samachara
www.samachara.com
‘ಸಿಕಂದರಾಬಾದ್ ಸಂಚಿನಿಂದ ಮೋದಿ ಹತ್ಯೆ ಸಂಚಿನವರೆಗೆ’: ಯಾರೂ ಈ ಕ್ರಾಂತಿಕಾರಿ ವರವರ ರಾವ್? 
COVER STORY

‘ಸಿಕಂದರಾಬಾದ್ ಸಂಚಿನಿಂದ ಮೋದಿ ಹತ್ಯೆ ಸಂಚಿನವರೆಗೆ’: ಯಾರೂ ಈ ಕ್ರಾಂತಿಕಾರಿ ವರವರ ರಾವ್? 

ವರವರ ರಾವ್‌ಗೆ ಬಂಧನ ಹೊಸತಲ್ಲವಾದರೂ ಈ ಬಾರಿ ಬಂಧನಕ್ಕೆ ಕಾರಣವಾದ ಆರೋಪ ಮತ್ತು ಜೈಲಿಗಟ್ಟಿದ ಸಮಯ-ಸಂದರ್ಭಗಳು ಚರ್ಚೆಗೆ ಗ್ರಾಸವಾಗಿವೆ. ಇಷ್ಟಕ್ಕೂ ಯಾರು ಈ ರಾವ್? ಪೂರ್ಣ ಮಾಹಿತಿ ಇಲ್ಲಿದೆ. 

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ನಕ್ಸಲ್‌ ಚಳವಳಿ ಎಡೆಗೆ ಸಹಾನುಭೂತಿ ಹೊಂದಿರುವ ಮತ್ತು ಕ್ರಾಂತಿಕಾರಿ ಬರಹಗಾರ ಪಿ. ವರವರ ರಾವ್‌ ಬಂಧಿತರಾಗಿದ್ದಾರೆ. ಹೈದರಾಬಾದ್‌ನಲ್ಲಿರುವ ನಿವಾಸಕ್ಕೆ ಮಂಗಳವಾರ ದಾಳಿ ನಡೆಸಿರುವ ಪೊಲೀಸರು ಅವರನ್ನು ಬಂಧಿಸಿದ್ದಾರೆ. ದೇಶದಾದ್ಯಂತ ಹೀಗೆ 9 ಸಾಮಾಜಿಕ ಹೋರಾಟಗಾರರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ವರವರ ರಾವ್‌ ಸೇರಿ ಐದು ಜನರನ್ನು ಬಂಧಿಸಿದ್ದಾರೆ.

2017ರ ಡಿಸೆಂಬರ್‌ 31ರಂದು ‘ಭೀಮ ಕೊರೆಗಾವ್‌ ಯುದ್ಧ’ದ 200ನೇ ವರ್ಷಾಚರಣೆ ಕಾರ್ಯಕ್ರಮ ‘ಎಲ್ಗಾರ್‌ ಪರಿಷದತ್’ನಲ್ಲಿ ನಡೆದಿತ್ತು. ಈ ಕಾರ್ಯಕ್ರಮದ ನಂತರ ಮಹಾರಾಷ್ಟ್ರದಲ್ಲಿ ಗಲಭೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿ ಪೊಲೀಸರು ಅವರುಗಳನ್ನು ಬಂಧಿಸಿದ್ದರು. ಈ ಸಂದರ್ಭದಲ್ಲಿ ಪತ್ರವೊಂದು ಸಿಕ್ಕಿತ್ತು ಮತ್ತು ಅದರಲ್ಲಿ ವರವರ ರಾವ್‌ ಹೆಸರಿತ್ತು ಎಂಬ ಕಾರಣಕ್ಕೆ ಅವರನ್ನೂ ಬಂಧನಕ್ಕೆ ಗುರಿಯಾಗಿಸಲಾಗಿದೆ.

‘ಆರ್‌’ ಎಂದು ಹೇಳಿಕೊಂಡಿದ್ದ ವ್ಯಕ್ತಿಯೊಬ್ಬ ಈ ಪತ್ರವನ್ನು ಬರೆದಿದ್ದ. ಇದರಲ್ಲಿ ಆತ ಪ್ರಧಾನಿ ನರೇಂದ್ರ ಮೋದಿಯನ್ನು ರಾಜೀವ್‌ ಗಾಂಧಿ ಮಾದರಿಯಲ್ಲಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಪತ್ರದಲ್ಲಿ 8 ಕೋಟಿ ರೂಪಾಯಿ ಬೆಲೆಬಾಳುವ ಅಮೆರಿಕಾದ ಸೇನೆ ಬಳಸುವ ಎಂ-4 ರೈಫಲ್‌, ಕೊಲೆ ಸಂಚನ್ನು ಕಾರ್ಯಗತಗೊಳಿಸಲು 4 ಲಕ್ಷ ರೌಂಡ್‌ ಮದ್ದುಗುಂಡುಗಳು ಬೇಕು ಎಂದು ಬರೆಯಲಾಗಿತ್ತು. ಇದರಲ್ಲಿ ವರವರ ರಾವ್‌ ಹೆಸರೂ ಇತ್ತು ಎನ್ನಲಾಗಿದೆ.

ಇದೇ ಹಿನ್ನೆಲೆಯಲ್ಲಿ ಅವರನ್ನೀಗ ಬಂಧಿಸಲಾಗಿದೆ. ವರವರ ರಾವ್‌ ಅವರಿಗೆ ಈ ಬಂಧನ ಹೊಸತೂ ಅಲ್ಲ, ಬಹುಶಃ ಕೊನೆಯದೂ ಅಲ್ಲ. ಹಲವು ಬಾರಿ ಬಂಧನಕ್ಕೆ ಒಳಗಾದ ಹಳೆಯ ಆಂಧ್ರ ಪ್ರದೇಶದ ಚರಿತ್ರಾರ್ಹ ಹೆಸರು ವರವರ ರಾವ್‌. ಸಾಹಿತ್ಯ, ಕಾಲೇಜಿನ ಕಾರಿಡಾರುಗಳಿಂದ ಹಿಡಿದು ನಕ್ಸಲರವರೆಗೆ ಅವರ ಹೆಸರು ಕೇಳಿ ಬರುತ್ತದೆ.

ಅವರು ವರವರ ರಾವ್‌:

1940ರ ನವೆಂಬರ್‌ 3ರಂದು ಈಗಿನ ತೆಲಂಗಾಣದ ವಾರಂಗಲ್‌ ಜಿಲ್ಲೆಯಲ್ಲಿ ಜನಿಸಿದ ವರವರ ರಾವ್‌ ಅವರಿಗೆ ಸದ್ಯ 78 ವರ್ಷ. ತಮ್ಮ ಸುದೀರ್ಘ ಜೀವನದಲ್ಲಿ ಹೋರಾಟಗಾರ, ಕವಿ, ಪತ್ರಕರ್ತ, ವಿಮರ್ಶಕ, ಕಮ್ಯೂನಿಸ್ಟ್‌ ಮತ್ತು ನಕ್ಸಲ್‌ ಸಹನೂಭೂತಿದಾರ ಎಂಬ ಹಣೆಪಟ್ಟಿಗಳನ್ನು ಅವರು ಸಂಪಾದಿಸಿಕೊಂಡಿದ್ದಾರೆ. 1957ರಿಂದ ಲೇಖನಿ ಹಿಡಿದು ಬರೆಯಲು ತೊಡಗಿದ ಅವರು ನೂರಾರು ಕ್ರಾಂತಿಕಾರಿ ಕವಿತೆಗಳು, ಬರಹಗಳಿಗೆ ಕರ್ತೃವಾಗಿದ್ದಾರೆ. 1960ರಲ್ಲಿ ತೆಲುಗು ಸಾಹಿತ್ಯದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಹೊರಬಿದ್ದ ರಾವ್‌ ಮೊದಲಿಗೆ ಆಯ್ದುಕೊಂಡಿದ್ದು ಉಪನ್ಯಾಸಕ ವೃತ್ತಿಯನ್ನು.

ಬರಹಗಾರ ವರವರ ರಾವ್‌
ಬರಹಗಾರ ವರವರ ರಾವ್‌
ಚಿತ್ರ ಕೃಪೆ: ರಯಟ್‌ ಡಾಟ್‌ ಇನ್‌

ಮಧ್ಯದಲ್ಲಿ ಕೆಲವು ಅವಧಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯಲ್ಲಿ ಕೆಲಸ ನಿರ್ವಹಿಸಿದರು ರಾವ್‌. ಆದರೆ ಉಪನ್ಯಾಸ ವೃತ್ತಿಯ ಸೆಳೆತ ಅವರನ್ನು ಮತ್ತೆ ಮೆಹಬೂಬ್‌ನಗರಕ್ಕೆ ಕರೆ ತಂದಿತು. ಹೀಗಿದ್ದೂ ಅವರಿಗೆ ತಮ್ಮ ನೆಲೆ ಇದಲ್ಲ ಎಂದು ಅನಿಸಲು ಶುರುವಾಯಿತು. ಹುಟ್ಟೂರು ವಾರಂಗಲ್‌ಗೆ ಮರಳಿದ ಅವರು ಇಲ್ಲಿನ ‘ಚಂದ್ರಕಾಂತಯ್ಯ ಮೆಮೋರಿಯಲ್‌ ಕಾಲೇಜಿ’ನಲ್ಲಿ ಪ್ರಾಧ್ಯಾಪಕ ಹುದ್ದೆಗೆ ಸೇರಿಕೊಂಡರು. ಇಲ್ಲಿ ಪ್ರಾಂಶುಪಾಲರ ಹುದ್ದೆವರೆಗೂ ಏರಿದ ಅವರು ಬರೋಬ್ಬರಿ 40 ವರ್ಷಗಳ ಕಾಲ ಉಪನ್ಯಾಸಕರಾಗಿದ್ದರು. ಆದರೆ ಇಷ್ಟೇ ಆಗಿದ್ದರೆ ಇವತ್ತು ವರವರ ರಾವ್‌ ಹೆಸರು ಸುದ್ದಿ ಕೇಂದ್ರದಲ್ಲಿ ಇರುತ್ತಿರಲಿಲ್ಲ. ಅವರು ತಮ್ಮ ಪ್ರಾಧ್ಯಾಪಕರ ಕೊಠಡಿ ಮತ್ತು ಕಾಲೇಜಿನ ಕಾರಿಡಾರುಗಳಾಚೆಗೆ ಹೆಜ್ಜೆ ಇಟ್ಟಿದ್ದರು. ನಕ್ಸಲರ ಜತೆ ಸಂಬಂಧ ಬೆಸೆದಿದ್ದರು. ಅದರ ಪರಿಣಾಮ ಅವರು ಹಲವು ಬಾರಿ ಬಂಧನಕ್ಕೆ ಗುರಿಯಾಗಬೇಕಾಯಿತು.

ನಕ್ಸಲ್‌ ನಂಟು:

ವರವರ ರಾವ್‌ ಅವರ ತಲೆಯಲ್ಲಿ ಕ್ರಾಂತಿಕಾರಿ ಚಿಂತನೆಗಳು ಮೊಳಕೆಯೊಡೆದಿದ್ದು ಮೆಹಬೂಬ್‌ನಗರದ ದಿನಗಳಲ್ಲಿ. ನವ್ಯ ತೆಲುಗು ಸಾಹಿತ್ಯದ ನಿಯತಕಾಲಿಕೆಯೊಂದನ್ನು ಅವರು ಈ ಸಂದರ್ಭದಲ್ಲಿ ಹೊರತರಲು ಹೊರಟಿದ್ದರು. ಮುಂದೆ ವಾರಂಗಲ್‌ಗೆ ಹೋದವರು ಅಲ್ಲಿ ಸಾಹಿತಿ ಮಿತ್ರಲು (ಸಾಹಿತಿ ಮಿತ್ರರು) ಸಂಘ ಕಟ್ಟಿ 1966ರಿಂದ ಪತ್ರಿಕೆಯೊಂದನ್ನು ಹೊರ ತರಲು ಆರಂಭಿಸಿದರು. ಮುಂದೆ ಇದು ‘ಸೃಜನಾ’ ಎಂಬ ನವ್ಯ ತೆಲುಗು ಸಾಹಿತ್ಯದ ವೇದಿಕೆಯಾದಾಗ ಆರಂಭದಲ್ಲಿ ಪೂರ್ತಿಯಾಗಿ ಸಾಹಿತ್ಯಕ್ಕೇ ಮೀಸಲಾಗಿತ್ತು. ಬರಬರುತ್ತಾ ಸೃಜನಾ ಸಿದ್ಧಾಂತಗಳ ಜತೆಗೆ ಥಳುಕು ಹಾಕಿಕೊಳ್ಳಲು ಆರಂಭಿಸಿತು.

ತೆಲುಗು ಸಾಹಿತ್ಯದ ಸಮಯವೇ ಅವತ್ತು ಹಾಗಿತ್ತು. ಧ್ರುವೀಕರಣ ಎಂಬುದು ಸಾಹಿತ್ಯ ವಲಯಕ್ಕೂ ಕಾಲಿಟ್ಟಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಹುಟ್ಟಿಕೊಂಡ ಸಾಂಸ್ಕೃತಿಕ ಕ್ರಾಂತಿ ಮತ್ತು ದೇಶದ ಪಶ್ಚಿಮ ಬಂಗಾಳ ಮೂಲದಿಂದ ಬಂದ ‘ನಕ್ಸಲ್‌ಬರಿ’ಯ ನೆರಳುಗಳು ರಾಜ್ಯಗಳಿಗೆ ಹರಡಿಕೊಂಡ ಸಮಯವದು. ಆಂಧ್ರ ಪ್ರದೇಶಕ್ಕೆ ಬಂದಾಗ ವಾರಂಗಲ್‌ ನಕ್ಸಲ್‌ಬರಿಯ ಕೇಂದ್ರವಾಗಿ ಗುರುತಿಸಿಕೊಂಡಿತು. ಅದೇ ಸಮಯಕ್ಕೆ ಇದೇ ವಾರಂಗಲ್‌ಗೆ ಉಪನ್ಯಾಸಕ ವೃತ್ತಿ ಅರಸಿಕೊಂಡು ಬಂದಿದ್ದವರು ವರವರ ರಾವ್‌.

1969ರಲ್ಲಿ ವಾರಂಗಲ್‌ನಲ್ಲಿ ‘ತಿರುಗುಬಾಟು ಕವುಲು’ (ಬಂಡಾಯ ಸಾಹಿತಿಗಳು) ಎಂಬ ಸಾಹಿತಿಗಳ ಗುಂಪು ಮೊಳಕೆಯೊಡೆಯಿತು. ಮುಂದೆ ಶ್ರೀಕಾಕುಳಂನಲ್ಲಿ ನಡೆದ ಶಸ್ತ್ರ ಸಜ್ಜಿತ ಹೋರಾಟದ ಜತೆ ಈ ಗುಂಪು ಸಂಬಂಧ ಹೊಂದಿತ್ತು. ಇದರ ಹಿಂದೆ ಇದ್ದವರು ಇದೇ ವರವರ ರಾವ್‌.

ಶ್ರೀಕಾಕುಳಂ ಹೋರಾಟದ ಸಮಯದಲ್ಲಿ ತೆಲುಗು ಸಾಹಿತ್ಯದಲ್ಲೂ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಹೋರಾಡುತ್ತಿದ್ದ ಜನ ಸಮೂಹಕ್ಕೆ ಬಹಿರಂಗ ಬೆಂಬಲ ವ್ಯಕ್ತಪಡಿಸುವ ಯುವ ಬರಗಾರರು ಮತ್ತು ಕಲಾವಿದರು ಗುಂಪೊಂದು ಸೃಷ್ಟಿಯಾಯಿತು. ಸಾಂಪ್ರದಾಯಿಕ ಲೇಖಕರ ನಡೆಗಳನ್ನು ಪ್ರಶ್ನಿಸಿದ ಈ ಬರಹಗಾರರು ಸಾಂಪ್ರದಾಯಿಕ, ಅಸ್ಪಷ್ಟ ಮಾನವತಾವಾದಿ ಮತ್ತು ಪ್ರಣಯಭರಿತ ಸಾಹಿತ್ಯದ ತಳಕ್ಕೆ ಕೈ ಹಾಕಿ ಅಲುಗಾಡಿಸಿಬಿಟ್ಟರು. ಹಳೆಯ ತಲೆಮಾರಿನ ಶ್ರೀ ಶ್ರೀ ಮತ್ತು ಕುಟುಂಬ ರಾವ್‌ ತರಹದವರು ಮಾತ್ರ ಹೊಸ ತಲೆಮಾರಿನ ಬಿಸಿ ರಕ್ತದ ಯುವಕರ ಜತೆ ಹೆಜ್ಜೆ ಹಾಕಿದರು.

ವಿರಸಂ ಹುಟ್ಟು:

ಶ್ರೀಕಾಕುಳಂನಲ್ಲಿ ನಡೆದ ಮೂರು ವರ್ಷಗಳ ಸುದೀರ್ಘ ಶಸ್ತ್ರ ಸಜ್ಜಿತ ಹೋರಾಟದಿಂದ ಪ್ರೇರಣೆ ಪಡೆದ ಸಾಹಿತಿಗಳ ಒಂದು ಪಂಗಡ ಈ ಸಂದರ್ಭದಲ್ಲಿ ಒಟ್ಟಾಯಿತು. ಅದರ ಹೆಸರೇ ‘ವಿಪ್ಲವ ರಚಾಯಿಟಾಲ ಸಂಗಮ್‌’ ಅಥವಾ ವಿರಸಂ. ಇದನ್ನು ಹುಟ್ಟುಹಾಕಿದವರಲ್ಲಿ ವರವರ ರಾವ್‌ ಕೂಡ ಒಬ್ಬರು. ವಿರಸಂ ಹೆಸರಿನಲ್ಲಿ ಒಟ್ಟಾದ ತೆಲುಗಿನ ಕ್ರಾಂತಿಕಾರಿ ಬರಹಗಾರರ ಪಂಗಡ ನಕ್ಸಲ್‌ ಸಿದ್ಧಾಂತವನ್ನು ಮತ್ತು ನಕ್ಸಲ್ ಕಾರ್ಯಾಚರಣೆಗಳನ್ನು ಬೆಂಬಲಿಸುತ್ತಾ ಬಂತು.

ವಿರಸಂ ವೇದಿಕೆಯಲ್ಲಿ ವರವರ ರಾವ್‌
ವಿರಸಂ ವೇದಿಕೆಯಲ್ಲಿ ವರವರ ರಾವ್‌
ಚಿತ್ರ ಕೃಪೆ: ರಯಟ್‌ ಡಾಟ್‌ ಇನ್

ವಿರಸಂನ ವಕ್ತಾರರಾಗಿ ಇಡೀ ಆಂಧ್ರ ಪ್ರದೇಶದಾದ್ಯಂತ ಓಡಾಡಿದರು ವರವರ ರಾವ್‌. ತಮ್ಮ ಸೃಜನ ನಿಯತಕಾಲಿಕವನ್ನು ಮಾಸಿಕವಾಗಿ ಪರಿವರ್ತಿಸಿ, ಅವರ ಸಂದೇಶಗಳು ರಾಜ್ಯದಾದ್ಯಂತ ತಲುಪಿಸುವ ಕೆಲಸಕ್ಕೆ ಕೈ ಹಾಕಿದರು. ಈ ಅವಧಿಯಲ್ಲಿ ಕವನ ಬರೆಯುವ, ಕಾಲೇಜಿನಲ್ಲಿ ಉಪನ್ಯಾಸ ವೃತ್ತಿ ನಿರ್ವಹಿಸುವ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವ ಅತ್ಯುನ್ನತ ಗೌರವ ಹೊಂದಿದ್ದ ಸಾಹಿತ್ಯಿಕ ಮಾಸಿಕವನ್ನು ಸಂಪಾದನೆ ಮಾಡುವು ಬಿಡುವಿಲ್ಲದ ಕೆಲಸದಲ್ಲಿ ನಿರತರಾಗಿದ್ದರು ಅವರು.

ಸಾಹಿತ್ಯ ಅವರ ಆಸಕ್ತಿಯಾಗಿತ್ತು. ಜತೆಗೆ ಅದನ್ನು ತಮ್ಮ ಚಳವಳಿಯ ಉದ್ದೇಶಗಳಿಗೆ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು ವರವರ ರಾವ್‌. ಅವರು ತಮ್ಮ ಜೀವಿತಾವಧಿಯಲ್ಲಿ 15 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಹೆಚ್ಚು ಕಡಿಮೆ ಭಾರತದ ಎಲ್ಲಾ ಭಾಷೆಗಳಿಗೆ ಇವು ಅನುವಾದಗೊಂಡಿವೆ. ಅವರು ಬರೆದ ತೆಲಂಗಾಣ ಪ್ರತ್ಯೇಕ ರಾಜ್ಯದ ಕುರಿತಾದ 1983ರ ಕೃತಿಯನ್ನು ತೆಲುಗಿನ ಮಾರ್ಕಿಸ್ಟ್‌ ಸಾಹಿತ್ಯದ ಮೈಲುಗಲ್ಲು ಎಂದು ಕರೆಯಲಾಗುತ್ತದೆ. ಅವರು ಜೈಲಿನಲ್ಲಿದ್ದಾಗ ತಮ್ಮದೇ ಜೈಲಿನ ದಿನಗಳ ಕಥೆಗಳನ್ನು ‘ಸಹಚಾರುಲು’ (1990) ಹೆಸರಿನಲ್ಲಿ ಬರೆದಿದ್ದಲ್ಲದೆ ಜೈಲಿನಲ್ಲೇ ‘ಡೆವಿಲ್‌ ಆನ್‌ ದಿ ಕ್ರಾಸ್‌’ ಕಾದಂಬರಿಯನ್ನು ತೆಲುಗಿಗೂ ತಂದಿದ್ದರು. ಇದೇ ಸಾಹಿತ್ಯ ಮತ್ತು ರಾಜಕೀಯ ಚಟುವಟಿಕೆಗಳು ವರವರ ರಾವ್‌ ಅವರಿಗೆ ಜೈಲಿನ ಹಾದಿಯನ್ನು ತೋರಿದ್ದವು.

ಜೈಲಿನ ದಿನಗಳು:

ಮೊದಲ ಬಾರಿಗೆ ವರವರ ರಾವ್‌ ಜೈಲು ಸೇರಿದ್ದು 1973ರಲ್ಲಿ. ವಿಪರೀತ ರಾಜಕೀಯ ಮತ್ತು ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ವರವರ ರಾವ್‌ರನ್ನು ಆಂಧ್ರ ಪ್ರದೇಶ ಸರಕಾರ 1973ರ ಅಕ್ಟೋಬರ್‌ನಲ್ಲಿ ಮೀಸಾ ಕಾಯ್ದೆ ಅಡಿಯಲ್ಲಿ ಜೈಲಿಗೆ ತಳ್ಳಿತು. ಒಂದೂವರೆ ತಿಂಗಳು ಜೈಲಿನಲ್ಲಿದ್ದ ನಂತರ ಆಂಧ್ರ ಪ್ರದೇಶ ಹೈಕೋರ್ಟ್‌ ಅವರಿಗೆ ಬಿಡುಗಡೆ ಭಾಗ್ಯ ನೀಡಿತು. ಈ ಸಂದರ್ಭದಲ್ಲಿ ಬರವಣಿಗೆ ನೇರವಾಗಿ ಹೋರಾಟಕ್ಕೆ ಪ್ರೇರಣೆಯಾಗಿದ್ದಲ್ಲಿ ಮಾತ್ರ ಬರಹಗಾರರನ್ನು ಬಂಧಿಸುವಂತೆ ಹೈಕೋರ್ಟ್‌ ತಾಕೀತು ಮಾಡಿತು. ಆಗ ಸೃಷ್ಟಿಯಾಗಿದ್ದೇ ಜನಪ್ರಿಯ ‘ಸಿಕಂದರಾಬಾದ್ ಸಂಚಿನ ಪ್ರಕರಣ’.

1974ರಲ್ಲಿ ವಿರಸಂನ ಪ್ರಮುಖರ ಮೇಲೆ ಈ ಪ್ರಕರಣ ದಾಖಲಾಗಿತ್ತು. ಸುಮಾರು 15 ವರ್ಷಗಳ ಕಾಲ ನಡೆದ ಸರಣಿ ವಿಚಾರಣೆ, ಬಂಧನಗಳ ನಂತರ ಈ ಕೇಸು 1989ರಲ್ಲಿ ಬಿದ್ದು ಹೋಯಿತು. ಇದರಲ್ಲಿ 1974ರಲ್ಲಿ ವರವರ ರಾವ್‌ ಬಂಧಿತರಾಗಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆಯಲು ಅವರು ಸಾಕಷ್ಟು ಬೆವರು ಸುರಿಸಬೇಕಾಯಿತು. ಅಂತಿಮವಾಗಿ 1975ರಲ್ಲಿ ಜೈಲಿನಿಂದ ಬಿಡುಗಡೆಯಾದರು. ಇದು ಅವರ ಮೊದಲ ಜೈಲು ಯಾತ್ರೆ.

ಭಾರತದಲ್ಲಿ ತುರ್ತು ಪರಿಸ್ಥಿತಿ ಗೋಷಣೆಯಾಗುತ್ತಲೂ 26 ಜೂನ್‌ 1975ರಲ್ಲಿ ಮತ್ತೆ ಕಂಬಿ ಹಿಂದೆ ತೆರಳಿದರು ವರವರ ರಾವ್. ಈ ಬಾರಿ ಅವರ ಜೈಲುಯಾನ ದೀರ್ಘವಾಗಿತ್ತು. ಹೊಸ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರವೇ ಈ ಬಾರಿ ರಾವ್‌ ಜೈಲಿನಿಂದ ಹೊರಬಂದಿದ್ದರು. ತುರ್ತು ಪರಿಸ್ಥಿತಿ ಕಳೆದ ನಂತರ ಜೈಲಿನಿಂದ ಹೊರ ಬಂದ ರಾವ್‌ ಉತ್ತರ ತೆಲಂಗಾಣ ಭಾಗದಲ್ಲಿ ಜನ ಚಳವಳಿ ಕಟ್ಟುವ ಕೆಲಸಕ್ಕೆ ಕೈಹಾಕಿದರು. ಈ ಸಂದರ್ಭದಲ್ಲಿ ಹಲವು ಬಾರಿ ಅವರು ಮಾನಸಿಕ ಮತ್ತು ದೈಹಿಕ ದೌರ್ಜನಕ್ಕೆ ಗುರಿಯಾದರು. ಭೂ ಮಾಲಿಕರು ಮತ್ತು ಸಮಾಜ ವಿರೋಧಿ ಶಕ್ತಿಗಳಿಂದ ಅವರ ಮೇಲೆ ಹತ್ಯಾ ಯತ್ನಗಳೂ ನಡೆದವು.

ಹೀಗಿರಲು ವರವರ ರಾವ್‌ ಪಾಲಿಗೆ ಒಳ್ಳೆಯ ದಿನಗಳು ಆಗಮಿಸಿದವು. 1983ರಲ್ಲಿ ಆಂಧ್ರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ಎನ್‌ಟಿ ರಾಮರಾವ್‌ ನಕ್ಸಲ್‌ ಚಳುವಳಿಯನ್ನು ಹೊಗಳಲು ಆರಂಭಿಸಿದರು. ಆದರೆ 1985 ಮರು ಆಯ್ಕೆಗೊಂಡವರೇ ಇದೇ ನಕ್ಸಲ್‌ ಚಳವಳಿಯನ್ನು ಮಟ್ಟಹಾಕಲು ಮುಂದಾದರು. ಅದರ ಮೊದಲ ಗುರಿ ವರವರ ರಾವ್‌ ಆಗಿದ್ದರು. 1985ರಲ್ಲೇ ಅವರ ವಿರುದ್ಧ 6 ಪ್ರಕರಣಗಳು ದಾಖಲಾದವು. ಈ ಸಂದರ್ಭದಲ್ಲಿ ದೇಶ ಪರ್ಯಟನೆ ಹೊರಟರು ವರವರ ರಾವ್‌. ಈ ಯಾತ್ರೆ ಮುಗಿಸಿ ಆಂಧ್ರಕ್ಕೆ ವಾಪಾಸಾಗುತ್ತಲೂ ಅಲ್ಲಿನ ಪೊಲೀಸರು ಅವರನ್ನು ಮುಗಿಸಲು ಕಾದು ಕುಳಿತಿದ್ದರು. ಅವರ ಜೀವಕ್ಕೆ ಅಪಾಯ ಹೆಚ್ಚಾಯಿತು. ಆಂಧ್ರ ಪ್ರದೇಶದಲ್ಲಿ ಸ್ವತಂತ್ರವಾಗಿ ಓಡಾಡುವುದು ದುಸ್ತರವಾಯಿತು. ವಾರಂಗಲ್‌ಗೆ ಕಾಲಿಡಲಾಗದ ಪರಿಸ್ಥಿತಿ ಸೃಷ್ಟಿಯಾಯಿತು. ಹಲವು ಸಂದರ್ಭಗಳಲ್ಲಿ ಪೊಲೀಸರು ಅವರ ಮನೆಗಳ ಮೇಲೆ ದಾಳಿಗಳನ್ನು ಮಾಡಿದರು. ಕೊನೆಗೆ ಅನಿವಾರ್ಯವಾಗಿ ತಾವೇ ತಮ್ಮ ಜಾಮೀನು ರದ್ದುಗೊಳಿಸಿ ಭದ್ರತಾ ದೃಷ್ಟಿಯಿಂದ ಜೈಲಿಗೆ ಹೋಗಿ ಕುಳಿತುಕೊಂಡರು ವರವರ ರಾವ್‌.

ಜೈಲಿನಲ್ಲಿದ್ದಾಗಲೇ ಅವರ ವಿರುದ್ಧ ಮತ್ತೆರಡು ಪ್ರಕರಣಗಳು ದಾಖಲಾದವರು. ಅಲ್ಲಿದ್ದಷ್ಟು ದಿನ ಅವರ ಸಂದರ್ಶನಗಳು ಪ್ರಕಟವಾಗದಂತೆ, ಪತ್ರಿಕೆಗಳಿಗೆ ಅವರು ಕಳುಹಿಸುತ್ತಿದ್ದ ಸಂದೇಶಗಳ ಮೇಲೂ ಹದ್ದಿನ ಕಣ್ಣಿಡಲಾಗಿತ್ತು. 1986ರಲ್ಲಿ ಅವರು ಬರೆದ ‘ಭವಿಷ್ಯತು ಚಿತ್ರಪಟಂ’ ಕವನ ಸಂಕಲನ ನಿಷೇಧಗೊಂಡಿತು. ಈ ಎಲ್ಲಾ ದಿನಗಳು ಕಂಡ ನಂತರ ಮುಂದೆ 1988ರಲ್ಲಿ ಸಿಕಂದರಾಬಾದ್‌ ಪ್ರಕರಣದಲ್ಲಿ ಬಿಡುಗಡೆಯಾಗಿ ತಮ್ಮ ನೆಲೆಯಲ್ಲಿ ರಾಜಧಾನಿ ಹೈದರಾಬಾದ್‌ಗೆ ಬದಲಾಯಿಸಿದರು.

ಹೈದರಾಬಾದ್‌ಗೆ ಬಂದವರೇ ಅಕ್ಷರಶಃ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು ವರವರ ರಾವ್‌. ಹೈದರಾಬಾದ್‌ನಲ್ಲಿ ವಿರಸಂನ 20ನೇ ಸಮ್ಮೇಳನದ ನೆಪದಲ್ಲಿ ಬೃಹತ್‌ ಸಾರ್ವಜನಿಕ ಸಭೆ ನಡೆಸಿದರು. ‘ಆಂಧ್ರ ಪ್ರದೇಶ ರೈತ ಕೂಲಿ ಸಂಘಂ’ ಇದೇ ಅವಧಿಯಲ್ಲಿ ವಾರಂಗಲ್‌ನಲ್ಲಿ ವಾರ್ಷಿಕ ಸಮ್ಮೇಳನ ಹಮ್ಮಿಕೊಂಡಿತು. ಮಾಧ್ಯಮ ವರದಿಗಳ ಪ್ರಕಾರ ಅವತ್ತು ಈ ಸಮ್ಮೇಳನದಲ್ಲಿ ಬರೋಬ್ಬರಿ 12 ಲಕ್ಷ ಜನರು ಪಾಲ್ಗೊಂಡಿದ್ದರು. ಇಡೀ ನಗರದ ಜನಸಂಖ್ಯೆಯ ದುಪ್ಪಟ್ಟು ಜನರು ಇದರಲ್ಲಿ ಭಾಗವಹಿಸಿದ್ದರು. ಇದರ ಹಿಂದೆ ಇದ್ದ ಹೆಸರು ಮತ್ತದೇ ವರವರ ರಾವ್‌.

ಇದಾಗಿ ಸ್ವಲ್ಪ ದಿನಕ್ಕೆ ಕೂಲಿ ಸಂಘದ ವಕೀಲ ಎನ್‌ ಪ್ರಭಾಕರ್‌ ರೆಡ್ಡಿ ಹತ್ಯೆಯೊಂದಿಗೆ ಕ್ರಾಂತಿಕಾರಿ ಚಳುವಳಿಯನ್ನು ದಮನಿಸುವ ಯತ್ನ ಚಾಲ್ತಿಗೆ ಬಂತು. ಈ ಸಂದರ್ಭದಲ್ಲಿ ಸುರಕ್ಷಿತ ಜಾಗಕ್ಕೆ ತಮ್ಮ ನೆಲೆ ಬದಲಿಸಿದ ವರವರ ರಾವ್‌ ಹೈದಾರಾಬಾದ್‌ ಯುನಿವರ್ಸಿಟಿಯಲ್ಲಿ ಪೋಸ್ಟ್‌ ಡಾಕ್ಟೋರಲ್‌ ಸಂಶೋಧನೆಗೆ ಸೇರಿಕೊಂಡರು.

ಈ ವಿರಾಮ ಸಣ್ಣ ಅವಧಿಯಾಗಿತ್ತು. ಮುಂದೆ 1994ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಚಂದ್ರಬಾಬು ನಾಯ್ಡು ಸರಕಾರದ ಜಾಗತೀಕರಣ ನೀತಿಯನ್ನು ಟೀಕಿಸಲು ಶುರುವಿಟ್ಟುಕೊಂಡರು ವರವರ ರಾವ್‌ ಮತ್ತು ಅವರ ಇತರ ಸಹಚರರು. ನಾಯ್ಡು ಆಡಳಿತಾವಧಿಯಲ್ಲಿ ಸಿಪಿಐ- ಮಾವೋವಾದಿಯ ಕೇಂದ್ರ ಸಮಿತಿಯ ಮೂವರು ಸದ್ಯರನ್ನು ಬೆಂಗಳೂರಿನಲ್ಲಿ ಬಂಧಿಸಿಸಲಾಯಿತು. ಮುಂದೆ ಇವರ ಹತ್ಯೆಯೂ ಮಾಡಲಾಯಿತು. ಈ ಸಂದರ್ಭದಲ್ಲಿ ಮತ್ತೆ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದರು ವರವರ ರಾವ್‌.

ಮುಂದೆ 2002ರಲ್ಲಿ ಸಿಪಿಐ-ಮಾವೋವಾದಿ ಜತೆಗೆ ಶಾಂತಿ ಮಾತುಕತೆಗೆ ಟಿಡಿಪಿ ಸರಕಾರ ಮುಂದಾಯಿತು. ಆಗ ಸಿಪಿಐಎಂ ಪ್ರತಿನಿಧಿಗಳಾಗಿ ವರವರ ರಾವ್‌ ಮತ್ತು ಗದ್ದರ್‌ ತೆರಳಿದ್ದರು. ಆದರೆ ಎನ್‌ಕೌಂಟರ್‌ಗಳಿಂದ ಈ ಮಾತುಕತೆ ಮುರಿದು ಬಿತ್ತು. ಮತ್ತೆ 2004ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೂ ಮಾತುಕತೆ ಚಾಲ್ತಿಗೆ ಬಂತು. ಅಲ್ಲೂ ಎನ್ಕೌಂಟರ್‌ ನಡೆದು ಈ ಪ್ರಕ್ರಿಯೆಯೇ ನಿಂತು ಹೋಯಿತು. ಪರಿಣಾಮ ಸಿಪಿಐ- ಮಾವೋವಾದಿ (ಈ ಹಿಂದಿನ ಕಮ್ಯೂನಿಷ್ಟ್‌ ಪಾರ್ಟಿ ಆಫ್‌ ಇಂಡಿಯಾ ಮಾರ್ಕ್ಸಿಸ್ಟ್‌-ಲೆನಿನಿಸ್ಟ್‌ ಪೀಪಲ್ಸ್‌ ವಾರ್‌), ವಿರಸಂ ಮತ್ತು ಇತರ ಸಂಘಟನೆಗಳ ಮೇಲೆ ಆಂಧ್ರ ಪ್ರದೇಶ ಸರಕಾರ ನಿಷೇಧ ಹೇರಿತು.

ನಿಷೇಧ ಹೇರಿದ 24 ಗಂಟೆಗಳಲ್ಲಿ ವಿರಸಂನ ವರವರ ರಾವ್‌ ಮತ್ತು ಕಲ್ಯಾಣ್‌ ರಾವ್‌ 19 ಆಗಸ್ಟ್‌ 2005ರಂದು ಬಂಧಿತರಾದರು. ರಾವ್‌ರನ್ನು ಚಂಚಲಗುಡ ಜೈಲಿಗೆ ತಳ್ಳಿದ ಆಂಧ್ರ ಸರಕಾರ ಅವರ ವಿರುದ್ಧ 7 ಕೇಸುಗಳನ್ನು ದಾಖಲಿಸಿತು. ಸುಮಾರು 8 ತಿಂಗಳು ಈ ಸಂದರ್ಭದಲ್ಲಿ ಅವರು ಜೈಲಿನಲ್ಲೇ ಕಳೆಯಬೇಕಾಯಿತು. ನಂತರದ ದಿನಗಳಲ್ಲಿ ಅವರು ತೆಲಂಗಾಣ ಪ್ರತ್ಯೇಕ ರಾಜ್ಯದ ಹೋರಾಟದಲ್ಲಿ ಗುರುತಿಸಿಕೊಂಡರು. ಈ ಸಂದರ್ಭದಲ್ಲಿ ‘ರಿವಲ್ಯೂಷನರಿ ಡೆಮಾಕ್ರಾಟಿಕ್‌ ಪಕ್ಷ’ (ಆರ್‌ಡಿಪಿ)ದ ಅಧ್ಯಕ್ಷರಾದರು ರಾವ್‌. ಮುಂದೆ ಈ ಪಕ್ಷವೂ ನಿಷೇಧಕ್ಕೆ ಗುರಿಯಾಯಿತು.

ಮಂಗಳವಾರ ಬಂಧಿತರಾದ 78 ವರ್ಷದ ಪ್ರಾಯದ ವರವರ ರಾವ್‌
ಮಂಗಳವಾರ ಬಂಧಿತರಾದ 78 ವರ್ಷದ ಪ್ರಾಯದ ವರವರ ರಾವ್‌
ಚಿತ್ರಕೃಪೆ: ಡೆಕ್ಕನ್‌ ಕ್ರಾನಿಕಲ್‌

ಯಾವ ತೆಲಂಗಾಣ ರಾಜ್ಯಕ್ಕೆ ವರವರ ರಾವ್‌ ಹೋರಾಡಿದ್ದರೂ ಅದೇ ರಾಜ್ಯ ರಚನೆಯಾಗಿ ಹೊಸ ಟಿಆರ್‌ಎಸ್‌ ಸರಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂತು. ಆದರೆ ರಾವ್‌ ಹಣೆಬರಹದಲ್ಲೇನೂ ಇದು ಬದಲಾವಣೆ ತರಲಿಲ್ಲ. ತೆಲಂಗಾಣ ರಾಜ್ಯ ರಚನೆಯಾದ ಬಳಿಕವೂ ನಾಲ್ಕು ಬಾರಿ ಬಂಧನಕ್ಕೆ ಗುರಿಯಾದರು ವರವರ ರಾವ್‌.

ಕರ್ನಾಟಕ ನಂಟು:

ಇದೇ ವರವರ ರಾವ್‌ ಕರ್ನಾಟಕದ ಜತೆಗೆ ನಂಟನ್ನು ಹೊಂದಿದ್ದರು. “ಹಿಂದೆಲ್ಲಾ ಇಲ್ಲಿ ಸಭೆಗಳನ್ನು ನಡೆಯುವಾಗ ಅವರು ಬರುತ್ತಿದ್ದರು. ಆದರೆ 2005ರಲ್ಲಿ ಸಾಕೇತ್‌ ರಾಜನ್‌ ಹತ್ಯೆಯಾದ ನಂತರ ಕರ್ನಾಟಕದಲ್ಲಿ ಅವರ ಚಲನವಲನಗಳಿಗೆ ನಿರ್ಬಂಧ ಹೇರಲಾಯಿತು. ತದ ನಂತರ ಅವರು ಇಲ್ಲಿಗೆ ಬರುವುದು ನಿಂತು ಹೋಯಿತು. ಜತೆಗೆ ಅಲ್ಲಿನ ನಕ್ಸಲ್‌ ಚಳವಳಿಗೂ ಇಲ್ಲಿನ ಚಳವಳಿಗೂ ವ್ಯತ್ಯಾಸಗಳಿತ್ತು. ಇಲ್ಲಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಗಳು ನಡೆಯುತ್ತಿದ್ದವು. ಹಾಗಾಗಿ ಆ ಸಂಬಂಧದ ಮೇಲೆ ಯಾವತ್ತೂ ಬರುತ್ತಿರಲಿಲ್ಲ. ಆದರೆ ವೈಯಕ್ತಿಕ ಸ್ನೇಹದ ಮೇಲೆ ಬರುತ್ತಿದ್ದರು. ತಿಂಗಳ ಕೆಳಗೆ ನನ್ನ ಪತ್ನಿ ತೀರಿಕೊಂಡಾಗ ಶ್ರದ್ಧಾಂಜಲಿ ಸಲ್ಲಿಸಲು ಬಂದು ಹೋಗಿದ್ದರು,” ಎಂದು ತಮ್ಮ ನೆನಪುಗಳನ್ನು ತೆರೆದಿಟ್ಟರು ನಗರಿ ಬಾಬಾಯ್ಯ.

ಹೀಗೆ ಕರ್ನಾಟಕವೂ ಸೇರಿದಂತೆ ಹಲವು ಕಡೆಗಳಲ್ಲಿ ಅವರ ಚಲವಲನಗಳಿಗೆ ಇವತ್ತಿಗೂ ನಿರ್ಬಂಧಗಳಿವೆ. ಜತೆಗೆ ಅವರು ಅಧ್ಯಕ್ಷರಾಗಿರುವ ಆರ್‌ಡಿಎಫ್‌ ಪಕ್ಷದ ಮೇಲಿನ ನಿಷೇಧವೂ ಮುಂದುವರಿದಿದೆ. ಇದೀಗ ಮತ್ತೆ ಅವರು ಬಂಧಿತರಾಗಿದ್ದಾರೆ. ರಾವ್‌ಗೆ ಬಂಧನ ಹೊಸತಲ್ಲವಾದರೂ ಈ ಬಾರಿ ಬಂಧನಕ್ಕೆ ಕಾರಣವಾದ ಆರೋಪ ಮತ್ತು ಜೈಲಿಗಟ್ಟಿದ ಸಮಯ-ಸಂದರ್ಭಗಳು ಚರ್ಚೆಗೆ ಗ್ರಾಸವಾಗಿವೆ. ಲೋಕಸಭೆ ಚುನಾವಣೆಗೆ ಅರ್ಧ ವರ್ಷ ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ರೂಪಿಸಿದ್ದಾರೆ ಎಂಬ ಆರೋಪದ ಮೇಲೆ ವರವರ ರಾವ್‌ ಬಂಧನಕ್ಕೆ ಗುರಿಯಾಗಿರುವುದು ಅನುಮಾನಗಳನ್ನು ಮತ್ತು ಏಕಕಾಲಕ್ಕೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Also read: Bullet to Ballot: ಗದ್ದರ್ ಎಂಬ ಕ್ರಾಂತಿಕವಿಯೂ; 'ಆಧ್ಯಾತ್ಮಿಕ ಪ್ರಜಾಪ್ರಭುತ್ವ'ದ ತುಡಿತವೂ...