samachara
www.samachara.com
ಸಣ್ಣ ರೈತರ ಋಣ ಸಂದಾಯ; ಸಮ್ಮಿಶ್ರ ಸರಕಾರದ ಹೊಸ ಅಧಿನಿಯಮದಲ್ಲೇನಿದೆ?
COVER STORY

ಸಣ್ಣ ರೈತರ ಋಣ ಸಂದಾಯ; ಸಮ್ಮಿಶ್ರ ಸರಕಾರದ ಹೊಸ ಅಧಿನಿಯಮದಲ್ಲೇನಿದೆ?

ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರ ಋಣಭಾರ ಇಳಿಸಲು ರಾಜ್ಯ ಸರಕಾರ ಮುಂದಾಗಿದೆ. ಇದಕ್ಕಾಗಿ ‘ಕರ್ನಾಟಕ ಋಣ ಪರಿಹಾರ ಅಧಿನಿಯಮ-2018’ ಎಂಬ ವಿಧೇಯಕ ತರಲಾಗಿದೆ.

ನಾಲ್ಕು ದಶಕಗಳ ಹಿಂದೆ ದೇವರಾಜ ಅರಸು ಅವರು ಸಣ್ಣ ರೈತರು ಹಾಗೂ ಕೃಷಿ ಕಾರ್ಮಿಕರ ಸಾಲಬಾಧೆ ತಪ್ಪಿಸಲು ಜಾರಿಗೆ ತಂದಿದ್ದ ‘ಕರ್ನಾಟಕ ಋಣ ಪರಿಹಾರ ಅಧಿನಿಯಮ’ದ ಮಾದರಿಯಲ್ಲಿ ರಾಜ್ಯ ಸರಕಾರ ಹೊಸ ಅಧಿನಿಯಮವನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಧರಿಸಿದೆ.

‘ಕರ್ನಾಟಕ ಋಣ ಪರಿಹಾರ ಅಧಿನಿಯಮ-2018’ ಅನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಸರಕಾರದ ಈ ನಿರ್ಧಾರದಿಂದ ಲೇವಾದೇವಿಗಾರರು, ಖಾಸಗಿ ಹಣಕಾಸು ಸಂಸ್ಥೆಗಳು, ಗಿರವಿ ಅಂಗಡಿಗಳಲ್ಲಿ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗದವರು ಮಾಡಿರುವ ಸಾಲವನ್ನು ಕಟ್ಟುವ ಅಗತ್ಯವಿಲ್ಲ.

‘ಸರಕಾರ ಮತ್ತು ಸಾಂಸ್ಥಿಕ ಏಜೆನ್ಸಿಗಳನ್ನು ಹೊರತುಪಡಿಸಿ ಇತರ ಮೂಲಗಳಿಂದ ತೆಗೆದುಕೊಳ್ಳುವ ನಗರ ಮತ್ತು ಗ್ರಾಮೀಣ ಪ್ರದೇಶದ ಋಣದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಗಂಭೀರ ಮಟ್ಟವನ್ನು ತಲುಪಿವೆ. ಇದಕ್ಕೆ ಹಣದ ಮಾರುಕಟ್ಟೆಯ ಬಿಕ್ಕಟ್ಟೂ ಒಂದು ಕಾರಣವಾಗಿದೆ. ದುಬಾರಿ ಬಡ್ಡಿ ದರಗಳನ್ನು ವಿಧಿಸಲಾಗುತ್ತಿದೆ ಮತ್ತು ದುರ್‌ವ್ಯವಹಾರಗಳನ್ನು ನಡೆಸಲಾಗುತ್ತಿದೆ. ಸಣ್ಣ ಹಿಡುವಳಿಯ ರೈತರು, ಭೂರಹಿತ ಕೃಷಿ ಕಾರ್ಮಿಕರು ಮತ್ತು ಸಮುದಾಯದ ದುರ್ಬಲ ವರ್ಗದರೆಲ್ಲರೂ ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದು 1976ರಲ್ಲಿ ಮಂಡಿಸಲಾಗಿದ್ದ ‘ಕರ್ನಾಟಕ ಋಣ ಪರಿಹಾರ ಅಧಿನಿಯಮ’ದ ವಿಧೇಯಕದಲ್ಲಿ ಹೇಳಲಾಗಿತ್ತು.

ಮುಂದುವರಿದು, ‘ಈ ವರ್ಗಗಳಿಗೆ ಸೂಕ್ತವಾದ ಪರಿಹಾರ ಒದಗಿಸುವುದು ಅಗತ್ಯವೆಂದು ರಾಜ್ಯ ಸರಕಾರವು ಪರಿಗಣಿಸಿದೆ. ಆದ್ದರಿಂದ,ಈ ವರ್ಗಗಳು ಹೊಂದಿರುವ ಋಣಗಳು ಸಂದಾಯವಾಗಿವೆ ಎಂದು ಘೋಷಿಸಲು ಈ ವಿಧೇಯಕವನ್ನು ಮಂಡಿಸಲಾಗಿದೆ’ ಎಂದಿದೆ. ಇದೇ ಮಾದರಿಯಲ್ಲಿ ಸಣ್ಣ ರೈತರು, ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗವನ್ನು ಋಣ ಮುಕ್ತಗೊಳಿಸಲು ಈಗ ರಾಜ್ಯ ಸರಕಾರ ಮುಂದಾಗಿದೆ.

“1976ರಲ್ಲಿ ದೇವರಾಜ ಅರಸು ಜಾರಿಗೆ ತಂದಿದ್ದ ಋಣ ಪರಿಹಾರ ಅಧಿನಿಯಮದ ಮಾದರಿಯಲ್ಲಿ ಖಾಸಗಿ ಸಾಲದಿಂದ ದುರ್ಬಲ ವರ್ಗದ ಕುಟುಂಬಗಳನ್ನು ಮುಕ್ತಗೊಳಿಸಲು ಸಂಪುಟ ತೀರ್ಮಾನ ಕೈಗೊಂಡಿದೆ. ಸುಗ್ರೀವಾಜ್ಞೆಯನ್ನು ರಾಷ್ಟ್ರಪತಿಗಳ ಅನುಮೋದನೆ ಕಳಿಸಲಾಗುತ್ತಿದ್ದು, ಒಪ್ಪಿಗೆ ದೊರೆಯುತ್ತಿದ್ದಂತೆ ಕಾನೂನು ಜಾರಿಗೆ ಬರಲಿದೆ” ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ದೇವರಾಜ ಅರಸು ಕಾಲದಲ್ಲಿ ಜಾರಿಗೆ ತಂದಿದ್ದ ಅಧಿನಿಯಮದ ಮಾದರಿಯಲ್ಲೇ ಈ ಅಧಿನಿಯಮವೂ ಜಾರಿಗೆ ಬರಲಿದೆ. ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ ಋಣಮುಕ್ತಕ್ಕೆ ಅರ್ಹತೆಗಳ ಕೆಲವು ಬದಲಾವಣೆಗಳನ್ನು ಬಿಟ್ಟರೆ ಉಳಿದೆಲ್ಲ ಅಂಶಗಳೂ ಹಳೆಯ ಅಧಿನಿಯಮದಂತೆಯೇ ಇವೆ.

ಈ ಅಧಿನಿಯಮ ಕಾನೂನಾಗಿ ಜಾರಿಗೆ ಬಂದರೆ, ಸಾಲಕ್ಕೆ ಸಂಬಂಧಿಸಿದ ಒಪ್ಪಂದ, ಡಿಕ್ರಿ ಯಾವುದೇ ಇದ್ದರೂ ಯಾವುದೇ ನ್ಯಾಯಾಲಯದಲ್ಲಿ ವ್ಯಾಜ್ಯಕ್ಕೆ ಪರಿಗಣಿಸುವಂತಿಲ್ಲ. ಸಾಲ ನೀಡಿರುವವರು ಸಂಬಂಧಿಸಿದ ವ್ಯಾಪ್ತಿಯ ಉಪವಿಭಾಗಾಧಿಕಾರಿ (ಎಸಿ) ಅಥವಾ ನೇಮಕಗೊಂಡ ಅಧಿಕಾರಿಯ ಮುಂದೆ ಸಾಲದ ವಿವರ ಪತ್ರ ಸಲ್ಲಿಸಬೇಕು. ಸಾಲದ ವಿವರ ಪತ್ರ ಸಲ್ಲಿಸಿದ ಮಾತ್ರಕ್ಕೆ ಸರಕಾರ ಅದನ್ನು ಮರುಪಾವತಿಸುವ ಅಗತ್ಯವಿರುವುದಿಲ್ಲ.

ಈ ಋಣಮುಕ್ತ ಯೋಜನೆಯ ಪ್ರಯೋಜನ ಪಡೆಯಲು ನಾಲ್ಕು ಹೆಕ್ಟೇರ್‌ಗಿಂತ ಹೆಚ್ಚು ಒಣಭೂಮಿ, 3 ಎಕರೆಗಿಂತ ಹೆಚ್ಚು ಮಳೆ ಆಧಾರಿತ ಕೃಷಿ ಭೂಮಿ ಹಾಗೂ ಒಂದು ಎಕರೆಗಿಂತ ಹೆಚ್ಚು ನೀರಾವರಿ ಜಮೀನು ಹೊಂದಿರಬಾರದು. ಈ ಕೃಷಿ ಭೂಮಿಯಿಂದ ವಾರ್ಷಿಕ ಆದಾಯ 1.25 ಲಕ್ಷ ರೂಪಾಯಿ ಮೀರಿರಬಾರದು. ಕೃಷಿ ಮೂಲದಿಂದ ಹೊರತಾದ ಬೇರೆ ಆದಾಯ ಮೂಲ ಹೊಂದಿರಬಾರದು ಎಂಬ ಷರತ್ತು ವಿಧಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅನುಮತಿ ಪಡೆದಿರುವ ಖಾಸಗಿ ಬ್ಯಾಂಕ್‌ಗಳು, ಸೊಸೈಟಿಗಳು, ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಾಗೂ ಸರ್ಕಾರದ ಕಂಪನಿಗಳಲ್ಲಿ ಮಾಡಿರುವ ಸಾಲಕ್ಕೆ ಈ ಸುಗ್ರೀವಾಜ್ಞೆ ಅನ್ವಯಿಸುವುದಿಲ್ಲ.

ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರದ ಸಣ್ಣ ರೈತ ಅಥವಾ ಭೂರಹಿತ ಕೃಷಿ ಕಾರ್ಮಿಕರನ್ನು ದುರ್ಬಲ ವರ್ಗ ಎಂದು ಪರಿಗಣಿಸಲಾಗಿದ್ದು, ಈ ವರ್ಗದ ಜನರಿಗೂ ಈ ಯೋಜನೆಯಿಂದ ಪ್ರಯೋಜನವಾಗಲಿದೆ. ಈ ಸುಗ್ರೀವಾಜ್ಞೆ ಪ್ರಶ್ನಿಸಿ ಸಾಲ ನೀಡಿರುವವರು ನ್ಯಾಯಾಲಯಕ್ಕೆ ದೂರು ಸಲ್ಲಿಸಲು ಅವಕಾಶವಿಲ್ಲ.

ಅಲ್ಲದೆ, ಸಾಲಕ್ಕೆ ಪ್ರತಿಯಾಗಿ ಅಡಮಾನ ಇರಿಸಿಕೊಂಡಿರುವ ದಾಖಲೆ ಪತ್ರ ಹಾಗೂ ವಸ್ತುಗಳನ್ನು ವಾಪಸ್‌ ಮಾಡಬೇಕು. ವಾಪಸ್‌ ಕೊಡದಿದ್ದಲ್ಲಿ ಆ ವ್ಯಾಪ್ತಿಯ ಎಸಿ ಅಥವಾ ನೇಮಕಗೊಂಡಿರುವ ಅಧಿಕಾರಿಗೆ ದೂರು ನೀಡಬಹುದು. ಈ ಕಾಯ್ದೆಯನ್ನು ಉಲ್ಲಂಘಿಸುವ ಲೇವಾದೇವಿಗಾರರಿಗೆ 1 ವರ್ಷ ಜೈಲು ಹಾಗೂ 1.25 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಸುಗ್ರೀವಾಜ್ಞೆ ಅವಕಾಶ ಕಲ್ಪಿಸಲಿದೆ.

ಬಡ್ಡಿ ಹಾಗೂ ಚಕ್ರ ಬಡ್ಡಿಯ ಮೂಲಕ ಸಣ್ಣ ರೈತರು ಹಾಗೂ ದುರ್ಬಲ ವರ್ಗವನ್ನು ಸುಲಿಯುತ್ತಿದ್ದ ಲೇವಾದೇವಿಗಾರರು, ಗಿರವಿ ಅಂಗಡಿಗಳು ಹಾಗೂ ಅನಧಿಕೃತ ಮೈಕ್ರೊ ಫೈನಾನ್ಸ್‌ ಕಂಪೆನಿಗಳಿಗೆ ಈ ಅಧಿನಿಯಮ ಚಾಟಿ ಬೀಸಿದೆ. ಈ ಸುಗ್ರೀವಾಜ್ಞೆಯ ಮೂಲಕ ಸಣ್ಣ ರೈತರ ಋಣಭಾರ ಇಳಿಸಲು ಸರಕಾರ ಮುಂದಾಗಿದೆ.