samachara
www.samachara.com
ಪರಿಹಾರದಲ್ಲೂ ‘ಪರಿವಾರ’ ಮರೆಯದ ಸಚಿವೆಯನ್ನು ದಾರಿ ತಪ್ಪಿಸಿದ್ದು ಪ್ರತಾಪ್ ಸಿಂಹ!
FB/prathapsimha
COVER STORY

ಪರಿಹಾರದಲ್ಲೂ ‘ಪರಿವಾರ’ ಮರೆಯದ ಸಚಿವೆಯನ್ನು ದಾರಿ ತಪ್ಪಿಸಿದ್ದು ಪ್ರತಾಪ್ ಸಿಂಹ!

ಕೊಡಗಿಗೆ ವಿಕೋಪ ವೀಕ್ಷಣೆಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ‘ಸಂಘ ಪರಿವಾರ’ದ ಮೇಲಿನ ತಮ್ಮ ಒಲವನ್ನು ತೆರೆದಿಟ್ಟಿದ್ದಾರೆ. ಜತೆಗೆ ಸ್ವಲ್ಪ ಗರಂ ಕೂಡ ಆಗಿದ್ದಾರೆ. ಕಾರಣ ಏನು ಎಂದರೆ ಸಂಸದರು ಎದುರಿಗೆ ಬರುತ್ತಾರೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಪ್ರಕೃತಿ ವಿಕೋಪ ಪೀಡಿತ ಕೊಡಗಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ರೂಪದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರಕಾರ ಶುಕ್ರವಾರ ಪ್ರತ್ಯಕ್ಷವಾಯಿತು. ಹೀಗೆ ತಡವಾಗಿ ನಡೆದ ವೀಕ್ಷಣೆಯಲ್ಲೂ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆಕ್ಷೇಪವೆತ್ತಿದ ನಿರ್ಮಲಾ ಸೀತಾರಾಮನ್‌ ಪತ್ರಿಕಾಗೋಷ್ಠಿಯಲ್ಲೇ, ಉಸ್ತುವಾರಿ ಸಚಿವ ಸಾ. ರಾ. ಮಹೇಶ್‌ ವಿರುದ್ಧ ರೇಗಾಡಿದ್ದಾರೆ.

ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್‌ ಸದ್ಯ ರಕ್ಷಣಾ ಖಾತೆಯ ಹೊಣೆ ಹೊತ್ತಿದ್ದಾರೆ. ಅವರು ಮಡಿಕೇರಿಗೆ ಬಂದು, ರಾಜ್ಯ ಸಚಿವರೊಬ್ಬರ ಮೇಲೆ ಹೀಗೇಕೆ ಕೂಗಾಡಿದರು?

ನಿರ್ಮಲಾ ಸೀತಾರಾಮನ್‌ ಸಾ.ರಾ.ಮಹೇಶ್ ವಿರುದ್ಧ ಗರಂ ಆದರು ಎಂಬ ಮೇಲ್ನೋಟದ ಸುದ್ದಿಗಳಷ್ಟೇ ಹೊರ ಬರುತ್ತಿವೆ. ಕಸ್ತೂರಿ ರಂಗನ್‌ ವರದಿ ಸಂಬಂಧ ನಿವೃತ್ತ ಸೈನಿಕರು ಹಾಗೂ ಪರಿಸರವಾದಿಗಳು ಕೇಂದ್ರ ಸಚಿವೆಯನ್ನು ಭೇಟಿ ಮಾಡಲು ಹೋದಾಗ ಇದಕ್ಕೆ ರಾಜ್ಯ ಸರಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ವಾಗ್ವಾದ ನಡೆದಿವೆ ಎಂಬ ವರದಿಗಳು ಪ್ರಕಟವಾಗಿವೆ. ಆದರೆ ಒಳಗಿನ ಕಥೆ ಬೇರೆಯದೇ ಇದೆ. ಅದನ್ನು ‘ಸಮಾಚಾರ’ ಇಲ್ಲಿ ಬಿಚ್ಚಿಟ್ಟಿದೆ.

ಆಳ-ಅಗಲ:

ಇವತ್ತು ಮಳೆಯಿಂದಾಗಿ ಹಾನಿಗೊಳಗಾಗಿರುವ ಕೊಡಗಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ ನೀಡುವ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು. ಭೇಟಿಯ ವೇಳಾಪಟ್ಟಿಯನ್ನೂ ತಯಾರಿಸಲಾಗಿತ್ತು. ವೇಳಾಪಟ್ಟಿಯಲ್ಲಿ ಶುಕ್ರವಾರ ಬೆಳಿಗ್ಗೆ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಭೆ ನಿಗದಿಯಾಗಿತ್ತು. ಸಭೆಗೂ ಮುನ್ನ ನಿವೃತ್ತ ಸೈನಿಕರು, ಪರಿಸರವಾದಿಗಳ ಭೇಟಿಯ ಕಾರ್ಯಕ್ರಮ ನಿಗದಿಯಾಗಿತ್ತು. ಮತ್ತು ಅದರಂತೆ ಅವರು ರಕ್ಷಣಾ ಸಚಿವೆಯನ್ನು ಭೇಟಿಯೂ ಆಗಿದ್ದಾರೆ.

ಇದೇ ಸಂದರ್ಭದಲ್ಲಿ ಕೊಡಗು ಉಸ್ತುವಾರಿ ಸಚಿವ ಸಾ. ರಾ. ಮಹೇಶ್‌ ಕರ್ನಾಟಕಕ್ಕೆ ಪ್ಯಾಕೇಜ್‌ ಘೋಷಣೆ ಮಾಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇಷ್ಟಕ್ಕೇ ನಿರ್ಮಲಾ ಸೀತಾರಾಮನ್‌ ಕೆಂಡಾಮಂಡಲರಾಗಿದ್ದಾರೆ.

“ನಾವು ಕರ್ನಾಟಕಕ್ಕೆ ಈಗಲೇ ಪ್ಯಾಕೇಜ್‌ ಘೋಷಣೆ ಮಾಡಲು ಕೋರಿಕೆ ಸಲ್ಲಿಸಿದೆವು. ಕೇರಳಕ್ಕೆ ಕೊಟ್ಟಿದ್ದೀರಿ, ನಮಗೇಕೆ ಕೊಡಲಿಲ್ಲ ಎಂದು ನೆನಪು ಮಾಡಿಕೊಟ್ಟೆವು. ಈ ಸಮಯದಲ್ಲಿ ಹಾಗೆಲ್ಲಾ ಪರಿಹಾರ ಘೋಷಣೆ ಸಾಧ್ಯ ಇಲ್ಲ. ವರದಿ ಬರಬೇಕು ಎಂದರು. ಇದು ವೇದಿಕೆ ಹಿಂದೆ ನಮ್ಮ ನಡುವೆ ನಡೆದ ಮಾತುಕತೆ. ನಾವು ಮಾತನಾಡಿಸುವ ಮುನ್ನವೇ ನಿರ್ಮಲಾ ಮೇಡಂ ಸ್ವಲ್ಪ ಗರಂ ಆಗಿದ್ದರು. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ,’’ ಎಂಬುದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಾ. ರಾ. ಮಹೇಶ್‌ ಪ್ರತಿಕ್ರಿಯೆ.

ಪ್ಯಾಕೇಜ್‌ಗಾಗಿ ಮನವಿ ಮಾಡಿಕೊಂಡಿದ್ದಕ್ಕೆ ಸಿಟ್ಟಿನಲ್ಲೇ ಸಭೆಗೆ ಆಗಮಿಸಿದ ನಿರ್ಮಲಾ ಸೀತಾರಾಮನ್‌ ಅಲ್ಲೂ ಜಿಲ್ಲಾಧಿಕಾರಿ, ಮಹೇಶ್ ವಿರುದ್ಧ ಹರಿಹಾಯಲು ಆರಂಭಿಸಿದರು.

ಗರಂ ಆದ ನಿರ್ಮಲಾ ಸೀತಾರಾಮನ್

Posted by News18 Kannada on Friday, August 24, 2018

“..ನಾನು ನಿಮಿಷ ನಿಮಿಷಕ್ಕೂ ನಿಗದಿಯಾದ ಕಾರ್ಯಕ್ರದಂತೆಯೇ ನಡೆದುಕೊಳ್ಳುತ್ತಿದ್ದೇನೆ. ನಾನು ಅದನ್ನು ಉಲ್ಲಂಘಿಸುವುದಿಲ್ಲ. ಒಂದೊಮ್ಮೆ ಅಧಿಕೃತವಾಗಿರುವುದು ಮುಖ್ಯ ಅನ್ನುವುದಾದರೆ, ನನಗೆ ನನ್ನ ‘ಪರಿವಾರ’ ಕೂಡ ಅಷ್ಟೇ ಮುಖ್ಯ. ಇಲ್ಲಿ ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ ಹಾಗೆ ಕೇಳಬೇಕಾಗಿದೆ. ಇದು ನಂಬಲಸಾಧ್ಯ (Unbelivable),” ಎಂದು ಸಾ.ರಾ.ಮಹೇಶ್‌ ವಿರುದ್ಧ ಎಲ್ಲರ ಸಮ್ಮುಖದಲ್ಲಿ ನಿರ್ಮಲ ಕೆಂಡ ಕಾರಿದ ದೃಶ್ಯ ಮೇಲಿದೆ.

ಜತೆಗೆ “ನೀವು ನನಗೆ ನಿಮಿಷ ನಿಮಿಷಗಳ ವೇಳಾಪಟ್ಟಿಯನ್ನು ಇಟ್ಟಿರಬೇಕು. ನಿಮ್ಮ ನಡುವೆ ಅಭಿಪ್ರಾಯ ಬೇಧ ಇದ್ದಲ್ಲಿ ನಾನು ಬರುವ ಮೊದಲೇ ಗುದ್ದಾಡಬೇಕಿತ್ತು. ನನ್ನನ್ನು ಯಾಕೆ ಮುಜುಗರಕ್ಕೀಡು ಮಾಡುತ್ತೀರಿ?” ಎಂದು ಜಿಲ್ಲಾಧಿಕಾರಿ ಶ್ರೀವಿದ್ಯಾರನ್ನು ಉದ್ದೇಶಿಸಿ ಹೇಳಿದ್ದಾರೆ.

ಆಗ ಪಕ್ಕದಲ್ಲೇ ಇದ್ದ ಮಹೇಶ್‌, “ಎಕ್ಸ್‌ಕ್ಯೂಸ್‌ ಮಿ ಮ್ಯಾಡಮ್‌.. ನಿಮಗೆ ಬೇಕಾದ ಮಾಹಿತಿಯನ್ನು ಇವರಿಂದ (ಸಭೆಯಲ್ಲಿದ್ದ ಅಧಿಕಾರಿಗಳಿಂದ) ಪಡೆದುಕೊಂಡು ನಿಮಗೆ ಇಷ್ಟ ಬಂದ ಹಾಗೆ ಮಾಡಿ,” ಎಂದಿದ್ದಾರೆ. ಜತೆಗೆ, “ಎಲ್ಲಿಗೆ ಹೋಗಬೇಕು ಎಂಬುದನ್ನು ಮ್ಯಾಡಮ್‌ ಡಿಸೈಡ್‌ ಮಾಡಲಿ” ಎಂದು ಮಹೇಶ್‌ ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ ಹೇಳಿದ್ದೇ ತಡ ಕ್ರುದ್ಧರಾದ ನಿರ್ಮಲಾ ಸೀತಾರಾಮನ್‌, “ಮ್ಯಾಡಮ್‌ ಯಾವುದನ್ನೂ ಡಿಸೈಡ್‌ ಮಾಡುವುದಿಲ್ಲ” ಎಂದು ಕಂಗ್ಲೀಷ್‌ನಲ್ಲಿಯೇ ಗುಡುಗಿದ್ದಾರೆ.

ಅಸಲಿ ವಿಷಯ ಇದು:

ಮ್ಯಾಡಮ್‌ ಯಾಕೆ ಹೀಗೆ ಸಿಟ್ಟಿಗೆದ್ದರು ಎಂದು ಆಳಕ್ಕಿಳಿದರೆ ಅಲ್ಲಿ ‘ಪರಿವಾರ’ ಮೆಚ್ಚಿಸಲು ಕೇಂದ್ರ ಸಚಿವರ ವೇಳಾಪಟ್ಟಿಯಲ್ಲಿ ಕೊನೆಹಂತದಲ್ಲಿ ತಂದ ಬದಲಾವಣೆ ಹಾಗೂ ಅದರ ಹಿಂದಿನ ಕೈ ಆಚೆಗೆ ಬರುತ್ತದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದನ್ನು ಯಾವತ್ತೋ ಮರೆತಿರುವ ನಿರ್ಮಲಾ ಸೀತಾರಾಮನ್‌ ದೆಹಲಿಯಿಂದ ಬಂದಿದ್ದು ಕೊಡಗಿನ ವಿಕೋಪ ವೀಕ್ಷಣೆಗೆ. ಆದರೆ ಅವರು ಹೆಜ್ಜೆ ಹೆಜ್ಜೆಗೂ ವೀಕ್ಷಣೆಗಿಂತ ಹೆಚ್ಚು ಸಮಯ ತಮ್ಮ ಸಂಘ ಪರಿವಾರವನ್ನು ಮೆಚ್ಚಿಸಲು ಪ್ರಯತ್ನಿಸಿದ್ದು ಕಾಣಿಸುತ್ತದೆ. ಮತ್ತು ತಾವದನ್ನು ಹೆಮ್ಮೆಯಿಂದ ಮಾಡುತ್ತಿದ್ದೇನೆ ಎಂಬುದನ್ನು ಅವರು ವಿಡಿಯೋದಲ್ಲೇ ಒಪ್ಪಿಕೊಂಡಿದ್ದು ನನಗೆ ‘ಪರಿವಾರ’ವೂ ಮುಖ್ಯ ಎಂದಿದ್ದಾರೆ.

ನಿಗದಿತ ವೇಳಾಪಟ್ಟಿಯಂತೆ ನಿರ್ಮಲಾ ಸೀತಾರಾಮನ್‌, “ಎರಡು ಪ್ರೋಗ್ರಾಂ ಕ್ಯಾನ್ಸಲ್‌ ಮಾಡಿದರು. ಕುಶಾಲನಗರದ ಕುವೆಂಪು ಮತ್ತು ಸಾಯಿ ಬಡಾವಣೆಗಳಿಗೆ ಭೇಟಿ ನಿಗದಿಯಾಗಿತ್ತು. ಮಾದಾಪುರ ಮತ್ತು ಸೇವಾ ಭಾರತಿ ಭೇಟಿ ಪಟ್ಟಿಯಲ್ಲಿ ಇರಲಿಲ್ಲ,” ಎನ್ನುತ್ತಾರೆ ಸಾ.ರಾ. ಮಹೇಶ್‌.

ಇಂಥಹದ್ದೊಂದು ವೇಳಾಪಟ್ಟಿ ಬದಲಾಗಿದ್ದು ನನಗೆ ತಿಳಿದೇ ಇರಲಿಲ್ಲ ಎಂದು ರಾಜ್ಯ ಸಚಿವರು "ಮೊದಲ ಪಟ್ಟಿಯನ್ನು ಜಿಲ್ಲಾಧಿಕಾರಿ ಕುಳಿತು ರಚಿಸಿರುವಂತೆ ಕಾಣಿಸುತ್ತದೆ. ಅವರು ಹೆಚ್ಚು ವಿಕೋಪಕ್ಕೀಡಾದ ಪ್ರದೇಶಗಳನ್ನು ಭೇಟಿಯಲ್ಲಿ ಸೇರಿಸಿರುವ ಸಾಧ್ಯತೆ ಇದೆ. ಆದರೆ ಕೊನೆಯ ಕ್ಷಣದಲ್ಲಿ ಇದರಲ್ಲಿ ಪ್ರತಾಪ್‌ ಸಿಂಹ ಕೈಯಾಡಿಸಿದ್ದಾರೆ,’’ ಎಂದು ಹೇಳಿದರು.

ಸಚಿವರ ಇಂತಹ ಗಂಭೀರ ಆರೋಪಕ್ಕೆ ಪೂರಕವಾಗಿ ಗುರುವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಸಂಸದ ಪ್ರತಾಪ್ ಸಿಂಹ ಹಾಕಿರುವ ಪೋಸ್ಟ್‌ ಅನುಮಾನ ಹುಟ್ಟಿಸುತ್ತದೆ. ಮೈಸೂರಿನಲ್ಲಿ ರಕ್ಷಣಾ ಸಚಿವರನ್ನು ಸ್ವಾಗತಿಸಿದ ಫೋಟೋ ಹಾಕಿರುವ ಪ್ರತಾಪ್‌ ಸಿಂಹ ನಾಳೆ ಸಚಿವರು ಮಾದಾಪುರಕ್ಕೆ ಭೇಟಿ ನೀಡಲಿದ್ದಾರೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

ಅಷ್ಟಕ್ಕೂ ಮಾದಾಪುರಕ್ಕೆ ಯಾಕೆ ಭೇಟಿ ನೀಡಿದರು ಎಂದು ಹುಡುಕುತ್ತಾ ಹೊರಟರೆ ಅಲ್ಲಿ ಮತ್ತೊಂದು ಕಥೆ ತೆರೆದುಕೊಳ್ಳುತ್ತದೆ. ಹಾಗೆ ನೋಡಿದರೆ ಕೊಡಗಿನಲ್ಲಿ ಮಾದಾಪುರಕ್ಕಿಂತ ಹೆಚ್ಚು ಹಾನಿಗೀಡಾದ ಪ್ರದೇಶಗಳಿದ್ದವು. ಆದರೆ ಇದು ಬಿಜೆಪಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶ. ಜತೆಗೆ ಶಾಸಕ ಅಪ್ಪಚ್ಚು ರಂಜನ್‌ ಮತ್ತು ಅವರ ಸಹೋದರ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಮನೆ ಇದೇ ಪರಿಸರದಲ್ಲಿ ಇದೆ. ಇದೇ ಕಾರಣಕ್ಕೆ ವೇಳಾಪಟ್ಟಿ ಬದಲು ಮಾಡಿ ಇಲ್ಲಿಗೆ ಭೇಟಿ ಹಾಕಿಕೊಂಡ ಸಾಧ್ಯತೆ ಇದೆ. ಇನ್ನೊಂದು ಕಡೆ ಆರ್‌ಎಸ್‌ಎಸ್‌ನ ಅಂಗ ಸಂಸ್ಥೆ, ಸೇವಾ ಭಾರತಿಯ ನಿರಾಶ್ರಿತರ ಕೇಂದ್ರಕ್ಕಷ್ಟೇ ತೆರಳಿ ನಿರ್ಮಾಲಾ ಸೀತಾರಾಮನ್‌ ಆಡಳಿತ ನಿಷ್ಠೆಗಿಂತ ಹೆಚ್ಚಾಗಿ ಪರಿವಾರ ನಿಷ್ಠೆಯನ್ನು ಮೆರೆದಿದ್ದಾರೆ.

ಮಾದಾಪುರದಲ್ಲಿ ಬಿಜೆಪಿ ಜನಪ್ರತಿನಿಧಿಗಳಾದ ಪ್ರತಾಪ್‌ ಸಿಂಹ, ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯರೊಂದಿಗೆ ನಿರ್ಮಲಾ ಸೀತಾರಾಮನ್
ಮಾದಾಪುರದಲ್ಲಿ ಬಿಜೆಪಿ ಜನಪ್ರತಿನಿಧಿಗಳಾದ ಪ್ರತಾಪ್‌ ಸಿಂಹ, ಅಪ್ಪಚ್ಚು ರಂಜನ್, ಕೆ.ಜಿ ಬೋಪಯ್ಯರೊಂದಿಗೆ ನಿರ್ಮಲಾ ಸೀತಾರಾಮನ್

ಈ ಹಿಂದೆಯೇ ಪ್ರತಾಪ್‌ ಸಿಂಹ ಫೇಸ್‌ಬುಕ್‌ ಲೈವ್‌ನಲ್ಲಿ ಇಡೀ ಕೊಡಗಿನಲ್ಲಿ ಎಲ್ಲಾ ಪರಿಹಾರ ಕಾರ್ಯಗಳನ್ನು ಮಾಡಿದ್ದು ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಹಾಗೂ ಸುನಿಲ್‌, ಅಪ್ಪಚ್ಚು ರಂಜನ್, ಬೋಪಯ್ಯ ಮತ್ತು ನಾನು ಮಾತ್ರ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಇದೀಗ ವಿಕೋಪ ವೀಕ್ಷಣೆಯಲ್ಲೂ ನಿರ್ಮಲಾ ಸೀತಾರಾಮನ್‌ ಸುತ್ತ ಅದೇ ತಂಡ ಕಾಣಿಸಿಕೊಂಡಿದೆ. ಅಲ್ಲಿ ಜಿಲ್ಲಾಧಿಕಾರಿ ಬಿಟ್ಟು ಬೇರಾರು ಅಧಿಕಾರಿಗಳಾಗಲಿ, ರಾಜ್ಯ ಸರಕಾರದ ಪ್ರತಿನಿಧಿಗಳಾಗಲೀ ಕಾಣಿಸಿಲ್ಲ. ಮುಖ್ಯವಾಗಿ ಸಭೆಯಲ್ಲಿ ಸಾ.ರಾ. ಮಹೇಶ್‌ ಅನುಪಸ್ಥಿತಿ ಎಲ್ಲೆಲ್ಲೂ ಎದ್ದು ಕಾಣುತ್ತಿತ್ತು. “ಮೊದಲು ಕುವೆಂಪು ನಗರ ಅಂದರು. ಅಲ್ಲಿಗೆ ಕಾಯುತ್ತಿದ್ದೆವು. ಅಲ್ಲಿಗೆ ಬರಲಿಲ್ಲ. ಸಾಯಿ ಬಡಾವಣೆಯಲ್ಲಿ ಕಾಯುತ್ತಿದ್ದೆವು. ಅಲ್ಲಿಗೆ ಬರಲಿಲ್ಲ. ಮಾದಾಪುರ ನಮಗೆ ಗೊತ್ತಿರಲ್ಲ,” ಎನ್ನುತ್ತಾರೆ ಸಚಿವ ಮಹೇಶ್‌.

ಹೀಗೆ ರಾಜ್ಯ ಸರಕಾರವನ್ನು ಪೂರ್ತಿ ಬದಿಗೊತ್ತಿ ತಮ್ಮ ಸಂಘ ಪರಿವಾರದ ಶಾಸಕರು, ಸಂಸದರನ್ನ ಬೆನ್ನಿಗಿಟ್ಟುಕೊಂಡು ವಿಕೋಪ ವೀಕ್ಷಣೆ ಎಂಬ ಹರಿಕೆಯನ್ನು ಮುಗಿಸಿ ನಿರ್ಮಲಾ ಸೀತಾರಾಮನ್‌ ವಾಪಸಾಗಿದ್ದಾರೆ. ಹೀಗೊಂದು ವೀಕ್ಷಣೆ ಮಾಡಿ ಕರ್ನಾಟಕಕ್ಕೆ ನೀಡಿದ್ದಾದರೂ ಏನು ಎಂದು ಕೇಳಿದರೆ ಉತ್ತರ ಶೂನ್ಯ.

ಒಂದು ಕಡೆ ಜನ ಸ್ವಯಂ ಪ್ರೇರಣೆಯಿಂದಲೇ ನೀಡಿದ ನೆರವು ಸರಿಯಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನೊಂದು ಕಡೆ ಕೇಂದ್ರದ ಪ್ರತಿನಿಧಿಯಾಗಿ ಬಂದವರು ಕೊಡಗು ಸಂಘಪರಿವಾರದ ಪ್ರತಿನಿಧಿಯಾಗಿ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದ ಜನ ನಲುಗಿದ್ದರೆ, ಸಾವು ನೋವಿನ ಮನೆಗಳಲ್ಲಿ ಇರುವ ‘ಪರಿವಾರ’ದ ಬೀಜ ನೆಡಲು ಹೊರಟಿದ್ದಾರೆ ನಿರ್ಮಲಾ ಸೀತರಾಮನ್. ಒಳ್ಳೆಯ ಸಂಸದೀಯ ಪಟುವಿನಿಂದ ಕೊಡಗು ಜನತೆ, ಒಟ್ಟಾರೆ ಕರ್ನಾಟಕ ಇದನ್ನು ನಿರೀಕ್ಷೆ ಮಾಡಿರಲಿಲ್ಲ.