samachara
www.samachara.com
ಹಿಂದುತ್ವದ ಮರಕ್ಕೆ ‘ಸಮಾಜವಾದ’ದ ಬಳ್ಳಿ ಹಬ್ಬಿಸಿದ್ದ ಅಜಾತಶತ್ರು ಇನ್ನಿಲ್ಲ... 
/india today
COVER STORY

ಹಿಂದುತ್ವದ ಮರಕ್ಕೆ ‘ಸಮಾಜವಾದ’ದ ಬಳ್ಳಿ ಹಬ್ಬಿಸಿದ್ದ ಅಜಾತಶತ್ರು ಇನ್ನಿಲ್ಲ... 

ಅಟಲ್‌ ಬಿಹಾರಿ ವಾಜಪೇಯಿ ಹಿಂದುತ್ವದ ಗರಡಿಯಲ್ಲೇ ಬೆಳದರೂ ಕೂಡ ಸಮಾಜವಾದಿ ಮನಸ್ಥಿತಿ ಹೊಂದಿದ್ದವರು. ಭಾರತವನ್ನು ಆಧುನಿಕವಾಗಿಸುವ ಕಡೆಗೆ ತಮ್ಮ ಗಮನವನ್ನೆಲ್ಲಾ ಕೇಂದ್ರೀಕರಿಸಿದ್ದರು.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಮೂರು ಬಾರಿ ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಗುರುವಾರ (ಆಗಸ್ಟ್ 16) ಸಂಜೆ 5:05ಕ್ಕೆ ಮೃತಪಟ್ಟಿದ್ದಾರೆ. ಹೃದಯ, ಕಿಡ್ನಿ ಮತ್ತು ಮೂತ್ರ ಸೋಂಕಿನಿಂದ ಬಳಲುತ್ತಿದ್ದ ವಾಜಪೇಯಿ ಅವರನ್ನು ಜೂನ್‌ 11ರಂದು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಟಲ್‌ ಬಿಹಾರಿ ವಾಜಪೇಯಿ ಜನಿಸಿದ್ದು 1924ರ ಡಿಸೆಂಬರ್ 25ರಂದು. ಗ್ವಾಲಿಯರ್‌ ವಾಜಪೇಯಿಯವರ ಹುಟ್ಟೂರು. ಕೃಷ್ಣಾದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ಅಟಲ್‌ರ ತಂದೆ ತಾಯಿ. ಗ್ವಾಲಿಯರ್‌ನ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಟಲ್‌ರ ತಂದೆ ಕೃಷ್ಣ ಬಿಹಾರಿ ವಾಜಪೇಯಿ ಕವಿಯೂ ಕೂಡ ಆಗಿದ್ದವರು. ಅವರಿಂದಲೇ ವಾಜಪೇಯಿ ಕಾವ್ಯ ರಚನೆಯಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದರು.

ಗ್ವಾಲಿಯರ್‌ನ ಸರಸ್ವತಿ ಶಿಶು ಮಂದಿರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದ ವಾಜಪೇಯಿ ವಿಕ್ಟೋರಿಯಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದು, ಹಿಂದಿ, ಇಂಗ್ಲೀಷ್‌ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾದರು. ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂಎ ಪದವಿ ಪಡೆದರು. ಇಲ್ಲಿಯೂ ಕೂಡ ಪ್ರಥಮ ದರ್ಜೆಯಲ್ಲಿಯೇ ಉತ್ತೀರ್ಣರಾಗಿದ್ದರು.

ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಅಟಲ್‌ರ ಹೋರಾಟದ ಬದುಕು ಅರಂಭಗೊಂಡಿತ್ತು. ಆರ್ಯ ಸಮಾಜದ ವಿದ್ಯಾರ್ಥಿ ಸಂಘಟನೆ ಆರ್ಯ ಕುಮಾರ್‌ ಸಭಾದ ಮೂಲಕ ಹೋರಾಟಕ್ಕೆ ಕಾಲಿಟ್ಟ ವಾಜಪೇಯಿ 1944ರಲ್ಲಿ ಸಭಾದ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೇರಿದ್ದರು. ಇದರ ಜತೆಗೆಯೇ 1939ರಲ್ಲಿ ಆರ್‌ಎಸ್‌ಎಸ್‌ಗೆ ಪರಿಚಿತರಾಗಿ ಸ್ವಯಂ ಸೇವಕರಾಗಿ ಗುರುತಿಸಿಕೊಂಡರು.

1940ರಿಂದ 44ರವರೆಗೆ ಸಂಘದ ಎಲ್ಲಾ ಕಾರ್ಯಾಗಾರಗಳಲ್ಲಿ ಭಾಗಿಯಾಗಿ 1947ರ ಹೊತ್ತಿಗೆ ಆರ್‌ಎಸ್‌ಎಸ್‌ನ ಪೂರ್ಣಕಾಲಿಕ ಸದಸ್ಯನಾಗಿ ಸಂಘ ಕಟ್ಟಲು ನಿಂತರು. ಉತ್ತರ ಪ್ರದೇಶದಲ್ಲಿ ಸಂಘವನ್ನು ಕಟ್ಟುವ ಜವಾಬ್ದಾರಿ ಅಟಲ್‌ರ ಹೆಗಲೇರಿತ್ತು. ಸಂಘವನ್ನು ಕಟ್ಟುವ ಜತೆಜತೆಗೆ ವಾಜಪೇಯಿ ದೀನದಯಾಳ್‌ ಉಪಾಧ್ಯಾಯ ಸಂಪಾದಿಸುತ್ತಿದ್ದ ‘ರಾಷ್ಟ್ರಧರ್ಮ’ ಮತ್ತು ‘ಪಾಂಚಜನ್ಯ’ ಪತ್ರಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ದೇಶ ಸೇವೆಯೇ ತನ್ನ ಪರಮೋಚ್ಚ ಗುರಿ ಎಂದು ಭಾವಿಸಿದ್ದ ಅಟಲ್‌ಗೆ ಮದುವೆಯಾಗುವ ಆಸೆಯೇ ಇರಲಿಲ್ಲ.

ಯೌವ್ವನದಲ್ಲಿ ಅಟಲ್‌ ಬಿಹಾರಿ ವಾಜಪೇಯಿ.
ಯೌವ್ವನದಲ್ಲಿ ಅಟಲ್‌ ಬಿಹಾರಿ ವಾಜಪೇಯಿ.

ಅದು 1948ರ ಕಾಲಘಟ್ಟ, ಮಹಾತ್ಮಾ ಗಾಂಧಿಯ ಹತ್ಯೆಯ ಕಾರಣದಿಂದಾಗಿ ಆರ್‌ಎಸ್‌ಎಸ್‌ ನಿಷೇಧಕ್ಕೆ ಒಳಪಟ್ಟಿತು. ವಾಜಪೇಯಿ ಭಾರತೀಯ ಜನಸಂಘದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಉತ್ತರ ಭಾರತದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ನಿರತರಾದರು. 1957ರಲ್ಲಿ ಮೊದಲ ಬಾರಿಗೆ ಬರ್ಲಾಮ್‌ಪುರ ಲೋಕಸಭಾ ಕ್ಷೇತ್ರದಿಂದ ಗೆಲುವು ದಾಖಲಿಸಿದ ವಾಜಪೇಯಿ , ಜನಪ್ರತಿನಿಧಿಯಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದರು.

ಅಂದಿನ ಪ್ರಧಾನಿ ಜವಹರ್‌ ಲಾಲ್‌ ನೆಹರು ಅಟಲ್‌ರ ಕಾರ್ಯ ಕೌಶಲ್ಯಗಳನ್ನು ಗುರುತಿಸಿ ಮುಂದೊಂದು ದಿನ ಅಟಲ್‌ ದೇಶದ ಚುಕಾಣಿ ಹಿಡಿಯಯಬಲ್ಲರು ಎಂಬ ಮಾತುಗಳನ್ನಾಡಿದ್ದರು. ತಮ್ಮ ಸಂಘಟನಾ ಕೌಶಲಗಳಿಂದಾಗಿ ವಾಜಪೇಯಿ ಭಾರತೀಯ ಜನಸಂಘದಲ್ಲಿ ಮುನ್ನೆಲೆಗೆ ಬಂದಿದ್ದರು. 1968ರಲ್ಲಿ ದೀನದಯಾಳ್‌ ಉಪಾಧ್ಯಾಯರ ಮರಣದ ನಂತರ ಜನಸಂಘದ ಅಧ್ಯಕ್ಷ ಸ್ಥಾನವನ್ನು ವಹಿಸಿದ ವಾಜಪೇಯಿ , ಎಲ್‌. ಕೆ. ಅಡ್ವಾಣಿ ಹಾಗೂ ಮತ್ತಿತರರ ಜತೆ ದೇಶಾದ್ಯಂತ ಜನಸಂಘವನ್ನು ಪಸರಿಸುವ ಕಾರ್ಯದಲ್ಲಿ ನಿರತರಾದರು.

ಪಂಡಿತ ದೀನದಯಾಳ್‌ ಉಪಾಧ್ಯಾಯರ ಜತೆ ವಾಜಪೇಯಿ.
ಪಂಡಿತ ದೀನದಯಾಳ್‌ ಉಪಾಧ್ಯಾಯರ ಜತೆ ವಾಜಪೇಯಿ.
/scoopnest.com

ಅದು 1975ರ ಸಮಯ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಈ ವೇಳೆ ಪ್ರತಿಭಟನೆ ನಡೆಸಿದ್ದ ವಾಜಪೇಯಿ ಇತರ ನಾಯಕರ ಜತೆ 2 ವರ್ಷಗಳ ಕಾಲ ಸೆರೆಗೆ ದೂಡಲ್ಪಟ್ಟಿದ್ದರು. 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸೋತು, ಕಾಂಗ್ರೆಸ್‌ ಹೊರತಾದ ಎಲ್ಲ ಪಕ್ಷಗಳ ಒಕ್ಕೂಟದ ಜನತಾ ಪರಿವಾರ ಅಧಿಕಾರಕ್ಕೆ ಬಂತು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮೊರಾರ್ಜಿ ದೇಸಾಯಿಯ ಮಂತ್ರಿ ಮಂಡಲದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ವಿದೇಶಾಂಗ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅದೇ ವರ್ಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಹಿಂದಿಯಲ್ಲಿ ಭಾಷಣ ಮಾಡುವುದರ ಮೂಲಕ ಇಡೀ ಜಗತ್ತಿನ ಗಮನ ಸೆಳೆದರು. ಆದರೆ ಮೊರಾರ್ಜಿ ದೇಸಾಯಿ ಸರಕಾರ ಕೇವಲ 2 ವರ್ಷ ಪೂರೈಸುವ ಹೊತ್ತಿಗೆ ಕೊನೆಯಾಯಿತು.

1980ರ ವೇಳೆಗೆ ಭಾರತೀಯ ಜನಸಂಘ ಮತ್ತು ಆರ್‌ಎಸ್‌ಎಸ್‌ನ ತಮ್ಮ ಹಳೆಯ ಮಿತ್ರರೊಂದಿಗೆ ಚರ್ಚೆ ನಡೆಸಿದ ಅಟಲ್‌ಜಿ ಭಾರತೀಯ ಜನತಾ ಪಕ್ಷವನ್ನು ಹುಟ್ಟು ಹಾಕಿ, ಸ್ಥಾಪಕ ಅಧ್ಯಕ್ಷರಾದರು. ಜನತಾ ಪಕ್ಷದ ನಂತರ ಕಾಂಗ್ರೆಸ್‌ ಪಕ್ಷವನ್ನು ಕಟುವಾಗಿ ಟೀಕಿಸುವ ಸ್ಥಾನವನ್ನು ಬಿಜೆಪಿ ಆಕ್ರಮಿಸಿಕೊಂಡಿತು.

ವಿಎಚ್‌ಪಿ ಮತ್ತು ಆರ್‌ಎಸ್‌ಎಸ್‌ ಒಟ್ಟಾಗಿ ಸೇರಿ ಮುನ್ನೆಲೆಗೆ ತಂದ ರಾಮ ಮಂದಿರ ನಿರ್ಮಾಣದ ಕಾರ್ಯಕ್ಕೆ ಬಿಜೆಪಿ ರಾಜಕೀಯ ಧ್ವನಿಯಾಗಿ ನಿಂತಿತು. ಇದರಿಂದಾಗಿ ರಾಮ ಮಂದಿರ ನಿರ್ಮಾಣದ ಪರವಾಗಿದ್ದ ಬಹುತೇಕ ಹಿಂದುಗಳು ಬಿಜೆಪಿಯ ಜತೆ ನಿಂತರು. ಇದರ ಫಲವಾಗಿ 1994ರಲ್ಲಿ ಕರ್ನಾಟಕದಲ್ಲಿ ನಡೆದ ರಾಜ್ಯ ಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ತೋರಿದ ಬಿಜೆಪಿ, 1995ರಲ್ಲಿ ಗುಜರಾತ್‌ ಮತ್ತು ಮಹಾರಾಷ್ಟ್ರಗಳಲ್ಲಿ ಅಧಿಕಾರದ ಚುಕಾಣಿ ಹಿಡಿಯಿತು. ಅದೇ ವೇಳೆ ಅಂದಿನ ಬಿಜೆಪಿ ಅಧ್ಯಕ್ಷರಾಗಿದ್ದ ಎಲ್‌ಕೆ ಅಡ್ವಾಣಿ ಅಟಲ್‌ ಅವರನ್ನು 1996ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದರು.

ಭಾರತದ ಫ್ರಧಾನಿಯಾಗಿ ವಾಜಪೇಯಿ:

ವಾಜಪೇಯಿ ಮೊದಲ ಬಾರಿಗೆ ಪ್ರಧಾನಿಯಾದಾಗ. 
ವಾಜಪೇಯಿ ಮೊದಲ ಬಾರಿಗೆ ಪ್ರಧಾನಿಯಾದಾಗ. 
/starsunfolded

ಧರ್ಮ ಮತ್ತು ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತಂದ ಬಿಜೆಪಿ ಮೊದಲ ಬಾರಿಗೆ ಕೇಂದ್ರದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ವಾಜಪೇಯಿ ದೇಶದ 10ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದ ಕಾರಣ ಕೇವಲ 13 ದಿನಕ್ಕೆ ವಾಜಪೇಯಿ ರಾಜಿನಾಮೆ ನೀಡಬೇಕಾಯಿತು.

1998ರಲ್ಲಿ ನಡೆದ ಚುನಾವಣೆಯಲ್ಲಿ ಹಲವು ಪಕ್ಷಗಳು ಸೇರಿ ಬಿಜೆಪಿಯ ನಾಯಕತ್ವದಲ್ಲಿ ಎನ್‌ಡಿಎ ಅನ್ನು ಅಸ್ತಿತ್ವಕ್ಕೆ ತಂದವು. ಪರಿಣಾಮವಾಗಿ ವಾಜಪೇಯಿ ಎರಡನೇ ಬಾರಿಗೆ ದೇಶದ ಪ್ರಧಾನಿಯಾದರು. ಆದರೆ ಈ ಬಾರಿ ಸರಕಾರ ನಡೆದಿದ್ದು ಕೇವಲ 13 ತಿಂಗಳು ಮಾತ್ರ. 1999ರ ಮಧ್ಯದಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ತನ್ನ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡ ಕಾರಣ ಎನ್‌ಡಿಎ ಬಹುಮತ ಕಳೆದುಕೊಂಡು ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ವಿರೋಧ ಪಕ್ಷಕ್ಕೂ ಕೂಡ ಬಹುಮತ ಇಲ್ಲದ ಕಾರಣ ಅದೇ ವರ್ಷ ಮತ್ತೊಂದು ಚುನಾವಣೆ ಎದುರಾಯಿತು.

ವಾಜಪೇಯಿ ಅಧಿಕಾರದಲ್ಲಿದ್ದ ಸಮಯದಲ್ಲಿ ಅಂತರರಾಷ್ಟ್ರೀಯ ವಿರೋಧದ ಮಧ್ಯೆಯೂ ಕೂಡ ದೇಶದಲ್ಲಿ ಅಣು ಪರೀಕ್ಷೆಗಳನ್ನು ನಡೆಸಿದ್ದರು. ರಷ್ಯಾ, ಫ್ರಾನ್ಸ್ ಸೇರಿದಂತೆ ಇನ್ನಿತ್ಯಾದಿ ದೇಶಗಳು ಭಾರತದ ಜತೆ ನಿಂತರೆ, ಅಮೆರಿಕಾ, ಕೆನಡಾ, ಜಪಾನ್‌, ಯುರೋಪಿಯನ್‌ ರಾಷ್ಟ್ರಗಳು ಭಾರತದ ಅಣು ಪರೀಕ್ಷೆಯನ್ನು ಟೀಕಿಸಿ ಭಾರತದ ಮೇಲೆ ಹಲವಾರು ನಿಷೇಧಗಳನ್ನು ಹೇರಿದವು. ಆದರೆ ಈ ನಿಷೇಧಾಜ್ಞೆಗಳು ಹೆಚ್ಚು ಕಾಲ ಉಳಿಯಲಿಲ್ಲ. ಇವುಗಳ ಜತೆಗೆ ಅಟಲ್‌ರ ಅಣು ಪರೀಕ್ಷೆಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಕೂಡ ಅಣು ಪರೀಕ್ಷೆ ನಡೆಸಿ, ಅಣುಶಕ್ತಿ ಹೊಂದಿರುವ ದೇಶಗಳ ಸಾಲಿನಲ್ಲಿ ತನ್ನ ಅಸ್ತಿತ್ವವನ್ನೂ ಕೂಡ ಪ್ರತಿಪಾದಿಸಿತು.

ಭಾರತ ಮತ್ತು ಪಾಕಿಸ್ತಾನಗಳು ತಮ್ಮ ವೈರತ್ವಗಳನ್ನು ಕಳೆದುಕೊಂಡು ಸ್ನೇಹಿತರಾಗಬೇಕು ಎಂದು ಬಯಸಿದ್ದ ವಾಜಪೇಯಿ, 1999ರಲ್ಲಿ ದೆಹಲಿ-ಲಾಹೋರ್‌ ಮಧ್ಯೆ ಬಸ್‌ ಸಂಪರ್ಕ ಏರ್ಪಡಿಸಿ, ಶಾಂತಿ ಮಾತುಕತೆಗೆ ಮುಂದಾದರು. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದರ ಜತೆ ಇದೇ ದಿಕ್ಷಣ ಏಷ್ಯಾವನ್ನು ಅಣುಮುಕ್ತವಾಗಿಸಲು ವಾಜಪೇಯಿ ತೀರ್ಮಾನಿಸಿದ್ದರು. ಆದರೆ ಪಾಕಿಸ್ಥಾನಿ ಉಗ್ರಗಾಮಿಗಳು ಮತ್ತು ಸೈನಿಕರು ಕಾಶ್ಮೀರದಲ್ಲಿ ಒಳನುಸುಳಿದಾಗ ಭಾರತ ಅವರ ವಿರುದ್ಧ ತಿರುಗಿ ಬಿದ್ದಿತ್ತು. ಪಾಕಿಸ್ತಾನ ಆಕ್ರಮಿಸಿಕೊಂಡ ಕಾರ್ಗಿಲ್‌ ಭೂಭಾಗವನ್ನು ವಶಪಡಿಸಿಕೊಂಡ ಭಾರತ, ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ನೀಡಿತ್ತು.

ಕಾರ್ಗಿಲ್‌ ಯೋಧರ ಜತೆ ಅಟಲ್‌ ಬಿಹಾರಿ ವಾಜಪೇಯಿ.
ಕಾರ್ಗಿಲ್‌ ಯೋಧರ ಜತೆ ಅಟಲ್‌ ಬಿಹಾರಿ ವಾಜಪೇಯಿ.

ಈ ವೇಳೆಗಾಗಲೇ ಮತ್ತೊಂದು ಸಾರ್ವತ್ರಿಕ ಚುನಾವಣೆ ಎದುರಾಗಿತ್ತು. ಕಾರ್ಗಿಲ್‌ ವಿಜಯ ವಾಜಪೇಯಿ ನೇತೃತ್ವದ ಎನ್‌ಡಿಎಗೂ ವಿಜಯವನ್ನು ತಂದುಕೊಟ್ಟಿತ್ತು. 303 ಸದಸ್ಯ ಬಲ ಗಳಿಸಿದ ಎನ್‌ಡಿಎ ಅಧಿಕಾರ ರಚನೆ ಮಾಡಿತು. ವಾಜಪೇಯಿ 3ನೇ ಬಾರಿ ದೇಶದ ಪ್ರಧಾನಿಯಾದರು. 5 ವರ್ಷಗಳ ಕಾಲ ಆಳ್ವಿಕೆ ನಡೆಸಿ, ದೀರ್ಘಕಾಲ ಪ್ರಧಾನಿಯಾದ ಕಾಂಗ್ರೆಸ್ಸೇತರ ವ್ಯಕ್ತಿ ಎಂಬ ಬಿರುದು ಪಡೆದರು. ತಮ್ಮ ಅಧಿಕಾರಾವಧಿಯಲ್ಲಿ ವಾಜಪೇಯಿ ಹಲವಾರು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯ ಮೂಲಕ ಇಡೀ ದೇಶದ ಬಹುಪಾಲು ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿದರು. ಹಲವಾರು ವಲಯಗಳಲ್ಲಿ ಖಾಸಗಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟರು. ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ವ ಶಿಕ್ಷಣ ಅಭಿಯಾನವನ್ನು ಅರಂಭಿಸಿದ್ದರು. ಅಮೆರಿಕಾದ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಭಾರತಕ್ಕೆ ಭೇಟಿ ನೀಡಿದ್ದರ ಫಲವಾಗಿ ಅಮೆರಿಕಾ ಮತ್ತು ಭಾರತದ ನಡುವೆಯಿದ್ದ ಶೀತಲ ಸಮರ ಅಂತ್ಯವಾಗಿತ್ತು.

ಅದಾಗಲೇ ರಾಮ ಮಂದಿರ ನಿರ್ಮಾಣ, ಕಾಶ್ಮೀರದ 370ನೇ ವಿಧಿ, ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ವಾಜಪೇಯಿ ಮೇಲೆ ಒತ್ತಡ ಉಂಟಾಗಿತ್ತು. ಆದರೆ ಎನ್‌ಡಿಎ ಹಲವಾರು ಪಕ್ಷಗಳ ಒಕ್ಕೂಟವಾಗಿದ್ದರಿಂದ ಇವೆಲ್ಲವು ಜಾರಿಗೆ ತರಲು ಕಷ್ಟವಾಗಿತ್ತು. ಜತೆಗೆ ಸಮಾಜವಾದಿ ಧೋರಣೆಯನ್ನು ಹೊಂದಿದ್ದ ವಾಜಪೇಯಿ ಇವೆಲ್ಲವನ್ನೂ ಜಾರಿಗೆ ತರಲು ಹಿಂದೇಟು ಹಾಕಿದ್ದರು. ಅಟಲ್‌ರ ಆಡಳಿತ ಕಂಡು ವಿರೋಧ ವ್ಯಕ್ತಪಡಿಸಿದ ಹಲವು ಆರ್‌ಎಸ್‌ಎಸ್‌ ಮತ್ತು ಜನಸಂಘ ಮುಖಂಡರು ಮತ್ತೆ ಭಾರತೀಯ ಜನಸಂಘವನ್ನು ಅಸ್ತಿತ್ವಕ್ಕೆ ತರುವ ಮಾತುಗಳನ್ನಾಡಿದ್ದರು. ವಾಜಪೇಯಿ ಪ್ರೋತ್ಸಾಹಿಸಿದ ಮುಕ್ತ ಮಾರುಕಟ್ಟೆ ನೀತಿಯೂ ಕೂಡ ಆರ್‌ಎಸ್‌ಎಸ್‌ನ ಸ್ವದೇಶಿ ನೀತಿಗೆ ವಿರುದ್ಧವಾಗಿತ್ತು. ಜತೆಗೆ ಆ ಸಮಯದಲ್ಲೇ ವಾಜಪೇಯಿ ಪಾಕಿಸ್ತಾನದ ಪ್ರಧಾನಿ ಪರ್ವೇಜ್‌ ಮುಷರಫ್‌ರನ್ನು ಶಾಂತಿ ಮಾತುಕತೆಗಾಗಿ ದೆಹಲಿಗೆ ಆಹ್ವಾನಿಸಿದರು.

2002ರಲ್ಲಿ ಬಾಬ್ರಿ ಮಸೀದಿಯನ್ನು ಕಡೆವಿ 10 ವರ್ಷ ಪೂರೈಸಿದ ಕಾರಣದಿಂದಾಗಿ, ವಿಎಚ್‌ಪಿ ಸದಸ್ಯರು ಒತ್ತಾಯಪೂರ್ಕವಾಗಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕು ಸ್ಥಾಪನೆ ಮಾಡಲು ಮುಂದಾಗಿದ್ದರು. ಅದೇ ವೇಳೆ ಇತ್ತ ನರೇಂದ್ರ ಮೋದಿ ಆಡಳಿತದಲ್ಲಿದ್ದ ಗುಜರಾತ್‌ನ ಗೋದ್ರಾದಲ್ಲಿ 1,000ಕ್ಕೂ ಹೆಚ್ಚು ಜನ ಕೋಮುಗಲಭೆಯಿಂದಾಗಿ ಹತರಾಗಿದ್ದರು. ಪರಿಸ್ಥಿತಿಯನ್ನು ತಹಬದಿಗೆ ತರಬೇಕಿದ್ದ ಪ್ರಧಾನಿ ವಾಜಪೇಯಿ, ಹಿಂಸಾಚಾರವನ್ನು ಕಂಡೂ ಕೂಡ ಸುಮ್ಮನಿದ್ದರು.

ಗೋದ್ರಾ ಹತ್ಯಾಕಾಂಡದ ನಂತರ ಮೋದಿ ಮತ್ತು ವಾಜಪೇಯಿ.
ಗೋದ್ರಾ ಹತ್ಯಾಕಾಂಡದ ನಂತರ ಮೋದಿ ಮತ್ತು ವಾಜಪೇಯಿ.

ಇದೆಲ್ಲವುಗಳ ಹೊರತಾಗಿ ಭಾರತ ಶೇ.6-7ರ ಆರ್ಥಿಕ ಅಭಿವೃದ್ಧಿ ಸಾಧಿಸಿತ್ತು. ಮೂಲಭೂತ ಸೌಕರ್ಯಗಳು, ಉದ್ಯೋಗಗಳು, ಕಾರ್ಖಾನೆಗಳು, ನಗರಗಳ ಅಧುನಿಕರಣ ಇತ್ಯಾದಿಗಳು ದೇಶದ ಹೆಸರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದವು. ತನ್ನ ಹಿಂದುತ್ವದ ದೃಷ್ಟಿಕೋನಕ್ಕೆ ಅಭಿವೃದ್ಧಿಯ ಬಣ್ಣ ಬಳಿದ ಬಿಜೆಪಿ ‘ಭಾರತ ಕಂಗೊಳಿಸುತ್ತಿದೆ’ ಎನ್ನುವ ಸಾಲನ್ನೇ ತನ್ನ ಮುಂದಿನ ಚುನಾವಣೆಯ ಘೋಷವಾಕ್ಯವನ್ನಾಗಿ ಮಾಡಿಕೊಂಡಿತ್ತು.

2004ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ವಾಜಪೇಯಿ ಪ್ರಧಾನಿಯಾಗಿ ಗದ್ದುಗೆ ಏರುತ್ತಾರೆ ಎಂಬ ನಂಬಿಕೆಯೇ ಇಡೀ ದೇಶಾದ್ಯಂತವಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿ, ಕಾಂಗ್ರೆಸ್‌ ನೇತೃತ್ವದ ಯುಪಿಎ ಹೆಚ್ಚಿನ ಸ್ಥಾನಗಳನ್ನು ಗಳಿಸಿ, ಮನಮೋಹನ್‌ ಸಿಂಗ್‌ ಪ್ರಧಾನಿ ಗಾದಿಯತ್ತ ನಡೆದರು. ಈ ವೇಳೆಗೆ ಅನಾರೋಗ್ಯದಿಂದಲೂ ಕೂಡ ಬಳಯುತ್ತಿದ್ದ ವಾಜಪೇಯಿ 2005ರ ವೇಳೆಗೆ ರಾಜಕೀಯ ಜೀವನಕ್ಕೆ ವಿದಾಯ ಹೇಳಿದರು.

ರಾಜಕೀಯ ಜೀವನದಿಂದ ನಿವೃತ್ತಿ ಹೊಂದುವ ವೇಳೆಗಾಗಲೇ ತೀವ್ರವಾಗಿ ಅನಾರೋಗ್ಯದಿಂದ ಬಸವಳಿದಿದ್ದ ವಾಜಪೇಯಿಗೆ 2001ರಲ್ಲೇ ಮೊಣಕಾಲಿನ ಶಸ್ತ್ರ ಚಿಕಿತ್ಸೆ ನಡೆದಿತ್ತು. ನಿವೃತ್ತಿ ಘೋಷಿಸಿದ ನಂತರ 2009ರ ಸಮಯದಲ್ಲಿ ವಾಜಪೇಯಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ದೀರ್ಘಕಾಲದ ಮಧುಮೇಹ ಹಾಗೂ ನೆನಪಿನ ಶಕ್ತಿ ಕ್ಷೀಣಿಸಿದ್ದ ವಾಜಪೇಯಿ ಹಾಸಿಗೆ ಹಿಡಿದಿದ್ದರು. ಇತ್ತೀಚಿನ ವರ್ಷಗಳಲ್ಲಿ ಯಾವ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಕೂಡ ಕಾಣಿಸಿಕೊಳ್ಳದೆ, ಕೇವಲ ಆರೋಗ್ಯ ತಪಾಸಣೆಗಷ್ಟೇ ಮನೆಯಿಂದ ಹೊರಬರುತ್ತಿದ್ದರು. 2018ರ ಜೂನ್‌ 11ರಂದು ಉಲ್ಭಣಗೊಂಡಿದ್ದ ಅನಾರೋಗ್ಯದಿಂದ ವಾಜಪೇಯಿ ಆಸ್ಪತ್ರೆ ಸೇರಿದ್ದರು.

ಜೀವನವಿಡೀ ಮದುವೆಯಾಗದೇ ಉಳಿದ ವಾಜಪೇಯಿ, ನಮಿತ ಎಂಬ ಹುಡುಗಿಯನ್ನು ದತ್ತು ಸ್ವೀಕರಿಸಿದ್ದರು. ಭಾರತೀಯ ನೃತ್ಯ ಮತ್ತು ಸಂಗೀತವನ್ನು ಅತಿಯಾಗಿ ಪ್ರೀತಿಸುತ್ತಿದ್ದ ವಾಜಪೇಯಿ, 7 ಕವನ ಸಂಕಲನಗಳನ್ನು ಪ್ರಕಟಿಸಿದ್ದರು. ಜತೆಗೆ ಅವರ 20ಕ್ಕೂ ಹೆಚ್ಚು ಪುಸ್ತಕಗಳೂ ಕೂಡ ಪ್ರಕಟಗೊಂಡಿದ್ದವು. ಪದ್ಮ ವಿಭೂಷಣ ಪ್ರಶಸ್ತಿ, ಕಾನ್ಪುರ ವಿಶ್ವವಿದ್ಯಾಲಯದಿಂದ ಡಿ.ಲಿಟ್‌ ಪದವಿ, ಲೋಕಮಾನ್ಯ ತಿಲಕ್‌ ಪ್ರಶಸ್ತಿ, ಔಟ್‌ಸ್ಟಾಂಡಿಂಗ್‌ ಪಾರ್ಲಿಮೆಂಟೇರಿಯನ್‌ ಪ್ರಶಸ್ತಿ, ಪಂಡಿತ್‌ ಗೋವಿಂದ ವಲ್ಲಭ ಪಂಥ್‌ ಪ್ರಶಸ್ತಿಯ ಜತೆಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವೂ ಕೂಡ 2015ರಲ್ಲಿ ವಾಜಪೇಯಿ ಮುಡಿಗೇರಿತು.

ವಾಜಪೇಯಿ ಪ್ರಾರಂಭದಿಂದಲೂ ಕೂಡ ಹಿಂದುತ್ವದ ಗರಡಿಯಲ್ಲಿ ಬೆಳದರಾದರೂ, ಅವರೊಳಗೆ ಸಮಾಜವಾದಿ ತತ್ವಗಳು ಮೇಳೈಸಿದ್ದವು. ಭಾರತ ಹಲವಾರು ಧರ್ಮ, ಸಂಸ್ಕೃತಿ, ಕಲೆ, ಸಾಹಿತ್ಯ, ಶಿಕ್ಷಣ, ಜೀವನ ಪದ್ಧತಿ, ಭಾಷೆ, ಸಮುದಾಯಗಳಿಂದ ಕೂಡಿರುವ ವೈವಿಧ್ಯತೆಯುಳ್ಳ ರಾಷ್ಟ್ರ, ಅದನ್ನು ನಾವು ಹಾಗೆಯೇ ಉಳಿಸಿಕೊಳ್ಳಬೇಕಿದೆ ಎನ್ನುವುದು ವಾಜಪೇಯಿ ಅಭಿಪ್ರಾಯವಾಗಿತ್ತು. ಜಾತ್ಯಾತೀತತೆ ಅಂದರೆ ಧರ್ಮ ನಿರಪೇಕ್ಷತೆಯಲ್ಲ. ಜಾತ್ಯಾತೀತ ರಾಷ್ಟ್ರ ಎನ್ನುವುದು ಧರ್ಮ ವಿರೋಧಿಯೂ ಅಲ್ಲ ಹಾಗೂ ಧರ್ಮವಿಲ್ಲದ ರಾಷ್ಟ್ರವೂ ಅಲ್ಲ. ಜಾತ್ಯಾತೀಯ ರಾಷ್ಟ್ರ ಎನ್ನುವುದು ಯಾವುದೇ ಒಂದು ಗುಂಪಿನ ಜತೆ ಗುರುತಿಸಿಕೊಳ್ಳದಿರುವುದು ಅಷ್ಟೆ. ಅಲ್ಲಿ ಎಲ್ಲವೂ ಇದೆ ಎಂದು ವಾಜಪೇಯಿ ನುಡಿದಿದ್ದರು.

ನಗರ ಮತ್ತು ಹಳ್ಳಿ, ಬಂಡವಾಳ ಮತ್ತು ಶ್ರಮ, ನಾಗರಿಕರು ಮತ್ತು ಆಡಳಿತ, ಕೇಂದ್ರ ಮತ್ತು ರಾಜ್ಯ, ಭಾಷೆ, ಧರ್ಮ ಮತ್ತು ಜಾತಿಗಳ ಮಧ್ಯೆ ಸೇತುವೆಯನ್ನು ನಿರ್ಮಿಸಿ ಅಂತರವನ್ನು ಇಲ್ಲವಾಗಿಸಲು ನಾವು ಶ್ರಮಿಸುತ್ತೇವೆ ಎಂದು ಹೇಳುತ್ತಿದ್ದ ಅಟಲ್‌ರ ನಡೆನುಡಿಯಲ್ಲಿಯೂ ಕೂಡ ಅಷ್ಟೇ ಸರಳತೆಯಿತ್ತು. ಕವಿ ಹೃದಯದ ಅಟಲ್‌ ಬಿಹಾರಿ ವಾಜಪೇಯಿ ಎಲ್ಲವನ್ನೂ ಕಾವ್ಯಾತ್ಮಕವಾಗಿಯೇ ಕಾಣುತ್ತಿದ್ದರು. ಈಗ ವಾಜಪೇಯಿ ಇಹಲೋಕವನ್ನು ತ್ಯಜಿಸಿದ್ದಾರೆ. ಅಗಲಿದ ವಾಜಪೇಯಿಗಾಗಿ ಹಲವಾರು ಜನ ಗಣ್ಯರು ಕಂಬನಿ ಮಿಡಿದಿದ್ದಾರೆ.