೆಯ ಸಹವರ್ತಿಗಳಾದ ಸರಂಗ್‌ ಅಕೋಲ್ಕರ್‌, ವಿನಯ್‌ ಪವಾರ್‌ ಮತ್ತು ರುದ್ರ ಪಾಟೀಲ್‌ರನ್ನು ಇದರಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ.

ಧಾಬೋಲ್ಕರ್‌ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹಲವು ಸಾಧಕರ ವಿಚಾರಣೆಯ ನಂತರ ಸಂಸ್ಥೆಯ ಮುಖ್ಯಸ್ಥ ಡಾ. ಜಯಂತ್‌ ಬಾಲಾಜಿ ಅಠಾವಳೆಯನ್ನೂ ವಿಚಾರಣೆಗೆ ಒಳಪಡಿಸಿದೆ. ಅವರ ಆಪ್ತ ಸಹಾಯಕ ವಿರೇಂದ್ರ ಮರಾಠೆಯನ್ನೂ ಗೋವಾದ ರಾಮನಾಥಿ ಆಶ್ರಮದಲ್ಲಿ 25 ಫೆಬ್ರವರಿ 2016ರಂದು ವಿಚಾರಣೆ ನಡೆಸಲಾಗಿದೆ. ಮುಂಬೈ ಮಿರರ್‌ನಲ್ಲಿ 25 ಫೆಬ್ರವರಿ 2016ರಲ್ಲಿ ಪ್ರಕಟವಾದ ವರದಿ ಪ್ರಕಾರ, ‘ಸಿಬಿಐ ಎಎಸ್‌ಪಿ ಎಸ್‌.ಆರ್‌. ಸಿಂಗ್‌ ನೇತೃತ್ವದ ತಂಡ ಸಂಸ್ಥೆಯ ಗೋವಾದ ಪೋಂಡಾದ ಮುಖ್ಯ ಕಚೇರಿಯಲ್ಲಿ ಎರಡು ದಿನಗಳ ಕಾಲ ಅಠಾವಳೆ ಮತ್ತು ಸಂಸ್ಥೆಯ ನಿರ್ದೇಶಕ ವೀರೇಂದ್ರ ಮರಾಠೆಯನ್ನು ವಿಚಾರಣೆ ನಡೆಸಲಾಗಿದೆ.’ ಎರಡನೇ ಬಾರಿಗೆ ಅಠಾವಳೆಯನ್ನು 2017ರ ಫೆಬ್ರವರಿ ಅಂತ್ಯದಲ್ಲಿ ಮತ್ತು ಮಾರ್ಚ್‌ ಆರಂಭದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ಈ ಬಾರಿ ಪನ್ಸಾರೆ ಕೊಲೆಯ ತನಿಖೆ ನಡೆಸುತ್ತಿರುವ ‘ವಿಶೇಷ ತನಿಖಾ ದಳ’ ಅವರನ್ನು ವಿಚಾರಣೆ ನಡೆಸಿತ್ತು...

(ಇದು ಲೇಖಕ ಧೀರೇಂದ್ರ ಕೆ. ಝಾ ಬರೆದ ‘ಶ್ಯಾಡೋ ಆರ್ಮೀಸ್’ ಪುಸ್ತಕದ ನಾಲ್ಕನೇ ಅಧ್ಯಾಯ. ಇನ್ನೂ ಒಂದು ಕಂತಿನಲ್ಲಿ ‘ಸನಾತನ ಸಂಸ್ಥಾ’ ಬಗೆಗಿನ ಅಧ್ಯಾಯ ಪ್ರಕಟವಾಗಲಿದೆ. )

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 2: ಮಡ್ಗಾಂವ್‌ & ಸರಣಿ ಬಾಂಬ್‌ ಸ್ಫೋಟಗಳ ಕರಾಳ ಇತಿಹಾಸ

Also read: ಸ್ಟೋರಿ ಆಫ್‌ ಸನಾತನ ಸಂಸ್ಥಾ- 3: ವಿಷ್ಣುವಿನ ಅವತಾರ ಪುರುಷ ಅಠಾವಳೆ & ಪ್ರಗತಿಪರರ ಬಗ್ಗೆ ಹುಟ್ಟಿಕೊಂಡ ಹಗೆತನ