samachara
www.samachara.com
‘ಕೊರಿಯರ್ ಬಾಯ್ಸ್ ಆಫ್ ಬೆಂಗಳೂರು’: ಇವರು ಇದ್ದಷ್ಟು ದಿನ ಕೆಲಸ, ದುಡಿದಷ್ಟೇ ದುಡ್ಡು!
COVER STORY

‘ಕೊರಿಯರ್ ಬಾಯ್ಸ್ ಆಫ್ ಬೆಂಗಳೂರು’: ಇವರು ಇದ್ದಷ್ಟು ದಿನ ಕೆಲಸ, ದುಡಿದಷ್ಟೇ ದುಡ್ಡು!

ಕೋಟಿ ಮೀರಿರುವ ರಾಜ್ಯದ ರಾಜಧಾನಿಯಲ್ಲಿ ತರಹೇವಾರಿ ಉದ್ಯೋಗಗಳಿವೆ. ಅವುಗಳು ಒಂದಕ್ಕಿಂತ ಒಂದು ಭಿನ್ನ. ಅಂತಹುಗಳಲ್ಲಿ ಒಂದು; ಕೊರಿಯರ್ ಸರ್ವಿಸ್. ಸಾಮಾನ್ಯವಾಗಿ ಡಿಲಿವರಿ ಬಾಯ್ಸ್ ಅಂತ ಕರೆಸಿಕೊಳ್ಳುವ ಈ ಉದ್ಯೋಗಿಗಳ ಬದುಕಿನ ಅಂತರಂಗ ಇಲ್ಲಿದೆ.

ನೀವು ಎಲ್ಲೋ ಕುಳಿತು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ ವಸ್ತು ನೀವು ಬಯಸಿದ ದಿನಕ್ಕೆ, ನಿಮ್ಮ ಅನುಕೂಲದ ಸಮಯಕ್ಕೆ ನಿಮ್ಮ ಕೈ ತಲುಪುವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವವರು ಡೆಲಿವರಿ ಬಾಯ್ಸ್ ಅಥವಾ ಕೊರಿಯರ್ ಬಾಯ್ಸ್.

ನಿಮ್ಮ ವಸ್ತು ಆರ್ಡರ್‌ ಆಗುವವರೆಗಿಂದ ಹಿಡಿದು ನಿಮ್ಮ ಕೈ ಸೇರುವವರೆಗೆ ದುಡಿಯುವವರ ಪೈಕಿ ಡೆಲಿವರಿ ಬಾಯ್‌ ಕೊನೆಯ ಕೆಲಸಗಾರ. ಇಲ್ಲಿ ಬಾಯ್ ಅಂದಾಕ್ಷಣ ಹುಡುಗರೇ ಆಗಿರುತ್ತಾರೆ ಅಂತೇನಿಲ್ಲ. 60ರ ಸಮೀಪದಲ್ಲಿರುವವರೂ ‘ಕೊರಿಯರ್ ಬಾಯ್’ ಆಗಿ ಕೆಲಸ ಮಾಡುತ್ತಾರೆ.

ರಾಜ್ಯದ ರಾಜಧಾನಿಯ ಜನ ಸಂಖ್ಯೆ ಕೋಟಿ ಮೀರಿದೆ. ಇದರಲ್ಲಿ ಕೊಳೆಗೇರಿಗಳಲ್ಲಿರುವ ಶೇ. 22.5 ಜನರಿಂದ ಹಿಡಿದು ಮಧ್ಯಮ ವರ್ಗದಲ್ಲಿ ಬದುಕುವ ಲಕ್ಷಾಂತರ ಮಂದಿ ಪೈಕಿ ಸಾವಿರಾರು ಜನ ನಿತ್ಯ ‘ಕೊರಿಯರ್ ಸರ್ವಿಸ್’ ನೀಡುತ್ತಾರೆ. ಅವರದ್ದು ಅಸಂಘಟಿತ ವಲಯ. ಅಗತ್ಯ ಬಿದ್ದಾಗ ಕೆಲಸ, ಸಿಕ್ಕಷ್ಟು ಹಣ, ಬದುಕು ಕಟ್ಟಿಕೊಳ್ಳಲು ಮೊದಲ ಮೆಟ್ಟಿಲು ಕೊರಿಯರ್ ಎಂಬಂತಿದೆ ಈ ಉದ್ಯೋಗ.

ಅಂದಹಾಗೆ, ಇದು 'ಡೆಲಿವರಿ ಬಾಯ್‌’ಗಳ ಬದುಕಿನ ಬಗೆಗೆ ನೀವು ಆಲೋಚನೆ ಮಾಡದ ಆಯಾಮವನ್ನು ತೆರೆದಿಡುವ ವರದಿ.

‘ಕೊರಿಯರ್ ಬಾಯ್ಸ್ ಆಫ್ ಬೆಂಗಳೂರು’: ಇವರು ಇದ್ದಷ್ಟು ದಿನ ಕೆಲಸ, ದುಡಿದಷ್ಟೇ ದುಡ್ಡು!

ಬದಲಾದ ಕಾಲಮಾನ:

2007ರ ಅಕ್ಟೋಬರ್‌ನಲ್ಲಿ ಇಬ್ಬರು ಗೆಳೆಯರು ಬೆಂಗಳೂರಿನ ಕೋರಮಂಗಲದ ಫ್ಲ್ಯಾಟ್‌ನಲ್ಲಿ ಕುಳಿತು ಆರಂಭಿಸಿದ ಫ್ಲಿಪ್‌ಕಾರ್ಟ್‌ ಕಂಪೆನಿ ಇಂದು ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್‌ ಖರೀದಿತಾಣಗಳಲ್ಲಿ ಒಂದು. ಫ್ಲಿಪ್‌ಕಾರ್ಟ್‌ ಮೊದಲು ಮಾರಾಟ ಮಾಡಿದ್ದು ಜಾನ್‌ ವುಡ್‌ ರಚಿಸಿದ್ದ ‘ಲೀವಿಂಗ್‌ ಮೈಕ್ರೊಸಾಫ್ಟ್‌ ಟು ಚೇಂಜ್‌ ದ ವರ್ಲ್ಡ್‌’ (Leaving Microsoft to Change the World) ಎಂಬ 500 ರೂಪಾಯಿಯ ಪುಸ್ತಕವನ್ನು. ಆಂಧ್ರಪ್ರದೇಶದ ಮೆಹಬೂಬ್‌ನಗರದ ವಿ. ವಿ. ಕೆ. ಚಂದ್ರ ಎಂಬುವರಿಗೆ ಇದನ್ನು ಕಳಿಸಿದ್ದು 2007ರ ಅಕ್ಟೋಬರ್‌ 31ರಂದು.

ಕಳೆದೊಂದು ದಶಕದಿಂದೀಚೆಗೆ ಇಂಟರ್‌ನೆಟ್‌ ಬಳಕೆ ಅಗ್ಗವಾದಂತೆಲ್ಲಾ ಆನ್‌ಲೈನ್‌ನಲ್ಲಿ ಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಪುಸ್ತಕಗಳಿಂದ ಆರಂಭವಾದ ಆನ್‌ಲೈನ್‌ ಮಾರಾಟ ಟಿವಿ, ಫ್ರಿಜ್‌, ಊಟ ಕೊಳ್ಳುವವರೆಗೂ ಬಂದು ನಿಂತಿದೆ.

ಎಲ್ಲೋ ಕುಳಿತು ಆರ್ಡರ್‌ ಮಾಡಿದ ವಸ್ತು, ಇನ್ನೆಲ್ಲಿಂದಲೋ ಬಂದು ನಿಮ್ಮನ್ನು ಸೇರುವ ನಡುವೆ ಸಂಪರ್ಕದಂತೆ ಕೆಲಸ ಮಾಡುವುದು ತಂತ್ರಜ್ಞಾನವೇ ಆದರೂ, ಅದನ್ನು ಅನುಷ್ಠಾನಗೊಳಿಸುವವರು ಡೆಲಿವರಿ ಬಾಯ್‌ಗಳು. ತಿಂಗಳಿಗೆ 8ರಿಂದ 15 ಸಾವಿರದವರೆಗೆ ದುಡಿಮೆ ಇರುವ ಬಹುತೇಕ ಡೆಲಿವರಿ ಬಾಯ್‌ಗಳಲ್ಲಿ ಅರ್ಧಕ್ಕೇ ಓದು ಬಿಟ್ಟವರ ಸಂಖ್ಯೆಯೇ ಹೆಚ್ಚು.

ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿರುವ ಬಹುತೇಕರು 10ನೇ ತರಗತಿಯಲ್ಲಿ ಫೇಲ್‌ ಆಗಿ ತಕ್ಷಣಕ್ಕೆ ಬೇರೆ ಕೆಲಸದ ಆಯ್ಕೆ ಇಲ್ಲದೆ ಈ ವೃತ್ತಿಗೆ ಬಂದವರು. ಬಹುತೇಕರಿಗೆ ಇದು ಪಾರ್ಟ್‌ ಟೈಂ ಕೆಲಸ. ಫೀಲ್ಡ್‌ ವರ್ಕ್‌ ಕೆಲಸ ಮಾಡುವ ಬಹುತೇಕರು ತಮ್ಮ ಕೆಲಸದ ಜತೆಗೇ ಡೆಲಿವರಿ ಬಾಯ್‌ ಆಗಿಯೂ ದುಡಿಯುತ್ತಿದ್ದಾರೆ. ಇನ್ನು ಕೆಲವರು ಬೇರೆ ಕೆಲಸ ಸಿಗದ ಕಾರಣಕ್ಕೆ ತಾತ್ಕಾಲಿಕವಾಗಿ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.

ಡೆಲಿವರಿ ಬಾಯ್‌ ಕೆಲಸದಲ್ಲಿ ಹತ್ತು ವರ್ಷದ ಹಿಂದೆ ಇದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಒಂದು ದಶಕ ಎಲ್ಲವನ್ನೂ, ಎಲ್ಲರನ್ನೂ ಬದಲಾಯಿಸುವಂತೆ ಡೆಲಿವರಿ ಬಾಯ್‌ಗಳನ್ನೂ, ಅವರ ಉದ್ಯೋಗ ರೀತಿ ನೀತಿಗಳನ್ನೂ ಬದಲಾಯಿಸಿದೆ.

ಆಗ ಎಲ್ಲರ ಕೈಗಳಲ್ಲೂ ಮೊಬೈಲ್‌ಗಳಿರಲಿಲ್ಲ. ಸ್ಮಾರ್ಟ್‌ಫೋನ್‌ ದೂರದ ಮಾತಾಗಿತ್ತು. ತಂತ್ರಜ್ಞಾನ ಕನಸಿನ ರೀತಿಯಲ್ಲಿತ್ತು. ವಿಳಾಸ ಪತ್ತೆ ಹಚ್ಚುವುದಕ್ಕೆ ನಾನಾ ಮಾರ್ಗಗಳನ್ನು ಅನುಸರಿಸಬೇಕಾಗಿತ್ತು. ಸೈಕಲ್‌ ಏರಿ ಬೀದಿ ಬೀದಿ ಸುತ್ತುತ್ತಾ ವಿಳಾಸ ಹುಡುಕಿಕೊಂಡು ಡೆಲಿವರಿ ಮಾಡುವುದು ಆಗ ಕಷ್ಟವಿತ್ತು. ಆದರೆ, ಈಗ ತಂತ್ರಜ್ಞಾನ ಡೆಲಿವರಿ ಬಾಯ್‌ಗಳ ಕೆಲಸವನ್ನೂ ಸುಲಭವಾಗಿಸಿದೆ.

“ಈಗೆಲ್ಲಾ ಗೂಗಲ್‌ ಮ್ಯಾಪ್‌ ಮೂಲಕ ಅಡ್ರೆಸ್‌ ಟ್ರ್ಯಾಕ್‌ ಮಾಡುವುದು ಸುಲಭ. ಆದರೆ, ಹಿಂದೆ ವಿಳಾಸ ಪತ್ತೆ ಮಾಡುವುದಕ್ಕೇ ಸಾಕಷ್ಟು ಶ್ರಮ ಹಿಡಿಯುತ್ತಿತ್ತು. ಆದರೆ, 10ನೇ ತರಗತಿ ಫೇಲ್‌ ಆಗಿದ್ದರಿಂದ ತಕ್ಷಣಕ್ಕೆ ಆದಾಯಕ್ಕಾಗಿ ಏನಾದರೂ ಕೆಲಸ ಮಾಡಲೇಬೇಕಿತ್ತು. ಆಗ ಸುಲಭವಾಗಿ ಸಿಗುತ್ತಿದ್ದುದ್ದು ಡೆಲಿವರಿ ಬಾಯ್‌ ಕೆಲಸ. ಕನ್ನಡ, ಇಂಗ್ಲಿಷ್‌ ಓದಲು ಬಂದರೆ ಸಾಕು ಕೆಲಸ ಕೊಡುತ್ತಿದ್ದರು. ಆಗ ಈ ಕೆಲಸಕ್ಕೆ ಅಷ್ಟೇ ಅರ್ಹತೆ ಸಾಕಿತ್ತು” ಎಂದು ದಶಕದ ಹಿಂದಿನ ನೆನಪುಗಳಿಗೆ ಜಾರುತ್ತಾರೆ ಕೆಲ ದಿನಗಳ ಹಿಂದಿನವರೆಗೂ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ವಿಜಯ್‌ ಕುಮಾರ್‌.

‘ಕೊರಿಯರ್ ಬಾಯ್ಸ್ ಆಫ್ ಬೆಂಗಳೂರು’: ಇವರು ಇದ್ದಷ್ಟು ದಿನ ಕೆಲಸ, ದುಡಿದಷ್ಟೇ ದುಡ್ಡು!

ಕೊರಿಯರ್‌ ಕಂಪೆನಿಗಳು, ಫ್ಲಿಪ್‌ಕಾರ್ಟ್‌, ಅಮೆಜಾನ್‌ನಂಥ ಆನ್‌ಲೈನ್‌ ಕೊಳ್ಳುತಾಣಗಳಿಗೆ ಸೇವೆ ಕೊಡುವ ಏಜೆನ್ಸಿಗಳು ಡೆಲಿವರಿ ಬಾಯ್‌ಗಳನ್ನು ಈಗ ನೇಮಿಸಿಕೊಳ್ಳುತ್ತಾರೆ. ಕೆಲವು ಕೊರಿಯರ್‌ ಕಂಪೆನಿಗಳು 10ರಿಂದ 15 ಸಾವಿರ ತಿಂಗಳ ಸಂಬಳಕ್ಕೆ ಡೆಲಿವರಿ ಬಾಯ್‌ಗಳನ್ನು ನೇಮಿಸಿಕೊಂಡರೆ, ಕೆಲವು ಕಂಪೆನಿಗಳು ಡೆಲಿವರಿ ಏಜೆನ್ಸಿಗಳ ಸೇವೆ ಬಳಸಿಕೊಳ್ಳುತ್ತವೆ. ಏಜೆನ್ಸಿಗಳಲ್ಲಿ ಕೆಲಸ ಮಾಡುವ ಹುಡುಗರೂ ಹೆಚ್ಚು ದಿನ ಈ ಕೆಲಸದಲ್ಲಿರುವುದಿಲ್ಲ. ಮತ್ತೊಂದು ಕೆಲಸ ಸಿಗುವವರೆಗೆ ಅಥವಾ ಫೇಲ್‌ ಆಗಿರುವ 10ನೇ ತರಗತಿ ಅಥವಾ ಪಿಯುಸಿ ವಿಷಯಗಳನ್ನು ಪಾಸ್ ಮಾಡಿಕೊಳ್ಳುವವರೆಗೆ ಮಾತ್ರ ಡೆಲಿವರಿ ಬಾಯ್‌ಗಳಾಗಿರುವ ಸಾಕಷ್ಟು ಹುಡುಗರು ಬೆಂಗಳೂರಿನಲ್ಲಿದ್ದಾರೆ.

“ಕೊರಿಯರ್‌ ಬಾಯ್‌ ಅಥವಾ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವುದು ಇವತ್ತಿಗೆ ಕಷ್ಟದ ಕೆಲಸವಲ್ಲ. ಕೆಲವರು ಕಂಪೆನಿಗಳಲ್ಲಿ ಪೂರ್ಣಾವಧಿಗೆ ಕೆಲಸಕ್ಕೆ ಸೇರಿದರೆ ಕೆಲವರು ಶಿಫ್ಟ್‌ ಹಾಗೂ ಪೀಸ್‌ ಡೆಲಿವರಿಯಲ್ಲಿ ಕೆಲಸ ಮಾಡುತ್ತಾರೆ. ಸಾಮಾನ್ಯವಾಗಿ ಬೆಳಿಗ್ಗೆ ಹಾಗೂ ಮಧ್ಯಾಹ್ನ ಶಿಫ್ಟ್‌ ಇರುತ್ತದೆ. ಒಂದು ಶಿಫ್ಟ್‌ ಡೆಲಿವರಿ ಮಾಡಿದರೆ ತಿಂಗಳಿಗೆ 8 ಸಾವಿರದಿಂದ 10 ಸಾವಿರದವರೆಗೆ ದುಡಿಯಬಹುದು. ಎರಡು ಶಿಫ್ಟ್‌ ಮಾಡಿದರೆ 15 ಸಾವಿರದವರೆಗೆ ದುಡಿಯಬಹುದು” ಎನ್ನುತ್ತಾರೆ ಕೊರಿಯರ್‌ ಕಂಪೆನಿಯೊಂದರಲ್ಲಿ ಡೆಲಿವರಿ ಬಾಯ್‌ ಆಗಿರುವ ಮಹಾಲಕ್ಷ್ಮಿ ಲೇಔಟ್‌ನ ವರದರಾಜ್‌.

ಪೀಸ್‌ ಡೆಲಿವರಿ ಮಾಡಿದರೆ ಒಂದು ಪೀಸ್‌ಗೆ 5ರಿಂದ 10 ರೂಪಾಯಿ ಸಿಗುತ್ತದೆ. ದುಬಾರಿ ವಸ್ತುಗಳನ್ನು ಮಾರಾಟ ಮಾಡುವ ಫ್ಲಿಪ್‌ಕಾರ್ಟ್‌, ಅಮೇಜಾನ್‌ನಂಥ ಕಂಪೆನಿಗಳ ವಸ್ತುಗಳನ್ನು ಡೆಲಿವರಿ ಮಾಡುವವರಿಗೆ ಒಂದು ಡೆಲಿವರಿಗೆ 20ರಿಂದ 30 ರೂಪಾಯಿವರೆಗೆ ಸಿಗುತ್ತದೆ. ಕೊರಿಯರ್ ಬಾಯ್‌ಗಳಲ್ಲಿ ಬಹುತೇಕರು ಆಯಾ ದಿನವೇ ಡೆಲಿವರಿ ಮುಗಿಸಿ, ಸಂಜೆ ಕೊರಿಯರ್‌ಗಳನ್ನು ಸಂಗ್ರಹ ಮಾಡುತ್ತಾರೆ. ಕೆಲವರು ಮರುದಿನ ಮಧ್ಯಾಹ್ನದೊಳಗೆ ಡೆಲಿವರಿ ಮುಗಿಸುತ್ತಾರೆ. ಒಬ್ಬ ಡೆಲಿವರಿ ಬಾಯ್‌ ಒಂದು ಬಡಾವಣೆಯಲ್ಲಿ 5ರಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ಡೆಲಿವರಿ ಮಾಡುತ್ತಾನೆ.

‘ಕೊರಿಯರ್ ಬಾಯ್ಸ್ ಆಫ್ ಬೆಂಗಳೂರು’: ಇವರು ಇದ್ದಷ್ಟು ದಿನ ಕೆಲಸ, ದುಡಿದಷ್ಟೇ ದುಡ್ಡು!

ಡೆಲಿವರಿ ಬಾಯ್‌ ಕೆಲಸದಲ್ಲೇ ಹೆಚ್ಚು ವರ್ಷ ಇರುವವರ ಸಂಖ್ಯೆ ಕಡಿಮೆ. ತಾತ್ಕಾಲಿಕ ಆದಾಯಕ್ಕಾಗಿ ಈ ಕೆಲಸಕ್ಕೆ ಬರುವ ಹುಡುಗರು ಇದಕ್ಕಿಂತ ಮತ್ತೊಂದು ಒಳ್ಳೆಯ ಕೆಲಸ ಸಿಕ್ಕರೆ ಈ ಕೆಲಸ ಬಿಡುತ್ತಾರೆ. ಹೀಗಾಗಿ ಕೊರಿಯರ್ ಕಂಪೆನಿಗಳು ಹಾಗೂ ಡೆಲಿವರಿ ಏಜೆನ್ಸಿಗಳು ಹೊಸ ಹುಡುಗರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಲೇ ಇರುತ್ತವೆ. ಹೆಚ್ಚು ಓದಿಲ್ಲದ, ತಾತ್ಕಾಲಿಕ ಆದಾಯದ ಮೂಲವಾಗಿಯಷ್ಟೇ ಈ ಕೆಲಸವನ್ನು ಆರಿಸಿಕೊಳ್ಳುವ ದೊಡ್ಡ ವರ್ಗವೇ ಬೆಂಗಳೂರಿನಲ್ಲಿದೆ. ಈ ಡೆಲಿವರಿ ಬಾಯ್‌ ಕೆಲಸ ಎನ್ನುವುದು ಬಹುತೇಕರಿಗೆ ಇಂದಿಗೂ ತಾತ್ಕಾಲಿಕ ಕೆಲಸವೇ ಹೊರತು ಇದೊಂದು ಪೂರ್ಣಕಾಲಿಕ ಉದ್ಯೋಗವಾಗಿಲ್ಲ. ಹೀಗಾಗಿ ಈ ವರ್ಗ ಇಂದಿಗೂ ಅಸಂಘಟಿತ ವಲಯವಾಗಿಯೇ ಉಳಿದುಕೊಂಡಿದೆ.

“90 ದಶಕದಲ್ಲೇ ಕೊರಿಯರ್‌ ಕಂಪೆನಿಗಳ ಕಾರ್ಮಿಕರನ್ನು ಸಂಘಟಿಸುವ ಕೆಲಸ ನಡೆದಿತ್ತು. ಡೆಲಿವರಿ ಬಾಯ್‌ಗಳ ಕೆಲಸವನ್ನು ಖಾಯಂಗೊಳಿಸುವ, ಅವರಲ್ಲಿ ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಒಕ್ಕೂಟವನ್ನೂ ರಚಿಸಲಾಗಿತ್ತು. ಈ ಒಕ್ಕೂಟವನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸುವ ಪ್ರಯತ್ನವೂ ನಡೆದಿತ್ತು. ಆದರೆ, ದಿನ ಕಳೆದಂತೆ ಒಕ್ಕೂಟ ನಿಷ್ಕ್ರಿಯವಾಯಿತು” ಎನ್ನುತ್ತಾರೆ ಒಂದು ಕಾಲಕ್ಕೆ ಡೆಲಿವರಿ ಬಾಯ್‌ಗಳ ಒಕ್ಕೂಟ ಕಟ್ಟಿದ್ದ ಟಿ. ಕೆ. ಎಸ್. ಕುಟ್ಟಿ.

ಸದ್ಯಕ್ಕೆ ಒಕ್ಕೂಟ, ಸಂಘಟನೆಗಳ ಬಲವಿಲ್ಲದೆ ಅಸಂಘಟಿತರಾಗಿ, ತಾತ್ಕಾಲಿಕ ಕಾರ್ಮಿಕರಾಗಿ ದುಡಿಯುತ್ತಿರುವ ಡೆಲಿವರಿ ಬಾಯ್‌ಗಳೆಂಬ ದೊಡ್ಡ ಕಾರ್ಮಿಕ ಸಮೂಹ ಬಿಸಿಲು, ಮಳೆ, ಚಳಿಯಲ್ಲೂ ಗ್ರಾಹಕರಿಗೆ ‘ಸೇವೆ’ ನೀಡುತ್ತಲೇ ಇದೆ. ಇದ್ದಷ್ಟು ದಿನ ಕೆಲಸ ಮಾಡಿ, ಆದಷ್ಟು ದುಡಿಯುವುದೇ ಈ ವರ್ಗಕ್ಕೆ ಸದ್ಯಕ್ಕಿರುವ ಆಯ್ಕೆ.

“ನನಗೀಗ ಐವತ್ತೈದು ವರ್ಷ. ಕಳೆದ ಎರಡೂವರೆ ದಶಕದಿಂದ ಕೊರಿಯರ್ ಕೆಲಸ ಮಾಡಿಕೊಂಡಿ ಬಂದಿದ್ದೇನೆ. ಒಮ್ಮೆ ಮಾತ್ರ ಒಂದು ಮನೆಯಲ್ಲಿ ಅವ್ಯಾಚ್ಯವಾಗಿ ನಿಂದಿಸಿದ್ದು ಬಿಟ್ಟರೆ ಕೆಲಸ ಈವರೆಗೂ ಖುಷಿ ನೀಡಿದೆ. ನಾನು ಮಾತ್ರ ಅವತ್ತು ಹೇಗಿದ್ದೆನೋ ಇವತ್ತೂ ಹಾಗೆ ಇದ್ದೇನೆ. ಸುತ್ತಮುತ್ತಲಿನ ಪರಿಸರ ಬದಲಾಗುತ್ತಿದೆ,’’ ಎನ್ನುತ್ತಾರೆ ಜಿಎಂಎಸ್‌ ಕೊರಿಯರ್‌ ಸರ್ವಿಸಸ್‌ನ ದೇವರಾಜ್.

ಹೆಸರಿಗೆ ಮಾತ್ರ ‘ಕೊರಿಯರ್ ಬಾಯ್ಸ್’ ಅಥವಾ ‘ಡೆಲಿವರಿ ಬಾಯ್ಸ್’ ಎಂದು ಕರೆಸಿಕೊಳ್ಳುತ್ತಿರುವ ಈ ಉದ್ಯೋಗಿಗಳ ಚಹರೆ ಈಗಾಗಲೇ ಬದಲಾಗಿ ಹೋಗಿದೆ. ಮುಂದಿನ ದಿನಗಳಲ್ಲಿ ಕೊರಿಯರ್ ಅನ್ನುವ ಸೇವೆಯ ಸ್ವರೂಪವೇ ಬದಲಾಗುವ ಸಾಧ್ಯತೆ ಇದೆ. ಕಾಲ ಹಳೆಯದನ್ನು ಅಳಿಸಿ, ಹೊಸತನ್ನು ಸೃಷ್ಟಿಸಿಕೊಳ್ಳುತ್ತ ಮುಂದೆ ಸಾಗುತ್ತಲೇ ಇರುತ್ತದೆ.