samachara
www.samachara.com
ಕುರುಡು ನಂಬಿಕೆಯ ಕುಣಿತ; ಜೈಲು ಸೇರಿ ವರ್ಷವಾದರೂ ಕುಗ್ಗದ ‘ಪಿತಾಜಿ’ ಪ್ರಭಾವ!
COVER STORY

ಕುರುಡು ನಂಬಿಕೆಯ ಕುಣಿತ; ಜೈಲು ಸೇರಿ ವರ್ಷವಾದರೂ ಕುಗ್ಗದ ‘ಪಿತಾಜಿ’ ಪ್ರಭಾವ!

‘ಶ್ರೀರಾಮ ಅವನದಲ್ಲದ ತಪ್ಪಿಗೆ 14 ವರ್ಷ ವನವಾಸ ಅನುಭವಿಸಿದ. ಅದೇ ರೀತಿ ರಾಮ್‌ ರಹೀಮ್‌ ಸಿಂಗ್‌ ತಮ್ಮದಲ್ಲದ ತಪ್ಪಿಗೆ ಜೈಲು ಸೇರಿದ್ದಾರೆ’ - ಇದು ರಾಮ್‌ ರಹೀಮ್‌ ಬಗ್ಗೆ ಅಂಧವಿಶ್ವಾಸ ಹೊಂದಿರುವ ಭಕ್ತೆಯೊಬ್ಬಳ ಮಾತು.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಸ್ವಘೋಷಿತ ದೇವ ಮಾನವ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್‌ಮಿತ್‌ ರಾಮ್‌ ರಹೀಮ್‌ ಸಿಂಗ್‌ಗೆ ಸಿಬಿಐ ವಿಶೇಷ ನ್ಯಾಯಾಲಯ 2017ರ ಆಗಸ್ಟ್‌ 25ರಂದು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆಶ್ರಮದಲ್ಲಿನ ಇಬ್ಬರು ಸಾಧ್ವಿಯರ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ರಾಮ್‌ ರಹೀಮ್‌ ಸಿಂಗ್‌ ದೀರ್ಘಾವಧಿಯ ಜೈಲು ಶಿಕ್ಷೆಗೆ ಗುರಿಯಾಗಬೇಕಾಯಿತು. ಈಗ ರಾಮ್‌ ರಹೀಮ್‌ ಸಿಂಗ್‌ ಜೈಲು ಸೇರಿ 1 ವರ್ಷ ಕಳೆದಿದೆ. ಅದರೂ ಕೂಡ ಆತನ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಿಲ್ಲ, ಆತನ ಭಕ್ತರ ಅಂಧ ವಿಶ್ವಾಸ ತಗ್ಗಿಲ್ಲ.

ಗುರ್‌ಮಿತ್‌ ರಾಮ್‌ ರಹೀಮ್‌ ಸಿಂಗ್‌ಗೆ ದೇಶಾದ್ಯಂತ 6 ಕೋಟಿಗೂ ಹೆಚ್ಚು ಜನ ಭಕ್ತರಿದ್ದಾರೆ. ಪಂಜಾಬ್‌, ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ ರಾಮ್‌ ರಹೀಮ್‌ ಪ್ರಭಾವ ಹೆಚ್ಚು. ಈ ಭಕ್ತರು ಯಾವುದೇ ಒಂದು ವರ್ಗ, ಜಾತಿ, ಧರ್ಮಕ್ಕೆ ಮಾತ್ರ ಸೀಮಿತರಾದವರಲ್ಲ. ಎಲ್ಲಾ ಜಾತಿ, ಧರ್ಮಗಳಲ್ಲಿನ ಅನಕ್ಷರಸ್ಥರಿಂದ ಹಿಡಿದು ಅತ್ಯುನ್ನತ ಪದವಿಗಳನ್ನು ಪಡೆದವರೂ ಕೂಡ ರಾಮ್‌ ರಹೀಮ್‌ ಭಕ್ತ ಸಮೂಹದ ಭಾಗವಾಗಿದ್ದಾರೆ.

ಕಳೆದ ವರ್ಷ ಗುರ್‌ಮಿತ್‌ಗೆ 20 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆ ಹರಿಯಾಣ, ಪಂಜಾಬ್‌ ರಾಜ್ಯಗಳ ಹಲವಾರು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಗಲಭೆಯಲ್ಲಿ 30ಕ್ಕೂ ಹೆಚ್ಚು ಜನ ಗುರ್‌ಮಿತ್‌ ಅನುಯಾಯಿಗಳು ಮೃತಪಟ್ಟರಲ್ಲದೇ, ಮಾಧ್ಯಮ ಪ್ರತಿನಿಧಿಗಳ ಮೇಲೂ ಹಲ್ಲೆ ನಡೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಜನ ಬಂಧಿಯಾಗಿ, ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಜೈಲಿನಿಂದ ಹೊರಬಂದ ನಂತರವೂ ಕೂಡ ಈ ಭಕ್ತರ ರೋಷಾವೇಷಗಳು ಕಡಿಮೆಯಾಗಿಲ್ಲ. ಹಿಂಸಾಚಾರದಿಂದ ಮೃತಪಟ್ಟ ಭಕ್ತರನ್ನು ಧರ್ಮಕ್ಕಾಗಿ ಬಲಿಯಾದವರು ಎಂದೇ ಕರೆಯುವ ಈ ಅನುಯಾಯಿಗಳು, ಜಗತ್ತು ಯಾವಾಗಲೂ ಕೂಡ ಒಳ್ಳೆಯದನ್ನು ತುಳಿಯುವ ಪ್ರಯತ್ನ ಮಾಡುತ್ತಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ರಾಮ್‌ ರಹೀಮ್‌ ಪರ ವಾದಿಸಿದ್ದ ವಕೀಲ ಜಾಸ್ಮೆರ್‌ ಚಾಂದ್‌ ಕೂಡ ಆತನ ಭಕ್ತರೇ. ಅವರು ಹೇಳುವಂತೆ ಮೊದಲ ಹಂತದಲ್ಲಿ ಸರಿಯಾಗಿ ವಾದಿಸಲು ಸಾಧ್ಯವಾಗಲಿಲ್ಲ. ವಿಚಾರಣೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ ಎಂದೂ ಕೂಡ ತಿಳಿದಿರಲಿಲ್ಲ. ಈ ಪ್ರಕರಣವನ್ನು ಇಲ್ಲಿಗೇ ಬಿಡಲು ಅವರು ಸಿದ್ಧರಿಲ್ಲ. ಮುಂದಿನ ದಿನಗಳಲ್ಲಿ ರಾಮ್‌ ರಹೀಮ್‌ ಬಿಡುಗಡೆಯಾಗುತ್ತಾರೆ ಎಂಬ ಆಕಾಂಕ್ಷೆ ಅವರಲ್ಲಿದೆ.

ರಾಮ್‌ ರಹೀಮ್‌ ಭಕ್ತೆ ನಾನ್ಹಿ ದೇವಿಗೆ ಗುರುಮಿತ್‌ ರಾಮ್‌ ರಹೀಮ್‌ ಸಿಂಗ್‌ ರಾಮನ ಅಪರಾವತಾರದಂತೆಯೇ ಕಾಣುತ್ತಾನೆ. ನಾನ್ಹಿ ದೇವಿ ಹೇಳುವಂತೆ ಶ್ರೀರಾಮ ಅವನದಲ್ಲದ ತಪ್ಪಿಗೆ 14 ವರ್ಷ ವನವಾಸ ಅನುಭವಿಸಿದ್ದ. ಅದೇ ರೀತಿ ರಾಮ್ ರಹೀಮ್‌ ಕೂಡ ಸುಳ್ಳು ಕೇಸಿನಿಂದಾಗಿ ಜೈಲಿಗೆ ಹೋಗಿದ್ದಾನಂತೆ. ಶ್ರೀರಾಮ ಜಗತ್ಪ್ರಸಿದ್ಧನಾದಂತೆ ರಾಮ್‌ ರಹೀಮನೂ ಆಗುತ್ತಾನೆ ಎಂಬುದು ಆಕೆಯ ಕುರುಡು ನಂಬಿಕೆ. ಇನ್ನೂ ಕೆಲವು ಭಕ್ತರ ಪ್ರಕಾರ ರಾಮ್‌ ರಹೀಮ್‌ಗೆ ತಾನು ಜೈಲಿಗೆ ಹೋಗುತ್ತೇನೆ ಎನ್ನುವುದು ಮುಂಚೆಯೇ ತಿಳಿದಿತ್ತಂತೆ.

ರಾಮ್‌ ರಹೀಮ್‌ ಜೈಲು ಸೇರಿ ಒಂದು ವರ್ಷವಾಯಿತು. ಆದರೆ ಈಗಲೂ ಕೂಡ ಆತನ ಭಕ್ತಾದಿಗಳ ಕಣ್ಣಿನಲ್ಲಿ ಆತ ದೇವರಾಗಿಯೇ ಉಳಿದುಕೊಂಡಿದ್ದಾನೆ. ಪ್ರತಿ ಭಾನುವಾರ ಆತನ ಭಕ್ತರೆಲ್ಲಾ ಪ್ರಾರ್ಥನಾ ಮಂದಿರದಲ್ಲಿ ಸೇರುತ್ತಾರೆ. ರಾಮ್‌ ರಹೀಮನ ಬಿಡುಗಡೆಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅವರೆಲ್ಲರ ಪ್ರಕಾರ ಅತ್ಯಾಚಾರ ಪ್ರಕರಣ ಎನ್ನುವುದು ರಾಮ್‌ ರಹೀಮ್‌ನ ಸಾಮ್ರಾಜ್ಯವನ್ನು ಕೆಡವಲು ಸರಕಾರ ರೂಪಿಸಿದ ಕುತಂತ್ರ.

ಡೇರಾ ಸಚ್ಚಾ ಸೌದಾ ಎಲ್ಲಿಲ್ಲಿ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿದೆಯೋ ಅಲ್ಲೆಲ್ಲಾ ಧಾರ್ಮಿಕತೆಯ ಜತಗೆ ರಾಜಕಾರಣವೂ ಬೆಸೆದುಕೊಂಡಿದೆ. ಧಾರ್ಮಿಕತೆ ಮತ್ತು ರಾಜಕಾರಣಗಳು ಒಂದನ್ನೊಂದು ಬಿಟ್ಟಿರಲಾರದಷ್ಟು ತಳಕು ಹಾಕಿಕೊಂಡಿವೆ. ಅಲ್ಲಿನ ಸ್ಥಳಿಯರೇ ಹೇಳುವಂತೆ ರಾಮ್‌ ರಹೀಮ್‌ ಜೈಲಿಗೆ ಹೋದ ನಂತರದಿಂದ ರಾಜಕೀಯ ಮುಖಂಡರು ರಾಮ್‌ ರಹೀಮ್ ಭಕ್ತರ ಸಂಖ್ಯೆ ಹೆಚ್ಚಿರುವ ಕೈತಾಲ್‌, ಜಿಂದ್‌, ಕುರುಕ್ಷೇತ್ರ, ಕರ್ನಾಲ್, ಅಂಬಾಲ ಮತ್ತು ಯಮುನಾನಗರ ಜಿಲ್ಲೆಗಳಿಗೆ ಕಾಲಿಡಲೂ ಕೂಡ ಹೆದರುತ್ತಾರೆ. ಮುಂದಿನ ಚುನಾವಣೆಗಳಲ್ಲಿ ‘ನೋಟಾ’ ಆಯ್ಕೆಗೆ ಮುಂದಾಗುವುದೋ ಅಥವಾ ‘ಪಿತಾಜಿ’ (ರಾಮ್‌ ರಹೀಮ್‌ನನ್ನು ಅನುಯಾಯಿಗಳು ತಂದೆ ಸಮಾನ ಎಂದುಕೊಂಡಿದ್ದು, ಆಪ್ತವಾಗಿ ಕರೆಯುವುದು ಪಿತಾಜಿ ಎಂದೇ) ರಾಮ್ ರಹೀಮ್‌ನ ಅನುಯಾಯಿಗಳನ್ನೇ ಚುನಾವಣೆಗೆ ನಿಲ್ಲಿಸುವುದೋ ಎಂಬ ಗೊಂದಲದಲ್ಲಿ ರಾಮ್‌ ರಹೀಮನ ಭಕ್ತಾದಿಗಳಿದ್ದಾರೆ.

ರಾಮ್‌ ರಹೀಮ್‌ ಜೈಲು ಸೇರಿದ ನಂತರ ರಾಜಕಾರಣಿಗಳು ಅದರ ಸುತ್ತ ತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ. 2014ರ ಲೋಕಸಭಾ ಚುನಾವಣೆ ಮತ್ತು ಹರಿಯಾಣ ವಿಧನಸಭಾ ಚುನಾವಣೆಗಳಲ್ಲಿ ಡೇರಾ ಬಿಜೆಪಿಗೆ ಬೆಂಬಲ ಸೂಚಿಸಿತ್ತು. ಈಗಲೂ ನಮಗೇ ಬೆಂಬಲ ನೀಡುತ್ತದೆ ಎಂಬ ನಂಬಿಕೆಯಲ್ಲಿ ಬಿಜೆಪಿ ಪಕ್ಷವಿದೆ. ಇನ್ನೊಂದೆಡೆ ರಾಷ್ಟ್ರೀಯ ಲೋಕ ದಳದ ನಾಯಕ ಅಭಯ್‌ ಚೌಟಾಲ ನಮಗೇ ಬೆಂಬಲ ದೊರೆಯುತ್ತದೆಂಬ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸಿಗರದ್ದೂ ಇದೇ ಕತೆ. ಒಟ್ಟಾರೆ ಇಡೀ ಪ್ರದೇಶದಲ್ಲಿ ಇವತ್ತಿಗೂ ಕೂಡ ಯಾರು ಗೆಲ್ಲಬೇಕು, ಯಾರು ಸೋಲಬೇಕು ಎನ್ನುವುದನ್ನು ರಾಮ್ ರಹೀಮ್‌ ಸಿಂಗ್‌ನ ಡೇರಾ ಸಚಾ ಸೌದಾ ತೀರ್ಮಾನಿಸುವ ಸ್ಥಾನದಲ್ಲಿದೆ.

ಈ ರಾಜಕೀಯ ಪ್ರಭಾವ ಇಂದು ನಿನ್ನೆಯದೇನಲ್ಲ. 2007ರ ಪಂಜಾಬ್‌ ವಿಧಾನಸಭಾ ಚುನಾವಣೆಗಳಲ್ಲಿ ಡೇರಾ ಕಾಂಗ್ರೆಸ್‌ ಪಕ್ಷಕ್ಕೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿತ್ತು. 2012ರಲ್ಲಿ ಕೂಡ ಕಾಂಗ್ರೆಸ್‌ ಪರವಾಗಿದ್ದ ಡೇರಾ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳವನ್ನು ಬೆಂಬಲಿಸಿತು. 2017ರ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿಯೂ ಕೂಡ ಬಿಜೆಪಿ ಪರವಾಗಿತ್ತಾದರೂ, 10 ವರ್ಷದ ನಂತರ ಕಾಂಗ್ರೆಸ್‌ ಜಯ ಗಳಿಸಿತ್ತು. ಆದರೆ ಈಗ ರಾಮ್‌ ರಹೀಮ್‌ ಸಿಂಗ್‌ ಜೈಲುವಾಸಕ್ಕೆ ತೆರಳಿರುವ ಕಾರಣ ಆತನ ಅನುಯಾಯಿಗಳು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬ ಚಿಂತೆ ಎಲ್ಲರಲ್ಲಿದೆ.

ಗುರ್‌ಮಿತ್‌ ರಾಮ್‌ ರಹೀಮ್‌ ಸಿಂಗ್‌ ಬಿಟ್ಟು, ತಮ್ಮನ್ನು ತಾವು ದೇವ ಮಾನವರು ಎಂದು ಕರೆದುಕೊಂಡ ಅಸ್ಸಾರಾಮ್‌ ಬಾಪು ಜೈಲು ಸೇರಿದರೂ ಕೂಡ ಆತನ ಅನುಯಾಯಿಗಳ ಕಣ್ಣಿನಲ್ಲಿ ಆತನೂ ದೇವಮಾನವನೇ ಆಗಿದ್ದಾನೆ. ಮೂಢ ಭಕ್ತರು ಇವರ ಫೋಟೊಗಳನ್ನು ಇಟ್ಟು ಪೂಜಿಸುವುದು ಇಂದಿಗೂ ಮುಂದುವರಿದಿದೆ.

ಗುರುಗಳ ಸ್ಥಾನದಲ್ಲಿ ಸ್ವಾಮೀಜಿಯಾಗಿದ್ದವರು ಸಾಕ್ಷಾತ್‌ ದೇವರ ಸ್ವರೂಪ ಎಂದು ಭಾವಿಸುವ ಭಾರತೀಯರು, ಅವರು ಎಡವಿ ಬಿದ್ದರೂ ಕೂಡ ಅವರ ಮೀಸೆ ಮಣ್ಣಾಗಿಲ್ಲ ಎಂದೇ ವಾದಿಸುತ್ತಾರೆ. ಎಷ್ಟೇ ಶಿಕ್ಷಣ ಪಡೆದು ಎಂತಹದ್ದೇ ಹುದ್ದೆಗಳಲ್ಲಿದ್ದರೂ ಕೂಡ ವ್ಯಕ್ತಿಪೂಜೆಗೆ ಇಳಿಯುತ್ತಾರೆ. ಜೈಲು ಸೇರಿ ವರ್ಷವಾದರೂ ಕೂಡ ಕಿಂಚಿತ್ತು ಪ್ರಭಾವವನ್ನೂ ಕಳೆದುಕೊಳ್ಳದ ರಾಮ್‌ ರಹೀಮ್‌ ಸಿಂಗ್‌ ಮತ್ತು ಆತನ ಅನುಯಾಯಿಗಳು ಭಾರತೀಯರ ಮೂಢನಂಬಿಕೆ ಮತ್ತು ವ್ಯಕ್ತಿ ಪೂಜೆಗೆ ವಾಸ್ತವದ ಉದಾಹರಣೆ.ಇವರ