samachara
www.samachara.com
ಕೊಡಗಿನ ನೆರೆ ಮತ್ತು ಸುದ್ದಿಯಾದ ವದಂತಿ; ಪಾಲೆಮಾಡು ಗ್ರಾಮದಲ್ಲಿ ನಿಜಕ್ಕೂ ನಡೆದಿದ್ದೇನು?
COVER STORY

ಕೊಡಗಿನ ನೆರೆ ಮತ್ತು ಸುದ್ದಿಯಾದ ವದಂತಿ; ಪಾಲೆಮಾಡು ಗ್ರಾಮದಲ್ಲಿ ನಿಜಕ್ಕೂ ನಡೆದಿದ್ದೇನು?

ವದಂತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸುದ್ದಿ ಮಾಡಿದರೆ ಅಮಾಯಕರು ಎಂಥ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬುದಕ್ಕೆ ಕೊಡಗಿನ ಪಾಲೆಮಾಡು ಗ್ರಾಮದಲ್ಲಿ ನಡೆದ ಘಟನೆಯೇ ಉದಾಹರಣೆ.

ಆರ್‌ಎಸ್‌ಎಸ್‌ ಯುವಕರ ಪುಂಡಾಟ, ಪೊಲೀಸರ ಹೊಣೆಗೇಡಿತನ ಹಾಗೂ ಅವಸರದಲ್ಲಿ ವದಂತಿಯನ್ನೇ ಸುದ್ದಿ ಮಾಡಿದ ಕೆಲ ಮಾಧ್ಯಮಗಳಿಂದ ಕೊಡಗಿನ ಪಾಲೆಮಾಡು ಗ್ರಾಮಸ್ಥರು ಈಗ ‘ಕಿಡಿಗೇಡಿಗಳು’, ‘ಮೋಸಗಾರರು’ ಎಂಬ ಹಣೆಪಟ್ಟೆ ಧರಿಸುವಂತಾಗಿದೆ.

ಪಾಲೆಮಾಡು ಪೈಸಾರಿ ಹೊದ್ದೂರು ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮ. ಮಡಿಕೇರಿ ತಾಲೂಕಿಗೆ ಸೇರುವ ಈ ಗ್ರಾಮ ತನ್ನ ಹೋರಾಟಗಳಿಂದ ಸುದ್ದಿಯಲ್ಲಿತ್ತು. ಇಲ್ಲಿನ ದಲಿತರು ಭೂಮಿಗಾಗಿ ದಶಕಗಳ ಕಾಲದಿಂದ ಹೋರಾಡುತ್ತಲೇ ಬರುತ್ತಿದ್ದಾರೆ. ಪಾಲೆಮಾಡು ಗ್ರಾಮಕ್ಕೆ ನೆರೆಯಿಂದೇನೂ ತೊಂದರೆ ಆಗಿರಲಿಲ್ಲ. ಒಂದು ಮನೆ ಕುಸಿದಿದ್ದರ ಜತೆಗೆ ಹಲವಾರು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದನ್ನು ಬಿಟ್ಟರೆ ಸಾವು ನೋವುಗಳೇನೂ ಇಲ್ಲಿ ಸಂಭವಿಸಿರಲಿಲ್ಲ.

ನೆರೆ ಈ ಗ್ರಾಮಕ್ಕೆ ನೇರವಾಗಿ ಹಾನಿ ಮಾಡಿರಲಿಲ್ಲ ಎನ್ನುವುದೇನೋ ನಿಜ. ಆದರೆ ಪರೋಕ್ಷವಾಗಿ ಕೆಲವು ಜನರನ್ನು ಕಂಗೆಡಿಸಿತ್ತು. ಈ ಗ್ರಾಮದಲ್ಲಿರುವ ಬಹುಪಾಲು ಜನ ದಲಿತ, ಹಿಂದುಳಿದ ವರ್ಗ ಮತ್ತು ಮುಸ್ಲಿಂ ಜನಾಂಗಕ್ಕೆ ಸೇರಿದವರು. ಅಂದಿನ ತುತ್ತನ್ನು ಅಂದೇ ಕೂಲಿ ಮಾಡಿ ಗಳಿಸಿಕೊಳ್ಳುತ್ತಿದ್ದವರು. ನೆರೆ ಬಂದ ಕಾರಣದಿಂದ ಕೂಲಿ ಕೆಲಸಗಳು ದೊರೆತಿರಲಿಲ್ಲ. ಕೂಲಿ ಸಿಗದ ಕಾರಣ ಈ ಜನ ಕಂಗೆಟ್ಟಿದ್ದರು.

ಆದರೆ ಯಾರ ಬಳಿಯೂ ಕೂಡ ಪರಿಹಾರ ಸಾಮಗ್ರಿಗಳು ಬೇಕು ಎಂದು ಇವರುಕೇಳಿರಲಿಲ್ಲ. ಪರಿಹಾರ ಸಾಮಗ್ರಿಗಳನ್ನು ಹೊತ್ತು ಲಾರಿಯೊಂದು ಈ ಗ್ರಾಮದತ್ತ ಬಂದಿದ್ದೇ ತಪ್ಪಾಯಿತು. ಗ್ರಾಮಸ್ಥರು ಅರಿಯದ ವ್ಯಕ್ತಿಗಳ ಜತೆ ವೈರವನ್ನು ಕಟ್ಟಿಕೊಳ್ಳಬೆಕಾಯಿತು. ಕೆಲ ಮಾಧ್ಯಮಗಳಿಂದ ಕಿಡಿಗೇಡಿಗಳು, ಮೋಸಗಾರರು ಎಂದೆಲ್ಲಾ ಕರೆಸಿಕೊಳ್ಳಬೇಕಾಯಿತು. ಜತೆಗೆ ಇವರ ವಿರುದ್ಧ ಪೊಲೀಸರಿಗೆ ದೂರನ್ನೂ ಕೊಡಲಾಗಿದೆ.

ಕೊಡಗಿನ ನೆರೆ ಮತ್ತು ಸುದ್ದಿಯಾದ ವದಂತಿ; ಪಾಲೆಮಾಡು ಗ್ರಾಮದಲ್ಲಿ ನಿಜಕ್ಕೂ ನಡೆದಿದ್ದೇನು?

ಅಂದು ನಡೆದಿದ್ದೇನು?:

ಸೋಮವಾರದಂದು (ಆಗಸ್ಟ್ 20) ಪಾಲೆಮಾಡು ಪೈಸಾರಿ ಗ್ರಾಮಕ್ಕೆ ಎರಡು ಲಾರಿಗಳು ಪರಿಹಾರ ಸಾಮಗ್ರಿಗಳನ್ನು ಹೊತ್ತು ಬಂದಿದ್ದವು. ಈ ಸಾಮಗ್ರಿಯೆಲ್ಲಾ ಮಂಡ್ಯದ ಕೆಲ ಯುವಕರು ಕೊಡಗು ನೆರೆಪೀಡಿತರಿಗಾಗಿ ಮಂಡ್ಯದಲ್ಲಿಯೇ ಸಂಗ್ರಹಿಸಲ್ಪಟ್ಟಿದ್ದವು. ಮಂಡ್ಯದ ಚಂದ್ರೇಗೌಡ ಎಂಬುವರ ನೇತೃತ್ವದಲ್ಲಿ ಈ ಲಾರಿಗಳು ಕೊಡಗಿನತ್ತ ಬಂದಿದ್ದವು. ಕೊಟ್ಟೆಮುಡಿ ನಿರಾಶ್ರಿತರ ಕೇಂದ್ರದ ಸಂತ್ರಸ್ತರಿಗೆ ಈ ಸಾಮಗ್ರಿಗಳನ್ನು ಹಂಚುತ್ತಿದ್ದ ಸಂದರ್ಭದಲ್ಲಿ ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯೆ ಹಂಸ, ಪಾಲೆಮಾಡುವಿನ ಬಡವರಿಗೂ ಕೂಡ ಈ ಸಾಮಗ್ರಿಗಳ ಅಗತ್ಯವಿದೆ ಎಂದು ಚಂದ್ರೇಗೌಡರಿಗೆ ತಿಳಿಸಿದ್ದರು. ಹೀಗಾಗಿ ಲಾರಿಗಳು ಪಾಲೆಮಾಡುವಿನ ಕಡೆಗೆ ಹೊರಟಿದ್ದವು.

“ಪಾಲೆಮಾರು ದಾರಿಯನ್ನಿಡಿದ ಲಾರಿಗಳನ್ನು ಯುವಕನೊಬ್ಬ ಹಿಂಬಾಲಿಸಿಕೊಂಡು ಬಂದಿದ್ದ. ಲಾರಿಯವರ ಬಳಿ 5,000 ರೂಪಾಯಿಗಳನ್ನು ನೀಡುವಂತೆ ಬೇಡಿಕೆಯನ್ನಿಟ್ಟಿದ್ದ. ಮಂಡ್ಯದಿಂದ ಲಾರಿಯಲ್ಲಿ ಬಂದಿದ್ದವರು ಯುವಕನ ಈ ದುರ್ವರ್ತನೆಯನ್ನು ನಮ್ಮ ಗಮನಕ್ಕೆ ತಂದರು. ಯುವಕನನ್ನು ವಿಚಾರಿಸಲು ಮುಂದಾದಾಗ ಆತ ತಾನೊಬ್ಬ ಖಾಸಗಿ ವಾಹಿನಿಯ ಪತ್ರಕರ್ತ ಎಂದು ಹೇಳಿಕೊಂಡ. ಗುರುತಿನ ಚೀಟಿ ತೋರಿಸು ಎಂದಿದ್ದಕ್ಕೆ ಗಲಾಟೆ ಶುರು ಮಾಡಿದ” ಎಂದು ಪಾಲೆಮಾರು ಗ್ರಾಮದ ಹಿರಿಯ ಹಾಗೂ ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಮೊಣ್ಣಪ್ಪ ಘಟನೆಯನ್ನು ವಿವರಿಸಿದರು.

ಮೊಣ್ಣಪ್ಪ ಪಟ್ಟುಬಿಡದೇ ಯುವಕನನ್ನು ಪ್ರಶ್ನಿಸಿದಾಗ ಆ ಯುವಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್‌ಗೆ ಫೋನಾಯಿಸಿ, ಮೊಬೈಲನ್ನು ಮೊಣ್ಣಪ್ಪರ ಕೈಗಿಟ್ಟಿದ್ದ . ಮೊಣ್ಣಪ್ಪ ಜತೆ ಮಾತನಾಡಿದ ಹರೀಶ್‌ ‘ನಿಮ್ಮೂರಿನಲ್ಲಿ ನೆರೆಯಿಂದ ಸಮಸ್ಯೆ ಆಗದಿದ್ದರೂ ಕೂಡ ಏಕೆ ಪರಿಹಾರ ಸಾಮಗ್ರಿಗಳನ್ನು ಪಡೆಯುತ್ತಿದ್ದೀರಿ’ ಎಂದು ದಬಾಯಿಸಿದ್ದರು. ‘ಇದು ನಾವಾಗಿ ನಾವೇ ಕರೆಸಿಕೊಂಡಿದ್ದೇನಲ್ಲ. ಅಲ್ಲದೇ ಇದು ಸರಕಾರದ್ದಲ್ಲ. ದಾನಿಗಳು ತಮಗಿಷ್ಟ ಬಂದ ಊರಿಗೆ ಸಾಮಗ್ರಿಗಳನ್ನು ನೀಡುತ್ತಾರೆ. ಇದನ್ನು ನೀವು ಪ್ರಶ್ನಿಸುವಂತಿಲ್ಲ’ ಎಂದು ಮೊಣ್ಣಪ್ಪ ಹೇಳಿದ್ದರು. ಯುವಕನ ಬಗ್ಗೆ ಸರಿಯಾದ ಮಾಹಿತಿ ದೊರೆಯದ ಕಾರಣ ಗ್ರಾಮಸ್ಥರು ಆತನನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಡಿಎಸ್‌ಪಿಗೆ ಫೋನಾಯಿಸಿ ನಡೆದ ವಿಷಯವನ್ನೆಲ್ಲಾ ತಿಳಿಸಿದ್ದಾರೆ.

ಡಿಎಸ್‌ಪಿ ಪಾಲೆಮಾಡು ಗ್ರಾಮಕ್ಕೆ ಮೂರ್ನಾಡು ಪೊಲೀಸ್‌ ಠಾಣೆಯ ಎಸ್‌ಪಿ ಸದಾಶಿವ ಮತ್ತು ಇತರೆ ಪೇದೆಗಳನ್ನು ಕಳುಹಿಸಿದ್ದರು. “ಪೊಲೀಸರು ಬರುವ ಹೊತ್ತಿಗೆ ಗ್ರಾಮಕ್ಕೆ ಬಂದ ಆರ್‌ಎಸ್‌ಎಸ್‌ ಯುವಕರ ಗುಂಪು ಯುವಕನಿದ್ದ ಕೋಣೆಯತ್ತ ತೆರೆಳಿ, ಆತನ್ನು ಬಿಡಿಸಿಕೊಂಡು ತೆರಳಲು ಮುಂದಾಯಿತು. ಇದನ್ನು ವಿರೋಧಿಸಿದ ನಾವು ಆ ಯುವಕನ ವಿಚಾರಣೆ ನಡೆಸಿ ಎಂದು ಪೊಲೀಸರ ಮುಂದೆ ಪ್ರತಿಭಟನೆ ನಡೆಸಿದೆವು. ಆದರೆ ಆರ್‌ಎಸ್‌ಎಸ್‌ ಯುವಕರ ಪರವಾಗಿಯೇ ನಿಂತರ ಪೊಲೀಸರು, ನಾವು ಕೂಡಿಹಾಕಿದ್ದ ಯುವಕನನ್ನು ಬಿಡಿಸಿ ಕಳಿಸಲು ಮುಂದಾದರು. ಈ ವೇಳೆ ಹಳ್ಳಿಯ ಕೆಲವು ಮಹಿಳೆಯರು ಪೊಲೀಸರ ಈ ವರ್ತನೆಯನ್ನು ಪ್ರತಿಭಟಿಸಿ ಅವರ ದಾರಿಗೆ ಅಡ್ಡ ನಿಂತಾಗ ನೂಕು ನುಗ್ಗಲು ಉಂಟಾಯಿತು. ಕೆಲ ಮಾಧ್ಯಮಗಳಲ್ಲಿ ಇದನ್ನು ನಮ್ಮದೇ ತಪ್ಪು ಎಂಬಂತೆ ಬಿಂಬಿಸಿ ಸುದ್ದಿ ಮಾಡಲಾಯಿತು” ಎನ್ನುತ್ತಾರೆ ಮೊಣ್ಣಪ್ಪ.

ಈ ಘಟನೆ ಮಾಧ್ಯಮಗಳಲ್ಲಷ್ಟೇ ಅಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿದೆ. ‘ಪಾಲೆಮಾಡು ಗ್ರಾಮಸ್ಥರು ಪರಿಹಾರವನ್ನು ದೋಚುತ್ತಿರುವ ಲೋಟಿಕೋರರು, ಕಿಡಿಗೇಡಿಗಳು’ ಎಂದೆಲ್ಲಾ ಸುದ್ದಿ ಹಬ್ಬಿದೆ. ‘ಪರಿಹಾರ ಸಾಮಗ್ರಿ ಹೊತ್ತ ಲಾರಿಗಳ ದಿಕ್ಕು ತಪ್ಪಿಸುತ್ತಿದ್ದ ಗ್ರಾಮಸ್ಥರು ಮತ್ತು ಪೊಲೀಸರ ನಡುವೆ ಹೊಡೆದಾಟ ನಡೆದಿದೆ’ ಎಂದು ಕೆಲ ಮಾಧ್ಯಮಗಳು ಸುದ್ದಿ ಮಾಡಿವೆ. ಈ ಕೆಲ ಮಾಧ್ಯಮಗಳು ಸತ್ಯ ಸಂಗತಿಯ ಪರಿಶೀಲನೆಗೇ ಹೋಗದೆ ಮೇಲು ನೋಟಕ್ಕೆ ಕಂಡ ವದಂತಿಯನ್ನೇ ಸುದ್ದಿ ಮಾಡಿ ಹರಿಬಿಟ್ಟಿವೆ.

ಮಂಡ್ಯದ ಜನರಿಂದ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ, ಕೊಡಗಿನತ್ತ ತೆಗೆದುಕೊಂಡು ಹೋದ ಲಾರಿಗಳ ಜತೆಗೆ ಇದ್ದವರು ಮಂಡ್ಯದ ಚಂದ್ರೇಗೌಡ. ಇವರೇ ಹೇಳುವ ಪ್ರಕಾರ ಈ ಪ್ರಕರಣದಲ್ಲಿ ಪಾಲೆಮಾಡು ಗ್ರಾಮಸ್ಥರದ್ದೇನೂ ತಪ್ಪಿಲ್ಲ.

ನಾವು ಮಂಡ್ಯದಿಂದ ಸಾಮಗ್ರಿಗಳನ್ನು ತುಂಬಿಕೊಂಡು ಲಾರಿಗಳಲ್ಲಿ ಕೊಡಗಿಗೆ ಹೋಗಿದ್ದೆವು. ಕೊಡಗಿನ ಜನರೇ ನೀಡಿದ ಮಾಹಿತಿಯ ಮೇರೆಗೆ ಪಾಲೆಮಾಡು ಗ್ರಾಮದ ಕಡೆಗೆ ತೆರಳಿ, ಪರಿಹಾರ ಸಾಮಗ್ರಿಗಳನ್ನು ಹಂಚಲು ಮುಂದಾಗಿದ್ದೆವು. ಆ ಹಳ್ಳಿಗರೇನೂ ನಮ್ಮನ್ನು ಕರೆದಿರಲಿಲ್ಲ. ಆದರೆ ಈಗ ಹಳ್ಳಿಗರ ಮೇಲೆಯೇ ಆರೋಪ ಹೊರಿಸಲಾಗಿದೆ. ಅವರನ್ನೇ ದೂಷಿಸಿ, ವಂಚಕರು ಎಂದು ಬಿಂಬಿಸಲಾಗುತ್ತಿದೆ.
-ಚಂದ್ರೇಗೌಡ, ಮಂಡ್ಯದಿಂದ ಪರಿಹಾರ ಸಾಮಗ್ರಿಗಳನ್ನು ತಗೆದುಕೊಂಡು ಹೋದವರು

ಸತ್ಯವೇನೆಂದರೆ ಇದೇ ಹಳ್ಳಿ ಜನ ಕೊಡಗಿನ ಹಲವು ಭಾಗಗಳಲ್ಲಿ ಪ್ರವಾಹ ಉಂಟಾಗಿ, ಜನ ಸಂಕಷ್ಟಕ್ಕೆ ಈಡಾದಾಗ ತಾವೇ 350 ಕೆಜಿ ಅಕ್ಕಿಯನ್ನು ಸಂಗ್ರಹಿಸಿ ಮಾದಾಪುರ ಮತ್ತು ಶುಂಠಿಕೊಪ್ಪ ಜನರಿಗೆ ತಲುಪಿಸಿದ್ದರು. ತಮ್ಮ ಗ್ರಾಮಕ್ಕೆ ಬಂದ ಲಾರಿಗಳು ಮತ್ತು ಅವುಗಳ ಹಿಂದಿದ್ದ ಯುವಕನೇ ಗ್ರಾಮಸ್ಥರಿಗೆ ಈಗ ತಲೆನೋವಾಗಿ ಪರಿಣಮಿಸಿದ್ದಾನೆ. ಲಾರಿಗಳಲ್ಲಿ ಬಂದ ಪರಿಹಾರ ಸಾಮಗ್ರಿಗಳೂ ಈ ಗ್ರಾಮಸ್ಥರಿಗೆ ಸಿಕ್ಕಿಲ್ಲ, ಸಿಕ್ಕಿದ್ದು ಅಪವಾದ ಮಾತ್ರ.

ನೆರೆ ಸಂತ್ರಸ್ತರಿಗೆಂದು ಬಂದಿದ್ದ ಪರಿಹಾರ ಸಾಮಗ್ರಿಗಳನ್ನು ದೋಚುತ್ತಿದ್ದಾರೆ ಎಂದು ಪಾಲೆಮಾಡು ಗ್ರಾಮದ ಮೊಣ್ಣಪ್ಪ, ಕುಸುಮಾವತಿ, ಪೂವಣ್ಣಿ, ನಯಾಜ್‌, ಮಹೇಶ್‌, ಸುರೇಶ್‌ ಎನ್ನುವವರ ಮೇಲೆ ಆರ್‌ಎಸ್‌ಎಸ್‌ ಸಂಘಟನೆಯ ವ್ಯಕ್ತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ರಾಜಕಾರಣಿಗಳು, ಕೆಲ ಮಾಧ್ಯಮದವರು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಘಟನೆಯಿಂದ ನಮಗೆ ಮಾನಸಿಕ ಹಿಂಸೆಯಾಗಿದೆ. ನಮ್ಮ ಊರಿಗೂ ಕೂಡ ಈ ಘಟನೆ ಕಳಂಕ ತಂದಿದೆ. ಕೆಲ ಮಾಧ್ಯಮಗಳು ಸತ್ಯವನ್ನು ಮರೆಮಾಡಿ ಸುಳ್ಳು ಸುದ್ದಿ ಹಬ್ಬಿಸಲು ಮುಂದಾಗಿವೆ.
-ಮೊಣ್ಣಪ್ಪ, ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ

ವದಂತಿಗಳ ಸತ್ಯಾಸತ್ಯತೆ ಪರಿಶೀಲಿಸದೆ ಸುದ್ದಿ ಮಾಡಿದ ಕೆಲ ಮಾಧ್ಯಮಗಳಿಂದ, ಘಟನೆಯ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳದ ಪೊಲೀಸರಿಂದ ಹಾಗೂ ಆರ್‌ಎಸ್‌ಎಸ್‌ ಯುವಕರ ಪುಂಡಾಟದಿಂದ ಈಗ ಪಾಲೆಮಾಡು ಗ್ರಾಮದ ಅಮಾಯಕ ಜನ ಅಪವಾದಕ್ಕೆ ಸಿಲುಕಿದ್ದಾರೆ. ಪ್ರವಾಹ ಉಂಟಾದ ಬಳಿಕ ಪರಿಹಾರ ಕಾರ್ಯ ನಡೆಯುತ್ತಿರುವ ಕೊಡಗಿನಲ್ಲಿ ಈಗ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಂತಿದೆ.