samachara
www.samachara.com
ಕೊಡಗು ಪ್ರಾಕೃತಿಕ ವಿಕೋಪ: ತುರ್ತಾಗಿ ಈ 5 ಅಂಶಗಳ ಬಗ್ಗೆ ಸರಕಾರ ಗಮನಹರಿಸಲಿ...
COVER STORY

ಕೊಡಗು ಪ್ರಾಕೃತಿಕ ವಿಕೋಪ: ತುರ್ತಾಗಿ ಈ 5 ಅಂಶಗಳ ಬಗ್ಗೆ ಸರಕಾರ ಗಮನಹರಿಸಲಿ...

ಮಡಿಕೇರಿ ನಗರ ಕೇಂದ್ರಿತ ವಿಕೋಪ ನಿರ್ವಹಣೆ ನಡೆಯುತ್ತಿದೆ ಮತ್ತು ಅಲ್ಲಿಯೇ ಹೆಚ್ಚು ಕಡಿಮೆ ಎಲ್ಲಾ ಸೌಲಭ್ಯಗಳು ಕೇಂದ್ರಿಕೃತಗೊಂಡಿವೆ. ಇದರ ಆಚೆಗೆ, ತಲುಪಬೇಕಾದ ಪ್ರದೇಶಗಳಿಗೆ ಅಗತ್ಯ ನೆರವು ಲಭ್ಯವಾಗುತ್ತಿಲ್ಲ.

ಇವತ್ತಿಗೆ ಐದನೇ ದಿನ. ಕರ್ನಾಟಕದ ಗಡಿ ಜಿಲ್ಲೆ ಕೊಡಗಿನಲ್ಲಿ ಕಳೆದ ಬುಧವಾರ ಭಾರಿ ಮಳೆ ಶುರುವಾಗಿತ್ತು. ಮಡಿಕೇರಿ ಹಾಗೂ ಸಂಪಾಜೆ ನಡುವಿನ ದಟ್ಟ ಕಾನನಗಳಲ್ಲಿ ಇಂತಹ ಮಳೆಯನ್ನು ಅಲ್ಲಿನ ಜನ ಮೊದಲೂ ಎದುರುಗೊಂಡಿದ್ದರು. ಆದರೆ ಬುಧವಾರ ರಾತ್ರಿ ನಿಧಾನವಾಗಿ ಗುಡ್ಡ ಜಾರತೊಡಗಿತು. ಮಳೆಯ ಜತೆಗೆ ಪ್ರಕೃತಿ ಮುನಿಸಿಕೊಂಡ ತೀವ್ರತೆಯೊಂದು ಅಲ್ಲಿನ ಜನರಿಗೆ ಅರಿವಿಗೆ ಬಂತು. ಗುರುವಾರ ಮುಂಜಾನೆ ಹೊತ್ತಿಗೆ ಕೊಡಗು ಜಿಲ್ಲೆಯ ಗಡಿ ಪ್ರದೇಶದ ಬೆಟ್ಟ ಗುಡ್ಡಗಳು ಮಳೆಯನ್ನು ಭರಿಸಲಾರದೆ ಹೋದವು. ಹಾಗೆ, ನಾವೀಗ ನೋಡುತ್ತಿರುವ ಪ್ರಕೃತಿ ವಿಕೋಪಕ್ಕೆ ಮುನ್ನಡಿಯೊಂದು ಶುರುವಾಯಿತು.

ನಿಧಾನವಾಗಿ ಎಚ್ಚೆತ್ತ ಜಿಲ್ಲಾಡಳಿತ, ನೆರೆ ನೀರು ಸೃಷ್ಟಿಸಿದ ನಡುಗಡ್ಡೆ ಪ್ರದೇಶಗಳಿಂದ ಜನರ ರಕ್ಷಣೆ, ರಾಜ್ಯದ ಎಲ್ಲೆಡೆಯಿಂದ ಹರಿವು ಬರುತ್ತಿರುವ ನೆರವು, ಅಖಾಡಕ್ಕಿಳಿದು ಜೀವರಕ್ಷಣೆ ಹಾಗೂ ಪುನರ್‌ವಸತಿ ಕಾರ್ಯದಲ್ಲಿ ತೊಡಗಿರುವ ಸ್ವಯಂ ಸೇವಕರು, ಸ್ಥಳೀಯರು ಯಾವ ನೆರವುಗಳಿಲ್ಲದೆ ಸ್ವಯಂ ಪ್ರೇರಣೆಯಿಂದ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಗಳು ಕೊಡಗು ಪ್ರಕೃತಿ ವಿಕೋಪದ ಒಂದು ಮುಖ.

ಇನ್ನೊಂದು ಆಯಾಮದಲ್ಲಿ, ಸೆಲೆಬ್ರಿಟಿಗಳನ್ನು ಬೀದಿಗಳಿಸಿದ ಟಿವಿ ವಾಹಿನಿಗಳು, ಕೆಲವು ಪ್ರದೇಶಗಳಿಗೆ ಇನ್ನೂ ತಲುಪದ ನೆರವು, ಸಹಾಯ ನೀಡುವುದರಲ್ಲೂ ಅಡ್ಡ ಬಂದ ಧರ್ಮ, ಜನರಿಗೆ ಬಿಸ್ಕೇಟ್ ಪ್ಯಾಕ್‌ ಎಸೆದು ಕೆಂಗಣ್ಣಿಗೆ ಗುರಿಯಾದ ರಾಜಕಾರಣಿಗಳು, ಇನ್ನೂ ಪ್ರಕೃತಿ ವಿಕೋಪದ ಅಂದಾಜು ಮಾಡದ ಜಿಲ್ಲಾಡಳಿತ, ಸ್ಪಷ್ಟ ಚಿತ್ರಣ ನೀಡುವಲ್ಲಿ ವಿಫಲವಾದ ಸರಕಾರ ಹಾಗೂ ಕೇಂದ್ರಿಕೃತ ನಿರ್ವಹಣೆ ವ್ಯವಸ್ಥೆ ಇಲ್ಲದ ಸ್ಥಿತಿ ಕಾಣಿಸುತ್ತವೆ.

ಈ ಸಮಯದಲ್ಲಿ ಗಮನ ಸೆಳೆಯುತ್ತಿರುವುದು ಕೇರಳ. ಪ್ರಕೃತಿ ವಿಕೋಪದಿಂದ ನಲುಗಿದ ಕೇರಳ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಪ್ರವಾಹವನ್ನು ಎದುರಿಸುತ್ತಿದೆ. ಹಾನಿಗೊಳಗಾದ ಪ್ರದೇಶಗಳದ್ದೊಂದು ಮ್ಯಾಪಿಂಗ್ ನಡೆಸಿದೆ. ನಾಶವಾದ ಆಸ್ತಿ ಪಾಸ್ತಿಗಳ ಅಂದಾಜು ರೂಪಿಸಿದೆ. ಕೇಂದ್ರದಿಂದ 600 ಕೋಟಿ ಪರಿಹಾರ ಹಣ ಸಾಕಾಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ. ಅದೇ ವೇಳೆಗೆ ಸ್ಥಳೀಯ ಜನರ ಮಾನವೀಯ ಸ್ಪಂದನೆಗಳನ್ನು ಅಲ್ಲಿನ ಮಾಧ್ಯಮಗಳು ಆದ್ಯತೆಯ ಮೇಲೆ ಬಿತ್ತರಿಸುತ್ತಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪ್ರಕೃತಿ ವಿಕೋಪವನ್ನು ನಿರ್ವಹಿಸಬೇಕಾದ ‘ಮಾದರಿ’ಯೊಂದನ್ನು ಅದು ಕಟ್ಟಿಕೊಡುತ್ತಿದೆ. ಅದಕ್ಕೆ ಹೋಲಿಸಿದರೆ, ಕೊಡಗು, ಒಟ್ಟಾರೆ ರಾಜ್ಯ ಅತ್ಯಂತ ಕಳಪೆ ಪ್ರದರ್ಶನ ತೋರಿಸುತ್ತಿದೆ. ಐದು ದಿನಗಳು ಕಳೆದ ನಂತರವೂ, ಮಳೆ ಕೊಂಚ ಕಡಿಮೆಯಾಗಿದ್ದರೂ, ಕೊಡಗು ಎಂಬ ಪುಟ್ಟ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಇನ್ನೂ ನೆರವು ತಲುಪಿಲ್ಲ, ಇನ್ನೂ ಕೆಲವು ಕಡೆ ಸಂಪರ್ಕವೂ ಸಾಧ್ಯವಾಗುತ್ತಿಲ್ಲ.

“ಒಟ್ಟು 41 ನಿರಾಶ್ರಿತರ ಶಿಬಿರಗಳನ್ನು ಮಡಿಕೇರಿ ನಗರದಲ್ಲಿ ತೆರೆಯಲಾಗಿದೆ. ಈವರೆಗೆ 10 ಜನ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಮುಖ್ಯಮಂತ್ರಿ ಭೇಟಿ ನೀಡಿದ ವೇಳೆ ಎರಡು ಕುಟುಂಬಗಳಿಗೆ ತಲಾ ಐದು ಲಕ್ಷ ವಿತರಿಸಲಾಗಿದೆ. ಒಟ್ಟಾರೆ 100 ಜನ ಸಾವನ್ನಪ್ಪಿರಬಹುದು ಎಂಬ ಮಾಹಿತಿ ಇದೆ. ನಾಪತ್ತೆಯಾದವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ,’’ ಎನ್ನುತ್ತವೆ ಕೊಡಗು ಜಿಲ್ಲಾಧಿಕಾರಿ ಕಚೇರಿ ಮೂಲಗಳು.

ನಿರಾಶ್ರಿತರ ಶಿಬಿರಗಳಲ್ಲಿರುವ ಸಂತ್ರಸ್ತರು
ನಿರಾಶ್ರಿತರ ಶಿಬಿರಗಳಲ್ಲಿರುವ ಸಂತ್ರಸ್ತರು

ಇದು ಸದ್ಯದ ಸ್ಥಿತಿ. ಸರಕಾರದ ಬಳಿ ಕೊಡಗಿನ ಪ್ರಕೃತಿ ವಿಕೋಪದ ಬಗೆಗೆ ಇರುವ ಮಾಹಿತಿ ಇಷ್ಟೆ. ಮಡಿಕೇರಿ ನಗರ ಕೇಂದ್ರಿತ ವಿಕೋಪ ನಿರ್ವಹಣೆ ನಡೆಯುತ್ತಿದೆ ಮತ್ತು ಅಲ್ಲಿಯೇ ಹೆಚ್ಚು ಕಡಿಮೆ ಎಲ್ಲಾ ಸೌಲಭ್ಯಗಳು ಕೇಂದ್ರಿಕೃತಗೊಂಡಿವೆ. ಇದರ ಆಚೆಗೆ, ತಲುಪಬೇಕಾದ ಪ್ರದೇಶಗಳಿಗೆ ಅಗತ್ಯ ನೆರವು ಲಭ್ಯವಾಗುತ್ತಿಲ್ಲ.

ಉದಾಹರಣೆಗೆ ಕಾವೇರಿ ನದಿ ತಟದಲ್ಲಿ ಬರುವ ಚೆರಿಯಪರಂಬು ಎಂಬ ಗ್ರಾಮ. ಇಲ್ಲಿ ಮುಸ್ಲಿಂ ಕುಟುಂಬಗಳು ಬದುಕು ಸಾಗಿಸುತ್ತಿದ್ದವು. ಮಳೆ ಬಂದು, ನೆರೆ ಸೃಷ್ಟಿಯಾಗಿ ಇಲ್ಲಿ ನಾಲ್ಕು ದಿನಗಳ ಕಳೆದಿವೆ. ಭಾನುವಾರ ಇಡೀ ದಿನ ಇಲ್ಲಿನ ಜನ ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. “ನಮ್ಮನ್ನು ರಕ್ಷಣೆ ಮಾಡಿ ಎಂದು ಅಲ್ಲಿನ ಜನ ಕೋರುತ್ತಿದ್ದಾರೆ. ಊಟಕ್ಕಿಲ್ಲದೆ ಹಸಿದಿದ್ದಾರೆ. ಆದರೆ ಅಲ್ಲಿಗೆ ಸೌಕರ್ಯ ಕಳಿಸಲು ಕೆಲವು ಸ್ಥಳೀಯರು ಅಡ್ಡಿ ಪಡಿಸಿದ್ದಾರೆ. ಕೊನೆಗೆ ಸೋಮವಾರ ಹನ್ನೊಂದು ಗಂಟೆಗೆ ಒಂದಷ್ಟು ನೆರವು ಹೋಗುವ ಭರವಸೆ ಸಿಕ್ಕಿದೆ,’’ ಎನ್ನುತ್ತಾರೆ ಸ್ಥಳೀಯರಾದ ಕಾವೇರಿ. ಕೊಡಗು ಜಿಲ್ಲಾ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷೆಯಾಗಿದ್ದ ಕಾವೇರಿ ಜಿಲ್ಲೆಯ ಇಂತಹ ಪ್ರದೇಶಗಳಿಗೆ ನೆರವು ಕಳುಹಿಸುವ ಕೆಲಸ ಮಾಡುತ್ತಿದ್ದಾರೆ.

ಇಂತಹ ಕೆಲವು ಅಪಸವ್ಯಗಳ ನಡುವೆಯೂ ಗಮನ ಸೆಳೆಯುತ್ತಿರುವುದು ಹೊರಗಿನ ಕೆಲವು ಸ್ವಯಂ ಸೇವಕರು ಹಾಗೂ ಸ್ಥಳೀಯ ಯುವಕರ ಸಾಹಸದ ಕತೆಗಳು. “ತಂತಿಪಾಲ ಎಂಬ ಹಳ್ಳಿಯ ದೇವಸ್ಥಾನವೊಂದರಲ್ಲಿ 15- 20 ಜನ ಸಿಲುಕಿಕೊಂಡಿದ್ದರು. ಅವರ ಅದೃಷ್ಟಕ್ಕೆ ಒಬ್ಬರ ಮೊಬೈಲ್ ಕೆಲಸ ಮಾಡುತ್ತಿತ್ತು. ಅಲ್ಲಿಗೆ ನೆರವು ಕಳುಹಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗಲಿಲ್ಲ. ಆದರೆ ಮಾಧ್ಯಮದವರು ಹಾಗೂ ಸ್ಥಳೀಯ ಯುವಕರು ಸ್ವಯಂ ಪ್ರೇರಣೆಯಿಂದ ಇಲ್ಲಿನ ಜನರನ್ನು ರಕ್ಷಣೆ ಮಾಡಿದರು. ಅದರಲ್ಲಿ 2 ತಿಂಗಳ ಮಗೂ ಕೂಡ ಸೇರಿತ್ತು,’’ ಎನ್ನುತ್ತಾರೆ ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡುವವರೊಬ್ಬರು.

ಇಂತಹ ಹತ್ತು ಹಲವು ಪ್ರೇರಣೆ ನೀಡುವಂತಹ ವರದಿಗಳೂ ಇಲ್ಲಿ ಸಿಗುತ್ತಿವೆ. ಹಾಗೆ ನೋಡಿದರೆ, ಜಿಲ್ಲಾಡಳಿತ, ಸರಕಾರ ನಡೆಸುತ್ತಿರುವ ಕಾರ್ಯಾಚರಣೆಗಳಿಗೆ ಸರಿಸಾಟಿಯಾಗಿ ಸ್ಥಳೀಯರು ಹಾಗೂ ಹೊರಗಿನ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನಗಳಾದರೂ, ಇವರನ್ನೆಲ್ಲಾ ಒಂದು ಸೂರಿನಡಿ ತರಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಎಷ್ಟು ಹಾನಿಯಾಗಿದೆ? ಎಲ್ಲಿಗೆ ಎಷ್ಟು ನೆರವು ಕಳುಹಿಸಬೇಕಿದೆ? ಎಂಬುದರ ನೀಲನಕ್ಷೆಯೊಂದನ್ನು ತಯಾರಿಸಲು ಸಾಧ್ಯವಾಗಿಲ್ಲ. ಸದ್ಯ ಕೊಡಗಿನಲ್ಲಿ ಏನು ನಡೆಯುತ್ತಿದೆಯೋ, ಅವೆಲ್ಲವೂ ಅವರವರ ಸ್ವ ಇಚ್ಚಾಶಕ್ತಿಯ ಫಲ ಅಷ್ಟೆ.

ಆಗಬೇಕಿರುವುದೇನು?:

ಈ ಸಮಯದಲ್ಲಿ ಸಮಸ್ಯೆಗಳನ್ನಷ್ಟೆ ಮುಂದಿಟ್ಟುಕೊಂಡರೆ ಉಪಯೋಗವೂ ಇಲ್ಲ. ಬದಲಿಗೆ ಮುಂದೆ ಆಗಬೇಕಿರುವುದು ಏನು ಎಂಬುದನ್ನು ಆಲೋಚನೆ ಮಾಡಬೇಕಿದೆ. ಪ್ರಕೃತಿ ವಿಕೋಪವೊಂದು ನಡೆದಾಗ ಸರಕಾರ ಹಾಗೂ ಜನ ಏನು ಮಾಡಬೇಕು ಎಂಬುದಕ್ಕೆ ರಾಷ್ಟ್ರೀಯ ವಿಕೋಪ ನಿರ್ವಹಣಾ ಕೇಂದ್ರವೇ ಮಾರ್ಗದರ್ಶಿ ಸೂತ್ರಗಳನ್ನು ತಂದಿದೆ. ಅದನ್ನು ಆದಷ್ಟು ಬೇಗ ಕೊಡಗು ಜಿಲ್ಲಾಡಳಿತ ಅನಿಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ. ತುರ್ತಾಗಿ;

1. ಜಿಲ್ಲೆಯಲ್ಲಿ ನಡೆದ ಹಾನಿಯನ್ನು ಪ್ರದೇಶವಾರು ಅಂದಾಜು ಮಾಡಬೇಕಿದೆ. ಎಲ್ಲಿಗೆ ಎಷ್ಟು, ಯಾವ ಮಾದರಿಯ ನೆರವು ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಬೇಕಿದೆ.

2. ಲಭ್ಯ ಇರುವ ಸ್ವಯಂ ಸೇವಕರು ಹಾಗೂ ಮಾನವ ಸಂಪನ್ಮೂಲವನ್ನು ಕೇಂದ್ರಿಕೃತ ವ್ಯವಸ್ಥೆ ಅಡಿಯಲ್ಲಿ ತರುವ ಮೂಲಕ, ಇರುವ ಸಂಪನ್ಮೂಲವನ್ನು ಆದ್ಯತೆಯ ಮೇರೆಗೆ ವಿಭಾಗಿಸಬೇಕಿದೆ.

3. ಮಡಿಕೇರಿ ನಗರಕ್ಕೆ ಸೀಮಿತಗೊಂಡಿರುವ ಗಂಜೀಕೇಂದ್ರಗಳನ್ನು ಜಿಲ್ಲೆಯ ಇತರೆ ಭಾಗಗಳಿಗೂ ವಿಸ್ತರಿಸಬೇಕಿದೆ.

4. ಪ್ರತಿ ದಿನ, ಅಗತ್ಯ ವಸ್ತುಗಳ ಮಾಹಿತಿ, ಹರಿದು ಬರುತ್ತಿರುವ ನೆರವು ಹೇಗಿರಬೇಕು ಎಂಬುದರ ಕುರಿತು ಮಾಹಿತಿ ನೀಡಬೇಕಿದೆ.

5. ಇವುಗಳ ಜತೆಗೆ, ರಾಜ್ಯ ಸರಕಾರ ಕೂಡಲೇ ಕೊಡಗಿನ ಪ್ರಾಕೃತಿಕ ವಿಕೋಪದಿಂದ ಆಗಿರುವ ಅಂದಾಜು ಹಾನಿಯನ್ನು ಪ್ರಕಟಿಸಬೇಕಿದೆ. ಕೇಂದ್ರ ಸರಕಾರದಿಂದ ಎಷ್ಟು ನೆರವು ಅಗತ್ಯ ಇದೆ ಎಂಬುದನ್ನು ತಿಳಿಸಬೇಕಿದೆ. ಅದರ ಆಧಾರದ ಮೇಲೆ, ಕೇಂದ್ರದ ಮೇಲೆ ಒತ್ತಡ ತರುವ ಕೆಲಸವನ್ನು ಜನ ಶುರುಮಾಡಬಹುದಾಗಿದೆ.

ಕನಿಷ್ಠ ಈ ಐದು ಅಂಶಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವ ಮೂಲಕ ಕೊಡಗು ಜಿಲ್ಲೆಯ ಪ್ರಾಕೃತಿಕ ಹಾನಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕಾದದ್ದು ಸದ್ಯದ ಅಗತ್ಯ.