ಕೊಡಗಿನ ಮಳೆ- ಭೂ ಕುಸಿತ; ತಜ್ಞರು ಏನಂತಾರೆ? 
COVER STORY

ಕೊಡಗಿನ ಮಳೆ- ಭೂ ಕುಸಿತ; ತಜ್ಞರು ಏನಂತಾರೆ? 

ವಸತಿಗೆ ಯೋಗ್ಯವಲ್ಲದ ಜಾಗದಲ್ಲಿ ಬೀಡು ಬಿಟ್ಟಿರುವ ಮನುಷ್ಯ ಪ್ರಾಕೃತಿಕ ಪ್ರಕ್ರಿಯೆಯಾದ ಭೂ ಕುಸಿತಕ್ಕೆ ತಾನೂ ಕಾರಣ ಎಂಬುದನ್ನು ಮರೆಯುತ್ತಿದ್ದಾನೆ.

ಕೊಡಗಿನಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರ ಜತೆಗೆ ಹಲವು ಕಡೆಗಳಲ್ಲಿ ಗುಡ್ಡ ಕುಸಿತ, ಭೂ ಕುಸಿತದಿಂದಲೂ ಅಪಾರ ಪ್ರಮಾಣದ ಹಾನಿಯಾಗಿದೆ. ಇಂಥ ಭೂ ಕುಸಿತಕ್ಕೆ ಪ್ರಾಕೃತಿಕ ಕಾರಣದಷ್ಟೇ ಮಾನವ ಚಟುವಟಿಕೆಗಳೂ ಕಾರಣ. ಅರಣ್ಯ ನಾಶ, ಅವೈಜ್ಞಾನಿಕವಾಗಿ ಗುಡ್ಡ ಕಡಿದು ರಸ್ತೆ ನಿರ್ಮಾಣ, ರಸ್ತೆ ವಿಸ್ತರಣೆ, ಮನೆಗಳ ನಿರ್ಮಾಣ, ಗುಡ್ಡಗಳನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿರುವುದು ಇತ್ತೀಚೆಗೆ ಕೊಡಗಿನಲ್ಲಿ ಭೂ ಕುಸಿತ ಹೆಚ್ಚುವಂತೆ ಮಾಡಿದೆ.

ಕೊಡಗಿನಲ್ಲಿ ವಾರ್ಷಿಕ ಸರಾಸರಿ 6000 ಮಿ.ಮೀ. ಮಳೆಯಾಗುತ್ತದೆ. ಜೂನ್‌- ಜುಲೈ ತಿಂಗಳ ಮಳೆ ಕೊಡಗಿನ ತಲಕಾವೇರಿ ಹಾಗೂ ಭಾಗಮಂಡಲ ಭಾಗಗಳಲ್ಲಿ ಪ್ರವಾಹ ಸೃಷ್ಟಿಸುವುದು ಮಾಮೂಲಿ. ಕೊಡಗು ಜಿಲ್ಲೆ ನೈರುತ್ಯ ಮುಂಗಾರಿನಲ್ಲಿ ಗರಿಷ್ಠ ಪ್ರಮಾಣದ ಮಳೆ ಪಡೆಯುತ್ತದೆ. ಆದರೆ, ಭಾರೀ ಮಳೆಯಾದಾಗಲೆಲ್ಲಾ ಹಿಂದೆ ಈ ಪ್ರಮಾಣದ ಗುಡ್ಡ ಕುಸಿತ ಸಂಭವಿಸಿರಲಿಲ್ಲ. ಈ ಬಾರಿ ಮಳೆ ಸೃಷ್ಟಿಸಿದ ಅವಾಂತರಗಳಲ್ಲಿ ಭೂ ಕುಸಿತವೂ ಪ್ರಮುಖವಾಗಿದೆ.

ಅಂದ ಹಾಗೆ ಕೊಡಗಿನಲ್ಲಿ ಈ ರೀತಿಯ ಭೂ ಕುಸಿತ ಉಂಟಾಗಿರುವುದು ಇದೇ ಮೊದಲೇನಲ್ಲ. ಆದರೆ, ಈ ಬಾರಿಯ ಭೂ ಕುಸಿತ ಹೆಚ್ಚು ಸದ್ದು, ಸುದ್ದಿ ಮಾಡಿದೆ. ಭೂ ಕುಸಿತದ ವಿಡಿಯೊಗಳು, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಜನರಲ್ಲಿ ಭೀತಿ ಹುಟ್ಟಿಸಿವೆ. ಮಣ್ಣು ಕುಸಿದು ಇಡೀ ಮನೆ ಜಾರಿದ, ಗುಡ್ಡದ ಹಿಂದೆ ಗುಡ್ಡ ಕುಸಿದು ಬಿದ್ದ ವಿಡಿಯೊಗಳನ್ನು ನೋಡಿದ ಬಳಿಕ ಭೂ ಕುಸಿತದ ರೌದ್ರತೆ ಏನು ಎಂಬುದು ಗೊತ್ತಾಗುತ್ತಿದೆ. ಹಿಂದೆ ಹಲವು ಬಾರಿ ಭೂ ಕುಸಿತ ಸಂಭವಿಸಿದ್ದರೂ ಈ ಮಟ್ಟಿಗಿನ ಅನಾಹುತದ ಚಿತ್ರಣ ಸಿಕ್ಕಿರಲಿಲ್ಲ.

ಕೊಡಗು ಜಿಲ್ಲೆಯ ಮಣ್ಣು ಹೆಚ್ಚಾಗಿ ಪದರ ಶಿಲೆ ಹಾಗೂ ಬಂಡೆಗಳನ್ನು ಹೊಂದಿರುವ ಕೆಂಪು ಮಣ್ಣು. ಕೆಲವು ಭಾಗಗಳಲ್ಲಿ ಮಣ್ಣಿನ ಸಾಂದ್ರತೆಯೇ ಹೆಚ್ಚಾಗಿರುವ ಗುಡ್ಡಗಳಿವೆ. ಹೆಚ್ಚು ಮಳೆ ಸುರಿದ ಸಂದರ್ಭಗಳಲ್ಲಿ ಇಂಥ ಗುಡ್ಡಗಳು ಕುಸಿಯುವ ಅಪಾಯ ಹೆಚ್ಚಾಗಿರುತ್ತದೆ. ಇಂಥ ಪ್ರದೇಶ ಜನವಸತಿ ಹಾಗೂ ಮಾನವ ಚಟುವಟಿಕೆಗಳಿಗೆ ಯೋಗ್ಯವಲ್ಲ ಎಂಬುದು ತಜ್ಞರ ಅಭಿಮತ.

“ಕೊಡಗು ಜಿಲ್ಲೆಯ ಭೂ ಕುಸಿತಕ್ಕೆ ಭಾರೀ ಮಳೆ ಸುರಿದಿರುವುದರ ಜತೆಗೆ ಮಾನವ ಚಟುವಟಿಕೆಗಳೂ ಕಾರಣ. ಕೊಡಗಿನ ಗುಡ್ಡ ಪ್ರದೇಶದ ರಸ್ತೆಗಳ ವಿಸ್ತರಣೆಯಲ್ಲಿ ವೈಜ್ಞಾನಿಕ ವಿಧಾನ ಅನುಸರಿಸದೇ ಇರುವುದು ರಸ್ತೆಗಳ ಮೇಲೆ ಗುಡ್ಡ ಕುಸಿತಕ್ಕೆ ಕಾರಣ. ಇದರ ಜತೆಗೆ ಗುಡ್ಡ ಕಡಿದು ಮನೆಗಳನ್ನು ಕಟ್ಟುವುದು ಹೆಚ್ಚಾಗಿದೆ. ಮರಗಳ ಹನನ ಹೆಚ್ಚಾಗಿರುವುದು ಹಾಗೂ ಕೃಷಿಗಾಗಿ ಗುಡ್ಡ ಕಡಿದಿರುವುದು ಭೂ ಕುಸಿತಕ್ಕೆ ಪ್ರಮುಖ ಕಾರಣ” ಎನ್ನುತ್ತಾರೆ ಕೊಡಗಿನ ಭೂ ಕುಸಿತದ ಬಗ್ಗೆ ಅಧ್ಯಯನ ನಡೆಸಿರುವ ಮೈಸೂರು ಮಹಾರಾಜ ಕಾಲೇಜಿನ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಆರ್‌. ಜನಾರ್ಧನ.

ಕೊಡಗು ಮಳೆ ತಂದ ಭೂಕುಸಿದ ಒಂದು ಚಿತ್ರ. 
ಕೊಡಗು ಮಳೆ ತಂದ ಭೂಕುಸಿದ ಒಂದು ಚಿತ್ರ. 

ಅವರ ಪ್ರಕಾರ ಕೊಡಗಿನ ಭೂ ಕುಸಿತಕ್ಕೆ ಪ್ರಾಕೃತಿಕ ಕಾರಣದಷ್ಟೇ ಮಾನವನೂ ಕಾರಣ. ಕಲ್ಲು ಮಿಶ್ರಿತ ಕೆಂಪು ಮಣ್ಣು ಹೆಚ್ಚಾಗಿರುವ ಕೊಡಗಿನ ಹಲವು ಕಡೆಗಳಲ್ಲಿ ಇಂಥ ಭೂ ಕುಸಿತ ಸಾಮಾನ್ಯ. ಮರಗಳ ಸಂಖ್ಯೆ ಕಡಿಮೆಯಾದಾಗ ಮಳೆ ಹೆಚ್ಚಾದ ಸಂದರ್ಭದಲ್ಲಿ ಗುಡ್ಡದ ಮಣ್ಣು ನೀರನ್ನು ಹೀರಿ ಜಾರುತ್ತದೆ. ಈ ಸಂದರ್ಭದಲ್ಲಿ ಯಾವ ಪ್ರಮಾಣದಲ್ಲಿ ಮಣ್ಣು ಜರುಗುತ್ತದೆ ಎಂಬುದನ್ನು ಊಹಿಸುವುದೂ ಕಷ್ಟ. ಕೆಲವು ಕಡೆ ಗುಡ್ಡ ಒಮ್ಮೆ ಕುಸಿದು ಸುಮ್ಮನಾಗಬಹುದು. ಕೆಲವು ಕಡೆಗಳಲ್ಲಿ ಮಳೆ ಹೆಚ್ಚಾದಷ್ಟೂ ನಿರಂತರವಾಗಿ ಗುಡ್ಡ ಕುಸಿತ ಉಂಟಾಗುತ್ತಲೇ ಇರುತ್ತದೆ.

“ಕೊಡಗಿನ ಹಲವು ಕಡೆ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಪಕ್ಕದಲ್ಲಿನ ಗುಡ್ಡವನ್ನು 90 ಡಿಗ್ರಿಯಷ್ಟು ಕಡಿಯಲಾಗಿದೆ. ಇದರಿಂದ ಮಳೆ ಹೆಚ್ಚಾದ ಸಂದರ್ಭದಲ್ಲಿ ಗುಡ್ಡ ಕುಸಿಯುವ ಅಪಾಯ ಇದ್ದೇ ಇರುತ್ತದೆ. ಕೊಡಗಿನ ಗುಡ್ಡ ಕುಸಿತ ಹಾಗೂ ಭೂ ಕುಸಿತಕ್ಕೆ ಇದೂ ಪ್ರಮುಖ ಕಾರಣ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಕಡಿದಾದ ಗುಡ್ಡ ಕಡಿದಿದ್ದರೆ ಅದಕ್ಕೆ ತಡೆಗೋಡೆ, ಮೆಸ್‌ ಅಳವಡಿಕೆಯಂಥ ಕ್ರಮಗಳನ್ನು ಕಾಮಗಾರಿ ನಡೆಸುವವರು ಕೈಗೊಳ್ಳಬೇಕಿತ್ತು. ಆದರೆ, ಇಲ್ಲಿ ಬಹುತೇಕ ಕಡೆ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ವೈಜ್ಞಾನಿಕ ವಿಧಾನವನ್ನು ಕಡೆಗಣಿಸಲಾಗಿದೆ” ಎನ್ನುತ್ತಾರೆ ಅವರು.

ಆದರೆ, ಸ್ಥಳೀಯರ ಪ್ರಕಾರ ಈ ಬಾರಿ ಗುಡ್ಡ ಕುಸಿತ ಹಾಗೂ ಭೂ ಕುಸಿತಕ್ಕೆ ಪ್ರಮುಖ ಕಾರಣವಾಗಿದ್ದು ಜುಲೈ ತಿಂಗಳಲ್ಲಿ ಆಗಿದ್ದ ಭೂಕಂಪ. ಜುಲೈ ತಿಂಗಳಲ್ಲಿ ಕೊಡಗಿನಲ್ಲಿ ಲಘು ಭೂಕಂಪವಾಗಿತ್ತು. ಭೂಕಂಪದಿಂದ ಸಡಿಲವಾಗಿದ್ದ ಮಣ್ಣಿನ ಮೇಲೆ ಭಾರೀ ಮಳೆ ಸುರಿದಿದ್ದರಿಂದ ಹೆಚ್ಚಿನ ಪ್ರಮಾಣದ ಭೂ ಕುಸಿತ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯರು.

ಕೊಡಗಿನ ಹಲವು ಕಡೆಗಳಲ್ಲಿ ಗುಡ್ಡ ಕಡಿದು ಮನೆ ನಿರ್ಮಿಸಿಕೊಳ್ಳವುದು ಹೊಸತೇನಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ನಿರ್ಮಾಣ ಚಟುವಟಿಕೆ ಹೆಚ್ಚಾಗಿದೆ. ಇಂತಹ ಚಟುವಟಿಕೆಗಳಿಂದ ಗುಡ್ಡದ ಮಣ್ಣು ಜರುಗುವುದು ಹಾಗೂ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಗುಡ್ಡದ ಮೇಲೆ ಬಿದ್ದ ನೀರು ಹರಿದು ಹೋಗಲೂ ತೊಡಕಗುತ್ತದೆ. ಇದೂ ಕೂಡ ಭೂ ಕುಸಿತಕ್ಕೆ ಕಾರಣ. ಕೊಡಗಿನಲ್ಲಿ ಅರಣ್ಯ ನಾಶ ಹಾಗೂ ಗುಡ್ಡ ಕಡಿದು ಕೃಷಿ ಚಟುವಟಿಕೆ ನಡೆಸುವುದು ಕೂಡಾ ಹೆಚ್ಚಿರುವುದರಿಂದ ಮಳೆ ನೀರು ಮಣ್ಣನ್ನು ಕೊಚ್ಚುವುದು ಹಾಗೂ ಮಣ್ಣು ಕುಸಿಯುವುದು ಹೆಚ್ಚಾಗಿದೆ.

ಭೂಮಿಗಿಳಿದ ಮಳೆ ನೀರು ಇಂಗುವ ಮಟ್ಟ ಮೀರಿದ ಮೇಲೆ ಮಣ್ಣಿನ ತೇವದೊಂದಿಗೆ ಜಾರುತ್ತದೆ. ಇದರಿಂದ ಮಣ್ಣು ಸಡಿಲವಾಗಿರುವ ಕಡೆಗಳಲ್ಲಿ ಗುಡ್ಡ ಗುಡ್ಡಗಳೇ ಕುಸಿದು ಬೀಳುತ್ತವೆ. ಇದು ಪ್ರಾಕೃತಿಕ ಪ್ರಕ್ರಿಯೆ. ಇಂಥ ಜಾಗಗಳಲ್ಲಿ ಮನುಷ್ಯ ತನ್ನ ವಸತಿ ನಿರ್ಮಿಸಿಕೊಳ್ಳುವುದು ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ ಚಟುವಟಿಕೆ ನಡೆಸುತ್ತಿರುವುದರಿಂದ ಪ್ರಾಣ ಹಾಗೂ ಆಸ್ತಿ ಹಾನಿಯಾಗುತ್ತಿದೆ. ಇಂಥ ಕಡೆಗಳಲ್ಲಿ ಮಾನವ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರದಿದ್ದರೆ ಇಂಥ ಅನಾಹುತಗಳು ಮುಂದುವರಿಯುತ್ತಲೇ ಇರುತ್ತವೆ.