samachara
www.samachara.com
ಕಾಡಿನ ಮಕ್ಕಳಿಗೆ ಬೇಕಿರುವುದು ಪುನರ್‌ವಸತಿ ಕ್ಯಾಂಪ್‌ಗಳಲ್ಲ, ಘನತೆಯ ಬದುಕು
COVER STORY

ಕಾಡಿನ ಮಕ್ಕಳಿಗೆ ಬೇಕಿರುವುದು ಪುನರ್‌ವಸತಿ ಕ್ಯಾಂಪ್‌ಗಳಲ್ಲ, ಘನತೆಯ ಬದುಕು

ಕಾಡಿನ ಸಂರಕ್ಷಣೆಯ ಜತೆಗೆ ಕಾಡಿನ ಮಕ್ಕಳ ರಕ್ಷಣೆಯ ಕಡೆಗೂ ಸರಕಾರ ಗಮನ ಕೊಡಬೇಕು. ನೀತಿ ನಿರೂಪಕರು ಆದಿವಾಸಿಗಳನ್ನೂ ಮನುಷ್ಯರು ಎಂದು ನೋಡಬೇಕು.

ನೆರೆಯ ಕೇರಳ ಹಾಗೂ ರಾಜ್ಯದ ಕೊಡಗಿನಲ್ಲಿ ನೈಸರ್ಗಿಕ ವಿಕೋಪದಿಂದ ಲಕ್ಷಾಂತರ ಜನರ ಬದುಕು ಅತಂತ್ರವಾಗಿರುವ ಹೊತ್ತಿನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಮಾತನಾಡುವುದು ಹೆಚ್ಚಾಗಿದೆ. ನೈಸರ್ಗಿಕ ವಿಕೋಪಕ್ಕೆ ಪ್ರಕೃತಿಯಷ್ಟೇ ಮಾನವನ ಚಟುವಟಿಕೆಗಳೂ ಕಾರಣ, ಪರಿಸರ ಮಾಲಿನ್ಯದ ಜತೆಗೆ ಅತಿಯಾದ ಅರಣ್ಯ ನಾಶವೂ ಇಂಥ ವಿಪತ್ತುಗಳನ್ನು ತಂದೊಡ್ಡುತ್ತದೆ ಎಂಬ ಚರ್ಚೆಗಳು ಈಗ ನಡೆಯುತ್ತಿವೆ. ಇದರೊಂದಿಗೆ ಅರಣ್ಯ ಸಂರಕ್ಷಣೆಯ ಮಹತ್ವದ ಬಗ್ಗೆ ಹಲವರು ಈಗ ಮತ್ತೆ ಮಾತು ಆರಂಭಿಸಿದ್ದಾರೆ.

ಅರಣ್ಯ ಸಂರಕ್ಷಣೆಯ ವಿಷಯ ಬಂದಾಗೆಲ್ಲಾ ಕಾಡಿನಲ್ಲಿರುವ ಆದಿವಾಸಿಗಳನ್ನು ಕಾಡಿನಿಂದ ಹೊರಕ್ಕೆ ತರಬೇಕೆಂಬ ಮಾತು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಕಾಡಿನಲ್ಲಿ ಮಾನವ ಚಟುವಟಿಕೆಗಳು ತಗ್ಗಿದರೆ ಮಾತ್ರ ಸಸ್ಯ ಹಾಗೂ ವನ್ಯಜೀವಿ ಸಂಕುಲ ಸಮೃದ್ಧಿ ಹೊಂದಲು ಸಾಧ್ಯ ಎಂಬುದು ಪರಿಸರ ಪ್ರೇಮಿಗಳ ವಾದ. ಆದರೆ, ಆದಿವಾಸಿಗಳನ್ನು ಕಾಡಿನಿಂದ ಒಕ್ಕಲೆಬ್ಬಿಸುವುದೇ ಅರಣ್ಯ ರಕ್ಷಣೆಗೆ ಪರಿವಾರವಲ್ಲ.

ಅರಣದಲ್ಲಿ ಮಾನವ ಚಟುವಟಿಕೆಗಳು ತಗ್ಗಬೇಕೆಂಬುದು ನಿಜ. ಆದರೆ, ಮಾನವ ಚಟುವಟಿಕೆಗಳನ್ನು ನಿರ್ಬಂಧಿಸುವ ಹೆಸರಿನಲ್ಲಿ ಸರಕಾರಗಳು ಆದಿವಾಸಿಗಳನ್ನು ಏಕಾಏಕಿ ಅರಣ್ಯದಿಂದ ಒಕ್ಕಲೆಬ್ಬಿಸಿ ಯಾವುದೋ ಜಾಗದಲ್ಲಿ ಪುಟ್ಟ ಪುಟ್ಟ ಮನೆಗಳ ಪುನರ್‌ವಸತಿ ಕೇಂದ್ರಗಳೆಂಬ ಕಾಲೋನಿಗಳನ್ನು ನಿರ್ಮಿಸಿ ಅವರ ಬದುಕನ್ನು ಅತಂತ್ರ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಕಾಡನ್ನೇ ನೆಚ್ಚಿಕೊಂಡಿದ್ದ ಆದಿವಾಸಿಗಳು ಕಾಡಿನಿಂದ ಹೊರಬಂದು ನಾಡಿನ ಬದುಕಿಗೆ ಹೊಂದಿಕೊಳ್ಳಲಾಗದೆ ಪರದಾಡುವಂಥ ಪರಿಸ್ಥಿತಿ ಇದೆ. ಸರಕಾರಗಳು ದೂರದೃಷ್ಟಿಯಿಲ್ಲದೆ ಜಾರಿಗೆ ತರುವ ಯೋಜನೆಗಳು ಆದಿವಾಸಿಗಳ ಬದುಕನ್ನು ಅತಂತ್ರವಾಗಿಸುತ್ತಲೇ ಬಂದಿವೆ.

ಸಾವಿರಾರು ವರ್ಷಗಳಿಂದ ಕಾಡಿನಲ್ಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಕಾಡಿನ ಮಕ್ಕಳಾದ ಆದಿವಾಸಿಗಳಿಗೆ ಕಾಡಿನ ಸಂರಕ್ಷಣೆಯ ಪಾರಂಪರಿಕ ಜ್ಞಾನವೂ ಇದೆ ಎಂಬುದನ್ನು ಸರಕಾರಗಳು ಮರೆಯುತ್ತಿವೆ. ಹೀಗಾಗಿ ಆದಿವಾಸಿಗಳ ಸಹಯೋಗದಲ್ಲಿ ಅರಣ್ಯ ಸಂರಕ್ಷಣೆ ಎಂಬುದರಲ್ಲಿ ಸರಕಾರಕ್ಕೆ ನಂಬಿಕೆ ಇಲ್ಲ. ಕಾಡಿನಲ್ಲಿರುವ ಆದಿವಾಸಿಗಳ ಜನಸಂಖ್ಯೆಯೇನೂ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿಲ್ಲ. ಅಲ್ಲದೆ, ಆದಿವಾಸಿಗಳ ಸರಾಸರಿ ಜೀವಿತಾವಧಿಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 45- 50 ವರ್ಷಕ್ಕೆ ಸಾಯುವವರ ಸಂಖ್ಯೆ ಆದಿವಾಸಿಗಳಲ್ಲಿ ಹೆಚ್ಚಾಗಿದೆ.

ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಬದಲು ಆದಿವಾಸಿಗಳಿಗೆ ಗುಣಮಟ್ಟದ ಶಿಕ್ಷಣ, ಕಾಡಿನ ಅವಲಂಬನೆ ತಗ್ಗಿಸಲು ಗುಡಿ ಕೈಗಾರಿಕೆಗೆ ಉತ್ತೇಜನ, ಉತ್ತಮ ಕೃಷಿ ಭೂಮಿ ಕೊಟ್ಟು ವ್ಯವಸಾಯಕ್ಕೆ ಪ್ರೋತ್ಸಾಹಿಸಿದರೆ ಆದಿವಾಸಿಗಳು ಸಹಜವಾಗಿಯೇ ಕಾಡಿನಿಂದ ಹೊರಬರುತ್ತಾರೆ. ಆದರೆ, ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಯೋಚಿಸುತ್ತಲೇ ಇಲ್ಲ ಎನ್ನುತ್ತಾರೆ ಆದಿವಾಸಿ ಮುಖಂಡರು.

“ಅರಣ್ಯ ಸಂರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರ ತುಂಬಾ ಇದೆ. ಆದಿವಾಸಿಗಳಿಗೆ ಕಾಡಿನ ಸಂಪತ್ತನ್ನು ದೋಚುವ ಬುದ್ಧಿ ಇಲ್ಲ. ಕಾಡು ಹಾಗೂ ಕಾಡಿನಲ್ಲಿನ ಮರಗಳನ್ನೇ ದೇವರು ಎಂದು ಪೂಜಿಸುವ ಆದಿವಾಸಿಗಳು ಕಾಡನ್ನು ಹಾಳು ಮಾಡುವುದಿಲ್ಲ. ಕಾಡಿನ ಬಗ್ಗೆ ಆದಿವಾಸಿಗಳಲ್ಲಿ ಅಪಾರವಾದ ಪಾರಂಪರಿಕ ಜ್ಞಾನವಿದೆ. ಆದರೆ, ಕಾಡಿನ ಮಕ್ಕಳನ್ನೇ ಸರಕಾರಗಳು ಕಾಡಿನ ಕಳ್ಳರು ಎಂಬಂತೆ ನೋಡುತ್ತಿರುವುದು ದುರಂತ” ಎಂಬುದು ಆದಿವಾಸಿ ಮುಖಂಡ ಡಾ.ಸಿ. ಮಾದೇಗೌಡ ಅವರ ಬೇಸರದ ಮಾತು.

ಸರಕಾರದ ಮಟ್ಟದಲ್ಲಿ ನೀತಿ ನಿರೂಪಕರ ಮನಸ್ಸುಗಳು ಹಾಗೂ ಅರಣ್ಯ ಇಲಾಖೆ ಎಂಬ ಬ್ರಿಟಿಷ್‌ ರಾಜ್‌ ವ್ಯವಸ್ಥೆ ಇಂದಿಗೂ ಹೇಗೆ ಕೆಲಸ ಮಾಡುತ್ತಿದೆ ಎಂಬುದು ಮಾದೇಗೌಡರ ಮಾತುಗಳಲ್ಲಿ ಸ್ಪಷ್ಟವಾಗುತ್ತಾ ಹೋಯಿತು. ಆದಿವಾಸಿಗಳ ಪಾರಂಪರಿಕ ಜ್ಞಾನವನ್ನು ಬಳಸಿಕೊಂಡು ಕಾಡನ್ನು ರಕ್ಷಣೆ ಮಾಡಬೇಕು ಎಂಬ ಬಗ್ಗೆ ಯಾವ ಸರಕಾರಗಳಿಗೂ ಮನಸ್ಸಿಲ್ಲ. ಮಾತೆತ್ತಿದರೆ ಕಾಡಿನಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಎಂದು ಆದೇಶ ನೀಡುವುದಷ್ಟೇ ಸರಕಾರಗಳ ಕೆಲಸವಾಗಿದೆ ಎನ್ನುತ್ತಾರೆ ಮಾದೇಗೌಡ.

ಉತ್ತಮ ಶಿಕ್ಷಣ ಕೊಡಿ:

ಚಾಮರಾಜನಗರ ಜಿಲ್ಲೆಯೊಂದನ್ನು ಬಿಟ್ಟು ರಾಜ್ಯದ ವಿವಿಧ ಕಡೆಗಳ ಕಾಡಿನಲ್ಲಿರುವ ಆದಿವಾಸಿಗಳ ಬದುಕು ತೀರಾ ನಿಕೃಷ್ಟವಾಗಿದೆ. ಹಲವೆಡೆ ಆದಿವಾಸಿಗಳು ತಮ್ಮ ಹಕ್ಕುಗಳನ್ನು ಪಡೆಯುವುದಿರಲಿ ತಮಗಿರುವ ಹಕ್ಕುಗಳು ಯಾವುವು ಎಂಬುದೇ ಬಹುತೇಕರಿಗೆ ಸರಿಯಾಗಿ ಗೊತ್ತಿಲ್ಲ. ಹಲವರು ಕಾಡಿನಿಂದ ಹೊರಬಿದ್ದು ಅತಂತ್ರದ ಬದುಕು ಕಳೆಯುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ವಂಚಿತ ಆದಿವಾಸಿಗಳು ಸರಕಾರದ ನೀತಿಗಳಿಂದಾಗಿ ಅತಂತ್ರವಾಗಿ ಕಾಡಿನಿಂದ ಹೊರಬಿದ್ದು ನಾಡಿನ ನರಕ ಕಾಣುವಂತಾಗಿದೆ.

“ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಕ್ಕಿಂತ ಆದಿವಾಸಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಟ್ಟು, ಅವರ ಕೌಶಲ ಅಭಿವೃದ್ಧಿ ಪಡಿಸಿದರೆ ಕಾಡಿನ ಅವಲಂಬನೆ ತಪ್ಪುತ್ತದೆ. ಇದರಿಂದ ಕಾಡಿನಿಂದ ಹೊರ ಬಂದಾಗ ನಾಡಿನ ಜನರೊಂದಿಗೆ ಬೆರೆತು ಬದುಕು ನಡೆಸಲು ಸಾಧ್ಯವಾಗುತ್ತದೆ. ಆದಿವಾಸಿಗಳಿಗೆ ಉತ್ತಮ ಶಿಕ್ಷಣ ಕೊಟ್ಟು, ಸೂಕ್ತ ಕೆಲಸ ಕೊಟ್ಟರೆ ಕಾಡಿನಿಂದ ತಾವಾಗಿಯೇ ಹೊರಬರುತ್ತಾರೆ” ಎಂಬುದು ಮಾದೇಗೌಡರ ಅಭಿಪ್ರಾಯ.

ಕಾಡಿನಲ್ಲಿರುವ ಗಿರಿಜನ ಶಾಲೆಗಳನ್ನು ಗುಣಮಟ್ಟದ ಶಾಲೆಗಳಾಗಿ ಅಭಿವೃದ್ಧಿ ಪಡಿಸಿ, ಆದಿವಾಸಿ ಮಕ್ಕಳು ಶಾಲೆಯಿಂದ ಹೊರ ಬೀಳದಂತೆ ಪ್ರತ್ಯೇಕ ಪಠ್ಯಕ್ರಮ ಅಳವಡಿಸಿದರೆ ಆದಿವಾಸಿ ಮಕ್ಕಳು ಶಿಕ್ಷಣ ವಂಚಿತರಾಗುವುದು ತಪ್ಪುತ್ತದೆ. ಶಾಲಾ ವಿದ್ಯಾಭ್ಯಾಸದ ಬಳಿಕ ಉನ್ನತ ಶಿಕ್ಷಣಕ್ಕೆ ಹೋಗುವ ಆದಿವಾಸಿ ಮಕ್ಕಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಶಿಕ್ಷಣ ಹಾಗೂ ಉದ್ಯೋಗದ ಮೀಸಲಾತಿಯಲ್ಲಿ ಸದ್ಯ ಜಾರಿಯಲ್ಲಿರುವ ಪರಿಶಿಷ್ಟ ಪಂಗಡದ (ಎಸ್‌ಟಿ) ಜನರಿಗೆ ಸಿಗುವ ಮೀಸಲಾತಿಯೇ ಆದಿವಾಸಿಗಳಿಗೂ ಸಿಗುತ್ತಿದೆ. ಹೀಗಾಗಿ ಆದಿವಾಸಿಗಳಿಗೆ ಪ್ರತ್ಯೇಕ ಒಳ ಮೀಸಲಾತಿ ಜಾರಿಗೆ ತರಬೇಕೆಂಬ ಬೇಡಿಕೆಯೂ ಬಹಳ ದಿನಗಳಿಂದ ಇದೆ.

ದುಡಿಯಲು ಕೌಶಲ, ವ್ಯವಸಾಯಕ್ಕೆ ಭೂಮಿ:

ಕಾಡಿನ ಕಿರು ಉತ್ಪನ್ನಗಳ ಸಂಗ್ರಹವನ್ನೇ ಅವಲಂಬಿಸಿರುವ ಆದಿವಾಸಿಗಳಿಗೆ ಗುಡಿ ಕೈಗಾರಿಕೆ, ಕೌಶಲ ಅಭಿವೃದ್ಧಿ ತರಬೇತಿಗಳನ್ನು ನೀಡಿದರೆ ಅವರು ಕಾಡನ್ನು ಅವಲಂಬಿಸುವುದು ತಪ್ಪುತ್ತದೆ. ಕಾಡಿನ ಬದುಕಿಗೆ ಹೊಂದಿಕೊಂಡಿರುವ ಆದಿವಾಸಿಗಳಿಗೆ ನಾಡಿನ ಬದುಕಿನಲ್ಲಿ ದುಡಿಮೆಗೆ ಅವಶ್ಯವಿರುವ ಮೂಲಭೂತ ಕೌಶಲಗಳನ್ನು ಕಲಿಸಬೇಕಿದೆ. ಜತೆಗೆ ಪ್ರತಿ ಕುಟುಂಬಕ್ಕೆ ಕೃಷಿ ಭೂಮಿ ಹಾಗೂ ನೀರಾವರಿ ವ್ಯವಸ್ಥೆ ಕಲ್ಪಿಸುವಂಥ ಸಮಗ್ರ ಯೋಜನೆಯನ್ನು ಸರಕಾರ ಜಾರಿಗೆ ತರಬೇಕಿದೆ.

“ಕರ್ನಾಟಕದಲ್ಲಿರುವ ಒಟ್ಟು ಆದಿವಾಸಿಗಳ ಸಂಖ್ಯೆ ಸುಮಾರು 5 ಲಕ್ಷ. ಆದಿವಾಸಿಗಳ ಜನಸಂಖ್ಯೆಯೇನೂ ಹೆಚ್ಚಾಗುತ್ತಿಲ್ಲ. ಪೌಷ್ಠಿಕಾಂಶದ ಕೊರತೆ ಹಾಗೂ ಉತ್ತಮ ಆರೋಗ್ಯ ಸವಲತ್ತುಗಳಿಲ್ಲದೆ ಆದಿವಾಸಿಗಳು ಬೇಗ ಬೇಗ ಸಾವನ್ನಪುತ್ತಿದ್ದಾರೆ. ಹೀಗಾಗಿ ಆದಿವಾಸಿಗಳ ಆರೋಗ್ಯ ಸುಧಾರಣೆ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸರಕಾರಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕೆಲವು ಪರಿಸರ ಪ್ರೇಮಿಗಳ ಮಾತು ಕೇಳಿ ಇಡೀ ಆದಿವಾಸಿ ಸಮುದಾಯವನ್ನು ಕಾಡಿನಿಂದ ಏಕಾಏಕಿ ಒಕ್ಕಲೆಬ್ಬಿಸುವ ಬದಲು ಇರುವ ಉತ್ತಮ ಮಾರ್ಗಗಳ ಕಡೆಗೆ ಸರಕಾರ ಆಲೋಚಿಸಬೇಕು” ಎಂಬ ಒತ್ತಾಯ ಮಾದೇಗೌಡರದ್ದು.

ಸರಕಾರ ಅರಣ್ಯ ಇಲಾಖೆಯ ಪ್ರಾಥಮಿಕ ಹುದ್ದೆಗಳ ನೇಮಕಾತಿಯಲ್ಲಿ ಆದಿವಾಸಿಗಳಿಗೆ ಆದ್ಯತೆ ನೀಡಬೇಕು. ಇದರಿಂದ ಅರಣ್ಯ ಸಂರಕ್ಷಣೆಯ ಪಾರಂಪರಿಕ ಜ್ಞಾನ ಸದುಪಯೋಗವಾಗುತ್ತದೆ. ಕಾಡಿನ ಮಕ್ಕಳಾದ ಆದಿವಾಸಿಗಳನ್ನು ಒಮ್ಮೆಲೇ ಕಾಡಿನಿಂದ ಪೂರ್ತಿಯಾಗಿ ದೂರ ಇಡುವ ಬದಲು ಆಗಾಗ ಕಾಡಿನಲ್ಲಿರುವ ಪಾರಂಪರಿಕ ಸ್ಥಳಗಳ ಭೇಟಿಗೆ ವಿಶೇಷ ಅವಕಾಶ ಕೊಡಬೇಕು. ಅವರ ಬದುಕಿನ ಶೈಲಿ ಬದಲಾಗುವವರೆಗೆ ಕಾಡಿಗೆ ಹೋಗಿ ಪಾರಂಪರಿಕ ಆಚರಣೆ ನಡೆಸಲು ಬಿಡಬೇಕು.

ಅರಣ್ಯ ಇಲಾಖೆಯ ಜತೆಗೆ ಸಮಾಜ ಕಲ್ಯಾಣ, ಶಿಕ್ಷಣ, ಕಂದಾಯ ಇನ್ನಿತರ ಇಲಾಖೆಗಳು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕೆಲಸ ಮಾಡಿದರೆ ಆದಿವಾಸಿಗಳ ಬದುಕು ಹಸನು ಮಾಡುವುದು ಕಷ್ಟವೇನಲ್ಲ. ಮುಖ್ಯವಾಗಿ ಸರಕಾರ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಡಿನ ಜತೆಗೆ ಆದಿವಾಸಿಗಳ ಬದುಕನ್ನೂ ಸಂರಕ್ಷಣೆ ಮಾಡುವ ಇಚ್ಛಾಶಕ್ತಿ ತೋರಬೇಕು. ಇಲ್ಲವಾದರೆ ‘ಪುನರ್‌ವಸತಿ ಕೇಂದ್ರ’ದ ಹೆಸರಿನ ಕ್ಯಾಂಪ್‌ಗಳಲ್ಲಿ ಆದಿವಾಸಿಗಳ ಬದುಕು ಕೊಳೆಯುವಂತಾಗುತ್ತದೆ.