ನಿರೀಕ್ಷಿಸಿ ಅಚ್ಛೇ ದಿನ್: ಪೆಟ್ರೋಲ್‌ 80.89, ಡೀಸೆಲ್‌ 72.22; 1 ಡಾಲರ್‌ = 70.82 ರೂಪಾಯಿ!
COVER STORY

ನಿರೀಕ್ಷಿಸಿ ಅಚ್ಛೇ ದಿನ್: ಪೆಟ್ರೋಲ್‌ 80.89, ಡೀಸೆಲ್‌ 72.22; 1 ಡಾಲರ್‌ = 70.82 ರೂಪಾಯಿ!

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 4 ವರ್ಷ ಮೂರು ತಿಂಗಳುಗಳು ಕಳೆದಿವೆ. ಜನರು ಇನ್ನೂ ‘ಅಚ್ಛೇ ದಿನ್’ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ.

ದೇಶದ ಪ್ರಮುಖ ನಗರಗಳಲ್ಲಿ ಗುರುವಾರ ಡೀಸೆಲ್‌ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಬುಧವಾರ ದೇಶದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಏರಿಕೆ ಮಾಡಿದ್ದರಿಂದ ಈ ದಾಖಲೆಯ ಬೆಲೆ ಏರಿಕೆಯಾಗಿದೆ. ಕಚ್ಛಾ ತೈಲ ದರ ಏರಿಕೆ, ದೇಶದಲ್ಲಿ ತೈಲ ಸರಬರಾಜಿನ ಮೇಲೆ ಹೇರಿರುವ ಹೆಚ್ಚಿನ ಅಬಕಾರಿ ಸುಂಕ ಈ ಏರಿಕೆಗೆ ಕಾರಣಗಳಾಗಿವೆ.

ದೇಶದಲ್ಲಿ ಆಗಸ್ಟ್‌ 16 ರಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬಂದಿತ್ತು. ಇದಕ್ಕೆ ಡಾಲರ್‌ ಎದುರು ಕುಸಿತಗೊಂಡ ರೂಪಾಯಿ ಮೌಲ್ಯವೂ ಪರೋಕ್ಷ ಕಾರಣವಾಗಿತ್ತು. ಇವೆಲ್ಲದರ ಕಾರಣದಿಂದ ಸದ್ಯ ದೆಹಲಿಯಲ್ಲಿ ಲೀಟರ್‌ ಡೀಸೆಲ್‌ 69.93 ರೂಪಾಯಿಗೆ ಮಾರಾಟವಾಗುತ್ತಿದ್ದರೆ, ಬೆಂಗಳೂರಿನಲ್ಲಿ ಈ ದರ 72.22 ರೂಪಾಯಿ ಆಗಿದೆ. ಈ ಮೂಲಕ 75 ರ ಗಡಿಯತ್ತ ಡೀಸೆಲ್‌ ಬೆಲೆ ಮುನ್ನುಗ್ಗುತ್ತಿದೆ.

ಇನ್ನು ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 78.30 ರೂಪಾಯಿ ಇದ್ದರೆ, ಬೆಂಗಳೂರಿನಲ್ಲಿ 80ರ ಗಡಿ ದಾಟಿ 80.89 ರೂಪಾಯಿಗೆ ಮಾರಾಟವಾಗುತ್ತಿದೆ. ದೆಹಲಿಯಲ್ಲಿ ಕನಿಷ್ಠ ಮಾರಾಟ ತೆರಿಗೆ ಅಥವಾ ವ್ಯಾಟ್‌ ಜಾರಿಯಲ್ಲಿರುವ ಕಾರಣ ಅಲ್ಲಿ ಕಡಿಮೆ ಬೆಲೆ ಇದೆ. ಆದರೆ ಉಳಿದ ನಗರಗಳಲ್ಲಿ ಹೆಚ್ಚಿನ ವ್ಯಾಟ್‌ ಇರುವುರಿಂದ ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆ ಹೆಚ್ಚಾಗಿದೆ.

ನಿರೀಕ್ಷಿಸಿ ಅಚ್ಛೇ ದಿನ್: ಪೆಟ್ರೋಲ್‌ 80.89, ಡೀಸೆಲ್‌ 72.22; 1 ಡಾಲರ್‌ = 70.82 ರೂಪಾಯಿ!
ಚಿತ್ರ ಕೃಪೆ: ಒನ್‌ಇಂಡಿಯಾ

ಸದ್ಯದ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆಯ ಪರಿಸ್ಥಿತಿ ಹೇಗಾಗಿದೆ ಎಂದರೆ 15 ದಿನಕ್ಕೊಮ್ಮೆ ರೂಪಾಯಿಗಳಷ್ಟು ಬೆಲೆ ಏರಿಕೆಯಾಗುತ್ತಿದೆ. ಇದಕ್ಕೆ ತನ್ನದೇ ಆದ ಸ್ಪಷ್ಟನೆ ಕೊಟ್ಟಿರುವ ಕೇಂದ್ರ ಸರಕಾರ, ‘ಜಾಗತಿಕ ತೈಲ ದರದ ಏರಿಕೆ ಇದಕ್ಕೆ ಕಾರಣವಾಗಿದ್ದು, ಬೆಲೆ ಏರಿಕೆ ಕೆಲವು ದಿನಗಳ ಮಟ್ಟಿಗೆ ಮಾತ್ರ ಇರಲಿದೆ. ನಂತರ ಇಳಿಕೆಯಾಗಲಿದೆ,’ ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪಾತಾಳಕ್ಕಿಳಿಯುತ್ತಿದೆ ರೂಪಾಯಿ ಮೌಲ್ಯ

ಒಂದು ಕಡೆ ತೈಲ ಬೆಲೆ ಎವರೆಸ್ಟ್‌ ಏರುವ ಧಾವಂತದಲ್ಲಿದ್ದರೆ, ರೂಪಾಯಿ ಮೌಲ್ಯ ಆಳ ಸಮುದ್ರಕ್ಕೆ ಇಳಿಯುತ್ತಿದೆ. ಬುಧವಾರವಷ್ಟೇ ಅನಾಣ್ಯೀಕರಣದ ವರದಿ ಬಿಡುಗಡೆಯಾಗಿದ್ದು ಹೆಚ್ಚಿನ ಎಲ್ಲಾ ನೋಟುಗಳು ತನಗೆ ವಾಪಸ್‌ ಬಂದಿವೆ ಎಂದು ‘ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ’ ಸ್ಪಷ್ಟಪಡಿಸಿದೆ. ಇದೇ ಅನಾಣ್ಯೀಕರಣ ನಡೆದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ರೂಪಾಯಿ ಡಾಲರ್‌ ವಿರುದ್ಧ ಬಲಿಷ್ಠವಾಗಲಿದೆ ಎಂದಿದ್ದರು.

ಆದರೆ, ಬಲಿಷ್ಠವಾಗುವುದು ಬಿಡಿ ರೂಪಾಯಿ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ಅಮೆರಿಕನ್‌ ಡಾಲರ್‌ ವಿರುದ್ಧ ರೂಪಾಯಿ ಗುರುವಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು 70.82 ರೂಪಾಯಿಗೆ ಇಳಿಕೆ ಕಂಡಿದೆ. ಬುಧವಾರ ದಿನದ ಅಂತ್ಯಕ್ಕೆ ಡಾಲರ್‌ ಎದುರು ರೂಪಾಯಿ ಮೌಲ್ಯ 70.59 ರೂಪಾಯಿಗಳಾಗಿತ್ತು.

ಇದು ದಿನವೊಂದರ ಕಥೆಯಲ್ಲ. ಈ ವರ್ಷವೊಂದರಲ್ಲೇ ರೂಪಾಯಿ ಮೌಲ್ಯ ಶೇಕಡಾ 9.76ರಷ್ಟು ಇಳಿಕೆಯಾಗಿದೆ. ಈ ಮೂಲಕ ಏಷ್ಯಾ ಖಂಡದಲ್ಲೇ ಅತ್ಯಂತ ದುರ್ಬಲ ಪ್ರದರ್ಶನ ನೀಡಿದ ಕರೆನ್ಸಿ ಎಂಬ ಹಣೆಪಟ್ಟಿಯನ್ನು ಭಾರತ ಹೊತ್ತುಕೊಂಡಿದೆ.

2014ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಈ ದೇಶದಲ್ಲಿ ‘ಅಚ್ಛೇ ದಿನ್‌’ ಕಲ್ಪನೆ ಬಿತ್ತಿದವರು ಹಾಲಿ ಪ್ರಧಾನಿ ನರೇಂದ್ರ ಮೋದಿ. ಅವತ್ತು ಅವರ ಭಾಷಣಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಗೆ ಕಡಿವಾಣ ಹಾಕುವ ಮಾತುಗಳು ಉದುರುತ್ತಿದ್ದವು. ಡಾಲರ್‌ ವಿರುದ್ಧ ರೂಪಾಯಿಯನ್ನು ಎದ್ದು ನಿಲ್ಲಿಸುವ ಅವರ ಮಾತುಗಳಿಗೆ ಮರುಳಾಗಿ ಜನರು ಮತ ಹಾಕಿದ್ದರು. ಪರಿಣಾಮ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಇದೀಗ ಅಧಿಕಾರಕ್ಕೆ ಬಂದು 4 ವರ್ಷ ಮೂರು ತಿಂಗಳುಗಳು ಕಳೆದಿವೆ. ಜನರು ಇನ್ನೂ ‘ಅಚ್ಛೇ ದಿನ್’ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ.