ಗೊಂದಲದಲ್ಲಿ ‘ಸಮ್ಮಿಶ್ರ’ ಹಗ್ಗಜಗ್ಗಾಟ; 2019ರಲ್ಲಿ ಶುರುವಾಗಲಿದೆ ಅಸಲಿ ರಾಜಕೀಯದಾಟ!
COVER STORY

ಗೊಂದಲದಲ್ಲಿ ‘ಸಮ್ಮಿಶ್ರ’ ಹಗ್ಗಜಗ್ಗಾಟ; 2019ರಲ್ಲಿ ಶುರುವಾಗಲಿದೆ ಅಸಲಿ ರಾಜಕೀಯದಾಟ!

ಸಮ್ಮಿಶ್ರ ಸರಕಾರದ ವಿಚಾರದಲ್ಲಿ ಏನೆಲ್ಲಾ ಗೊಂದಲಗಳಿದ್ದರೂ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಸದ್ಯಕ್ಕೆ ಹೆಚ್ಚು ಗಮನ ಕೇಂದ್ರೀಕರಿಸಿರುವುದು 2019ರ ಲೋಕಸಭಾ ಚುನಾವಣೆಯ ಮೇಲೆ.

2019ರ ಲೋಕಸಭಾ ಚುನಾವಣೆಗೆ ಅಖಾಡ ಸಜ್ಜಾಗುತ್ತಿರುವ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಗಾದಿಯ ಸುತ್ತ ಒಂದಷ್ಟು ಗೊಂದಲಗಳು ಸೃಷ್ಟಿಯಾಗಿವೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ನಡೆಸುತ್ತಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ಎದ್ದಿರುವ ಈ ಗೊಂದಲವನ್ನು ಎರಡೂ ಪಕ್ಷಗಳು ಮುಂದುವರಿಸುತ್ತಿವೆ.

ನೂರು ದಿನ ಪೂರೈಸಿರುವ ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ಸದ್ಯ ಹೆಚ್ಚು ಸದ್ದು ಮಾಡುತ್ತಿದೆ. ಈ ಹಿಂದೆ ಮತ್ತೆ ಮುಖ್ಯಮಂತ್ರಿಯಾಗುವ ಆಸೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರೆ, ಈಗ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ಸಾಕಷ್ಟು ಜನರಿದ್ದಾರೆ ಎಂದಿದ್ದಾರೆ. ಈ ಸಾಕಷ್ಟು ಜನರ ಪೈಕಿ ಕುಮಾರಸ್ವಾಮಿ ಪ್ರಸ್ತಾಪಿಸಿರುವ ಹೆಸರು – ಆರ್‌.ವಿ. ದೇಶಪಾಂಡೆ.

ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಎದ್ದಿರುವ ಗೊಂದಲ ಪರಿಹರಿಸಿಕೊಳ್ಳಲು ಮುಂದಾಗಿದೆ. ಆದರೆ, ಈ ನಡುವೆ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ನಡುವೆ ಎಲ್ಲವೂ ಸರಿಯಿಲ್ಲ ಎಂಬುದರ ಜತೆಗೆ ಕಾಂಗ್ರೆಸ್‌ನಲ್ಲಿ ಈಗ ಸಿದ್ದರಾಮಯ್ಯ ಅವರನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಈಗ ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರೂ ಆಗಿರುವ ಸಿದ್ದರಾಮಯ್ಯ ಈಗ ಕೈ ಹೈಕಮಾಂಡ್‌ನ ಭಾಗ. ಹೀಗಾಗಿ ಕೆ.ಸಿ. ವೇಣುಗೋಪಾಲ್‌ ಮುಂದೆ ಕೈಕಟ್ಟಿ ಕೂರುವ ಅನಿವಾರ್ಯ ಈಗ ಸಿದ್ದರಾಮಯ್ಯ ಅವರಿಗಿಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ನಿಯಂತ್ರಿಸುವುದು ಸದ್ಯದ ಮಟ್ಟಿಗೆ ಕಷ್ಟವೇ.

ಮೇಲ್ಮೋಟಕ್ಕೆ ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಾಗಿರುವಂತೆ ಕಂಡರೂ ಕುಮಾರಸ್ವಾಮಿ ಹೇಳಿಕೆಗಳು ಹಾಗೂ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸರಕಾರದಲ್ಲಿ ಜೆಡಿಎಸ್‌ ಇನ್ನೂ ಕಾಂಗ್ರೆಸ್‌ನ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ಕಾಣುತ್ತದೆ. ಸಮ್ಮಿಶ್ರ ಸರಕಾರಕ್ಕೆ 100 ದಿನ ಪೂರೈಸಿದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಭೇಟಿಗೆ ತೆರಳಿದ್ದ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ರಾಹುಲ್‌ಗೆ ದೂರು ಹೇಳಿಬಂದಿದ್ದಾರೆ ಎಂಬ ವದಂತಿಗಳೂ ಹಬ್ಬಿದ್ದವು.

ಮತ್ತೆ ಮುಖ್ಯಮಂತ್ರಿಯಾಗುವ ಆಸೆಯ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ ಬಳಿಕವೂ ಕುಮಾರಸ್ವಾಮಿ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಸಿದ್ದರಾಮಯ್ಯ ಬಗ್ಗೆ ಕುಮಾರಸ್ವಾಮಿ ಅಸಮಾಧಾನ ಇನ್ನೂ ಹೊಗೆಯಾಡುತ್ತಲೇ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಸಮ್ಮಿಶ್ರ ಸರಕಾರ ಹಾಗೂ ಸಿದ್ದರಾಮಯ್ಯ ಬಗ್ಗೆ ಹಬ್ಬುತ್ತಿರುವ ವದಂತಿಗಳ ಲಾಭವನ್ನೂ ಜೆಡಿಎಸ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ. ಆದರೆ, ಇಂಥ ವದಂತಿಗಳಿಂದ ಯಾವುದೇ ರಾಜಕೀಯ ಪಕ್ಷಗಳಿಗೆ ದೀರ್ಘಕಾಲಿಕ ಪ್ರಯೋಜನ ಕಡಿಮೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

“ರಾಜಕೀಯದಲ್ಲಿ ವದಂತಿಗಳು, ಹೇಳಿಕೆ, ಪ್ರತಿ ಹೇಳಿಕೆಗಳಿಂದ ಪಕ್ಷಗಳಿಗೆ ದೀರ್ಫಕಾಲಿಕ ಪ್ರಯೋಜನ ಕಡಿಮೆ. ನಮ್ಮಲ್ಲಿ ವದಂತಿಗಳು ಕೇವಲ ಆಯಾ ಕಾಲಕ್ಕೆ ಸದ್ದು ಮಾಡುತ್ತವೆ ಅಷ್ಟೆ. ಇಂಥ ವದಂತಿಗಳು ಮತದಾರರ ಮತಚಲಾಯಿಸುವ ಮನೋಭಾವದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಡಾ. ಹರೀಶ್‌ ರಾಮಸ್ವಾಮಿ.

ಭಾರತದಲ್ಲಿ ಯಾವ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಅಥವಾ ಯಾವ ಅಭ್ಯರ್ಥಿಗೆ ಮತ ನೀಡಬೇಕು ಎಂಬುದನ್ನು ಜನರು ಸಾಕಷ್ಟು ಮೊದಲೇ ನಿರ್ಧರಿಸಿರುತ್ತಾರೆ. ಹೀಗಾಗಿ ಸಮ್ಮಿಶ್ರ ಸರಕಾರದ ಗೊಂದಲ, ವದಂತಿಗಳು 2019ರ ಲೋಕಸಭಾ ಚುನಾವಣೆ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ.
- ಡಾ. ಹರೀಶ್‌ ರಾಮಸ್ವಾಮಿ, ಹಿರಿಯ ರಾಜಕೀಯ ವಿಶ್ಲೇಷಕ

ಹರೀಶ್‌ ರಾಮಸ್ವಾಮಿ ಅವರು ಹೇಳುವಂತೆ ಸಮ್ಮಿಶ್ರ ಸರಕಾರದ ಗೊಂದಲ, ವದಂತಿಗಳೇನೋ ಲೋಕಸಭಾ ಚುನಾವಣೆಯ ಮೇಲೆ ನಿರೀಕ್ಷಿತ ಪರಿಣಾಮ ಬೀರದೇ ಇರಬಹುದು. ಆದರೆ, ಈ ಸನ್ನಿವೇಶದ ಪ್ರಯೋಜನ ಪಡೆಯದೆ ಬಿಜೆಪಿ ಸುಮ್ಮನಂತೂ ಕೂರುವುದಿಲ್ಲ. ಕಾಂಗ್ರೆಸ್‌- ಜೆಡಿಎಸ್‌ನ ರಾಜಕೀಯ ತಿಕ್ಕಾಟದ ಲಾಭ ಸ್ವಲ್ಪಮಟ್ಟಿಗಾದರೂ ಬಿಜೆಪಿಗೆ ಆಗದೇ ಇರದು.

ಹಾಗೆ ನೋಡಿದರೆ ಬಿಜೆಪಿ ಲೋಕಸಭಾ ಚುನಾವಣೆಗೆ ಹೊಸೆಯುತ್ತಿರುವ ಚುನಾವಣಾ ತಂತ್ರಗಳೇ ಬೇರೆ. 2014ರಲ್ಲಿ ಮೋದಿ ಅಲೆಯನ್ನು ಬಳಸಿಕೊಂಡು ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದ ಬಿಜೆಪಿ ಈ ಬಾರಿ ಹಿಂದುತ್ವ ಹಾಗೂ ಅಯೋಧ್ಯೆ ವಿಚಾರಗಳನ್ನು ಮುನ್ನೆಲೆಗೆ ತರುವ ಸಾಧ್ಯತೆ ಹೆಚ್ಚಾಗಿದೆ. ಬಿಜೆಪಿಗೆ ಮೋದಿ ಪ್ರಭಾವ ಕುಂದಿದ್ದರೂ ಹಿಂದುತ್ವದ ವಿಚಾರ ಇನ್ನೂ ಲಾಭಕರವಾಗಿಯೇ ಇದೆ.

2019ರ ಚುನಾವಣೆಯಲ್ಲಿ ಹಿಂದುತ್ವವನ್ನು ಚುನಾವಣಾ ವಿಷಯವಾಗಿಸಿಕೊಳ್ಳಲು ಬಿಜೆಪಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಜೆಡಿಎಸ್‌- ಕಾಂಗ್ರೆಸ್‌ ಹಗ್ಗಜಗ್ಗಾಟದ ವಿಷಯದಲ್ಲಿ ಕಾಲಹರಣ ಮಾಡುವುದು ಈ ಹಂತದಲ್ಲಿ ಬಿಜೆಪಿಗೂ ಬೇಕಾಗಿಲ್ಲ. ಹೀಗಾಗಿ ಜೆಡಿಎಸ್‌- ಕಾಂಗ್ರೆಸ್ ಸಮ್ಮಿಶ್ರ ಸರಕಾರದೊಳಗೆ ನಡೆಯುತ್ತಿರುವ ವಿದ್ಯಮಾನಗಳಿಗೆ ಬಿಜೆಪಿ ಹೆಚ್ಚು ಪ್ರತಿಕ್ರಿಯೆಗೆ ಮುಂದಾಗುತ್ತಿಲ್ಲ. ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿರುವ ಬಿಜೆಪಿ ಯಾವ ವಿಚಾರದಲ್ಲೂ ಈ ಸರಕಾರದ ಬಗ್ಗೆ ಗಂಭೀರವಾಗಿ ಟೀಕಿಸಲು ಹೋಗುತ್ತಿಲ್ಲ.

ಒಂದು ಕಡೆ ಗೊಂದಲಗಳಲ್ಲೇ ನೂರು ದಿನ ಪೂರೈಸಿರುವ ಸಮ್ಮಿಶ್ರ ಸರಕಾರ, ಮತ್ತೊಂದು ಕಡೆ ಸಮ್ಮಿಶ್ರ ಸರಕಾರದ ಬಗ್ಗೆ ಈವರೆಗೂ ಗಂಭೀರವಾದ ಟೀಕೆಗಳನ್ನು ಮಾಡಲು ಮುಂದಾಗದ ಬಿಜೆಪಿಯನ್ನು ನೋಡಿದರೆ ಈ ಮೂರೂ ಪಕ್ಷಗಳೂ ರಾಜ್ಯ ರಾಜಕೀಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ 2019ರ ಲೋಕಸಭಾ ಚುನಾವಣೆಗೇ ಹೆಚ್ಚು ಗಮನ ಕೊಟ್ಟಿರುವಂತೆ ಕಾಣುತ್ತಿದೆ. ಬಿಜೆಪಿ ಕೂಡಾ ಲೋಕಸಭಾ ಚುನಾವಣೆಯವರೆಗೂ ಸಮ್ಮಿಶ್ರ ಸರಕಾರದ ತಂಟೆಗೆ ಹೋಗದಂತೆ ಸುಮ್ಮನಿರಲು ನಿರ್ಧರಿಸಿರುವಂತಿದೆ. ಇಲ್ಲವಾದರೆ ರಾಜ್ಯ ಬಿಜೆಪಿ ನಾಯಕರು ಈ ಮೂರು ತಿಂಗಳ ಕಾಲ ತುಟಿ ಎರಡು ಮಾಡದಂತೆ ಸುಮ್ಮನೆ ಕೂರುವಂಥವರಲ್ಲ.

ಸಮ್ಮಿಶ್ರ ಸರಕಾರದ ಗೊಂದಲಗಳನ್ನು ಶಮನ ಮಾಡುವಂತೆ ರಾಜಕೀಯ ತೆರೆಯ ಮೇಲೆ ಆಗಾಗ ಕಾಣಿಸಿಕೊಳ್ಳುವ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಚಿತ್ತವೂ ಲೋಕಸಭಾ ಚುನಾವಣೆಯ ಮೇಲೆಯೇ ಇರುವಂತಿದೆ. ಲೋಕಸಭಾ ಚುನಾವಣೆಯವರೆಗೂ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿಯ ಅಸಮಾಧಾನಗಳೇನೇ ಇದ್ದರೆ ಅವೆಲ್ಲವೂ ತಾತ್ಕಾಲಿಕ. ಹೀಗಾಗಿ ರಾಷ್ಟ್ರಮಟ್ಟದಲ್ಲೂ, ರಾಜ್ಯದಲ್ಲೂ ನಿಜವಾದ ರಾಜಕೀಯದಾಟ ಶುರುವಾಗುವುದು 2019ರ ಲೋಕಸಭಾ ಚುನಾವಣೆಯ ನಂತರವೇ.