samachara
www.samachara.com
ಸಿದ್ದು ಸಿಎಂ ಆಸೆ, ಎಚ್‌ಡಿಕೆ ಅಭದ್ರತೆ; ಇನ್ನೂ ಗಟ್ಟಿಯಾಗದ ‘ಸಮ್ಮಿಶ್ರ’ ತಳಪಾಯ
COVER STORY

ಸಿದ್ದು ಸಿಎಂ ಆಸೆ, ಎಚ್‌ಡಿಕೆ ಅಭದ್ರತೆ; ಇನ್ನೂ ಗಟ್ಟಿಯಾಗದ ‘ಸಮ್ಮಿಶ್ರ’ ತಳಪಾಯ

ಅಧಿಕಾರದಿಂದ ದೂರ ಇರುವ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದರೆ, ಅಧಿಕಾರದಲ್ಲೇ ಇರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭದ್ರತೆ ಕಾಡುತ್ತಿರುವಂತಿದೆ. 

ಕೇರಳ ಹಾಗೂ ಕೊಡಗು ಪ್ರವಾಹದಿಂದ ಹಿನ್ನೆಲೆಗೆ ಸರಿದಿದ್ದ ರಾಜ್ಯ ರಾಜಕೀಯ ಈಗ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ತಾವು ಮತ್ತೆ ಮುಖ್ಯಮಂತ್ರಿಯಾಗುವ ಆಸೆಯನ್ನು ಸಿದ್ದರಾಮಯ್ಯ ಹೊರಹಾಕಿದ್ದರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಭವಿಷ್ಯದ ಅಭದ್ರತೆಯ ಬಗ್ಗೆ ಮಾತನಾಡಿದ್ದಾರೆ.

“ಸರಕಾರವನ್ನು ಅತಂತ್ರಗೊಳಿಸುವ ಸಂಚುಗಳು ನಡೆಯುತ್ತಿರುವ ಬಗ್ಗೆ ನನಗೆ ಅರಿವಿದೆ. ನಾನು ನನ್ನ ಕುರ್ಚಿ ಉಳಿಸಿಕೊಳ್ಳುವ ಬಗ್ಗೆ ಯೋಚಿಸುವುದಿಲ್ಲ. ಮಾಡಬೇಕಿರುವ ಒಳ್ಳೆಯ ಕೆಲಸಗಳ ಕಡೆಗೆ ಮಾತ್ರ ನನ್ನ ಗಮನ” ಎಂದಿದ್ದಾರೆ ಕುಮಾರಸ್ವಾಮಿ.

“ಜನರ ಆಶೀರ್ವಾದ ಇದ್ದರೆ ಮಾತ್ರ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ” ಎಂದಿದ್ದ ಸಿದ್ದರಾಮಯ್ಯ ತಮ್ಮ ಈ ಹೇಳಿಕೆಗೆ ಸ್ಪಷ್ಟನೆ ನೀಡಿ, “ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದಿದ್ದೆ. ಅದಕ್ಕೆ ಇನ್ನೂ 5 ವರ್ಷ ಇದೆ” ಎಂದು ಹೇಳಿದ್ದಾರೆ.

ಆದರೆ, ಸಿದ್ದರಾಮಯ್ಯ ಹೆಸರನ್ನು ಉಲ್ಲೇಖಿಸದೆ ಮಾತನಾಡಿರುವ ಕುಮಾರಸ್ವಾಮಿ ತಮ್ಮ ಸರಕಾರ ಅಲುಗಿಸಲು ಸಂಚು ನಡೆಸುತ್ತಿರುವವರ ಪೈಕಿ ಸಿದ್ದರಾಮಯ್ಯ ಕೂಡಾ ಒಬ್ಬರು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಬೆಂಬಲಕ್ಕೆ ಹಲವು ಕಾಂಗ್ರೆಸ್‌ ಮುಖಂಡರು ಮುಂದಾಗಿದ್ದಾರೆ. ಅಲ್ಲದೆ, ಸಮ್ಮಿಶ್ರ ಸರಕಾರಕ್ಕೆ ಈಗ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಮೂರು ತಿಂಗಳು ಅಧಿಕಾರ ನಡೆಸಿರುವ ಸಮ್ಮಿಶ್ರ ಸರಕಾರದಲ್ಲಿ ಇಂದಿಗೂ ಎಲ್ಲವೂ ಸರಿಯಾಗಿಲ್ಲ ಎಂಬುದು ರಾಜ್ಯ ರಾಜಕೀಯದೊಳಗಿನ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಸಂಪುಟ ವಿಸ್ತರಣೆ ಹತ್ತಿರದಲ್ಲಿರುವಾಗ ಸಿದ್ದರಾಮಯ್ಯ ತಾವು ಮತ್ತೆ ಮುಖ್ಯಮಂತ್ರಿಯಾಗುವ ಮಾತನಾಡುವುದು ಹಾಗೂ ಮತ್ತೆ ಅದಕ್ಕೆ ಸ್ಪಷ್ಟನೆ ನೀಡುವುದು, ಸಿದ್ದರಾಮಯ್ಯ ಹೆಸರನ್ನು ಉಲ್ಲೇಖಿಸದೇ ಕುಮಾರಸ್ವಾಮಿ ತಮ್ಮ ಸರಕಾರದ ವಿರುದ್ಧ ಸಂಚು ನಡೆಯುತ್ತಿದೆ ಎಂದು ಹೇಳುತ್ತಿರುವುದು ತೆರೆಯ ಹಿಂದಿನ ರಾಜಕೀಯವನ್ನು ತೆರೆಯ ಮುಂದೆ ಇಡುವಂತಿದೆ.

ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ಸಂಬಂಧ ಚೆನ್ನಾಗಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಸಂಗೊಳ್ಳಿ ರಾಯಣ್ಣ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೋಗುವವರೆಗೂ ಕಾರು ಬಿಟ್ಟು ಇಳಿಯದ ಹಾಗೂ ಸಮ್ಮಿಶ್ರ ಸರಕಾರ ಅತಂತ್ರ ಸ್ಥಿತಿಯಲ್ಲಿದೆ ಎಂದು ಮತ್ತೆ ಮತ್ತೆ ಅಸಹಾಯಕತೆ ವ್ಯಕ್ತಪಡಿಸುವ ಕುಮಾರಸ್ವಾಮಿ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧದ ಅಸಮಾಧಾನವನ್ನು ಹೊರಹಾಕುತ್ತಲೇ ಬರುತ್ತಿದ್ದಾರೆ.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ತಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದ ಸಿದ್ದರಾಮಯ್ಯ ನಂಬಿಕೆಯನ್ನು ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹುಸಿಗೊಳಿಸಿದೆ. ಅಧಿಕಾರ ಕಳೆದುಕೊಂಡರೂ ಶಾಡೊ ಸಿಎಂ ಆಗಬಹುದಾದ ಸಾಧ್ಯತೆಗಳನ್ನೂ ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಎಂಬ ಹುದ್ದೆಯನ್ನು ಬಿಟ್ಟರೆ ಸಿದ್ದರಾಮಯ್ಯ ಇಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಾದಾಮಿ ಕ್ಷೇತ್ರದ ಶಾಸಕರಷ್ಟೇ.

ಅಧಿಕಾರ ಕಳೆದುಕೊಂಡಿರುವ ಹತಾಶೆಯೂ ಸಿದ್ದರಾಮಯ್ಯ ಅವರಿಂದ ಮತ್ತೆ ಅಧಿಕಾರ ಪಡೆಯುವ ಮಾತನ್ನಾಡಿಸಿರಲೂಬಹುದು. ಇಲ್ಲವಾದರೆ ಏನೇ ಸ್ಪಷ್ಟನೆ ಕೊಟ್ಟರೂ 5 ವರ್ಷ ಮುಂದಿರುವ ಚುನಾವಣೆಯ ಲೆಕ್ಕಾಚಾರವನ್ನು ಈಗಲೇ ಹೇಳುವ ರಾಜಕಾರಣಿಯಲ್ಲ ಸಿದ್ದರಾಮಯ್ಯ. ಮತ್ತೆ ಮುಖ್ಯಮಂತ್ರಿಯಾಗುವ ಆಸೆ ಅವರಲ್ಲಿ ಇರುವುದೇ ಅವರಿಂದ ಆ ಮಾತನ್ನು ಹೇಳಿಸಿರಬಹುದು.

ಅಧಿಕಾರ ಕಳೆದುಕೊಂಡ ಚಡಪಡಿಕೆಯಲ್ಲಿ ಮತ್ತೆ ಅಧಿಕಾರ ಹೊಂದಬೇಕೆಂಬ ಆಸೆ ರಾಜಕಾರಣಿಗಳಿಗೆ ಸಹಜ ಕೂಡಾ. ಚಾಮುಂಡೇಶ್ವರಿ ಕ್ಷೇತ್ರದ ಸೋಲು ಹಾಗೂ ತನ್ನ ನೇತೃತ್ವದಲ್ಲೇ ಚುನಾವಣೆ ಎದುರಿಸಿದರೂ, ಸಮ್ಮಿಶ್ರ ಸರಕಾರ ರಚನೆಯಾಗಿ ಕಾಂಗ್ರೆಸ್‌ ಅಧಿಕಾರದ ಪಾಲುದಾರ ಪಕ್ಷವಾದರೂ ತಾವು ಅಧಿಕಾರ ರಾಜಕಾರಣದಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಸಿದ್ದರಾಮಯ್ಯ ಅವರಿಂದ ಆ ಮಾತನ್ನು ಆಡಿಸಿರಬಹುದು. ಆದರೆ, ಕಾಂಗ್ರೆಸ್‌ನಲ್ಲಿ ಇದೆಲ್ಲವೂ ಅಂದುಕೊಂಡಷ್ಟು ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತು.

ಮುಂದಿನ 5 ವರ್ಷಗಳ ಹೊತ್ತಿಗೆ ರಾಜ್ಯ ರಾಜಕೀಯ ಏನಾಗಿರಲಿದೆ, ಯಾವ ಪಕ್ಷ ಬಲಗೊಂಡಿರಲಿದೆ, ಒಂದು ವೇಳೆ ಕಾಂಗ್ರೆಸ್‌ ಪಕ್ಷವೇ ಬಹುಮತ ಪಡೆದರೂ ಮುಖ್ಯಮಂತ್ರಿ ಹುದ್ದೆ ಯಾರ ಪಾಲಾಗಲಿದೆ ಎಂಬುದನ್ನು ಈಗಲೇ ನಿರ್ಧರಿಸುವಷ್ಟು ಸುಲಭವಿಲ್ಲ ಕಾಂಗ್ರೆಸ್‌ ಪಕ್ಷದ ರಾಜಕಾರಣ. ಅಲ್ಲದೆ 2019ರ ಚುನಾವಣೆಯ ಕನಸು ಕಾಣುತ್ತಿರುವ ಪ್ರಮುಖ ಪಕ್ಷಗಳು ರಾಜ್ಯ ರಾಜಕಾರಣವನ್ನೇನೂ ಮರೆತಿಲ್ಲ. ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಆಸೆಯನ್ನು ಇನ್ನೂ ಬಿಜೆಪಿ ಬಿಟ್ಟಿಲ್ಲ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಂಪುಟ ವಿಸ್ತರಣೆ ಸಮೀಪಿಸುತ್ತಿರುವಂತೆ ರಾಜ್ಯ ರಾಜಕೀಯದ ಚಿತ್ರಣವೇ ಬದಲಾಗುತ್ತದೆ ಎನ್ನಲಾಗುತ್ತಿದೆ. ಸದ್ಯಕ್ಕೆ ಮೌನಿಯಾಗಿರುವ ಬಿಜೆಪಿ ಪಕ್ಷ ಜೆಡಿಎಸ್‌- ಕಾಂಗ್ರೆಸ್‌ ನಡುವಿನ ಒಡಕನ್ನು ಲಾಭವಾಗಿಸಿಕೊಳ್ಳದೆ ಸುಮ್ಮನಿರುವುದಿಲ್ಲ. ಸಮ್ಮಿಶ್ರ ಸರಕಾರಕ್ಕೆ ಎಷ್ಟರ ಮಟ್ಟಿಗೆ ಒಡಕಾಗುತ್ತದೆಯೋ ಅಷ್ಟೂ ಬಿಜೆಪಿ ಪಾಲಿಗೆ ಲಾಭವಾಗಲಿದೆ. ಅಲ್ಲದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ 10ರಿಂದ 12 ಶಾಸಕರನ್ನು ಸೆಳೆಯುವ ಪ್ರಯತ್ನವನ್ನೂ ಬಿಜೆಪಿ ಪೂರ್ತಿಯಾಗಿ ಕೈಬಿಟ್ಟಿಲ್ಲ.

ಒಂದೊಮ್ಮೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಳಿಕ ಬದಲಾಗುವ ರಾಜಕೀಯ ಸನ್ನಿವೇಶದಲ್ಲಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಶಾಸಕರ ಅಸಮಾಧಾನವನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರಿಯಾಗಿ ನಿಭಾಯಿಸದೇ ಇದ್ದರೆ ಬಿಜೆಪಿ ಮತ್ತೆ ಕುದುರೆ ವ್ಯಾಪಾರಕ್ಕಿಳಿಯದೆ ಸುಮ್ಮನೆ ಕೂರುತ್ತದೆ ಎನ್ನುವಂತಿಲ್ಲ. ಇಂತಹ ರಾಜಕೀಯ ಸನ್ನಿವೇಶದಲ್ಲಿ ಹನಿಮೂನ್‌ ಪೀರಿಯಡ್‌ ಮುಗಿಸುತ್ತಿರುವ ಸಮ್ಮಿಶ್ರ ಸರಕಾರದ ಸಂಸಾರ ಎಷ್ಟು ದಿನ ಸುಸೂತ್ರವಾಗಿ ನಡೆಯುತ್ತದೆ ಎಂದು ಹೇಳುವುದು ಕಷ್ಟ.