‘ಪೀಪಲ್‌ ಫಾರ್‌ ಕೊಡಗು’: ಕಾಟಗೇರಿಯ ಗಿಲ್ಬರ್ಟ್ ಮೆಂಡೋನ್ಸಾ ಕೊನೆಗೂ ಬದುಕುಳಿಯಲಿಲ್ಲ... 
COVER STORY

‘ಪೀಪಲ್‌ ಫಾರ್‌ ಕೊಡಗು’: ಕಾಟಗೇರಿಯ ಗಿಲ್ಬರ್ಟ್ ಮೆಂಡೋನ್ಸಾ ಕೊನೆಗೂ ಬದುಕುಳಿಯಲಿಲ್ಲ... 

ಪೀಪಲ್ ಫಾರ್ ಕೊಡಗು ತಂಡ ಶುಕ್ರವಾರ ನಡೆಸಿದ ಕಾರ್ಯಾಚರಣೆ ವೇಳೆ ಡ್ರೋಣ್ ಕ್ಯಾಮೆರಾಗಳು ಸೆರೆ ಹಿಡಿದ ಚಿತ್ರಗಳ ಗುಚ್ಚ ಇಲ್ಲಿದೆ.

ಮಡಿಕೇರಿ ಮಂಗಳೂರು ರಸ್ತೆಯ ಪುಟ್ಟ ಹಳ್ಳಿ ಹೆಸರು ಕಾಟಗೇರಿ. ಅಲ್ಲೊಬ್ಬರು ಕೃಷಿಕರು, ಹೆಸರು ಗಿಲ್ಬರ್ಟ್ ಮೆಂಡೋನ್ಸಾ. ಏಳು ದಿನಗಳ ಹಿಂದೆ ಭಾರಿ ಮಳೆ ಸುರಿಯಲು ಶುರುವಾಗುತ್ತಿದ್ದಂತೆ ರಾತ್ರಿ ಮನೆಯಿಂದ ಹೊರಬಿದ್ದರು. ತೋಟಕ್ಕೆ ನೀರು ನುಗ್ಗುತ್ತದೆ, ನೆಟ್ಟ ಗಿಡಗಳನ್ನು ರಕ್ಷಣೆ ಮಾಡಬೇಕೆಂಬುದು ಅವರ ಇಚ್ಚೆಯಾಗಿತ್ತು. ಮನೆಯಲ್ಲಿ ಪತ್ನಿ, ಇಬ್ಬರು ಮಕ್ಕಳನ್ನು ಹಿಂದೆ ಬಿಟ್ಟು ಹೋದವರು ಇವತ್ತಿಗೂ ಪತ್ತೆಯಾಗಿಲ್ಲ.

ಅವತ್ತು ಮಳೆ ಜೋರಾದಂತೆ ಮಕ್ಕಳನ್ನು ಕರೆದುಕೊಂಡು ಊರಿನ ಇತರೆ ಮನೆಗಳಿಗೆ ಎಚ್ಚರಿಕೆ ಕೊಟ್ಟು ಹೊರ ಬಂದಿದ್ದರು ಗಿಲ್ವರ್ಟ್ ಪತ್ನಿ. ಅವರ ಜತೆಗೆ ಐದಾರು ಜನರಷ್ಟೆ ಮಳೆಯಲ್ಲಿ ಆಯಕಟ್ಟಿನ ಸ್ಥಳ ಕಂಡುಕೊಂಡರು. ಊರಿನ ಸುಮಾರು 12 ಜನ ಸುಮಾರು ಒಂದೂವರೆ ದಿನ ನಿಂತ ಪ್ರವಾಹದ ನೀರಿನಲ್ಲೇ ಬದುಕುಳಿಯುವ ಪ್ರಯತ್ನ ಮುಂದುವರಿಸಿದರು. ಇವತ್ತು, ಅವರನ್ನೆಲ್ಲಾ 'ಪೀಪಲ್ ಫಾರ್ ಕೊಡಗು’ ಸ್ವಯಂ ಸೇವಕರು ಹೊರ ತಂದಿದ್ದಾರೆ.

‘ಸಮಾಚಾರ’ದ ಜತೆ ಮಾತನಾಡಿದ ಪೀಪಲ್ ಫಾರ್ ಕೊಡಗು ತಂಡದ ಮುಖ್ಯಸ್ಥ ಚಕ್ರವರ್ತಿ ಚಂದ್ರಚೂಡ್, “ನನ್ನೊಳಗೆ ಒಬ್ಬ ಹೊಸ ಮನುಷ್ಯ ಹುಟ್ಟಿದ್ದಾನೆ,’’ ಎಂದರು. ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಉಳಿದುಕೊಂಡು, ಹೆಚ್ಚು ಕಡಿಮೆ ಜಿಲ್ಲಾಡಳಿತಕ್ಕೆ ಸಮಾನಾಂತರವಾಗಿ ವಿಕೋಪ ನಿರ್ವಹಣೆ ಮಾಡುತ್ತಿರುವ ತಂಡವನ್ನು ಇವರು ಮುನ್ನಡೆಸುತ್ತಿದ್ದಾರೆ.

“ಕಾಟಗೇರಿ ಹಳ್ಳಿಯ ಜನರನ್ನು ರಕ್ಷಿಸಿದೆವು. ಮಳೆ ಆರಂಭವಾಗುತ್ತಿದ್ದಂತೆ ಹೊರಹೋದವರನ್ನೂ ಸಂಪರ್ಕಿಸಿದೆವು. ಆದರೆ ತೋಟ ರಕ್ಷಣೆಗೆ ಮುಂದಾದ ಗಿಲ್ಬರ್ಟ್ ದೇಹ ಮಾತ್ರ ಸಿಕ್ಕಿರಲಿಲ್ಲ. ಅದನ್ನು ಇವತ್ತಿನ ಕಾರ್ಯಾಚರಣೆಯಲ್ಲಿ ಹೊರತೆಗೆದೆವು. ಒಂದು ಹಳ್ಳಿಯ ಅಷ್ಟೂ ಜನ ಸುರಕ್ಷಿತವಾಗಿದ್ದಾರೆ. ಆದರೆ ಗಿಡಗಳನ್ನು ಉಳಿಸಲು ಹೋದ ವ್ಯಕ್ತಿ ಒಬ್ಬರು ವಿಕೋಪಕ್ಕೆ ಬಲಿಯಾಗಿದ್ದಾರೆ. ಎಂತಹ ದುರಂತ ನೋಡಿ,’’ ಎಂದರು ಚಂದ್ರಚೂಡ್.

“ನಮಗಿರುವ ಮಾಹಿತಿ ಪ್ರಕಾರ, ಸದ್ಯ ಕೊಡಗು ಜಿಲ್ಲೆಯಲ್ಲಿ ಒಟ್ಟು 6,130 ನಿರಾಶ್ರಿತರಿಗೆ ಅವಕಾಶ ಮಾಡಿಕೊಡಲಾಗಿದೆ. ಈಗ ನೀರು ಇಳಿಯುತ್ತಿರುವುದರಿಂದ ಹೊಸಬರ ಪತ್ತೆಯಾಗುತ್ತಿದೆ. ಇನ್ನೂ 2100 ಜನ ಹೊರಗೇ ಇದ್ದಾರೆ. ಅವರಿಗೂ ಶಿಬಿರಗಳಲ್ಲಿ ಅವಕಾಶ ನೀಡಬೇಕು. ಅಗತ್ಯ ಸೌಕರ್ಯ ಒದಗಿಸಬೇಕು,’’ ಎಂದು ಪೀಪಲ್ ಫಾರ್ ಕೊಡಗು ಪರವಾಗಿ ಬೇಡಿಕೆ ಮುಂದಿಡುತ್ತಾರೆ ಚಂದ್ರಚೂಡ್.

ಪೀಪಲ್ ಫಾರ್ ಕೊಡಗು ತಂಡ ಶುಕ್ರವಾರ ನಡೆಸಿದ ಕಾರ್ಯಾಚರಣೆ ವೇಳೆ ಡ್ರೋಣ್ ಕ್ಯಾಮೆರಾಗಳು ಸೆರೆ ಹಿಡಿದ ಚಿತ್ರಗಳ ಗುಚ್ಚ ಇಲ್ಲಿದೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಕೂಡುಮಂಗಳೂರು ಕಣಿವೆ. ಹಾರಂಗಿ ಹಿನ್ನೀರು ಮತ್ತು ಕಾವೇರಿ ನದಿ ಸೇರುವ ಜಾಗ. ಇಷ್ಟು ದಿನಗಳ ಕಾಲ ಒದ್ದು ನಿಂತಿದ್ದ ನೀರು ಕೊಂಚ ತಗ್ಗಿದೆ. ಹೀಗಾಗಿ 'ಪೀಪಲ್ ಫಾರ್ ಕೊಡಗು' ತಂಡ ಶುಕ್ರವಾರ ಭೇಟಿ ನೀಡಲು ಸಾಧ್ಯವಾಗಿದೆ. 