ಯುಎಇ ನೆರವಿಗೆ ತೊಡಕಾದ ‘ನೀತಿ’ ಇಸ್ರೇಲ್‌ನ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ ಏಕೆ?
COVER STORY

ಯುಎಇ ನೆರವಿಗೆ ತೊಡಕಾದ ‘ನೀತಿ’ ಇಸ್ರೇಲ್‌ನ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ ಏಕೆ?

ಯುಎಇ ಘೋಷಿಸಿದ್ದ 700 ಕೋಟಿ ರೂಪಾಯಿ ನೆರವು ಸ್ವೀಕರಿಸಲು ದೇಶದ ಭದ್ರತಾ ನೀತಿ ಅಡ್ಡಿಯಾಗುತ್ತದೆ ಎಂದಿದ್ದ ಕೇಂದ್ರ ಸರಕಾರ ಇಸ್ರೇಲ್‌ನ ನೆರವಿನ ಬಗ್ಗೆ ಮೌನ ವಹಿಸಿದೆ.

ಕೇರಳ ರಾಜ್ಯದಲ್ಲಿ ಉಂಟಾದ ಭೀಕರ ನೆರೆ ಪರಿಹಾರಕ್ಕಾಗಿ ಯುಎಇ ಸರಕಾರ ನೀಡಲು ಮುಂದಾದ 700 ಕೋಟಿ ರೂಪಾಯಿ ನೆರವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಅದರೊಟ್ಟಿಗೆ ವಿಶ್ವಸಂಸ್ಥೆಯ ಪರಿಹಾರ ನಿಧಿಯನ್ನೂ ಕೂಡ ಕೇಂದ್ರ ಸರಕಾರ ನಿರಾಕರಿಸಿದೆ. ಆದರೆ, ಇಸ್ರೇಲ್‌ನ ನೆರವು ಕೇರಳ ತಲುಪಿದ್ದು ಈ ಬಗ್ಗೆ ಕೇಂದ್ರ ಸರಕಾರ ಮೌನ ವಹಿಸಿದೆ.

ದೇಶದ ಭದ್ರತಾ ನೀತಿಯಿಂದಾಗಿ ಭಾರತ ಯುಎಇ ಸರಕಾರದ ಭಾರಿ ಮೊತ್ತದ ಪರಿಹಾರವನ್ನು ನಿರಕಾರಿಸಿದೆ. ಆದರೆ ಇಸ್ರೇಲ್‌ನ ಸ್ವಯಂ ಸೇವಾ ಸಂಸ್ಥೆಯೊಂದು ನೆರೆ ಪೀಡಿತ ಕೇರಳೀಯರಿಗೆ ಸಹಾಯ ಮಾಡಲು ಅವಕಾಶ ಮಾಡಿಕೊಟ್ಟಿದೆ. ಯುಎಇ ನೀಡಲು ಮುಂದಾದ ಪರಿಹಾರಕ್ಕೆ ನಿರಾಕರಣೆಯ ಉತ್ತರವಿತ್ತ ಕೇಂದ್ರ ಸರಕಾರ ಇಸ್ರೇಲ್‌ಗೇಕೆ ಅವಕಾಶ ನೀಡಿತು ಎಂಬ ಪ್ರಶ್ನೆಯನ್ನು ಕೇಂದ್ರ ಸರಕಾದ ಈ ನಡೆ ಮೂಡಿಸಿದೆ.

ಆಗಸ್ಟ್‌ 21ರಂದು ಹಲವು ಪತ್ರಿಕೆಗಳಲ್ಲಿ ಇಸ್ರೇಲ್‌ ಭಾರತದ ಕೇರಳಕ್ಕೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿದ ಸುದ್ದಿ ವರದಿಯಾಗಿತ್ತು. ಈ ಸುದ್ದಿ ನಿಜವೂ ಕೂಡ. ಇಸ್ರೇಲ್‌ ಕೇರಳಕ್ಕೆ ಮಾನವೀಯ ನೆರವು ಒದಗಿಸಿತ್ತು. ಬೆಂಗಳೂರಿನಲ್ಲಿರುವ ಇಸ್ರೇಲ್‌ನ ರಾಯಭಾರಿ ಡಾನಾ ಕೊರೇಶ್‌ ಮತ್ತು ರಾಯಭಾರ ಕಚೇರಿಯ ಸಿಬ್ಬಂದಿಗಳು ಕಳೆದ ಮಂಗಳವಾರ ಸಾಮಗ್ರಿಗಳನ್ನು ಲಾರಿಯಲ್ಲಿ ತುಂಬಿ ಕೇರಳಕ್ಕೆ ಸಾಗಿಸಿದರು.

ಕೊಚ್ಚಿ ನಗರದ ಮೇಯರ್‌ ಮತ್ತು ಅವರ ತಂಡ ಇಸ್ರೇಲ್‌ನ ಕೊಡುಗೆಯನ್ನು ಸ್ವೀಕರಿಸಿ, ಸ್ಥಳೀಯ ನಿರಾಶ್ರಿತರ ಕೇಂದ್ರಕ್ಕೆ ಸಾಗಿಸಿತ್ತು. ನೀರಿನ ಬಾಟಲಿಗಳು, ಆಹಾರದ ಪೊಟ್ಟಣಗಳು ಮತ್ತು ಬಟ್ಟೆಗಳು ಇಸ್ರೇಲ್‌ನ ಪರಿಹಾರ ಸಾಮಗ್ರಿಗಳ ಭಾಗವಾಗಿದ್ದವು.

ಈ ಪರಿಹಾರ ಸಾಮಗ್ರಿಗಳ ಜತೆಗೆ ಇಸ್ರೇಲ್‌ನ ‘ಇಸ್ರಾ ಏಡ್‌’ ಎಂಬ ಸಂಸ್ಥೆ ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ತಂಡವೊಂದನ್ನೂ ಕೂಡ ಭಾರತಕ್ಕೆ ಕಳುಹಿಸಿತ್ತು. ಮುಂಚೆ ಈ ತಂಡ ನೇಪಾಳದಲ್ಲಿ ಮಾನವೀಯ ನೆರವು ನೀಡುವ ಕಾರ್ಯದಲ್ಲಿ ತೊಡಗಿ, ಅನುಭವವನ್ನೂ ಕೂಡ ಗಳಿಸಿತ್ತು.

ಇಸ್ರೇಲ್‌ ದೇಶದ ವಿದೇಶಾಂಗ ಸಚಿವಾಲಯ ಕೇರಳದ ನೆರೆ ಸಂತ್ರಸ್ತರಿಗೆ ಇಸ್ರೇಲ್‌ ಬೆಂಬಲವಾಗಿ ನಿಂತಿರುವುದಾಗಿ ಟ್ವಿಟ್ಟರ್‌ನಲ್ಲಿ ತಿಳಿಸಿತ್ತು.

ಇಸ್ರೇಲ್‌ ಸರಕಾರದ ವಕ್ತಾರೆ ಮಿಶೆಲ್‌ ಮಯಾನ್‌ ಕೂಡ ಕೇರಳಕ್ಕೆ ನೀಡಿದ ನೆರೆ ಪರಿಹಾರ ಸಾಮಗ್ರಿ ಮತ್ತು ತುರ್ತು ಪರಿಹಾರ ತಂಡದ ಚಿತ್ರಗಳನ್ನು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಪ್ರಕಟಿಸಿದ್ದರು.

ಇಸ್ರೇಲ್‌ನ ಈ ಬೆಂಬಲಕ್ಕೆ ಭಾರತೀಯರು ಭರಪೂರ ಧನ್ಯವಾದಗಳನ್ನು ಅರ್ಪಿಸಿದ್ದರು. ಇಸ್ರೇಲ್‌ ಭಾರತದ ನಿಜವಾದ ಸ್ನೇಹಿತ ಎಂದು ಹಾಡಿ ಹೊಗಳಿದ್ದರು. ಆದರೆ ಈ ಸುದ್ದಿ ಭಾರತೀಯ ಪತ್ರಿಕೆಗಳಲ್ಲಿ ಹೆಚ್ಚು ಸುದ್ದಿಯಾಗಲಿಲ್ಲ..

ಇವುಗಳ ಜತೆಗೆ ಇಸ್ರೇಲ್‌ನ ‘ಸ್ಟಾಂಡ್‌ ವಿತ್‌ ಅಸ್‌’ ಎಂಬ ಸ್ವಯಂ ಸೇವಾ ಸಂಸ್ಥೆಯೂ ಕೂಡ ಕೇರಳಿಗರಿಗೆ ಬೆಂಬಲವಾಗಿ ನಿಂತಿತ್ತು. ಅಂತರರಾಷ್ಟ್ರೀಯ ಮಟ್ಟದ ಈ ಸಂಸ್ಥೆ ಜಗತ್ತಿನಲ್ಲಿ ಶಿಕ್ಷಣದ ಜಾಗೃತಿ ಮೂಡಿಸುವುದರ ಜತೆಗೆ ವಿಶ್ವಶಾಂತಿ ಸ್ಥಾಪಿಸುವ ಗುರಿ ಹೊಂದಿದೆ. ಭಯೋತ್ಪಾದನೆ ಮತ್ತು ಯಹೂದಿ ವಿರೋಧಿ ನೀತಿಯನ್ನು ವಿರೋಧಿಸಿಕೊಂಡು ಬಂದಿದೆ.

ಕೇರಳ ರಾಜ್ಯದಲ್ಲಿ ಯಹೂದಿ ಸಮುದಾಯದವರ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕಾಗಿ ‘ಸ್ಟಾಂಡ್‌ ವಿತ್‌ ಅಸ್’ ಸಂಸ್ಥೆ ಕೇರಳಕ್ಕೆ ನೆರವಾಗಲು ಮುಂದೆ ಬಂದಿತ್ತು. ಕೇರಳದ ನೆರೆ ಸಮಸ್ಯೆಯ ವಿಡಿಯೋವನ್ನು ಆಗಸ್ಟ್‌ 20ರಂದು ಸಾಮಾಜಿಕ ಜಾಲತಾಣಗಳ ತನ್ನ ಅಧಿಕೃತ ಖಾತೆಗಳಲ್ಲಿ ಪ್ರಕಟಿಸಿತ್ತು.

Israel stands with the people of Kerala after the tragic floods!

Posted by StandWithUs on Monday, August 20, 2018

ಕೇರಳಕ್ಕೆ ಯುಎಇ, ವಿಶ್ವಸಂಸ್ಥೆ ನೀಡಲು ಬಂದ ನೆರವಿಗೆ ಭದ್ರತಾ ನೀತಿಯ ಅಡ್ಡಿಯನ್ನು ಮುಂದಿಟ್ಟಿದ್ದ ಕೇಂದ್ರ ಸರಕಾರ ಇಸ್ರೇಲ್‌ನ ಪರಿಹಾರಕ್ಕೆ ಮಾತ್ರ ಅಸ್ತು ಎಂದಿದ್ದೇಕೆ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಭಾರತದಲ್ಲಿ ನೆರವಿನ ವಿಚಾರದಲ್ಲೂ ಒಬ್ಬೊಬ್ಬರಿಗೆ ಒಂದೊಂದು ನೀತಿಯ ಅಗತ್ಯವೇನು ಎಂಬುದಕ್ಕೆ ಮೋದಿ ನೇತೃತ್ವದ ಕೇಂದ್ರ ಸರಕಾರವೇ ಉತ್ತರ ನೀಡಬೇಕಿದೆ.