samachara
www.samachara.com
ಯಾರು ಈ ‘ನಗರ ನಕ್ಸಲರು’; ಏನಿದು ಸರಕಾರಿ ಪ್ರಾಯೋಜಿತ ‘ಸಂಚಿ’ನ ನಾಟಕ?
COVER STORY

ಯಾರು ಈ ‘ನಗರ ನಕ್ಸಲರು’; ಏನಿದು ಸರಕಾರಿ ಪ್ರಾಯೋಜಿತ ‘ಸಂಚಿ’ನ ನಾಟಕ?

ಸರಕಾರ ‘ನಗರ ನಕ್ಸಲ’ರೆಂಬ ಹಣೆಪಟ್ಟಿ ಕಟ್ಟಿ ಸಾಮಾಜಿಕ ಕಾರ್ಯಕರ್ತರನ್ನು ಹತ್ತಿಕ್ಕಲು ಮುಂದಾಗಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ #MeTooUrbanNaxal ಅಭಿಯಾನ ಶುರುವಾಗಿದೆ

ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚಿನ ಆರೋಪದ ಮೇಲೆ ಪುಣೆ ಪೊಲೀಸರು ಐದು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ #MeTooUrbanNaxal ಆನ್‌ಲೈನ್ ಅಭಿಯಾನ ಆರಂಭವಾಗಿದೆ.

ಹಿಂದುತ್ವವನ್ನು ಒಪ್ಪದ ಎಡಪಂಥೀಯರು, ವಿಚಾರವಾದಿಗಳು, ಪ್ರಗತಿಪರರು ಎಂದು ಗುರುತಿಸಿಕೊಂಡಿದ್ದವರಿಗೆ ಈಗ ಪೊಲೀಸರು ‘ನಗರ ನಕ್ಸಲ್‌’ ಎಂಬ ಹಣೆಪಟ್ಟಿ ಕಟ್ಟಲು ಮುಂದಾಗಿದ್ದಾರೆ. ಇದರ ಮೊದಲ ಪ್ರಯತ್ನವೇ ಐದು ಮಂದಿ ಸಾಮಾಜಿಕ ಕಾರ್ಯಕರ್ತರ ಬಂಧನ ಹಾಗೂ ಸುಮಾರು 12 ಮಂದಿ ಸಾಮಾಜಿಕ ಕಾರ್ಯಕರ್ತರ ಮನೆಗಳ ಮೇಲೆ ನಡೆದ ದಾಳಿ.

ನಗರದಲ್ಲಿದ್ದುಕೊಂಡು ಆದಿವಾಸಿಗಳು, ದಲಿತರು, ನಿರ್ಗತಿಕರು, ಬಡವರು ಹಾಗೂ ಅಲಕ್ಷಿತ ಸಮುದಾಯದ ಪರವಾಗಿ ಕೆಲಸ ಮಾಡುತ್ತಿರುವವರಿಗೆ ಅನಾಯಾಸವಾಗಿ ‘ನಗರ ನಕ್ಸಲ್‌’ ಎಂಬ ಪಟ್ಟ ಕಟ್ಟಲಾಗುತ್ತಿದೆ. ಇಂದಿರಾ ಗಾಂಧಿ ಆಡಳಿತ ಕಾಲದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸರಕಾರವನ್ನು ವಿರೋಧಿಸಿದವರು ದೇಶದ್ರೋಹಿಗಳು ಎನಿಸಿಕೊಂಡಿದ್ದರೆ, ಈಗ ಹಿಂದುತ್ವ, ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಮೋದಿ ನಡೆಯನ್ನು ಒಪ್ಪದವರನ್ನು ಆಡಳಿತ ಯಂತ್ರ ದೇಶದ್ರೋಹಿಗಳೆಂದು ಕರೆಯುತ್ತಿದೆ.

ಭಾರತದಲ್ಲಿ ನಕ್ಸಲ್‌ ಹೋರಾಟಕ್ಕೆ ಐದು ದಶಕಗಳ ಇತಿಹಾಸವಿದೆ. ನೈಜ ಪ್ರಜಾಪ್ರಭುತ್ವ ಸ್ಥಾಪನೆಯ ಉದ್ದೇಶದಿಂದ ಆರಂಭಗೊಂಡ ನಕ್ಸಲ್‌ ಸಶಸ್ತ್ರ ಹೋರಾಟ ರೂಢಿಗತ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ನಕ್ಸಲ್‌ ಹೋರಾಟಗಾರರನ್ನೂ ಭಯೋತ್ಪಾದಕರಂತೆಯೇ ಕಾಣುತ್ತಿರುವ ಸರಕಾರಗಳಿಗೆ ನಕ್ಸಲರು ಇಂದಿಗೂ ಮಗ್ಗುಲ ಮುಳ್ಳಾಗಿದ್ದಾರೆ. ಹೀಗಾಗಿ ನಕ್ಸಲರನ್ನು ಇಲ್ಲವಾಗಿಸುವ ಪ್ರಯತ್ನವನ್ನು ಸರಕಾರಗಳು ಹಿಂದಿನಿಂದಲೂ ಮಾಡುತ್ತಲೇ ಬಂದಿವೆ.

ಇಷ್ಟು ದಿನ ಅರಣ್ಯದಲ್ಲಿ ನಡೆಯುತ್ತಿದ್ದ ನಕ್ಸಲ್‌ ವಿರೋಧಿ ಕಾರ್ಯಾಚರಣೆ ಈಗ ನಗರಗಳಲ್ಲಿ ನಡೆಯುತ್ತಿದೆ. ಹಿಂದುತ್ವ ಹಾಗೂ ಬಿಜೆಪಿಯನ್ನು ಒಪ್ಪದ ವಕೀಲರು, ಸಾಮಾಜಿಕ ಕಾರ್ಯಕರ್ತರು, ಪ್ರಾಧ್ಯಾಪಕರು, ಕವಿ, ಬರಹಗಾರರು ಈಗ ಸರಕಾರದ ಪಾಲಿಗೆ ನಗರ ನಕ್ಸಲರಾಗಿದ್ದಾರೆ. ಈ ನಗರ ನಕ್ಸಲರನ್ನು ಹೊಸಕಿ ಹಾಕುವ ಪ್ರಯತ್ನವಾಗಿಯೇ ಪುಣೆ ಪೊಲೀಸರ ಮೂಲಕ ‘ಮೋದಿ ಹತ್ಯೆ ಸಂಚು’ ಎಂಬ ಕಾಗಕ್ಕ ಗುಬ್ಬಕ್ಕನ ಕಥೆ ಹೊಸೆದು ಹಿಂದುತ್ವ ಹಾಗೂ ಬಿಜೆಪಿ ವಿರೋಧಿಗಳನ್ನು ಹತ್ತಿಕ್ಕಲು ಸರಕಾರ ಪ್ರಯತ್ನಿಸುತ್ತಿದೆ.

ಪ್ರಮುಖ ವಿಚಾರವಾದಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸುವ ಮೂಲಕ ಈ ಸಮೂಹದ ಉಳಿದವರಲ್ಲಿ ಭೀತಿ ಉಂಟುಮಾಡಲು ಸರಕಾರ ಪ್ರಯತ್ನ ನಡೆಸುತ್ತಿರುವಂತಿದೆ. ಆದರೆ, ಸರಕಾರದ ಈ ನಡೆಗೆ ಬಹುತೇಕರು ‘ನಾನೂ ನಗರ ನಕ್ಸಲ್, ನನ್ನನ್ನೂ ಬಂಧಿಸಿ’ ಎನ್ನುತ್ತಿದ್ದಾರೆ. ಈ ಮೂಲಕ ಸರಕಾರದ ಧಮನಕಾರಿ ನಡೆಗೆ ಒಂದು ದೊಡ್ಡ ಜನವರ್ಗ ಸಾಮೂಹಿಕ ಪ್ರತಿರೋಧ ತೋರಲು ಮುಂದಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿರುವ ಹಲವರು ಸರಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.

ನಕ್ಸಲ್ ಹೋರಾಟದ ಹಿನ್ನೆಲೆ ನೋಡಿದರೆ ಪ್ರಮುಖ ನಕ್ಸಲ್‌ ಹೋರಾಟಗಾರರು ಕೇವಲ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡು ಹೋರಾಟ ರೂಪಿಸಿದವರಲ್ಲ. ಬಹುತೇಕ ನಕ್ಸಲ್‌ ಹೋರಾಟಗಾರರು ನಗರಗಳಲ್ಲಿದ್ದುಕೊಂಡೇ ಹೋರಾಟವನ್ನು ರೂಪಿಸಿದವರು. ತಮ್ಮ ಹೋರಾಟಕ್ಕೆ ನಗರದ ವೃತ್ತಿಪರರ ಬೆಂಬಲ ಪಡೆಯುವ ಪ್ರಯತ್ನಗಳನ್ನು ನಕ್ಸಲರು ಹಿಂದಿನಿಂದಲೇ ಮಾಡಿಕೊಂಡು ಬಂದಿದ್ದಾರೆ. ಬಹಳಷ್ಟು ಹೋರಾಟಗಾರರು ನಗರಗಳಲ್ಲಿದ್ದುಕೊಂಡು, ಸಾಕಷ್ಟು ತಿರುಗಾಟ ನಡೆಸುತ್ತಾ ನಕ್ಸಲ್‌ ಹೋರಾಟ ಸಂಘಟಿಸಿದ್ದಾರೆ.

ಸದ್ಯ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಹೊರಟಂತಿರುವ ಸರಕಾರ ಮೋದಿ ಹತ್ಯೆ ಸಂಚಿನ ಗಾಳ ಹಾಗೂ ನಗರ ನಕ್ಸಲರೆಂಬ ಹೊಸ ಹೆಸರಿನ ಮೂಲಕ ತನ್ನ ವಿರೋಧಿಗಳ ದನಿ ಅಡಗಿಸಲು ಮುಂದಾಗಿದೆ. ಸಮ ಸಮಾಜಕ್ಕಾಗಿ, ನೈಜ ಪ್ರಜಾಪ್ರಭುತ್ವದ ನಿರ್ಮಾಣ ಉದ್ದೇಶಕ್ಕಾಗಿ ಸಶಸ್ತ್ರ ಹೋರಾಟವೂ ಅಗತ್ಯ ಎಂಬ ನಕ್ಸಲರ ಹೋರಾಟಕ್ಕೂ ಇದೇ ಆಶಯಗಳ ಜಾರಿಗಾಗಿ ಬೇರೆ ಬೇರೆ ಮಾರ್ಗಗಳ ಮೂಲಕ ಕೆಲಸ ಮಾಡುತ್ತಿರುವವರಿಗೂ ಸಾಕಷ್ಟು ವ್ಯತ್ಯಾಸವಿದೆ. ಈ ವ್ಯತ್ಯಾಸ ಸರಕಾರಕ್ಕೂ ಗೊತ್ತಿದೆ. ಆದರೆ, ವಿರೋಧಿಗಳ ಕೊರಳು ಹಿಚುಕಿ, ಕೈಕಾಲು ಮುರಿಯುವ ಮಾರ್ಗವಾಗಿ ಸರಕಾರ ನಗರ ನಕ್ಸಲರ ವಿರುದ್ಧದ ಕಾರ್ಯಾಚರಣೆ ಎಂಬ ಬೀದಿ ನಾಟಕಕ್ಕೆ ಮುಂದಾಗಿದೆ.

ಆದರೆ, ಸರಕಾರದ ನಡೆ ಸರಿಯಾಗಿದೆ ಎಂಬುದು ಬಿಜೆಪಿ ಮುಖಂಡರ ವಾದ. ಈ ಹಿಂದೆಯೂ ಇದೇ ಆರೋಪದ ಮೇಲೆ ಇವರ ಬಂಧನ ನಡೆದಿದ್ದಾಗ ಆಗದ ಸುದ್ದಿ ಈಗ ದೊಡ್ಡದಾಗಿದೆ ಎನ್ನುವ ಬಿಜೆಪಿ ಮುಖಂಡರು, ಬಂಧಿತರ ಬೆಂಬಲಕ್ಕಿರುವವರು ಕೆಲವೇ ಮಂದಿ ಎನ್ನುತ್ತಾರೆ.

ಈಗ ಬಂಧನಕ್ಕೊಳಗಾಗಿರುವವರನ್ನು ಈ ಹಿಂದೆಯೂ ಸರಕಾರಗಳು ನಕ್ಸಲ್‌ ಚಟುವಟಿಕೆಯ ಆರೋಪದಡಿ ಬಂಧಿಸಿವೆ. ಈ ಹಿಂದೆ ನಕ್ಸಲ್‌ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಆರೋಪವಿದ್ದವರು ಈಗ ಏಕಾಏಕಿ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದಾರೆ. ಒಂದಷ್ಟು ಜನ ಈಗ ‘ನಾನೂ ನಗರ ನಕ್ಸಲ್‌’ ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರ ಬೆಂಬಲಕ್ಕೆ ಹೆಚ್ಚಿನ ಸಂಖ್ಯೆಯ ಜನರಿಲ್ಲ.
- ಎಸ್‌. ಬಾಲಾಜಿ, ಸಂಚಾಲಕ, ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ

“ಆದಿವಾಸಿ, ದಲಿತ, ಅಲ್ಪಸಂಖ್ಯಾತ, ಮಹಿಳೆಯರು, ದಮನಿತರು ಹಾಗೂ ಅಲಕ್ಷಿತ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿರುವವರನ್ನು ಸರಕಾರ ನಕ್ಸಲ್‌ ಹೆಸರಿನಲ್ಲಿ ಅಳಿಸಿ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಕೋಮುವಾದ, ಹಿಂದುತ್ವ ಹಾಗೂ ಬಿಜೆಪಿ ಸಿದ್ಧಾಂತಗಳನ್ನು ವಿರೋಧಿಸುವವರನ್ನು ಈಗ ಸಾರಾಸಗಟಾಗಿ ನಗರ ನಕ್ಸಲರೆಂದು ಗುರುತಿಸಲಾಗುತ್ತಿದೆ. ಅಧಿಕಾರ ದುರುಪಯೋಗದ ಮೂಲಕ ಬಿಜೆಪಿ ಬಹುತ್ವವನ್ನು ಇಲ್ಲವಾಗಿಸುವ ಪ್ರಯತ್ನಕ್ಕೆ ಕೈಹಾಕಿದೆ. ಈ ಮೂಲಕ ಹಿಂದುತ್ವ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಬಹುದು ಎಂಬುದು ಸರಕಾರದ ದುರಾಲೋಚನೆಯಂತೆ ಕಾಣುತ್ತಿದೆ” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಕೆ. ನೀಲಾ.

ನಕ್ಸಲರನ್ನು ವಿರೋಧಿಸುತ್ತಿದ್ದೇವೆ ಎಂಬ ಮೂಲಕ ತಮ್ಮ ಹಿಂದುತ್ವದ ಅಜೆಂಡಾವನ್ನು ಗಟ್ಟಿಗೊಳಿಸಲು ಸರಕಾರ ಪ್ರಯತ್ನಿಸುತ್ತಿದೆ. ಈ ಮೂಲಕ ದಮನಿತರ ಪರವಾದ ಹೋರಾಟವನ್ನು ಜನರ ಸ್ಮೃತಿಯಿಂದ ಅಳಿಸಿ ಹಾಕುವ ಹುಸಿ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ. ಆದರೆ, ಜನರಿಗೆ ಇವರ ನಿಜ ಬಣ್ಣ ಈಗಾಗಲೇ ಗೊತ್ತಾಗಿದೆ.
- ಕೆ. ನೀಲಾ, ಸಾಮಾಜಿಕ ಕಾರ್ಯಕರ್ತೆ

1967ರಲ್ಲಿ ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಗ್ರಾಮದಲ್ಲಿ ಹುಟ್ಟಿಕೊಂಡ ನಕ್ಸಲ್‌ ಹೋರಾಟವನ್ನು ನಿರ್ನಾಮ ಮಾಡುವ ಸರಕಾರಗಳ ಪ್ರಯತ್ನಗಳು ನಡೆಯುತ್ತಲೇ ಇವೆ. ನಕ್ಸಲರ ಚಟುವಟಿಕೆ ಹೆಚ್ಚಿರುವ ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಇಂದಿಗೂ ನಕ್ಸಲ್‌ ನಿಗ್ರಹ ಪಡೆಗಳು ಕಾರ್ಯಾಚರಣೆ ನಡೆಸುತ್ತಲೇ ಇವೆ. ಇಷ್ಟು ದಿನ ಅರಣ್ಯ ಭಾಗದಲ್ಲಿ ನಡೆಯುತ್ತಿದ್ದ ಈ ಕಾರ್ಯಾಚರಣೆ ಈಗ ನಗರ ಪ್ರದೇಶದಲ್ಲಿ ನಡೆಯುತ್ತಿದೆ. ನಗರ ಪೊಲೀಸರ ಮೂಲಕವೇ ನಗರ ನಕ್ಸಲರನ್ನು ಬಂಧಿಸಲಾಗುತ್ತಿದೆ!

ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾದವರಿಗೆಲ್ಲಾ ಸರಕಾರ ಹೀಗೆ ನಕ್ಸಲ್‌ ಪಟ್ಟ ಕಟ್ಟುತ್ತಿರುವುದು ಇದೇ ಮೊದಲೇನಲ್ಲ. ದಶಕದ ಹಿಂದೆಯೇ ಕರ್ನಾಟಕದಲ್ಲಿ ರೈತ ಹೋರಾಟಗಾರ ಕಡಿದಾಳ್‌ ಶಾಮಣ್ಣ, ಪ್ರಾಧ್ಯಾಪಕ ರಾಜೇಂದ್ರ ಚೆನ್ನಿ ಸೇರಿದಂತೆ ಕೆಲ ಪತ್ರಕರ್ತರ ಹೆಸರುಗಳನ್ನು ಸರಕಾರ ನಕ್ಸಲ್‌ ಪಟ್ಟಿಗೆ ಸೇರಿಸಿತ್ತು. ಬಳಿಕ ಈ ಪಟ್ಟಿಯಿಂದ ಸಾಕಷ್ಟು ಹೆಸರುಗಳನ್ನು ತೆಗೆದು ಹಾಕಲಾಗಿತ್ತು. ಈಗ ಸರಕಾರ ನಡೆಸುತ್ತಿರುವ ಪೊಲೀಸ್‌ ಕಾರ್ಯಾಚರಣೆ ಅತಿರೇಕಕ್ಕೆ ತಲುಪಿದೆ. ನಗರ ನಕ್ಸಲ್‌ ಹೆಸರಿನಲ್ಲಿ ಪ್ರಮುಖ ಸಾಮಾಜಿಕ ಕಾರ್ಯಕರ್ತರನ್ನು ಜೈಲಿಗೆ ತಳ್ಳಲು ಸರಕಾರವೇ ಈಗ ಸಂಚು ರೂಪಿಸಿರುವ ಆರೋಪಿ ಸ್ಥಾನದಲ್ಲಿ ನಿಂತಿದೆ.

ಪ್ರಭುತ್ವ ವಿರೋಧಿಗಳನ್ನು ಮಟ್ಟಹಾಕಲು ಎಲ್ಲಾ ಸರಕಾರಗಳೂ ನಿರಂತರವಾಗಿ ಪ್ರಯತ್ನಿಸುತ್ತಲೇ ಇರುತ್ತವೆ. ಆದರೆ, ಈ ಬಾರಿ ಸರಕಾರದ ನಡೆ ತೀವ್ರ ಆಕ್ರೋಶಕ್ಕೆ ಗುರಿಯಾಗಲು ಕಾರಣ ಹಿಂದುತ್ವದ ಹಾಗೂ ಬಿಜೆಪಿಯ ವಿರೋಧಿಗಳೆಂಬ ಕಾರಣಕ್ಕೆ ಪ್ರಗತಿಪರರನ್ನು ನಗರ ನಕ್ಸಲರ ಹೆಸರಲ್ಲಿ ಜೈಲಿಗೆ ತಳ್ಳಲು ಮುಂದಾಗಿರುವುದು. ನೋಟು ರದ್ಧತಿಯ ವೈಫಲ್ಯ ಹಾಗೂ ಸನಾತನ ಸಂಸ್ಥೆಯ ಮೇಲಿನ ಆರೋಪಗಳನ್ನು ತಣ್ಣಗಾಗಿಸಲು ಸರಕಾರ ನಗರ ನಕ್ಸಲರ ಬಂಧನ ಎಂಬ ನಾಟಕವಾಡುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ. ಸದ್ಯ ಬಂಧಿತರನ್ನು ಗೃಹ ಬಂಧನದಲ್ಲಿರಿಸಲು ಸುಪ್ರೀಂಕೋರ್ಟ್‌ ಆದೇಶಿಸಿದೆ. ಸೆಪ್ಟೆಂಬರ್‌ 6ರ ಸುಪ್ರೀಂಕೋರ್ಟ್‌ ತೀರ್ಮಾನವು ಬಿಜೆಪಿ ಸರಕಾರ ಪ್ರಾಯೋಜಿತ ಈ ನಾಟಕದ ಹೊಸ ಅಂಕವನ್ನು ತೆರೆಯಲಿದೆ.