samachara
www.samachara.com
ಕೊಡಗು ವಿಕೋಪ: ಫೇಸ್‌ಬುಕ್‌ ಒಕ್ಕಲಿಗರಿಗೆ ನೀತಿ ಪಾಠ ಹೇಳಿದ ಸಂಸದ ಪ್ರತಾಪ್ ಸಿಂಹ
COVER STORY

ಕೊಡಗು ವಿಕೋಪ: ಫೇಸ್‌ಬುಕ್‌ ಒಕ್ಕಲಿಗರಿಗೆ ನೀತಿ ಪಾಠ ಹೇಳಿದ ಸಂಸದ ಪ್ರತಾಪ್ ಸಿಂಹ

ಶುಕ್ರವಾರ ರಾತ್ರಿ ಫೇಸ್‌ಬುಕ್‌ ಲೈವ್‌ ಬಂದ ಸಿಂಹ ಫೇಸ್‌ಬುಕ್‌ ಒಕ್ಕಲಿಗರಿಗೆ ಸಂಸ್ಕಾರದ ಪಾಠ ಹೇಳಿದ್ದಾರೆ.

ಭೀಕರ ಮಳೆಯಿಂದ ನಡುಗಿದ್ದ ದಕ್ಷಿಣದ ಕಾಶ್ಮೀರ ಕೊಡಗು ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಕೊಡಗನ್ನು ಕಟ್ಟುವ ಕೆಲಸಗಳು ವೇಗ ಪಡೆದುಕೊಂಡಿವೆ. ಇಡೀ ದೇಶವಷ್ಟೇ ಅಲ್ಲದೆ ವಿದೇಶಗಳಿಂದಲೂ ಪ್ರವಾಸಿಗರನ್ನು ಸೆಳೆಯುತ್ತಿದ್ದ ಸುಂದರ ಕೊಡಗನ್ನು ಮತ್ತೆ ಹಳೆಯ ದಿನಗಳಿಗೆ ಒಯ್ಯುವುದು ಹೇಗೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಶುಕ್ರವಾರ ಕೊಡಗಿಗೆ ಬಂದಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೊಸ ವಿವಾದ ಹುಟ್ಟುಹಾಕಿ ಹೋಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ರನ್ನು ತರಾಟೆಗೆ ತೆಗೆದುಕೊಂಡಿದ್ದ ಸಚಿವೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ಸಚಿವರನ್ನು ಹಾದಿ ತಪ್ಪಿಸಿ ಕರೆದುಕೊಂಡು ಹೋಗಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹರನ್ನೂ ಸೋಷಿಯಲ್‌ ಮೀಡಿಯಾದಲ್ಲಿ ಜನರು ತರಾಟೆಗೆ ತೆಗೆದುಕೊಂಡಿದ್ದರು.

ಈ ಸಂಬಂಧ ಶುಕ್ರವಾರ ರಾತ್ರಿ ಫೇಸ್‌ಬುಕ್‌ ಲೈವ್‌ ಬಂದ ಸಿಂಹ ಫೇಸ್‌ಬುಕ್‌ ಒಕ್ಕಲಿಗರಿಗೆ ನೀತಿಪಾಠ ಹೇಳಿದ್ದಾರೆ. “ಕಪ್‌ ನಮ್ದೇ ಎಂದು ಹೇಳಿ 37 ಸೀಟು ಪಡೆದುಕೊಂಡು ಅಧಿಕಾರಕ್ಕೇರಿದ್ದೀರಿ. 80 ಸೀಟು ಗೆದ್ದ ಕಾಂಗ್ರೆಸ್‌ ದೈನೇಸಿ ಸ್ಥಿತಿಯಲ್ಲಿ ನಿಮ್ಮ ಬಾಲ ಹಿಡಿದುಕೊಂಡಿದ್ದರಿಂದ ಅಧಿಕಾರ ನಡೆಸುತ್ತಿದ್ದೀರಿ. ಜನಾಭಿಪ್ರಾಯ ಬಿಜೆಪಿಗೆ ಇತ್ತು ಎನ್ನುವುದನ್ನು ಮರೆಯಬೇಡಿ,” ಎಂದಿದ್ದಾರೆ.

ನಂತರ ಫೇಸ್‌ಬುಕ್‌ನಲ್ಲಿ ತಮ್ಮ ವಿರುದ್ಧ ಕಿಡಿಕಾರುತ್ತಿರುವವರ ಮೇಲೆ ಪ್ರಹಾರಕ್ಕಿಳಿದ ಸಂಸದರು, “ಹೆಸರಿನ ಮುಂದೆ ಆ ಗೌಡ ಈ ಗೌಡ ಅಂತ ಇಟ್ಟುಕೊಂಡು ಬಾಯಿ ತೆಗೆದರೆ ಬರೀ ಅಕ್ಕ ಅಣ್ಣ ಎಂಬ ಹೊಲಸು ಶಬ್ದಗಳೇ ನಿಮ್ಮ ಬಾಯಿಂದ ಬರುತ್ತಿವೆ. ಅವೆಲ್ಲಾ ನಮಗೂ ಬರ್ತವೆ. ನೀವು ಗೌಡ ಅಂತ ಹೆಸರಿನ ಮುಂದೆ ಇಟ್ಟುಕೊಂಡು ಇಡೀ ಜಾತಿಗೆ ಅವಮಾನ ಮಾಡುತ್ತಿದ್ದೀರಿ. ವಿಶೇಷವಾಗಿ ಜೆಡಿಎಸ್ ಪಕ್ಷದ ಬೆಂಬಲಿಗರಿದ್ದೀರಲ್ಲಾ ದಯವಿಟ್ಟು ಇಂಥಹ ಹೊಲಸು ಅವಾಚ್ಯ ಶಬ್ದಗಳನ್ನು ಬಳಸುವುದನ್ನು ನಿಲ್ಲಿಸಿ. ಒಕ್ಕಲಿಗ ಸಮಾಜ ತಲೆ ತಗ್ಗಿಸುವ ಕೆಲಸ ಮಾಡುತ್ತಿದ್ದೀರಿ. ನಿಮಗೆ ಬೇರೆ ಭಾಷೆ ಬರುವುದಿಲ್ವಾ. ಅಪ್ಪ ಅಮ್ಮಾ ಇದನ್ನೇ ಕಲಿಸಿದ್ದಾ?” ಎಂದು ಸಂಸ್ಕಾರದ ಪಾಠ ಮಾಡಿದ್ದಾರೆ.

ಅಷ್ಟಕ್ಕೂ ಫೇಸ್‌ಬುಕ್‌ನಲ್ಲಿ ಸಂಸದರು ಟಾರ್ಗೆಟ್‌ ಯಾಕೆ ಆದರು ಎಂದರೆ ಅದಕ್ಕೆ ಕೊಡಗು ಭೇಟಿಯ ವೇಳಾಪಟ್ಟಿಯನ್ನು ಬದಲಿಸಿದ ಹಿನ್ನೆಲೆ ಸಿಗುತ್ತದೆ. ಇದರಿಂದಾಗಿ ಪತ್ರಿಕಾಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್‌ ಸಿಟ್ಟು ಮಾಡಿಕೊಳ್ಳುವ ಪ್ರಸಂಗವೂ ಸೃಷ್ಟಿಯಾಗಿತ್ತು. ಆದರೆ ಇದೆಲ್ಲಾ ಏನೂ ಅಲ್ಲ ಎನ್ನುವ ಅರ್ಥದಲ್ಲಿ ಸಂಸದರು ಮಾತನಾಡಿದ್ದಾರೆ.

“ಕೆಲವು ಮೀಡಿಯಾದಲ್ಲಿ ನಿರ್ಮಲಾ ಸೀತಾರಾಮನ್‌ ಸಿಟ್ಟು ಮಾಡಿಕೊಂಡಿದ್ದರು, ಹಾಗೆ ಮಾಡಿದರು, ಹೀಗೆ ಮಾಡಿದರು ಅಂತೆಲ್ಲಾ ಬರ್ತಿದೆ. ನಿರ್ಮಲಾ ಸೀತಾರಾಮನ್‌ ಅವರನ್ನು ಕೊಡಗಿಗೆ ಬನ್ನಿ ಅಂಥ ಖುದ್ದಾಗಿ ನಾನೇ ಕೇಳಿಕೊಂಡಿದ್ದೆ,” ಎಂದಿದ್ದಾರೆ. ಈ ಮೂಲಕ ಕೊಡಗಿನಲ್ಲಿ ಎಲ್ಲವನ್ನೂ ಮಾಡಿದ್ದು ನಾನು ಮತ್ತು ನನ್ನ ಪರಿವಾರ ಎನ್ನುವ ತಮ್ಮ ಹೇಳಿಕೆಯನ್ನು ಅವರು ಇಲ್ಲೂ ಮುಂದುವರಿಸಿದ್ದಾರೆ.

ಜತೆಗೆ ಬೆಳಿಗ್ಗೆ 7 ಗಂಟೆಗೆ ಸಿದ್ಧವಾಗಿದ್ದ ಮೇಡಂ ಅವರನ್ನು ಮಾದಾಪುರಕ್ಕೆ ನಾನೇ ಕರೆದುಕೊಂಡು ಹೋದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ವೇಳಾಪಟ್ಟಿಯಲ್ಲಿ ಸಣ್ಣ ಬದಲಾವಣೆ ಮಾಡಿ ಮಡಿಕೇರಿಯ ಬ್ರಾಹ್ಮಣ ಸಮಾಜದ ಸೇವಾ ಭಾರತಿ ರಿಲೀಫ್‌ ಕ್ಯಾಂಪಿಗೆ ಕರೆದುಕೊಂಡು ಹೋಗಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಸಭೆಗೆ ಬೇಗ ಬರುವಂತೆ ಸಾ.ರಾ. ಮಹೇಶ್‌ ಅವರು ಹೇಳಿದ್ದಕ್ಕೆ ಮ್ಯಾಡಮ್‌ಗೆ ಕಿರಿಕಿರಿಯಾಗಿದೆ ಅಷ್ಟೇ ಎಂದು ಸಾಗಾ ಹಾಕಿದ್ದಾರೆ.

“ಅದೇನು ದೊಡ್ಡ ವಿಷಯವಲ್ಲ. ಇಲ್ಲಿ ಯಾರೂ ಋಷಿ ಮುನಿಗಳಲ್ಲ. ಸಣ್ಣಪುಟ್ಟ ವ್ಯತ್ಯಾಸಗಳು ಇರ್ತವೆ. ಬಹಳ ಅಹಂಕಾರಿ ಎಂದೆಲ್ಲಾ ಚರ್ಚೆಯಾಗುತ್ತಿದೆ. ಕರ್ನಾಟಕಕ್ಕೆ 7 ಕೋಟಿ ಭಿಕ್ಷೆ ಹಾಕಿದ್ರಾ ಅಂತೆಲ್ಲಾ ಕೇಳುತ್ತಿದ್ದಾರೆ. ಮೇಡಮ್‌ ಬಂದಿದ್ದು ಪರಿಹಾರ ಘೋಷಣೆಗೆ ಅಲ್ಲ. ಅವರು ಕೊಡಿಸಿರುವುದು ಸಿಎಸ್‌ಆರ್‌ ಫಂಡ್‌,” ಎಂದು ವಿವರಿಸಿದ್ದಾರೆ. ಗೃಹ ಸಚಿವರು, ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರ ಜೊತೆಗೆ ಮಾತನಾಡುತ್ತೇನೆ ಎಂದಿದ್ದಾರೆ. ಕಾಫಿ ಬಗ್ಗೆಯೂ ವಿವರವಾದ ಅಧ್ಯಯನವಾಗಬೇಕು ಎಂದು ಹೇಳಿದ್ದಾರೆ. ಈ ಮೊದಲು ನಾನೇ ಖುದ್ದು ಕಾಫಿ ಬೋರ್ಡ್‌ ಅಧಿಕಾರಿಗಳನ್ನೂ ಕೊಡಗಿಗೆ ಕರೆದುಕೊಂಡು ಹೋಗಿದ್ದೆ ಎಂದು ಮತ್ತೆ ಬಡಾಯಿ ಕೊಚ್ಚಿಕೊಂಡಿದ್ದಾರೆ.

ಇದೇ ವೇಳೆ ರಾಜ್ಯ ಸರಕಾರದ ವಿರುದ್ಧವೂ ಪ್ರತಾಪ್‌ ಸಿಂಹ ಅಸಮಾಧಾನ ಹೊರಹಾಕಿದ್ದಾರೆ. ರಾಜ್ಯ ಸರಕಾರದ ಲೋಪ ಹುಡುಕುವುದಾದರೆ ನಮಗೂ ನೂರು ವಿಚಾರ ಇದೆ ಟೀಕೆ ಮಾಡಲಿಕ್ಕೆ. ಕರ್ನಾಟಕ ಸರಕಾರ ಎಷ್ಟು ಕೊಟ್ರು? ನಾವೂ ಕೇಳಬಹುದು. ಆದರೆ ನಾವು ಕೇಳಲಿಕ್ಕೆ ಹೋಗುವುದಿಲ್ಲ. ರಸ್ತೆಯಲ್ಲಿ ನಿಂತು ಕೂಗುವವರಿಗೆ ತಲೆ ಕೆಡಿಕೊಳ್ಳುವುದಿಲ್ಲ ಎಂದಿದ್ದಾರೆ. ಉಪಮುಖ್ಯಮಂತ್ರಿ ಪರಮೇಶ್ವರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯವ ವಿರುದ್ಧವೂ ಅವರು ಹರಿಹಾಯ್ದಿದ್ದಾರೆ. “4 ವರ್ಷ ನೀವು ಅಧಿಕಾರದಲ್ಲಿದ್ದಾಗ ನಾನು ಇಲ್ಲಿ ಕಾಫಿ , ಮೆಣಸು ಉದುರುತ್ತಿದೆ. ಕೊಡಗಿನ ರಸ್ತೆಗಳು ಕೊಚ್ಚಿ ಹೋಗುತ್ತಿವೆ. ಶಾಶ್ವತ ಪರಿಹಾರ ಕೊಡಿ ಎಂದು ಕೇಳಿದ್ದೆ. ಅವತ್ತು ನೀವು ಎಲ್ಲಿ ಹೋಗಿದ್ರಿ?” ಎಂದು ಪ್ರಶ್ನೆ ಮಾಡಿದ್ದಾರೆ. ಈಗ ಫ್ಲಡ್‌ ಟೂರಿಸಂ ಮಾಡುವ ರೀತಿ ಬಂದು ಪೋಸ್‌ ಕೊಟ್ಟುಕೊಂಡು ಹೋಗಬೇಡಿ ಎಂದು ರಾಜ್ಯ ಸರಕಾರದ ಪ್ರತಿನಿಧಿಗಳ ಭೇಟಿಯನ್ನು ಜರೆದಿದ್ದಾರೆ.

ಇಷ್ಟಕ್ಕೇ ನಿಲ್ಲದೆ ಸಾಲಮನ್ನಾವನ್ನು ಜುಜುಬಿ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ನಿಮ್ಮ ಸಾಲ ಮನ್ನಾ ಆರೂವರೆ ಸಾವಿರ ಕೋಟಿ ಮಾಡಿದ್ದೀರಿ. ಕೇವಲ ಮೈಸೂರು ಬೆಂಗಳೂರು ಹೈವೇಗೆ ಮೋದಿ ಸರಕಾರ 7 ಸಾವಿರ ಕೋಟಿ ಕೊಟ್ಟಿದೆ. ನಮ್ಮ ಒಂದು ಹೈವೇ ನಿರ್ಮಾಣಕ್ಕೆ ಕೊಟ್ಟಷ್ಟು ನಿಮ್ಮ ಸಾಲಮನ್ನಾಗೆ ಕೊಟ್ಟಿಲ್ಲ. 7 ಸಾವಿರ ಕೋಟಿಯಲ್ಲಿ 7 ಪೈಸೆಯೂ ನಿಮ್ಮದಿಲ್ಲ ಎಂದು ರಾಜ್ಯ ಸರಕಾರವನ್ನು ಛೇಡಿಸಿದ್ದಾರೆ.

“ಕೇಂದ್ರದಿಂದ ಸಾಕಷ್ಟು ಅನುದಾನ ಬರುತ್ತಿದೆ. ಒಳ್ಳೆ ಕೆಲಸ ಮಾಡುವುದಿದ್ದರೆ ಮಾಡಿ. ರಾಜಕೀಯ ಹೇಳಿಕೆ ಕೊಡುತ್ತಾ ಇರಬೇಡಿ. ಜಿ ಪರಮೇಶ್ವರ್‌ ಅವರಿಗೆ ಹೇಳುತ್ತಿದ್ದೇನೆ ನಿಮ್ಮ ಕೆಲಸ ಮಾಡಿ. ಸಾರ್ವಜನಿಕ ಹೇಳಿಕೆಯ ರಾಜಕಾರಣ ಬೇಡ,” ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ಹೀಗೆ ಕೊಡಗಿಗೆ ನಿರ್ಮಲಾ ಸೀತಾರಾಮನ್‌ ಭೇಟಿ ವಿಚಾರ ಮುಂದಿಟ್ಟುಕೊಂಡು ಫೇಸ್‌ಬುಕ್‌ ಲೈವ್‌ ಬಂದ ಸಂಸದ ಪ್ರತಾಪ್‌ ಸಿಂಗ್‌ ಫೇಸ್‌ಬುಕ್‌ ಒಕ್ಕಲಿಗರಿಂದ ಹಿಡಿದು, ಸಾಲಮನ್ನಾ, ಸಿದ್ದರಾಮಯ್ಯ, ಪರಮೇಶ್ವರ್, ಫ್ಲಡ್‌ ಟೂರಿಸಂ, ರಾಜ್ಯ ಸರಕಾರದ ಲೋಪದ ಬಗ್ಗೆಯೆಲ್ಲಾ ತಮ್ಮದೇ ಮೂಗಿನ ನೇರಕ್ಕೆ ಮಾತನಾಡಿ ಮುಗಿಸಿದ್ದಾರೆ.

Also read: ಪರಿಹಾರದಲ್ಲೂ ‘ಪರಿವಾರ’ ಮರೆಯದ ಸಚಿವೆಯನ್ನು ದಾರಿ ತಪ್ಪಿಸಿದ್ದು ಪ್ರತಾಪ್ ಸಿಂಹ!