ಮೊದಲು ಪ್ರವಾಹ, ಈಗ ಪ್ರಹಾರ; ಸಂಕಷ್ಟದಲ್ಲಿ ನಿರಾಶ್ರಿತರು: ಕೊಡಗಿನಿಂದ ಒಂದು ಕಹಿ ಸುದ್ದಿ
COVER STORY

ಮೊದಲು ಪ್ರವಾಹ, ಈಗ ಪ್ರಹಾರ; ಸಂಕಷ್ಟದಲ್ಲಿ ನಿರಾಶ್ರಿತರು: ಕೊಡಗಿನಿಂದ ಒಂದು ಕಹಿ ಸುದ್ದಿ

ಇದು ವೇದ ಒಬ್ಬರ ಅಸಹಾಯಕತೆ ಅಲ್ಲ. ರಾಜ್ಯಮಟ್ಟದ ಮಾಧ್ಯಮಗಳಿಗೆ ಕೊಡಗು ಎಂದರೆ ಕೊಡವರು ಮಾತ್ರ ಎಂಬಂತಾಗಿದೆ. ಆದರೆ ಪ್ರವಾಹ ಇಳಿದ ಕೆಸರು ನೆಲಕ್ಕಿಳಿದರೆ ಪುಟ್ಟ ಜಿಲ್ಲೆಯ ಭಿನ್ನ ಅನನ್ಯತೆಗಳು ಕಣ್ಣಿಗೆ ಬೀಳುತ್ತವೆ.

ಮೇಲಿನ ವಿಡಿಯೋದಲ್ಲಿ ತಮಗೆ ಸಿಕ್ಕಿದ ಪರಿಹಾರ ಸಾಮಗ್ರಿಗಳ ಪಟ್ಟಿ ಹಾಗೂ ಅದರ ಜತೆಗೆ ಸಂತ್ರಸ್ತರ ಹೆಸರಿನಲ್ಲಿ ಹೇಗೆಲ್ಲಾ ಅನ್ಯಾಯವಾಗುತ್ತಿದೆ ಎಂದು ವಿವರಿಸಿದವರ ಹೆಸರು ವೇದ. ಕೊಡಗು ಜಿಲ್ಲೆಯ ದುದ್ದುಗಲ್ಲು ಎಂಬ ಹಳ್ಳಿಯ ನಿವಾಸಿ.

ಗುರುವಾರ ಮಡಿಕೇರಿಯ ಒಕ್ಕಲಿಗ ಕಲ್ಯಾಣ ಮಂಟಪದ ಪರಿಹಾರ ಕೇಂದ್ರದ ಮುಂದೆ ಪರಿಹಾರ ಸಾಮಗ್ರಿಗಳನ್ನು ಪಡೆದುಕೊಂಡವರು ಆಶ್ರಯ ಪಡೆದ ಊರಿಗೆ ಮರಳುತ್ತಿದ್ದರು. ಈ ಸಮಯದಲ್ಲಿ ಭೇಟಿ ಮಾಡಿದ ‘ಸಮಾಚಾರ’ದ ಮುಂದೆ ಮಾತನಾಡಿದ ಅವರು ಸಂತ್ರಸ್ಥರ ಹೆಸರಿನಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ತೆರೆದಿಟ್ಟರು.

"5 ಕೆಜಿ ಸೊಸೈಟಿ ಅಕ್ಕಿ , ಸೋಪು, ಪೇಸ್ಟ್ ಮಾತ್ರ ಕೊಟ್ಟಿದ್ದಾರೆ. ಗೋಡೌನಿನಲ್ಲಿ ತುಂಬಾ ಸಾಮಾಗ್ರಿಗಳು ಇದ್ದರೂ ಅವರಿಗೆ ಬೇಕಾದವರಿಗೆ ಕೊಡುವುದಕ್ಕಾಗಿ ಇಟ್ಟುಕೊಂಡಿದ್ದು ತಮಗೆ ನೀಡುತ್ತಿಲ್ಲ,” ಎಂಬ ವೇದ ಅವರ ಮಾತುಗಳು ಅವರ ಮುಗ್ಧತೆಯನ್ನೂ ಬಿಂಬಿಸುತ್ತಿದೆ. ಹಾಗಂತ ಇದು ವೇದ ಒಬ್ಬರ ಅಸಹಾಯಕತೆ ಅಲ್ಲ. ರಾಜ್ಯಮಟ್ಟದ ಮಾಧ್ಯಮಗಳಿಗೆ ಕೊಡಗು ಎಂದರೆ ಕೊಡವರು ಮಾತ್ರ ಎಂಬಂತಾಗಿದೆ. ಆದರೆ ಪ್ರವಾಹ ಇಳಿದ ಕೆಸರು ನೆಲಕ್ಕಿಳಿದರೆ ಪುಟ್ಟ ಜಿಲ್ಲೆಯ ಭಿನ್ನ ಅನನ್ಯತೆಗಳು ಕಣ್ಣಿಗೆ ಬೀಳುತ್ತವೆ.

ಅದು ಮಹಾಮಳೆ:

ಆಗಸ್ಟ್ ತಿಂಗಳ ಮಧ್ಯದಲ್ಲಿ ಎರಡು ದಿನ ಕೊಡಗಿನಲ್ಲಿ ಬಿದ್ದ ಮಳೆ ಗುಡ್ಡ ಕುಸಿತಕ್ಕೆ ಕಾರಣವಾಗಿತ್ತು. ಶತಮಾನದ ಮಹಾಮಳೆ ತಂದ ಹಾನಿಗೆ ಜಿಲ್ಲೆಯಲ್ಲಿ ಒಟ್ಟು 13 ಹಳ್ಳಿಗಳು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿವೆ. ವಿಕೋಪಕ್ಕೆ ಇಡೀ ಕೊಡುಗೇ ಬೆಚ್ಚಿ ಬಿದ್ದಿದೆ. ಈವರೆಗೂ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಸುಮಾರು 1500 ಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡಿದ್ದು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಹುಟ್ಟಿ ಬೆಳೆದ ಮನೆ , ತೋಟ ಗದ್ದೆ ಎಲ್ಲವೂ ಸರ್ವನಾಶವಾಗಿದೆ. ಕಳೆದ ನಾಲ್ಕು ದಿನಗಳಿಂದ ಮಣ್ಣಿನಡಿಯಲ್ಲಿ ಸಿಲುಕಿರುವ ಕಳೇಬರಗಳನ್ನು ಹುಡುಕಾಡುತ್ತಿದ್ದ ರಾಷ್ಟ್ರೀಯ ವಿಪತ್ತು ದಳವು ತನ್ನ ಹುಡುಕಾಟವನ್ನು ಬಹುತೇಕ ಪೂರ್ಣಗೊಳಿಸಿದೆ. ಆದರೂ ಕೂಡ ಇನ್ನೂ 6-8 ಮಂದಿ ನಾಪತ್ತೆ ಆಗಿದ್ದಾರೆ ಎಂದು ಹೇಳಲಾಗಿದ್ದು ಬದುಕುಳಿದಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಇದರ ಜತೆಗೇ ಜಿಲ್ಲೆಯಲ್ಲಿ ಸರ್ಕಾರ 41 ಪರಿಹಾರ ಕೇಂದ್ರಗಳನ್ನು ತೆರೆದಿದ್ದು ಇಲ್ಲಿ ಸುಮಾರು 4 ರಿಂದ 5 ಸಾವಿರ ಸಂತ್ರಸ್ಥರು ಆಶ್ರಯ ಪಡೆದುಕೊಂಡಿದ್ದಾರೆ. ಇದೇ ಅಲ್ಲದೆ ಇನ್ನೂ ನೂರಾರು ಸಂತ್ರಸ್ಥರು ತಮ್ಮ ನೆಂಟರು ಬಂಧು ಮಿತ್ರರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಪರಿಹಾರದ್ದೇ ಸಮಸ್ಯೆ:

ಬಹುತೇಕ ಪರಿಹಾರ ಕೇಂದ್ರಗಳಲ್ಲಿ ಸ್ಥಳೀಯ ಮುಖಂಡರು, ಸಂತ್ರಸ್ಥರ ರಕ್ಷಣೆಯಲ್ಲಿ ತೊಡಗಿದ್ದ ಜನರೇ ಪರಿಹಾರ ಸಾಮಗ್ರಿಗಳನ್ನು ಕಳ್ಳಸಾಗಾಟ ಮಾಡಲಾರಂಭಿಸಿದ್ದಾರೆ. ಇದಕ್ಕೆ ಪುಷ್ಟಿನೀಡುವಂತೆ ಪತ್ರಿಕೆಗಳಲ್ಲಿ, ಪತ್ರಕರ್ತರೇ ಸಂತ್ರಸ್ಥರಿಗೆ ನೀಡಲು ಸಾಮಾಗ್ರಿ ಕೊಡಿ ಎಂದು ಕದ್ದೊಯ್ದ ಪ್ರಕರಣ ಮಡಿಕೇರಿಯಲ್ಲಿ ವರದಿಯಾಗಿದೆ. ನಾಪೋಕ್ಲು ಎಂಬಲ್ಲಿ ಅಲ್ಲಿನ ಸಬ್ ಇನ್ಸ್‍ಪೆಕ್ಟರ್ ಒಬ್ಬರು ಸುಮಾರು 10 ಲಾರಿ ಲೋಡ್ ಗಳಷ್ಟು ಸಾಮಾಗ್ರಿಗಳನ್ನು ಬೇರೆಡೆ ಸಾಗಿಸಲು ಸಹಾಯ ಮಾಡಿದರೆಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಸೋಮವಾರಪೇಟೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರೊಬ್ಬರು ಪರಿಹಾರ ಸಾಮಾಗ್ರಿಗಳನ್ನು ಮನೆಯಲ್ಲಿ ದಾಸ್ತಾನು ಮಾಡಿಕೊಂಡರು ಎಂದೂ ಸಂತ್ರಸ್ಥರು ಆರೋಪಿಸಿದ್ದಾರೆ.

ಈ ಮೊದಲೇ ಇಂತಹ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಡಿಕೇರಿ, ವೀರಾಜಪೇಟೆ ಮತ್ತು ಕುಶಾಲನಗರ ಎಪಿಎಂಸಿ ಗೋಡೌನ್‌ಗಳಲ್ಲಿ ಮಾತ್ರ ಪರಿಹಾರ ಸಾಮಗ್ರಿಗಳನ್ನು ಇಳಿಸಬೇಕೆಂದು ಆದೇಶ ಹೊರಡಿಸಿದ್ದರು. ಆದರೆ ಪರಿಹಾರ ಸಾಮಗ್ರಿ ಹೊತ್ತು ತರುವ ವಾಹನಗಳ ಚಾಲಕರು ಅರ್ಧದಷ್ಟು ಸಾಮಗ್ರಿ ಇಳಿಸಿ ಪುನಃ ವಾಪಾಸ್ ಕೊಂಡೊಯ್ದು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಪರಿಸ್ಥಿತಿ ಹೀಗಿರುವಾಗಲೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಪರಿಹಾರ ನಿರ್ವಹಣೆಯನ್ನು ಬದಿಗೊತ್ತಿ ಅವರ ಮೂಗಿನ ನೇರಕ್ಕೆ ನಡೆದುಕೊಂಡಿದ್ದಾರೆ. ಸ್ಥಳೀಯ ಸಂಸದ ಪ್ರತಾಪ್ ಸಿಂಹ, ಪುನರ್‌ವಸತಿ ವಿಚಾರದಲ್ಲಿ ಸಂಘ ಪರಿವಾರದ ಗುಂಗಿನಿಂದ ಹೊರಗೆ ಬಂದಂತೆ ಕಾಣಿಸುತ್ತಿಲ್ಲ. ಮಾನವೀಯತೆಗಿಂತ ಅವರಿಗೆ ರಾಜಕೀಯ ದೊಡ್ಡದಾಗಿದೆ. ಒಂದು ಕಡೆ ಮಾನವೀಯತೆಗೆ ಸ್ಪಂದಿಸುವ ಜನರಿದ್ದೂ, ತಳಮಟ್ಟದಲ್ಲಿ ಫಲ ನೀಡುತ್ತಿಲ್ಲ. ಹೀಗಾಗಿ ವೇದ ರೀತಿಯ ನಿರಾಶ್ರಿತರು ಇನ್ನಷ್ಟು ಜರ್ಜರಿತರಾಗುತ್ತಿದ್ದಾರೆ. ರಾಜ್ಯ ಸರಕಾರ ಮಧ್ಯಪ್ರವೇಶದ ಅಗತ್ಯ ಹಿಂದೆಂದಿಗಿಂತಲೂ ಈಗ ಕೊಡಗಿನಲ್ಲಿ ಹೆಚ್ಚಿದೆ.