samachara
www.samachara.com
ಸ್ಟೋರಿ ಆಫ್‌ ಸನಾತನ ಸಂಸ್ಥಾ- 3: ವಿಷ್ಣುವಿನ ಅವತಾರ ಪುರುಷ ಅಠಾವಳೆ & ಪ್ರಗತಿಪರರ ಬಗ್ಗೆ ಹುಟ್ಟಿಕೊಂಡ ಹಗೆತನ
COVER STORY

ಸ್ಟೋರಿ ಆಫ್‌ ಸನಾತನ ಸಂಸ್ಥಾ- 3: ವಿಷ್ಣುವಿನ ಅವತಾರ ಪುರುಷ ಅಠಾವಳೆ & ಪ್ರಗತಿಪರರ ಬಗ್ಗೆ ಹುಟ್ಟಿಕೊಂಡ ಹಗೆತನ

ಅಠಾವಳೆಯ ಹಿನ್ನೆಲೆಯೂ ಆಸಕ್ತಿಕರವಾಗಿದೆ. ತಮ್ಮ ವೃತ್ತಿ ಆರಂಭಿಸಿದ್ದು 1970ರ ಸುಮಾರಿಗೆ ಬ್ರಿಟನ್‌ನಲ್ಲಿ; ಹಿಪ್ನೋತೆರಪಿಸ್ಟ್‌ ಆಗಿ ವೃತ್ತಿ ಆರಂಭಿಸಿದ ಅಠಾವಳೆ ಮುಂದೆ ದೇವರಾಗಿದ್ದೇ ಒಂದು ರೋಚಕ ಕಥೆ.

ಮೂಲ: ಧೀರೇಂದ್ರ ಕೆ. ಝಾ / ಕನ್ನಡಕ್ಕೆ: ಎನ್. ಸಚ್ಚಿದಾನಂದ.

ಅಠಾವಳೆಯ ನಿಲುವುಗಳು ಅಘಾತಕ್ಕೀಡು ಮಾಡಿ ಒಂದಷ್ಟು ಜನರ ಪ್ರತಿರೋಧಕ್ಕೆ ಗುರಿಯಾದ ಹೊತ್ತಲ್ಲೇ ಮತ್ತೊಂದಿಷ್ಟು ಜನ ಇದರ ಬಗ್ಗೆ ಆಕರ್ಷಿತರಾದರು. ಅವರೆಲ್ಲಾ ಪಶ್ಚಿಮ ಮಹಾರಾಷ್ಟ್ರದ ಮೇಲ್ವರ್ಗದ ಹಿಂದೂಗಳಾಗಿದ್ದರು. ಭಾರತವನ್ನು ಹಿಂದೂ ರಾಷ್ಟ್ರವಾಗಿಸಬೇಕು ಎಂಬ ತಮ್ಮ ಕನಸಿಗೆ ಸ್ವರೂಪ ನೀಡುವಂತಹ ಅಠಾವಳೆಯ ಮಾತುಗಳಿಗೆ ಮರುಳಾಗಿದ್ದರು.

ಈ ಅಠಾವಳೆಯ ಹಿನ್ನೆಲೆಯೂ ಆಸಕ್ತಿಕರವಾಗಿದೆ. ಆತ ತಮ್ಮ ವೃತ್ತಿ ಆರಂಭಿಸಿದ್ದು 1970ರ ಸುಮಾರಿಗೆ ಬ್ರಿಟನ್‌ನಲ್ಲಿ; ಹಿಪ್ನೋತೆರಪಿಸ್ಟ್‌ ಆಗಿ ವೃತ್ತಿ ಆರಂಭಿಸಿದ ಅವರು ಮುಂದೆ 1980ರ ಅಂತ್ಯದಲ್ಲಿ ಮುಂಬೈನ ಸಿಯೋನ್‌ (ಪಶ್ಚಿಮ) ದಲ್ಲಿ ಹಿಪ್ನೋಸಿಸ್‌ ಕ್ಲಿನಿಕ್‌ ಆರಂಭಿಸಿದರು. ಅಲ್ಲಿಗೆ ಬಂದವರೇ ತಮ್ಮ ಆಧ್ಯಾತ್ಮಿಕ ಶಿಬಿರಗಳನ್ನು ಆರಂಭಿಸಿದರು. ಈ ಹಂತದಲ್ಲಿ ಅಠಾವಳೆ ಮತ್ತು ಅವರ ಪತ್ನಿ ಕುಂದ ಅಠಾವಳೆ ಬೇರೆ ಬೇರೆ ಧಾರ್ಮಿಕ ಗುರುಗಳು ಮತ್ತು ಗುಂಪುಗಳ ಜತೆ ಸಂಪರ್ಕ ಸಾಧಿಸಿದರು ಮತ್ತು ಇವರುಗಳಿಗಾಗಿ ಆಧ್ಯಾತ್ಮ ವಿಜ್ಞಾನದ ಬಗ್ಗೆ ಉಪನ್ಯಾಸಗಳನ್ನು ನೀಡಲು ಆರಂಭಿಸಿದರು.

1991ರಲ್ಲಿ ‘ಸನಾತನ್‌ ಭಾರತೀಯ ಸಂಸ್ಕೃತಿ ಸಂಸ್ಥಾ’ ಸ್ಥಾಪಿಸಿದ ನಂತರ ತನ್ನ ಸಂಪರ್ಕಕ್ಕೆ ಬಂದಿದ್ದ ಆಧ್ಯಾತ್ಮಿಕ ಗುರುಗಳು ಮತ್ತು ಅವರ ಗುಂಪಿನ ಅನುಯಾಯಿಗಳಿಗೆ ಶಿಬಿರಗಳನ್ನು ಆಯೋಜನೆ ಮಾಡಲು ಆರಂಭಿಸಿದರು ಅಠಾವಳೆ. ಇದೇ ಸಮಯದಲ್ಲಿ ಹಲವು ಭಾಷೆಗಳಲ್ಲಿ ಪುಸ್ತಕಗಳನ್ನೂ ಪ್ರಕಟಿಸಿದರು. ತನ್ನ ಪುಸ್ತಕಗಳಲ್ಲಿ ಮತ್ತು ಪ್ರವಚನಗಳಲ್ಲಿ ಅವರು ‘ಸಾಧಕ’ರ ಕರ್ತವ್ಯಗಳ ಬಗ್ಗೆ ಹೇಳುತ್ತಿದ್ದರು. ದೇವರನ್ನು ಕಂಡುಕೊಳ್ಳುವುದು ಮತ್ತು ಆತನನ್ನು ಹಾಗೂ ಆತನ ಸತ್ಯವನ್ನು ತಲುಪುವುದು ಸಾಧಕರ ಪ್ರಮುಖ ಕರ್ತವ್ಯ ಎನ್ನುತ್ತಿದ್ದರು ಅಠಾವಳೆ. ಇದನ್ನು ಸಾಧಿಸಲು ಸಾಧಕರು ಗುರುವಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕಿತ್ತು. ಗುರುವನ್ನು ಅವರು ಪ್ರಶ್ನಿಸದೆ ಕಟ್ಟುನಿಟ್ಟಾಗಿ ಅನುಸರಿಬೇಕಿತ್ತು. ತಮ್ಮ ಚಳುವಳಿಯ ಉದ್ದೇಶ ಈಶ್ವರ ರಾಜ್ಯವನ್ನು ಸ್ಥಾಪಿಸುವುದು ಎಂದು ಬಹಿರಂಗವಾಗಿ ಹೇಳುತ್ತಿದ್ದರು ಅಠಾವಳೆ. ಭೂಮಿ ಮೇಲೆ ಕೆಟ್ಟ ಹವ್ಯಾಸಗಳಲ್ಲಿ ತೊಡಗಿಸಿಕೊಂಡಿರುವ, ಕೆಟ್ಟ ರಾಜಕೀಯ, ಹಣಕಾಸು ಮತ್ತು ಸಂಸ್ಕೃತಿಯ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಮತ್ತು ಧಾರ್ಮಿಕ ನಂಬಿಕೆಗಳನ್ನು ತಪ್ಪಾಗಿ ಬಿಂಬಿಸುವ ದುರ್ಜನರನ್ನು ನಾಶ ಮಾಡಿ ಈಶ್ವರ ರಾಜ್ಯ ಸ್ಥಾಪಿಸುವುದೇ ತಮ್ಮ ಉದ್ಧೇಶ ಎನ್ನುತ್ತಿದ್ದರು ಅಠಾವಳೆ.

ಸಂಸ್ಥೆಯ ಸ್ವ ರಕ್ಷಣಾ ತರಬೇತಿಯಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ಕೈಯಾರೆ ಗನ್‌ ಬಳಸುವುದು ಹೇಗೆ ಎಂದು ತಿಳಿಸಿಕೊಡಲಾಗುತ್ತಿತ್ತು. ಶೂಟಿಂಗ್‌ ಮಾಡುವ ಸಂದರ್ಭದಲ್ಲಿ ನಿಮ್ಮ ಗುರಿ ದುರ್ಜನರ ಮೇಲಿರಬೇಕು ಎಂದೂ ಇವರಿಗೆ ಪಾಠ ಮಾಡಲಾಗುತ್ತಿತ್ತು. ಸಂಸ್ಥೆಯ ಸಾಹಿತ್ಯ ಮತ್ತು ವಿವರಣೆಗಳನ್ನು ನೋಡಿದರೆ ಈ ದುರ್ಜನರು ಯಾರು ಎಂಬ ಸ್ಪಷ್ಟನೆ ಸಿಗುತ್ತಿತ್ತು. ಅವರು ಮತ್ಯಾರೂ ಆಗಿರಲಿಲ್ಲ. ಪ್ರಗತಿಪರರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಗ್ರಹಿಕೆಗೆ ಬರುವ ಹಿಂದೂ ವಿರೋಧಿಗಳೇ ಈ ದುರ್ಜನರಾಗಿದ್ದರು.

ಅಠಾವಳೆ ಸಿದ್ಧಪಡಿಸಿದ ‘ಕ್ಷತ್ರಿಯಧರ್ಮ ಸಾಧನಾ’ ಎಂಬ ಕೈಪಿಡಿಯ ಪ್ರಕಾರ ಶೇಕಡಾ 5ರಷ್ಟು ಅನುಯಾಯಿಗಳು ಶಸ್ತ್ರ ತರಬೇತಿ ಪಡೆಯುವುದು ಅಗತ್ಯವಾಗಿದೆ. ಅವಕಾಶ ಬಂದಾಗ ದೇವರೇ ಯಾವುದಾದರೊಂದು ರೂಪದಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾನೆ ಎಂಬುದಾಗಿ ಇದರಲ್ಲಿ ಬರೆಯಲಾಗಿದೆ. ಇದಿಷ್ಟಕ್ಕೇ ನಿಲ್ಲುವುದಿಲ್ಲ; ‘ಒಬ್ಬನಿಗೆ ಶೂಟಿಂಗ್‌ ಗೊತ್ತಿಲ್ಲ ಎಂದರೆ ಅದಕ್ಕೆ ಯಾವುದೇ ರೀತಿಯಲ್ಲೂ ಚಿಂತಿಸಬೇಕಾಗಿಲ್ಲ. ದೇವರ ನಾಮ ಸ್ಮರಣೆ ಮಾಡುತ್ತಾ ಆತ ಗುಂಡು ಹಾರಿಸಿದಲ್ಲಿ ದೇವರ ನಾಮ ಬಲದಿಂದ ಗುಂಡು ಗುರಿಯನ್ನು ತಲುಪುತ್ತದೆ,’ ಎಂದು ಇದರಲ್ಲಿ ಬರೆಯಲಾಗಿತ್ತು.

1990ರ ಮಧ್ಯ ಭಾಗದಲ್ಲಿ ಯಾವಾಗ ಅಠಾವಳೆಯ ಸಾಧಕರ ಸಂಖ್ಯೆ ದೊಡ್ಡ ಸಂಖ್ಯೆಯನ್ನು ತಲುಪಿತೋ ಆಗ ಇದಕ್ಕೊಂದು ಸಾಂಸ್ಥಿಕ ರೂಪವನ್ನೇ ನೀಡಿದರು. ಸಂಸ್ಥೆಯ ಪ್ರಾಣಾಯಾಮ ಮತ್ತು ಸತ್ಸಂಗ ಕಾರ್ಯಕ್ರಮಗಳಿಗೆ ಸೂಕ್ತವಾದ ಪಠ್ಯವನ್ನು ರಚನೆ ಮಾಡಲಾಯಿತು. ಇವುಗಳ ಆಧಾರದಲ್ಲಿ ತರಬೇತಿ ಪಡೆದ ಸಾಧಕರು ಶಿಬಿರಗಳು ಮತ್ತು ಸತ್ಸಂಗಗಳನ್ನು ಹೊಸ ಹೊಸ ಊರುಗಳಲ್ಲಿ ಆಯೋಜನೆ ಮಾಡಲು ಆರಂಭಿಸಿದರು. ಈ ಸತ್ಸಂಗಗಳಲ್ಲಿ ತಮ್ಮ ‘ಅನುಭೂತಿ’ಗಳನ್ನು ಹಂಚಿಕೊಳ್ಳುವಂತೆ ಸಾಧಕರು ಜನರನ್ನು ಪ್ರೇರೇಪಿಸುತ್ತಿದ್ದರು. ಇವರಲ್ಲಿ ವಿಶೇಷ ಆಸಕ್ತಿ ಕಂಡವರನ್ನು ತಮ್ಮ ಗುರು ಅಠಾವಳೆಯ ಬಳಿಗೆ ಎಳೆದು ತರುತ್ತಿದ್ದರು. ಈ ಅನುಭೂತಿಗಳನ್ನು ‘ಸನಾತನ್‌ ಪ್ರಭಾತ್‌’ನಲ್ಲಿ ಪ್ರಕಟಿಸಲಾಗುತ್ತಿತ್ತು. ಈ ಪತ್ರಿಕೆಯನ್ನು ಪ್ರತಿ ಸಾಧಕರೂ ದಿನಂಪ್ರತಿ ಓದಲೇಬೇಕಿತ್ತು. ಸಂಸ್ಥೆಯ ಪತ್ರಿಕೆಯಲ್ಲಿ ಪ್ರಕಟವಾಗುವ ಧಾರ್ಮಿಕ ಮತ್ತು ರಾಷ್ಟ್ರೀಯ ವಿಚಾರಗಳ ಚರ್ಚೆಯ ಜತೆಗೆ ಪತ್ರಿಕೆ ಓದುವುದನ್ನೂ ಸಾಧನೆ ಸಿದ್ಧಿಯ ಒಂದು ಭಾಗ ಎಂದು ಪರಿಗಣಿಸಲಾಗುತ್ತಿತ್ತು.

ದೇವರ ಅವತಾರ ಡಾ. ಜಯಂತ್‌ ಬಾಲಾಜಿ ಅಠಾವಳೆಗೆ ನಡೆಯುತ್ತಿರುವ ಪೂಜೆ
ದೇವರ ಅವತಾರ ಡಾ. ಜಯಂತ್‌ ಬಾಲಾಜಿ ಅಠಾವಳೆಗೆ ನಡೆಯುತ್ತಿರುವ ಪೂಜೆ
/ಸನಾತನ್‌ ಪ್ರಭಾತ್‌

‘ಈಶ್ವರ ರಾಜ್ಯ’ ಸ್ಥಾಪನೆಗಾಗಿ ಈಶ್ವರನ ಅವತಾರವೆತ್ತಿ ಬಂದಿರುವ ಅಠಾವಳೆ ತಮ್ಮ ಸಾಧಕರಿಗೆ ಶೇಕಡಾವಾರು ರೂಪದಲ್ಲಿ ಅಂಕಗಳು ನೀಡುತ್ತಿದ್ದರು. ಒಂದೊಮ್ಮೆ ಸಾಧಕರ ಅಂಕಗಳು ಶೇಕಡಾ 80 ದಾಟಿದರೆ ಅವರು ಸಂತರಾಗುತ್ತಾರೆ ಎಂಬ ನಂಬಿಕೆ ಸಂಸ್ಥೆಯಲ್ಲಿದೆ. ಅವರು ಈ ಗಡಿಯನ್ನು ದಾಟಿದ್ದಾರೋ ಎಂಬುದನ್ನು ನಿರ್ಧರಿಸುವವರು ಒನ್ ಆಂಡ್‌ ಓನ್ಲಿ ಅಠಾವಳೆ ಮಾತ್ರ. ಸಂತ ಪದವಿ ಸಾಧಕರಿಗೆ ವಿಶೇಷವಾದ ಹುದ್ದೆಯಾಗಿದೆ ಮತ್ತು ಇದನ್ನು ಪಡೆದವರಿಗೆ ಸಮುದಾಯದಲ್ಲಿ ವಿಶೇಷವಾದ ಸ್ಥಾನಮಾನವೂ ಸಿಗುತ್ತದೆ. ಈ ಪದವಿ ಪಡೆದವರ ಹೆಸರಿನ ಮುಂದೆ ಎಚ್ಎಚ್‌ (ಹಿಸ್‌ ಹೋಲಿನೆಸ್‌) ಎಂಬ ಪದಪುಂಜವನ್ನೂ ಸೇರಿಸಲಾಗುತ್ತದೆ. ಅಠಾವಳೆಯ ಶಿಷ್ಯರು ಇವರಿಗೆ ಪೂಜೆಯನ್ನೂ ಮಾಡುತ್ತಾರೆ. ಯಾರಾದರೂ ಹೀಗೆ ಸಂತ ಪದವಿ ಪಡೆದರೆ ಅದನ್ನು ಔಪಚಾರಿಕವಾಗಿ ಸನಾತನ ಪ್ರಭಾತ್‌ನಲ್ಲಿ ಘೋಷಣೆ ಮಾಡಲಾಗುತ್ತದೆ. ಸಂಸ್ಥೆಯಲ್ಲಿ ಪ್ರತಿ ಸಾಧಕರು ಮತ್ತು ಸಾಧಿಕರು ಪಡೆಯಬಹುದಾದ ಕನಸಿನ ಹುದ್ದೆಯೇ ಈ ಸಂತ ಪದವಿ. ಕಾರಣ ಇದೇ ಸಂತರು ಅಠಾವಳೆಯ ಈಶ್ವರ ರಾಜ್ಯದಲ್ಲಿ ಲೆಫ್ಟಿನೆಂಟ್‌ಗಳಾಗಿರುತ್ತಾರೆ.

ಇದೇ ಅವಧಿಯಲ್ಲಿ ಅಠಾವಳೆಯೂ ಸಮುದಾಯದಲ್ಲಿ ತಮ್ಮ ಪದವಿಯನ್ನು ಗುರುವಿನ ಸ್ಥಾನದಿಂದ ದೇವರ ಸ್ಥಾನಕ್ಕೆ ಏರಿಸಲು ಕೆಲವು ಅಭ್ಯಾಸಗಳನ್ನು ಆರಂಭಿಸಿದರು. ಅವರ ದೇಹದಲ್ಲಿ ಕಾಲಾನುಕ್ರಮದಲ್ಲಿ ಸಂಭವಿಸಿದ ಪವಿತ್ರ ಬದಲಾವಣೆಗಳಿಂದ ಅವರು ಇದನ್ನು ಸಾಧಿಸಿದರು. ಈ ಪವಾಡಸದೃಶ ಬದಲಾವಣೆಗಳನ್ನು ಸಂಸ್ಥೆಯ ವೆಬ್‌ಸೈಟ್‌ಗಳು ಮತ್ತು ಬ್ಲಾಗ್‌ಗಳಲ್ಲಿ 2015ರಲ್ಲಿ ಘೋಷಣೆ ಮಾಡಲಾಯಿತು. ‘ಹಲವು ವರ್ಷಗಳಲ್ಲಿ ಋಣಾತ್ಮಕ ಶಕ್ತಿಗಳ ದಾಳಿಯಿಂದ ಮತ್ತು ದೈವತ್ವದ ಸಮಗ್ರ ಅಭಿವ್ಯಕ್ತಿಗಳಿಂದ ಎಚ್ಎಚ್‌ ಅಠಾವಳೆಯವರ ದೇಹದಲ್ಲಿ ಹಲವು ಬದಲಾವಣೆಗಳಾಗಿವೆ’ ಎನ್ನುತ್ತದೆ 2015 ರಲ್ಲಿ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ನಲ್ಲಿ ಪ್ರಕಟಗೊಂಡ ವರದಿ. ಸಂಸ್ಥೆಯ ವೆಬ್‌ಸೈಟ್‌ಗಳನ್ನು ಉಲ್ಲೇಖಿಸಿ ಈ ವರದಿ ಮಾಡಲಾಗಿತ್ತು.

ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ ಕೆಲವು ಬದಲಾವಣೆಗಳೆಂದರೆ, ಅಠಾವಳೆಯವರ ಕೂದಲು ಚಿನ್ನದ ಬಣ್ಣಕ್ಕೆ ತಿರುಗಿದೆ; ಅವರ ದೇಹದಿಂದ ಪವಿತ್ರ ಅಣುಗಳು ಉದುರುತ್ತಿವೆ; ಅವರ ಕೈಯ ಉಗುರು, ಹಣೆ, ನಾಲಗೆಯಲ್ಲಿ ಓಂ ಗುರುತು ಮೂಡಿದೆ; ಅವರ ದೇಹದಿಂದ ವಿವಿಧ ಸುವಾಸನೆಗಳು ಹೊರಹೊಮ್ಮುತ್ತಿವೆ; ಹೀಗೆ ಹೇಳಿ ಸಂಸ್ಥೆಯ ಬ್ಲಾಗ್‌ ಅವರನ್ನು ದೇವರ ಅವತಾರ ಎಂದು ಕರೆಯುತ್ತದೆ.

ಸನಾತನ್ ಪ್ರಭಾತ್‌ ಪ್ರಕಾರ ಅಠಾವಳೆ ಹಣೆಯಲ್ಲಿ ಮೂಡಿದ ತ್ರಿಶೂಲ!
ಸನಾತನ್ ಪ್ರಭಾತ್‌ ಪ್ರಕಾರ ಅಠಾವಳೆ ಹಣೆಯಲ್ಲಿ ಮೂಡಿದ ತ್ರಿಶೂಲ!
/ಸನಾತನ್ ಪ್ರಭಾತ್‌

“ಅತ್ಯುನ್ನತ ಆದರ್ಶವಾದ ಹಿಂದೂ ರಾಷ್ಟ್ರವನ್ನು ಸ್ಥಾಪನೆ ಮಾಡುವುದು ದೇವರ ಆಜ್ಞೆಯಾಗಿದ್ದು ಇದನ್ನು ಸಾಧಿಸಲು ಗುರು (ಡಾ) ಅಠಾವಳೆ ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ಮಹರ್ಷಿಗಳು ಇತ್ತೀಚೆಗೆ ಅವರನ್ನು ವಿಷ್ಣುವಿನ ಅವತಾರ ಎಂದು ಘೋಷಣೆ ಮಾಡಿದ್ದಾರೆ. ಅವರ ದೇಹದಲ್ಲಾದ ಪವಿತ್ರ ಬದಲಾವಣೆಗಳು ಮತ್ತು ದೇಹದಲ್ಲಿ ಪಡಿಮೂಡುತ್ತಿರುವ ಚಿತ್ರಗಳಿಂದ ಅವರು ಮನುಷ್ಯ ಸಾಮಾನ್ಯದವರಲ್ಲ, ಬದಲಿಗೆ ಅವರೇ ದೇವರು ಎನ್ನುವುದು ಸಾಬೀತಾಗುತ್ತದೆ,” ಎನ್ನುತ್ತದೆ ಈ ಬ್ಲಾಗ್‌ ಬರಹ.

ಈ ರೀತಿಯ ನಂಬಿಕೆಗಳು ಮತ್ತು ತಿರುಚುವಿಕೆಗಳನ್ನು ಯಾಕೆ ಹಬ್ಬಿಸುತ್ತಿದ್ದಾರೆ ಎಂದು ವಿವರಿಸುವುದು ಕಷ್ಟ. ಆದರೆ ಸಾಧಕರು ಈ ಯತ್ನವನ್ನು ಉದ್ದೇಶಪೂರ್ವಕವಾಗಿಯೇ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದು. ಸರಕಾರಿ ಇಲಾಖೆಗಳು ಮತ್ತು ವಿರೋಧಿಗಳು ಹೊರಿಸಿದ, ‘ಇದೊಂದು ತೀವ್ರತರಹದ ಮೂಢ ನಂಬಿಕೆಗಳನ್ನು ಬಿತ್ತುವ ಲೈಂಗಿಕ ಸಮುದಾಯ’ ಮತ್ತು ‘ಸಂಸ್ಥೆಯು ವೇಗವಾಗಿ ಅಸಾಧಾರಣ ಅಪಾಯಕಾರಿ ಪಂಗಡವಾಗಿ ರೂಪುಗೊಳ್ಳುತ್ತಿದೆ’ ಎಂಬ ಆರೋಪಗಳಿಂದ ಹೊರಬರಲು ಅವರು ಹೀಗೆ ಮಾಡುತ್ತಿದ್ದರು.

ಸಂಸ್ಥೆ ತನ್ನ ಈ ರೀತಿಯ ಹಿನ್ನೆಲೆಯ ಕಾರಣಕ್ಕೆ ಪ್ರಗತಿಪರ ಚಳುವಳಿಯ ಗಟ್ಟಿ ಬೇರುಗಳನ್ನು ಹೊಂದಿದ್ದ ಮಹಾರಾಷ್ಟ್ರದಲ್ಲಿ ಬಲುಬೇಗ ಪ್ರಗತಿಪರರ ಜತೆ ಮುಖಾಮುಖಿಯಾಯಿತು. ಈ ಪ್ರಗತಿಪರರ ಸಮುದಾಯ ಇವರ ನಂಬಿಕೆಗಳನ್ನು, ಈ ತಿರುಚಿದ ಕಥೆಗಳನ್ನು ಪ್ರಶ್ನಿಸಲು ಆರಂಭಿಸಿದ್ದಲ್ಲದೇ ಅಠಾವಳೆ ಮತ್ತು ಅವರ ಸಾಧಕರ ಗುಂಪನ್ನು ಟೀಕಿಸಲು ಆರಂಭಿಸಿತು. ನಕಲಿ ಆಧ್ಯಾತ್ಮದ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಮೂಢ ನಂಬಿಕೆಗಳನ್ನು ಬಿತ್ತುತ್ತಿದ್ದ ಅಸ್ಪಷ್ಟವಾದಿ ಇತರ ಶಕ್ತಿಗಳ ಜತೆ ಸಂಸ್ಥೆಯನ್ನೂ ಅವರು ವಿರೋಧಿಸುತ್ತಿದ್ದರು. ಪ್ರಗತಿಪರರ ಆರೋಪಗಳ ಬಗ್ಗೆ ಉಳಿದ ಸಂಘಟನೆಗಳು ಮೌನವಾಗಿದ್ದರೂ ಸನಾತನ ಸಂಸ್ಥೆ ಮಾತ್ರ ಸುಮ್ಮನಾಗಲಿಲ್ಲ. ಸಂಸ್ಥೆ ಮತ್ತು ಪ್ರಗತಿಪರರ ನಡುವೆ ನಿಧಾನಕ್ಕೆ ಆರಂಭವಾದ ವೈರತ್ವ ಸ್ಪಷ್ಟ ರೂಪವನ್ನು ಪಡೆಯಿತು. ಪ್ರಗತಿಪರರ ಕಾರ್ಯಕ್ರಮಗಳು, ಶಿಬಿರಗಳ ಮೇಲೆ ದಾಳಿಯ ಘಟನೆಗಳು ನಡೆದವು. ಈ ಸಂದರ್ಭದಲ್ಲಿ ಪ್ರಗತಿಪರರ ಪಂಗಡ ‘ಸಾರ್ವಜನಿಕವಾಗಿ ನಿಮ್ಮ ಪವಾಡಗಳನ್ನು ನಡೆಸಿ’ ಎಂದು ಸಾಧಕರಿಗೆ ಬಹಿರಂಗ ಸವಾಲು ಹಾಕಿತು.

ನಂತರ ಈ ಹಗೆತನ ಅಪಾಯಕಾರಿ ತಿರುವನ್ನು ಪಡೆದುಕೊಂಡಿತು...

(ಇದು ಲೇಖಕ ಧೀರೇಂದ್ರ ಕೆ. ಝಾ ಬರೆದ ‘ಶ್ಯಾಡೋ ಆರ್ಮೀಸ್’ ಪುಸ್ತಕದ ಮೂರನೇ ಅಧ್ಯಾಯ. ಇನ್ನೂ ಎರಡು ಕಂತುಗಳಲ್ಲಿ ‘ಸನಾತನ ಸಂಸ್ಥಾ’ ಬಗೆಗಿನ ಅಧ್ಯಾಯ ಪ್ರಕಟವಾಗಲಿದೆ. )

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’-1: ಗದ್ದೆಯಲ್ಲಿ ಸಿಕ್ಕ ಕಾಂಡೋಮ್‌ಗಳು & ಜನರ ಪ್ರತಿರೋಧ

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 2: ಮಡ್ಗಾಂವ್‌ & ಸರಣಿ ಬಾಂಬ್‌ ಸ್ಫೋಟಗಳ ಕರಾಳ ಇತಿಹಾಸ

Also read: ‘ಸ್ಟೋರಿ ಆಫ್‌ ಸನಾತನ ಸಂಸ್ಥಾ’- 4: ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿ ಹತ್ಯೆಗಳು; ಆರೋಪಿ ಸ್ಥಾನದಲ್ಲಿ ಅಠಾವಳೆ ‘ಸಾಧಕರು’!