samachara
www.samachara.com
ಗೋರಕ್ಷಕರ ಉಪಟಳಕ್ಕೆ ‘ಲ್ಯಾಬ್‌ ಮೀಟ್‌’; ಇದು ಮೇನಕಾ ಗಾಂಧಿ ಸೂಚಿಸಿದ  ಪರಿಹಾರ
COVER STORY

ಗೋರಕ್ಷಕರ ಉಪಟಳಕ್ಕೆ ‘ಲ್ಯಾಬ್‌ ಮೀಟ್‌’; ಇದು ಮೇನಕಾ ಗಾಂಧಿ ಸೂಚಿಸಿದ ಪರಿಹಾರ

ಖಾಸಗಿ ಸಮೀಕ್ಷೆಯೊಂದರ ಪ್ರಕಾರ ಶೇಕಡಾ 66 ಬಳಕೆದಾರರು ‘ಲ್ಯಾಬ್ ಮೀಟ್’ ಸವಿಯಲು ಸಿದ್ಧವಾಗಿದ್ದಾರೆ ಎಂದು ಮೇನಕಾ ಗಾಂಧಿ ತಿಳಿಸಿದ್ದಾರೆ.

ದೇಶದಾದ್ಯಂತ ಗೋರಕ್ಷಕರ ಉಪಟಳ ಜಾಸ್ತಿಯಾಗಿರುವುದು ತಿಳಿದಿರುವಂಥದ್ದೇ. ದಿನೇ ದಿನೇ ಒಂದಿಲ್ಲೊಂದು ಕಡೆ ಗೋವು ಸಾಗಣೆದಾರರ ಮೇಲೆ ಹಲ್ಲೆಗಳು ನಡೆಯುವುದು, ಜನರೇ ವ್ಯಕ್ತಿಗಳನ್ನು ಬಡಿದು ಕೊಲ್ಲುವುದು ವರದಿಯಾಗುತ್ತಿವೆ. ಇದಕ್ಕೆ ಅಂತ್ಯ ಹಾಡಲು ತಮ್ಮದೇ ಆದ ಪರಿಹಾರವೊಂದನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮುಂದಿಟ್ಟಿದ್ದಾರೆ. ಮೊದಲೆನೆಯದಾಗಿ ಕೇಂದ್ರ ಸಂಪುಟದ ಸಚಿವರೊಬ್ಬರು ಇದಕ್ಕೆ ಪರಿಹಾರ ಕಂಡುಕೊಳ್ಳಲು ಆಲೋಚಿಸಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಇದು ಸಾಂಪ್ರದಾಯಿಕ ಆಲೋಚನೆಗಳಿಗಿಂತ ಭಿನ್ನವಾಗಿದೆ.

ಹೈದರಾಬಾದ್‌ನಲ್ಲಿ ಶುಕ್ರವಾರ ‘ಫ್ಯೂಚರ್‌ ಆಫ್‌ ಪ್ರೋಟೀನ್‌ ಶೃಂಗಸಭೆ’ಯಲ್ಲಿ ಮಾತನಾಡಿದ ಅವರು, ಮಾಂಸಕ್ಕೆ ಪರ್ಯಾಯ ಮೂಲವನ್ನು ಕಂಡುಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದಿದ್ದಾರೆ. ಜತೆಗೆ ಪ್ರಾಣಿಗಳ ಜೀವಕೋಶಗಳನ್ನು ಬಳಸಿ ಪ್ರಯೋಗಾಲಯದಲ್ಲಿ ತಯಾರಿಸಲಾಗುವ ಮಾಂಸ ಅಥವಾ ‘ಶುದ್ಧ ಮಾಂಸ’ ಹಲ್ಲೆ, ಹತ್ಯೆ ಮೊದಲಾದ ಗೋ ರಕ್ಷಕರ ಉಪಟಳಗಳಿಗೆ ಪರಿಹಾರವಾಗಬಲ್ಲುದು ಎಂಬ ಮಾತುಗಳನ್ನಾಡಿದ್ದಾರೆ. “ನಮ್ಮ ಬಳಿಯಲ್ಲಿ ಶುದ್ಧ ಮಾಂಸವಿದೆ. ಕಸಾಯಿಖಾನೆಗಳಿಗೆ ದನಗಳನ್ನು ಒಯ್ಯುವಾಗ ಜನರು ದಾಳಿಗೆ ಗುರಿಯಾಗುತ್ತಿದ್ದಾರೆ. ಈ ಭಯೋತ್ಪಾದನೆ ಯಾಕೆ?” ಎಂದು ಪ್ರಶ್ನಿಸಿದ್ದಾರೆ.

ಏನಿದು ಶುದ್ಧ ಮಾಂಸ?

ಪ್ರಾಣಿಗಳ ಜೀವಕೋಶಗಳನ್ನು ಬಳಸಿಕೊಂಡು ಈ ಮಾಂಸವನ್ನು ಉತ್ಪಾದನೆ ಮಾಡಲಾಗುತ್ತದೆ. ಇದಕ್ಕೆ ಕಲ್ಚರ್ಡ್‌ ಮೀಟ್, ಶುದ್ಧ ಮಾಂಸ, ಸಿಂಥೆಟಿಕ್‌ ಮಾಂಸ ಎಂದೆಲ್ಲಾ ಕರೆಯುತ್ತಾರೆ. ತಂತ್ರಜ್ಞಾನ ಮತ್ತು ಜೀವಶಾಸ್ತ್ರ ಎರಡನ್ನೂ ಒಳಗೊಂಡ ‘ಸೆಲ್ಯುಲಾರ್ ಕೃಷಿ’ಯ ಭಾಗ ಇದು.

ಇಂಥಹದ್ದೊಂದು ಮಾಂಸದ ಕಲ್ಪನೆ ವಿಜ್ಞಾನ ಕ್ಷೇತ್ರಕ್ಕೆ ಮೊದಲೇ ಇತ್ತಾದರೂ 2000ನೇ ಇಸವಿಯಲ್ಲಿ ಈ ಸಂಬಂಧ ಜಾಸನ್ ಮ್ಯಾಥೆನಿ ಎನ್ನುವವರು ಸೆಮಿನಾರ್‌ ಪೇಪರ್‌ ಒಂದನ್ನು ಬರೆಯುವ ಮೂಲಕ ಇದು ಮತ್ತಷ್ಟು ಜನಪ್ರಿಯವಾಯಿತು. 2013ರಲ್ಲಿ ಮ್ಯಾಸ್ಟ್ರಿಚ್‌ ಯುನಿವರ್ಸಿಟಿಯ ಪ್ರಾಧ್ಯಾಪಕ ಮಾರ್ಕ್‌ ಪೋಸ್ಟ್‌ ಮೊದಲ ಬಾರಿಗೆ ಇದನ್ನು ಪುರಾವೆ ಸಮೇತ ಸಾಬೀತುಗೊಳಿಸಲು ಹೊರಟರು. ಅದಕ್ಕಾಗಿ ಅವರು ಪ್ರಯೋಗಾಲಯದಲ್ಲಿ ಬರ್ಗರ್‌ ಪ್ಯಾಟಿ (ಬರ್ಗರ್‌ ಮಧ್ಯದಲ್ಲಿಡುವ ಮಾಂಸದ ತುಂಡು) ತಯಾರಿಸಿದರು. ಅದೇ ವರ್ಷ ಆಗಸ್ಟ್‌ 5ರಂದು ಸುದ್ದಿಮನೆಯೊಂದರಲ್ಲಿ ಕ್ಯಾಮೆರಾಗಳ ಮುಂದೆ ಇದನ್ನು ಟೇಸ್ಟ್‌ ಕೂಡ ಮಾಡಲಾಯಿತು.

ಹೀಗಿದ್ದೂ ಇದರಾಚೆಗೆ ಇದು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳಲಿಲ್ಲ. ಜತೆಗೆ ಇದರ ಸಂಶೋಧನೆಗೂ ಹೆಚ್ಚಿನ ಆಸಕ್ತಿಯನ್ನು ತಾಳದೇ ಹೋದುದರಿಂದ ಲ್ಯಾಬ್‌ ಮೀಟ್‌ ಮೂಲೆ ಸೇರಿತು. ಉದ್ಯಮಿಗಳಿಗೂ ಇದು ಲಾಭದಾಯಕವಾಗಿ ಕಾಣದೇ ಹೋದುದು ಈ ಮಾಂಸದ ಪ್ರಯೋಗವನ್ನು ಅಪ್ರಸ್ತುತವಾಗಿಸಿತು.

ಆದರೆ ಇದೀಗ ಇದೇ ಮಾಂಸದ ವಿಚಾರವನ್ನು ಕೇಂದ್ರ ಸಚಿವೆ ಮೇನಕಾ ಗಾಂಧಿ ಪ್ರಸ್ತಾಪಿಸಿದ್ದಾರೆ. ಜತೆಗೆ ಖಾಸಗಿ ಸಮೀಕ್ಷೆಯೊಂದರ ಪ್ರಕಾರ ಶೇಕಡಾ 66 ಬಳಕೆದಾರರು ಇದನ್ನು ಸವಿಯಲು ಸಿದ್ಧವಾಗಿದ್ದಾರೆ ಎಂದವರು ತಿಳಿಸಿದ್ದಾರೆ. ಕೋಳಿ ಮಾಂಸ ಉತ್ಪಾದನೆ ಮಾಡುವ ಪ್ರಖ್ಯಾತ ಸಂಸ್ಥೆ ‘ವೆಂಕೀಸ್‌’ ಈ ತಂತ್ರಜ್ಞಾನದ ಅಭಿವೃದ್ಧಿಗೆ ಹಣ ಹೂಡಲು ಸಿದ್ಧವಾಗಿದೆ ಎಂದು ‘ಟೈಮ್ಸ್‌ ಆಫ್‌ ಇಂಡಿಯಾ’ ವರದಿ ಮಾಡಿದೆ. ಇವರೆಲ್ಲರ ಪಾಲ್ಗೊಳ್ಳುವಿಕೆ ಮೂಲಕ ಕೇಂದ್ರ ಸರಕಾರದ ‘ಸೆಲ್ಯುಲಾರ್‌ ಮತ್ತು ಮಾಲಿಕ್ಯುಲರ್‌ ಬಯಾಲಜಿ ಕೇಂದ್ರ’ ಈ ತಂತ್ರಜ್ಞಾನ ದೊರೆಕುವಂತೆ ಮಾಡಲಿದ್ದು ಮುಂದಿನ ಐದು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಶುದ್ಧ ಮಾಂಸ ಮಾರಾಟವಾಗಲಿದೆ ಎಂದವರು ವಿವರ ನೀಡಿದ್ದಾರೆ.

ಹಲ್ಲೆ, ಕೊಲೆಯಂಥ ಅಹಿತಕರ ಘಟನೆಗಳನ್ನು ತಡೆಯುವುದಲ್ಲದೆ ಇದರಿಂದ ಇನ್ನೂ ಹಲವು ಲಾಭಗಳಿವೆ ಎಂದು ಮೇನಕಾ ಗಾಂಧಿ ಪ್ರತಿಪಾದಿಸಿದ್ದಾರೆ. ಪ್ರಾಣಿಗಳು ಬಿಡುಗಡೆ ಮಾಡುವ ಮಿಥೇನ್‌ ಜಾಗತಿಕ ತಾಪಮಾನ ಏರಿಕೆಗೂ ಕಾರಣವಾಗಿದೆ. ಇದು ಕೇರಳದಲ್ಲಿ ಪ್ರವಾಹ, ತಮಿಳುನಾಡಿನಲ್ಲಿ ಸುನಾಮಿಯನ್ನೂ ಉಂಟು ಮಾಡುತ್ತಿದೆ. ಒಂದೊಮ್ಮೆ ನಾವು ಮಾಂಸದ ಉತ್ಪಾದನೆಗಾಗಿ ಸಾಕುವ ಪ್ರಾಣಿಗಳನ್ನು ಕಡಿಮೆ ಮಾಡಿದ್ದೇ ಆದಲ್ಲಿ ಇದರಿಂದ ಮಿಥೇನ್‌ ಬಿಡುಗಡೆ ಕೂಡ ಕಡಿಮೆಯಾಗಲಿದೆ ಎಂದವರು ಮಾಹಿತಿ ನೀಡಿದ್ದಾರೆ. ಲ್ಯಾಬ್‌ ಮೀಟ್‌ ಗ್ರಾಮೀಣ ಆರ್ಥಿಕತೆಗೂ ಶಕ್ತಿ ತುಂಬಲಿದೆ ಎಂದು ಮೇನಕಾ ಗಾಂಧಿ ವಿವರಿಸಿದ್ದಾರೆ.

ಒಟ್ಟಾರೆ ಮೇನಕಾ ಗಾಂಧಿ ಪ್ರಸ್ತಾಪಿಸಿರುವ ಶುದ್ಧ ಮಾಂಸ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಾವುದ್ಧೀನನ ಅದ್ಭುತ ದೀಪದಂತೆ ಕಾಣುತ್ತಿದೆ. ಮತ್ತದು ಹಾಗೆಯೇ ಉಳಿದುಕೊಂಡರೆ ಈ ದೇಶದ ಜನಕ್ಕೂ ನೆಮ್ಮದಿ. ಆ ನೆಮ್ಮದಿ ಆದಷ್ಟು ಬೇಗ ‘ಲ್ಯಾಬ್‌ ಮೀಟ್‌’ ರೂಪದಲ್ಲಿ ಬರಲಿ ಎಂಬುದಷ್ಟೇ ಈ ಹೊತ್ತಿನ ಆಶಯ.