samachara
www.samachara.com
ಪ್ರಕೃತಿಯೇ ಪಾಠ ಕಲಿಸುತ್ತಿರುವ ಹೊತ್ತಿನಲ್ಲಿ ಆತ್ಮಾವಲೋಕನದ ಅಗತ್ಯ
COVER STORY

ಪ್ರಕೃತಿಯೇ ಪಾಠ ಕಲಿಸುತ್ತಿರುವ ಹೊತ್ತಿನಲ್ಲಿ ಆತ್ಮಾವಲೋಕನದ ಅಗತ್ಯ

ಭೂಮಿಯಲ್ಲಿರುವುದೆಲ್ಲವೂ ತನಗಾಗಿ ಮಾತ್ರ ಎಂಬ ಮನುಷ್ಯನ ಅತಿಯಾಸೆ ಪ್ರಾಕೃತಿಕ ಸಮತೋಲನವನ್ನು ಹಾಳುಗೆಡವಿದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಪ್ರಕೃತಿಯೂ ಪೆಟ್ಟುಗಳನ್ನು ಕೊಡುತ್ತಲೇ ಇದೆ.

ದಯಾನಂದ

ದಯಾನಂದ

ಕೇರಳದಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದೆ. ಕೊಡಗಿನಲ್ಲಿ ಮಳೆ ಇನ್ನೂ ಅವಾಂತರಗಳನ್ನು ಸೃಷ್ಟಿಸುತ್ತಲೇ ಇದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಭಾರೀ ಮಳೆಗಳನ್ನು ಕಂಡಿದ್ದ ಕೇರಳ ಹಾಗೂ ಕೊಡಗಿನಲ್ಲಿ ಈ ಬಾರಿ ನಿರೀಕ್ಷೆ ಮೀರಿ ಮಳೆ ಹಾನಿ ಉಂಟುಮಾಡಿದೆ. ಇದಕ್ಕೆ ಮಾನವ ನಿರ್ಮಿತ ದೋಷಗಳೂ ಕಾರಣ ಎಂದಿದ್ದಾರೆ ತಜ್ಞರು. ಆದರೆ, ಈ ದೋಷಗಳು ಮಾತ್ರ ಮುಂದುವರಿಯುತ್ತಲೇ ಇವೆ.

ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತು ಕಸ್ತೂರಿ ರಂಗನ್‌ ಸಮಿತಿ ನೀಡಿರುವ ಶಿಫಾರಸುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರ ಕೇಂದ್ರಕ್ಕೆ ತಿಳಿಸಿದೆ. ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಸಮಿತಿ ಗುರುತಿಸಿರುವ ಸುಮಾರು ಒಂದೂವರೆ ಸಾವಿರ ಗ್ರಾಮಗಳಿಗೆ ಈ ವರದಿ ಮಾರಕವಾಗಿದೆ ಎಂದು ರಾಜ್ಯ ಸರಕಾರ ಹೇಳಿದೆ. ಆದರೆ, ಮನುಷ್ಯನ ಅತಿಯಾಸೆ ಪ್ರಕೃತಿಗೆ ಮಾರಕವಾಗಿ ಕೊನೆಗೆ ಮನುಷ್ಯನ ಮೂಲಕ್ಕೇ ಎರವಾಗುವ ಉದಾಹರಣೆ ಕಣ್ಣಮುಂದಿದೆ.

ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ವರದಿಗಳನ್ನು ರಾಜ್ಯ ಸರಕಾರಗಳು ವಿರೋಧಿಸುತ್ತಿರುವುದು ಇದೇ ಮೊದಲೇನಲ್ಲ. 2011ರಲ್ಲಿ ಪ್ರೊ. ಮಾಧವ್‌ ಗಾಡ್ಗೀಳ್‌ ಸಮಿತಿಯ ವರದಿಗೂ ಕೇರಳ ಹಾಗೂ ಕರ್ನಾಟಕ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದವು. ಕೇರಳದಲ್ಲಂತೂ ಗಾಡ್ಗೀಳ್‌ ವರದಿ ಜೀವ ವಿರೋಧಿ ಎಂಬಂತೆ ಬಿಂಬಿಸಲಾಗಿತ್ತು. ಗಾಡ್ಗೀಳ್‌ ವರದಿಗೆ ತೀವ್ರ ವಿರೋಧ ಕೇಳಿಬಂದ ಬಳಿಕ ಕೇಂದ್ರ ಸರಕಾರ ಕಸ್ತೂರಿ ರಂಗನ್‌ ಸಮಿತಿ ನೇಮಿಸಿತು.

ಹೆಚ್ಚೂ ಕಡಿಮೆ ಗಾಡ್ಗೀಳ್‌ ಸಮಿತಿ ನೀಡಿದಂಥ ಶಿಫಾರಸುಗಳನ್ನೇ ಕಸ್ತೂರಿ ರಂಗನ್‌ ವರದಿಯೂ ನೀಡಿತ್ತು. ಸೂಕ್ಷ್ಮ ಪರಿಸರ ವಲಯದಿಂದ ಅಭಿವೃದ್ಧಿ ಚಟುವಟಿಕೆಗಳ ಅಂತರ ಕಡಿತ, 20 ಸಾವಿರ ಚದರ ಮೀಟರ್‌ ಒಳಗಿನ ನಿರ್ಮಾಣ ಕಾಮಗಾರಿಗಳಿಗೆ ಸಮ್ಮತಿ, ಗಣಿ ಚಟುವಟಿಕೆಗಳನ್ನು ನಿಲ್ಲಿಸಲು 5 ವರ್ಷಗಳ ಕಾಲಾವಧಿಯಂಥ ಅಂಶಗಳನ್ನು ಬಿಟ್ಟರೆ ಕಸ್ತೂರಿ ರಂಗನ್‌ ವರದಿ ನೀಡಿದ್ದ ಶಿಫಾರಸುಗಳು ಕೂಡಾ ಗಾಡ್ಗೀಳ್‌ ವರದಿಯ ಶಿಫಾರಸಿನಂತೆಯೇ ಇದ್ದವು. ಆದರೆ, ವಿರೋಧಿಸುವವರಿಗೆ ಗಾಡ್ಗೀಳ್‌ ವರದಿಯೂ ಒಂದೇ, ಕಸ್ತೂರಿ ರಂಗನ್‌ ವರದಿಯೂ ಒಂದೇ ಎನ್ನುವಂತಾಯಿತು.

ಕೇರಳದಿಂದ ಗುಜರಾತ್‌ವರೆಗೆ ಆರು ರಾಜ್ಯಗಳಲ್ಲಿ ಹಬ್ಬಿರುವ 1,64,280 ಚದರ ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟವನ್ನು ಯುನೆಸ್ಕೊ ‘ವಿಶ್ವ ನೈಸರ್ಗಿಕ ಪಾರಂಪರಿಕ ತಾಣ’ ಎಂದು ಘೋಷಿಸಿದೆ. ಮಧ್ಯ ಹಾಗೂ ದಕ್ಷಿಣ ಭಾರತದ ಹಲವು ಪ್ರಮುಖ ನದಿಗಳ ಉಗಮ ಸ್ಥಾನ ಪಶ್ಚಿಮ ಘಟ್ಟ ಪ್ರದೇಶ. ಮಾಧವ್‌ ಗಾಡ್ಗೀಳ್‌ ಸಮಿತಿಯು 1,64,280 ಚದರ ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟ ಪ್ರದೇಶದ ಪೈಕಿ 1,29,037 ಚದರ ಕಿ.ಮೀ. ಪ್ರದೇಶವನ್ನು ಅತಿಸೂಕ್ಷ ಪರಿಸರ ವಲಯ ಎಂದು ಗುರುತಿಸಿತ್ತು.

ಆದರೆ, ಕಸ್ತೂರಿ ರಂಗನ್‌ ವರದಿ ಈ ಅತಿಸೂಕ್ಷ ಪರಿಸರ ವಲಯವನ್ನು ತಗ್ಗಿಸಿತ್ತು. ಗಾಡ್ಗೀಳ್‌ ವರದಿಯಲ್ಲಿ 1,29,037 ಚದರ ಕಿ.ಮೀ. ಇದ್ದ ಅತಿಸೂಕ್ಷ್ಮ ಪರಿಸರ ವಲಯವನ್ನು ಕಸ್ತೂರಿ ರಂಗನ್‌ ವರದಿ 59,940 ಚದರ ಕಿ.ಮೀ.ಗೆ ಇಳಿಸಿತ್ತು. ಈ ಪ್ರದೇಶದಲ್ಲಿ ದೊಡ್ಡ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬಾರದು, ಮರಳು ಸೇರಿದಂತೆ ಯಾವುದೇ ರೀತಿಯ ಗಣಿಗಾರಿಕೆ ನಡೆಯಬಾರದು, ಈ ವಲಯದ ವ್ಯಾಪ್ತಿಯಲ್ಲಿ ಮಾನವ ಚಟುವಟಿಕೆಗಳ ಮೇಲೆ ನಿರ್ಬಂಧ ವಿಧಿಸಬೇಕು ಎಂದು ವರದಿ ಹೇಳಿತ್ತು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆದಿವಾಸಿಗಳು ಹಾಗೂ ಆದಿವಾಸಿಗಳಲ್ಲದವರ ಜನವಸತಿ ಹೇರಳವಾಗಿದೆ. ಕರ್ನಾಟಕ ಹಾಗೂ ಕೇರಳ ವ್ಯಾಪ್ತಿಯಲ್ಲಿ ಸಾವಿರಾರು ಗ್ರಾಮಗಳು ಪಶ್ಚಿಮ ಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿವೆ. ಒಂದು ವೇಳೆ ವರದಿಯನ್ನು ಅಂಗೀಕರಿಸಿದರೆ ಈ ಗ್ರಾಮಗಳ ಜನರಿಗೆ ತೊಂದರೆಯಾಗುತ್ತದೆ ಎಂಬುದು ರಾಜ್ಯ ಸರಕಾರಗಳ ವಾದ. ಆದರೆ, ವರದಿಯನ್ನು ನಿರ್ಲಕ್ಷ್ಯಿಸಿದರೆ ಮುಂದೆ ಈ ಬಾರಿ ಆದ ಅವಾಂತರಕ್ಕಿಂತ ದೊಡ್ಡ ಅನಾಹುತವೇ ಸಂಭವಿಸಬಹುದು.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಸತಿ ಹೊಂದಿರುವ ಜನರು ಬಯಸಿದರೆ ಪುನರ್ವಸತಿ ಕಲ್ಪಿಸಬಹುದು, ಇಲ್ಲವಾದರೆ ವಸತಿ ಪ್ರದೇಶದ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎನ್ನುತ್ತವೆ ತಜ್ಞರ ಶಿಫಾರಸುಗಳು. ಜತೆಗೆ ರಸ್ತೆ, ವಿದ್ಯುತ್‌ ಸೇರಿದಂತೆ ಈ ಜನರಿಗೆ ಮೂಲಸೌಕರ್ಯ ಒದಗಿಸುವುದಕ್ಕೂ ಈ ಶಿಫಾರಸುಗಳು ಅಡ್ಡಿಯಾಗುತ್ತವೆ. ಆದರೆ, ಕಾಡಿನ ಜತೆಗೆ ಜೀವನ ಕಟ್ಟಿಕೊಂಡಿರುವ ಜನರ ಜೀವನಕ್ಕೂ ತೊಂದರೆಯಾಗದಂತೆ ಹಾಗೂ ಜೀವ ವೈವಿಧ್ಯಕ್ಕೂ ಹಾನಿಯಾಗದಂತೆ ವರದಿಯನ್ನು ಜಾರಿಗೊಳಿಸುವುದು ಕಷ್ಟವಿದೆ.

Also read: ಮಹಾಮಳೆಯ ವೈರುಧ್ಯ: ಅಲ್ಲಿ ನೆರೆ, ಇಲ್ಲಿ ಬರ; ಮುಂದುವರಿದ ಮಾನ್ಸೂನ್‌ ಜೂಜಾಟ

ಪಶ್ಚಿಮ ಘಟ್ಟ ಪ್ರದೇಶದ ಅಂಚಿನ ಸಾವಿರಾರು ಎಕರೆ ಭೂಮಿಯನ್ನು ಸರಕಾರವೇ ಕೃಷಿ ಭೂಮಿಯನ್ನಾಗಿ ಪರಿವರ್ತನೆ ಮಾಡಿಕೊಟ್ಟಿದೆ. ಪ್ರವಾಸೋದ್ಯಮದ ಹೆಸರಲ್ಲಿ ಅರಣ್ಯ ಪ್ರದೇಶದಲ್ಲಿ ಎಗ್ಗಿಲದೆ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇವೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಕೇರಳದಲ್ಲಂತೂ ಗುಡ್ಡಗಳ ಮೇಲೆ ರೆಸಾರ್ಟ್‌ ನಿರ್ಮಿಸುವುದು ಶೋಕಿಯಾಗಿದೆ. ಕೇರಳದ ಮುನ್ನಾರ್‌, ವಯನಾಡ್‌ ಭಾಗದಲ್ಲಿ ಇಂಥ ನೂರಾರು ಗುಡ್ಡದ ದೊಡ್ಡ ದೊಡ್ಡ ರೆಸಾರ್ಟ್‌ಗಳು ಕಾಣುತ್ತವೆ.

ಒಂದು ಕಡೆ ಪ್ರಕೃತಿ ಮುನಿಸಿಕೊಂಡಿದೆ ಎಂದು ಹೇಳುತ್ತಿರುವಾಗಲೇ ಪ್ರಕೃತಿ ಮುನಿಯುವ ಜಾಗದಲ್ಲೇ ಜನವಸತಿ ಹೆಚ್ಚಾಗಿದೆ ಎಂಬುದನ್ನೂ ನೋಡಬೇಕಾಗುತ್ತದೆ. ಆದಿವಾಸಿಗಳು ಹಾಗೂ ಸಣ್ಣ ಪ್ರಮಾಣದ ಜನವಸತಿ ಗ್ರಾಮಗಳು ಅರಣ್ಯದಲ್ಲಿ ದೊಡ್ಡ ನಿರ್ಮಾಣ ಕಾಮಗಾರಿಗಳನ್ನು ನಡೆಸದಂತೆ ಜೀವನ ಸಾಗಿಸುತ್ತಿದ್ದ ದಿನಗಳೂ ಇದ್ದವು. ಆದರೆ, ಮಾನವ ಅತಿಯಾಸೆ ಈಗ ಕಾಡನ್ನೂ ಬಿಟ್ಟಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ ನಡೆದಿದೆ. ಗುಡ್ಡಗಳ ತಲೆ ಕಡಿಯಲಾಗಿದೆ. ತೊರೆ, ಹಳ್ಳಗಳ ಹರಿವಿಗೆ ಅಡ್ಡಗಾಲು ಹಾಕಲಾಗಿದೆ. ಆದರೆ, ಪ್ರಕೃತಿಗೆ ಮಾನವ ನಿರ್ಮಿತ ಅಡೆತಡೆಗಳನ್ನು ನಿವಾರಿಸಿಕೊಳ್ಳುವುದು ಗೊತ್ತಿದೆ.

ತಜ್ಞರ ವರದಿಗಳು ಏನೇ ಇರಲಿ. ಅವನ್ನು ಸಾರಾಸಗಟಾಗಿ ನಿರಾಕರಿಸುವ ಬದಲು ಇಲ್ಲಿ ಈಗಾಗಲೇ ಜೀವನ ಕಟ್ಟಿಕೊಂಡಿರು ಜನರ ಬದುಕಿಗೂ ತೊಂದರೆಯಾಗದಂತೆ, ಸೂಕ್ಷ್ಮ ಜೀವವೈವಿಧ್ಯವೂ ಹಾಳಾಗದಂತೆ ಮಧ್ಯಮ ಮಾರ್ಗ ಕಂಡುಕೊಳ್ಳಲು ಸರಕಾರಗಳು ಮುಂದಾಗಬೇಕಿದೆ. ಅದು ಬಿಟ್ಟು ಸಾವಿರಾರು ಗ್ರಾಮಗಳಿಗೆ ವರದಿ ಮಾರಕ ಎಂಬ ಕಾರಣ ನೀಡಿ ವರದಿಯನ್ನೇ ವಿರೋಧಿಸುವುದು ಸರಕಾರದ ತಪ್ಪು ನಡೆಯಂತೆ ಕಾಣುತ್ತದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೈಜವಾಗಿ ಇರುವ ಗ್ರಾಮಗಳ ಸಂಖ್ಯೆ ಎಷ್ಟು, ಎಷ್ಟು ಮಂದಿ ಅಲ್ಲಿ ವಾಸವಿದ್ದಾರೆ, ಎಷ್ಟು ಕೃಷಿ ಭೂಮಿ ಇದೆ, ಈ ಪೈಕಿ ಎಷ್ಟು ಜನ ಪುನರ್ವಸತಿಗೆ ಒಪ್ಪುವವರಿದ್ದಾರೆ ಎಂದು ಹೊಸದಾಗಿ ಸಮೀಕ್ಷೆ ನಡೆಸುವ ಕೆಲಸಕ್ಕೆ ಸರಕಾರ ಮುಂದಾಗಬೇಕಿದೆ. ಇಡೀ ವರದಿಯನ್ನೇ ತಿರಸ್ಕರಿಸುವ ಬದಲು ವರದಿಯ ಶಿಫಾರಸುಗಳನ್ನು ಸ್ಥಳೀಯರಿಗೆ ತೊಂದರೆಯಾಗದ ರೀತಿಯಲ್ಲಿ ಯಾವ ರೀತಿ ಮಾರ್ಪಡಿಸಿಕೊಳ್ಳಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸುವ ಕೆಲಸಕ್ಕೆ ರಾಜ್ಯ ಸರಕಾರಗಳು ಮುಂದಾಗಬೇಕಿದೆ.

ಪ್ರಕೃತಿಯಲ್ಲಿರುವುದೆಲ್ಲವೂ ಮಾನವನ ಬಳಕೆಗಾಗಿಯೇ ಎಂಬ ಆರಂಭಿಕ ಅರ್ಥಶಾಸ್ತ್ರದ ಸಿದ್ಧಾಂತಗಳನ್ನು ಬದಿಗಿಟ್ಟು, ಪ್ರಕೃತಿಯ ಜೀವವೈವಿಧ್ಯ ರಕ್ಷಣೆಗೂ ಮನುಷ್ಯ ಮನಸ್ಸು ಮಾಡಬೇಕಿದೆ. ಮನುಷ್ಯನಿಗಿರುವಂತಯೇ ಭೂಮಿಯ ಮೇಲಿರುವ ಸಕಲ ಜೀವಜಂತುಗಳಿಗೂ ಬದುಕುವ ಹಕ್ಕಿದೆ, ಹರಿಯುವ ನದಿ ತೊರೆಗಳಿಗೂ ತಮ್ಮದೇ ಆದ ಅಸ್ಥಿತ್ವವಿದೆ, ಬೆಳೆಯುವ ಗಿಡ, ಅರಳುವ ಹೂಗಳಿಗೂ ಅವುಗಳದ್ದೇ ಆದ ಬದುಕಿನ ಸೊಬಗಿದೆ. ಮನುಷ್ಯ ಕೇವಲ ತನಗಾಗಿ ಪ್ರಾಕೃತಿಕ ಸೂಕ್ಷ್ಮಗಳನ್ನೂ ಕದಡುತ್ತಾ ಹೋದರೆ ಪ್ರಕೃತಿಯೇ ಪಾಠ ಕಲಿಸಲು ಮುಂದಾಗುತ್ತದೆ. ಇಂಥ ಪಾಠಗಳನ್ನು ಹಿಂದಿನಿಂದಲೂ ಪ್ರಕೃತಿ ಅನೇಕ ಬಾರಿ ಕಲಿಸಲು ಪ್ರಯತ್ನಿಸುತ್ತಿದ್ದರೂ ಮನುಷ್ಯ ಮಾತ್ರ ಪಾಠ ಕಲಿಯುತ್ತಿಲ್ಲ.