ಮುಗಿಯದ ಯುಎಇ ನೆರವಿನ ಗೊಂದಲ, ನೆರೆ ಇಳಿದ ಕೇರಳದಲ್ಲೀಗ ಬಿಜೆಪಿ-ಪಿಣರಾಯಿ ಫೈಟ್‌
COVER STORY

ಮುಗಿಯದ ಯುಎಇ ನೆರವಿನ ಗೊಂದಲ, ನೆರೆ ಇಳಿದ ಕೇರಳದಲ್ಲೀಗ ಬಿಜೆಪಿ-ಪಿಣರಾಯಿ ಫೈಟ್‌

ಯುಎಇ ನೀಡಲು ಮುಂದೆ ಬಂದಿದ್ದ 700 ಕೋಟಿ ರೂ. ವಿಕೋಪ ಪರಿಹಾರ ನೆರವಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಕೇಂದ್ರ ಸರಕಾರದ ನಡುವೆ ನಡೆಯುತ್ತಿರುವ ಗುದ್ದಾಟ ಹೊಸ ಮಜಲಿಗೆ ಹೊರಳಿಕೊಂಡಿದೆ.

ಯುಎಇ ನೀಡಲು ಮುಂದೆ ಬಂದಿದ್ದ 700 ಕೋಟಿ ರೂಪಾಯಿ ವಿಕೋಪ ಪರಿಹಾರ ನೆರವಿನ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಮತ್ತು ಕೇಂದ್ರ ಸರಕಾರದ ನಡುವೆ ನಡೆಯುತ್ತಿರುವ ಗುದ್ದಾಟ ಹೊಸ ಮಜಲಿಗೆ ಹೊರಳಿಕೊಂಡಿದೆ. ವಿವಾದದಲ್ಲಿ ಬಿಜೆಪಿ ನಾಯಕರೂ ಮೂಗು ತೂರಿಸಲು ಆರಂಭಿಸಿದ್ದು ಇದೀಗ ಯುಎಇ ಫಂಡ್‌ ನೀಡುತ್ತೇನೆ ಎಂದು ಹೇಳೇ ಇಲ್ಲ ಎಂಬ ವಾದವನ್ನು ಕಮಲ ಪಕ್ಷ ಮುಂದಿಟ್ಟಿದೆ.

ಯುಎಇ ನೆರವಿಗೆ ಸಂಬಂಧಿಸಿದಂತೆ ಶುಕ್ರವಾರ ಬಿಜೆಪಿ ಪಿಣರಾಯಿ ವಿಜಯನ್‌ ಅವರನ್ನು ಪ್ರಶ್ನೆ ಮಾಡಿದ್ದು, ‘ನಿಮಗೆ ಆಫರ್‌ ಬಗ್ಗೆ ಹೇಳಿದವರು ಯಾರು?’ ಎಂದು ಪ್ರಶ್ನಿಸಿದೆ. ಕೋಯಿಕ್ಕೋಡ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿ ಮುಖಂಡ ಶ್ರೀಧರನ್‌ ಪಿಳ್ಳೈ, “ಈ ಸುದ್ದಿ ಬಗ್ಗೆ ವಿಜಯನ್‌ ವಿವರಣೆ ನೀಡಬೇಕು ಎಂದು ನಾವು ಬಯಸುತ್ತೇವೆ ಮತ್ತು ಅವರು ಈ ಮಾಹಿತಿಯನ್ನು ಎಲ್ಲಿಂದ ಪಡೆದುಕೊಂಡರು,” ಎಂದು ಪ್ರಶ್ನಿಸಿದ್ದರು.

ಇದಕ್ಕೂ ಮೊದಲು ಬುಧವಾರ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ವಿದೇಶದ ನೆರವನ್ನು ಪಡೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿತ್ತು. ಒಂದೊಮ್ಮೆ ಯಾವುದಾದರೂ ಅಂತಾರಾಷ್ಟ್ರೀಯ ಸರಕಾರೇತರ ಸಂಸ್ಥೆಗಳು ಈ ನೆರವು ನೀಡಿದರೆ ನಾವದನ್ನು ಸ್ವಾಗತಿಸುತ್ತೇವೆ ಎಂದು ಹೇಳಿತ್ತು. ಆದರೆ ಪಿಣರಾಯಿ ವಿಜಯನ್‌ ಮತ್ತು ಅಲ್ಲಿನ ಹಣಕಾಸು ಸಚಿವ ಥೋಮಸ್‌ ಐಸಾಕ್‌ ಗಂಭೀರ ಹಾನಿಗೊಳಗಾದ ಸಂದರ್ಭದಲ್ಲಿ ವಿದೇಶಗಳು ನೀಡಿದ ನೆರವನ್ನು ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದಿದ್ದರಿಂದ ವಿವಾದ ಆರಂಭವಾಗಿತ್ತು.

ನೆರವು ನೀಡಿದ ಯುಎಇಗೆ ಧನ್ಯವಾದ ಸಲ್ಲಿಸಿರುವ ಮಾತೃಭೂಮಿ ಮತ್ತು ಗಲ್ಫ್‌ ಮಾಧ್ಯಮ ಪತ್ರಿಕೆಗಳು
ನೆರವು ನೀಡಿದ ಯುಎಇಗೆ ಧನ್ಯವಾದ ಸಲ್ಲಿಸಿರುವ ಮಾತೃಭೂಮಿ ಮತ್ತು ಗಲ್ಫ್‌ ಮಾಧ್ಯಮ ಪತ್ರಿಕೆಗಳು

ಜತೆಗೆ ಗುರುವಾರ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಪ್ರತಿಕ್ರಿಯೆ ನೀಡಿದ್ದ ಯುಎಇ ರಾಯಭಾರಿ ಅಹ್ಮದ್‌ ಅಲ್ಬನ್ನ, ‘ನಮ್ಮ ಸರಕಾರ ಯಾವುದೇ ಆರ್ಥಿಕ ನೆರವನ್ನು ನೀಡಲು ಸಿದ್ಧವಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ’ ಎಂದು ಹೇಳಿದ್ದರು. “ಯಾವುದೇ ನಿರ್ಧಿಷ್ಟ ಮೊತ್ತವನ್ನು ಆರ್ಥಿಕ ಸಹಾಯ ರೂಪದಲ್ಲಿ ಘೋಷಣೆ ಮಾಡುವ ಸಂಬಂಧ ಅಂತಿಮ ತೀರ್ಮಾನವಾಗಿಲ್ಲ ಎಂದು ನನಗನಿಸುತ್ತದೆ. ಕಾರಣ ಇದರ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ,” ಎಂದಷ್ಟೇ ಅವರು ತಿಳಿಸಿದ್ದರು.

ಆದರೆ, ಬಿಜೆಪಿ ಆರೋಪ ಮತ್ತು ಯುಎಇ ರಾಯಭಾರಿ ಹೇಳಿಕೆಯನ್ನು ಪಿಣರಾಯಿ ವಿಜಯನ್‌ ತಳ್ಳಿ ಹಾಕಿದ್ದು ನೆರವಿನ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಯುಎಇಯ ನೆರವಿಗೆ ಸಂಬಂಧಿಸಿದಂತೆ ಯಾವುದೇ ಗೊಂದಲಗಳಿಲ್ಲ. ವಿಷಯವನ್ನು ಇಬ್ಬರು ವ್ಯಕ್ತಿಗಳು ಚರ್ಚೆ ಮಾಡಿದ್ದಾರೆ. ಯುಎಇ ಆಡಳಿತಗಾರ ನಮ್ಮ ಪ್ರಧಾನಿ ಜೊತೆ ಮಾತನಾಡಿದ್ದಾರೆ. ಇಬ್ಬರೂ ಇದನ್ನು ಜಗತ್ತಿಗೆ ತಿಳಿಸಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂಬುದು ನಮ್ಮ ದೇಶಕ್ಕೆ ಬಿಟ್ಟದ್ದು. ನೆರವನ್ನು ಸ್ವೀಕರಿಸುತ್ತೇವೆ ಎಂದು ನಾನು ಆಶಿಸುತ್ತೇನೆ,” ಎಂದು ಹೇಳಿದ್ದಾರೆ.

ಜತೆಗೆ ಈ ಸುದ್ದಿಯನ್ನು ತಮಗೆ ನೀಡಿದವರ ಬಗ್ಗೆಯೂ ಅವರು ವಿವರಣೆ ನೀಡಿದ್ದಾರೆ. ಕೇರಳದ ಲುಲು ಗ್ರೂಪ್ ಮಾಲಿಕ ಎಂಎ ಯೂಸುಫ್ ಅಲಿ ಈದ್‌ನ ಶುಭಾಶಯ ತಿಳಿಸಲು ಶೇಖ್‌ ಮೊಹಮದ್‌ ಬಿನ್ ಝಾಯೆದ್‌ ಅಲ್‌ ನಹ್ಯಾನ್‌ ಬಳಿ ಹೋದಾಗ ಅವರು, “ನಾನು ಕೇರಳಕ್ಕೆ ಆರ್ಥಿಕ ಸಹಾಯ ನೀಡುವ ಸಂಬಂಧ ಪ್ರಧಾನಿ ಜತೆ ಮಾತನಾಡಿದ್ದೇನೆ,” ಎಂಬ ಮಾಹಿತಿ ನೀಡಿದ್ದರು. “ನಾನು ಇದನ್ನು ಸಾರ್ವಜನಿಕವಾಗಿ ಘೋಷಣೆ ಮಾಡಬಹುದೇ ಎಂದು ಯೂಸುಫ್‌ ಅಲಿಯಲ್ಲಿ ಕೇಳಿದಾಗ, ಅವರು ಹೀಗೆ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದರು” ಎಂಬುದಾಗಿ ವಿಜಯನ್‌ ಹೇಳಿದ್ದಾರೆ.

ಈ ಮೂಲಕ ಯುಎಇ ನೆರವು ನೀಡಲು ಸಿದ್ಧವಿದೆ ಮತ್ತು ಅದನ್ನು ಸ್ವೀಕರಿಸಿ ಎಂದು ಕೇಂದ್ರದ ಮೇಲೆ ಪಿಣರಾಯಿ ವಿಜಯನ್‌ ಒತ್ತಡ ಹೇರುತ್ತಿದ್ದಾರೆ. ಸದ್ಯಕ್ಕೆ ಕೇಂದ್ರ ಸರಕಾರ ಇನ್ನೂ ತನ್ನ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ವಿವಾದ ತೆಗೆದುಕೊಳ್ಳುವ ತಿರುವುಗಳು ಕುತೂಹಲ ಮೂಡಿಸಿರುವುದರ ಜತೆಗೆ ಸಂಕಷ್ಟದಲ್ಲಿರುವ ದೇವರ ನಾಡಿನ ಜನರ ಭವಿಷ್ಯದ ಮೇಲೆಯೂ ಪರಿಣಾಮ ಬೀರಲಿದೆ.