samachara
www.samachara.com
‘ಒಂದೇ ಶಸ್ತ್ರ; ಎರಡು ಬಲಿ’: ಸನಾತನ ಸಂಸ್ಥೆ ಸಮಜಾಯಿಷಿಯನ್ನು ನಂಬೋದಕ್ಕೆ ಸಾಧ್ಯನಾ? 
COVER STORY

‘ಒಂದೇ ಶಸ್ತ್ರ; ಎರಡು ಬಲಿ’: ಸನಾತನ ಸಂಸ್ಥೆ ಸಮಜಾಯಿಷಿಯನ್ನು ನಂಬೋದಕ್ಕೆ ಸಾಧ್ಯನಾ? 

ಸೋಮವಾರ ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ವಿವಾದಿತ ಸಂಘಟನೆ ‘ಸನಾತನ ಸಂಸ್ಥೆ’ ಗೌರಿ ಲಂಕೇಶ್‌ ಹತ್ಯೆ ಮತ್ತು ನರೇಂದ್ರ ದಾಬೋಲ್ಕರ್‌ ಹತ್ಯೆ ಸಂಬಂಧ ಬಂಧಿತರಾದವರಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಸೋಮವಾರ ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ವಿವಾದಿತ ಸಂಘಟನೆ ‘ಸನಾತನ ಸಂಸ್ಥೆ’ ಗೌರಿ ಲಂಕೇಶ್‌ ಹತ್ಯೆ ಮತ್ತು ನರೇಂದ್ರ ದಾಬೋಲ್ಕರ್‌ ಹತ್ಯೆ ಸಂಬಂಧ ಬಂಧಿತರಾದವರಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದೆ. “ಆರೋಪಿಗಳು ಯಾವತ್ತೂ ಸಂಸ್ಥೆಯ ಭಾಗವಾಗಿರಲಿಲ್ಲ. ಅವರು ನಮ್ಮ ಸಭೆಗಳಲ್ಲಿ ಭಾಗವಹಿಸಿದ್ದರು ಅಷ್ಟೇ. ಮತ್ತು ಅವರೆಲ್ಲಾ ಹಿಂದುತ್ವದ ದೃಢ ಬೆಂಬಲಿಗರಾಗಿದ್ದರು. ಹಾಗಂಥ ಅವರೆಲ್ಲಾ ಸನಾತನ ಸಂಸ್ಥೆಯ ಭಾಗವೆಂದು ಹೇಳಲಾಗದು,” ಎಂಬುದಾಗಿ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್‌ ರಾಜ್‌ಹಾನ್ಸ್‌ ಹೇಳಿದ್ದಾರೆ.

ಮಹಾರಾಷ್ಟ್ರ ಆಂಟಿ ಟೆರರಿಸ್ಟ್‌ ಸ್ಕ್ವಾಡ್‌ (ಎಟಿಎಸ್), ಕರ್ನಾಟಕ ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಸನಾತನ ಸಂಸ್ಥೆ ಜತೆಗೆ ನಂಟು ಹೊಂದಿರುವ ಹಲವು ವ್ಯಕ್ತಿಗಳನ್ನು ಬಂಧಿಸಿದೆ.

ಈ ಬೆಳವಣಿಗೆ ಬೆನ್ನಲ್ಲೇ ಸೋಮವಾರ ಪತ್ರಿಕಾಗೋಷ್ಠಿ ನಡೆಸಿರುವ ರಾಜ್‌ಹಾನ್ಸ್‌ ಮತ್ತು ಸನಾತನ ಸಂಸ್ಥೆಯ ಇನ್ನೊಂದು ಅಂಗ ಸಂಸ್ಥೆ ಹಿಂದೂ ಜನಜಾಗೃತಿ ಸಂಸ್ಥೆಯ ಸುನಿಲ್‌ ಘಣವತ್‌, ಪೊಲೀಸರು ನಮ್ಮ ಸಾಧಕ್‌ (ಬೆಂಬಲಿಗರು) ರನ್ನು ಯಾವುದರಲ್ಲೂ ಹೆಸರಿಸಿಲ್ಲ ಎಂದು ವಾದಿಸಿದ್ದಾರೆ.

“ಇದು 2008 ರ ಪನ್ವೆಲ್ ಮತ್ತು ಥಾಣೆ ಬಾಂಬ್ ಸ್ಫೋಟ ಪ್ರಕರಣಗಳ ನಂತರ ಪ್ರಾರಂಭವಾದ ಬೇಟೆಯಾಗಿದೆ. ಆದರೆ ಪೊಲೀಸರು ಒಂದೇ ಒಂದು ಎಫ್ಐಆರ್ ಅಥವಾ ಚಾರ್ಜ್‌ಶೀಟ್‌ನಲ್ಲಿ ನಮ್ಮನ್ನು ಹೆಸರಿಸಿಲ್ಲ. ನಮ್ಮ ಸಂಘಟನೆಯನ್ನು ನಿಷೇಧಿಸಲು ಬೇಡಿಕೆಗಳು ಕೇಳಿ ಬಂದಿವೆ. ಆದರೆ ಈ ಬೇಡಿಕೆಗಳು ಆಧಾರವಿಲ್ಲದ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಕೂಡಿವೆ,” ಎಂದು ಘನವತ್‌ ತಮ್ಮದೇ ಶೈಲಿಯಲ್ಲಿ ಪ್ರತಿಪಾದಿಸಿದ್ದಾರೆ.

ಇದೇ ವೇಳೆ ಸಂವಿಧಾನದ ಪ್ರಸ್ತಾವನೆಯಿಂದ ಸೆಕ್ಯುಲರ್‌ (ಜಾತ್ಯಾತೀತ) ಪದವನ್ನು ತೆಗೆದು ಹಾಕಬೇಕು ಎಂದು ಅವರು ಬೇಡಿಕೆ ಮುಂದಿಟ್ಟಿದ್ದಾರೆ.

ಈ ಶಬ್ದವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ 1976ರಲ್ಲಿ ಸೇರಿಸಲು ಇಂದಿರಾ ಗಾಂಧಿ ಮತ್ತು ತುರ್ತು ಪರಿಸ್ಥಿತಿ ಕಾರಣ. “ರಾಜಕೀಯ ಒತ್ತಡದ ಸಂದರ್ಭದಲ್ಲಿ ಈ ಪದವನ್ನು ಸೇರಿಸಲಾಯಿತು. ಮತ್ತು ಈಗ ಈ ಪದ ವನ್ನು ಕೈ ಬಿಡಲು ಸಮಯ ಬಂದಿದೆ,” ಎಂದು ರಾಜ್‌ಹಾನ್ಸ್‌ ತಿಳಿಸಿದ್ದಾರೆ.

ಸನಾತನ ಸಂಸ್ಥೆ ಬಹಳ ಹಿಂದಿನಿಂದಲೂ ಈ ಪದವನ್ನು ಕೈ ಬಿಡಬೇಕು ಎಂದು ವಾದಿಸುತ್ತಲೇ ಬಂದಿದೆ. ಇದೀಗ ಮತ್ತೆ ಈ ಬೇಡಿಕೆಯನ್ನು ಇಟ್ಟಿರುವ ಸಂಸ್ಥೆ, ಶಬ್ದಕ್ಕೆ ಯಾವುದೇ ಸ್ಪಷ್ಟ ಅರ್ಥವಿಲ್ಲ. ಮತ್ತು ಇದನ್ನು ಸಂವಿಧಾನದಲ್ಲಿ ವಿವರಿಸಿಲ್ಲ. “ಹಿಂದೂಗಳಿಗೆ ವಿರುದ್ಧವಾಗಿ ಈ ದ್ವಂದ್ವಾರ್ಥವನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಸಂಸ್ಥೆಯನ್ನು ನಿಷೇಧಿಸುವ ಬೇಡಿಕೆ ಬಗ್ಗೆ ಕಿಡಿಕಾರಿರುವ ರಾಜ್‌ಹಾನ್ಸ್‌, ಸಂಸ್ಥೆಯನ್ನು ನಿಷೇಧ ಮಾಡಬೇಕು ಎಂಬ ಪ್ರಸ್ತಾವನೆ ರಾಜಕೀಯ ಪ್ರೇರಿತ ಮತ್ತು ಅನ್ಯಾಯದಿಂದ ಕೂಡಿದೆ ಎಂದಿರುವ ಅವರು “ಸಂಸ್ಥೆ ವಿರುದ್ಧ ಪೊಲೀಸರಿಗೆ ಎಡಪಂಥೀಯ ಬುದ್ಧಿಜೀವಿಗಳು ಮತ್ತು ಕಾಂಗ್ರೆಸ್ ಪ್ರೇರಣೆ ನೀಡುತ್ತಿವೆ,” ಎಂದು ಅವರು ದೂರಿದ್ದಾರೆ.

“ಎಡಪಂಥೀಯ ಬುದ್ಧಿಜೀವಿಗಳು ತಮ್ಮ ರಾಜಕೀಯ ಕನಸನ್ನು ವೃದ್ಧಿಸಿಕೊಳ್ಳಲು ಹಿಂದೂ ಸಂಘಟನೆಯನ್ನು ನಿಷೇಧಿಸುವಂತೆ ಬೇಡಿಕೆ ಇಡುತ್ತಿದ್ದಾರೆ. ಈ ಕಾರಣಕ್ಕೆ ನಾವು ದಾಳಿಗೆ ಗುರಿಯಾಗುತ್ತಿದ್ದೇವೆ,” ಎಂದು ರಾಜಹಾನ್ಸ್‌ ವಿವರಿಸಿದ್ದಾರೆ.

ಸರಣಿ ಬಂಧನಗಳು:

ಅಷ್ಟಕ್ಕೂ ಇಂಥಹದ್ದೊಂದು ಪತ್ರಿಕಾಗೋಷ್ಠಿ ಕರೆದು ಸನಾತನ ಸಂಸ್ಥೆ ಕೆಂಡಕಾರಲು ಕಾರಣವಾಗಿದ್ದು ಒಂದಷ್ಟು ಬಂಧನಗಳು. ಮೊದಲಿಗೆ ಆಗಸ್ಟ್‌ 10ರಂದು ಎಟಿಎಸ್‌ 40 ವರ್ಷ ಪ್ರಾಯದ ಹಿಂದೂ ಗೋವಂಶ್‌ ರಕ್ಷಾ ಸಮಿತಿಯ ಸದಸ್ಯ ಮತ್ತು ಸನಾತನ ಸಂಸ್ಥೆಯ ಬಗ್ಗೆ ಸಹಾನಭೂತಿ ಹೊಂದಿರುವ ವೈಭವ್‌ ರಾವತ್‌ ಎನ್ನುವಾತನನ್ನು ಬಂಧಿಸಿತ್ತು.

ಇದಲ್ಲದೆ 39 ವರ್ಷದ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ಎನ್ನುವ ಸಂಘಟನೆಯ ಸುಧನ್ವ ಗೊಂಢಾಲೆಕರ್‌ ಎಂಬಾತನನ್ನು ಸತಾರಾದಿಂದ ಬಂಧಿಸಲಾಗಿತ್ತು. ಈ ಶ್ರೀ ಶಿವಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆಯನ್ನು ಮನೋಹರ್‌ ಅಲಿಯಾಸ್‌ ಸಂಭಾಜಿ ಭಿಡೆ ಎನ್ನುವ ವ್ಯಕ್ತಿ ಮುನ್ನಡೆಸುತ್ತಿದ್ದಾರೆ. ಇದರ ಜತೆಗೆ ಹಿಂದೂ ಜನ ಜಾಗೃತಿ ಸಮಿತಿಯ ಶರದ್‌ ಕಲಸ್ಕರ್‌ನನ್ನು ಎಟಿಎಸ್‌ ಬಂಧಿಸಿತ್ತು.

ಇದಾದ ನಂತರ ಮಾಜಿ ಶಿವಸೇನೆ ಕಾರ್ಪೊರೇಟರ್‌ ಶ್ರೀಕಾಂತ್‌ ಪಂಗಾರ್ಕರ್‌ ಮತ್ತು ಶಿವಪ್ರತಿಷ್ಠಾನದದ ಸದಸ್ಯನೆನ್ನಲಾದ ಅವಿನಾಶ್‌ ಪವಾರ್‌ನನ್ನು ಬಂಧಿಸಿತ್ತು ಎಟಿಎಸ್‌. ಕಲಸ್ಕರ್‌ ವಿಚಾರಣೆ ವೇಳೆ ಸಚಿನ್‌ ಅಂಧುರೆ ಬಗ್ಗೆ ಬಾಯಿ ಬಿಟ್ಟಿದ್ದ. ಈತ ಮಹಾರಾಷ್ಟ್ರದ ಔರಂಗದಾಬಾದ್‌ನವನಾಗಿದ್ದು ಇವರಿಬ್ಬರು ದಾಭೋಲ್ಕರ್‌ ಹತ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಎಟಿಎಸ್‌ ಹೇಳಿದೆ. ಅಂಧುರೆ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯನಾಗಿದ್ದಾನೆ ಎನ್ನಲಾಗಿದೆ.

ಇನ್ನು ಎಟಿಎಸ್‌ ಆಗಸ್ಟ್‌ 10ರಂದು ನಲ್ಲಸೊಪಾರಾದಲ್ಲಿರುವ ವೈಭವ್‌ ರಾವತ್‌ ಮನೆಯಿಂದ ಭಾರೀ ಸ್ಫೋಟಕಗಳನ್ನು ವಶಕ್ಕೆ ಪಡೆದಿದೆ ಎಂದು ಹೇಳಿಕೊಂಡಿದೆ. ಈತನನ್ನು ಯಾವುದೇ ಕೊಲೆ ಪ್ರಕರಣಗಳಲ್ಲಿ ಹೆಸರಿಸಿಲ್ಲವಾದರೂ, ಈತ ಸನಾತನ ಸಂಸ್ಥೆಯ ವಿಚಾರ ಸಂಕಿರಣಗಳನ್ನು ಆಗಾಗ ಆಯೋಜನೆ ಮಾಡುತ್ತಾ ಸಾರ್ವಜನಿಕವಾಗಿ ಪರಿಚಿತ ಮುಖವಾಗಿದ್ದ. ಎಟಿಎಸ್‌ ಪ್ರಕಾರ ಹಿಂದೂ ಜನ ಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಕೈವಾಡವಿರುವ ದೊಡ್ಡದೊಂದು ಭಯೋತ್ಪಾದಕ ಜಾಲದಲ್ಲಿ ಈತನೂ ಇದ್ದಾನೆ ಎನ್ನಲಾಗಿದೆ.

ಈ ಎಲ್ಲಾ ಘಟನಾವಳಿಗಳ ಮಧ್ಯೆ ದಾಭೋಲ್ಕರ್‌ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ, ಧಾಬೋಲ್ಕರ್‌ ಮತ್ತು ಗೌರಿ ಲಂಕೇಶ್‌ ಹತ್ಯೆಗೆ ಬಳಕೆಯಾದ ಶಸ್ತ್ರಾಸ್ತ್ರ ಒಂದೇ ಎಂದು ಭಾನುವಾರ ಪುಣೆಯ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹೇಳಿದೆ. ಅಂಧುರೆಯನ್ನು ಕಸ್ಟಡಿಗೆ ಕೇಳುವ ಅವಧಿಯಲ್ಲಿ ಈ ಹೇಳಿಕೆ ನೀಡಿದೆ.

ಇನ್ನು ಕರ್ನಾಟಕದ ಎಸ್‌ಐಟಿ ಕೂಡ ಗೊಂಢಾಲೆಕರ್‌ ಹಿಂದೂ ಜನಜಾಗೃತಿ ಸಮಿತಿ ಜತೆ ದೀರ್ಘ ಒಡನಾಟ ಇಟ್ಟುಕೊಂಡಿದ್ದ ಎಂದು ಹೇಳಿದ್ದು ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಈತನ ಕೈವಾಡದ ಬಗ್ಗೆ ತನಿಖೆ ನಡೆಸುತ್ತಿದೆ. ಪಂಗಾರ್ಕರ್‌ ಕೂಡ ಜನಜಾಗೃತಿ ಸಮಿತಿ ಜತೆ ನಂಟು ಹೊಂದಿದ್ದ ಎಂದು ಕರ್ನಾಟಕ ಪೊಲೀಸರು ವಾದಿಸಿದ್ದಾರೆ.

ಆದರೆ ಸನಾತನ ಸಂಸ್ಥೆಯ ವಕ್ತಾರರು ಮಾತ್ರ ನಾವು ಕೇವಲ ಕೇವಲ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇವೆ ಮತ್ತು ಯಾವುದೇ ಕೊಲೆಗಳು ಮತ್ತು ಭಯೋತ್ಪಾದಕ ಕೃತ್ಯಗಳಿಗೂ ನಮಗೂ ಸಂಬಂಧವಿಲ್ಲ ಎಂದಿದ್ದಾರೆ. ಆದರೆ ಪತ್ರಿಕಾಗೋಷ್ಠಿಗೆ ಬಂದಿದ್ದ ಪತ್ರಕರ್ತರು ಸಂಸ್ಥೆಯ ಮುಖವಾಣಿ ‘ಸನಾತನ್‌ ಪ್ರಭಾತ್‌’ನಲ್ಲಿ ಉದ್ರೇಕಕಾರಿ ವಿಚಾರಗಳನ್ನು ಪ್ರಕಟಗೊಳಿಸುವ ಸಂಬಂಧ ಕೇಳಲಾದ ಪ್ರಶ್ನೆಗೆ ಇಬ್ಬರೂ ಉತ್ತರ ನೀಡಿಲ್ಲ. ಹೀಗೆ ಸರಣಿ ಆರೋಪಗಳಿಗೆ ಗುರಿಯಾಗಿದೆ ಸನಾತನ ಸಂಸ್ಥೆ.

ಹಾಗಿದ್ದರೆ ‘ಸನಾತನ ಸಂಸ್ಥೆ’ ಎಂದರೆ ಇಷ್ಟೆನಾ? ಸಂಸ್ಥೆಯ ವಕ್ತಾರರು ಹೇಳಿದ್ದೇ ಸರಿಯಾ? ಇದರ ಹಿಂದಿನ ಇತಿಹಾಸಗಳು ಏನೇನು? ಅದರ ಎಲ್ಲಾ ವಿವರಗಳನ್ನು ‘ಸಮಾಚಾರ’ ಎಳೆ ಎಳೆಯಾಗಿ ನಿಮ್ಮ ಮುಂದೆ ಬಿಚ್ಚಿಡಲಿದೆ. ನಿರೀಕ್ಷಿಸಿ...