ವಾಜಪೇಯಿ ಇನ್ನು ನೆನಪು ಮಾತ್ರ: ಸಾವಿಗೂ ಮುನ್ನ ಶ್ರದ್ಧಾಂಜಲಿಯ ಅಪಸವ್ಯಗಳು ಮರುಕಳಿಸದಿರಲಿ...
COVER STORY

ವಾಜಪೇಯಿ ಇನ್ನು ನೆನಪು ಮಾತ್ರ: ಸಾವಿಗೂ ಮುನ್ನ ಶ್ರದ್ಧಾಂಜಲಿಯ ಅಪಸವ್ಯಗಳು ಮರುಕಳಿಸದಿರಲಿ...

ಮಾಜಿ ಪ್ರಧಾನಿ ವಾಜಪೇಯಿಯವರ ಕಳೇಬರಕ್ಕೆ ಬ್ರಾಹ್ಮಣ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿದೆ. ವಾಜಪೇಯಿ ಮೃತರಾಗುವುದಕ್ಕೂ ಮುಂಚೆಯೇ ಶೋಕಾಚರಣೆ ನಡೆಸಿದ ಬಿಎಸ್‌ವೈ ಅಂತಿಮ ನಮನ ಸಲ್ಲಿಸಿದರು. 

ಮೂರು ಭಾರಿ ಭಾರತದ ಪ್ರಧಾನಿಯ ಪಟ್ಟವನ್ನು ಅಲಂಕರಿಸಿ, ಎಲ್ಲಾ ಪಕ್ಷಗಳ ರಾಜಕೀಯ ನಾಯಕರ ವಿಶ್ವಾಸ ಗಳಿಸಿದ್ದ ಅಟಲ್‌ ಬಿಹಾರಿ ವಾಜಪೇಯಿ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನೆರವೇರಿದೆ. ವಾಜಪೇಯಿ ಇನ್ನು ಕೇವಲ ನೆನಪು ಮಾತ್ರ.

ಬೆಳಗ್ಗೆಯಿಂದಲೂ ಕೂಡ ಬಿಜೆಪಿ ರಾಷ್ಟ್ರೀಯ ಮುಖ್ಯ ಕಚೇರಿಯ ಮುಂದೆ ಅಂತಿಮ ದರ್ಶನಕ್ಕಾಗಿ ಇಡಲಾಗಿದ್ದ ವಾಜಪೇಯಿಯವರ ಪಾರ್ಥಿವ ಶರೀರವನ್ನು 3.6 ಕಿಲೋಮೀಟರ್‌ಗಳಷ್ಟು ದೂರವಿದ್ದ ಸ್ಮೃತಿ ಸ್ಥಳಕ್ಕೆ ಸಂಜೆ ತರಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಅಮಿತ್‌ ಶಾ, ಎಲ್‌. ಕೆ. ಆಡ್ವಾಣಿ ಸೇರಿದಂತೆ ಸ್ಥಳದಲ್ಲಿದ್ದ ದೇಶದ ಹಲವಾರು ನಾಯಕರು ವಾಜಪೇಯಿಯವರಿಗೆ ಕೊನೆಯ ಬಾರಿ ಗೌರವಗಳನ್ನು ಅರ್ಪಿಸಿದರು. ವಾಜಪೇಯಿ ಕುಟುಂಬದವರಿಂದ ಬ್ರಾಹ್ಮಣ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನೆರವೇರಿತು. ನಿನ್ನೆ ವಾಜಪೇಯಿ ಮೃತರಾಗುವ ಮುಂಚೆಯೇ ಶೋಕಾಚರಣೆ ನಡೆಸಿದ್ದ ರಾಜ್ಯದ ಹಿರಿಯ ರಾಜಕಾರಣಿಗಳೂ ಕೂಡ ವಾಜಪೇಯಿಗೆ ಅಂತಿಮ ನಮನ ಸಲ್ಲಿಸಿದರು.

ಸಾಮಾನ್ಯವಾಗಿ ಮಾಧ್ಯಮಗಳು ಯಾರಾದರೂ ಗಣ್ಯ ವ್ಯಕ್ತಿಗಳು, ರಾಜಕೀಯ ನಾಯಕರು ಕೊನೆಯುಸಿರು ಎಳೆಯುವ ಹಂತದಲ್ಲಿದ್ದರೆ, ಬದುಕಿರುವಾಗಲೇ ಅವರ ಜೀವನದ ಕುರಿತು ವರದಿಗಳನ್ನು ತಯಾರು ಮಾಡಿಕೊಳ್ಳುತ್ತವೆ. ವ್ಯಕ್ತಿಗಳ ಸಾಧನೆ, ಬದುಕಿನ ಹಾದಿ, ಸಿದ್ಧಾಂತ, ಸಮಾಜ ಸೇವೆ ಇತ್ಯಾದಿಗಳನ್ನೆಲ್ಲಾ ಬರೆದು ಸಿದ್ಧಪಡಿಸಿಕೊಂಡಿರುತ್ತವೆ. ವ್ಯಕ್ತಿಗಳ ಸಾವಿನ ಗಳಿಗೆ, ಮುಖ್ಯ ವ್ಯಕ್ತಿಗಳ ಸಂತಾಪ ಹೀಗೆ ಕೆಲವು ಜಾಗಗಳನ್ನು ಖಾಲಿ ಬಿಟ್ಟು ಉಳಿದದ್ದೆಲ್ಲಾ ಗಂಟೆಗಳ, ದಿನಗಳ ಮುಂಚೆಯೇ ಸಿದ್ಧವಾಗಿ ಕುಳಿತಿರುತ್ತದೆ. ಮೃತಪಟ್ಟ ನಂತರ ಉಳಿದಿರುವುದನ್ನು ಸೇರಿಸಿ ಪ್ರಕಟಿಸುತ್ತವೆ.

ಮಾಧ್ಯಮಗಳಂತೂ ತಾವೇ ಮೊದಲಿರಬೇಕು ಎಂಬ ಜಿದ್ದಾಜಿದ್ದಿಗೆ ಬಿದ್ದಿವೆ. ಎಲ್ಲರಿಂಗತಲೂ ಹೊಸದನ್ನು ಏನಾದರೂ ನೀಡಬೇಕು ಎಂಬ ತರಾತುರಿ ಮಾಧ್ಯಮಗಳಿಗಿದೆ. .

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ವಿಷಯದಲ್ಲಿ ಕೂಡ ಆಗಿದ್ದು ಇದೇ. ಗುರುವಾರ ಮಧ್ಯಾಹ್ನದ ವೇಳೆಗೆ ಕೆಲವು ಸುದ್ದಿ ವಾಹಿನಿಗಳು ಅಟಲ್‌ಜಿ ಅಸ್ತಂಗತರಾದರು ಎಂದು ಸುದ್ದಿ ಪ್ರಕಟಿಸಿದವು. ಕೂಡಲೇ ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ‘ವಾಜಪೇಯಿ ಇನ್ನಿಲ್ಲ’ ಎಂದು ಸುದ್ದಿ ಹಬ್ಬಿಸಿದರು. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಸುದ್ದಿ ವಾಹಿನಿಗಳು ‘ವಾಜಪೇಯಿಯವರ ಸ್ಥಿತಿ ಗಂಭೀರ’ ಎಂದು ವರದಿ ನೀಡತೊಡಗಿದರು. ಇದರಿಂದಾಗಿ ಗುರುವಾರ ಮಧ್ಯಾಹ್ನ ಜನತೆ ಸತ್ಯ ಯಾವುದು, ಸುಳ್ಳು ಯಾವುದು ಎಂಬ ಪೇಚಿಗೆ ಸಿಲುಕಿದ್ದರು.

ಆಸ್ಪತ್ರೆಯ ಅಧಿಕೃತ ಘೋಷಣೆ ಸಂಜೆ ಐದೂವರೆ ಸುಮಾರಿಗೆ ಅಟಲ್‌ಜಿ ಮೃತಪಟ್ಟರು ಎಂದಿತು. ತದನಂತರ ಸುದ್ದಿ ಮಾಧ್ಯಮಗಳು ತಾವು ಸಿದ್ಧಪಡಿಸಿಕೊಂಡಿದ್ದ ಎಲ್ಲಾ ವರದಿಗಳನ್ನು ಹಿಂದೆ ಹಿಂದೆಯೇ ಪ್ರಸಾರ ಮಾಡಲು ಅಥವಾ ಪ್ರಕಟಿಸಲು ಮುಂದಾದವು.

ಮಾಧ್ಯಮಗಳೇನೋ ಜಿದ್ದಿಗೆ ಬಿದ್ದಿವೆ ಸರಿ. ಆದರೆ ರಾಜಕಾರಣಿಗಳೇಕೆ ಅಚಾತುರ್ಯ ಮಾಡಿಕೊಂಡರು ಎಂಬ ಪ್ರಶ್ನೆ ಗುರುವಾರ ಮಧ್ಯಾಹ್ನ ಮೂಡಿಬಂದಿತ್ತು. ಇದಕ್ಕೆ ಕಾರಣವಾಗಿದ್ದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೀಡಿದ ಟ್ವಿಟ್ಟರ್‌ ಪ್ರತಿಕ್ರಿಯೆ.

ಇನ್ನೂ ಮಾಜಿ ಪ್ರಧಾನಿ ಅಟಲ್‌ಜಿ ಮೃತಪಟ್ಟಿರಲಿಲ್ಲ. ಏಮ್ಸ್‌ ಆಸ್ಪತ್ರೆಯ ವೈದ್ಯರು ವಾಜಪೇಯಿಗೆ ಕೃತಕ ಉಸಿರಾಟ ನೀಡಲಾಗಿದೆ ಎಂದಿದ್ದರು. ಆದರೆ ದುಡುಕಿದ ಕರ್ನಾಟಕದ ಹಿರಿಯ ಬಿಜೆಪಿ ರಾಜಕಾರಣ ಬಿ. ಎಸ್‌. ಯಡಿಯೂರಪ್ಪ ಟ್ವಿಟ್ಟರ್‌ ಮೂಲಕ ವಾಜಪೇಯಿಯವರಿಗೆ ಚಿರಶಾಂತಿ ಕೋರಿ ಪೋಸ್ಟ್‌ ಹಾಕಿದ್ದರು.

“ನನಗೆ ಪ್ರೇರಣೆಯಾಗಿದ್ದ ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ಮನಸ್ಸು ಭಾರವಾಗಿದೆ. ಶ್ರೇಷ್ಠ ನಾಯಕ ಹಾಗೂ ಅಪ್ರತಿಮ ದೇಶಭಕ್ತರಾಗಿದ್ದ ಅವರ ನಿಧನವು ದೇಶಕ್ಕೆ ಬಹುದೊಡ್ಡ ನಷ್ಟ. ಭಗವಂತನು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಯಡಿಯೂರಪ್ಪ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯ ಮೂಲಕ ಪೋಸ್ಟ್‌ ಮಾಡಿದ್ದರು.

ಬಿ.ಎಸ್‌. ಯಡಿಯೂರಪ್ಪರ ಟ್ವಿಟ್ಟರ್‌ ಪೋಸ್ಟ್‌
ಬಿ.ಎಸ್‌. ಯಡಿಯೂರಪ್ಪರ ಟ್ವಿಟ್ಟರ್‌ ಪೋಸ್ಟ್‌
/news18 ಕನ್ನಡ.

ಗಮನಿಸಬೇಕಾದ ಸಂಗತಿ ಏನೆಂದರೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇವಲ ಬರಹದಲ್ಲಷ್ಟೇ ತಮ್ಮ ನೋವನ್ನು ವ್ಯಕ್ತ ಪಡಿಸಿಲ್ಲ. ಬರಹದ ಜತೆಗೆ ಒಂದು ಪೋಸ್ಟರ್‌ಅನ್ನೂ ಕೂಡ ಪ್ರಕಟಿಸಿದ್ದಾರೆ. ಆ ಪೋಸ್ಟರ್‌ನಲ್ಲಿ ಯಡಿಯೂರಪ್ಪ ಹೇಳಹೊರಟಿದ್ದ ಮಾತುಗಳೆಲ್ಲವೂ ಇವೆ. ಹಾಗಾದರೆ ಮಾಧ್ಯಮಗಳಂತೆಯೇ ಯಡಿಯೂರಪ್ಪನವರೂ ಕೂಡ ತಮ್ಮದೇ ಪಕ್ಷದ ಹಿರಿಯ ಮುತ್ಸದಿ ಅಟಲ್‌ ಬಿಹಾರಿ ವಾಜಪೇಯಿವರ ಅತ್ಮಕ್ಕೆ ಶಾಂತಿ ಕೋರುವ ಪೋಸ್ಟರ್‌ಅನ್ನು ಮುಂಚೆಯೇ ಸಿದ್ಧಪಡಿಸಿಕೊಂಡು ಕಾಯುತ್ತಿದ್ದರೇ ಎನ್ನುವ ಪ್ರಶ್ನೆ ಕಾಡುತ್ತದೆ.

ಇಲ್ಲಿ ಸಂದೇಹದ ಅಗತ್ಯವೇ ಇಲ್ಲ. ಯಡಿಯೂರಪ್ಪ ಪೋಸ್ಟ್‌ ಮಾಡಿದ ಪೋಸ್ಟರ್‌ ತಯಾರಿಸಲು ಕಡಿಮೆಯೆಂದರೂ ಕೂಡ ಅರ್ಧ ಗಂಟೆ ಸಮಯದ ಅಗತ್ಯವಿತ್ತು. ಪೋಸ್ಟರ್‌ ಸಿದ್ಧಪಡಿಸಲು ಯಡಿಯೂರಪ್ಪ ಮುಂಚೆಯೇ ತಮ್ಮ ಅನಿಸಿಕೆಯನ್ನು ಬರೆದು ಕಳಿಸಬೇಕಿತ್ತು. ಅಂದರೆ ಮುಂಚೆಯೇ ಯಡಿಯೂರಪ್ಪ ಪೋಸ್ಟರ್‌ ಸಿದ್ಧಪಡಿಸಿಕೊಂಡಿದ್ದರು. ಮಾಧ್ಯಮಗಳು ಕೆಲ ನಿಮಿಷ ‘ವಾಜಪೇಯಿ ಇನ್ನಿಲ್ಲ’ ಎಂದು ವರದಿ ಮಾಡಿದ ಕೂಡಲೇ ತಮ್ಮ ಟ್ವಿಟ್ಟರ್‌ ಖಾತೆಯ ಮೂಲಕ ಪೋಸ್ಟರ್‌ ಹಾಕಿ ಶ್ರದ್ದಾಂಜಲಿ ಅರ್ಪಿಸಿದ್ದರು. ಕೆಲ ನಿಮಿಷಗಳ ನಂತರ ಮಾಧ್ಯಮಗಳು ವರದಿ ಬದಲಾಯಿಸಿದ ನಂತರ ತಮ್ಮ ತಪ್ಪಿನ ಅರಿವಾದ ಯಡಿಯೂರಪ್ಪ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ. ಮಾಧ್ಯಮಗಳೇನೋ ಹೊಣೆಗಾರಿಕೆಯ ತರಾತುರಿ, ಆದರೆ ಯಡಿಯೂರಪ್ಪನವರೂ ಕೂಡ ತಾವೇ ಮೊದಲಿಗೆ ಶ್ರದ್ಧಾಂಜಲಿ ಅರ್ಪಿಸಬೇಕೆಂದು ಕಾಯುತ್ತಾ ಕುಳಿತಿದ್ದರೇ?

ಇದು ಯಡಿಯೂರಪ್ಪನವರ ಕತೆಯಾಯಿತು. ಕರ್ನಾಟಕದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಕೂಡ ಇದೇ ರೀತಿ ಎಡವಿದ್ದಾರೆ. ಮಾಧ್ಯಮಗಳು ‘ವಾಜಪೇಯಿ ಇನ್ನಿಲ್ಲ’ ಎನ್ನುತ್ತಿದ್ದಂತೆ ಪತ್ರಿಕಾ ಪ್ರಕಟಣೆ ನೀಡಿ, ಮುಖಭಂಗಕ್ಕೆ ಗುರಿಯಾಗಿದ್ದಾರೆ.

“ಅಟಲ್‌ ಬಿಹಾರಿ ವಾಜಪೇಯಿಯವರು ದೇಶ ಕಂಡ ಮಹಾನ್ ಪ್ರಧಾನಮಂತ್ರಿ. ಅದ್ಭುತ ವಾಗ್ಮಿ, ಈ ದೇಶದ ಪ್ರಧಾನಿಯಾಗುವ ಪ್ರತಿಯೊಬ್ಬರಿಗೂ ವಾಜಪೇಯಿ ಮಾದರಿ. ಸ್ವತಂತ್ರ ನಂತರದ ದೇಶದ ಅತಿದೊಡ್ಡ ನಾಯಕ ಇನ್ನಿಲ್ಲವಾಗಿದ್ದಾರೆ, ಅವರಿಗೆ ದೇಶದ ಸಲಾಮ್. ಸಮಸ್ಯೆಗಳಿಗೆ ಅವರು ಸ್ಪಂದಿಸುತ್ತ ರೀತಿ ಅದ್ವಿತೀಯವಾಗಿತ್ತು. ವಾಜಪೇಯಿ ಪ್ರಧಾನಿಯಾದಾಗ ನಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದೆ. ರಾಷ್ಟ್ರದ ಮೇಲೆ ಅಪರಿಮಿತ ಪ್ರೀತಿಯನ್ನು, ಗೌರವವನ್ನು ವಾಜಪೇಯಿ ಹೊಂದಿದ್ದರು. ದೇಶ ಇಂದು ಮುಕುಟ ಮಣಿಯಂತಿದ್ದ ವಾಜಪೇಯಿಯವರನ್ನು ಕಳೆದುಕೊಂಡು ಬಡವಾಗಿದೆ,” ಎನ್ನುವುದು ಎಸ್‌. ಎಂ. ಕೃಷ್ಣ ನೀಡಿದ ಪತ್ರಿಕಾ ಪ್ರಕಟಣೆಯ ಭಾವಾನುವಾದ.

ಎಸ್‌. ಎಂ. ಕೃಷ್ಣ ನೀಡಿದ ಪತ್ರಿಕಾ ಪ್ರಕಟಣೆ
ಎಸ್‌. ಎಂ. ಕೃಷ್ಣ ನೀಡಿದ ಪತ್ರಿಕಾ ಪ್ರಕಟಣೆ
/news18ಕನ್ನಡ.

ರಾಜಕಾರಣದಲ್ಲಿ ಅಗಾಧ ಅನುಭವವಿರುವ ಇಬ್ಬರೂ ರಾಜಕಾರಣಿಗಳು ರಾಜ್ಯದ ಚುಕಾಣಿಯನ್ನೂ ಕೂಡ ಹಿಡಿದಿದ್ದವರು. ತಾವಿರುವ ಪಕ್ಷದ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿಯವರ ಸಾವಿಗೆ ಅತಿ ಬೇಗ ಶ್ರದ್ಧಾಂಜಲಿ ಅರ್ಪಿಸಲು ಮುಂದಾಗಿ ಎಡವಟ್ಟು ಮಾಡಿಕೊಂಡಿದ್ದಾರೆ.

ಇದುವರೆಗೂ ಮಾಧ್ಯಮಗಳು ಮಾತ್ರ ಜಟಾಪಟಿಗೆ ಬಿದ್ದು, ಸಂಭವನೀಯತೆ ಬಗ್ಗೆ ತಾವೇ ನಿರ್ಧರಿಸಿ ವರದಿ ಮಾಡುತ್ತಿದ್ದವು. ಆದರೆ ಈಗ ಹಿರಿಯ ರಾಜಕಾರಣಿಗಳೂ ಕೂಡ ಇಂತಹದ್ದೊಂದು ಗೀಳಿಗೆ ಬಿದ್ದಂತಿದೆ. ನಾ ಮುಂದು ತಾ ಮುಂದು ಎಂದು ಶ್ರದ್ಧಾಂಜಲಿ ಅರ್ಪಿಸಲು ಸಿದ್ಧರಾಗಿದ್ದಾರೆ. ಅದಕ್ಕಾಗಿ ಪೂರ್ವ ಸಿದ್ಧತೆಗಳನ್ನೂ ಕೂಡ ಮಾಡಿಕೊಂಡು ತಯಾರಾಗಿರುವುದು ಸಾವೊಂದರ ಹಿನ್ನೆಲೆಯಲ್ಲಿ ನಡೆದ ಅಪಸವ್ಯದ ಸಂಗತಿಗಳು.