ಮಳೆಗೆ ಬೆಂಡಾದ ಕೊಡಗು: ಸಂಪರ್ಕ ಕಡಿತ, ಆತಂಕದಲ್ಲಿ ಜನ, ಸೃಷ್ಟಿಯಾದ ಭಯಾನಕ ವಾತಾವರಣ
COVER STORY

ಮಳೆಗೆ ಬೆಂಡಾದ ಕೊಡಗು: ಸಂಪರ್ಕ ಕಡಿತ, ಆತಂಕದಲ್ಲಿ ಜನ, ಸೃಷ್ಟಿಯಾದ ಭಯಾನಕ ವಾತಾವರಣ

ಕೊಡಗು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿದ್ದು, ಇಲ್ಲಿನ ಮಣ್ಣನ್ನು ಒರಟಾದ ಮತ್ತು ಕೋಟೆ ಮಣ್ಣು ಎಂದು ವಿಭಾಗಿಸಲಾಗಿದೆ. ಧಾರಾಕಾರ ಮಳೆ ಸುರಿದಾಗ ಈ ಮಣ್ಣು ಕುಸಿಯುತ್ತದೆ. ಇವತ್ತು ಕೊಡಗಿನಲ್ಲಿ ಗುಡ್ಡಗಳು ಕುಸಿಯಲು ಇದೇ ಕಾರಣವಾಗಿದೆ.

ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಬರುವ ಜಿಲ್ಲೆ ಕೊಡಗು. ಇಲ್ಲಿನ ಹೆಚ್ಚಿನ ಭಾಗ ಗುಡ್ಡಗಳು ಮತ್ತು ಕಾಡಿನಿಂದ ಆವೃತ್ತವಾಗಿದೆ; ಸಮತಟ್ಟಾದ ಭೂಮಿ ಕಡಿಮೆ. ಈ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಎಡೆಬಿಡದೆ ಸುರಿಯುತ್ತಿದೆ. ಈ ಮಳೆ ಕೊಡಗಿನಲ್ಲಿ ಹಿಂದೆಂದೂ ಕಂಡು ಕೇಳರಿಯದ ಅವಾಂತರಗಳನ್ನು ಸೃಷ್ಟಿಸಿದೆ. ಹೆಚ್ಚಿಗೆ ಮಳೆ ಸುರಿದಿದ್ದರೂ, ಪ್ರವಾಹದಂಥ ಘಟನೆಗಳು ನಡೆದಿದ್ದು ಕಡಿಮೆ. ಆದರೆ ,ಭೂ ಕುಸಿತಗಳು ಇಲ್ಲಿಯ ಧೈರ್ಯಶಾಲಿಗಳನ್ನೂ ಧೃತಿಗೆಡುವಂತೆ ಮಾಡಿದೆ.

ಮನೆಗಳ ಮೇಲೆ ಗುಡ್ದ ಕುಸಿಯುತ್ತಿರುವ, ಮನೆಗಳು ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ, ಚಿತ್ರಗಳು ಹರಿದಾಡುತ್ತಿದ್ದು ಇಲ್ಲಿನ ಮಳೆಯ ಭೀಕರತೆಗೆ ಸಾಕ್ಷಿಯಾಗಿದೆ. ಇದರ ಜತೆಗೆ ಒಂದಷ್ಟು ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದ್ದು ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿಸಿದೆ. ಮೊದಲೇ ಹೇಳಿದಂತೆ ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಗುಡ್ಡ ಕುಸಿತ, ಮರಗಳು ಬಿದ್ದು ವಿದ್ಯುತ್‌ ಸಂಪರ್ಕ ಮತ್ತು ದೂರವಾಣಿ ಸಂಪರ್ಕ ಇಲ್ಲವಾಗಿದೆ. ಕುಗ್ರಾಮಗಳಲ್ಲಿ ಮೊಬೈಲ್ ಸಂಪರ್ಕವೂ ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಹಲವು ಸ್ಥಳೀಯರು ಹೇಳಿದ್ದಾರೆ. ಹೀಗಾಗಿ ಇಡೀ ಜಿಲ್ಲೆಯಲ್ಲಿ ಏನಾಗುತ್ತಿದೆ, ಯಾವ ಭಾಗಗಳಲ್ಲಿ ಸಮಸ್ಯೆಯಾಗುತ್ತಿದೆ ಎಂಬ ಮಾಹಿತಿಗಳು ಅಧಿಕಾರಿಗಳಿಗೂ ಸರಿಯಾಗಿ ಸಿಗುತ್ತಿಲ್ಲ.

ಗುಡ್ಡ ಕುಸಿತ:

ಕೊಡಗು ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿದ್ದು, ಪಶ್ಚಿಮ ಘಟ್ಟದ ಮಣ್ಣನ್ನು ಒರಟಾದ ಮತ್ತು ಕೋಟೆ ಮಣ್ಣು ಎಂದು ವಿಭಾಗಿಸಲಾಗಿದೆ. ಈ ಕೋಟೆ ಮಣ್ಣನ್ನು ಹಳ್ಳಿಗಳಲ್ಲಿ ಇಟ್ಟಿಗೆ ತಯಾರಿಕೆಗೆ ಬಳಸುವ ಪರಿಪಾಠವಿದೆ. ಸಾಮಾನ್ಯವಾಗಿ ಈ ಮಣ್ಣು ಕುಸಿಯುವುದಿಲ್ಲ. ಆದರೆ ಧಾರಾಕಾರ ಮಳೆ ಸುರಿದಾಗ ಇಳಿಜಾರಿನಲ್ಲಿರುವ, ಗಿಡ ಮರಗಳ ಆಶ್ರಯವಿಲ್ಲದ, ಅಥವಾ ಬಂಡೆಗಳನ್ನು ಒಳಗೊಂಡಿರುವ ಮಣ್ಣುಗಳು ಕುಸಿಯುತ್ತವೆ ಎನ್ನುತ್ತಾರೆ ಕರ್ನಾಟಕ ವಿಕೋಪ ನಿಯಂತ್ರಣ ಕೇಂದ್ರದ ಅಧಿಕಾರಿಗಳು. ಇವತ್ತು ಕೊಡಗಿನಲ್ಲಿ ಗುಡ್ಡಗಳು ಕುಸಿಯಲು ಇದೇ ಕಾರಣ ಎಂದವರು ಹೇಳುತ್ತಾರೆ.

ಇದರಾಚೆಗೆ ಇಲ್ಲಿ ಸುಮಾರು 20 ರಿಂದ 30 ವರ್ಷ ಹಿಂದೆ ಇದೇ ರೀತಿಯ ಮಳೆ ಸುರಿದಿತ್ತು. ಆದರೆ ಅವತ್ತು ಇಲ್ಲಿ ಇಷ್ಟೊಂದು ಮನೆಗಳು ಇರಲಿಲ್ಲ. ಜತೆಗೆ ರಸ್ತೆಗಳು ಕಿರಿದಾಗಿದ್ದವು. ಈ ಮನೆ ಕಟ್ಟುವ, ರಸ್ತೆಗಳನ್ನು ಅಗಲಗೊಳಿಸುವ ಪ್ರಕ್ರಿಯೆ ಸಂದರ್ಭದಲ್ಲಿ ಒಂದಷ್ಟು ಕಡಿದಾದ ಜಾಗಗಳು ಸೃಷ್ಟಿಯಾಗಿದ್ದವು. ಇದು ಕೂಡ ಗುಡ್ಡ ಕುಸಿತಕ್ಕೆ ಕಾರಣ ಎನ್ನುತ್ತಾರೆ ಗೋಣಿಕೊಪ್ಪದ ಹಿರಿಯರೊಬ್ಬರು.

ನಿರೀಕ್ಷೆ ಮೀರಿ ಸುರಿದ ಮಳೆ:

ಇದರಾಚೆಗೆ ಕೊಡಗಿನಲ್ಲಿ ನಿರೀಕ್ಷೆಗೂ ಮೀರಿ ಸುರಿದ ಮಳೆಯೂ ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಿದೆ. ವಿಕೋಪ ನಿಯಂತ್ರಣ ಕೇಂದ್ರ, ಹವಾಮಾನ ಇಲಾಖೆ ಎಲ್ಲರ ನಿರೀಕ್ಷೆ ಮೀರಿ ಎಂದಿಗಿಂತಲೂ ಹೆಚ್ಚಿನ ಮಳೆ ಈ ಬಾರಿ ಕೊಡಗಿನಲ್ಲಿ ಸುರಿದಿದೆ.

ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅತಂತ್ರರಾಗಿದ್ದ  ಜನರನ್ನು ಬೋಟ್‌ ಮೂಲಕ ರಕ್ಷಿಸಲಾಯಿತು
ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಅತಂತ್ರರಾಗಿದ್ದ ಜನರನ್ನು ಬೋಟ್‌ ಮೂಲಕ ರಕ್ಷಿಸಲಾಯಿತು

ಆಗಸ್ಟ್‌ 15ರಂದು ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿರುವ ಮುನ್ಸೂಚನೆಗಳು ಸಿಕ್ಕಿತ್ತು. ಹೀಗಾಗಿ ಆಗಸ್ಟ್‌ 18ರಿಂದ 18ರ ನಡುವೆ ಕೊಡಗಿನಲ್ಲಿ ಹೆಚ್ಚಿನ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದ್ದೆವು ಎನ್ನುತ್ತಾರೆ ವಿಕೋಪ ನಿಯಂತ್ರಣ ಕೇಂದ್ರದ ಅಧಿಕಾರಿ. ಕೊಡಗಿನಲ್ಲಿ 16 ರಂದು 79.9 ಮಿಮೀ ಭಾರೀ ಮಳೆ, 17ರಂದು 29.9 ಮತ್ತು 18 ರಂದು 15.5 ಮಿಮೀ ಸಾಮಾನ್ಯ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತು. ಆದರೆ ನಿರೀಕ್ಷೆ ಮೀರಿ ವಿರಾಜಪೇಟೆಯಲ್ಲಿ 14 ನೇ ತಾರೀಕಿನಂದು 89.5, 15 ರಂದು 102, 16 ರಂದು 114.5 ಮತ್ತು 17ನೇ ತಾರೀಕಿನಂದು 115 ಮಿಮೀ ಮಳೆಯಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ 15ರಂದು 130.5, 16 ರಂದು 164.50, 17 ರಂದು 146.4 ಮಿಮೀ ಮಳೆಯಾಗಿದೆ. ಇನ್ನೊಂದು ತಾಲೂಕು ಸೋಮವಾರ ಪೇಟೆಯಲ್ಲಿ 18 ಆಗಸ್ಟ್‌ರಂದು ಬೆಳಿಗ್ಗೆ 8.30ಕ್ಕೆ ಅಂತ್ಯವಾದ 24 ಗಂಟೆಗಳಲ್ಲಿ 87.6 ಮಿಮೀ ಮಳೆಯಾಗಿದೆ.

ಪ್ರಾಕೃತಿಕ ವಿಕೋಪಗಳು:

ಮಡಿಕೇರಿಗೆ ಹೋಲಿಸಿದರೆ ವಿರಾಜಪೇಟೆ ಮತ್ತು ಸೋಮವಾರ ಪೇಟೆ ತಾಲೂಕಿನಲ್ಲಿ ಮಳೆ ಕಡಿಮೆ ಇದೆ. ಹೀಗಾಗಿ ಸೋಮವಾರಪೇಟೆ ಮತ್ತು ವಿರಾಜಪೇಟೆಯ ನಗರದಲ್ಲಿ ಮಳೆ ಅಂತಹ ಹಾನಿಯನ್ನು ಮಾಡದಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಭೂ ಕುಸಿತಗಳು ಸಂಭವಿಸಿವೆ. ರಸ್ತೆಗಳ ಮೇಲೆ ದೊಡ್ಡ ದೊಡ್ಡ ಗುಡ್ಡಗಳು ಕುಸಿದಿದ್ದು ಸಂಪರ್ಕ ಸ್ಥಗಿತಗೊಂಡಿದೆ ಎನ್ನುತ್ತಾರೆ ಸೋಮವಾರಪೇಟೆ ನಿವಾಸಿ, ಪತ್ರಕರ್ತ ವಸಂತ್‌.

ಮಡಿಕೇರಿ ಮತ್ತು ಸೋಮವಾರಪೇಟೆ ಮಧ್ಯದಲ್ಲಿರುವ ಕಾಂಡನಕೊಲ್ಲಿ ಎಂಬ ಊರಿನ ಶಾಲೆಯಲ್ಲಿ 200 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದವರು ಹೇಳಿದ್ದಾರೆ. ಗುಡ್ಡ ಕುಸಿತ ಮತ್ತು ಮಳೆಯಿಂದಾಗಿ ಇವರೆಲ್ಲಾ ಶಾಲೆಯಲ್ಲಿ ಬಂದು ಆಶ್ರಯ ಪಡೆಯುತ್ತಿದ್ದಾರೆ. ಇವರನ್ನು ಸಂಪರ್ಕಿಸಲು ಇರುವ ರಸ್ತೆಗಳ ಸಂಪರ್ಕ ಕಟ್‌ ಆಗಿದೆ. ಮೊಬೈಲ್‌ ಸಂಪರ್ಕ ಸಾಧ್ಯವಾಗುತ್ತಿಲ್ಲ. ಎಕರೆ ಗಟ್ಟಲೆ ಜಾಗಗಳು ರಸ್ತೆಗಳ ಮೇಲೆ, ಮನೆಗಳ ಮೇಲೆ ಏಕಾಏಕಿ ಕುಸಿಯುತ್ತಿವೆ. ಹಲವು ಅಡಿಗಳವರೆಗೆ ಭೂಮಿ ಕುಸಿಯುತ್ತಿದ್ದು ಸಂಪರ್ಕವೇ ಸಾಧ್ಯವಾಗುತ್ತಿಲ್ಲ ಎಂದವರು ವಿವರಿಸಿದ್ದಾರೆ.

ಎಲ್ಲೆಲ್ಲೂ ಗುಡ್ಡ ಕುಸಿತ:

ಮಕ್ಕಂದೂರು ಸಮೀಪದ ಎಮ್ಮೆತಾಳು ಗ್ರಾಮದಲ್ಲಿ ಭೀಕರ ರೀತಿಯಲ್ಲಿ ಗುಡ್ಡ ಕುಸಿದಿದ್ದು, ಹತ್ತಾರು ಎಕರೆ ಪ್ರದೇಶ ನೂರಾರು ಅಡಿಗೆ ಕುಸಿದು ಹೋಗಿದೆ. ಈ ಪ್ರದೇಶದಲ್ಲಿ ಕಾಫಿ ತೋಟ ಇತ್ತು ಎಂದು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾರೆ. ಈ ಗುಡ್ಡ ಕುಸಿಯುವ ಸಂದರ್ಭ ಅಲ್ಲೊಂದು ಮನೆ ಇತ್ತು. ಮನೆಯಲ್ಲಿ ಆಟೋ ಡ್ರೈವರ್‌ ಮತ್ತು ತಾಯಿ ಒಬ್ಬರು ಇದ್ದರು. ಆ ಮನೆಯೇ ಈಗ ಕಾಣುತ್ತಿಲ್ಲ ಎಂದು ಸ್ಥಳೀಯರು ವಿವರಿಸಿದ್ದಾರೆ. ಸದ್ಯ ಇದೇ ಜಾಗದಲ್ಲಿ ಇನ್ನೊಂದು ಮನೆ ಅಪಾಯದಲ್ಲಿದೆ. ಇದರಲ್ಲಿ ಇಬ್ಬರು ಅಜ್ಜ ಅಜ್ಜಿ ವಾಸವಾಗಿದ್ದಾರೆ. ಅವರನ್ನು ರಕ್ಷಣೆ ಮಾಡಬೇಕು ಎಂದು ಅವರ ಮಗಳು ಮನವಿ ಮಾಡಿಕೊಂಡಿದ್ದಾರೆ. ಇಲ್ಲಿಗೆ ಸೌಲಭ್ಯಗಳೇ ಇಲ್ಲದ ಅಗ್ನಿ ಶಾಮಕ ದಳದವರು ಭೇಟಿ ನೀಡಿ ಬರಿಗೈಯಲ್ಲಿ ವಾಪಾಸಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಕೊಡಗಿಗೆ ರಾಷ್ಟ್ರೀಯ ವಿಕೋಪ ನಿರ್ವಹಣಾ ತಂಡ ಮತ್ತು ಭೂ ಸೇನೆ ಕೂಡ ಆಗಮಿಸಿದೆ. ಆದರೆ ಇವರೇನು ಮಾಡುತ್ತಿದ್ದಾರೆ ಎಂಬ ವಿವರಗಳು ತಿಳಿದು ಬಂದಿಲ್ಲ.

ಇನ್ನು ಮುಕ್‌ಕೋಡ್ಲು ಗ್ರಾಮದಲ್ಲಿ ಶಾಂತೆಯಂಡ ರವಿ ಕುಶಾಲಪ್ಪ ಮನೆ ಬಳಿ ಗುಡ್ಡೆ ಕುಸಿದು 30 ಮಂದಿ ಅಪಾಯದಲ್ಲಿದ್ದಾರೆ. ಕಣ್ಣೆದುರೇ ಬೆಟ್ಟ ಕುಸಿಯುತ್ತಿದ್ದು, ತಮ್ಮ ಮನೆಗಳ ಹಿಂದಿನ ಬೆಟ್ಟವೂ ವಿಧಾನಕ್ಕೆ ಕುಸಿಯುತ್ತಿರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಕ್ಷಣ ಕ್ಷಣವನ್ನೂ ಆತಂಕದಿಂದಲೇ ಕಳೆಯುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ. ಕೊಡಗಿನ ಜಿಲ್ಲಾಧಿಕಾರಿಯೂ ಸೇರಿದಂತೆ ಸಂಪರ್ಕಕ್ಕೆ ಯಾರೂ ಸಿಗುತ್ತಿಲ್ಲ ಎಂದವರು ದೂರಿದ್ದಾರೆ.

ಶಕ್ತಿ ಪತ್ರಿಕೆ ಕಚೇರಿ ಜಲಾವೃತ

ಒಂದೆಡೆ ಸಂಪರ್ಕಕ್ಕೆ ಇದ್ದ ವ್ಯವಸ್ಥೆಗಳು ಕೈಕೊಟ್ಟಿದ್ದರೆ ಕೊಡಗಿನ ಜೀವನಾಡಿ ಎಂದೇ ಖ್ಯಾತವಾಗಿರುವ ಇಲ್ಲಿನ ಸ್ಥಳೀಯ ಜನಪ್ರಿಯ ಪತ್ರಿಕೆಯ ಕಚೇರಿಯೂ ಮಳೆಯಿಂದ ಜಲಾವೃತವಾಗಿ, ಪತ್ರಿಕೆಯ ಪ್ರಕಟಣೆ ಸ್ಥಗಿತಗೊಂಡಿದೆ. ಇದರಿಂದ ತಮ್ಮ ಸುತ್ತ ಮುತ್ತ ಏನು ನಡೆಯುತ್ತಿದೆ ಎಂಬ ಮಾಹಿತಿಯೂ ಕೊಡಗಿನ ಜನಗಳಿಗೆ ಇಲ್ಲದಾಗಿದೆ. ಇಲ್ಲಿನ ಕೈಗಾರಿಕಾ ಬಡವಾಣೆಯಲ್ಲಿ ಕಚೇರಿ ಇದ್ದು, ಇದರ ಹಿಂದಿನ ಗುಡ್ಡ ಕುಸಿತವಾಗಿದೆ.

ಜತೆಗೆ ನೀರು ಕಟ್ಟಡಕ್ಕೆ ಹರಿದು ಬಂದಿದೆ. ಪತ್ರಿಕೆಯ ಪ್ರಿಂಟಿಂಗ್‌ ಯಂತ್ರಗಳು ಸೇರಿದಂತೆ ಇತರ ಸಲಕರಣೆಗಳಿಗೆ ಹಾನಿಯಾಗಿದ್ದು ಹಲವು ದಿನಗಳ ಕಾಲ ಪತ್ರಿಕೆ ತನ್ನ ಕಾರ್ಯ ಸ್ಥಗಿತಗೊಳಿಸಲಿದೆ ಎಂದು ಹೇಳಿದೆ. ಕಚೇರಿ ಇರುವ ಕೈಗಾರಿಕಾ ಬಡವಾಣೆಯ ಹಲವು ಮನೆಗಳಿಗೂ ನೀರು ನುಗ್ಗಿದೆ. ಇವರನ್ನು ಸಿವಿಲ್‌ ಡಿಫೆನ್ಸ್‌ನವರು ಗುರುವಾರ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆ ತಂದಿದ್ದಾರೆ.

ಜಲಾವೃತವಾಗಿರುವ ಮಡಿಕೇರಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಶಕ್ತಿ ಪತ್ರಿಕೆ ಕಚೇರಿ. 
ಜಲಾವೃತವಾಗಿರುವ ಮಡಿಕೇರಿ ಇಂಡಸ್ಟ್ರಿಯಲ್‌ ಏರಿಯಾದಲ್ಲಿರುವ ಶಕ್ತಿ ಪತ್ರಿಕೆ ಕಚೇರಿ. 

ಹಾರಂಗಿಯ ನೀರು ಬಿಟ್ಟಿದ್ದರಿಂದ ಕುಶಾಲನಗರದಲ್ಲಿಯೂ ಹಲವು ಮನೆಗಳಿಗೆ ನೀರು ನುಗ್ಗಿದೆ. ಗುರುವಾರ ಹಾರಂಗಿ ಜಲಾಶಯಕ್ಕೆ 33.901 ಕ್ಯೂಸೆಕ್ಸ್‌ ನೀರು ಹರಿದು ಬರುತ್ತಿತ್ತು. ಇದರಲ್ಲಿ 33.549 ಕ್ಯೂಸೆಕ್ಸ್‌ ನೀರನ್ನು ಹೊರಗೆ ಬಿಡಿಲಾಗಿತ್ತು ಎಂದು ವಿಕೋಪ ನಿಯಂತ್ರಣ ಕೇಂದ್ರ ಮಾಹಿತಿ ನೀಡಿದೆ.

ಅತ್ತ ಕೊಡಗಿನ ಪವಿತ್ರ ನದಿಯೂ ಉಕ್ಕೇರಿ ಹರಿಯುತ್ತಿದ್ದು ಗುರುವಾರ ಮಡಿಕೇರಿ-ವಿರಾಜಪೇಟೆ ನಡುವೆ ಭೇತ್ರಿ ಎಂಬಲ್ಲಿ ಸೇತುವೆಯ ಮೇಲೆ ಹರಿದಿತ್ತು. ಇದರಿಂದ ಅತ್ತ ಮಂಗಳೂರನ್ನು ಸಂಪರ್ಕಿಸುವ ರಸ್ತೆ, ಇತ್ತ ಮೈಸೂರು, ಹಾಸನವನ್ನು ಸಂಪರ್ಕಿಸುವ ರಸ್ತೆಯೂ ಬಂದ್ ಆಗಿ ಕೆಲಕಾಲ ಮಡಿಕೇರಿ ಅಕ್ಷರಶಃ ದ್ವೀಪವಾಗಿ ಮಾರ್ಪಟ್ಟಿತ್ತು. ಇದರಲ್ಲಿ ಮಂಗಳೂರು-ಮಡಿಕೇರಿ ಸಂಪರ್ಕಿಸುವ ಹೆದ್ದಾರಿಯಲ್ಲಿ ಭಾರೀ ಭೂಮಿ ಕುಸಿದು ರಸ್ತೆಗೆ ಬಿದ್ದಿದ್ದು ಇದರ ತೆರವಿಗೆ ವಾರಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಎಲ್ಲೆಲ್ಲೂ ಭೂ ಕುಸಿತ, ನಿರಾಶ್ರಿತರಾದ ಜನ:

ಮಡಿಕೇರಿಯ ಮುತ್ತಪ್ಪ ದೇವಸ್ಥಾನದ ಸಮೀಪ ಮನೆಯೊಂದು ಕುಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಭೀಕರವಾಗಿ ಭೂಮಿ ಕುಸಿದು ಮನೆಯನ್ನೇ ಕೊಚ್ಚಿಕೊಂಡು ಹೋಗುವ ದೃಶ್ಯ ಬೆಚ್ಚಿ ಬೀಳಿಸಿದೆ. ಆದರೆ ಈ ಭೂ ಕುಸಿತ ಇಷ್ಟಕ್ಕೇ ಸೀಮಿತವಾಗಿಲ್ಲ. ಮುಖ್ಯವಾಗಿ ಮಡಿಕೇರಿ ಸುತ್ತ ಮುತ್ತ ನಿರಂತರ ಮಳೆಗೆ ಎಲ್ಲೆಲ್ಲೂ ಭೂಮಿ ಕುಸಿಯುತ್ತಿದೆ.

ಮಕ್ಕಂದೂರು, ಮುಕ್ಕೋಡ್ಲು, ಗಾಳಿಬೀಡು, ಕಾಲೂರು, ಕಾಟಗೇರಿ, ಹಿನ್ನಂಗೇರಿ ಮುಂತಾದಲ್ಲಿ ಇಡೀ ಗ್ರಾಮಗಳನ್ನೇ ಭೂ ಕುಸಿತದಿಂದ ಶಿಫ್ಟ್‌ ಮಾಡಲಾಗಿದೆ. ಇದರಲ್ಲಿ ಹೆಚ್ಚಿನವರಿಗೆ ಮಡಿಕೇರಿಯಲ್ಲೇ ವ್ಯವಸ್ಥೆ ಮಾಡಲಾಗುತ್ತಿದ್ದು, ಅವರೆಲ್ಲಾ ಮಡಿಕೇರಿಗೆ ಬರುತ್ತಿದ್ದಾರೆ ಎಂದು ಶಕ್ತಿ ಪತ್ರಿಕೆ ವರದಿಗಾರ ಸಂತೋಷ್ ಹೇಳಿದ್ದಾರೆ.

ಮಂಗಳೂರು-ಮಡಿಕೇರಿ ಹೆದ್ದಾರಿಯಲ್ಲಿ ಕುಸಿದಿರುವ ಗುಡ್ಡ
ಮಂಗಳೂರು-ಮಡಿಕೇರಿ ಹೆದ್ದಾರಿಯಲ್ಲಿ ಕುಸಿದಿರುವ ಗುಡ್ಡ

ಸಂಪರ್ಕ ವ್ಯವಸ್ಥೆಯ ಕೊರೆತೆಯಿಂದ ಇವರಲ್ಲಿ ಎಷ್ಟು ಜನರು ಸತ್ತಿದ್ದಾರೆ, ಎಲ್ಲೆಲ್ಲಿ ಭೂಕುಸಿತಗಳು ಸಂಭವಿಸಿವೆ ಎಂಬ ಮಾಹಿತಿಗಳು ಸಿಗುತ್ತಿಲ್ಲ. ಎಲ್ಲೆಲ್ಲಿ ಗಂಜಿ ಕೇಂದ್ರ ತೆರೆದಿದ್ದಾರೆ ಎಂದೂ ಗೊತ್ತಾಗಿಲ್ಲ. ಸಿಕ್ಕ ಸಿಕ್ಕ ಜಾಗಗಳಲ್ಲಿ ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದವರು ವಿವರಿಸಿದ್ದಾರೆ. ಕಾಲೂರಲ್ಲಿ ಒಂದು ಊರಿನ 300 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ. ಇವರ ಸಂಪರ್ಕಕ್ಕೆ ರಸ್ತೆಗಳೇ ಇಲ್ಲ. ಇವರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸಂತೋಷ್‌ ವಿವರಿಸುತ್ತಾರೆ.

ಮುನ್ಸೂಚನೆ:

ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗಲಿದೆ ಎಂದು ವಿಕೋಪ ನಿಯಂತ್ರಣ ಕೇಂದ್ರ ಮುನ್ಸೂಚನೆ ನೀಡಿದೆ. ಇದೀಗ ಮುಂಬೈ ಕರಾವಳಿಯಲ್ಲಿ ವಾಯುಭಾರ ಕುಸಿತವಾಗಿದ್ದು ಇದರ ಪರಿಣಾಮ ಕರ್ನಾಟಕದ ಮೇಲೆ ಆಗಲ್ಲ ಎಂದು ಕೇಂದ್ರದ ಅಧಿಕಾರಿಗಳು ವಿವರಿಸಿದ್ದಾರೆ.