samachara
www.samachara.com
ಕೊಡಗು ವಿಕೋಪ: ನೆರವಿಗೊಂದು ಕೇಂದ್ರೀಕೃತ ವ್ಯವಸ್ಥೆ ಬೇಕಿದೆ
COVER STORY

ಕೊಡಗು ವಿಕೋಪ: ನೆರವಿಗೊಂದು ಕೇಂದ್ರೀಕೃತ ವ್ಯವಸ್ಥೆ ಬೇಕಿದೆ

ಕೊಡಗಿನ ಪಕ್ಕದಲ್ಲೇ ಇರುವ ಕೇರಳ ಸರಕಾರ ತನ್ನ ರಾಜ್ಯದಲ್ಲಿ ಉಂಟಾದ ಪ್ರವಾಹ ವಿಚಾರದಲ್ಲಿ ನಡೆದುಕೊಂಡ ಜಾಣ್ಮೆ ಕರ್ನಾಟಕಕ್ಕೆ ಮಾದರಿಯಾಗಬೇಕಿತ್ತು. ಆರಂಭದಲ್ಲೇ ಹೆಲ್ಪ್‌ ಲೈನ್‌, ಪರಿಹಾರಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಹೊಂದಬೇಕಾಗಿತ್ತು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕೊಡಗಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ವಿಕೋಪದ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ಐದು ಜನರನ್ನು ಬಲಿ ಪಡೆದಿದೆ. ಸಾವಿರಾರು ಜನರನ್ನು ಬೀದಿಯಲ್ಲಿ ತಂದು ನಿಲ್ಲಿಸಿರುವ ಕೊಡಗಿನ ಮಳೆ ಸದ್ಯಕ್ಕೆ ಕಳೆದ 24 ಗಂಟೆಗಳಲ್ಲಿ ಸ್ವಲ್ಪ ಬಿಡುವುಕೊಟ್ಟಿದ್ದು ಪರಿಹಾರ ಕಾರ್ಯಾಚರಣೆ ಚುರುಕು ಪಡೆದುಕೊಂಡಿದೆ. ನಡುಗಡ್ಡೆಯಾಗಿರುವ, ಸಂಪರ್ಕ ಕಳೆದುಕೊಂಡಿರುವ ಗ್ರಾಮೀಣ ಭಾಗಗಳನ್ನು ತಲುಪುವ ಪ್ರಯತ್ನಗಳು ನಿರಂತರ ಜಾರಿಯಲ್ಲಿವೆ. ಆದರೆ ಇಡೀ ವಿಕೋಪ ನಿರ್ವಹಣೆಯಲ್ಲಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ತರುವಲ್ಲಿ ಸರಕಾರ ಎಡವಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಪ್ರವಾಸೋದ್ಯಮ ಸಚಿವ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಕೊಡಗಿನಲ್ಲೇ ಬೀಡು ಬಿಟ್ಟಿದ್ದಾರೆ. ಗುರುವಾರ ಹಾರಂಗಿ ಜಲಾಶಯ ಪ್ರದೇಶಕ್ಕೆ ಮತ್ತು ಜಲಾಶಯದಿಂದ ನೀರು ಬಿಟ್ಟು ಮುಳುಗಡೆಯಾದ ಕುಶಾಲನಗರದ ಕುವೆಂಪು ನಗರ ಮತ್ತು ನಿರಾಶ್ರಿತರ ಕೇಂದ್ರಗಳಿಗೆ ಉಭಯ ಸಚಿವರು ಭೇಟಿ ನೀಡಿ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಂಡಿದ್ದರು. ಇಂದೂ ಕೂಡ ಇಬ್ಬರೂ ಸಚಿವರು ಕೊಡಗಿನ ಪ್ರವಾಹ ಮತ್ತು ಭೂ ಕುಸಿತ ಉಂಟಾದ ಜಾಗಗಳಿಗೆ ಭೇಟಿ ನೀಡಿದರು. ಇದೀಗ ಮಧ್ಯಾಹ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡಗಿನ ವೈಮಾನಿಕ ಸಮೀಕ್ಷೆಯನ್ನು ನಡೆಸಿದ್ದಾರೆ. ಇದಕ್ಕೂ ಮೊದಲು ಅವರು ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ತುರ್ತು ಸಭೆಯನ್ನೂ ನಡೆಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವೈಮಾನಿಕ ಸಮೀಕ್ಷೆ

ಬಿರುಸುಗೊಂಡ ರಕ್ಷಣಾ ಕಾರ್ಯಾಚರಣೆ

ಕಳೆದ 24 ಗಂಟೆಗಳಲ್ಲಿ ಮಡಿಕೇರಿಯಲ್ಲಿ 6 ಸೆಂ.ಮೀ, ಸೋಮವಾರ ಪೇಟೆಯಲ್ಲಿ 3.1 ಮತ್ತು ವಿರಾಜಪೇಟೆಯಲ್ಲಿ 2.8 ಸೆಂ.ಮೀ. ಮಳೆಯಾಗಿದ್ದು ವರ್ಷಧಾರೆ ಸ್ವಲ್ಪ ವಿರಾಮ ಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಬಿರುಸುಗೊಳಿಸಲಾಗಿದೆ.

ರಕ್ಷಣಾ ಕಾರ್ಯಕ್ಕಾಗಿ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಕಾರವಾರದಿಂದ ನೌಕಾ ಸೇನೆ 4 ಬೋಟ್‌ಗಳೊಂದಿಗೆ ಕೊಡಗಿಗೆ ಧಾವಿಸಿದೆ. ಇಂದು ಬೆಳಿಗ್ಗೆ ಗ್ರೀನ್‌ ಕಾರಿಡಾರ್ ಮೂಲಕ ಬೆಂಗಳೂರಿನಿಂದ 75 ಸೈನಿಕರು ಕೊಡಗಿಗೆ ತೆರಳಿದ್ದಾರೆ. ವಾಯುಸೇನೆಯ ಹೆಲಿಕಾಪ್ಟರ್‌ಗಳು ಮುಂಜಾನೆ ಆಹಾರ ಪೊಟ್ಟಣಗಳನ್ನು ಹೊತ್ತು ಕೊಡಗಿಗೆ ತೆರಳಿವೆ. ಇಲ್ಲಿನ ಬೇರೆ ಬೇರೆ ಪ್ರದೇಶದಲ್ಲಿ ಸಿಲುಕಿರುವ ಜನರಿಗೆ ಈ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ.

ಜತೆಗೆ ಪ್ರವಾಹ ಮತ್ತು ಭೂ ಕುಸಿತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವಲ್ಲಿ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಕ್ವಿಕ್‌ ರೆಸ್ಪಾನ್ಸ್‌ ಟೀಂಗಳು, 42 ಜನರ ಸಿವಿಲ್‌ ಡಿಫೆನ್ಸ್‌ ತಂಡಗಳು ಕಾರ್ಯ ನಿರತವಾಗಿವೆ. ಭಾರತೀಯ ಸೇನೆಯ ಒಂದು ತುಕಡಿಯ 167 ಜನರು ತಲಾ 10 ಸದಸ್ಯರಂತೆ 16 ತಂಡಗಳಾಗಿ ಸ್ಥಳೀಯ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ತುರ್ತು ಪರಿಸ್ಥಿತಿ ಇರುವ ಪ್ರದೇಶಗಳಾದ ಕಾಟಕೇರಿ, ಜೋಡುಪಾಲ, ಕಾಲೂರು, ಮುಕ್ಕೋಡ್ಲು, ಮಕ್ಕಂದೂರು, ಹೆಮ್ಮೆತ್ತಾಳು, ಮೇಘತ್ತಾಳು, ದೇವಸ್ತೂರು, ದೇವಮಾನಿ, ಹಟ್ಟಿಹೊಳೆ ಪ್ರದೇಶಗಳಲ್ಲಿ ಸಂತ್ರಸ್ಥರ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಕಾರ್ಯನಿರ್ವಹಿಸುತ್ತಿವೆ.

ಇನ್ನು ಮಣ್ಣಿನಿಂದ ಸಿಲುಕಿಕೊಂಡವರನ್ನೂ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗುತ್ತಿದೆ. ಕೊಡಗು ಜಿಲ್ಲೆಯ ಹಲವು ಭಾಗಗಳು ಮಳೆಯಿಂದ ಜಲಾವೃತಗೊಂಡಿದ್ದು, ಭಾರೀ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿದುಕೊಂಡು ಅಪಾಯದಂಚಿನಲ್ಲಿ ಸಂತ್ರಸ್ಥರು ಸಿಲುಕಿದ್ದರು. ಇವರುಗಳನ್ನು ವಾಯು ಮಾರ್ಗದ ಮುಖಾಂತರ ರಕ್ಷಣೆ ನಡೆಸಲು ಪ್ರತಿಕೂಲ ಹವಾಮಾನ ಅಡ್ಡಿಯಾಗಿತ್ತು. ಇದೀಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಹಾಯದಿಂದ ಮಡಿಕೇರಿ ತಾಲ್ಲೂಕಿನ ಸಂಪಾಜೆ ಹೋಬಳಿಯ ಜೋಡುಪಾಲ ಗ್ರಾಮದಲ್ಲಿ ಅಪಾಯದ ಪರಿಸ್ಥಿತಿಗೆ ಸಿಲುಕಿದ್ದ 140 ಸಂತ್ರಸ್ಥರನ್ನು ರಕ್ಷಿಸಿ, ಸುರಕ್ಷಿತ ಸ್ಥಳವಾದ ಸಂಪಾಜೆಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ.

ಇದೇ ರೀತಿ ಸುಂಟಿಕೊಪ್ಪ ಹೋಬಳಿಯ ನಂದಿಮೊಟ್ಟೆಯಲ್ಲಿ ಅಪಾಯದ ಪರಿಸ್ಥಿತಿಗೆ ಸಿಲುಕಿದ್ದ ಇಬ್ಬರು ಗರ್ಭಿಣಿಯರು ಸೇರಿ ಒಟ್ಟು 30 ಮಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇವರಲ್ಲಿ 4 ಮಂದಿ ಗಾಯಾಳುಗಳಿದ್ದು ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಟ್ಟಿಹೊಳೆಯಿಂದ 10 ಕಿ.ಮೀ ಅಂತರದಲ್ಲಿರುವ ಸೂರ್ಯಕಿರಣ ಎಸ್ಟೇಟ್‍ನಲ್ಲಿ ಸಿಲುಕಿದ್ದ 12 ಮಹಿಳೆಯರು ಮತ್ತು 3 ಮಕ್ಕಳು ಸೇರಿ ಒಟ್ಟು 37 ಮಂದಿಯನ್ನು ಭಾರತೀಯ ಸೇನೆ ಹಾಗೂ ತುರ್ತು ರಕ್ಷಣಾ ತಂಡದ ಸಹಾಯದಿಂದ ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಭಾರತೀಯ ಸೇನಾ ತುಕಡಿ ಮತ್ತು ಕ್ಯೂ.ಆರ್.ಟಿ ತಂಡಗಳು ಮುಕ್ಕೋಡ್ಲುವಿನ ಸಂತ್ರಸ್ಥರೊಂದಿಗೆ ಸಂಪರ್ಕ ಸಾಧಿಸಿ ಅವರನ್ನೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿವೆ.

ಅಲ್ಲದೆ ಮಡಿಕೇರಿ ತಾಲ್ಲೂಕಿನ ಹೆಮ್ಮತ್ತಾಳು ಮತ್ತು ಮಕ್ಕಂದೂರು ಗ್ರಾಮದಲ್ಲಿ 130, ಕಾಲೂರು ಮತ್ತು ಗಾಳಿಬೀಡುವಿನಲ್ಲಿ 200, ಕಟ್ಟೆಮಾಡು ಮತ್ತು ಪರಂಬು ಪೈಸಾರಿ (ಮರಗೋಡು) ಯಲ್ಲಿ 60 ಕುಟುಂಬಗಳು, 2ನೇ ಮೊಣ್ಣಂಗೇರಿ 20, ಜೋಡುಪಾಲದಲ್ಲಿ 130 ಸಂತ್ರಸ್ಥರನ್ನು ಭಾರತೀಯ ಸೇನೆ, ಎಸ್.ಡಿ.ಆರ್.ಎಫ್ ಮತ್ತು ನಾಗರೀಕ ರಕ್ಷಣಾ ಪಡೆಗಳ ಜಂಟಿ ಕಾರ್ಯಾಚರಣೆಯಿಂದ ರಕ್ಷಿಸಲಾಗಿದೆ.

ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಕೊಡಗಿನ ಮಳೆ ಸಂತ್ರಸ್ತರು
ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಕೊಡಗಿನ ಮಳೆ ಸಂತ್ರಸ್ತರು

“ಜಿಲ್ಲೆಯಾದ್ಯಂತ ಈವರೆಗೆ ಒಟ್ಟು 2569 ಸಂತ್ರಸ್ಥರನ್ನು ರಕ್ಷಿಸಿದ್ದು, ಸುರಕ್ಷಿತ ಸ್ಥಳ ಮತ್ತು ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 31 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕೇಂದ್ರದಲ್ಲಿ ಸಂತ್ರಸ್ಥರಿಗೆ ಆಹಾರ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ, ಹಾಸಿಗೆ ಮತ್ತು ಹೊದಿಕೆ ಮುಂತಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ,” ಎಂದು ಸ್ಥಳದಲ್ಲಿರುವ ಸಚಿವ ಸಾ.ರಾ. ಮಹೇಶ್‌ ಹೇಳಿದ್ದಾರೆ. ಮುಖ್ಯವಾಗಿ ಕಾಟಿಕೇರಿಯಲ್ಲಿ ಸಿಲುಕಿದ್ದ 200 ಜನರನ್ನು ಮತ್ತು ಕಾಂಡನಕೊಲ್ಲಿಯಿಂದ 80 ಜನರನ್ನು ರಕ್ಷಣೆ ಮಾಡಲಾಗಿದ್ದು, ‘ಇಂದು ಸಂಜೆಗೆ ರಕ್ಷಣಾ ಕಾರ್ಯಾಚರಣೆ ಮುಗಿಯಲಿದೆ’ ಎಂದು ಮಹೇಶ್‌ ತಿಳಿಸಿದ್ದಾರೆ.

ಎಲ್ಲೆಲ್ಲೂ ನಿರಾಶ್ರಿತರು

ಮಡಿಕೇರಿ ತಾಲ್ಲೂಕಿನ ಕೊಟ್ಟಮುಡಿ, ಗಾಳಿಬೀಡು, ಕರ್ಣಂಗೇರಿ, ಮಕ್ಕಂದೂರು, ಜೋಡುಪಾಲ, ಕಾಟಕೇರಿ, ಹೊದವಾಡ, ಐಕೊಳ, ಮಡಿಕೇರಿ ನಗರದ ಎರಡು ಪುನರ್ವಸತಿ ಕೇಂದ್ರದಲ್ಲಿ 550 ಸಂತ್ರಸ್ಥರು ಇದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ, ಕಾಂಡನಕೊಲ್ಲಿ, ಮಂಜುನಾಥ ಕಲ್ಯಾಣ, ಮದರಸಾ, ಸೇಂಟ್ ಮೇರೀಸ್ ಸ್ಕೂಲ್, ರಾಮಮಂದಿರ, ಪನ್ಯ ಎಸ್ಟೇಟ್ ಸುಂಟಿಕೊಪ್ಪ, ಬೆಟ್ಟದಕಾಡು, ಗುಡ್ಡೆಹೊಸೂರು, ಮದಲಾಪುರ, ಹಾರಂಗಿ, ದಂಡಿನಪೇಟೆ, ಕೊಡವ ಸಮಾಜ, ಗಂಧದಕೋಟೆ, ಶಾಂತಳ್ಳಿ, ಸೋಮವಾರಪೇಟೆ ಪುನರ್ವಸತಿ ಕೇಂದ್ರದಲ್ಲಿ 2,233 ಸಂತ್ರಸ್ಥರು ಆಶ್ರಯ ಪಡೆದಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಕರಡಿಗೋಡುವಿನಲ್ಲಿ ಮೂರು, ಅಮ್ಮತ್ತಿ, ವಿರಾಜಪೇಟೆಯ ಪುನರ್ವಸತಿ ಕೇಂದ್ರದಲ್ಲಿ 376 ಸಂತ್ರಸ್ಥರು ಸೇರಿ ಒಟ್ಟು 31 ಪುನರ್ವಸತಿ ಕೇಂದ್ರದಲ್ಲಿ 3,159 ಸಂತ್ರಸ್ಥರಿಗೆ ಆಶ್ರಯವನ್ನು ನೀಡಲಾಗಿದೆ.

ಈ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ಥರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು ಪ್ರತಿ ಕೇಂದ್ರಕ್ಕೆ ತಲಾ ಇಬ್ಬರಂತೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಮೈಸೂರು, ಮಂಡ್ಯ, ರಾಮನಗರ, ಹಾಸನ ಜಿಲ್ಲೆಗಳ ಕಂದಾಯ, ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಸಹ ಪರಿಹಾರ ಕಾರ್ಯಗಳಿಗಾಗಿ ಕೊಡಗು ಜಿಲ್ಲೆಗೆ ನಿಯೋಜಿಸಲಾಗಿದೆ.

ಪರಿಹಾರ ಸಾಮಗ್ರಿಗಳ ಸಂಗ್ರಹ

ಒಂದೆಡೆ ತಡವಾಗಿಯಾದರೂ ರಕ್ಷಣಾ ಕಾರ್ಯಾಚರಣೆ ಬಿರುಸುಗೊಂಡಿದ್ದರೆ, ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುವ ಪ್ರಯತ್ನಗಳೂ ರಾಜ್ಯದೆಲ್ಲೆಡೆ ನಡೆಯುತ್ತಿವೆ. ನಿರಾಶ್ರಿತರ ಕೇಂದ್ರಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಾಮಗ್ರಿ, ಹೊದಿಕೆಗಳನ್ನು ಮೈಸೂರಿನಿಂದ ಕಳುಹಿಸಲಾಗುತ್ತಿದೆ. ಅಲ್ಲದೆ 200 ಜನ ಸ್ವಯಂ ಸೇವಕರು ಮೈಸೂರಿನಿಂದ ಕೊಡಗು ಜಿಲ್ಲೆಗೆ ತೆರಳಿದ್ದಾರೆ.

ಮೈಸೂರಿನ ಟೌನ್‌ ಹಾಲ್‌ ಆವರಣದಲ್ಲಿ ಕೊಡಗಿನ ಜನರಿಗೆ ಬೇಕಾದ ಆಹಾರ ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಕೇಂದ್ರವನ್ನು ಆರಂಭಿಸಲಾಗಿದೆ. ಗೋಣಿಕೊಪ್ಪದ ಕೆವಿಕೆ ಆವರಣದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಪರಿಹಾರ ಸಾಮಗ್ರಿಗಳ ಸಂಗ್ರಹವನ್ನು ಆರಂಭಿಸಲಾಗಿದೆ. ದಾನ ನೀಡುವವರು ಈ ಕೇಂದ್ರಗಳಿಗೆ ವಸ್ತುಗಳನ್ನು ನೀಡಬಹುದಾಗಿದೆ. ಫಿಲ್ಟರ್‌ ನೀರು, ಬಟ್ಟೆ, ಪ್ಯಾಕ್‌ ಮಾಡಲಾದ ಆಹಾರಗಳನ್ನು ನೀಡಬಹುದಾಗಿದೆ.

ಒಂದೆಡೆ ಸರಕಾರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರೆ ಇತ್ತ ಡಾ. ರಾಜ್‌ ಕುಮಾರ್‌ ಅಕಾಡೆಮಿ, ಕೊಡವ ಸಮಾಜ, ಮಡಿಕೇರಿ ಸೇವಾ ಭಾರತಿ, ಕರ್ನಾಟಕ ಜನಶಕ್ತಿ, ಕೂರ್ಗ್‌ ವೆಲ್‌ನೆಸ್‌ ಫೌಂಡೇಷನ್, ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್, ವಿವಿಧ ಮಾಧ್ಯಮಗಳು, ಸಂಘ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆ ಮತ್ತು ಸಂತ್ರಸ್ತರ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಕೆಲಸಕ್ಕೆ ಕೈ ಹಾಕಿವೆ. ಈ ಕುರಿತು ‘ಡೊನೇಟ್‌ ಕೊಡಗು’ ಎಂಬ ಅಭಿಯಾನವನ್ನೇ ಆರಂಭಿಸಲಾಗಿದೆ.

ಕೇಂದ್ರೀಕೃತ ವ್ಯವಸ್ಥೆಯ ಕೊರತೆ

ಒಟ್ಟಾರೆ ಕೊಡಗಿನ ವಿಕೋಪ ನಿರ್ವಹಣೆಯಲ್ಲಿ ಸರಕಾರ ತೋರಿದ ಆರಂಭಿಕ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಗುರುವಾರದ ಬೆಳಿಗ್ಗಿನವರೆಗೂ ಕೊಡಗಿನಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಪ್ರಮುಖ ಅಧಿಕಾರಿಗಳಿಗೇ ಇರಲಿಲ್ಲ. ಜತೆಗೆ ಮಾಧ್ಯಮಗಳು ಶುಕ್ರವಾರ ಸಂಜೆಯವರೆಗೂ ಅಟಲ್‌ ಬಿಹಾರಿ ವಾಜಪೇಯಿ ಅಂತ್ಯ ಸಂಸ್ಕಾರದ ನೇರ ಪ್ರಸಾರ ಬಿತ್ತರಿಸುವಲ್ಲಿ ತೊಡಗಿದ್ದರಿಂದ ಸರಕಾರವೂ ಈ ಬಗ್ಗೆ ನಿರ್ಲಕ್ಷ್ಯ ತಾಳಿತ್ತು. ಇದರಿಂದ ರಾಷ್ಟ್ರೀಯ ಮಟ್ಟದಲ್ಲೂ ಕೇರಳದ ಪ್ರವಾಹಕ್ಕೆ ಸಿಕ್ಕ ಪ್ರಾಮುಖ್ಯತೆ ಕೊಡಗಿಗೆ ಸಿಗಲೇ ಇಲ್ಲ.

ಕೊಡಗಿನ ಪಕ್ಕದಲ್ಲೇ ಇರುವ ಕೇರಳ ಸರಕಾರ ತನ್ನ ರಾಜ್ಯದಲ್ಲಿ ಉಂಟಾದ ಪ್ರವಾಹ ವಿಚಾರದಲ್ಲಿ ನಡೆದುಕೊಂಡ ಜಾಣ್ಮೆ ಕರ್ನಾಟಕಕ್ಕೆ ಮಾದರಿಯಾಗಬೇಕಿತ್ತು. ಆರಂಭದಲ್ಲೇ ಹೆಲ್ಪ್‌ ಲೈನ್‌, ಪರಿಹಾರಕ್ಕಾಗಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಹೊಂದಬೇಕಾಗಿತ್ತು. ಆದರೆ ಸುಮ್ಮನಿದ್ದ ಸರಕಾರ ಜನರು ಸಾಮಾಜಿಕ ಜಾಲತಾಣಗಳಲ್ಲಿ ಝಾಡಿಸಿದ ನಂತರ ಎಚ್ಚೆತ್ತುಕೊಂಡು ಕೊನೆಗೂ ಜನರ ನೆರವಿಗೆ ಧಾವಿಸಿದೆ. ಹೀಗಿದ್ದೂ ರಕ್ಷಣಾ ಕಾರ್ಯಾಚರಣೆ ಮತ್ತು ಪರಿಹಾರ ಕಾರ್ಯಕ್ಕೆ ಕೇಂದ್ರೀಕೃತ ವ್ಯವಸ್ಥೆಯ ರೂಪವನ್ನು ನೀಡಲು ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.

ಜೋಡುಪಾಲದ ನಿರಾಶ್ರಿತರ ಕೇಂದ್ರದಲ್ಲಿನ ಆಹಾರ ಪಡೆಯುತ್ತಿರುವ ಸಂತ್ರಸ್ತರು
ಜೋಡುಪಾಲದ ನಿರಾಶ್ರಿತರ ಕೇಂದ್ರದಲ್ಲಿನ ಆಹಾರ ಪಡೆಯುತ್ತಿರುವ ಸಂತ್ರಸ್ತರು
ಚಿತ್ರ ಕೃಪೆ: ಪರಲ್‌ ಡಿಸೋಜಾ, ಟ್ಟಿಟ್ಟರ್

ಹೆಲ್ಪ್‌ ಲೈನ್‌

ಅಪಾಯದಲ್ಲಿ ಸಿಲುಕಿರುವವರ ರಕ್ಷಣೆಗೆ ಮತ್ತು ಸಂತ್ರಸ್ತರ ಸಹಾಯಕ್ಕಾಗಿ ಜಿಲ್ಲಾ ಕಚೇರಿ, ಜಿಲ್ಲಾ ಪೊಲೀಸ್ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಸಹಾಯವಾಣಿಯು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಜತೆಗೆ ತುರ್ತು ಸಂದರ್ಭದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಕೊಡಗು ಜಿಲ್ಲಾಧಿಕಾರಿ – 9482628409

ಕೊಡಗು ಜಿಲ್ಲಾ ಪಂಚಾಯತಿ ಸಿಇಒ – 9480869000

ಹೆಲಿಕಾಪ್ಟರ್‌ ಹೆಲ್ಪ್‌ ಲೈನ್‌

ಅಲ್ಪಿ- 8281292702

ಚಂದ್ರು – 9663725200

ಧನಂಜಯ್ - 9449731238

ಮಹೇಶ್ - 9480731020

ಸೇನಾ ರಕ್ಷಣಾ ತಂಡ – 9446568222

ಕುಶಾಲನಗರದಲ್ಲಿ ತುರ್ತು ಸಂದರ್ಭಕ್ಕೆ

ನಿವೃತ್ತ ಸುಬೇದಾರ್‌ ಎಕೆ ರಂಜಿತ್‌ – 9663622342,

ಸಿ. ಸುಕುಮಾರ್‌ - 9008503452

ಪೊನ್ನಂಪೇಟೆ ರಕ್ಷಣಾ ಕಾರ್ಯಕ್ಕೆ

ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮೀಜಿ ಮುಕುಂದ್‌ ಮಹಾರಾಜ್‌ - 90361 06418

ಇದರ ಜತೆಗೆ ಮಡಿಕೇರಿಯಲ್ಲಿ ಸೇವಾ ಭಾರತಿಯಿಂದ ಮಳೆ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಮಾಡಲಾಗಿದ್ದು,

ಮಹೇಶ್ – 9480731020

ಧನಂಜಯ್ – 9449731238

ಜಗದೀಶ್ - 9448206688

ಚಂದ್ರ – 9663725200

ಉಚಿತ ಟೆಂಪೋಕ್ಕಾಗಿ ಮನ್ಸೂರ್‌ – 9449990147 ರನ್ನು ಸಂಪರ್ಕಿಸಲು ಸೂಚಿಸಲಾಗಿದೆ.