samachara
www.samachara.com
‘ಲೇಟ್ ಪೋಸ್ಟ್‌’: ಅಮಿತ್ ಶಾ ಪುತ್ರ ಜಯ್‌ ಶಾನ ನಕಲಿ ಉದ್ಯಮಗಳ ಅಸಲಿ ಕತೆ!
COVER STORY

‘ಲೇಟ್ ಪೋಸ್ಟ್‌’: ಅಮಿತ್ ಶಾ ಪುತ್ರ ಜಯ್‌ ಶಾನ ನಕಲಿ ಉದ್ಯಮಗಳ ಅಸಲಿ ಕತೆ!

ಇದು ದೇಶದ ಹೈಪ್ರೊಫೈಲ್‌ ವ್ಯಕ್ತಿ ಅಮಿತ್‌ ಶಾಗೆ ಸಂಬಂಧಿಸಿದ ‘ಗಂಭೀರ ಅನುಮಾನಸ್ಪ’ದ ಪ್ರಕರಣ. ಇಲ್ಲಿ ಅವರ ಪುತ್ರ ಜಯ್‌ ಶಾ ನಾಯಕ ನಟನಾದರೆ, ತಂದೆ ಅಮಿತ್ ಶಾರದ್ದು ಗೆಸ್ಟ್‌ ಅಪೀಯರೆನ್ಸ್‌!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಇದು ದೇಶದ ಹೈಪ್ರೊಫೈಲ್‌ ವ್ಯಕ್ತಿ ಅಮಿತ್‌ ಶಾಗೆ ಸಂಬಂಧಿಸಿದ ‘ಗಂಭೀರ ಅನುಮಾನಸ್ಪ’ದ ಪ್ರಕರಣ. ಇಲ್ಲಿ ಅವರ ಪುತ್ರ ಜಯ್‌ ಶಾ ನಾಯಕ ನಟನಾದರೆ, ತಂದೆ ಅಮಿತ್ ಶಾರದ್ದು ಗೆಸ್ಟ್‌ ಅಪೀಯರೆನ್ಸ್‌. ಇನ್ನುಳಿದ ಸಹ ಪಾತ್ರಧಾರಿಗಳು ಗುಜರಾತ್‌ ಬಿಜೆಪಿ, ರಿಲಯನ್ಸ್‌ನಂಥ ಸಂಸ್ಥೆಗಳಿಂದ ಬಂದವರು. ಹೀಗೊಂದು ಬಹು ತಾರಾಗಣದ ಅದ್ಧೂರಿ 97.35 ಕೋಟಿ ರೂಪಾಯಿ ವೆಚ್ಚದ ಥ್ರಿಲ್ಲರ್‌ ಕಥೆ ಇದು.

ಮೊದಲಿಗೆ ಕತೆ ಗುಜಾರಾತ್‌ನಿಂದ ಆರಂಭವಾಗುತ್ತದೆ. ನಂತರ ವೇಗ ಪಡೆದುಕೊಂಡು ಗುಜರಾತ್‌ನ ಬ್ಯಾಂಕ್‌ಗಳು, ಮಧ್ಯ ಪ್ರದೇಶ, ಕಾರ್ಪೊರೇಟ್‌ ಕಂಪನಿಗಳ ಸುತ್ತಾ ಗಿರಕಿ ಹೊಡೆಯುತ್ತದೆ. ಕೊನೆಗೆ ಕ್ಲೈಮ್ಯಾಕ್ಸ್‌ ‘ದೆಹಲಿ ದರ್ಬಾರ್‌’ ಅಂಗಳಕ್ಕೆ ಬಂದು ನಿಲ್ಲುತ್ತದೆ. ಅಲ್ಲಿ ಏನೇನು ನಡೆಯುತ್ತದೆ? ಅದನ್ನು ತಿಳಿದುಕೊಳ್ಳಬೇಕು ಎಂಬ ಕುತೂಹಲ ನಿಮಗಿದ್ದರೆ ನೀವು ‘ಕ್ಯಾರವಾನ್‌’ನ ಈ ವರದಿಯನ್ನು ಓದಬೇಕು. ಅಂದಹಾಗೆ, ಅದರ ಕನ್ನಡಾನುವಾದ ಇಲ್ಲಿದೆ.

*

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪುತ್ರ ಜಯ್‌ ಶಾ ಉದ್ಯಮವೊಂದನ್ನು ಆರಂಭಿಸುತ್ತಾರೆ. ಅದಕ್ಕೆ ‘ಕುಸುಮ್ ಫಿನ್‌ಸರ್ವ್‌ ಎಲ್‌ಎಲ್‌ಪಿ’ ಎಂದು ಹೆಸರಿಡುತ್ತಾರೆ. ಕುಸುಮ್‌ ಎನ್ನುವುದು ಅಮಿತ್‌ ಶಾ ತಾಯಿ, ಜಯ್‌‌ ಶಾ ಅಜ್ಜಿ ಕುಸುಮಾಬೆನ್‌ ಶಾ ಅವರ ಸಂಕ್ಷಿಪ್ತ ಹೆಸರು.

ಜಯ್‌ ಶಾ ಅವರ ಈ ಉದ್ಯಮ ನಿರಂತರ ಕಳಪೆ ಆರ್ಥಿಕ ಪ್ರಗತಿಯನ್ನು ಹೊಂದಿರುತ್ತದೆ. ಹೀಗಿದ್ದೂ ಅದಕ್ಕೆ ಬ್ಯಾಂಕುಗಳು ಧಾರಾಳವಾಗಿ ಸಾಲಗಳನ್ನು ನೀಡುತ್ತವೆ. ಈ ಸಾಲಗಳಿಗೆ ಆಧಾರವಾಗಿ ಎರಡು ಜಮೀನುಗಳನ್ನು ಮತ್ತು ಒಂದಷ್ಟು ಇತರ ಆಸ್ತಿಗಳನ್ನು ಆಧಾರವಾಗಿ ಇಡಲಾಗುತ್ತದೆ. ಈ ಜಮೀನುಗಳು ಅಪ್ಪ ಅಮಿತ್‌ ಶಾ ಅವರಿಗೆ ಸೇರಿದ್ದಾಗಿವೆ. ತಮ್ಮ ಜಮೀನುಗಳ ಮೇಲೆ ಹೀಗೊಂದು ಸಾಲವಿದ್ದರೂ ಇದನ್ನು ಅವರು 2017ರಲ್ಲಿ ರಾಜ್ಯಸಭೆ ಚುನಾವಣೆಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ನಮೂದಿಸಿಲ್ಲ. ಈ ಮೂಲಕ ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಇದು ಒಂದು ಅಧ್ಯಾಯ.

ಅಧ್ಯಾಯ 2 ಏನೆಂದರೆ, ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಪ್ರಕಾರ ‘ಕುಲುಪುರ್‌ ಕಮರ್ಷಿಯಲ್‌ ಕೋ ಆಪರೇಟಿವ್‌ ಬ್ಯಾಂಕ್‌’ಗೆ 2016ರಲ್ಲಿ ಅಮಿತ್‌ ಶಾ ಅವರ ಎರಡು ಆಸ್ತಿಗಳನ್ನು ಆಧಾರವಾಗಿ ಇಟ್ಟಿದ್ದರು. ಕುಸುಮ್‌ ಗುಜರಾತ್‌ನ ಅತೀ ದೊಡ್ಡ ಸಹಕಾರ ಬ್ಯಾಂಕ್ ಆಗಿದ್ದು, ಈ ಆಸ್ತಿಗಳನ್ನು ಇಟ್ಟು 25 ಕೋಟಿ ರೂಪಾಯಿ ಸಾಲವನ್ನು ಕುಸುಮ್‌ ಫಿನ್‌ಸರ್ವ್‌ ಪಡೆದುಕೊಂಡಿತ್ತು. ಇದೊಂದೇ ಅಲ್ಲ, 2016ರಿಂದ ಇದೇ ರೀತಿ ಕುಸುಮ್‌ ಒಟ್ಟು 97.35 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ಪಡೆದುಕೊಂಡಿದೆ. 10.35 ಕೋಟಿ, 25 ಕೋಟಿ, 15 ಕೋಟಿ, 30 ಕೋಟಿ ಮತ್ತು 17 ಕೋಟಿ ಹೀಗೆ ಐದು ಕಂತುಗಳಲ್ಲಿ ಎರಡು ಬ್ಯಾಂಕ್‌ ಮತ್ತು ಒಂದು ಸರಕಾರಿ ಸಂಸ್ಥೆಯಿಂದ ಸಾಲ ಪಡೆಯಲಾಗಿದೆ. ಹೀಗೆ ಕಳೆದೊಂದು ವರ್ಷದಲ್ಲಿ ಕುಸುಮ್‌ ಫಿನ್‌ಸರ್ವ್‌ಗೆ ನೀಡಲಾದ ಸಾಲದಲ್ಲಿ ಶೇಕಡಾ 300 ಏರಿಕೆಯಾಗಿದೆ. ಆದರೆ ವಿಚಿತ್ರವೆಂದರೆ ಕಂಪನಿ ಕಡೆಯಿಂದ ಸಲ್ಲಿಸಲಾದ ಇತ್ತೀಚಿನ ಬ್ಯಾಲೆನ್ಸ್‌ ಶೀಟ್‌ನಲ್ಲಿ ಕಂಪನಿಯ ಮೌಲ್ಯ ಕೇವಲ 5.83 ಕೋಟಿ ರೂಪಾಯಿ ಎಂದಿದೆ!

ಆಳಕ್ಕಿಳಿದರೆ..

ಈ ಸಾಲಗಳನ್ನು ನೀಡಿದ್ದು ಒಟ್ಟು ಮೂರು ಆಸ್ತಿಗಳ ಮೇಲೆ. ಮೊದಲೆರಡು ಆಸ್ತಿಗಳು ಶಿಲಾಜ್‌ ಗ್ರಾಮದಲ್ಲಿದ್ದು 3,839 ಚದರ ಮೀಟರ್‌ ಮತ್ತು 459 ಚದರ ಮೀಟರ್‌ ವಿಸ್ತೀರ್ಣವಿದೆ. ಮೂರನೆಯ ಆಸ್ತಿ ಬೊಡಕ್‌ದೇವ್‌ನಲ್ಲಿದೆ. ಇದು ಕಚೇರಿ ಸ್ಥಳವಾಗಿದ್ದು ಕಮರ್ಷಿಯಲ್‌ ಕಾಂಪ್ಲೆಕ್ಸ್‌ ‘ಸಾರ್ಥಿಕ್‌ 2’ರ 3ನೇ ಅಂತಸ್ತಿನಲ್ಲಿದ್ದು, ಇದರ ವಿಸ್ತೀರ್ಣ 186 ಚದರ ಅಡಿಗಳಾಗಿವೆ. ಹೀಗೆ ಮೂರು ಆಸ್ತಿಗಳನ್ನು ಅಡವಿಟ್ಟು ಸಾಲ ಪಡೆಯಲಾಗಿದೆ.

ಅಹಮದಾಬಾದ್‌ನ ಶಿಲಾಜ್‌ ಗ್ರಾಮದ ನಕ್ಷೆಯಿದು. ಇದರಲ್ಲಿ ಅಮಿತ್‌ ಶಾ ಎರಡು ಪ್ಲಾಟ್‌ಗಳನ್ನು ಹೊಂದಿದ್ದು ಅವುಗಳ ಮೇಲೆ ಸಾಲ ಪಡೆಯಲಾಗಿದೆ.
ಅಹಮದಾಬಾದ್‌ನ ಶಿಲಾಜ್‌ ಗ್ರಾಮದ ನಕ್ಷೆಯಿದು. ಇದರಲ್ಲಿ ಅಮಿತ್‌ ಶಾ ಎರಡು ಪ್ಲಾಟ್‌ಗಳನ್ನು ಹೊಂದಿದ್ದು ಅವುಗಳ ಮೇಲೆ ಸಾಲ ಪಡೆಯಲಾಗಿದೆ.
ಚಿತ್ರ ಕೃಪೆ: ಕ್ಯಾರವಾನ್‌

ಇದರಲ್ಲಿ ಶಿಲಜ್‌ ಗ್ರಾಮದಲ್ಲಿರುವ ಆಸ್ತಿಗಳು ಇನ್ನೂ ಅಮಿತ್‌ ಶಾ ಅವರ ಹೆಸರಿನಲ್ಲಿದ್ದು, ಅವರು ತಮ್ಮ ಮಗ ಜಯ್‌ ಶಾಗೆ ಇದರ ಪವರ್‌ ಆಫ್‌ ಅಟಾರ್ನಿ ನೀಡಿದ್ದಾರೆ. ಇದರ ಆಧಾರದ ಮೇಲೆ ಕುಲುಪುರ್‌ ಬ್ಯಾಂಕ್‌ನಿಂದ ಸಾಲ ಪಡೆಯಲಾಗಿದ್ದು, ಬ್ಯಾಂಕ್‌ ಮತ್ತು ಕುಸುಮ್‌ ನಡುವಿನ ಡೀಡ್‌ನಲ್ಲಿ ಅಮಿತ್‌ ಶಾ ಅವರೆ ಆಸ್ತಿಯ ಒಡೆಯರು ಎಂದು ಹೇಳಲಾಗಿದೆ. ಹಣಕಾಸು ತಜ್ಞರ ಪ್ರಕಾರ ಹೀಗೆ ಆಸ್ತಿ ಅಡವಿಟ್ಟಾಗ ಪ್ರಾಥಮಿಕವಾಗಿ ನೀವೇ ಆಧಾರವಾಗಿರುತ್ತೀರಿ. ನಿಮಗೆ ಕಂಪನಿಯ ಲಾಭದಲ್ಲಿ ಯಾವುದೇ ಪಾಲು ಇಲ್ಲದಿರಬಹುದು. ಆದರೆ ಉದ್ಯಮದಲ್ಲಿ ಪಾಲು ಇರುತ್ತದೆ.

ಹೀಗೆ ಬ್ಯಾಂಕ್‌ಗಳಿಗೆ ಅಡವಿಟ್ಟ ಜಾಗದ ಮೂಲ ಮಾಲಿಕ ಅಮಿತ್‌ ಶಾ ಅವರೀಗ ರಾಜ್ಯಸಭಾ ಸದಸ್ಯರಾಗಿದ್ದಾರೆ. ದೇಶದಲ್ಲಿ ಜನಪ್ರತಿನಿಧಿ ಕಾಯ್ದೆಯಡಿಯಲ್ಲಿ ಚುನಾವಣೆಗೆ ಸ್ಪರ್ಧಿಸುವಾಗ ಅಫಿಡವಿಟ್‌ ಸಲ್ಲಿಸಬೇಕಾಗುತ್ತದೆ ಮತ್ತು ಇದರಲ್ಲಿ ತಮ್ಮ ಎಲ್ಲಾ ಆಸ್ತಿ ಮತ್ತು ತಮಗಿರುವ ಸಾಲಗಳನ್ನು ಉಲ್ಲೇಖ ಮಾಡಬೇಕಾಗುತ್ತದೆ. ಆದರೆ ಅಮಿತ್‌ ಶಾ ತಮ್ಮ ಜಮೀನಿನ ಮೇಲೆ ಹೀಗೊಂದು ಸಾಲ ಪಡೆದಿರುವುದನ್ನು ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಹೀಗಾಗಿ ಇಲ್ಲಿ ಜನಪ್ರತಿನಿಧಿ ಕಾಯ್ದೆ ಉಲ್ಲಂಘನೆಯ ಪ್ರಶ್ನೆ ಬರುತ್ತದೆ. ಕಾಯ್ದೆ ಪ್ರಕಾರ, ಸುಳ್ಳು ಮಾಹಿತಿ ನೀಡಿದರೆ ನಾಮಪತ್ರವನ್ನು ತಿರಸ್ಕರಿಸುವ ಅವಕಾಶವೂ ಇರುತ್ತದೆ.

“ಅಫಿಡವಿಟ್‌ನಲ್ಲಿ ಸತ್ಯವನ್ನೇ ಹೇಳಬೇಕಾಗುತ್ತದೆ. ಒಂದೊಮ್ಮೆ ಇದರಲ್ಲಿ ಸಣ್ಣ ತಪ್ಪಿದ್ದರೂ ಜನಪ್ರತಿನಿಧಿ ವಿರುದ್ಧ ಕ್ರಮ0 ಕೈಗೊಳ್ಳಬಹುದು. ಇಲ್ಲಿ ಪ್ರಶ್ನೆಯಿರುವುದು ಯಾವ ಪ್ರಮಾಣದ ಶಿಕ್ಷೆಯನ್ನು ರಾಜಕಾರಣಿಯ ವಿರುದ್ಧ ತೆಗೆದುಕೊಳ್ಳಬೇಕು ಎಂಬುದು ಮಾತ್ರ,” ಎನ್ನುತ್ತಾರೆ ನಿವೃತ್ತ ಮುಖ್ಯ ಚುನಾವನಾ ಆಯುಕ್ತರಾದ ಎಸ್‌ವೈ ಖುರೇಶಿ.

ಸಾಮಾನ್ಯವಾಗಿ ನಾಮಪತ್ರ ಸಲ್ಲಿಕೆ ವೇಳೆ ಹಲವು ನಾಮಪತ್ರಗಳು ಸಲ್ಲಿಕೆಯಾಗುವುದರಿಂದ ಅಲ್ಲಿ ಹೇಳಿದ ಎಲ್ಲಾ ಮಾಹಿತಿಗಳ ಪೂರ್ವಾಪರವನ್ನು ನೋಡಲು ಸಾಧ್ಯವಾಗುವುದಿಲ್ಲ. “ತಪ್ಪು ಮಾಹಿತಿ ಇರುವ ಅಫಿಡವಿಟ್‌ ಸಲ್ಲಿಕೆ ಮಾಡಿದರೆ ಜನಪ್ರತಿನಿಧಿಯನ್ನು ವಜಾ ಮಾಡಬಹುದು ಮತ್ತು ಪ್ರತ್ಯೇಕವಾಗಿ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಬಹುದು,” ಎನ್ನುತ್ತಾರೆ ಅವರು.

ಇದೀಗ ಈ ಕುರಿತು ಚುನಾವಣಾ ಆಯೋಗಕ್ಕೆ ಜನ ಪ್ರತಿನಿಧಿ ವಿರುದ್ಧ ದೂರು ದಾಖಲಿಸಬಹುದಾಗಿದೆ ಎನ್ನುತ್ತಾರೆ ಚುನಾವಣಾ ಸುಧಾರಣೆಗಾಗಿ ಹೋರಾಡುತ್ತಿರುವ ಎಡಿಆರ್ ಸಂಸ್ಥೆಯ ಸಂಸ್ಥಾಪಕ ಸದಸ್ಯ ಜಗದೀಪ್ ಛೋಕರ್‌.

****

ಇದು ಒಂದು ಕಥೆಯಾದರೆ, ‘ದಿ ವೈರ್‌’ 2017ರ ಅಂತ್ಯದಲ್ಲಿ ಕುಸುಮ್‌ ಫಿನ್‌ಸರ್ವ್‌ ಕಂಪನಿ ಕುಲುಪುರ್‌ ಬ್ಯಾಂಕ್‌ನಿಂದ 25 ಕೋಟಿ ರೂಪಾಯಿ ಮತ್ತು ಮತ್ತು ಸರಕಾರಿ ಸಂಸ್ಥೆಯಿಂದ 10.35 ಕೋಟಿ ರೂಪಾಯಿ ಸಾಲ ಪಡೆದಿರುವುದಾಗಿ ವರದಿ ಮಾಡಿತ್ತು. ಇದರ ನಂತರ ಅಂದರೆ ಕಳೆದ ಸೆಪ್ಟೆಂಬರ್‌ ಬಳಿಕ ಕಂಪನಿಗೆ ನೀಡಿದ ಸಾಲದ ಮೊತ್ತ ಮೂರು ಪಟ್ಟು ಹೆಚ್ಚಳವಾಗಿದೆ. ಕುಲುಪುರ್‌ ಬ್ಯಾಂಕ್‌ 40 ಕೋಟಿ ಸಾಲ ನೀಡಿದ್ದರೆ ಖಾಸಗಿ ಬ್ಯಾಂಕ್‌ ‘ಕೋಟಕ್‌ ಮಹೀಂದ್ರಾ’ 47 ಕೋಟಿ ರೂಪಾಯಿ ಸಾಲ ನೀಡಿದೆ. ವಿಚಿತ್ರವೆಂದರೆ ಕಂಪನಿಯ ಲೆಕ್ಕಪತ್ರದ ಪ್ರಕಾರ 2012-13 ರಿಂದ 2015 – 16 ರವರೆಗೆ ಪ್ರತೀ ವರ್ಷವೂ ಸಂಸ್ಥೆ ನಷ್ಟ ತೋರಿಸಿದೆ ಮತ್ತು ಆಸ್ತಿ ಮತ್ತು ಸಾಲದ ಅನುಪಾತ (negative working capital) ವನ್ನು ಋಣಾತ್ಮಕವಾಗಿಟ್ಟಿದೆ.

ಹೀಗಿದ್ದೂ ಕಂಪನಿಗೆ ಸಾಲ ನೀಡಲಾಗಿದೆ. ಮತ್ತು ಸಾಲ ನೀಡಲು ಆಧಾರವಾಗಿಟ್ಟ ಆಸ್ತಿಗಳ ಮೌಲ್ಯವೂ ತೀರಾ ಕಡಿಮೆಯಾಗಿದೆ. ಅಮಿತ್‌ ಶಾ 2017ರ ಅಫಿಡವಿಟ್‌ನಲ್ಲಿ ಈ ಆಸ್ತಿಗಳ ಬೆಲೆಯನ್ನು ನಮೂದಿಸಿದ್ದು, ಇದರಲ್ಲಿ ಶಿಲಾಜ್ ಗ್ರಾಮದ ದೊಡ್ಡ ಜಾಗಕ್ಕೆ 5 ಕೋಟಿ ಮತ್ತು ಸಣ್ಣ ಜಾಗಕ್ಕೆ 55 ಲಕ್ಷ ರೂಪಾಯಿ ಮೌಲ್ಯವಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಬೊಡಕ್‌ದೇವ್‌ ಕಚೇರಿ ಮೌಲ್ಯವನ್ನು 2 ಕೋಟಿ ರೂಪಾಯಿ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ. ಇವುಗಳ ಆಧಾರದ ಮೇಲೆ ಕುಲುಪುರ್‌ ಬ್ಯಾಂಕ್‌ ಮೊದಲಿಗೆ ಮೇ 2016ರಲ್ಲಿ 25 ಕೋಟಿ ಮತ್ತು ಸೆಪ್ಟೆಂಬರ್‌ 2017ರಲ್ಲಿ ಎರಡನೇ ಬಾರಿಗೆ 15 ಕೋಟಿ ರೂಪಾಯಿ ಸಾಲ ನೀಡಿದೆ. ಅದೇ ತಿಂಗಳು ಕಂಪನಿ ತನ್ನ ವ್ಯವಹಾರಗಳನ್ನು (goods and book debts) ತೋರಿಸಿ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನಿಂದ ಮತ್ತೆ 30 ಕೋಟಿ ರೂಪಾಯಿ ಸಾಲ ಪಡೆದಿದೆ.

ಇದಾ ಬಳಿಕ ಜೂನ್‌ 2017ರಲ್ಲಿ ಕುಸುಮ್‌ ಕಂಪನಿಗೆ ಸನಂದ್‌ ಇಂಡಸ್ಟ್ರೀಯಲ್‌ ಎಸ್ಟೇಟ್‌ನಲ್ಲಿ 15,754.83 ಚದರ ಮೀಟರ್‌ ಜಾಗವನ್ನು ಮಂಜೂರು ಮಾಡಲಾಗಿತ್ತು. ‘ಗುಜರಾತ್‌ ಕೈಗಾರಿಗಾ ಅಭಿವೃದ್ಧಿ ನಿಗಮ’ ಅಥವಾ ಜಿಐಡಿಸಿ ಈ ಜಾಗವನ್ನು ಮಂಜೂರು ಮಾಡಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಏಪ್ರಿಲ್‌ 2018ರಲ್ಲಿ ಪುನಃ ಕುಸುಮ್‌ ಕೋಟಕ್‌ ಮಹೀಂದ್ರಾ ಬ್ಯಾಂಕ್‌ನಿಂದ 17 ಕೋಟಿ ರೂಪಾಯಿ ಸಾಲ ಪಡೆಯಿತು. ಇದೀಗ ಈ ಜಾಗದಲ್ಲಿ ಒಂದು ಫ್ಯಾಕ್ಟರಿ ಕಾರ್ಯ ನಿರ್ವಹಿಸುತ್ತಿದೆ.

ಕುಸುಮ್‌ ಸಂಸ್ಥೆಗೆ ಹೀಗೆ ಬೇಕಾಬಿಟ್ಟಿ ಸಾಲ ನೀಡಿರುವುದರ ವಿರುದ್ಧ ಹಲವರು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಇದಕ್ಕೆ ಸ್ಪಷ್ಟ ರೂಪವೊಂದು ಸಿಗಲು ಸಾಧ್ಯವಿಲ್ಲ. ಕಾರಣ ಕಂಪನಿ ಇನ್ನೂ 2016-17ರ ಲೆಕ್ಕಪತ್ರವನ್ನೇ ಸಲ್ಲಿಸಿಲ್ಲ. ಎಲ್ಎಲ್‌ಪಿ (LLP-Limited Liability Partnership) ಕಂಪನಿಗಳು ಪ್ರತೀ ವರ್ಷ ಅಕ್ಟೋಬರ್‌ 30ರ ಮೊದಲು ಲೆಕ್ಕಪತ್ರವನ್ನು ಸಲ್ಲಿಸಲೇಬೇಕು. ಆದರೆ ಗಡುವು ಮುಗಿದಿದ್ದರೂ ಇನ್ನೂ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ. ಎಲ್‌ಎಲ್‌ಪಿ ಕಾಯಿದೆ ಪ್ರಕಾರ ಇದು ಅಪರಾಧವಾಗಿದ್ದು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.

ಈ ಸಂಬಂಧ ಅಮಿತ್‌ ಶಾ ಮತ್ತು ಸಹಕಾರಿ ಬ್ಯಾಂಕ್‌ಗೆ ಕ್ಯಾರವಾನ್‌ ಕಡೆಯಿಂದ ಪ್ರಶ್ನೆಗಳನ್ನು ಕೇಳಲಾಗಿದ್ದರೂ ಇನ್ನೂ ಉತ್ತರ ನೀಡಿಲ್ಲ. ಆದರೆ ಜಯ್‌ ಶಾ ಮಾತ್ರ ತಮ್ಮ ಮ್ಯಾನೇಜರ್‌ ಮೂಲಕ ಉತ್ತರ ನೀಡಿದ್ದು, “ನಾವು ಕಾನೂನಾತ್ಮಕವಾಗಿ ಉದ್ಯಮ ನಡೆಸುತ್ತಿದ್ದೇವೆ” ಎಂದಷ್ಟೇ ಹೇಳಿದ್ದಾರೆ. ಇನ್ನು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಉತ್ತರ ನೀಡಿದ್ದು, “ಸಾಲ ನೀಡಲು ಬ್ಯಾಂಕ್‌ ಕಠಿಣ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಗ್ರಾಹಕರ ಮಾಹಿತಿಯನ್ನು ಮೂರನೇಯವರಿಗೆ ನೀಡಲು ಅವಕಾಶವಿಲ್ಲ,” ಎಂದು ಹೇಳಿದೆ.

ಕುಲುಪುರ್ ಬ್ಯಾಂಕ್‌ ಮತ್ತು ಕುಸುಮ್‌ ಫಿನ್‌ಸರ್ವ್‌ ನಡುವಿನ ವ್ಯವಹಾರದ ಸಂದರ್ಭದಲ್ಲಿ ಕಂಪನಿಯ ವ್ಯವಹಾರ, ಯಂತ್ರೋಪಕರಣ ಸೇರಿದಂತೆ ಚರಾಸ್ತಿಗಳ ವಿವರಗಳನ್ನು ನಮೂದಿಸಿಲ್ಲ.
ಕುಲುಪುರ್ ಬ್ಯಾಂಕ್‌ ಮತ್ತು ಕುಸುಮ್‌ ಫಿನ್‌ಸರ್ವ್‌ ನಡುವಿನ ವ್ಯವಹಾರದ ಸಂದರ್ಭದಲ್ಲಿ ಕಂಪನಿಯ ವ್ಯವಹಾರ, ಯಂತ್ರೋಪಕರಣ ಸೇರಿದಂತೆ ಚರಾಸ್ತಿಗಳ ವಿವರಗಳನ್ನು ನಮೂದಿಸಿಲ್ಲ.
ಚಿತ್ರ ಕೃಪೆ: ಕ್ಯಾರವಾನ್‌

ಅಚ್ಚರಿ ಏನೆಂದರೆ, ಕುಲುಪುರ್ ಬ್ಯಾಂಕ್‌ ಮತ್ತು ಕುಸುಮ್‌ ಫಿನ್‌ಸರ್ವ್‌ ನಡುವಿನ ವ್ಯವಹಾರದ ಸಂದರ್ಭದಲ್ಲಿ ಕಂಪನಿಯ ವ್ಯವಹಾರ, ಯಂತ್ರೋಪಕರಣ ಸೇರಿದಂತೆ ಚರಾಸ್ತಿಗಳ ವಿವರಗಳನ್ನು ನಮೂದಿಸಿಲ್ಲ. ಅವುಗಳನ್ನು ನಮೂದಿಸಬೇಕಾದ ಜಾಗವನ್ನು ಖಾಲಿ ಬಿಡಲಾಗಿದೆ. ಇದೇ ರೀತಿ ಖಾಸಗಿ ಬ್ಯಾಂಕ್‌ ಕೂಡ ಸಾಲ ನೀಡುವಾಗ ಕಂಪನಿಯ ಆರ್ಥಿಕ ಆರೋಗ್ಯ (Tangible Base Capital and Total Outside Liability) ದ ಬಗ್ಗೆ ಮಾಹಿತಿ ಪಡೆದುಕೊಂಡಿಲ್ಲ. ಹೀಗಿದ್ದೂ ಧಾರಾಳಿಯಾಗಿ ಯಾಕೆ ಸಾಲ ನೀಡಲಾಗಿದೆ ಎಂದು ಆಳಕ್ಕಿಳಿದರೆ ಅಲ್ಲಿ ಬೇರೆಯದೇ ಸುಳಿವುಗಳು ತೆರೆದುಕೊಳ್ಳುತ್ತವೆ.

ಜಯ್‌ ಶಾಗೆ ಧಾರಾಳವಾಗಿ ಸಾಲ ನೀಡಿರುವ ಕುಲುಪುರ್‌ ಬ್ಯಾಂಕ್‌ನಲ್ಲಿ ‘ಕಮಲ’ದ ಬೇರುಗಳು ಢಾಳಾಗಿ ಕಾಣಿಸುತ್ತವೆ. 1970ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್‌ ಗುಜರಾತ್‌ನ ಸಹಕಾರಿ ಬ್ಯಾಂಕ್‌ಗಳಲ್ಲೇ ನಂಬರ್‌ 1 ಸ್ಥಾನದಲ್ಲಿದೆ. ಹೆಚ್ಚಿನ ಗುಜರಾತ್‌ನ ಬ್ಯಾಂಕ್‌ಗಳು ಬಿಜೆಪಿಯ ಹಿಡಿತದಲ್ಲಿದ್ದು, ಕುಲುಪುರ್‌ ಬ್ಯಾಂಕ್‌ ಕೂಡ ಇದಕ್ಕೆ ಹೊರತಾಗಿಲ್ಲ. ಅಂಬುಭಾಯಿ ಮಗನ್‌ಭಾಯಿ ಪಟೇಲ್‌ ಈ ಬ್ಯಾಂಕ್‌ನ ಅಧ್ಯಕ್ಷರಾಗಿದ್ದು ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್‌ಭಾಯಿ ಪಟೇಲ್‌ ಮತ್ತು ಅವರ ಪತ್ನಿ ಇದರಲ್ಲಿ ಶೇರುಗಳನ್ನು ಹೊಂದಿದ್ದಾರೆ.

ಇದೇ ಬ್ಯಾಂಕ್‌ ಕಳೆದ ಸೆಪ್ಟೆಂಬರ್‌ 27ರಂದು ಎರಡನೇ ಕಂತಿನ ಸಾಲವನ್ನು ಕುಸುಮ್‌ ಫಿನ್‌ಸರ್ವ್‌ಗೆ ಮಂಜೂರು ಮಾಡಿತ್ತು. ಈ ಬಾರಿ 30 ಕೋಟಿ ರೂಪಾಯಿ ಮಂಜೂರು ಮಾಡುವಾಗ ಕಂಪನಿಯ ಚರಾಸ್ಥಿ ಮತ್ತು ವ್ಯವಹಾರಗಳನ್ನೇ ಆಧಾರವಾಗಿ ನೀಡಲಾಗಿತ್ತು. ಈ ಮೊದಲು ಇದೇ ರೀತಿ ಕೋಟಕ್‌ ಮಹೀಂದ್ರಾ ಬ್ಯಾಂಕ್‌ಗೂ ಇವನ್ನೇ ಆಧಾರ ನೀಡಿದ್ದರಿಂದ ಎರಡೂ ಬ್ಯಾಂಕ್ಗಗಳು ಪರಿ-ಪಸ್ಸು (ಅಂದರೆ ಒಂದೇ ಆಸ್ತಿಯನ್ನು ಎರಡೂ ಬ್ಯಾಂಕ್‌ಗಳು ಹಂಚಿಕೊಳ್ಳುವ ಪ್ರಕ್ರಿಯೆ) ರಚನೆ ಮಾಡಿಕೊಂಡಿದ್ದವು.

ಇವೆಲ್ಲಾ ಘಟನಾವಳಿಗಳ ಮಧ್ಯೆ ‘ದಿ ವೈರ್‌’ ಜಯ್‌ ಶಾ ಒಡೆತನದ ಟೆಂಪಲ್‌ ಎಂಟರ್‌ಪ್ರೈಸಸ್‌ ಪ್ರೈವೇಟ್‌ ಲಿ. ಬಗ್ಗೆ ಒಂದು ವರದಿಯನ್ನು ಬರೆದಿತ್ತು. ಇದರಲ್ಲಿ ಕಂಪನಿಯ ವ್ಯವಹಾರ ಒಂದೇ ವರ್ಷದಲ್ಲಿ 50,000 ರೂಪಾಯಿನಿಂದ 80.5 ಕೋಟಿ ರೂಪಾಯಿಗೆ ಏರಿಕೆಯಾಗಿರುವುದಾಗಿ ಹೇಳಿತ್ತು. ಈ ಮೂಲಕ ಕಂಪನಿ ವ್ಯವಹಾರ 16,000 ಪಟ್ಟು ಹೆಚ್ಚಳವಾಗಿತ್ತು. ಆದಾಯದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಏರಿಕೆಯಾಗಿಯೂ ಅದೇ ವರ್ಷ ಕಂಪನಿ ತನ್ನ ವ್ಯವಹಾರವನ್ನು ನಿಲ್ಲಿಸಿತ್ತು! ಮತ್ತು ಕಂಪನಿಯ ಎಲ್ಲಾ ಆಸ್ತಿಗಳನ್ನು ಅಳಿಸಲಾಗಿದೆ ಎಂದು ಹೇಳಲಾಗಿತ್ತು. ಇದೀಗ ಜಯ್‌ ಶಾ ತನ್ನ ಉದ್ಯಮದ ಆಸಕ್ತಿಯನ್ನು ಟೆಂಪಲ್‌ ಎಂಟರ್‌ಪ್ರೈಸಸ್‌ನಿಂದ ಕುಸುಮ್‌ ಫಿನ್‌ಸರ್ವ್‌ಗೆ ಬದಲಾಯಿಸಿಕೊಂಡಿದ್ದರು.

‘ದಿ ವೈರ್‌’ನ ವರದಿ ಪ್ರಕಟವಾದ ನಂತರ ಪ್ರತಿಕ್ರಿಯೆ ನೀಡಿದ್ದ ಅಮಿತ್‌ ಶಾ, ತಮ್ಮ ಪುತ್ರನ ಟೆಂಪಲ್‌ ಎಂಟರ್‌ಪ್ರೈಸಸ್, “ಸರಕಾರದ ಜತೆ ಒಂದು ರೂಪಾಯಿಯ ವ್ಯವಹಾರವನ್ನೂ ನಡೆಸಿಲ್ಲ, ಸರಕಾರದ ಒಂದು ರೂಪಾಯಿಯ ಭೂಮಿಯನ್ನೂ ಪಡೆದುಕೊಂಡಿಲ್ಲ, ಸರಕಾರದ ಒಂದೇ ಒಂದು ರೂಪಾಯಿಯ ಕಾಂಟ್ರಾಕ್ಟ್‌ನ್ನೂ ಪಡೆದುಕೊಂಡಿಲ್ಲ,” ಎಂದು ಹೇಳಿದ್ದರು. ಅವರು ಹೇಳಿದ್ದು ನಿಜವಾಗಿತ್ತು; ಜಯ್‌ ಶಾ ಒಡೆತನದ ಟೆಂಪಲ್‌ ಎಂಟರ್‌ಪ್ರೈಸಸ್‌ ಏನನ್ನೂ ಪಡೆದುಕೊಂಡಿರಲಿಲ್ಲ. ಬದಲಿಗೆ ಎಲ್ಲವನ್ನೂ ಕುಸುಮ್‌ ಎಂಟರ್‌ಪ್ರೈಸಸ್‌ ಪಡೆದುಕೊಂಡಿತ್ತು. ಕೇಂದ್ರ ಸರಕಾರದ ಅಧೀನದಲ್ಲಿರುವ ಐಆರ್‌ಇಡಿಎನಿಂದ ಸಾಲ, ಜಿಐಡಿಸಿಯಿಂದ ಜಾಗ ಪಡೆದುಕೊಂಡಿತ್ತು, ಕೊನೆಗೆ ಸರಕಾರದಿಂದ ಕಾಂಟ್ರಾಕ್ಟ್‌ನ್ನೂ ಗಿಟ್ಟಿಸಿಕೊಂಡಿತ್ತು.

ತನಗೆ ಜಾಗ ನೀಡುವಂತೆ ಕುಸುಮ್‌ ಫಿನ್‌ಸರ್ವ್‌ 16 ಮೇ 2017ರಲ್ಲಿ ಜಿಐಡಿಸಿಗೆ ಪತ್ರವನ್ನು ಬರೆದಿತ್ತು. ಇದಾಗಿ ಎರಡು ತಿಂಗಳಲ್ಲಿ ಜಿಐಡಿಸಿ 15,754.83 ಚದರ ಮೀಟರ್‌ ಜಾಗ ಮಂಜೂರು ಮಾಡಿತು. ಹೀಗೆ ಜುಲೈ 2017ರಲ್ಲಿ ಜಾಗ ಮಂಜೂರುಗೊಳಿಸುವಾಗ ಇದರ ಬೆಲೆ 6.33 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿತ್ತು. ಇದಾಗಿ 8 ತಿಂಗಳ ನಂತರ ಮಾರ್ಚ್‌ 2018ರಲ್ಲಿ ಎರಡೂ ಸಂಸ್ಥೆಗಳು ಲೀಸ್‌ ಒಪ್ಪಂದಕ್ಕೆ ಸಹಿ ಹಾಕಿದವು. ಸಹಿ ಬಿದ್ದು ಎರಡು ತಿಂಗಳಿಗೆ ಮತ್ತೆ ಸಹಕಾರಿ ಬ್ಯಾಂಕ್‌ ಮತ್ತೆ 17 ಕೋಟಿ ರೂಪಾಯಿ ಸಾಲವನ್ನು ಕೈ ಎತ್ತಿ ನೀಡಿತ್ತು.

ಜಿಐಡಿಸಿ ಲೀಸ್‌ನಲ್ಲಿ ನೀಡಿದ ಜಮೀನಿನಲ್ಲಿ ತಲೆ ಎತ್ತಿರುವ ಕುಸುಮ್‌ ಫಿನ್‌ಸರ್ವ್‌ನ ಘಟಕ
ಜಿಐಡಿಸಿ ಲೀಸ್‌ನಲ್ಲಿ ನೀಡಿದ ಜಮೀನಿನಲ್ಲಿ ತಲೆ ಎತ್ತಿರುವ ಕುಸುಮ್‌ ಫಿನ್‌ಸರ್ವ್‌ನ ಘಟಕ
ಚಿತ್ರ ಕೃಪೆ: ಕ್ಯಾರವಾನ್

ಇಲ್ಲಿ ಜಿಐಡಿಸಿ ಜಯ್‌ ಶಾ ಕಂಪನಿಗೆ ಜಾಗ ನೀಡಿದ ಪ್ರಕ್ರಿಯೆ ಬಗ್ಗೆಯೇ ಅನುಮಾನಗಳಿವೆ. ಜಿಐಡಿಸಿ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಕಂಪನಿಗಳನ್ನು ಒಟ್ಟು ನೂರು ಅಂಕಗಳಿಗೆ ಪರಿಶೀಲನೆಗೆ ಒಳಪಡಿಸಿ ಅದರಲ್ಲಿ 20 ಅಂಕಕ್ಕಿಂತ ಹೆಚ್ಚು ಪಡೆದವರಿಗೆ ಜಾಗ ನೀಡಲಾಗುತ್ತದೆ. ಇಲ್ಲಿ ತನ್ನ ಲೆಕ್ಕ ಪತ್ರದಲ್ಲಿ ಕಳಪೆ ಆರ್ಥಿಕ ನಿರ್ವಹಣೆ ತೋರಿಸಿರುವ ಕುಸುಮ್‌ಗೆ ಹೇಗೆ ಜಾಗ ನೀಡಲಾಯಿತು ಎಂಬುದು ತಿಳಿದು ಬಂದಿಲ್ಲ. ಇನ್ನು ಕೇಳಿದ್ದಕ್ಕೆ ಲೀಸ್‌ನ ಪ್ರತಿಯನ್ನೂ ಜಿಐಡಿಸಿ ನೀಡಿಲ್ಲ. ಇದಕ್ಕೆ ಕಂಪನಿಯ ಒಪ್ಪಿಗೆ ಬೇಕು ಎಂದು ಜಿಐಡಿಸಿ ಪ್ರಾದೇಶಿಕ ವ್ಯವಸ್ಥಾಪಕಿ ದೀಪ್ತಿ ಮರಾಠಾ ಸಾಗಾ ಹಾಕಿದ್ದಾರೆ. ಇನ್ನು ಈ ಸಂಬಂಧ ಜಿಐಡಿಸಿ ಸನಂದ್‌ನಲ್ಲಿರುವ ಕಚೇರಿಗೆ ಕ್ಯಾರವಾನ್‌ ಪತ್ರಕರ್ತರು ಭೇಟಿ ನೀಡಿದಾಗ ಮಾಹಿತಿ ನೀಡುವ ಬದಲು ಬೆದರಿಸುವ ಯತ್ನ ನಡೆದಿದೆ.

ಕೊನೆಗೆ ಕಂಪನಿಯ ಘಟಕ ಇದ್ದ ಜಾಗಕ್ಕೆ ತೆರಳಿದರೆ ಅಲ್ಲೊಂದು ಬೋರ್ಡ್‌ ಕೂಡ ಇರಲಿಲ್ಲ. ಓರ್ವ ಭದ್ರತಾ ಸಿಬ್ಬಂದಿ ಮಾತ್ರ ನಿಂತಿದ್ದ. ಆತ ಒಳಗೆ ಹೋಗಲು ಅವಕಾಶವನ್ನೂ ನೀಡಿಲ್ಲ. ಬ್ಯಾಂಕ್‌ ದಾಖಲೆಗಳಲ್ಲಿ ಕಂಪನಿ ಫೈಲ್‌ಗಳನ್ನು, ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ತಯಾರಿಸಲಾಗುತ್ತದೆ ಎಂದು ಉಲ್ಲೇಖವಿತ್ತು. ಆದರೆ ಸ್ಥಳದಲ್ಲಿ ಆ ರೀತಿಯ ಯಾವ ಕುರುಹುಗಳೂ ಕಾಣಿಸುತ್ತಿರಲಿಲ್ಲ. ಇಂಥಹದ್ದೊಂದು ಆಸ್ತಿಯನ್ನು ಆಧಾರವಾಗಿಟ್ಟುನ 17 ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ. ಬ್ಯಾಂಕ್‌ ದಾಖಲೆಗಳ ಪ್ರಕಾರ ಸಾಲಕ್ಕೆ ತನ್ನಲ್ಲಿದ್ದ 14 ಕಂಪನಿಗಳ ಶೇರುಗಳನ್ನೂ ಕುಸುಮ್‌ ಫಿನ್‌ಸರ್ವ್ ಆಧಾರವಾಗಿ ಇಟ್ಟಿತ್ತು. ಮೇ 9ರ ಲೆಕ್ಕಾಚಾರದ ಪ್ರಕಾರ ಈ ಶೇರುಗಳ ಬೆಲೆ 13.62 ಕೋಟಿ ರೂಪಾಯಿ ಆಗಿದೆ.

ಬ್ಯಾಂಕ್‌ನಿಂದ ಪಡೆದ ಸಾಲಗಳಲ್ಲದೆ ಕಂಪನಿ ಕೆಐಎಫ್‌ಎಸ್‌ನಿಂದಲೂ ಹಣ ಪಡೆದುಕೊಂಡಿದೆ. ರಾಜೇಶ್‌ ಖಂಡ್ವಾಲಾ ಎನ್ನುವವರಿಗೆ ಸೇರಿದ ಕಂಪನಿ ಇದಾಗಿದ್ದು ಇವರು ರಾಜ್ಯಸಭಾ ಸದಸ್ಯ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. ಗ್ರೂಪ್‌ ಪ್ರೆಸಿಡೆಂಟ್‌ ಪರಿಮಾಲ್‌ ನಥ್ವಾನಿ ಅವರ ಬೀಗರಾಗಿದ್ದಾರೆ. ಕೆಐಎಫ್‌ಎಸ್‌ 2014 ಮತ್ತು 15ರಲ್ಲಿ ಕುಸುಮ್‌ ಫಿನ್‌ಸರ್ವ್‌ಗೆ ಆರ್ಥಿಕ ಸಹಾಯ ನೀಡಿದೆ. ಕೆಐಎಫ್‌ಎಸ್‌ ಜಯ್‌ ಶಾ ಕಂಪನಿಗೆ ಆಧಾರ ರಹಿತ ಸಾಲ ನೀಡಿದ್ದು ಇದರ ಮೊತ್ತವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿಲ್ಲ. ಈ ಬಗ್ಗೆ ‘ದಿ ವೈರ್‌’ ಕೇಳಿದ್ದ ಪ್ರಶ್ನೆಗೆ ಜಯ್‌ ಶಾ ವಕೀಲರು ರಾಜೇಶ್‌ ಖಂಡ್ವಾಲಾ ಶಾ ಕುಟುಂಬದ ಸ್ಟಾಕ್‌ ಬ್ರೋಕರ್‌ ಎಂದು ಉತ್ತರಿಸಿದ್ದರು.

****

ಟೆಂಪಲ್‌ ಎಂಟರ್‌ಪ್ರೈಸಸ್‌ ಒಂದೇ ವರ್ಷದಲ್ಲಿ 16,000 ಪಟ್ಟು ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡರೆ ಇತ್ತ ಕುಸುಮ್‌ ಫಿನ್‌ಸರ್ವ್ ಆಗಾಗ ತನ್ನ ವ್ಯವಹಾರಗಳನ್ನು ಬದಲಿಸುತ್ತಾ ಬಂದಿರುವುದು ಕಾಣಿಸುತ್ತದೆ.

ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಪ್ರಕಾರ ಸ್ಟಾಕ್‌ ಮತ್ತು ಶೇರುಗಳ ಮಾರಾಟ, ಕನ್ಸಲ್ಟೆನ್ಸಿ, ಕಲ್ಲಿದ್ದಲು ಮಾರಾಟ, ಸಿಮೆಂಟ್‌ ಚೀಲಗಳ ಉತ್ಪಾದನೆ ಸೇರಿದಂತೆ ಹಲವು ಉದ್ಯಮಗಳಲ್ಲಿ ಇದು ತೊಡಗಿಸಿಕೊಂಡಿದೆ. ದಾಖಲೆಗಳ ಪ್ರಕಾರ ಕಂಪನಿಯ ಶೇಕಡಾ 60 ಶೇರನ್ನು ಜಯ್‌ ಶಾ ಹೊಂದಿದ್ದರೆ ಅವರ ಪತ್ನಿ ರಿಶಿತಾ ಶಾ ಶೇಕಡಾ 39 ಶೇರುಗಳನ್ನು ಹೊಂದಿದ್ದಾರೆ. ಉಳಿದ ಒಂದು ಭಾಗ ಪ್ರದೀಪ್‌ಭಾಯಿ ಕಾಂತಿಲಾಲ್‌ ಶಾ ಹೆಸರಲ್ಲಿದೆ.

ಕಂಪನಿಯ 2014-15 ನೇ ಆರ್ಥಿಕ ವರ್ಷದ ಲೆಕ್ಕ ಪತ್ರದ ಪ್ರಕಾರ ಕೃಷಿ ಉತ್ಪನ್ನ ವಹಿವಾಟನ್ನು ನಡೆಸುತ್ತದೆ. ಇದರಲ್ಲಿ ಶೇಕಡಾ 60 ಕನ್ಸಲ್ಟೆನ್ಸಿಯ ಉದ್ಯಮವಾದರೆ ಶೇಕಡಾ 29 ಕೃಷಿ ಉತ್ಪನ್ನದ ವ್ಯವಹಾರವಾಗಿದೆ. ಇನ್ನು ಕುಲುಪುರ್‌ ಬ್ಯಾಂಕ್‌ಗೆ ನೀಡಿದ ದಾಖಲೆಯಲ್ಲಿ ಕಲ್ಲಿದ್ದಲು ಉದ್ಯಮ ನಡೆಸುತ್ತೇವೆ ಎಂದು ಹೇಳಲಾಗಿದೆ. ಹೀಗೆ ಕಾಲದಿಂದ ಕಾಲಕ್ಕೆ ಕುಸುಮ್‌ನ ವ್ಯವಹಾರಗಳು ಬದಲಾಗುತ್ತಾ ಸಾಗಿವೆ.

ಈ ಕುಸುಮ್‌ ಫಿನ್‌ಸರ್ವ್‌ ಅನ್ನು 2012ರಲ್ಲಿ ಸ್ಥಾಪನೆ ಮಾಡಿದಾಗ ಪ್ರೈವೇಟ್‌ ಲಿಮಿಟೆಡ್‌ ಆಗಿ ಆರಂಭಿಸಲಾಗಿತ್ತು. ಆದರೆ ಮೊದಲ ಬಾರಿಗೆ ಕಂಪನಿಯ ಲೆಕ್ಕಪತ್ರವನ್ನು ಸಲ್ಲಿಸಿದ್ದು ಮಾತ್ರ 2014-15ರಲ್ಲಿ. ಇದಾಗಿ 2015ರ ಜುಲೈನ ಹೊತ್ತಿಗೆ ಕಂಪನಿಯನ್ನು ಎಲ್‌ಎಲ್‌ಪಿ ಆಗಿ ಬದಲಾಯಿಸಲಾಯಿತು.

ಎಲ್‌ಎಲ್‌ಪಿ ಆಗಿ ಬದಲಾದ ನಂತರ ಮಾರ್ಚ್‌ 2016ರಲ್ಲಿ ಭಾರತ ಸರ್ಕಾರದ ನವೀಕರಿಸಬಹುದಾದ ಇಂಧನ ಇಲಾಖೆಯ ಅಡಿಯಲ್ಲಿ ಬರುವ ಐಆರ್‌ಇಡಿಎ (Indian Renewable Energy Development Agency Limited) ನಿಂದ 10.35 ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ. ಬಿಜೆಪಿ ಆಡಳಿತದಲ್ಲಿರುವ ಮತ್ತೊಂದು ರಾಜ್ಯ ಮಧ್ಯ ಪ್ರದೇಶದ ರತ್ಲಮ್‌ ಜಿಲ್ಲೆಯಲ್ಲಿ 2.1 ಮೆಗಾ ವ್ಯಾಟ್‌ ಪವನ ವಿದ್ಯುತ್‌ ಉತ್ಪಾದನೆ ಮಾಡಲು ಈ ಸಾಲ ನೀಡಲಾಗಿದೆ. ಕಂಪನಿಗೆ ಈ ರೀತಿಯ ವಿದ್ಯುತ್‌ ಉತ್ಪಾದನೆ ಮಾಡಿದ ಯಾವುದೇ ಅನುಭವವಿಲ್ಲದಿದ್ದರೂ ಇಷ್ಟು ದೊಡ್ಡ ಮೊತ್ತವನ್ನು ನೀಡಲಾಗಿದೆ . ಜತೆಗೆ ಐಆರ್‌ಇಡಿಎ ನಿಯಮವನ್ನೂ ಮೀರಿ ಈ ಹಣ ನೀಡಲಾಗಿದೆ. ಸಂಸ್ಥೆಯ ನಿಯಮದ ಪ್ರಕಾರ 1 ಮೆಗಾವ್ಯಾಟ್‌ ವರೆಗಿನ ವಿದ್ಯುತ್‌ ಉತ್ಪಾದನೆ ಯೋಜನೆಗೆ, ಯೋಜನೆಯ ಅಂದಾಜು ವೆಚ್ಚದ ಶೇಕಡಾ 70ರಷ್ಟು ಹಣವನ್ನು ನೀಡಲಾಗುತ್ತದೆ. ಭಾರತದಲ್ಲಿ 1 ಮೆಗಾ ವ್ಯಾಟ್‌ ಉತ್ಪಾದನೆಗೆ 4 ರಿಂದ 7 ಕೋಟಿ ರೂಪಾಯಿ ಹಣ ಬೇಕಾಗುತ್ತದೆ. ಒಂದೊಮ್ಮೆ ಗರಿಷ್ಠ ಹಣ 7 ಕೋಟಿ ರೂಪಾಯಿ ಎಂದುಕೊಂಡರೂ ಕುಸುಮ್‌ ಫಿನ್‌ಸರ್ವ್‌ಗೆ 4.9 ಕೋಟಿ ರೂಪಾಯಿ ಹಣವನ್ನು ಮಂಜೂರು ಮಾಡಬಹುದಾಗಿದೆ. ಆದರೆ ಸಂಸ್ಥೆಗೆ ನೀಡಲಾದ ಸಾಲ ಬರೋಬ್ಬರಿ 8.52 ಕೋಟಿ ರೂಪಾಯಿ ಎಂದು ಸ್ವತಃ ಜಯ್‌ ಶಾ ವಕೀಲರು ಜೂನ್‌ನಲ್ಲಿ ಒಪ್ಪಿಕೊಂಡಿದ್ದರು. ಆಳದಲ್ಲಿ ನೋಡಿದರೆ 8.52 ಕೋಟಿಯಲ್ಲ 10.35 ಕೋಟಿ ರೂಪಾಯಿ ಹಣ ನೀಡಲಾಗಿತ್ತು.

ಹೀಗೆ ಹೆಜ್ಜೆ ಹೆಜ್ಜೆಗೂ ಗಂಭೀರ ಆರೋಪಗಳನ್ನು ಎದುರಿಸುತ್ತಾ ಬಂದ ಕುಸುಮ್‌ ಫಿನ್‌ಸರ್ವ್‌ ಸದ್ಯದ ಸ್ಥಿತಿ ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಕಾರಣ 2015-16ರ ನಂತರ ಸಂಸ್ಥೆ ಯಾವುದೇ ಲೆಕ್ಕಪತ್ರಗಳನ್ನು ಸಲ್ಲಿಸಿಲ್ಲ. 2016-17ರಲ್ಲಿ ಸಂಸ್ಥೆ ತನ್ನ ವಾರ್ಷಿಕ ವರದಿಯನ್ನು ಸಲ್ಲಿಸಿದೆಯಾದರೂ ಇದರಲ್ಲಿ ಸಂಸ್ಥೆಯ ವಹಿವಾಟು 5 ಕೋಟಿ ರೂಪಾಯಿ ದಾಟಿದೆ ಎಂದಷ್ಟೇ ಹೇಳಿದೆ.

ಸದ್ಯ ಸಂಸ್ಥೆ ಪ್ಲಾಸ್ಟಿಕ್‌ ಬ್ಯಾಗ್‌ಗಳ ಉತ್ಪಾದನೆಯಿಂದ ಹಿಂದೆ ಸರಿದಿದೆ ಎಂದು ಹೇಳಲಾಗಿದೆ. ಆದರೆ ವಾಣಿಜ್ಯ ಇಲಾಖೆ ಬಳಿಯಲ್ಲಿ ಈ ಹಿಂದಿನ ಸಂಸ್ಥೆಯ ಕಾರುಬಾರುಗಳಾಗಲೀ, ಸದ್ಯದ ಕಾರುಬಾರುಗಳಾಗಲೀ ಯಾವುದೂ ದಾಖಲಾಗಿಲ್ಲ. ಹೀಗೆ ಜಯ್‌ ಶಾ ಒಡೆತನದ ಕಂಪನಿಯ ಅಗೋಚರ ವ್ಯವಹಾರಗಳು ಮುಂದುವರಿಯುತ್ತವೆ.

ಕೃಪೆ: ಕ್ಯಾರವಾನ್‌