samachara
www.samachara.com
‘ವಿಕೋಪದ ಪೋಸ್ಟ್‌ಮಾರ್ಟಂ’: ಕೇರಳದಲ್ಲಿ ವಿಶೇಷ ಅಧಿವೇಶನ, ಕರ್ನಾಟಕದಲ್ಲಿ ಎಚ್‌ಡಿಕೆ ದೇಗುಲ ದರ್ಶನ!
COVER STORY

‘ವಿಕೋಪದ ಪೋಸ್ಟ್‌ಮಾರ್ಟಂ’: ಕೇರಳದಲ್ಲಿ ವಿಶೇಷ ಅಧಿವೇಶನ, ಕರ್ನಾಟಕದಲ್ಲಿ ಎಚ್‌ಡಿಕೆ ದೇಗುಲ ದರ್ಶನ!

ಅಮೆರಿಕಾದಲ್ಲಿ ನಿಗದಿಯಾಗಿದ್ದ ತಮ್ಮ ಚಿಕಿತ್ಸೆಯನ್ನೂ ಮುಂದೂಡಿ ಸಿಎಂ ಪಿಣರಾಯಿ ವಿಜಯನ್ ವಿಶೇಷ ಅಧಿವೇಶನ ನಡೆಸುತ್ತಾ ಕುಳಿತಿದ್ದರೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ ತೀರ್ಥ ಯಾತ್ರೆ ನಡೆಸುತ್ತಿದ್ದಾರೆ. 

ಕೊಡಗು ಪ್ರಾಕೃತಿಕ ವಿಕೋಪದ ಪೋಸ್ಟ್‌ಮಾರ್ಟಂ ನಡೆಯುತ್ತಿದೆ. ಸರಕಾರಿ ಮಟ್ಟದಲ್ಲಿ ವಿಕೋಪದ ನಷ್ಟದ ಅಂದಾಜನ್ನು ಲೆಕ್ಕ ಹಾಕಲಾಗಿದ್ದು ಒಟ್ಟು 3,435.80 ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಇದರಲ್ಲಿ 2,000 ಕೋಟಿ ರೂಪಾಯಿಗಳ ನೆರವು ನೀಡಿ ಎಂದು ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ಗೆ ಗುರುವಾರ ಮನವಿ ಸಲ್ಲಿಸಿದೆ.

“ನಾವು ಸುಮಾರು 65 ಜೀವಗಳನ್ನು ಕಳೆದುಕೊಂಡಿದ್ದೇವೆ. 165ಕ್ಕೂ ಹೆಚ್ಚು ಪ್ರಾಣಿಗಳು ಬಲಿಯಾಗಿವೆ. 5,500 ಮನೆಗಳು ನಾಶವಾಗಿವೆ. ಸುಮಾರು 1,400 ಕಿಲೋಮೀಟರ್‌ ರಸ್ತೆಗೆ ಹಾನಿಯಾಗಿದೆ ಎಂದು ಪ್ರಾಥಮಿಕ ಲೆಕ್ಕಾಚಾರಗಳಿಂದ ತಿಳಿದು ಬಂದಿದೆ. ಈ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ಕೊಡಗಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ವಿವರವಾದ ಸಮೀಕ್ಷೆಯನ್ನು ನಡೆಸಲು ಸಾಧ್ಯವಾಗಿಲ್ಲ. ಪರಿಸ್ಥಿತಿ ನೋಡಿಕೊಂಡು ಆದಷ್ಟು ಬೇಗ ಇದನ್ನು ಪೂರ್ಣಗೊಳಿಸಲಿದ್ದೇವೆ,” ಎಂದು ಪತ್ರದಲ್ಲಿ ಹೇಳಲಾಗಿದೆ.

ಆಗಸ್ಟ್‌ 15, 16 ಮತ್ತು 17ರಂದು ಕೊಡಗಿನ ಕೆಲವು ಭಾಗಗಳಲ್ಲಿ 200 ಮಿಮೀಗಿಂತ ಹೆಚ್ಚಿನ ಮಳೆಯಾಗಿದೆ. ಈ ಭಾರೀ ಮಳೆಯಿಂದ ಭೂಕುಸಿತಗಳು ಉಂಟಾಗಿದ್ದು ಜಿಲ್ಲಾಡಳಿತ 55 ನಿರಾಶ್ರಿತರ ಕೇಂದ್ರವನ್ನು ತೆರೆಯಬೇಕಾಗಿ ಬಂದಿದೆ. ಇವುಗಳಲ್ಲಿ 7,300 ಜನರು ಆಶ್ರಯ ಪಡೆಯುತ್ತಿದ್ದಾರೆ. ಇನ್ನೂ ಸಾವಿರಾರು ಜನರು ತಮ್ಮ ಸಂಬಂಧಿಗಳ ಮನೆಯಲ್ಲಿದ್ದಾರೆ. ಭೂ ಕುಸಿತಗಳಿಂದ ಮನೆಗಳು, ಕರೆಂಟ್‌ ಕಂಬಗಳು ಕೊಚ್ಚಿ ಹೋಗಿದ್ದು ರಾಶಿ ಗಟ್ಟಲೆ ಮಣ್ಣು ಬಂದು ಬಿದ್ದಿದೆ ಎಂಬುದನ್ನು ಕೇಂದ್ರದ ಗಮನಕ್ಕೆ ತರಲಾಗಿದೆ.

ಮುಖ್ಯಮಂತ್ರಿ ಸಲ್ಲಿಸಿದ ಮನವಿಯಲ್ಲಿ ಪ್ರಮುಖವಾಗಿ ಕಾಫಿ ಬೆಳೆ ನಾಶಕ್ಕೆ ಒತ್ತು ನೀಡಲಾಗಿದೆ. ಕೇರಳ ಮತ್ತು ಕರ್ನಾಟಕ ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡಾ 90 ಪಾಲನ್ನು ಪಡೆದುಕೊಂಡಿವೆ. ಭಾರೀ ಮಳೆಯಿಂದಾಗಿ ಈ ಬಾರಿ ಕಾಫಿ ಉತ್ಪಾದನೆಯಲ್ಲಿ ಶೇಕಡಾ 20ರಷ್ಟು ನಷ್ಟವಾಗಲಿದೆ. ಈ ನಷ್ಟವೇ ಸಾವಿರ ಕೋಟಿಗಳಷ್ಟಾಗಲಿದೆ ಎಂದು ಕೇಂದ್ರಕ್ಕೆ ಮನವರಿಕೆ ಮಾಡಲಾಗಿದೆ.

ಹರಿದು ಬರದ ನೆರವು

ಹೀಗಿದ್ದೂ ಸದ್ಯಕ್ಕೆ ಕೇಂದ್ರದಿಂದ ಕರ್ನಾಟಕಕ್ಕೆ ಯಾವುದೇ ನೆರವು ಹರಿದು ಬಂದಿಲ್ಲ. ಇದ್ದುದರಲ್ಲೇ ನಿರ್ಮಲಾ ಸೀತಾರಾಮನ್‌ ಬಂದು ರಕ್ಷಣಾ ಇಲಾಖೆಯ ಸಂಸ್ಥೆಗಳ ಸಿಎಸ್‌ಆರ್‌ ಫಂಡ್‌ನಿಂದ 7 ಕೋಟಿ ರೂಪಾಯಿ ಮತ್ತು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1 ಕೋಟಿ ರೂಪಾಯಿ ನೀಡಲಾಗುವುದು ಎಂದಷ್ಟೇ ಹೇಳಿ ಹೋಗಿದ್ದಾರೆ. ಇನ್ನು ರಾಜ್ಯ ಸರಕಾರದ ಕಡೆಯಿಂದ 400 ಕೋಟಿ ರೂಪಾಯಿಗಳನ್ನು ಕೊಡಗಿನ ಮರು ನಿರ್ಮಾಣಕ್ಕೆ ಬಿಡುಗಡೆ ಮಾಡಲಾಗಿದೆ. ಮತ್ತೊಂದಿಷ್ಟು ದುಡ್ಡನ್ನು ಜನರೇ ‘ಮುಖ್ಯಮಂತ್ರಿಗಳ ಪರಿಹಾರ ನಿಧಿ’ ಖಾತೆಗೆ ಜಮೆ ಮಾಡಿದ್ದಾರೆ.

ಇದರಾಚೆಗೆ ಕೊಡಗು ಮರು ನಿರ್ಮಾಣ ವಿಚಾರದಲ್ಲಿ ರಾಜ್ಯ ಸರಕಾರ ಉದಾಸೀನ ತೋರಿರುವುದು ಮೇಲ್ನೋಟಕ್ಕೆ ಕಣ್ಣಿಕೆ ರಾಚುತ್ತದೆ. 3,435.80 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳುತ್ತಿರುವ ರಾಜ್ಯ ಸರಕಾರದ ಅದನ್ನು ಹೊಂದಿಸಲು ಯಾವುದೇ ಮಾರ್ಗಗಳನ್ನು ಕಂಡುಕೊಂಡಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಾವೇ ಮುಂದೆ ನಿಂತು ಪರಿಹಾರ ಕಾರ್ಯದಲ್ಲಿ, ಹಣ ಸಂಗ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಹಂಚಿ ಹೋಗಿರುವ ಕೇರಳಿಗರು ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆ ನೀಡಿ ಎಂದು ಅವರು ಕರೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಮೋಹನ್‌ ಲಾಲ್‌, ಮಮ್ಮುಟ್ಟಿ ಆದಿಯಾಗಿ ಸೂಪರ್‌ ಸ್ಟಾರ್‌ ಸಿನಿಮಾ ನಟರು, ಕ್ರೀಡಾಪಟುಗಳು, ತಾರಾ ಮೆರಗಿನ ವ್ಯಕ್ತಿಗಳೆಲ್ಲಾ ಧನ ಸಂಗ್ರಹಕ್ಕೆ ಹೊರಟಿದ್ದಾರೆ. ಇಡೀ ಕೇರಳಕ್ಕೆ ಕೇರಳವೇ ಫಂಡ್‌ ಕಲೆಕ್ಷನ್‌ ಹಿಂದೆ ಬಿದ್ದಿದೆ; ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಪರಿಣಾಮ ಅಲ್ಲಿ ಪ್ರವಾಹ ಬಂದ 16 ದಿನಗಳಲ್ಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದ ಹಣ ಒಂದು ಸಾವಿರ ಕೋಟಿ ರೂಪಾಯಿ ದಾಟಿದೆ. ಆಗಸ್ಟ್‌ 31ಕ್ಕೆ ಖಾತೆಯಲ್ಲಿರುವ ಹಣ ಬರೋಬ್ಬರಿ 1,027.78 ಕೋಟಿ ರೂಪಾಯಿ.

ಮುಖ್ಯಮಂತ್ರಿಗಳ ಪರಿಹಾರ ನಿಧಿ ವೆಬ್‌ಸೈಟ್‌ ಪ್ರಕಾರ ರೂ. 145.88 ಕೋಟಿ ರೂಪಾಯಿ ಎಲೆಕ್ಟ್ರಾನಿಕ್‌ ಪೇಮೆಂಟ್‌ ಮೂಲಕ ಬಂದಿದ್ದರೆ 46.04 ಕೋಟಿ ರೂಪಾಯಿ ಯುಪಿಐ/ಕ್ಯೂಆರ್‌/ವಿಪಿಎ ಮೂಲಕ ಜಮೆಯಾಗಿದೆ. ಇನ್ನುಳಿದ 835.86 ಕೋಟಿ ರೂಪಾಯಿಯ ನಗದು, ಚೆಕ್‌ ಮತ್ತು ಆರ್‌ಟಿಜಿಎಸ್‌ ಮೂಲಕ ಹರಿದು ಬಂದಿದೆ.

ಹೀಗೆ ಪಕ್ಕದ ಕೇರಳದಲ್ಲಿ ಸಮರೋಪಾದಿಯಲ್ಲಿ ನಿಧಿ ಸಂಗ್ರಹ, ಪುನರ್‌ ನಿರ್ಮಾಣ ಕೆಲಸಗಳು ನಡೆಯುತ್ತಿದ್ದರೆ ಕರ್ನಾಟಕದಲ್ಲಿ ನೆರೆ ಇಳಿಯುತ್ತಿದ್ದಂತೆ ಜನರು ಮತ್ತು ಜನಪ್ರತಿನಿಧಿಗಳು ವಿರಾಮಕ್ಕೆ ಜಾರಿದ್ದಾರೆ. ಅಲ್ಲಿ ನಿಗದಿಯಾಗಿದ್ದ ತಮ್ಮ ಚಿಕಿತ್ಸೆಯನ್ನೂ ಮುಂದೂಡಿ ಸಿಎಂ ಪಿಣರಾಯಿ ವಿಜಯನ್ ವಿಶೇಷ ಅಧಿವೇಶನ ನಡೆಸುತ್ತಾ ಕುಳಿತಿದ್ದರೆ ನಮ್ಮ ಮುಖ್ಯಮಂತ್ರಿಗಳು ತೀರ್ಥ ಯಾತ್ರೆ ನಡೆಸುತ್ತಿದ್ದಾರೆ. ಸಮ್ಮಿಶ್ರ ಸರಕಾರ ನೂರು ದಿನಗಳನ್ನು ಪೂರೈಸಿದ ಸಂಭ್ರಮಾಚರಣೆಯಲ್ಲಿದ್ದಾರೆ. ಇನ್ನೊಂದು ಕಡೆ ವಿಧಾನಸೌಧದ ಮೊಗಸಾಲೆಯಲ್ಲಿ ಸರಕಾರ ಬೀಳಿಸುವ, ಉಳಿಸುವ ಮಾತುಗಳಷ್ಟೇ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಕೇಳಿ ಬರುತ್ತಿದೆ. ಪರಿಣಾಮ ಕೊಡಗಿನ ಜನರು ಬಡವಾಗಿದ್ದಾರೆ; ಮಳೆ ಕಡಿಮೆಯಾಗುತ್ತಿದ್ದಂತೆ ಮುಂದೇನು ಎಂದು ದಿಕ್ಕು ಕಾಣದಾಗಿದ್ದಾರೆ.