samachara
www.samachara.com
ಡಿಮಾನಟೈಸೇಶನ್ ಎಂಬ ‘ಪ್ಲಾಪ್ ಶೋ’:  ಆರ್‌ಬಿಐ ನೀಡಿದ ಹೊಸ ಸಾಕ್ಷಿ
COVER STORY

ಡಿಮಾನಟೈಸೇಶನ್ ಎಂಬ ‘ಪ್ಲಾಪ್ ಶೋ’: ಆರ್‌ಬಿಐ ನೀಡಿದ ಹೊಸ ಸಾಕ್ಷಿ

ಪ್ರಧಾನಿ ಮೋದಿ 2016ರ ನವೆಂಬರ್‌ 7ರ ರಾತ್ರಿ ನೋಟ್‌ ಬ್ಯಾನ್‌ ಮಾಡಿದಾಗ ದೇಶದಲ್ಲಿ 15.41 ಲಕ್ಷ ಕೋಟಿ ಮೌಲ್ಯದ 500 ಮತ್ತು 1000ದ ನೋಟುಗಳಿದ್ದು. ಅದರಲ್ಲಿ 15.31 ಲಕ್ಷ ಕೋಟಿ ಮೌಲ್ಯದ ನೋಟುಗಳು ಮರಳಿ ಆರ್‌ಬಿಐ ಕೈಸೇರಿವೆ. 

ಪ್ರಧಾನಿ ನರೇಂದ್ರ ಮೋದಿ 2016ರ ನವೆಂಬರ್‌ 8ರ ರಾತ್ರೋರಾತ್ರಿ ಘೋಷಿಸಿದ ನೋಟ್‌ಬ್ಯಾನ್‌ ನಂತರ ಆರ್‌ಬಿಐಗೆ ಮರಳಿದ ಹಳೆಯ ನೋಟುಗಳಷ್ಟು ಎಂಬ ಪ್ರಶ್ನೆಗೆ ಈವರೆಗೆ ಉತ್ತರ ದೊರೆತಿರಲಿಲ್ಲ. ಅರ್‌ಬಿಐ ಕೂಡ ಇನ್ನೂ ಲೆಕ್ಕ ಹಾಕುತ್ತಿರುವುದಾಗಿಯೇ ಹೇಳುತ್ತಿತ್ತು. ಈಗ ಆರ್‌ಬಿಐ ನೋಟು ರದ್ಧತಿಯಿಂದ ಮರಳಿದ ಹಳೆಯ ನೋಟುಗಳ ಅಂಕಿ ಅಂಶಗಳನ್ನು ನೀಡಿದೆ.

ಆರ್‌ಬಿಐ ಹೇಳಿರುವ ಪ್ರಕಾರ, 2016ರ ನವೆಂಬರ್ 8ಕ್ಕೂ ಮುಂಚೆ ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಶೇ.99.3 ನೋಟುಗಳು ಮರಳಿ ಆರ್‌ಬಿಐ ಕೈಸೇರಿವೆ.

2016ರ ನವೆಂಬರ್‌ ತಿಂಗಳ ಅವಧಿಯಲ್ಲಿ ದೇಶದಲ್ಲಿ ಶೇಖರಣೆಗೊಂಡಿದೆ ಎನ್ನಲಾದ ಕಪ್ಪು ಹಣದ ಮೊತ್ತ 3 ಲಕ್ಷ ಕೋಟಿ. ಈ ಕಪ್ಪುಹಣವನ್ನು ವೈಟ್‌ ಆಗಿಸಲು ಪ್ರಧಾನಿ ಮೋದಿ 1,000 ಮತ್ತು 500 ರೂಪಾಯಿ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಿದರು. ಆದರೆ ಈಗ ಆರ್‌ಬಿಐ ಹೇಳಿರುವಂತೆ 10,000 ಕೋಟಿ ಹೊರತುಪಡಿಸಿ ಉಳಿದೆಲ್ಲಾ ಹಣ ಮರಳಿ ಬಂದಿದೆ.

ನೋಟ್‌ ನಿಷೇಧ ಆದ ಸಂಧರ್ಭದಲ್ಲಿ, ಕಪ್ಪು ಹಣದ ವಿರುದ್ಧ ಹೋರಾಟ, ಭ್ರಷ್ಟಾಚಾರದ ವಿರುದ್ಧ ಸಮರ, ನಕಲಿ ನೋಟುಗಳ ಚಲಾವಣೆಗೆ ಕಡಿವಾಣ, ಈ ಮೂಲಕ ಭಯೋತ್ಪಾದಕರ ಆರ್ಥಿಕ ಮೂಲಕ್ಕೆ ಹೊಡೆತ ಹೀಗೆ ಸಾಲು ಸಾಲು ಆಶಯಗಳನ್ನು ಬಿತ್ತುವ ಪ್ರಯತ್ನ ನಡಿದಿತ್ತು. ನಂತರ ದಿನಗಳಲ್ಲಿ ನಿಧಾನವಾಗಿ ನೋಟುಗಳ ಅಮಾನ್ಯೀಕರಣ ನಗದು ರಹಿತ ಆರ್ಥಿಕ ವ್ಯವಸ್ಥೆಯ ನಿರ್ಮಾಣದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಯೋಜನೆ ಎಂದು ತೇಲಿಸುವ ಪ್ರಯತ್ನವೂ ಕೇಂದ್ರ ಸರಕಾರದ ಕಡೆಯಿಂದ ನಡೆಯಿತು.

ರಾತ್ರೋ ರಾತ್ರಿ ನೋಟ್ ಬ್ಯಾನ್ ಮಾಡಿದ ಪರಿಣಾಮ ಸಾಮಾನ್ಯ ಜನ ತಮ್ಮ ಬಳಿ ಇದ್ದ 500 ಹಾಗೂ 1000 ನೋಟುಗಳ ಬದಲಾವಣೆಗೆ ಬ್ಯಾಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತರು. ಆದರೆ, ಬ್ಯಾಂಕ್‌ಗಳು ನೋಟು ಬದಲಾವಣೆಯ ದಂಧೆಗೆ ಇಳಿದವು. ಜನರಿಗೆ ಸಕಾಲದಲ್ಲಿ ಬದಲಿ ನಗದು ಸಿಗದಂತಾಯಿತು. ಸುಮಾರು 140 ಜನ ಸಾವನ್ನಪ್ಪಿದರು. ಬೀದಿ ವ್ಯಾಪಾರಿಗಳು, ಸಣ್ಣ ಉದ್ಯಮಗಳು ನೆಲಕಚ್ಚಿದವು. ಆರ್ಥಿಕ ಹಾಹಾಕಾರವೊಂದು ದೇಶವನ್ನು ಆವರಿಸಿತು.

ಅದೇ ವೇಳೆ ಸರಕಾರದ ಅಮಾನ್ಯೀಕರಣದ ಯೋಜನೆಯನ್ನು ಬಳಸಿಕೊಂಡಿದ್ದು ‘ಪೇಟಿಎಂ’ನಂತಹ ಕಾರ್ಪೊರೇಟ್ ಕಂಪನಿಗಳು ನಗದು ರಹಿತ ಆರ್ಥಿಕ ವ್ಯವಸ್ಥೆಗೆ ಉತ್ತೇಜನ ನೀಡುವ ನೆಪದಲ್ಲಿ ಕೋಟ್ಯಾಂತರ ರೂಪಾಯಿಗಳ ವಹಿವಾಟು ಕಂಡವು.

ಡಿಮಾನಟೈಸೇಶನ್ ಎಂಬ ‘ಪ್ಲಾಪ್ ಶೋ’:  ಆರ್‌ಬಿಐ ನೀಡಿದ ಹೊಸ ಸಾಕ್ಷಿ

ಇವೆಲ್ಲವೂ ನಡೆದು ಹೆಚ್ಚು ಕಡಿಮೆ 21 ತಿಂಗಳ ನಂತರ ನೋಟುಗಳ ಅಮಾನ್ಯೀಕರಣದ ಸಂಬಂಧಪಟ್ಟ ಹಾಗೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಅಧಿಕೃತ ಮಾಹಿತಿ ಹೊರಹಾಕಿದೆ. ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿದ್ದ ಶೇ.99.3ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಹಿಂತಿರುಗಿದೆ ಎಂದು ಹೇಳಿದೆ. ಅಂದರೆ, ಕಪ್ಪು ಹಣ ಎಂದು ಅಂದಾಜಿಸಿದ್ದ 3 ಲಕ್ಷ ಕೋಟಿ ಕೂಡ ಬ್ಯಾಂಕ್‌ಗಳಿಗೆ ವಾಪಾಸ್ ಬಂದು, ಹೊಸ ನೋಟುಗಳ ರೂಪದಲ್ಲಿ ಮತ್ತೆ ಕುಳಗಳ ಕೈಗೆ ತಲುಪಿದೆ. ಅಥವಾ ದೇಶದಲ್ಲಿ ಅಷ್ಟು ಪ್ರಮಾಣದ ‘ಕಪ್ಪು ಹಣ’ವೇ ಇರಲಿಲ್ಲ ಎಂಬುದು ಖಾತ್ರಿಯಾಗಿದೆ.

ಹಾಗಾದರೆ, ನೋಟ್ ಬ್ಯಾನ್‌ ಮೂಲಕ 'ಕಪ್ಪು ಹಣ'ದ ವಿರುದ್ಧ ಹೋರಾಟ ಎಂಬ ಪ್ರಧಾನಿ ಮೋದಿ ಘೋಷಣೆ ಬರೀ ಘೋಷಣೆ ಮಾತ್ರವೇ ಆಗಿ ಉಳಿಯಿತಾ? ಹೌದು ಎನ್ನುತ್ತಿದೆ ಆರ್‌ಬಿಐ ನೀಡಿದ ಹೊಸ ಮಾಹಿತಿ.

ದೇಶದಲ್ಲಿ ನವೆಂಬರ್‌ ತಿಂಗಳಿಗೂ ಮುಂಚೆ ಚಲಾವಣೆಯಲ್ಲಿದ್ದ ಹಣದಲ್ಲಿ 500 ಹಾಗೂ 1000 ಮುಖಬೆಲೆಯ ನೋಟುಗಳ ಒಟ್ಟು ಮೊತ್ತ 15.41 ಲಕ್ಷ ಕೋಟಿ ರೂಪಾಯಿಗಳು. ಇದರಲ್ಲಿ 3 ಲಕ್ಷ ಕೋಟಿ 'ಕಪ್ಪು ಹಣ' ಎಂಬ ಅಂದಾಜಿತ್ತು. ನೋಟ್ ಬ್ಯಾನ್‌ ನಂತರ ಈ ಕಪ್ಪು ಹಣ ಮತ್ತೆ ವ್ಯವಸ್ಥೆಗೆ ಹಿಂತಿರುಗಿ ಬಾರದು ಎಂಬ ನಿರೀಕ್ಷೆ ಇತ್ತು.

ಇಷ್ಟು ಪ್ರಮಾಣದ ಹಣವನ್ನು ಆರ್‌ಬಿಐ ಮರು ಮುದ್ರಿಸಿ ಚಲಾವಣೆಗೆ ಬಿಡಲಿದೆ, ಇದರಿಂದ ಆರ್ಥಿಕ ವ್ಯವಸ್ಥೆ ಭಾರಿ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತದೆ ಎಂದೆಲ್ಲಾ ಹೇಳಲಾಗಿತ್ತು.

ಆದರೆ, ಇದೀಗ ಶೇ.99.3ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ಹಿಂತಿರುಗಿ ಬಂದಿವೆ. ಅವುಗಳ ಒಟ್ಟು ಮೌಲ್ಯ, 15.30 ಲಕ್ಷ ಕೋಟಿ. ನೋಟುಗಳ ಅಮಾನ್ಯೀಕರಣದಿಂದ ಆರ್ಥಿಕ ವ್ಯವಸ್ಥೆಗೆ ಮರಳಿ ಬಾರದ ಸೋ ಕಾಲ್ಡ್ 'ಕಪ್ಪು ಹಣ'ದ ಪ್ರಮಾಣ ಅಂದಾಜು ಕೇವಲ 10 ಸಾವಿರ ಕೋಟಿ. ಇದನ್ನು ದೇಶವಾಸಿಗಳು ನಂಬಬೇಕಿದೆ. ಇದೇ ವೇಳೆ, ಹೊಸ ನೋಟುಗಳ ಮುದ್ರಣಕ್ಕೆ ಖರ್ಚಾಗಿದ್ದು 7, 965 ಕೋಟಿ ರೂಪಾಯಿಗಳು ಎಂಬುದನ್ನೂ ಗಮನಿಸಬೇಕಿದೆ.

ಇನ್ನು, ಸರಕಾರದ ಭಯೋತ್ಪಾದನೆ ವಿರುದ್ಧದ ಸಮರದ ಘೋಷಣೆ ಕತೆ. ನೋಟುಗಳ ಅಮಾನ್ಯೀಕರಣದ ಮೂಲಕ ದೇಶದ ಗಡಿಯಲ್ಲಿ ಒಳಗೂ, ಹೊರಗೂ ಚಲಾವಣೆಯಲ್ಲಿದ್ದ ಸುಮಾರು 400 ಕೋಟಿ ನಕಲಿ ನೋಟುಗಳ ವಹಿವಾಟಿಗೆ ಕಡಿವಾಣ ಬೀಳುತ್ತದೆ ಎಂದು ಘೋಷಣೆ ಮಾಡಲಾಗಿತ್ತು.

ಆದರೆ, 2000 ಮುಖಬೆಲೆಯ ಹೊಸ ನೋಟು ಜನರ ಕೈ ಸೇರುವ ಮುಂಚೆಯೇ, ಅದರ ತದ್ರೂಪಗಳು ಚಲಾವಣೆಗೆ ಬಂದಾಗಿತ್ತು ಎಂಬುದು ವ್ಯಂಗ್ಯ. ಕೊನೆಗೆ, ಕಳೆದ ಜುಲೈ ತಿಂಗಳಿನಲ್ಲಿ ಸಂಸತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆರ್ಥಿಕ ಸಚಿವ ಅರುಣ್‌ ಜೇಟ್ಲಿ, ನೋಟುಗಳು ಅಮಾನ್ಯೀಕರಣದ ನಂತರವೂ ದೇಶದ 11 ರಾಜ್ಯಗಳಲ್ಲಿ ವಶಕ್ಕೆ ಪಡೆದ ನಕಲಿ ನೋಟುಗಳ ಪ್ರಮಾಣ 11. 23 ಕೋಟಿ ಎಂದು ತಿಳಿಸಿದ್ದರು. ಅಂದರೆ, ನೋಟುಗಳ ಅಮಾನ್ಯೀಕರಣಕ್ಕೂ ನಕಲಿ ನೋಟುಗಳ ತಡೆಗೂ ಸಂಬಂಧವೇ ಇರಲಿಲ್ಲ ಎಂದಾಯಿತು.

ಇವತ್ತಿಗೂ ಕೇಂದ್ರ ಸರಕಾರ ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆಯನ್ನು ಸಮರ್ಥನೆ ಮಾಡಿಕೊಳ್ಳಲು ಬಳಸುವ ವಿಚಾರ, ದೇಶದ ತೆರಿಗೆ ವ್ಯವಸ್ಥೆಗೆ ಹೊಸ ತೆರಿಗೆದಾರರ ಸೇರ್ಪಡೆ ಸಾಧ್ಯವಾಗಿಸಿದೆ ಎಂಬುದು. ಶೇ. 25ರಷ್ಟು ಜನ ಹೊಸತಾಗಿ ತೆರಿಗೆ ಪಾವತಿ ಮಾಡತ್ತಿದ್ದಾರೆ. ಇದು ಅಮಾನ್ಯೀಕರಣದ ನಂತರ ನಡೆದ ಮಹತ್ವದ ಬೆಳೆವಣಿಗೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ.

ಸ್ವಲ್ಪ ಆಳಕ್ಕಿಳಿದು ನೋಡಿದರೆ, ಇಲ್ಲಿಯೂ ಕೂಡ ಒಂದಷ್ಟು ಲೂಪ್‌ಹೋಲ್‌ಗಳು ಕಾಣಿಸುತ್ತಿವೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಹೊಸದಾಗಿ ತೆರಿಗೆ ವ್ಯವಸ್ಥೆಗೆ ಸೇರ್ಪಡೆಗೊಂಡವರು ಸಂಖ್ಯೆ 91 ಲಕ್ಷ ಎಂದು ಹೇಳಿದರೆ, ಪ್ರಧಾನಿ ಮೋದಿ ಇದೇ ಸಂಖ್ಯೆ 33 ಲಕ್ಷ ಎಂದರು. ಸಮೀಕ್ಷೆಗಳ ಪ್ರಕಾರ 5.4 ಲಕ್ಷ ಜನ ಹೊಸ ತೆರಿಗೆದಾರರ ಸೇರ್ಪಡೆಯಾಗಿದೆ ಎಂದು ಹೇಳಲಾಗುತ್ತಿದೆ.

ಹೀಗೆ, ಒಂದಕ್ಕೊಂದು ಸಂಬಂಧ ಇಲ್ಲದ ಅಂಕಿ ಅಂಶಗಳ ನಡುವೆ ಹೊಸತಾಗಿ ಒಂದಷ್ಟು ಜನ ತೆರಿಗೆ ಪಾವತಿ ಮಾಡಲು ಮುಂದಾಗಿರುವುದು ನಿಜ. ಆದರೆ ಅದಕ್ಕೆ ಕಾರಣ ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆನಾ? ಇಲ್ಲ ಎನ್ನುತ್ತಿವೆ ಲಭ್ಯ ಇರುವ ಮಾಹಿತಿ.

ಸರಕಾರದ ಹೊಸ ತೆರಿಗೆ ನೀತಿ, ತೆರಿಗೆದಾರರ ಸಂಬಳದ ಮಿತಿಯನ್ನು ಕಡಿಮೆ ಮಾಡಿರುವುದು, ಪಾನ್‌ ಕಾರ್ಡ್‌ ಹಾಗೂ ಆಧಾರ್‌ಗಳ ಜೋಡಣೆ ಮತ್ತಿತರ ಅಂಶಗಳು ಈ ಹೊಸ ತೆರಿಗೆದಾರರ ಸೃಷ್ಟಿಗೆ ಕಾರಣವೇ ಹೊರತು, ಅಮಾನ್ಯೀಕರಣ ಪ್ರಕ್ರಿಯೆ ಅಲ್ಲ ಎಂದು ವರದಿಗಳು ಹೇಳುತ್ತಿವೆ. ಕೇವಲ ಒಂದಷ್ಟು ಲಕ್ಷ ಹೊಸ ತೆರಿಗೆದಾರರ ಸೇರ್ಪಡೆಗಾಗಿ ಅಮಾನ್ಯೀಕರಣದಂತಹ ದೊಡ್ಡ ಸರ್ಕಸ್ ನಡೆಸುವ ಅಗತ್ಯ ಏನಿತ್ತು? ದೇಶವಾಸಿಗಳ ಪ್ರಶ್ನೆಗೆ ಪ್ರಧಾನಿ ಉತ್ತರ ನೀಡಬೇಕಿದೆ.

ಕೊನೆಯದಾಗಿ, ಕ್ಯಾಶ್ ಲೆಸ್ ಇಂಡಿಯಾದ ಘೋಷಣೆ. ನೋಟುಗಳ ಅಮಾನ್ಯೀಕರಣದ ನಂತರ ದೇಶದ ಆರ್ಥಿಕ ವ್ಯವಸ್ಥೆಯನ್ನು ನಗದು ರಹಿತ ವಹಿವಾಟಿಗೆ ತರುವ ಪ್ರಯತ್ನ ಎಂದು ಹೇಳಲಾಗಿತ್ತು. ಆರಂಭದಲ್ಲಿ ಕ್ಯಾಶ್ ಲೆಸ್ ವರ್ಗಾವಣೆಗಳು ದೊಡ್ಡ ಪ್ರಮಾಣದಲ್ಲಿ ನಡೆಯಿತು ಕೂಡ. ಆದರೆ ಕಳೆದ ಮೇ ತಿಂಗಳ ವೇಳೆಗೆ ಮತ್ತೆ ಭಾರತೀಯರು ತಮ್ಮ ಹಳೆಯ ನಗದು ವರ್ಗಾವಣೆಯ ಸಂಪ್ರದಾಯಕ್ಕೆ ಮರಳಿ ಬಂದಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು. ಹೀಗಿರುವಾಗ, ನಗದು ರಹಿತ ವ್ಯವಸ್ಥೆ ತರಲು ನೋಟ್ ಬ್ಯಾನ್ ಮಾಡಲಾಗಿದೆ ಎಂಬ ಘೋಷಣೆ, ಬರೀ ಘೋಷಣೆ ಅಷ್ಟೆ ಅಲ್ವಾ?

ಯಾವ ಕೋನದಿಂದ ನೋಡಿದರೂ, ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ ದೇಶದ ಆರ್ಥಿಕ ವ್ಯವಸ್ಥೆಯ ಬಹುದೊಡ್ಡ ಪ್ರಯೋಗ ನೆಲಕ್ಕಚ್ಚಿದೆ. ಸರಕಾರ ಅಂದುಕೊಂಡ ಯಾವ ಗುರಿಯನ್ನೂ ಮುಟ್ಟಲು ಸಾಧ್ಯವಾಗಿಲ್ಲ. ಹೀಗಿರುವಾಗ, ನಿಜಕ್ಕೂ ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆ ನಡೆಸಿದ್ದು ಯಾಕೆ? ಹೀಗೊಂದು ಪ್ರಶ್ನೆ ಎದ್ದು ನಿಲ್ಲುತ್ತದೆ.

'ನೋಟುಗಳ ಅಮಾನ್ಯೀಕರಣ ದೇಶ ಕಂಡ ಬಹುದೊಡ್ಡ ಹಗರಣ' ಎಂಬ ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳು ಇರುವ ಸಾಧ್ಯತೆ ಇದೆ. ಜತೆಗೆ, ಅದಕ್ಕೆ ಸಾಕ್ಷಿಗಳನ್ನು ಜನರ ಮುಂದಿಡುವ ಹೊಣೆಗಾರಿಕೆಯೂ ಅವುಗಳ ಮೇಲಿದೆ.