samachara
www.samachara.com
ವಿವಿಐಪಿ ಅಲರ್ಟ್‌: ಈವರೆಗೆ ನಡೆದ ನರೇಂದ್ರ ಮೋದಿ ‘ನಕಲಿ ಹತ್ಯೆ’ ಯತ್ನಗಳೆಷ್ಟು?
COVER STORY

ವಿವಿಐಪಿ ಅಲರ್ಟ್‌: ಈವರೆಗೆ ನಡೆದ ನರೇಂದ್ರ ಮೋದಿ ‘ನಕಲಿ ಹತ್ಯೆ’ ಯತ್ನಗಳೆಷ್ಟು?

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹತ್ಯೆ ಯತ್ನದ ಯಾವುದೇ ಘಟನೆಗಳು ನಡೆದಿಲ್ಲ. ಜೀವ ಬೆದರಿಕೆ ಸುದ್ದಿಗಳು ಬಿಟ್ಟರೆ ಹತ್ಯೆ ಯತ್ನದ ಯಾವುದೇ ಘಟನೆಗಳು ವರದಿಯಾಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಮಂಗಳವಾರ ದಾಳಿ ನಡೆಸಿರುವ ಪುಣೆ ಪೊಲೀಸರು ಆರು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಆದರೆ, ದೇಶದ ಹಲವು ಕಡೆಗಳಲ್ಲಿ ಮೋದಿ ಹತ್ಯೆ ಬೆದರಿಕೆಗಳು ಈ ಹಿಂದೆ ಕೂಡಾ ಕೇಳಿ ಬಂದಿದ್ದವು. ಮೋದಿ ಹತ್ಯೆ ಹತ್ನ ಹಾಗೂ ಜೀವ ಬೆದರಿಕೆ ಒಡ್ಡಿದ್ದ ಕೆಲವು ಪ್ರಮುಖ ಪ್ರಕರಣಗಳು ಇಲ್ಲಿವೆ.

ಅಕ್ಟೋಬರ್‌ 27, 2013: ಪಟ್ನಾದ ಗಾಂಧಿ ಮೈದಾನದಲ್ಲಿ ಮೋದಿ ಭಾಗವಹಿಸಿದ್ದ ಸಮಾವೇಶದಲ್ಲಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಆರು ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಮೋದಿ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ಸಿಮಿ ಸಂಘಟನೆ ಈ ಸ್ಫೋಟ ನಡೆಸಿತ್ತು. ಪ್ರಕರಣ ಸಂಬಂಧ 10 ಮಂದಿಯನ್ನು ಬಂಧಿಸಲಾಗಿತ್ತು.

ಮೇ 2015: ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯರ ಸ್ವಗ್ರಾಮದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರನ್ನು ಕೊಲ್ಲುವುದಾಗಿ ವಾಟ್ಸ್‌ಆಪ್‌ ಸಂದೇಶದ ಮೂಲಕ ಬೆದರಿಕೆ ಒಡ್ಡಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಒಂದು ವರ್ಷದ ಸಂಭ್ರಮದ ಈ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ಹಲವು ದಿನಗಳ ಬಳಿಕ ಬೆದರಿಕೆ ಸಂದೇಶ ಕಳಿಸಿದ್ದ ಆರೋಪದ ಮೇಲೆ ಇಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು.

ಫೆಬ್ರುವರಿ 2017: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಜೀವಕ್ಕೆ ಅಪಾಯವಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದರು. ಉತ್ತರ ಪ್ರದೇಶದ ಮಊ ಜಿಲ್ಲೆಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿಗೆ ಜೀವ ಬೆದರಿಕೆ ಇದೆ ಎಂದು ಹೆಚ್ಚುವರಿ ಎಸ್‌ಪಿ ಆರ್‌.ಕೆ.ಸಿಂಗ್‌ ಹೇಳಿದ್ದರು. ಹರೇನ್‌ ಪಾಂಡ್ಯ ಕೊಲೆ ಪ್ರಕರಣದ ಆರೋಪಿ ಹಾಗೂ ಆತನ ಸಹಚರರು ಪ್ರಚಾರದ ವೇಳೆ ಮೋದಿ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಸಿಂಗ್‌ ತಿಳಿಸಿದ್ದರು. ಬಿಗಿ ಭದ್ರತೆಯಲ್ಲಿ ಮೋದಿ ಪ್ರಚಾರ ನಡೆಸಿದ್ದರು.

ಜೂನ್‌ 2017: ಮೋದಿ ಕೇರಳದ ಕೊಚ್ಚಿ ಮೆಟ್ರೊ ಉದ್ಘಾಟನೆ ಮಾಡಿದ ನಂತರ ಅವರಿಗೆ ಜೀವ ಬೆದರಿಕೆ ಇತ್ತು ಎಂದು ಕೇರಳ ಡಿಜಿಪಿ ಟಿ.ಪಿ. ಸೆನ್‌ಕುಮಾರ್‌ ಹೇಳಿದ್ದರು. ಕಾರ್ಯಕ್ರಮ ನಡೆದ ಕೆಲ ದಿನಗಳ ನಂತರ ಈ ವಿಷಯ ಬಹಿರಂಗ ಪಡಿಸಿದ್ದ ಸೆನ್‌ಕುಮಾರ್‌ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದರು.

ಜೂನ್‌ 2018: ರಾಜೀವ್‌ ಗಾಂಧಿ ಹತ್ಯೆಯ ಮಾದರಿಯಲ್ಲೇ ಮೋದಿ ಅವರನ್ನು ಕೊಲ್ಲಲು ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎಂದಿದ್ದ ಪುಣೆ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದರು. ಇದೇ ಪ್ರಕರಣ ಸಂಬಂಧ ಈಗ ಎಡಪಂಥದಲ್ಲಿ ಗುರುತಿಸಿಕೊಂಡಿರುವ ಸಾಮಾಜಿಕ ಕಾರ್ಯಕರ್ತರ ಮೇಲೆ ಸರಕಾರ ವ್ಯವಸ್ಥಿತ ದಾಳಿ ನಡೆಸಲು ಮುಂದಾಗಿದೆ.

ಇದಿಷ್ಟೇ ಅಲ್ಲದೆ, ಈ ವರ್ಷದ ಮೇ ತಿಂಗಳಲ್ಲಿ ಉಡುಪಿಗೆ ಬಂದಿದ್ದ ಮೋದಿ ಕೃಷ್ಣ ಮಠ ಭೇಟಿ ನೀಡಿರಲಿಲ್ಲ. ಮೋದಿ ಅವರಿಗೆ ಜೀವ ಬೆದರಿಕೆ ಇದ್ದ ಕಾರಣಕ್ಕೆ ಕೃಷ್ಣ ಮಠಕ್ಕೆ ಭೇಟಿ ನೀಡಲಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದರು. ಆದರೆ, ಮಠದಲ್ಲಿ ಯಾವುದೇ ಭದ್ರತಾ ಲೋಪವಿರಲಿಲ್ಲ ಎಂದು ಪರ್ಯಾಯ ಪಲಿಮಾರು ಮಠ ಸ್ಪಷ್ಟಪಡಿಸಿತ್ತು.

ಮೋದಿ ಅವರಿಗೆ ತೀವ್ರ ಜೀವ ಬೆದರಿಕೆ ಇರುವ ಕಾರಣಕ್ಕೆ ಉನ್ನತ ಅಧಿಕಾರಿಗಳು, ಸಚಿವರು ಹಾಗೂ ರಾಜಕೀಯ ಮುಖಂಡರು ಭದ್ರತಾ ಅನುಮತಿ ಇಲ್ಲದೆ ಅವರ ಸನಿಹಕ್ಕೆ ಬರಬಾರದು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಅಲ್ಲದೆ ಜೀವ ಬೆದರಿಕೆಯ ಕಾರಣದಿಂದ ರೋಡ್‌ ಶೋಗಳನ್ನು ನಡೆಸದಂತೆ ಪ್ರಧಾನಮಂತ್ರಿಗಳಿಗೆ ಗುಪ್ತಚರ ಇಲಾಖೆ ಸಲಹೆ ನೀಡಿತ್ತು.

ಆದರೆ, ಮೋದಿ ಇನ್ನೂ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನಡೆದಿದ್ದ ಪಟ್ನಾ ಸ್ಫೋಟ ಘಟನೆ ಬಿಟ್ಟರೆ ಮೋದಿ ಪ್ರಧಾನಿಯಾದ ಬಳಿಕ ಹತ್ಯೆ ಯತ್ನದ ಯಾವುದೇ ಘಟನೆಗಳು ನಡೆದಿಲ್ಲ. ಜೀವ ಬೆದರಿಕೆ ಸುದ್ದಿಗಳು ಬಿಟ್ಟರೆ ಹತ್ಯೆ ಯತ್ನದ ಯಾವುದೇ ಘಟನೆಗಳು ವರದಿಯಾಗಿಲ್ಲ. ಆದರೆ, ಪುಣೆ ಪೊಲೀಸರ ಕಾರ್ಯಾಚರಣೆ ಬಳಿಕ ಪ್ರಧಾನಿ ಮೋದಿ ಹತ್ಯೆ ಸಂಚಿನ ಪ್ರಕರಣ ಬೇರೆ ಬೇರೆ ದಾರಿಗಳಲ್ಲಿ ಸಾಗುತ್ತಿದೆ.

ದೇಶದ ಯಾವುದೇ ವಿವಿಐಪಿಗಳಿಗೆ ಜೀವ ಬೆದರಿಕೆ ಎಂಬುದು ಸಾಮಾನ್ಯ. ಗುಪ್ತಚರ ಇಲಾಖೆಯ ಪರಿಭಾಷೆಯಲ್ಲಿ ಇದು ‘ಡೈಲಿ ಅಲರ್ಟ್‌’. ಕೇಂದ್ರ ಗುಪ್ತಚರ ಇಲಾಖೆ ಪ್ರತಿ ದಿನ ದೇಶದ ಎಲ್ಲಾ ರಾಜ್ಯಗಳ ಡಿಜಿಪಿ ಕಚೇರಿಗಳಿಗೂ ಕಳಿಸುವ ಈ ಅಲರ್ಟ್‌ನಲ್ಲಿ ‘ಸಂಭವನೀಯ ಭಯೋತ್ಪಾದಕ ದಾಳಿ’ ಎಂಬುದು ಮಾಮೂಲು. ಇದೇ ರೀತಿಯ ಅಲರ್ಟ್‌ಗಳು ಪ್ರಧಾನಿ ಭೇಟಿಯ ಸಂದರ್ಭದಲ್ಲೂ ಬರುತ್ತಿರುತ್ತವೆ. ಇಂಥ ‘ಸಂಭವನೀಯ ದಾಳಿ’ಯ ಕಾರಣಕ್ಕೇ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ವಿವಿಐಪಿಗಳಿಗೆ ಅತಿ ಬಿಗಿ ಭದ್ರತೆ ನೀಡುವುದು.