‘ವಿಕೋಪಕ್ಕೆ ನಾನಾ ಕಾರಣ’: ಕೊಡಗಿನ ಜಮ್ಮಾ ಭೂಮಿಯ ವೃತ್ತಾಂತ ಗೊತ್ತಾ?
COVER STORY

‘ವಿಕೋಪಕ್ಕೆ ನಾನಾ ಕಾರಣ’: ಕೊಡಗಿನ ಜಮ್ಮಾ ಭೂಮಿಯ ವೃತ್ತಾಂತ ಗೊತ್ತಾ?

ಇದು ಮಳೆ ನಿಂತರೂ ನಿಲ್ಲದ ಆತ್ಮಾವಲೋಕನ. ಪುಟ್ಟ ಜಿಲ್ಲೆ ಭಾರಿ ಮಳೆಗೆ ಅದುರಿ ಹೋಗಿತ್ತು. ಈಗ ನಿಧಾನವಾಗಿ ಕಾರಣಗಳ ಹುಡುಕಾಟ ಆರಂಭವಾಗಿದೆ. ಜಮ್ಮಾ ಭೂಮಿ ಕೂಡ ಅದರ ಒಂದು ಆಯಾಮ. 

ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಪುಟ್ಟ ಜಿಲ್ಲೆ ಕೊಡಗು ಈ ಶತಮಾನದ ಭೀಕರ ಜಲಪ್ರಳಯದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಹೊತ್ತಿದು. ಆದರೆ ಇಷ್ಟು ವರ್ಷಗಳಲ್ಲಿ ಕಂಡು ಕೇಳರಿಯದ ಈ ಭೀಕರ ಪ್ರವಾಹ ಮತ್ತು ಗುಡ್ಡಗಳ ಕುಸಿತಕ್ಕೆ ಸಹಜವಾಗಿಯೇ ಆತ್ಮಾವಲೋಕನಕ್ಕೆ ಎಡೆಮಾಡಿಕೊಟ್ಟಿದೆ. 

ವಿಶಿಷ್ಟ ಸಂಸ್ಕೃತಿ ಹೊಂದಿರುವ ಕೊಡಗು ಜಿಲ್ಲೆ, ಮೊದಲಿನಿಂದಲೂ ಪ್ರಾಕೃತಿಕ ಸಂಪತ್ತಿನ ನೆಲೆಬೀಡು. ಕಾಫಿಯ ತವರೂರು ಎಂದುಕರೆಸಿಕೊಂಡಿರುವ ಈ ಜಿಲ್ಲೆಯಲ್ಲಿ ವೃಕ್ಷ ಸಂಪತ್ತೇ ಕಾಫಿ ಕೃಷಿಯ ಜೀವಾಳ. ವೃಕ್ಷಗಳಿಲ್ಲದೆ ಕಾಫಿ ಬೆಳೆ ಅಸಾಧ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಳೆಗಾರರು ತಮ್ಮ ಸ್ವಾರ್ಥಕ್ಕಾಗಿ ಈ ವೃಕ್ಷಗಳಿಗೇ ಕೊಡಲಿ ಹಾಕಿ ಕಾಸು ಮಾಡಿಕೊಂಡದ್ದರು. ಪರಿಣಾಮ ಈಗ ಗುಡ್ಡಕುಸಿತ, ಸಾವು ನೋವುಗಳು ಕಣ್ಣೆದುರಿಗಿವೆ. ಇದರ ಜತೆಗೆ ಜಮ್ಮಾ ಭೂಮಿಯ ಸುತ್ತಲೂ ಒಂದಷ್ಟು ಚರ್ಚೆಗಳಿಲ್ಲಿ ನಡೆಯುತ್ತಿವೆ.

ಕೊಡಗಿನಲ್ಲಿ ವಿಸ್ತಾರವಾಗಿ ಹರಡಿರುವ ಭೂಮಿಯೇ ‘ಜಮ್ಮಾ’ ಭೂಮಿ. ಈ ಜಮ್ಮಾ ಜಾಗಗಳು ಸಾವಿರಾರು ಎಕರೆ ವಿಸ್ತೀರ್ಣ ಹೊಂದಿದ್ದು, ಜಿಲ್ಲೆಯಾದ್ಯಂತ ಹರಡಿಕೊಂಡಿವೆ. ಕೊಡವರು ವೀರ ಪರಂಪರೆಯನ್ನು ಹೊಂದಿದ್ದರೂ ಕೊಡಗನ್ನು ಆಳಲು ಸಾದ್ಯವಾಗರಲಿಲ್ಲ. ವಿಶಿಷ್ಟ ಸಂಸ್ಕೃತಿ ಹೊಂದಿರುವ ಕೊಡವ ಜನಾಂಗ ಲಿಂಗಾಯತ ಆರಸರ ಸೇವೆ ಮಾಡಿಕೊಂಡೇ ಬಂದವರು.

ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರು ತಮ್ಮ ಸೇವೆ ಮಾಡಿದ ಕೊಡವ ಜನಾಂಗದ ಸೈನಿಕರು ಹಾಗೂ ಇತರ ವರ್ಗಕ್ಕೆ ನೂರಾರು ಎಕರೆ ಭೂಮಿಯನ್ನು ಬಳುವಳಿಯಾಗಿ ನೀಡಿದ್ದರು. ಈ ಬಳುವಳಿಯ ಭೂಮಿ ನೀಡುವಿಕೆ 1600ನೇ ಕಾಲಘಟ್ಟದಲ್ಲಿ ಆರಂಭಗೊಂಡಿತ್ತು ಎಂದು ಇತಿಹಾಸ ತಿಳಿಸುತ್ತದೆ. ಆದೇ ರೀತಿ ಲಿಂಗಾಯತ ಮಠಗಳಿಗೂ ಜಮೀನು ನೀಡಲಾಗಿತ್ತು. ಇದೇ ಜಮ್ಮಾ ಭೂಮಿ ಎಂದು ಕರೆಸಿಕೊಂಡಿತ್ತು.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ಕೊಡವ ಸೈನಿಕರಿಗೆ ನೀಡಿದ ಬಳುವಳಿಯ ಭೂಮಿಯನ್ನು ಕೇವಲ ವ್ಯಕ್ತಿಗೆ ಮಾತ್ರ ನೀಡಿದೆ ಇಡೀ ಕುಟುಂಬಕ್ಕೆ ನೀಡಲಾಗುತ್ತಿತ್ತು. ಈ ರೀತಿ ನೀಡದ ಭೂಮಿಗೆ ಸನ್ನದು ಎಂಬ ಹಕ್ಕು ಪತ್ರವನ್ನೂ ಕೂಡ ರಾಜರ ಕಾಲದಲ್ಲಿ ವಿತರಿಸಲಾಗುತ್ತಿತ್ತು.

ಭಾರತದಲ್ಲಿ ಪ್ರಾಬಲ್ಯ ಸಾಧಿಸಿದ ಬ್ರಿಟಿಷರೂ ಕೂಡ ಕೊಡವರಿಗೆ ನೀಡಿದ್ದ ಜಮ್ಮಾ ಹಕ್ಕನ್ನು ಗೌರವಿಸಿಕೊಂಡೇ ಬಂದರು. ಅದರ ಜತೆಗೆ ಜಮ್ಮಾ ಭೂಮಿಯನ್ನು ಮಾರಾಟ ಮಾಡದಂತೆ ನಿಬಂಧನೆಗಳನ್ನೂ ವಿಧಿಸಿದರು. ಆದರೆ ಈ ಭೂಮಿಯನ್ನು ಅನುಭವಿಸಿಕೊಂಡು ಬಂದ ಕೊಡವ ಜನಾಂಗದ ಸಂತತಿ ಬೆಳೆದು ಭಾಗಗಳಾಗುತ್ತ ಹೋಯಿತು. ಜಮ್ಮಾ ಭೂಮಿಯನ್ನು ಕಾಫಿ ತೋಟಗಳನ್ನಾಗಿ ಪರಿವರ್ತಿಸಿತು.

ಮೊದಲು ಈ ಜಾಗಗಳಲ್ಲಿ ಇಬ್ಬರು ವ್ಯಕ್ತಿಗಳು ಸೇರಿ ತಬ್ಬಿ ಹಿಡಿದರೂ ಪೂರ್ಣವಾಗಿ ತಬ್ಬಲಾಗದ ಬೃಹತ್ ಮರಗಳಿದ್ದವು. ಅದೆಲ್ಲವನ್ನೂ ಖರೀದಿಸಿದ ಕೇರಳದ ಮರ ವ್ಯಾಪಾರಿಗಳು, ಕೋಟಿಗಟ್ಟಲೇ ಲಾಭ ಮಾಡಿಕೊಂಡು ಹೋದರು. ಕೆಲವರು ಬೆಂಗಳೂರಿಗೆ ಹೋಗಿ ಶ್ರೀಮಂತ ರಾಜಕಾರಣಿಯೂ ಆದರು. ಜಮ್ಮಾ ಭೂಮಿಯನ್ನು ಮಾರಾಟ ಮಾಡಲು ನಿರ್ಬಂಧ ಇತ್ತೇ ಹೊರತು ವ್ಯವಸಾಯ ಮಾಡಲು ಅಥವಾ ಅಲ್ಲಿರುವ ಉತ್ಪನ್ನಗಳನ್ನು ಅನುಭವಿಸಲು ನಿರ್ಬಂಧ ಇಲ್ಲದಿದ್ದ ಕಾರಣ ಜಮ್ಮಾ ಭೂಮಿಗಳಲ್ಲಿದ್ದ ಮರಗಳೆಲ್ಲಾ ಕಾಣೆಯಾದವು.

ಹೀಗೆ ಅರಣ್ಯನಾಶ ಆಗುತ್ತಲೇ ಸಾಗಿದ ಕಾರಣದಿಂದ ಭೂಮಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಬೃಹತ್ ಮರಗಳ ಸಂಖ್ಯೆ ಕಡಿಮೆ ಆಯಿತು. ಹಿಂದೆ ಇದ್ದ ಬೃಹತ್‌ ಮರಗಳ ಜಾಗದಲ್ಲಿ ಕೃಷಿಕರು ಬೇಗನೆ ಬೆಳೆದು ಆದಾಯ ನೀಡುವ ಸಿಲ್ವರ್ ಮರಗಳನ್ನು ಬೆಳೆಸತೊಡಗಿದರು. ಕಾಫಿ ಬೆಳಯಲು ಅಗತ್ಯವಿದ್ದ ನೆರಳನ್ನು ಸಿಲ್ವರ್‌ ಮರಗಳು ನೀಡತೊಡಗಿದವು.

ಈ ಮಧ್ಯೆ ಕೊಡಗು ಪ್ರವಾಸೋದ್ಯಮ ಜಿಲ್ಲೆಯಾಗಿ ಪರಿವರ್ತನೆಯಾದ ಕಾರಣದಿಂದ ಜಮ್ಮಾ ಭೂಮಿಯಲ್ಲೂ ರೆಸಾರ್ಟ್ ಹೋಂ ಸ್ಟೇ ಗಳು ತಲೆ ಎತ್ತತೊಡಗಿದವು. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಇಂದು ಕೊಡಗಿನಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಹೋಮ್ ಸ್ಟೇಗಳಿವೆ. ಆದರೆ ಪರವಾನಗಿ ಪಡೆದುಕೊಂಡಿರುವುದು ಮಾತ್ರ ಕೇವಲ 534 ಹೋಮ್‌ ಸ್ಟೇಗಳು.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ಈ ರೀತಿ ಕೃಷಿಯೇತರ ಉದ್ದೇಶಕ್ಕೆ ಬಳಕೆ ಆಗಿರುವ ಜಮ್ಮಾ ಭೂಮಿಗಳಲ್ಲಿ ಇಂದು ಕಾಂಕ್ರೀಟ್ ಕಟ್ಟಡಗಳು ಎದ್ದು ನಿಂತಿವೆ. ಈ ಭೂಮಿಯನ್ನು ಮಾರಾಟ ಮಾಡುವ ಹಕ್ಕು ನೀಡಬೇಕು ಎಂದು ಜಮ್ಮಾ ಭೂಮಿಗಳ ಮಾಲಿಕರು ರಾಜ್ಯ ಹೈಕೋರ್ಟಿನಲ್ಲಿ ಮೊಕದ್ದಮೆ ಹೂಡಿ, ವಾದ ಮಾಡಿದರಾದರೂ ನ್ಯಾಯಾಲಯ ಮಾರಾಟದ ಹಕನ್ನು ನೀಡಿಲ್ಲ. ಜಮ್ಮಾ ಭೂಮಿಗಳ ಮಾಲಿಕರು ಭೂಮಿ ಮಾರುವಂತಿಲ್ಲವಾದರೂ ಅದನ್ನು ಬಳಸಲು ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ ಪರವಾನಗಿ ಇಲ್ಲದೆಯೇ ಹೋಮ್‌ ಸ್ಟೇಗಳು ತಲೆಯೆತ್ತಿವೆ.

ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ಮಡಿಕೇರಿಯ ಹಿರಿಯ ವಕೀಲ ಬೆಲ್ಲತಂಡ ಮಾಚಯ್ಯ, “ಇದೇ ವರ್ಷದ ಏಪ್ರಿಲ್‌ನಲ್ಲಿ ಕಂದಾಯ ಇಲಾಖೆಯ ಲೆಕ್ಕ ಪರಿಶೋಧಕರ ತಂಡವು, ಜಿಲ್ಲಾಧಿಕಾರಿಗಳು ಜಮ್ಮಾ ಭೂಮಿಯಲ್ಲಿ ಕೃಷಿಯೇತರ ಚಟುವಟಿಕೆ ಮಾಡಲು ಅನುಮತಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು,” ಎಂದು ತಿಳಿಸಿದರು. ಕೊಡಗಿನಲ್ಲಿ ಉಂಟಾದ ನೆರೆ ಪರಿಸ್ಥಿತಿಗೆ ಜಮ್ಮಾ ಭೂಮಿಗಳಲ್ಲಿದ್ದ ಮರಗಳನ್ನು ನಾಶಪಡಿಸಿದ್ದೇ ಮುಖ್ಯ ಕಾರಣ ಎನ್ನುವುದು ಮಾಚಯ್ಯನವರ ಅಭಿಪ್ರಾಯ.

ಕೊಡಗಿನಲ್ಲಿರುವ ಅನೇಕ ಗುಡ್ಡಗಳನ್ನು ಕೊರೆದು ಹೋಂ ಸ್ಟೇಗಳನ್ನು ನಿರ್ಮಿಸಲಾಗಿದೆ. ಈ ಹೋಂ ಸ್ಟೇಗಳಿರುವ ಜಾಗದಲ್ಲಿ ಕೆರೆ ಮತ್ತು ಈ ಕೊಳಗಳನ್ನು ಕೂಡ ನಿರ್ಮಿಸಲಾಗಿದೆ. ಈ ಕೆರೆಗಳಿಂದಾಗಿ ಭೂಮಿಯ ಆಳಕ್ಕೆ ಜಲ ಇಳಿದು ಮಣ್ಣು ಸಡಿಲವಾಗಿದೆ. ಆದ್ದರಿಂದ ಗುಡ್ಡಗಳೇ ಸಂಪೂರ್ಣವಾಗಿ ಕುಸಿದವು ಎಂದು ಕೊಡಗು ಜಿಲ್ಲೆಯ ಪರಿಸರವಾದಿಗಳು ಆರೋಪಿಸಿದ್ದಾರೆ.

ಮಾದಾಪುರ ಸಮೀಪದ ಇಗ್ಗೋಡ್ಲು ನಿವಾಸಿ ಜೆ.ಪಿ. ಕಾವೇರಪ್ಪ ಗುಡ್ಡ ಕುಸಿತದಿಂದಾಗಿ ತಮ್ಮ ಮನೆ ಮತ್ತು 8 ಎಕರೆ ಕಾಫಿ ತೋಟವನ್ನು ಕಳೆದುಕೊಂಡಿದ್ದಾರೆ. ‘ಸಮಾಚಾರ’ದ ಜತೆ ಮಾತನಾಡಿದ ಕಾವೇರಪ್ಪ ತಮ್ಮ ಕಷ್ಟವನ್ನು ಬಿಚ್ಚಿಟ್ಟರು.

“ಕಳೆದ 20 ವರ್ಷಗಳಿಂದ ನಾವು ಗಂಡ ಹೆಂಡತಿ ಇಬ್ಬರೇ ದುಡಿದು, 8 ಎಕರೆ ತೋಟ ಮಾಡಿದ್ದವು. ನಮ್ಮ ಬೆವರಿನ ಫಲವಾಗಿ ಉತ್ತಮ ಫಸಲು ಬಂದು ಪ್ರತೀ ವರ್ಷವೂ ಲಕ್ಷಾಂತರ ರೂಪಾಯಿಗಳ ಆದಾಯ ಸಿಗುತಿತ್ತು. ಆದರೆ ಎರಡು ವರ್ಷಗಳ ಹಿಂದೆ ಬೆಂಗಳೂರಿನಿಂದ ಬಂದ ರೆಡ್ಡಿಯೊಬ್ಬರು ನಮ್ಮ ತೋಟದ ಮೇಲ್ಭಾಗದಲ್ಲಿ 18 ಎಕರೆ ತೋಟ ಖರೀದಿಸಿದರು. ನಂತರ ಅಲ್ಲಿ ಕಾಲು ಎಕರೆಯಷ್ಟು ಕೆರೆ ನಿರ್ಮಿಸಿ ಮೀನುಗಳನ್ನು ಬೆಳೆಸತೊಡಗಿದರು. ಒಂದು ವರ್ಷವಾಗಿತ್ತು ಅಷ್ಟೇ. ಈಗ ಬೆಟ್ಟ ಕುಸಿದಿರುವುದರಿಂದ ಅವರಿಗೂ ತೋಟ ಇಲ್ಲ , ನಮಗೆ ತೋಟ ಮತ್ತು ಮನೆಯೂ ಇಲ್ಲದಂತಾಗಿದೆ,” ಎಂದು ಕಣ್ಣೀರಿಡುತ್ತಾರೆ ಜೆ.ಪಿ. ಕಾವೇರಪ್ಪ.

ಜಮ್ಮಾ ಭೂಮಿಗಳಲ್ಲಿನ ಬೃಹತ್ ಮರಗಳ ನಾಶ, ದೊಡ್ಡ ಮರಗಳಿದ್ದ ಜಾಗದಲ್ಲಿ ಸಿಲ್ವರ್‌ ಮರಗಳನ್ನು ಬೆಳೆಸಿದ್ದು, ಕೃಷಿ ಭೂಮಿಯಲ್ಲಿ ಹೋಮ್‌ ಸ್ಟೇ ನಿರ್ಮಿಸಿದ್ದು, ಕೆರೆ ಈಜುಕೊಳಗಳ ನಿರ್ಮಾಣ ಮಾಡಿದ್ದು ಎಲ್ಲವೂ ಕೂಡ ಮನುಷ್ಯನ ಸ್ವಾರ್ಥಕ್ಕೆ ಮಾತ್ರ. ಈ ಸ್ವಾರ್ಥದ ಕಾರಣದಿಂದಲೇ ಇಂದು ಕೊಡಗು ವಿಕೋಪಕ್ಕೆ ಗುರಿಯಾಗಿದೆ.