samachara
www.samachara.com
‘ಅನಧಿಕೃತ ಗುಡಿಸಲುಗಳಲ್ಲಿ ಮೋಜು ಮಸ್ತಿ’:  ಬೇಲೇಕಾನು ರಕ್ಷಣೆಗೆ ಬೇಕಿದೆ ತುರ್ತು ಕಡಿವಾಣ
COVER STORY

‘ಅನಧಿಕೃತ ಗುಡಿಸಲುಗಳಲ್ಲಿ ಮೋಜು ಮಸ್ತಿ’: ಬೇಲೇಕಾನು ರಕ್ಷಣೆಗೆ ಬೇಕಿದೆ ತುರ್ತು ಕಡಿವಾಣ

ಯಾರೋ ಅಪರಿಚಿತರು ಎಲ್ಲಿಂದಲೋ ಬಂದು ಹಣ ಮಾಡಲು ‘ಮೋಜು, ಮಸ್ತಿ’ ದಂಧೆ ನಡೆಸಿ ಕರಾವಳಿ ಸಂಸ್ಕೃತಿಯನ್ನೇ ನಾಶ ಮಾಡುವ ಆಘಾತಕಾರಿ ಬೆಳವಣಿಗೆ ಈಗ ಉತ್ತರಕನ್ನಡಕ್ಕೂ ಕಾಲಿಟ್ಟಿದೆ.

ಗೋಕರ್ಣ ಉತ್ತರ ಕನ್ನಡ ಜಿಲ್ಲೆಯ ಸುಪ್ರಿಸಿದ್ಧ ಯಾತ್ರಾ ಸ್ಥಳ. ಅದರ ಸಮೀಪದಲ್ಲೇ ಇರುವ ತದಡಿ ಬಂದರು ಬಹಳಷ್ಟು ಜನಕ್ಕೆ ಪರಿಚಿತ. ಗೋಕರ್ಣದಿಂದ ತದಡಿಗೆ ಹೋಗುವ ರಸ್ತೆಯಲ್ಲಿಯೇ ಸ್ವಲ್ಪ ದೂರ ಸಾಗಿ ಎಡಕ್ಕೆ ಹೊರಳಿದರೆ ಬೇಲೇಕಾನು ಬಂದರಿಗೆ ಸಾಗುವ ದಾರಿ ಸಿಗುತ್ತದೆ. ಎಡದಲ್ಲಿ ವಿಶಾಲವಾದ ಅಘನಾಶಿನಿ ನದಿ, ಬಲಕ್ಕೆ ತೆಂಗಿನ ಮರಗಳು. ದೂರದಲ್ಲಿ ಮೇಘಾಚ್ಛಾದಿತ ಹಸಿರು ಗುಡ್ಡಗಳು. ಹವಾಮಾನ ಏರುಪೇರಿನಿಂದ ಸಮುದ್ರಕ್ಕಿಳಿಯದೇ ದಡದಲ್ಲೇ ನಿಂತ ಮೀನು ಹಿಡಿಯುವ ಬೋಟ್‌ಗಳು, ಇವೆಲ್ಲದರ ಜತೆಗೆ ರೊಯ್ಯನೆ ಬೀಸುವ ಗಾಳಿ, ಈ ಪ್ರಾಕೃತಿಕ ಸೌಂದರ್ಯ ಹಸಿವನ್ನೂ ಮರೆಸುವ ಹಾಗಿದೆ.

ಬೇಲೇಕಾನು ಗ್ರಾಮ ಕುಮಟಾ ತಾಲೂಕಿನ ಗೋಕರ್ಣ ಗ್ರಾಮ ಪಂಚಾಯಿತಿಗೆ ಒಳಪಡುವ ಸುಂದರ ಗ್ರಾಮ. ಪಂಚಾಯಿತಿ ಕೇಂದ್ರದಿಂದ 5 ಕಿಲೋಮೀಟರ್‌ ದೂರವಿದೆ. ಬೇಲೇಕಾನು ನದಿ ತಟದುದ್ದಕ್ಕೂ ಸಾಗಿ ಸಮುದ್ರವನ್ನು ತಡೆಹಿಡಿದಿರುವ ಚಿಕ್ಕ ಚಿಕ್ಕ ಗುಡ್ಡಗಳವರೆಗೂ ಹಬ್ಬಿರುವ ಕೃಷಿಕರು ಮತ್ತು ಮೀನುಗಾರರ ಹಳ್ಳಿ. ಭತ್ತ, ತೆಂಗು, ಅಲ್ಲಲ್ಲಿ ಅಡಿಕೆ ಬೆಳೆ ಮತ್ತು ಮೀನುಗಾರಿಕೆ ಇಲ್ಲಿನ ಜನರ ಜೀವನೋಪಾಯದ ಮೂಲ.

ಓರೆಕೋರೆಯ ರಸ್ತೆಯಲ್ಲಿ ಸಾಗುತ್ತ ಪ್ರಕೃತಿಯ ರಮಣೀಯತೆ ಅನುಭವಿಸುತ್ತ ಆಂಜನೇಯ ದೇವಸ್ಥಾನ ದಾಟಿ, ಬೇಲೇಕಾನಿನ ಪ್ರಾಥಮಿಕ ಶಾಲೆ ಎದುರಿನ ಹೊರಾಂಗಣ ವೇದಿಕೆಯ ಮುಂಭಾಗ ಬಂದರೆ ವಿಶಾಲ ಜಾಗ ಎದುರಾಗುತ್ತದೆ.

ಅಲ್ಲಿ, ‘ಗುಡಿಸಲು ಬಾಡಿಗೆಗೆ ದೊರೆಯುತ್ತವೆ’ ಎಂಬ ಆಂಗ್ಲ ಫಲಕ ಹೊತ್ತ ಸರಣಿ ಗುಡಿಸಲುಗಳು ಕಣ್ಣಿಗೆ ಬೀಳುತ್ತವೆ. ಇವು ಅಘನಾಶಿನಿಯ ದಡದಲ್ಲಿ ದಂಡೆ ಕೊರೆತ ತಡೆಯಲು ಬಂಡೆಗಳಿಂದ ನಿರ್ಮಿಸಲಾದ ತಡೆಗೋಡೆಯ ಮೇಲೆ ನಿರ್ಮಿಸಲ್ಪಟ್ಟಿವೆ.

ಹೇಗಿವೆ ಈ ಗುಡಿಸಲುಗಳು?

‘ಅನಧಿಕೃತ ಗುಡಿಸಲುಗಳಲ್ಲಿ ಮೋಜು ಮಸ್ತಿ’:  ಬೇಲೇಕಾನು ರಕ್ಷಣೆಗೆ ಬೇಕಿದೆ ತುರ್ತು ಕಡಿವಾಣ

ಸ್ಥಳೀಯ ತೆಂಗಿನ ಗರಿಗಳಿಂದ ಗುಡಿಸಿಲುಗಳ ಹೊರ ಆವರಣ ನಿರ್ಮಾಣವಾಗಿದ್ದರೂ, ಒಳಗೆ ಸಿಮೆಂಟ್ ಕಟ್ಟೆ ಮತ್ತು ಬಾಗಿಲು ಚೌಕಟ್ಟುಗಳನ್ನು ಗುಡುಸಿಲುಗಳು ಹೊಂದಿವೆ. ನದಿ ಕಡೆಯಿಂದ ಯಾವುದೇ ಹಾವು ಚೇಳುಗಳು ನುಸುಳದಂತೆ ಹಸಿರು ಶೇಡ್ ನೆಟ್ ಅಳವಡಿಸಲಾಗಿತ್ತು. ಸುಮಾರು 8 ಅಡಿ ಅಗಲ, 10 ಅಡಿ ಉದ್ದದ ವಿಸ್ತೀರ್ಣ ಹೊಂದಿದ್ದ ಈ ಗುಡಿಸಲುಗಳಿವು. ಎದುರು ಚಿಕ್ಕ ಪ್ಯಾರಡೈಸ್ ಎಂಬ ಚಿತ್ತಾರ ಸಹಿತ ಫಲಕವಿದೆ. ಅದರ ಹಿಂದೆ ಖುರ್ಚಿಗಳನ್ನೆಲ್ಲ ಒಂದೆಡೆ ಪೇರಿಸಿಟ್ಟ ಹೊಟೇಲ್ ತರಹದ ವ್ಯವಸ್ಥೆ ಇದೆ. ಸದ್ಯ ಅವೀಗ ಖಾಲಿ ಬಿದ್ದಿವೆ.

ಇಲ್ಲಿ ಸಿಕ್ಕ ಸ್ಥಳೀಯರೊಬ್ಬರ ಪ್ರಕಾರ, ಮಳೆಗಾಲದ ಸಮಯದಲ್ಲಿ ಇಲ್ಲಿನ ಚಟುವಟಿಕೆ ತುಂಬಾ ಕಡಿಮೆ. ನವೆಂಬರ್ ತಿಂಗಳ ಕೊನೆಯಿಂದ ವಿದೇಶೀಯರು ಬರಲು ಪ್ರಾರಂಭಿಸುತ್ತಾರೆ. ಅವರು ಸೇದಿ ಬಿಟ್ಟ ಗಾಂಜಾ ಹೊಗೆ ಊರೆಲ್ಲ ಆಕ್ರಮಿಸುತ್ತದೆ. ರಾತ್ರಿಯಿಡೀ ಮದ್ಯ ಸೇವನೆ ಮತ್ತು ಮಂದ ಬೆಳಕಿನಲ್ಲಿ ಗಂಡು ಹೆಣ್ಣುಗಳ ನೃತ್ಯವೂ ಇರುತ್ತದಂತೆ. ಆಗ ಅಲ್ಲಿ ಮೋಜು, ಮಸ್ತಿ, ವಿದೇಶೀ ಸಂಸ್ಕೃತಿ ಮೈ ಕೊಡವಿಕೊಂಡು ಎದ್ದು ನಿಲ್ಲುತ್ತದೆ. ಎಲ್ಲ ರೀತಿಯ ಮಾದಕ ವಸ್ತುಗಳ ಉಪಯೋಗವೂ ನಡೆಯುತ್ತದೆ ಎಂಬುದು ಗ್ರಾಮಸ್ಥರ ಅನುಭವದ ಮಾತು.

ಹೇಗಿದೆ ಇಲ್ಲಿನ ಸೆಟ್‌ ಆಪ್?:

‘ಅನಧಿಕೃತ ಗುಡಿಸಲುಗಳಲ್ಲಿ ಮೋಜು ಮಸ್ತಿ’:  ಬೇಲೇಕಾನು ರಕ್ಷಣೆಗೆ ಬೇಕಿದೆ ತುರ್ತು ಕಡಿವಾಣ

ಗ್ರಾಮದ ಜನ ಹೇಳುವ ಪ್ರಕಾರ ವಿದೇಶೀಯನೊಬ್ಬ, ಕೇರಳದ ಮೂಲದ ವ್ಯಕ್ತಿಯ ಮೂಲಕ ಇಲ್ಲಿ ಮೋಜು ಮಸ್ತಿ ದಂಧೆ ನಡೆಸುತ್ತಿದ್ದಾನೆ. ಬೇಲೇಕಾನ ಊರಿನ ತುದಿಯಲ್ಲಿ ಪ್ಯಾರಡೈಸ್ ಎಂಬ ರೆಸಾರ್ಟ್ ನಿರ್ಮಿಸಿದ್ದಾನೆ. ಮೋಜು ಮಸ್ತಿ ನಡೆಯುವ ಸಂಧರ್ಭದಲ್ಲಿ ಸ್ಥಳೀಯರಾರನ್ನೂ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಆದ್ದರಿಂದ ಒಳಗೆ ಏನೇನು ವ್ಯವಸ್ಥೆಗಳಿವೆ ಎನ್ನುವುದು ಅದೇ ಊರಿನ ಜನರಿಗೂ ತಿಳಿದಿಲ್ಲ. ಎಲ್ಲಿಂದ ರೂಮ್‌ ಬುಕ್‌ ಮಾಡುತ್ತಾರೆ, ಯಾರು ಬಂದು ಉಳಿಯುತ್ತಾರೆ, ಯಾವಾಗ ಅಲ್ಲಿಂದ ಕಾಲ್ಕೀಳುತ್ತಾರೆ ಎನ್ನುವುದು ಯಾವುದೂ ಕೂಡ ಜನರ ಅರಿವಿಗೆ ಬರುವುದೇ ಇಲ್ಲ.

ಗುಡಿಸಲುಗಳ ಬಳಿ ಸ್ಥಳಿಯರು ಪ್ರವೇಶಿಸದಂತೆ ಬಂದೋಬಸ್ತ್‌ ಮಾಡಲಾಗಿದೆ. ಹಳ್ಳಿಗರನ್ನು ದೂರ ಇಡಲೆಂದೇ ಕಟ್ಟುಮಸ್ತಾದ ಸ್ಥಳೀಯರನ್ನು ಹೆಚ್ಚು ದುಡ್ಡು ಕೊಟ್ಟು ಕಾವಲಿಗೆ ನಿಲ್ಲಿಸಲಾಗುತ್ತದೆ. ಇಲ್ಲಿನ ಮುರುಕು ಗುಡಿಸಲಿಗಳ್ಳಿ ತಲಾ ರೂ.150ರಂತೆ ಹಣ ತೆಗೆದುಕೊಂಡು 3-4 ಪ್ರವಾಸಿಗರನ್ನು ಲಿಂಗಭೇದವಿಲ್ಲದೇ ಉಳಿಸುತ್ತಾರೆ ಎನ್ನುವುದು ಗ್ರಾಮಸ್ಥರ ಮಾತು.

ಆಘಾತಕಾರಕ ಅಂಶಗಳು:

ಪ್ಯಾರಡೈಸ್ ರೆಸಾರ್ಟ್ ಊರಿನ ಕೊನೆಯಲ್ಲಿದ್ದರೂ, ಈ ‘ಮೋಜು ಮಸ್ತಿ’ ಗುಡಿಸಲುಗಳು ಮಾತ್ರ ಬೇಲೇಕಾನ್ ಸರಕಾರಿ ಪ್ರಾಥಮಿಕ ಶಾಲೆಯಿಂದ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿವೆ. ಶಾಲಾ ಆವರಣದ 100 ಮೀಟರ್‌ ವ್ಯಾಪ್ತಿಯಲ್ಲಿ ಧೂಮಪಾನ ಮಾಡಬಾರದು ಎಂಬ ಇನ್ನಿತ್ಯಾದಿ ಕಾನೂನುಗಳೆಲ್ಲವನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ. ಸಾರ್ವಜನಿಕ ರಂಗಮಂದಿರದ ಎದುರೇ ‘ಮೋಜು ಮಸ್ತಿ’ ಗುಡಿಸಲುಗಳನ್ನು ನಿರ್ಮಿಸಲಾಗಿದೆ. ಆದರೂ ಯಾರೊಬ್ಬರೂ ಈ ಕುರಿತು ಚಕಾರ ಎತ್ತದಿರುವುದು ಕಾಣದ ಕೈಗಳ ವಿರಾಟ್ ಶಕ್ತಿಯ ಮಹಿಮೆ ಅಷ್ಟೆ.

‘ಅನಧಿಕೃತ ಗುಡಿಸಲುಗಳಲ್ಲಿ ಮೋಜು ಮಸ್ತಿ’:  ಬೇಲೇಕಾನು ರಕ್ಷಣೆಗೆ ಬೇಕಿದೆ ತುರ್ತು ಕಡಿವಾಣ

ಸಿಆರ್‌ಝಡ್ ವ್ಯಾಪ್ತಿ:

ಕೇಂದ್ರ ಸರಕಾರದ ಕೋಸ್ಟಲ್ ರೆಗ್ಯುಲೇಶನ್ ಝೋನ್ ನಿಯಮ ಪ್ರಕಾರ ಹೈ ಟೈಡ್ ಲೈನ್ ಪಾಯಿಂಟ್‌ನಿಂದ 500 ಮೀಟರ್‌ ದೂರದವರೆಗೆ ಯಾವುದೇ ಅನಧಿಕೃತ ಕಟ್ಟಡ ನಿರ್ಮಾಣ, ಚಟುವಟಿಕೆಗಳನ್ನು ಮಾಡಲೇಬಾರದು. ಸ್ಥಳೀಯರಿಗೆ ಸಿಆರ್‌ಝಡ್ ಐಡೆಂಟಿಟಿ ಕೋಡ್ ಮತ್ತು ಫೋಟೋ ಒಳಗೊಂಡ ಗುರುತು ಪತ್ರ ಸಹ ನೀಡಲಾಗಿದೆ. ಆದರೆ ಅದನ್ನು ಯಾರೂ ಪರಿಶೀಲಿಸುತ್ತಿಲ್ಲ. ಆದ್ದರಿಂದಲೇ ಹೊರಗಿನವರ ಮೋಜು ಮಸ್ತಿ ಬಿಸಿನೆಸ್ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದು ಇಲ್ಲಿನ ಜನಮತ.

ಬೇಲೇಕಾನ್ ಸಮುದ್ರದಂಚಿನಲ್ಲಿ ಕಿಲೋಮೀಟರ್ ಉದ್ದದ ಪ್ರದೇಶವನ್ನು ಅತಿಕ್ರಮಿಸಿ ಪ್ಯಾರಡೈಸ್ ಬೀಚ್ ರೆಸಾರ್ಟ್ ನಿರ್ಮಿಸಲಾಗಿದೆ. ಹಗಲಿನಲ್ಲಿ ಸೂರ್ಯರಶ್ಮಿ ಆಸ್ವಾದಿಸುವ ವಿದೇಶೀಯರು ರಾತ್ರಿ ವೇಳೆ ಊರ ಕೊನೆಯ ಪ್ಯಾರಡೈಸ್ ರೆಸಾರ್ಟ್ ಮತ್ತು ಶಾಲೆ ಸಮೀಪದ ಗುಡಿಸಲುಗಳಲಲ್ಲಿ ಎಂಜಾಯ್ ಮಾಡುತ್ತಾರೆ ಎನ್ನುತ್ತಾರೆ ಹಳ್ಳಿಗರು.

ಗ್ರಾಮ ಪಂಚಾಯತ ಏನೆನ್ನುತ್ತದೆ?

ಈ ಮೋಜು ಮಸ್ತಿ ಗುಡಿಸಲು, ಪ್ಯಾರಡೈಸ್ ರೆಸಾರ್ಟ್ ಮತ್ತು ಬೀಚ್ ಯಾವುದರ ನಿರ್ಮಾಣಕ್ಕೂ ಪರವಾನಗಿ ಪಡೆದಿಲ್ಲ. ಸಿಆರ್‌ಝಡ್ ವ್ಯಾಪ್ತಿಯಾದ್ದರಿಂದ ಗ್ರಾಮ ಪಂಚಾಯತಿಗೆ ಪರವಾನಗಿ ನೀಡುವ ಅಧಿಕಾರವೂ ಇಲ್ಲ. ಆದರೆ ಜಾತ್ರೆ ಸಮಯದಲ್ಲಿ ಚಿಕ್ಕ ಅಂಗಡಿಗಳಿಗೆ ನೀಡಲಾಗುವ ತಾತ್ಕಾಲಿಕ ಪರವಾನಗಿಯಂತೆ ವಿದೇಶಿಗರು ಬರುವ ಸೀಸನ್‌ನಲ್ಲಿ ಎಲ್ಲೆಂದರಲ್ಲೇ ತಲೆ ಎತ್ತುವ ಮೋಜು ಮಸ್ತಿ ಗುಡಿಸಲುಗಳಿಗೆ ಕನಿಷ್ಠ ಕರ ವಿಧಿಸಿ ತಾತ್ಕಾಲಿಕ ಪರವಾನಗಿ ನೀಡಲಾಗುತ್ತದೆ. ಆದರೆ ಒಂದೇ ಪರವಾನಿಗೆಯಲ್ಲಿ ಎಷ್ಟು ಗುಡಿಸಲುಗಳನ್ನು ನಿರ್ಮಿಸಲಾಗುತ್ತೆ ಎಂದು ಯಾರಿಗೂ ಗೊತ್ತಿಲ್ಲ.

ನಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಪರವಾನಗಿ ಇರುವುದು 5 ರೆಸಾರ್ಟ್‌ಗಳಿಗೆ ಮಾತ್ರ. ಪ್ಯಾರಡೈಸ್ ಹೆಸರಿನ ಯಾವ ರೆಸಾರ್ಟ್‌ಗೂ ಪರವಾನಿಗೆ ನೀಡಲಾಗಿಲ್ಲ.
-ಯಾದವ ನಾಯ್ಕ, ಅಭಿವೃದ್ಧಿ ಅಧಿಕಾರಿ, ಗೋಕರ್ಣ ಗ್ರಾಮ ಪಂಚಾಯಿತಿ.

ವಿದೇಶಿಗರು ಬರುವ ಸೀಸನ್‌ ಬರುತ್ತಿದ್ದಂತೆಯೇ ಹೆಚ್ಚಿನ ಕೂಲಿ ಸಿಗುವ ಆಸೆಯಿಂದ ಕೂಲಿಕಾರರೆಲ್ಲರು ರೆಸಾರ್ಟ್‌ಗಳತ್ತಲೇ ಮುಖ ಮಾಡುತ್ತಾರೆ. ಆದ್ದರಿಂದ ಉದ್ಯೋಗ ಖಾತ್ರಿಯಂತ ಯೋಜನೆಗಳು ನೆಲಕಚ್ಚುತ್ತಿವೆ ಎನ್ನುವುದು ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಅಳಲು. ಈ ಬಗ್ಗೆ ಬೇಲೇಕಾನ್ ಗ್ರಾಮವನ್ನು ಪ್ರತಿನಿಧಿಸುವ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಸದಸ್ಯರು ಮಾತ್ರವಲ್ಲದೇ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮೌನವಾಗಿದ್ದಾರೆ.

ರಾಜ್ಯ, ಕೇಂದ್ರ ಸರಕಾರಗಳ ನಿಯಮಗಳನ್ನು ಗಾಳಿಗೆ ತೂರಿ, ಯಾರೋ ಎಲ್ಲಿಂದಲೋ ನಡೆಸುವ ಇಂಥ ಮೋಜು ಮಸ್ತಿ ವ್ಯವಸ್ಥೆಗಳು ನಾಯಿಕೊಡೆಗಳಂತೆ ಏಳುತ್ತಿವೆ. ಸ್ಥಳೀಯರ ಹಣದ ಅವಶ್ಯಕತೆಯ ಲಾಭ ಪಡೆದು, ಗಾಂಜಾ, ಹೆಂಡ ಸಹಿತ ಎಲ್ಲ ರೀತಿಯ ಮಜ ಉಡಾಯಿಸುವ ವ್ಯವಸ್ಥೆಗಳು ಕರಾವಳಿಯುದ್ದಕ್ಕೂ ಅಲ್ಲಲ್ಲಿ ತಲೆಯೆತ್ತಿವೆ. ಈಗಾಗಲೇ ಇಂತಹದೊಂದು ಪ್ರವಾಸೋದ್ಯಮವನ್ನು ಬೆಳೆಸಲು ಹೋದ ಕೊಡಗು ಜಿಲ್ಲೆ ಹೊಡತ ತಿಂದಿದೆ. ಈಗಲಾದರೂ ಇತರೆ ಜಿಲ್ಲೆಗಳಲ್ಲಿ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕುವತ್ತ ಸರಕಾರ ಆಲೋಚನೆ ಮಾಡಬೇಕಿದೆ.