8.2 % ಏರಿಕೆ ಕಂಡ ಜಿಡಿಪಿ: ‘ಬೆಳವಣಿಗೆ ಒಳ್ಳೆಯದು, ಆದರೆ ಅದೇ ಎಲ್ಲವೂ ಅಲ್ಲ’
COVER STORY

8.2 % ಏರಿಕೆ ಕಂಡ ಜಿಡಿಪಿ: ‘ಬೆಳವಣಿಗೆ ಒಳ್ಳೆಯದು, ಆದರೆ ಅದೇ ಎಲ್ಲವೂ ಅಲ್ಲ’

ಸ್ಥಿರ ಜಿಡಿಪಿ ಬೆಳವಣಿಗೆ ದಾಖಲಿಸಲು ಮೋದಿ ತಮ್ಮ ‘ಸಬ್‌‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಮಂತ್ರವನ್ನು ಕಾರ್ಯರೂಪಕ್ಕೆ ತರಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು.

ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ನಿವ್ವಳ ಉತ್ಪನ್ನ ದರ (ಜಿಡಿಪಿ) ಅತ್ಯಂತ ವೇಗವಾದ ಬೆಳವಣಿಗೆಯನ್ನು ದಾಖಲಿಸಿದ್ದು ಶೇಕಡಾ 8.2ರಷ್ಟು ಏರಿಕೆಯಾಗಿದೆ. ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಈ ಗರಿಷ್ಠ ಬೆಳವಣಿಗೆ ದಾಖಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇಕಡಾ 5.5 ರಷ್ಟು ಜಿಡಿಪಿ ಏರಿಕೆಯಾಗಿತ್ತು.

ದೇಶದ ಕರೆನ್ಸಿ ಡಾಲರ್‌ ವಿರುದ್ಧ ದಿನೇ ದಿನೇ ದುರ್ಬಲಗೊಳ್ಳುತ್ತಿರುವ ಸಮಯದಲ್ಲಿಯೇ ಈ ಬೆಳವಣಿಗೆ ದಾಖಲಾಗಿದೆ. ಈ ಹಿಂದೆ ಜನವರಿ-ಮಾರ್ಚ್‌ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇಕಡಾ 7.7 ಬೆಳವಣಿಗೆ ದರ ದಾಖಲಿಸಿತ್ತು. ಇದೀಗ ಶೇಕಡಾ 8.2ರಷ್ಟು ಏರಿಕೆ ಕಂಡಿದೆ.

ಗ್ರಾಹಕರು ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದರಿಂದ (ಪಬ್ಲಿಕ್‌ ಸ್ಪೆಂಡಿಂಗ್‌) ಮತ್ತು ಉತ್ಪಾದನಾ ವಲಯ, ಕೃಷಿ ವಲಯ ಸೇರಿದಂತೆ 8 ವಲಯಗಳ ಅತ್ಯುತ್ತಮ ಬೆಳವಣಿಗೆಯಿಂದಾಗಿ ಈ ಏರಿಕೆ ಕಂಡು ಬಂದಿದೆ. “ಉತ್ಪಾದನಾ ವಲಯದ ಬೆಳವಣಿಗೆ ಕಳೆದ ವರ್ಷ ಶೇಕಡಾ 1.8 ಇಳಿಕೆಯಲ್ಲಿತ್ತು. ಇದನ್ನು ಮೀರಿ ಈ ಬಾರಿ ಶೇಕಡಾ 13.5 ಬೆಳವಣಿಗೆಯನ್ನು ದಾಖಲಿಸಿದೆ. ಜತೆಗೆ ಕಳೆದ ವರ್ಷ ಶೇಕಡಾ 3ರಷ್ಟು ಬೆಳವಣಿಗೆ ಹೊಂದಿದ್ದ ಕೃಷಿ ವಲಯ ಈ ಬಾರಿ ಶೇಕಡಾ 5.3ರಷ್ಟು ಏರಿಕೆ ಕಂಡಿದೆ. ಇದರ ಜತೆಗೆ ಜಿಎಸ್‌ಟಿಯ ಜಾರಿಯಲ್ಲಿನ ಗೊಂದಲಗಳೂ ನಿವಾರಣೆಯಾಗಿ ಈ ಬೆಳವಣಿಗೆ ದಾಖಲಾಗಿದೆ,” ಎನ್ನುತ್ತಾರೆ ಆರ್ಥಿಕ ತಜ್ಞ ರಾಘವೇಂದ್ರ ರಾವ್‌.

ಈ ಏರಿಕೆ ಹಿಂದೆ ಚುನಾವಣೆಗಳ ಕೊಡುಗೆಯೂ ಇದೆ ಎನ್ನುವುದು ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಕೇಶವ ಅಭಿಮತ. “ಜನರ ಖರೀದಿಸುವಿಕೆಯಲ್ಲಾದ ಹೆಚ್ಚಳವೂ ಜಿಡಿಪಿ ಏರಿಕೆಗೆ ಕಾರಣವಾಗಿದೆ. ಈ ಮೂರು ತಿಂಗಳಲ್ಲಿ ಕರ್ನಾಟಕ ಚುನಾವಣೆ ಸೇರಿ ಹಲವು ಚುನಾವಣೆಗಳು ನಡೆದವು. ಚುನಾವಣೆ ಸಂದರ್ಭದಲ್ಲಿ ಜನರು ಹೆಚ್ಚಿನ ಹಣವನ್ನು ಖರ್ಚು ಮಾಡುವ ಮೂಲಕ ಆರ್ಥಿಕತೆಗೆ ಹೆಚ್ಚಿನ ಹಣ ಹರಿದು ಬರುತ್ತದೆ. ಇದು ಕೂಡ ಬೆಳವಣಿಗೆಗೆ ಕೊಡುಗೆ ನೀಡಿದೆ,” ಎನ್ನುತ್ತಾರೆ ಅವರು. ಆದರೆ ಇದೇ ಅವಧಿಯಲ್ಲಿ ಹೂಡಿಕೆ ಕೂಡ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ವಿವರಿಸುತ್ತಾರೆ ಅವರು.

ಹಾಗಂಥ ಈ ಬೆಳವಣಿಗೆ ಇಳಿಕೆಯಾಗುವ ಲಕ್ಷಣಗಳಿಲ್ಲ. “8 ಮುಖ್ಯ ವಲಯಗಳಲ್ಲಾಗಿರುವ ಬೆಳವಣಿಕೆಯನ್ನು ನೋಡಿದರೆ ಇದು ಸ್ಥಿರವಾಗಿರುವ ಲಕ್ಷಣಗಳು ಕಾಣಿಸುತ್ತಿವೆ. ಅನಾಣ್ಯೀಕರಣ ನಡೆದು ಸರಿ ಸುಮಾರು ಎರಡು ವರ್ಷ ಕಳೆಯುತ್ತಾ ಬಂದಿದ್ದು, ಅದಾದ ನಂತರ ನಡದಿರುವ ಬೆಳವಣಿಗೆ ಇದಾಗಿದೆ. ಹೀಗಾಗಿ ಇದು ಮುಂದುವರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ,” ರಾಘವೇಂದ್ರ ರಾವ್‌. ಈ ಹಂತದಲ್ಲಿ ಸರಕಾರ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು. ಮುಖ್ಯವಾಗಿ ಈ ಬೆಳವಣಿಯನ್ನು ಉಳಿಸಿಕೊಳ್ಳಲು ಈಗಿರುವ ಉತ್ತಮ ಹೂಡಿಕೆ ವಾತಾವರಣವನ್ನು ಮುಂದುವರಿಸಬೇಕು. ಜತೆಗೆ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಕಠಿಣ ತೀರ್ಮಾನಗಳನ್ನೂ ಸದ್ಯಕ್ಕೆ ತೆಗೆದುಕೊಳ್ಳಬಾರದು. ಆಗ ಇದನ್ನು ಸ್ಥಿರವಾಗಿ ಮುಂದುವರಿಸಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

ರೂಪಾಯಿ ಕುಸಿತ, ತೈಲ ಬೆಲೆ ಏರಿಕೆಯ ಸವಾಲು

ಒಂದೆಡೆ ಜಿಡಿಪಿ ಉತ್ತಮ ಬೆಳವಣಿಗೆ ದರ ದಾಖಲಿಸಿರುವ ಹೊತ್ತಲ್ಲೇ ಇತ್ತ ರೂಪಾಯಿ ದಾಖಲೆ ಕುಸಿತ ಕಾಣುತ್ತಿದೆ. ಕಳೆದ ಮೂರು ವರ್ಷಗಳಲ್ಲೇ ತಿಂಗಳೊಂದರಲ್ಲಿ ರೂಪಾಯಿ ಅತ್ಯಂತ ದೊಡ್ಡ ಕುಸಿತವನ್ನು ಆಗಸ್ಟ್‌ನಲ್ಲಿ ದಾಖಲಿಸಿದ್ದು ಶೇಕಡಾ 3.6 ರಷ್ಟು ಕುಸಿತವಾಗಿದೆ. ಸದ್ಯ 1 ಡಾಲರ್‌ಗೆ 70.87 ರೂಪಾಯಿ ದರವಿದ್ದು ತನ್ನ ಸಾರ್ವಕಾಲಿಕ ಕುಸಿತವನ್ನು ರೂಪಾಯಿ ಕಂಡಿದೆ. ಇನ್ನೊಂದು ಕಡೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಸರ್ವಕಾಲಿಕ ಏರಿಕೆಯ ಹಾದಿಯಲ್ಲಿವೆ. ಬೆಂಗಳೂರಿನಲ್ಲಿ ಶನಿವಾರ ಪೆಟ್ರೋಲ್‌ ದರ 81.12 ರೂಪಾಯಿ ಇದ್ದರೆ, ಡೀಸೆಲ್‌ಗೆ 72.51 ರೂ. ದರವಿದೆ.

ತೈಲ ಬೆಲೆ ಏರಿಕೆ ಮತ್ತು ರೂಪಾಯಿ ಕುಸಿತ ಜಿಡಿಪಿ ಮೇಲೆ ಪರಿಣಾಮ ಬೀರಲಿದೆ. ಆದರೆ ಅದನ್ನು ಸರಕಾರ ಹೇಗೆ ನಿಭಾಯಿಸುತ್ತದೆ ಎನ್ನುವುದರ ಮೇಲೆ ಮುಂದಿನ ಜಿಡಿಪಿಯ ಭವಿಷ್ಯ ನಿಂತಿದೆ. ಈ ಹಂತದಲ್ಲಿ ಸರಕಾರ ತೆಗೆದುಕೊಳ್ಳುವ ತೀರ್ಮಾನಗಳು ಮುಖ್ಯವಾಗಲಿವೆ ಎನ್ನುತ್ತಾರೆ ರಾಘವೇಂದ್ರ ರಾವ್‌.

ಸಬ್ ಕಾ ಸಾಥ್‌ ಸಬ್‌ ಕಾ ವಿಕಾಸ್

ಆದರೆ ಇದರಾಚೆಗೆ ಸ್ಥಿರ ಬೆಳವಣಿಗೆ ದಾಖಲಿಸಲು ಮೋದಿ ತಮ್ಮ ಸಬ್‌‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಮಂತ್ರವನ್ನು ಕಾರ್ಯರೂಪಕ್ಕೆ ತರಬೇಕು ಎನ್ನುತ್ತಾರೆ ಕೇಶವ್.

“ಜಿಡಿಪಿ ಬೆಳವಣಿಗೆ ಎನ್ನುವುದು ಒಂದು ಧನಾತ್ಮಕ ಅಂಶ. ಹಾಗಂಥ ಇದು ಹೊಸದೇನೂ ಅಲ್ಲ. ಈ ಹಿಂದೆಯೂ ನಾವು ಇದನ್ನು ಸಾಧಿಸಿದ್ದೇವೆ. ಆದರೆ ಯುಪಿಎ ಸರಕಾರದವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಕರೆದುಕೊಂಡು ಹೋಗಲಿಲ್ಲ. ಇದರಿಂದ ಅವರು ಸೋಲಬೇಕಾಯಿತು. ಆ ತಪ್ಪು ಈ ಬಾರಿ ಮರು ಕಳಿಸಬಾರದು. ಪ್ರಧಾನಿ ನರೇಂದ್ರ ಮೋದಿ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಮಾಡುತ್ತೇವೆ ಎಂದರು. ಅದನ್ನು ಈಗ ಜಾರಿಗೊಳಿಸಬೇಕಾಗಿದೆ. ಹೀಗಾದಾಗ ಮಾತ್ರ ಜಿಡಿಪಿ ಸ್ಥಿರವಾಗಲು ಸಾಧ್ಯ,” ಎನ್ನುತ್ತಾರೆ ಅವರು.

ಸದ್ಯಕ್ಕೆ ನಾವು ಬೆಳವಣಿಗೆ ಬಗ್ಗೆ ಮಾತ್ರ ಗಮನವನ್ನು ನೀಡುತ್ತಿದ್ದೇವೆ. ಕಳೆದ ವರ್ಷದ ಸಮಾನತೆಯ ಸೂಚ್ಯಂಕ ನೋಡಿದರೆ ಸೃಷ್ಟಿಯಾದ ಆದಾಯದಲ್ಲಿ ಶೇಕಡಾ 73 ಕೇವಲ ಶೇಕಡಾ 1ರಷ್ಟು ಶ್ರೀಮಂತರ ಪಾಲಾಗಿದೆ. ಶ್ರೀಮಂತರು ಮತ್ತು ಬಡ ಜನರ ನಡುವೆ ಅಸಮಾನತೆ ವೃದ್ಧಿಸುತ್ತಿರುವುದನ್ನು ಇದು ತೋರಿಸುತ್ತಿದೆ.

ಇದನ್ನು ತೊಡೆದು ಹಾಕಲು, “ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಕಡೆ ಗಮನ ಹರಿಸಬೇಕು. ಇದಕ್ಕೆ ಉದ್ಯೋಗ ಸೃಷ್ಟಿ ನಡೆಯಬೇಕು. ಈ ಮೂಲಕ ಶೇಕಡಾ 10ರ ದರದಲ್ಲಿ ಸ್ಥಿರವಾದ ಅಭಿವೃದ್ಧಿಯನ್ನು ಸುಮಾರು 20 ವರ್ಷಗಳವರೆಗೆ ಸಾಧಿಸಿದ್ದೇ ಆದಲ್ಲಿ ನಾವು ಚೀನಾಕ್ಕೆ ಪೈಪೋಟಿ ನೀಡಬಲ್ಲೆವು. ಅಭಿವೃದ್ಧಿಯ ಓಟದಲ್ಲಿ ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋದಾಗ ಮಾತ್ರ ಇದೆಲ್ಲಾ ಸಾಧ್ಯವಾಗುತ್ತದೆ,” ಎನ್ನುತ್ತಾರೆ ಕೇಶವ್‌. ಹೀಗಾಗಿ ‘ಬೆಳವಣಿಗೆ ಒಳ್ಳೆಯದು. ಆದರೆ ಅದೇ ಎಲ್ಲವೂ ಅಲ್ಲ’ ಎಂದು ಎನ್ನುವುದು ಅವರ ವಾದ.